ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಕಾಲುಗಳ ನುಂಗುವರು
ಹೋಮವ ಮಾಡುವರ ಕಂಡೆ;
ಹೊಗೆಯ ನಿಲಿಸುವರ ಕಾಣೆ.
ದೂರ ದಾರಿ ನಡೆವರ ಕಂಡೆ;
ಕಾಲುಗಳ ನುಂಗುವರ ಕಾಣೆ.
ಆಲುತ್ತ ಬೊಬ್ಬೆಗೊಟ್ಟು ರಣದೊಳಗೆ
ಅಳಿದು ಮುಂಡ ಮುಂದೆ
ನಡೆದಾಡುವರ ಕಂಡೆ,
ಹರಿದ ಶಿರವ ಹಿಡಿದುಕೊಂಡು, ಕುಣಿದಾಡುವರ ಕಾಣೆ ಗುಹೇಶ್ವರಾ.
ವಚನಾರ್ಥ:
ಕಣ್ಣಿಗೆ ಕಾಣುವ ಮೂರು ದೃಶ್ಯಗಳು ಮತ್ತು ಹಾಗೆ ಕಾಣುವ ದೃಶ್ಯಗಳ ಹಿನ್ನಲೆಯಲ್ಲಿ ಗೋಚರವಾಗದ ಮೂರು ದೃಶ್ಯಗಳ ಚರ್ಚೆಯೇ ವಚನದ ವಸ್ತು. ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಜನರು ಹೋಮ ಹವನಗಳನ್ನು ಮಾಡುವುದನ್ನು ಕಾಣುತ್ತೇವೆ. ಅದು ಅಂದೂ ಇತ್ತು, ಇಂದಿಗೂ ನಡೆದು ಬಂದಿದೆ. ಅಲ್ಲಮನ ಅಚ್ಚರಿ ಏನೆಂದರೆ ಹೋಮವ ಮಾಡುವವರ ಕಾಣುತ್ತೇವೆ, ಹೋಮದಿಂದ ಹೊರಬರುವ ಹೊಗೆಯ ನಿಲ್ಲಿಸುವವರನ್ನು ಕಾಣಲಾಗುವುದಿಲ್ಲ. ಇದು ಹೊರಗಣ ಚಿತ್ರಣ. ಒಳಗಣ ಚಿತ್ರಣದಲ್ಲಿ ಹೋಮ ಮಾಡುವುದು ಎಂದರೆ ಶಾಸ್ತ್ರಗಳ ಅಧ್ಯಯನ, ಅಭ್ಯಾಸ ಮಾಡುವುದು. ಹೊಗೆ ಎಂದರೆ ದೈಹಿಕ ಕಾಮನೆಗಳು, ಆಸೆ ಆಕಾಂಕ್ಷೆಗಳು. ಇವುಗಳು ಅಂತರಂಗದಲ್ಲಿ ಹೊತ್ತಿ ಹೊಗೆಯಾಡುವುದನ್ನು ನಿಲ್ಲಿಸುವವರು ವಿರಳ. ಸಾಧನೆಯ ಪಥದಲ್ಲಿ ದೂರದೂರ ಸಾಗಿ ನಡೆವವರು ಸಿಗುತ್ತಾರೆ. ಆದರೆ ಸ್ಥಿರವಾಗಿ ಒಂದೆಡೆ ನಿಂತು ಸಾಧಿಸುವವರು ವಿರಳ. ರಣರಂಗದಲ್ಲಿ ವೈರಿಯ ರುಂಡ ಮುಂಡ ಬೇರ್ಪಡಿಸಿ ಚಂಡಾಡುವ ವೀರರನ್ನು ಕಾಣಬಹುದು. ಆದರೆ ಆತ್ಮಜ್ಞಾನದಿಂದ ತುಂಬಿ ಪರಿಪೂರ್ಣವಾದ ತಮ್ಮದೇ ಶಿರವನ್ನು ತಮ್ಮದೇ ಜಡದೇಹದಿಂದ ಹರಿದು ಬೇರ್ಪಡಿಸಿ ಸಂತೋಷದಿಂದ ಕುಣಿದಾಡುವವರನ್ನು ಕಾಣುವುದು ವಿರಳ.
ಪದಪ್ರಯೋಗಾರ್ಥ:
ಕಾಲುಗಳ ನುಂಗುವುದು ಅಂದರೆ ಈ ವಚನದ ಸಂದರ್ಭದಲ್ಲಿ ನಿಶ್ಚಲನಾಗಿ ನಿಲ್ಲು, ಕಾಲವನು ಗೆಲ್ಲು, ಅಮರತ್ವವನ್ನು ಪಡೆ ಎಂದರ್ಥ. ಮನುಷ್ಯನ ಕಾಲುಗಳ ಸಹಜ ಸ್ವಭಾವವೇ ಚಲನೆ. ಆನೆ ನಡೆದದ್ದೇ ದಾರಿ ಎಂಬಂತೆ ಮನುಷ್ಯ ತನ್ನ ವೈಯಕ್ತಿಕ ಜೀವನದ ಇಷ್ಟಾರ್ಥ ಸಿದ್ಧಿಗಾಗಿ ಮನ ಬಂದಲ್ಲಿ ಚಲಿಸುತ್ತಾನೆ. ಸನ್ಮಾರ್ಗ ದುರ್ಮಾರ್ಗಗಳ ಗಮನವಿರುವುದಿಲ್ಲ. ಇಂದ್ರಿಯಗಳ ಪ್ರಲೋಭನೆಯಿಂದ ನಿರ್ದೇಶಿತವಾದ ಅಂತಹ ನಡಿಗೆಯನ್ನು ನಿಯಂತ್ರಿಸಿ ಅಂದರೆ ಕಾಲುಗಳ ನುಂಗಿ ನಿಶ್ಚಲನಾಗಿ ನಿಂತು ಸಾಧನೆಯನ್ನು ಕೈಗೊಳ್ಳಬೇಕು ಎಂಬುದೇ “ಕಾಲುಗಳ ನುಂಗುವುದು”. ಅತ್ತಲಿತ್ತಲು ಹೋಗದಂತೆ ಹೆಳವನ ಮಾಡಯ್ಯಾ, ತಂದೆ ಎಂದು ಬಸವಣ್ಣ ಪ್ರಾರ್ಥಿಸಿದ್ದು ಇದೇ ಅರ್ಥದಲ್ಲೇ. ಕಾಲುಗಳ ನುಂಗಿ ನಿಶ್ಚಲನಾಗಿ ಒಂದೆಡೆ ನೆಲೆನಿಂತು ಸಾಧಿಸಿ ಅಮರರಾದವರು ಶಿರ್ಡಿಯ ಸಾಯಿಬಾಬ, ತಿರುವಣ್ಣಾಮಲೈ ಮಹರ್ಷಿ ರಮಣರು. ಕಾಲುಗಳ ನುಂಗುವರ ಕಾಣೆ ಎಂಬ ಪದ ಪ್ರಯೋಗ ಮೇಲ್ನೋಟದಲ್ಲಿ ಅಸಹಜವಾಗಿ ಕಂಡರೂ ಇದು ಅಲ್ಲಮನ ಬೆಡಗಿನ ಪದ. ಅಲ್ಲಮನ ಇಂತಹ ಬೆಡಗಿನ ಬೆರಗಿನ ಪದ ಪುಂಜಗಳನ್ನು “ಅಲ್ಲಮನ ಬೆಡಗಿನ ವಚನಗಳು” ಎಂದು ವರ್ಗಿಕೃತವಾಗಿರುವ ಅಲ್ಲಮನ ವಿಶಿಷ್ಟ ವಚನಗಳಲ್ಲಿ ಧಾರಾಳವಾಗಿ ಕಾಣಬಹುದು.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.