ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಮಾದುದು ಮಾದುದಲ್ಲ
ನಾಚಿ ಮಾದುದು ಮಾದುದಲ್ಲ
ನಾಚದೆ ಮಾದುದು ಮಾದುದಲ್ಲ
ಹೇಸಿ ಮಾದುದು ಮಾದುದಲ್ಲ
ಹೇಸದೆ ಮಾದುದು ಮಾದುದಲ್ಲ
ಆಲಸಿ ಮಾದುದು ಮಾದುದಲ್ಲ
ಆಲಸದೆ ಮಾದುದು ಮಾದುದಲ್ಲ.
ನಾಚದೆ ಹೇಸದೆ ಆಲಸದೆ ಮಾದಡೆ
ಮಾದುದು ಗುಹೇಶ್ವರಾ.
ಪದಾರ್ಥ:
ನಾಚಿ = ಲಜ್ಜೆಪಟ್ಟು
ಹೇಸಿ = ಅಸಹ್ಯಪಟ್ಟು
ಆಲಸಿ = ಬೇಸರಪಟ್ಟು
ಮಾದಡೆ = ಮಾಡಿದರೆ
ಮಾದುದು = ಬಿಡು, ತ್ಯಜಿಸು
ವಚನಾರ್ಥ:
ಜೀವನದಲ್ಲಿ ಯಾವುದನ್ನು ಹೇಗೆ ತ್ಯಜಿಸಬೇಕು ಎಂಬುದರ ಮಾರ್ಗದರ್ಶಿ ಈ ವಚನದಲ್ಲಿದೆ. ಮನುಷ್ಯನಲ್ಲಿ ಸದ್ಗುಣಗಳು ಮತ್ತು ದುರ್ಗುಣಗಳು ಎರಡೂ ಇರುತ್ತವೆ. ಸದ್ಗುಣಗಳನ್ನು ಸಾಕಿಕೊಳ್ಳುವಲ್ಲಿ ಮತ್ತು ದುರ್ಗುಣಗಳನ್ನು ಬೆಳೆಸಿಕೊಳ್ಳುವಲ್ಲಿ ಒಂದು ಸ್ವಾರ್ಥ ಮನೋಭಾವ ಇರುತ್ತದೆ. ಸದ್ಗುಣಿಯು ಕೆಟ್ಟದ್ದನ್ನು ಮಾಡಲು ನಾಚಿ, ಹೇಸಿ, ಬೇಸರಿಸಿ ಒಳ್ಳೆಯ ಗುಣಗಳನ್ನು ಹೊಂದಿರಬಹುದು. ಅದರಂತೆ ದುರ್ಗುಣಿಯು ಕೆಟ್ಟದ್ದನ್ನು ಮಾಡಲು ನಾಚದೆ, ಹೇಸದೆ, ಬೇಸರಿಸದೆ ದುರ್ಗುಣಗಳನ್ನು ಹೊಂದಿರಬಹುದು. ಆದ್ದರಿಂದ ನಾಚಿ, ಹೇಸಿ, ಆಲಸಿ ಮಾಡದಿರುವ ಅಥವಾ ನಾಚದೆ, ಹೇಸದೆ, ಆಲಸದೆ ಮಾಡುವ ಯಾವುದೇ ಬಗೆಯ ಸ್ವಾರ್ಥ ನಡವಳಿಕೆಯ ಕ್ರಿಯೆಗಳೂ ಒಪ್ಪುವಂತಹುವಲ್ಲ. ಸ್ವಾರ್ಥ ಭಾವವನ್ನು ತೊರೆದು ನಾಚದೆ ಹೇಸದೆ ಆಲಸದೆ ತ್ಯಜಿಸಿದರೆ ಅದು ನಿಜವಾದ ತ್ಯಾಜ್ಯ.
ನಾಚಿಕೆ, ಹೇಸಿಕೆ, ಆಲಸಿಕೆ ಇವುಗಳಿಲ್ಲದೆ ಸಹಜವಾಗಿ ತ್ಯಜಿಸಿದರೆ ಅದೇ ನಿಜವಾದ ತ್ಯಾಗ. “ತ್ಯಜಿಸಿ ಭುಜಿಸಲ್ಕಲಿತವನೆ ಜಗಕೆ ಯಜಮಾನ” ಎಂಬ ಕಗ್ಗ ನುಡಿಯಿದೆ. ಅವನಿಗೆ ಅವನೇ ಯಜಮಾನ, ಅವನೇ ಶರಣ!
ಪದಪ್ರಯೋಗಾರ್ಥ:
ಮಾದುದು ಮಾದುದಲ್ಲ ಎಂಬುದು ಅನನ್ಯ ಪದಪ್ರಯೋಗ. ಮಾದುದು ಮಾದುದಲ್ಲ ಅಂದರೆ ನಾವು ಆಡುಮಾತಿನ ಮಧ್ಯೆ “ಹಾಗೆ ಮಾಡುವುದು ಮಾಡುವಂತಹುದಲ್ಲ” ಅಂದಂತೆ. ಮಾಡುವುದು ಎನ್ನುವುದು ಮಾನಸಿಕ ಮತ್ತು ದೈಹಿಕ ಕ್ರಿಯೆಗಳ ಸಂಯೋಗದಲ್ಲಿ ನಡೆದು ನಮ್ಮ ನಡವಳಿಕೆಯಲ್ಲಿ ವ್ಯಕ್ತವಾಗುವಂತಹುದು. ಬಸವಣ್ಣನ ವಚನವೊಂದರಲ್ಲಿ “ಮಾಡುವ” ಕ್ರಿಯೆಯ ಬಗ್ಗೆ ಸುಂದರವಾದ ಸಾಲಿದೆ. “ಮಾಡಿದಂತಿರಬೇಕು ಮಾಡದಂತಿರಬೇಕು ಮಾಡುವ ಮಾಟದಲ್ಲಿ ತಾನಿಲ್ಲದಂತಿರಬೇಕು, ನೆನೆಯುತ್ತಿರಬೇಕು ನೆನೆಯದಂತಿರಬೇಕು ನೆನೆಯುತ್ತ ನೆನೆಯುತ್ತ ಕೂಡಲಸಂಗಮನ ನೆನೆಯದಂತಿರಬೇಕು” ಇದೇ ಶೈಲಿಯಲ್ಲಿ ಆದರೆ ವಿಭಿನ್ನ ಅರ್ಥದಲ್ಲಿ ಅಲ್ಲಮ ಪ್ರಯೋಗಿಸಿರುವ ಪದ “ಮಾದುದು ಮಾದುದಲ್ಲ”. ಇಂತಹ ಪದ ಬಳಕೆ ಬರೀ ವಚನ ಸಾಹಿತ್ಯ ಮಾತ್ರವಲ್ಲದೆ ಇಡೀ ಕನ್ನಡ ಸಾಹಿತ್ಯವೇ ಕಂಡರಿಯದ ಅನನ್ಯ ಮತ್ತು ಅತ್ಯಪೂರ್ವ ಪದಪ್ರಯೋಗ.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.