ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಸಾಸವೆಯಷ್ಟು ಸುಖ
ಸಾಸವೆಯಷ್ಟು ಸುಖಕ್ಕೆ
ಸಾಗರದಷ್ಟು ದುಃಖ ನೋಡಾ.
ಗಳಿಗೆಯ ಬೇಟವ ಮಾಡಿಹೆನೆಂಬ
ಪರಿಯ ನೋಡಾ.
ತನ್ನನ್ನಿಕ್ಕಿ ನಿಧಾನವ ಸಾಧಿಸಿಹೆನೆಂದಡೆ,
ಬಿನ್ನಾಣ ತಪ್ಪಿತ್ತು ಗುಹೇಶ್ವರಾ
ಪದಾರ್ಥ:
ಸಾಗರ = ಸಮುದ್ರ
ಗಳಿಗೆ = ಕ್ಷಣಿಕ
ಬೇಟ = ದೈಹಿಕ ಸುಖ
ನಿಧಾನವ = ಸುಖವ
ಬಿನ್ನಾಣ = ಜೀವನಪಥ
ವಚನಾರ್ಥ:
ಮನುಷ್ಯ ಅನುಭವಿಸುವ ಸುಖದಲ್ಲಿ ಎರಡು ವಿಧ. ದೈಹಿಕ ಸುಖ ಮತ್ತು ಮಾನಸಿಕ ಸುಖ. ಇವೆರಡರಲ್ಲಿ ಮಾನಸಿಕ ಸುಖ ಅಂದರೆ ನೆಮ್ಮದಿ ದೀರ್ಘಕಾಲದ್ದು, ನಿರಂತರವಾದದ್ದು. ಜೀವನದಲ್ಲಿ ನೆಮ್ಮದಿ ಕಂಡುಕೊಳ್ಳಬೇಕೆಂದರೆ ಅದು ಶೀಘ್ರವಾಗಿ ದಕ್ಕುವುದಲ್ಲ. ಅದನ್ನು ಪರಿಶ್ರಮಪಟ್ಟು ಪಡೆಯಬೇಕು. ಆದರೆ ದೈಹಿಕ ಸುಖ ಎಂಬುದು ಹಾಗಲ್ಲ. ಬೇಕು ಎಂದುಕೊಳ್ಳುತ್ತಲೇ ಪಡೆಯಬಹುದಾದದ್ದು. ಅದು ಗಳಿಗೆಯ ಬೇಟ ಅಂದರೆ ಕ್ಷಣಿಕವಾದದ್ದು. ಆ ಒಂದು ಕ್ಷಣಿಕ ಸುಖವನ್ನು ಬೆಂಬತ್ತಿದ ಮನುಷ್ಯ ಇಲ್ಲಸಲ್ಲದ ಕಷ್ಟಕೋಟಲೆಗಳಿಗೆ ಒಳಗಾಗುತ್ತಾನೆ. ತನ್ನ ನಿಜವಾದ ಸ್ವರೂಪವನ್ನು ಮರೆತು ನಿಧಾನವನು ಅಂದರೆ ಗಳಿಗೆಯ ಬೇಟವೆನಿಸುವ ಲೌಕಿಕ ಮತ್ತು ಸಾಂಸಾರಿಕ ಸುಖವನ್ನು ಸಾಧಿಸಹೊರಟವನ ಜೀವನಶೈಲಿ ದಿಕ್ಕೆಟ್ಟು ಹೋಗುವ ಅಪಾಯವಿದೆ.
ಪದ ಪ್ರಯೋಗಾರ್ಥ:
ಸಾಸಿವೆ, ಸುಖ, ಸಾಗರ ಎಂಬ ಪದಗಳ ಜೋಡಣೆಯ ಚಮತ್ಕಾರವೇ ಈ ವಚನದ ಹೈಲೈಟ್. ಸುಖ ದುಃಖಗಳ ಗಾತ್ರವನ್ನು ಅಳೆಯಲು ಅಲ್ಲಮ ಬಳಸಿರುವ ಅಳತೆಗೋಲು ಸಾಸಿವೆ ಮತ್ತು ಸಾಗರ. ಸಾಸವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ. ಸಾವಿಲ್ಲದ ಮನೆಯಿಂದ ಸಾಸಿವೆ ತೆಗೆದುಕೊಂಡು ಬಾ ಎಂಬ ಬುದ್ದನ ಜನಪ್ರಿಯ ಕಥೆಯಿದೆ. ಸತ್ತಮಗನನ್ನು ಬದುಕಿಸಿಕೊಡು ಎಂದು ಹೆಂಗಸೊಬ್ಬಳು ಗೌತಮಬುದ್ದನನ್ನು ಕೇಳಿಕೊಳ್ಳುತ್ತಾಳೆ. ಇದು ಸಾಧ್ಯವಿಲ್ಲ ಎಂದು ನೇರವಾಗಿ ಹೇಳುವ ಬದಲು ಬುದ್ದ ಈ ಮಾತನ್ನು ಹೇಳುತ್ತಾನೆ. ಮಗನನ್ನು ಕಳೆದುಕೊಂಡ ತಾಯಿ ಮನೆ ಮನೆಗೆ ತಿರುಗಿ ಸಾವಿಲ್ಲದ ಮನೆಯ ಸಾಸಿವೆಯಿಲ್ಲದೆ ಬರಿಗೈಯಲ್ಲಿ ಹಿಂದಿರುಗುತ್ತಾಳೆ. ಜೀವಿಗಳಿಗೆ ಸಾವು ಅನಿವಾರ್ಯ ಎಂದು ತಿಳಿದುಕೊಳ್ಳುತ್ತಾಳೆ.
ಸಾವು ದುಃಖ ಅನಿವಾರ್ಯ ಆಗಿರುವ ಬದುಕಿನಲ್ಲಿ ದುಃಖ ಸಾಸವೆಯಷ್ಟಾಗಬೇಕು ಸುಖ ಸಾಗರದಷ್ಟಾಗಬೇಕು ಎನ್ನುವುದು ಅಲ್ಲಮನ ವಚನದ ಆಶಯ. ಈ ಅನನ್ಯ ಪದಪುಂಜವನ್ನು ಕನ್ನಡದ ಕೋಟ್ಯಾಧಿಪತಿ ಟಿವಿ ಕಾರ್ಯಕ್ರಮದಲ್ಲಿ ಪುನೀತ್ ರಾಜಕುಮಾರ್ ಸಾಂದರ್ಭಿಕವಾಗಿ ಪ್ರಸ್ತಾಪಿಸಿದ್ದು ಆಗ ಎಲ್ಲೆಡೆ ವೈರಲ್ ಆಗಿತ್ತು.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ವಿಷಕ್ಕೆ ರುಚಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಇಲ್ಲದ ಇಲ್ಲವೆ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.