ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಸಾಯದ ಸಂಚು
ಪರಿಣಾಮದೊಳಗೆ
ಮನದ ಪರಿಣಾಮವೆ ಚೆಲುವು.
ಸಂಗದೊಳಗೆ
ಶರಣರ ಸಂಗವೆ ಚೆಲವು.
ಕಾಯಗೊಂಡು ಹುಟ್ಟಿದ
ಮೂಢರೆಲ್ಲರು
ಸಾಯದ ಸಂಚವನರಿವುದೆ ಚೆಲುವು-ಗುಹೇಶ್ವರಾ.
ಪದಾರ್ಥ:
ಪರಿಣಾಮ = ತೃಪ್ತಿ, ಆನಂದ
ಸಂಗ = ಸಹವಾಸ, ಸ್ನೇಹ
ಸಾಯದ = ಸಾವಿನ
ಸಂಚು = ಯುಕ್ತಿ, ಉಪಾಯ
ವಚನಾರ್ಥ:
ಮನುಷ್ಯ ಎರಡು ರೀತಿಯಲ್ಲಿ ತನಗೆ ತೃಪ್ತಿ ಆನಂದಗಳನ್ನು ಪಡೆಯುತ್ತಾನೆ. ಮಾನಸಿಕವಾಗಿ ಮತ್ತು ದೈಹಿಕವಾಗಿ. ಮಾನಸಿಕವಾಗಿ ಪಡೆಯುವ ತೃಪ್ತಿ, ಆನಂದವೇ ಅತ್ಯಂತ ಪರಿಣಾಮಕಾರಿಯಾದದ್ದು. ಮತ್ತು ದೀರ್ಘ ಕಾಲ ಸುಖ ನೆಮ್ಮದಿ ನೀಡುವಂತದ್ದು. ದೈಹಿಕವಾಗಿ ಪಡೆಯುವ ಸುಖ, ತೃಪ್ತಿ ಕ್ಷಣಿಕವಾದದ್ದು. ಹಾಗಾಗಿ ಪರಿಣಾಮ ಅಂದರೆ ತೃಪ್ತಿ, ಆನಂದದಿಂದ ಮನಸ್ಸಿನಲ್ಲಿ ಉಂಟಾಗುವ ಪರಿಮಾಣವೇ ದೊಡ್ಡದು. ಅದು ಚೆಲುವಾದದ್ದು. ಅದನ್ನೇ ದಾರ್ಶನಿಕರು ಸತ್+ ಚಿತ್+ಆನಂದ= ಸಚ್ಚಿದಾನಂದ ಎಂದಿದ್ದಾರೆ. ಸಚ್ಚಿದಾನಂದದ ಪರಿಣಾಮದ ಪರಿಮಾಣವನ್ನು ಅಳೆಯಲಾಗದು.
ಮನುಷ್ಯ ಸಂಗಜೀವಿ. ಸ್ನೇಹಮಹಿ. ಎಲ್ಲಾ ತೆರನಾದ ಸಂಗ ಜೀವನದಲ್ಲಿ ಶರಣರೊಂದಿಗೆ ಅಂದರೆ ಸಜ್ಜನರೊಂದಿಗೆ ಹೊಂದುವ ಸ್ನೇಹ ಸಹವಾಸವೇ ಅತ್ಯಂತ ಶ್ರೇಷ್ಠವಾದದ್ದು, ಚೆಲುವಾದದ್ದು. ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ. ಈ ನರಜನ್ಮ ತಳೆದು ಜನಿಸಿ ಲೌಕಿಕ ಸಾಂಸಾರಿಕ ಮೌಢ್ಯತೆಯಲ್ಲಿ ಮುಳುಗಿ ಜೀವನ ನಡೆಸುತ್ತಿರುವ ಎಲ್ಲರೂ ಯಾವುದೇ ಕ್ಷಣದಲ್ಲಿ ಬಂದೆರಗಬಹುದಾದ ಸಾವಿನ ಸಂಚನ್ನು ಭೇದಿಸಿ ಬದುಕುವ ನಿರಂತರ ಜೀವಕ್ರಿಯೆಗೆ ಚೆಲುವಿದೆ.
ಪದ ಪ್ರಯೋಗಾರ್ಥ:
ಇದು ಕಾವ್ಯಗುಣವುಳ್ಳ ಅಲ್ಲಮನ ಅಪರೂಪದ ವಚನ. ಬದುಕಿನಲ್ಲಿ ಯಾವುದು ಚೆಲುವು, ಯಾವುದು ಸುಂದರ ಎಂದು ಹೇಳುತ್ತಲೇ ಸಾವು ತಂದೊಡ್ದುವ ಸಂಚಿನ ಬಗ್ಗೆಯೂ ವಚನ ಎಚ್ಚರಿಸುತ್ತದೆ. ಸಾಯದ ಸಂಚವನರಿವುದೆ ಚೆಲುವು ಎಂಬ ಅನನ್ಯವಾದ ಪದಪ್ರಯೋಗವಿದೆ. ಸಾವಿಗೆ ಹೆದರಬಾರದು. ಸಾವಿಗೆ ಸೋಲಬಾರದು. ಅಂತಿಮವಾಗಿ ಆಗುವ ಸಾವನ್ನು ತಡೆಯಲಾಗದು. ಆದರೆ ಸಾವಿನ ಸಂಚನ್ನು ಅರಿಯಬೇಕು. ಬಸವಣ್ಣ ಹೇಳುವ ಹಾಗೆ ಕೊಲುವೆನೆಂಬ ಭಾಷೆ ದೇವನದು, ಗೆಲುವೆನೆಂಬ ಭಾಷೆ ಭಕ್ತನದು. ಅಂತಹ ಆತ್ಮವಿಶ್ವಾಸದಲ್ಲಿ ಬದುಕು ಸಾಗಿಸುವುದೇ ಚೆಲುವು. ಸಾವನ್ನು ಗೆಲ್ಲುವಲ್ಲಿ ಸಹಾಯ ಮಾಡುವ ಸಾಮರ್ಥ್ಯವುಳ್ಳದ್ದು ಎಂದು ಪ್ರಸಿದ್ಧವಾಗಿರುವ ಮೃತ್ಯುಂಜಯ ಮಹಾಮಂತ್ರ ಹೇಳುವುದು ಸಾವಿನ ಸಂಚಿನ ಬಗ್ಗೆಯೇ.
“ಮೃತ್ಯುಂಜಯನೇ, ಸ್ಥಿರವಾದುದು, ಶಾಶ್ವತವಾದುದು, ಅನಂತವಾದುದರ ಕಡೆಗೆ ಹೋಗುವ ನನ್ನ ಪ್ರಯತ್ನದಿಂದ ನನ್ನನ್ನು ಬಿಡಿಸಬೇಡ” ಸಾವಿನ ಸಂಚನು ಅರಿಯುವುದು ನಿರಂತರ ಪ್ರಯತ್ನ. ಆ ಪ್ರಯತ್ನದಲ್ಲಿ ಛಲವಿದೆ, ಚೆಲುವಿದೆ. ಜೀವನ ಪ್ರೀತಿಯಿದೆ.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.