1929ರಲ್ಲಿ ಬಂಗಾಳಿ ಭಾಷೆಯಲ್ಲಿ ಪ್ರಕಟವಾದ ಮಾನದಾ ದೇವಿಯು ರಚಿಸಿರುವ ‘ ಶಿಕ್ಷಿತಾ ಪತಿತಾರ್ ಆತ್ಮಚರಿತ’ (ವಿದ್ಯಾವಂತ ವೇಶ್ಯೆಯ ಆತ್ಮಕಥೆ) ಬಂಗಾಳಿ ಸಾಹಿತ್ಯ ಲೋಕದಲ್ಲಿ ಭಾರೀ ಸಂಚಲನವನ್ನೇ ಉಂಟು ಮಾಡಿತು. ಮುಗ್ಧ ಹುಡುಗಿಯೊಬ್ಬಳು ವೃತ್ತಿನಿರತ ವೇಶ್ಯೆಯಾಗುವ ಪಯಣ ಈ ಆತ್ಮಚರಿತ್ರೆಯಲ್ಲಿದೆ.
ಈ ಸಮಾಜದಲ್ಲಿ ವೇಶ್ಯೆಯಾದವಳಿಗೆ ಯಾವುದೇ ’ಉನ್ನತ’ ಸ್ಥಾನಮಾನವಿಲ್ಲ. ಅದರೆ ಸಾಧು – ಸಭ್ಯಸ್ಥರ ವೇಷದಲ್ಲಿರುವ ಲಂಪಟರು ಅವಳೊಂದಿಗೆ ಮತ್ತು ಅವಳಂಥವರೊಂದಿಗೆ ಅತ್ಯಂತ ನಿಕಟವಾದ ಸಂಬಂಧವನ್ನು ಹೊಂದಿದ್ದರೂ ಸಮಾಜದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿರುತ್ತಾರೆ. ಇಂತಹ ’ಮಹಾಪುರುಷರ’ ಅಸಲಿ ಮುಖವನ್ನು ಬಯಲುಗೊಳಿಸುವ, ಸಮಾಜದ ಮುಂದೆ ತೆರೆದಿಡುವ ಪ್ರಯತ್ನವನ್ನು ಮಾಡುವ ಇರಾದೆಯಿಂದ ಮಾನದಾ ದೇವಿ ಬರೆದಿರುವ ಅವಳ ಆತ್ಮಕಥೆ ’ಶಿಕ್ಷಿತಾ ಪತಿತಾರ್ ಆತ್ಮಚರಿತ’ (ವಿದ್ಯಾವಂತ ವೇಶ್ಯೆಯ ಆತ್ಮಕಥೆ). ಇದು ಅವಳ ವೈಯಕ್ತಿಕ ಬದುಕಿನ ಕಥೆ ಮಾತ್ರವಾಗದೆ ಅವಳು ಬದುಕಿದ ಕಾಲದ ಸ್ವಾತಂತ್ರ್ಯ ಚಳವಳಿ ಮತ್ತು ಸಮಾಜ ಸುಧಾರಣಾ ಚಳವಳಿಗಳ ಹಲವಾರು ವೈವಿಧ್ಯತೆ ಮತ್ತು ಅಸಂಗತತೆಗಳನ್ನು ತನ್ನ ಒಡಲಿನಲ್ಲಿಟ್ಟುಕೊಂಡ ಚಿತ್ರಗಳನ್ನು ಬಿಚ್ಚಿಡುವ ಪರಿಣಾಮಕಾರಿ ಬರಹವಾಗಿದ್ದು, ಈ ಕೃತಿಯಲ್ಲಿ ಸಮಾಜದ ದ್ವಿಸ್ತರ ನೀತಿಯನ್ನು ಲೇಖಕಿ ಉಗ್ರವಾಗಿ ಖಂಡಿಸುತ್ತಾಳೆ.
1929ರಲ್ಲಿ ಬಂಗಾಳಿ ಭಾಷೆಯಲ್ಲಿ ಪ್ರಕಟವಾದ ಮಾನದಾ ದೇವಿಯು ರಚಿಸಿರುವ ‘ ಶಿಕ್ಷಿತಾ ಪತಿತಾರ್ ಆತ್ಮಚರಿತ’ (ವಿದ್ಯಾವಂತ ವೇಶ್ಯೆಯ ಆತ್ಮಕಥೆ) ಬಂಗಾಳಿ ಸಾಹಿತ್ಯ ಲೋಕದಲ್ಲಿ ಭಾರೀ ಸಂಚಲನವನ್ನೇ ಉಂಟು ಮಾಡಿತು. ಮುಗ್ಧ ಹುಡುಗಿಯೊಬ್ಬಳು ವೃತ್ತಿನಿರತ ವೇಶ್ಯೆಯಾಗುವ ಪಯಣ ಈ ಆತ್ಮಚರಿತ್ರೆಯಲ್ಲಿದೆ. ಈ ಪುಸ್ತಕವು ಪ್ರಕಟವಾದ ಒಂದೂವರೆ ತಿಂಗಳಿನ ಅವಧಿಯಲ್ಲಿ ನಾಲ್ಕು ಸಾವಿರ ಪ್ರತಿಗಳ ನಾಲ್ಕು ಮುದ್ರಣವನ್ನು ಕಂಡಿತು. ನಂತರದ ವರ್ಷಗಳಲ್ಲಿ ಈ ಪುಸ್ತಕದ ಎಪ್ಪತ್ತೈದು ಸಾವಿರಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿವೆಯೆನ್ನುವುದು ಒಂದು ವಿಶಿಷ್ಟ ದಾಖಲೆಯಾಗಿದೆ. ಅದರ ಪರಿಷ್ಕೃತ ಮುನ್ನುಡಿಗಳಲ್ಲಿ ಲೇಖಕಿಯು ಓದುಗರ ಮತ್ತು ಅವಳ ಪುಸ್ತಕದ ಟೀಕಾಕಾರರ ಪ್ರತಿಕ್ರಿಯೆಗಳಿಗೆ ಸ್ವಲ್ಪ ಖಾರವಾಗಿಯೇ ಉತ್ತರಿಸಿದ್ದಾಳೆ. ಈ ಇಡೀ ಕೃತಿಯನ್ನು ಓದಿ ಮುಗಿಸಿದಾಗ ಪಿತೃಶಾಹಿಯ ಎಲ್ಲ ಕ್ರೂರ ಆಯಾಮಗಳನ್ನು ಅತ್ಯಂತ ಸಶಕ್ತವಾಗಿ ಪ್ರಶ್ನಿಸುವ ಲೇಖಕಿಯ ವೈಚಾರಿಕತೆ ಮತ್ತು ದಾರ್ಷ್ಟ್ಯ ಎದ್ದು ಕಾಣುತ್ತದೆ.
ಮೊದಲನೆಯದಾಗಿ, ಈ ಆತ್ಮಕಥೆಯನ್ನು ಸ್ವತಃ ಲೇಖಕಿಯೇ ಬರೆದಿದ್ದಾಳೋ ಅಥವಾ ಬೇರೆ ಯಾವುದಾದರೂ ಪುರುಷನು ಮಾನದಾ ಹೆಸರಿನಲ್ಲಿ ಬರೆದಿರಬಹುದೇ ಎನ್ನುವ ಅನುಮಾನವನ್ನು ಕೆಲವರು ವ್ಯಕ್ತಪಡಿಸಿರುವುದು ಅವಳ ಗಮನಕ್ಕೆ ಬಂದ ಸಂದರ್ಭಲ್ಲಿ ಅವಳು ಖಾರವಾಗಿ ಉತ್ತರಿಸುತ್ತಾಳೆ. “ನನ್ನ ಬರವಣಿಗೆಯನ್ನು ಅನುಮಾನಿಸುವವರು ಒಂದು ವೇಳೆ, ’ಒಬ್ಬಳು ವೇಶ್ಯೆ, ಎಲ್ಲರಿಗೂ ಸೆರಗು ಹಾಸುತ್ತಾ ಹಣ ಸಂಪಾದಿಸುವವಳು ಪುಸ್ತಕ ಬರೆಯುವ ಸಾಮರ್ಥ್ಯವನ್ನು ಹೊಂದಿರುವುದು ಸಾಧ್ಯವೇ?’ ಎಂದು ಕೇಳಿದರೆ ಅದಕ್ಕೆ ಸೂಕ್ತ ಉತ್ತರ ನೀಡಲು ಸಿದ್ಧಳಿದ್ದೇನೆ. ’ಈ ಸಮಾಜದಲ್ಲಿ ವೇಶ್ಯೆಯರನ್ನು ಹುಡುಕಿಕೊಂಡು ಬರುವ ಕಚ್ಚೆ ಹರುಕರಿಗೆ ಪುಸ್ತಕ ಬರೆಯುವುದು, ಪತ್ರಿಕೆಯನ್ನು ನಡೆಸುವುದು ಸಾಧ್ಯವಾದರೆ ಒಬ್ಬ ವೇಶ್ಯೆಯಿಂದ ಆ ಕಾರ್ಯವನ್ನು ಮಾಡುವುದು ಏಕೆ ಸಾಧ್ಯವಾಗುವುದಿಲ್ಲ?” ಎನ್ನುವುದು ಅವಳ ಉತ್ತರ.
1900ನೇ ಇಸವಿಯ ಆಗಸ್ಟ್ ನಾಲ್ಕನೇ ತಾರೀಕು ತಾನು ಜನಿಸಿದ್ದು ಎಂದು ಪರಿಚಯಿಸಿಕೊಳ್ಳುವ ಮಾನದಾ ದೇವಿ ಅವಳ ತಂದೆ ಕಲ್ಕತ್ತಾದ ಒಬ್ಬ ಗೌರವಾನ್ವಿತ ಕುಟುಂಬದ ಬ್ರಾಹ್ಮಣ ಮತ್ತು ಅವಳು ಅವರ ಹಿರಿಯ ಮಗಳು ಎಂದಷ್ಟೇ ಪರಿಚಯಿಸಿಕೊಳ್ಳುತ್ತಾಳೆ. ಅವರ ಹೆಸರು ಮತ್ತು ಪರಿಚಯವನ್ನು ಲೇಖಕಿ ಬಹಿರಂಗಪಡಿಸುವುದಕ್ಕೆ ಇಷ್ಟಪಡುವುದಿಲ್ಲ. ಏಕೆಂದರೆ ಅವರು ಅವರನ್ನು ಅವಲಂಬಿಸಿರುವ ಕುಟುಂಬ ಮಕ್ಕಳು ಹಾಗೂ ಅವರಿಗೆ ಆತ್ಮೀಯರಾದ ಹಲವರು ಇನ್ನೂ ಜೀವಂತವಾಗಿದ್ದಾರೆ. ಸಮಾಜದಲ್ಲಿ ಅವರು ಅಪಾರ ಗೌರವವನ್ನು ಸಂಪಾದಿಸಿದ್ದಾರೆ. ಅವರೂ ಈ ಆತ್ಮಕಥೆಯನ್ನು ಓದುವಂತಿರಬೇಕು. ಈ ವಿಷಯದಲ್ಲಿ ಅವರಿಗೆ ಮುಜುಗರವುಂಟುಮಾಡುವುದಕ್ಕೆ ಅವಳು ಖಂಡಿತ ಬಯಸುವುದಿಲ್ಲ.
ಆತ್ಮಚರಿತ್ರೆಯನ್ನು ಬರೆಯುವವರೆಲ್ಲರೂ ಸಾಮಾನ್ಯವಾಗಿ ನಾನೇಕೆ ಬರೆದೆ? ಮತ್ತು ಅಂತಹ ಆತ್ಮಚರಿತ್ರೆಯ ಅಗತ್ಯವಿದೆಯೇ ಎಂಬ ಪ್ರಶ್ನೆಯನ್ನು ಹಾಕಿಕೊಳ್ಳುತ್ತಾರೆ. ಈ ಕೃತಿಯಲ್ಲಿಯೂ ಲೇಖಕಿ ಆ ಪ್ರಶ್ನೆಯನ್ನು ಹಾಕಿಕೊಂಡು ಉತ್ತರಿಸಿರುವುದು ಅವಳ ಉದ್ದೇಶ ಮತ್ತು ಕೃತಿಯ ಅಂತಸ್ಸತ್ವವನ್ನು ಬಯಲುಗೊಳಿಸುತ್ತದೆ. ವೇಶ್ಯೆಯಾದವಳೊಬ್ಬಳ ಅನುಭವ ಲೋಕವನ್ನು ಜನಸಾಮಾನ್ಯರು ಏಕೆ ಓದಬೇಕು, ಅನ್ನುವ ಪ್ರಶ್ನೆಯನ್ನು ಕೆಲವರು ಎತ್ತಬಹುದು. ಅವರಿಗೂ ಇಲ್ಲಿಯ ಲೇಖಕಿಯ ಮಾತುಗಳು ಉತ್ತರವನ್ನು ಕೊಡುತ್ತವೆ: “ನಾನು ಈ ಪುಸ್ತಕವನ್ನು ಬರೆಯುತ್ತಿರುವ ಉದ್ದೇಶ ಮಹತ್ವದ್ದು. ನಾನು ಪಾಪಿ, ಕಳಂಕಿನಿ, ಪ್ರಶಂಸೆಗೆ ಅಯೋಗ್ಯಳು. ಆದರೆ ನನ್ನ ಜೀವನದ ಮುಳ್ಳುಹಾದಿಯನ್ನು ನಾನು ಅದೆಷ್ಟು ನಿಷ್ಕಪಟವಾಗಿ ಹೇಳುತ್ತಿದ್ದೇನೆಂದರೆ, ಯಾವುದೇ ಮಹಾನ್ ವ್ಯಕ್ತಿಯು ತನ್ನ ಬದುಕಿನ ಕಥೆಯನ್ನು ಇಷ್ಟೊಂದು ಮುಕ್ತವಾಗಿ ಹೇಳಿಕೊಳ್ಳುವುದಿಲ್ಲ. ದಾರಿ ತಪ್ಪಿದ ಹೆಣ್ಣಿನ ಜೀವನದಲ್ಲಿ ಕಷ್ಟ, ವೇದನೆ, ಇಷ್ಟವಿಲ್ಲದ ಸಂಭೋಗ ಮುಂತಾದ ವಿಷಯಗಳನ್ನು ಆಧರಿಸಿ ಈ ಕೃತಿಯನ್ನು ರಚಿಸಲಾಗಿದೆ. ಅವಳಂತಹ ವೇಶ್ಯೆಯರು ಈ ವೃತ್ತಿಯನ್ನು ತೊರೆದು, ಸಮಾಜದಲ್ಲಿ ಗೌರವವನ್ನು ಸಂಪಾದಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಹದಿಹರೆಯದಲ್ಲಿ ಮಾಡಿದ ಯಾವುದೋ ತಪ್ಪಿಗಾಗಿ ಯಾವ ಹೆಣ್ಣೂ ವೇಶ್ಯಾವಾಟಿಕೆಯಂತಹ ನರಕದ ಕೂಪಕ್ಕೆ ಬೀಳಬಾರದು ಎನ್ನುವ ಆಶಯವು ಈ ಕೃತಿಯ ರಚನೆಯ ಹಿಂದಿದೆ.

ಕಲ್ಕತ್ತೆಯ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಮಾನದಾ ದೇವಿ ತುಂಬ ಚಿಕ್ಕವಳಿದ್ದಾಗ ತಂದೆ ತಾಯಿಯರ ಪ್ರೀತಿ, ವಿಶ್ವಾಸವನ್ನು ಯಥೇಚ್ಛವಾಗಿ ಸವಿದವಳು. ತಾಯಿಯ ಅಕಾಲಿಕ ಮರಣ, ತಂದೆಯ ಎರಡನೆಯ ವಿವಾಹದಿಂದಾಗಿ, ತಂದೆಯ ನಿರ್ಲಕ್ಷ್ಯ ಮತ್ತು ಅನಾದರದ ಕಾರಣದಿಂದಾಗಿ ಪ್ರೀತಿಯನ್ನು ಅರಸುತ್ತಾ ಕೆಟ್ಟ ಸಹವಾಸಕ್ಕೆ ಬೀಳುತ್ತಾಳೆ. ಆಗ ಅವಳಿಗೆ ವಯಸ್ಸು ಕೇವಲ ಹದಿನೈದು. ತನ್ನ ದುರವಸ್ಥೆಗೆ ತಾನೇ ಕಾರಣವನ್ನು ಹೀಗೆ ವಿವರಿಸಿಕೊಳ್ಳುತ್ತಾರೆ, ಲೇಖಕಿ: “ಜೀವನದಲ್ಲಿ ಯಾವತ್ತೂ ಸಂಯಮವನ್ನು ನಾನು ಕಲಿಯಲೇ ಇಲ್ಲ. ವಯೋಸಹಜವಾದ ಬಯಕೆಗಳಿಗೆ ಕೇವಲ ತುಪ್ಪವನ್ನು ಸುರಿಯುತ್ತ ಬಂದೆ. ಚಿಕ್ಕ ವಯಸ್ಸಿನಿಂದಲೇ ಕಥೆ, ಕಾದಂಬರಿಗಳನ್ನು ಓದುತ್ತಾ ಬಂದ ಕಾರಣದಿಂದಾಗಿಯೋ ಏನೋ, ಸಮಾಜದಲ್ಲಿನ ಕಟ್ಟುಪಾಡುಗಳ ಬಗ್ಗೆ ನನ್ನ ಮನಸ್ಸಿನಲ್ಲಿ ಆಕ್ರೋಶ ಮೂಡಿತ್ತು. ಅವುಗಳನ್ನು ವಿರೋಧಿಸುತ್ತಲೇ ಬಂದೆ. ಉತ್ತಮ ಆದರ್ಶಗಳ ಬಗ್ಗೆ ನನ್ನ ಗಮನ ಹರಿಯಲೇ ಇಲ್ಲ. ಅಪ್ರಾಪ್ತ ಬಾಲಕಿ ಗಂಡಸಿನ ಮೋಹದ ಮಾತುಗಳಿಗೆ ಯಾವ ರೀತಿ ತನ್ನನ್ನು ಒಪ್ಪಿಸಿಕೊಳ್ಳುತ್ತಾಳೆ ಮತ್ತು ಆತನಿಂದ ಮೋಸಹೋಗುತ್ತಾಳೆ ಎನ್ನುವುದಕ್ಕೆ ಸ್ವತಃ ನಾನೇ ಒಂದು ಉದಾಹರಣೆ.”
ಹತ್ತೊಂಭತ್ತನೇ ಶತಮಾನದ ಆರಂಭದಲ್ಲಿ ಇಂಗ್ಲಿಷ್ ಶಿಕ್ಷಣದ ಮೂಲಕ ಪ್ರವೇಶಿಸಿದ ಆಧುನಿಕ ಜೀವನಕ್ರಮದ ಭಾಗವಾಗಿ ಅಂದಿನ ಶಿಕ್ಷಿತ ಮಹಿಳೆಯರು ಅನುಭವಿಸಿದ ಸ್ವಾತಂತ್ರ್ಯ ಮತ್ತು ಸವಲತ್ತುಗಳ ಒಂದು ಕಿರುಪರಿಚಯವನ್ನು ಇಲ್ಲಿ ನೋಡಬಹುದು. ಮನೆಯಲ್ಲಿಯೇ ಶಿಕ್ಷಕರನ್ನಿಡಿಸಿ ಮಗಳಿಗೆ ವಿದ್ಯಾಭ್ಯಾಸ ಕೊಡಿಸಲಾಗಿತ್ತು. ಬೆಳಿಗ್ಗೆ ಆರು ಗಂಟೆಯಿಂದ ಹಿಡಿದು ರಾತ್ರಿಯವರೆಗೆ ಬೇರೆ ಬೇರೆ ಸಮಯದಲ್ಲಿ ನಾಲ್ವರು ಶಿಕ್ಷಕರು ಅವಳಿಗೆ ಪಾಠ ಮಾಡುತ್ತಿದ್ದರು. ಅಲ್ಲದೆ ಕಥೆ, ಕವನ, ನಾಟಕ ಓದುವುದು, ಬಂಕಿಮಚಂದ್ರ, ಶರತ್ಚಂದ್ರರ ಕಾದಂಬರಿಗಳನ್ನು ಓದುವುದು, ಶಾಲಾ ವ್ಯಾಸಂಗ, ರಂಗಮಂದಿರ, ಚಿತ್ರಮಂದಿರಕ್ಕೆ ಭೇಟಿ ನೀಡುವುದೇ ಕಾರ್ಯಕ್ರಮಗಳಲ್ಲಿ ಸಂಪೂರ್ಣವಾಗಿ ಅವಳು ತೊಡಗಿಸಿಕೊಂಡಿದ್ದಳು. ಸದಭಿರುಚಿಯ ಈ ಎಲ್ಲ ಚಟುವಟಿಕೆಗಳನ್ನು ಅವಳು ನಂತರ ತನ್ನನ್ನು ಹಾಳು ಮಾಡಿತು ಎಂದು ಭಾವಿಸುವುದೇ ಅಚ್ಚರಿಯ ವಿಷಯವಾಗಿದೆ. ಅವಳ ತಂದೆ ಅವಳಿಗೆ ಎಷ್ಟೊಂದು ಸ್ವಾತಂತ್ರ್ಯವನ್ನು ಕೊಟ್ಟಿದ್ದರೆಂದರೆ ಮನೆಗೆ ಬರುತ್ತಿದ್ದ ಮೇಷ್ಟ್ರುಗಳು, ಬಂಧುಗಳ ಜೊತೆ (ಅವರು ಪುರುಷರಾಗಿದ್ದರೂ) ಯಲ್ಲಿ ಸೇರಿಕೊಂಡು ಸುತ್ತಾಡುವುದು, ಚಹಾಕೂಟದಲ್ಲಿ ಪಾಲ್ಗೊಳ್ಳುವುದು ಮುಂತಾದ ವಿಷಯಗಳಿಗೆ ಅವರ ತಂದೆ ಯಾವುದೇ ರೀತಿಯಲ್ಲಿ ಆಕ್ಷೇಪವೆತ್ತಿರಲಿಲ್ಲ. ಜನರೊಂದಿಗೆ ಅವಳು ಮುಕ್ತವಾಗಿ ಬೆರೆಯುವುದನ್ನು ಪ್ರೋತ್ಸಾಹಿಸುತ್ತಿದ್ದರು. ಇಷ್ಟೆಲ್ಲಾ ಇದ್ದರೂ ತಾಯಿತಂದೆಯರ ಪ್ರೀತಿ ಸಿಗದೆ, ಪ್ರೀತಿಗಾಗಿ ಹಂಬಲಿಸುತ್ತಾ ಅವಳು ದುರುಳನ ಬಲೆಗೆ ಸಿಕ್ಕಿ ಬೀಳುತ್ತಾಳೆ.
ದಾರಿಗೆಟ್ಟವರಿಗೆ ಪುನರ್ವಸತಿ ಕಲ್ಪಿಸಲೆಂದು ಸ್ಠಾಪಿತವಾಗಿದ್ದ ’ಮಹಿಳಾ ಕಲ್ಯಾಣ ಆಶ್ರಮ’ ಕೂಡ ಅಂತಹ ನಿರಪಾಯಕಾರಿಯೇನಲ್ಲ. ಮೇಲ್ನೋಟಕ್ಕೆ ಎಲ್ಲ ಸೌಕರ್ಯಗಳು, ಸೌಲಭ್ಯಗಳು ಆ ಗೃಹದಲ್ಲಿ ಸಿಕ್ಕರೂ ಹಲವರ ದೈಹಿಕ ಕಾಮನೆಗಳನ್ನು ತೀರಿಸಬೇಕಿತ್ತು. ಇಲ್ಲದಿದ್ದರೆ, ನಾನಾ ಪ್ರಕಾರದ ಹಿಂಸೆ, ಕಿರುಕುಳವನ್ನು ಅವರು ಎದುರಿಸಬೇಕಿತ್ತು. ಈ ಕಷ್ಟ ಕೋಟಲೆಗಳಿಂದ ಹೊರಬರುವುದಕ್ಕಾಗಿ ಪರ್ಯಾಯ ಮಾರ್ಗವನ್ನು ಯೋಚಿಸಿದ ಮಾನದಾ ಮತ್ತು ಅವಳ ಗೆಳತಿಯರು ಹಲವಾರು ಪರ್ಯಾಯ ಮಾರ್ಗಗಳನ್ನು ಹುಡುಕುತ್ತಾರೆ. ಅದರಲ್ಲಿ ಮೊದಲಿನದು ’ದಾದಿಯರ ತರಬೇತಿ’ ಪಡೆಯುವುದು. ಯೂರೋಪಿನಾದ್ಯಂತ ಭೀಕರ ಯುದ್ಧದ ಸಮಯವಾದ್ದರಿಂದ ’ದಾದಿಯರು ಬೇಕಾಗಿದ್ದಾರೆ’ ಎಂಬ ಜಾಹೀರಾತನ್ನು ನೋಡಿ ನಾಲ್ವರು ಮಹಿಳೆಯರು ಹೋಗಿ ಅದಕ್ಕೆ ಬೇಕಾದ ತರಬೇತಿ ಪಡೆಯುತ್ತಾರೆ. ಕೆಲಸ ಹುಡುಕಿಕೊಳ್ಳುವವರೆಗೂ ವಸತಿಗಾಗಿ ಹುಡುಕುತ್ತಾ ಬ್ರಹ್ಮ ಸಮಾಜಕ್ಕೆ ಹೋಗುತ್ತಾರೆ.
ಬ್ರಹ್ಮ ಸಮಾಜದ ಪ್ರಾರ್ಥನಾ ಮಂದಿರಕ್ಕೆ ಹೋಗಿ ಕೃಷ್ಣಕುಮಾರ ಮಿತ್ರರನ್ನು ಭೇಟಿಯಾಗಿ ಬ್ರಹ್ಮಸಮಾಜದ ಸದಸ್ಯರಾಗಬೇಕು, ಅದು ತಮಗೆ ಆಶ್ರಯ ನೀಡುವುದೇ ಎಂದು ಪ್ರಶ್ನಿಸಿದಾಗ ಅವರಿಗೆ ಸೇರಿಸಿಕೊಳ್ಳುವ ಮನಸ್ಸಿದ್ದರೂ ಅವರು ಒಬ್ಬರೇ ಏನೂ ನಿರ್ಣಯ ತೆಗೆದುಕೊಳ್ಳುವುದು ಸಾಧ್ಯವಿರುವುದಿಲ್ಲ. ಸಮಾಜದ ಹಿರಿಯರ ಸಮ್ಮತಿಗಾಗಿ ಹೋಗಿ ವಿಚಾರಿಸಿದಾಗ “ಇವರೆಲ್ಲರ ಪೂರ್ವಜೀವನ ಕಲುಷಿತಗೊಂಡಿದೆ. ಇವರನ್ನು ಸೇರಿಸಿಕೊಂಡರೆ ’ಬ್ರಹ್ಮ ಸಮಾಜ’ಕ್ಕೆ ಯಾವ ಪಾಪ ಅಂಟಿಕೊಳ್ಳುತ್ತದೆಯೋ ಏನೋ! ಬೇಡ ಇವರನ್ನು ಸೇರಿಸಿಕೊಳ್ಳುವುದು ಬೇಡ” ಎಂಬ ಉತ್ತರ ದೊರೆತು ಅವರನ್ನು ಅಲ್ಲಿಂದ ಹೊರಹಾಕಲಾಗುತ್ತದೆ. ಬೇರೆ ದಾರಿ ಕಾಣದೆ ಅವರು ವೇಶ್ಯಾವಾಟಿಕೆಯ ಪಾಪಕೂಪಕ್ಕೆ ಹೋಗಿ ಬೀಳುತ್ತಾರೆ.
ವೇಶ್ಯೆಯರ ಮನೆಗೆ ಬರುವ ವಿವಿಧ ಪ್ರಕಾರದ ಜನರು, ಅವರು ಪ್ರತಿನಿಧಿಸುವ ಸಮಾಜದ ವೃತ್ತಿಯ ಶ್ರೇಣೀಕರಣಗಳನ್ನು ಸಮಾಜಶಾಸ್ತ್ರೀಯ ನೆಲೆಯಲ್ಲಿ ವಿಮರ್ಶಿಸುವ ರೀತಿ ಗಂಭೀರ ಚಿಂತನೆಯ ನೆಲೆಯಲ್ಲಿದೆ. ಮಾನದಾ ಬಳಿಗೆ ಒಬ್ಬ ಬ್ಯಾಂಕ್ ಬಾಬು ಬರುತ್ತಿರುತ್ತಾನೆ. ಪ್ರತಿದಿನ ಅವನು ಬರುವಾಗ ದಿನಪತ್ರಿಕೆಗಳನ್ನು ತರುತ್ತಿದ್ದ. ಅವನಿಗೆ ಹೇಳಿ ಅವಳು ಬಂಗಾಳಿ ಹಾಗೂ ಇಂಗ್ಲಿಷ್ ಭಾಷೆಯ ಕೆಲವು ಪುಸ್ತಕಗಳನ್ನು ತರಿಸಿಕೊಂಡು ಅದನ್ನು ಇಡುವುದಕ್ಕೆ ಅವನಿಂದಲೇ ಒಂದು ಅಲ್ಮೆರಾವನ್ನು ತರಿಸಿಕೊಳ್ಳುತ್ತಾಳೆ. ಹೀಗಾಗಿ ಅವಳು ಓದಿರುವ ಬಂಗಾಳಿ ಸಾಹಿತ್ಯದಲ್ಲಿ ವೇಶ್ಯೆಯರ ಚಿತ್ರಣವನ್ನು ಕುರಿತು ವಿಮರ್ಶಾತ್ಮಕವಾಗಿ ಬರೆದಿದ್ದಾಳೆ. ವೇಶ್ಯೆಯರ ಜೀವನಶೈಲಿಯನ್ನು ಆಧಾರವಾಗಿಟ್ಟುಕೊಂಡು ಬಂಕಿಮಚಂದ್ರರು ಬರೆದ ಕಾದಂಬರಿಗಳು, ಕೃಷ್ಣಕಾಂತರ ’ಉಯಿಲ್’, ಅಮೃತಲಾಲ್ ಬಸ್ತರ್ ಅವರು ಬರೆದ ನಾಟಕ ’ತರುಣವಾಲಾ’ ಮುಂತಾದವು ಓದುಗರಲ್ಲಿ ಅಸಹ್ಯ ಭಾವನೆ ಮತ್ತು ಆಕ್ರೋಶ ಹುಟ್ಟಿಸುವಂತಿತ್ತು. ಆದರೆ ರವೀಂದ್ರನಾಥ ಠಾಗೋರರ ಕೆಲವು ಕಥೆ, ಕಾದಂಬರಿಗಳಲ್ಲಿ ವೇಶ್ಯೆಯರ ಚಾರಿತ್ರ್ಯದ ಬಗ್ಗೆ ಹೊಸ ನೋಟವನ್ನು ಕೊಟ್ಟರು. ಅಂತಹುದೇ ಅಭಿಪ್ರಾಯವನ್ನು ಶರತ್‌ಚಂದ್ರ ಚಟ್ಟೋಪಾಧ್ಯಾಯ, ನರೇಶ ಸೇನ್ ಗುಪ್ತ ಮುಂತಾದ ಸ್ಪಷ್ಟವಾಗಿ ಮತ್ತು ನೇರವಾಗಿ ಬರೆದಿದ್ದಾರೆ. ವೇಶ್ಯೆಯರ ಅಂತಹ ಸ್ಥಿತಿಗೆ ಸಮಾಜವೇ ಕಾರಣ ಎಂಬುದನ್ನು ಯಾರೂ ಮರೆಯಬಾರದು ಎಂಬುದು ಅವರ ಅಭಿಪ್ರಾಯವಾಗಿತ್ತು.

ವೃತ್ತಿಯಿಂದ ವೇಶ್ಯೆಯಾಗಿದ್ದರೂ ದೇಶದ ರಾಜಕೀಯ ವಿಷಯಗಳ ಬಗ್ಗೆ ಮಾನದಾ ವಿಶೇಷ ಆಸಕ್ತಳಾಗಿದ್ದಳು. ದೇಶದ ಸ್ವಾತಂತ್ರ್ಯ ಹೋರಾಟದ ಬಗ್ಗೆ ದಿನಪತ್ರಿಕೆಗಳಲ್ಲಿ ಮತ್ತು ವಾರಪತ್ರಿಕೆಗಳಲ್ಲಿ ಓದಿ ತಿಳಿದುಕೊಂಡಿದ್ದಳು. 1920ರ ಗಾಂಧಿ ನೇತೃತ್ವದ ಅಸಹಕಾರ ಚಳವಳಿಯಲ್ಲಿ ಭಾಗವಹಿಸುವಲ್ಲಿ ಅವಳು ಮತ್ತು ಅವಳ ಗೆಳತಿಯರು ಹಿಂದೆ ಬೀಳುವುದಿಲ್ಲ. ಅಲ್ಲಿ ಚಳುವಳಿಯ ನೇತೃತ್ವವನ್ನು ವಹಿಸಿದ್ದವರು ದೇಶಬಂಧು ಚಿತ್ತರಂಜನ್ ದಾಸ್. ಪುರುಷರೊಂದಿಗೆ ಮಹಿಳೆಯರೂ ಭಾಗವಹಿಸಿದ್ದ ಈ ಚಳವಳಿಯಲ್ಲಿ ಅವರ ನೇತೃತ್ವವನ್ನು ವಹಿಸಿದ್ದವರು ಚಿತ್ತರಂಜನ್ ದಾಸ್‌ರ ಮಡದಿ ವಾಸಂತಿ ದೇವಿ. ಆಂದೋಲನದ ತೀವ್ರತೆ ಹೆಚ್ಚಿದಾಗ ವೇಶ್ಯೆಯರೂ ಸೇರಿದಂತೆ ಸಮಾಜದ ಎಲ್ಲ ಸ್ತರದ ಮಹಿಳೆಯರೂ ಒಟ್ಟಾಗಿ ಭಾಗವಹಿಸಿದರು. “ಯಾರೂ ಅದುವರೆಗೂ ಎಂದೂ ವೇಶ್ಯಾಗೃಹಕ್ಕೆ ಹೋಗಿರಲಿಲ್ಲವೋ ಅಥವಾ ವೇಶ್ಯೆಯರೊಂದಿಗೆ ಸಂಬಂಧ ಇಟ್ಟುಕೊಳ್ಳುವ ಯೋಚನೆಯನ್ನು ಮಾಡಿಲ್ಲವೋ, ಅಂತಹ ಸಜ್ಜನರೊಂದಿಗೆ ನಾವು ಒಂದೇ ಕಾರಿನಲ್ಲಿ ಓಡಾಡುತ್ತಿದ್ದೆವು, ಮಾತನಾಡುತ್ತಿದ್ದೆವು. ಹಾಸ್ಯ ಚಟಾಕಿಯನ್ನು ಹಾರಿಸುತ್ತಿದ್ದೆವು. ಎಲ್ಲರೂ ನಮ್ಮ ನಿಸ್ವಾರ್ಥ ದೇಶಪ್ರೇಮವನ್ನು ಮುಕ್ತ ಕಂಠದಿಂದ ಹೊಗಳುತ್ತಿದ್ದರು. ನಮ್ಮನ್ನು ಅವರು ಹೊಗಳುತ್ತಿದ್ದಾಗ ಮನಸ್ಸಿಗೆ ಆನಂದವಾಗುತ್ತಿತ್ತು“ ಎಂದು ಬರೆಯುತ್ತಾರೆ. ಅವರ ಈ ಭಾಗವಹಿಸುವಿಕೆಯ ಬಗ್ಗೆ ಅಪಸ್ವರ ಎತ್ತಿದ ಕೆಲವು ಮಹನೀಯರೂ ಇದ್ದರು. ಆದರೆ ಚಿತ್ತರಂಜನ್ ದಾಸ್ ಮಾತ್ರ “ಈ ಮಹಿಳೆಯರು ತಾವಾಗಿಯೇ ಮುಂದೆ ಬಂದು ಈ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದೊಂದು ಶುಭಲಕ್ಷಣ. ನಮ್ಮ ಹೋರಾಟಕ್ಕೆ ಹೊಸದೊಂದು ಅಪೂರ್ವ ಶಕ್ತಿಯ ಸೇರ್ಪಡೆ” ಎಂದೇ ಅವರನ್ನು ಸ್ವಾಗತಿಸಿದರು.
ಗ್ರಾಮೀಣ ಪ್ರದೇಶಗಳಿಂದ ಅಸಹಕಾರ ಆಂದೋಲನದಲ್ಲಿ ಭಾಗವಹಿಸಲು ಬಂದಿದ್ದ ಮಹಿಳೆಯರಲ್ಲಿ ಕೆಲವರು ತಿರುಗಿ ಹಿಂದಕ್ಕೆ ಹೋಗಲು ಬಯಸಲಿಲ್ಲ. ಅವರ ವಸತಿಗೆಂದೇ ಮಾಡಿದ್ದ ವ್ಯವಸ್ಥೆಯನ್ನು ಒಂದು ’ಮಹಿಳಾ ಮಂದಿರ’ವನ್ನಾಗಿ ಪರಿವರ್ತಿಸಿ ಅವರ ಹಿತಕ್ಕಾಗಿ ಸಂಸ್ಥೆಯೊಂದನ್ನು ಕಾರ್ಯಾರಂಭ ಮಾಡಿದರು. ಇದು ಚಿತ್ತರಂಜನ್ ದಾಸ್ ಅವರ ಕನಸಿನ ಯೋಜನೆಯೂ ಆಗಿತ್ತು. ಇದಾದ ಕೆಲವು ದಿನಗಳ ನಂತರ ಉತ್ತರ ಬಂಗಾಳ ಭೀಕರ ಜಲಪ್ರವಾಹಕ್ಕೆ ತುತ್ತಾಯಿತು. ನೆರೆಪೀಡಿತ ಜನರಿಗೆ ನೆರವು ನೀಡುವ ಸಲುವಾಗಿ ಸಮಾಜದ ಎಲ್ಲ ಸ್ತರದ ಜನರೂ ಹಲವಾರು ರೀತಿಯ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡರು. ಐವತ್ತು, ಅರವತ್ತು ವೇಶ್ಯೆಯಿರುವ ತಂಡವನ್ನು ರಚಿಸಿಕೊಂಡು ’ಪತಿತಾ ನಾರೀ ಸಮಿತಿ’ ಎಂಬ ಬ್ಯಾನರ್ ಹಿಡಿದು ಹಣ ಮತ್ತು ಹಳೆಯ ಬಟ್ಟೆಗಳನ್ನು ಸಂಗ್ರಹಿಸುತ್ತಿದ್ದೆವು. ಈ ಎಲ್ಲ ಚಟುವಟಿಕೆಗಳ ಪರಿಣಾಮವಾಗಿ ವೇಶ್ಯೆಯರ ಸಂಘಗಳು ಮತ್ತು ವೇಶ್ಯೆಯರ ಸಮಿತಿಯು ಆರಂಭವಾದವು. ಇಷ್ಟಾದರೂ ವೇಶ್ಯೆಯರನ್ನು ಅಸ್ಪೃಶ್ಯರನ್ನಾಗಿ ನೋಡುವ ಮನೋಭಾವ ಕೆಲವು ಹಿರಿಯ ನಾಯಕರಲ್ಲೂ ವ್ಯಕ್ತವಾದದ್ದರಲ್ಲಿ ಆಶ್ಚರ್ಯವೇನಿಲ್ಲ.
ರವೀಂದ್ರನಾಥ ಠಾಗೋರರು ರಂಗಮಂದಿರಗಳಿಗೆ ಹೋಗಿ ನಟಿಯರಿಗೆ ಗಾಯನವನ್ನು ಕಲಿಸುತ್ತಾರೆ ಎಂಬ ವಿಷಯಕ್ಕೆ ಅವರನ್ನು ಬ್ರಹ್ಮಸಮಾಜದ ಕೃಷ್ಣಕುಮಾರರು ಬಹುವಾಗಿ ಟೀಕಿಸಿದ್ದರು. ಬರಿಶಾಲಕ್ಕೆ ಭೇಟಿ ನೀಡಿದ್ದ ಗಾಂಧೀಜಿಯವರನ್ನು ’ವೇಶ್ಯಾಸಮಿತಿ’ಯವರು ಆಹ್ವಾನಿಸಿದಾಗ ಅವರಲ್ಲಿಗೆ ಭೇಟಿ ನೀಡದ ಗಾಂಧಿಯವರು “ಒಂದು ವೇಳೆ ವೇಶ್ಯೆಯರೂ ಒಂದು ಸಂಘಟನೆಯನ್ನು ಸ್ಥಾಪಿಸಬಹುದು ಎನ್ನುವುದಾದರೆ, ಕಳ್ಳರು – ಡಕಾಯಿತರೂ ಕೂಡ ಸಂಘವನ್ನು ಸ್ಥಾಪಿಸಿಕೊಳ್ಳಬಹುದಲ್ಲವೆ? ಎಂದಿದ್ದರು.
ದೇಶದ ಸಮಾಜ ಸುಧಾರಣಾ ಚಳವಳಿಯಿರಲಿ, ಸ್ವಾತಂತ್ರ್ಯ ಚಳವಳಿಯಿರಲಿ ತಮ್ಮದೂ ಪಾತ್ರವಿರಲಿ ಎಂದು ಅದರಲ್ಲಿ ಭಾಗವಹಿಸಿದ ವೇಶ್ಯಾ ವರ್ಗವನ್ನು ಸಮಾಜ ಹೇಗೆ ನಡೆಸಿಕೊಂಡಿದೆ? ವೇಶ್ಯೆಯರ ದುಡಿಮೆಯ ಹಣವನ್ನು ಚಳವಳಿಗೆ ಬಳಸಿಕೊಂಡಾಗಲೂ ಅದರ ’ಅಪವಿತ್ರತೆʼಯ ಬಗ್ಗೆ ಕೊಂಕು ನುಡಿಯದೆ ಇಲ್ಲ. ಈ ಚಳವಳಿಯಲ್ಲಿ ಭಾಗವಹಿಸಿರುವ ವೇಶ್ಯೆಯರು ದೇಶಭಕ್ತರ ಚಿತ್ತಚಾಂಚಲ್ಯವನ್ನು ಉಂಟು ಮಾಡುವರೆಂದು ನಿಂದನೆಗೆ ಗುರಿಯಾಗಿದ್ದಾರೆ. ಅದೇ ವೇಶ್ಯೆಯರ ಬಳಿ ಹೋದ ಗಂಡಸರ ಬಗ್ಗೆ ವಿರೋಧವಿಲ್ಲ. ಈ ದ್ವಿಸ್ತರ ನೀತಿಯನ್ನು ಈ ಕೃತಿಯ ಲೇಖಕಿ ತನ್ನ ಆತ್ಮಚರಿತ್ರೆಯಲ್ಲಿ ಖಂಡಿಸುತ್ತಾಳೆ.
“ಯಾರು ದೇಹ ವ್ಯಾಪಾರದ ವಿಷಯದಲ್ಲಿ ಆ ವೃತ್ತಿಯಲ್ಲಿ ತೊಡಗಿಕೊಂಡ ಮಹಿಳೆಯರನ್ನು ಪೊಲೀಸರ ಕೈಗೆ ಒಪ್ಪಿಸುತ್ತಾರೋ ಅವರು ಈ ದೇಶದ ಶತ್ರುಗಳು. ಏಕೆಂದರೆ ಹಿಂದೂ ಹೆಣ್ಣು ಮಕ್ಕಳು ವೇಶ್ಯಾವಾಟಿಕೆಗೆ ಬರುವುದರಲ್ಲಿ ಅವರ ತಂದೆ-ತಾಯಿಯರು ಮತ್ತು ಪೋಷಕರ ಪಾತ್ರವಿರುತ್ತದೆ. ನನ್ನ ಪ್ರಕಾರ ಇಂತಹ ಹೆಣ್ಣುಮಕ್ಕಳ ಅವನತಿಗೆ ಸಂಬಂಧಿಸಿದಂತೆ ಅವರ ಪೋಷಕರ ವಿಚಾರಣೆಯೂ ಅಗತ್ಯ ಮತ್ತು ಅದುವೇ ಮುಖ್ಯ. ಕಳಂಕಿತ ಹೆಣ್ಣುಮಕ್ಕಳನ್ನು ತುಚ್ಛವಾಗಿ ಕಾಣುವ ಈ ಸಮಾಜವೂ ವೇಶ್ಯಾವಾಟಿಕೆಯ ಮುಂದುವರಿಕೆಗೆ ಪ್ರಮುಖ ಕಾರಣವಲ್ಲವೇನು? ನಾವು ಈಗ ಸ್ವಾತಂತ್ರ್ಯವನ್ನು ಪಡೆದುಕೊಳ್ಳುವ ಸುಸಂದರ್ಭದ ಹೊಸ್ತಿಲಿನಲ್ಲಿ ಇದ್ದೇವೆ. ಇಂತಹ ನಿಜವಾದ ಸಾಮಾಜಿಕ ಸುಧಾರಣೆಯ ಬಗ್ಗೆ ಯೋಚಿಸಬೇಕಾದುದು ನಮ್ಮೆಲ್ಲರ ಜವಾಬ್ದಾರಿಯಲ್ಲವೇನು?” ಎನ್ನುವ ಲೇಖಕಿಯ ಅಂತಃಕರಣದ ಮಾತುಗಳು ಎಲ್ಲಾ ಪ್ರಜ್ಞಾವಂತರ ಮನಸ್ಸಾಕ್ಷಿಯನ್ನು ಕೆಣಕುತ್ತದೆ. “ನಾನು ಮರಣಿಸಿದ ನಂತರ ನನ್ನ ಸಂಪತ್ತೆಲ್ಲವೂ ವೇಶ್ಯೆಯರು ಹಾಗೂ ಅಂತ್ಯಜ ಕುಲದವರ ಸೇವೆಗಾಗಿ ವ್ಯಯವಾಗಬೇಕು.”ನನ್ನ ಸಂಪತ್ತನ್ನು ವೇಶ್ಯೆಯರ ಬದುಕನ್ನು ಸುಧಾರಿಸುವ ದಿಕ್ಕಿನಲ್ಲಿ ಕೆಲಸ ಮಾಡುವ ಸಂಸ್ಥೆಗಳಿಗೆ ನೀಡಬೇಕು.” ಎನ್ನುವ ಅವಳ ನಿರ್ಧಾರ ಅವಳ ಬದುಕಿನ ಸಾರ್ಥಕ ಉದ್ದೇಶದ ಕಡೆಗೆ ಸಮಾಜದ ಕಣ್ತೆರೆಸುತ್ತದೆ.
ಇಂತಹ ಪರಿಣಾಮಕಾರಿ ಕೃತಿಯನ್ನು ಅಷ್ಟೇ ಸುಲಲಿತವಾಗಿ ಕನ್ನಡದಲ್ಲಿ ’ಛಂದ’ ಪ್ರಕಾಶನದ ಮೂಲಕ ಡಾ.ನಾಗ ಎಚ್.ಹುಬ್ಳಿಯವರು ಕನ್ನಡಕ್ಕೆ ನೀಡಿರುವುದಕ್ಕೆ ಮೆಚ್ಚುಗೆಯು ಸಲ್ಲಲೇಬೇಕು.
ಇದನ್ನೂ ಓದಿ ಒಳದನಿ | ಕವಯಿತ್ರಿ ಲಕ್ಷ್ಮೀಬಾಯಿ ತಿಲಕರ ‘ಸ್ಮೃತಿ ಚಿತ್ರೆ’
ಇದನ್ನೂ ಓದಿ ಒಳದನಿ | ಭಾರತದ ಮೊದಲ ಮಹಿಳಾ ಆತ್ಮಚರಿತ್ರೆ ‘ಅಮಾರ್ ಜಿಬನ್’

ಡಾ.ಎನ್. ಗಾಯತ್ರಿ
ಲೇಖಕಿ ಡಾ. ಎನ್. ಗಾಯತ್ರಿ ಮೂಲತಃ ಬೆಂಗಳೂರಿನವರು. ಮಹಿಳಾ ಪರ ಚಿಂತಕಿಯಾಗಿ, ಜಾಗೃತಿ ಮಹಿಳಾ ಅಧ್ಯಯನ ಕೇಂದ್ರದ ಸ್ಥಾಪಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. 22 ವರ್ಷ ಕಾಲ 'ಅಚಲ' ಮಾಸಪತ್ರಿಕೆಯ ಸಂಪಾದಕಿಯಾಗಿದ್ದು, ಈಗ 'ಹೊಸತು' ಪತ್ರಿಕೆಯ ಸಂಪಾದಕ ಬಳಗದಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೃತಿಗಳು: 'ಮಹಿಳೆ: ಬಿಡುಗಡೆಯ ಹಾದಿಯಲ್ಲಿ’, 'ಮಹಿಳಾ ಚಳವಳಿಯ ಮಜಲುಗಳು’, 'ಮುಖಾಮುಖಿ', 'ಕ್ಲಾರಾ ಜೆಟ್ಕಿನ್, 'ಮಹಿಳಾ ಮೀಸಲಾತಿ' ಮತ್ತು 'ಲಿಂಗ ರಾಜಕಾರಣ', ಫ್ರೆಡರಿಕ್ ಜೋಲಿಯೂ ಕ್ಯೂರಿ (ಅನುವಾದ), ಭಗತ್‌ಸಿಂಗ್ ಮತ್ತು ಅವನ ಸಂಗಾತಿಗಳು (ವ್ಯಕ್ತಿ ಚಿತ್ರ), ನಾನೇಕ ನಾಸ್ತಿಕ (ಅನುವಾದ), ತ್ರಿವೇಣಿಯವರ ಬಗ್ಗೆ ಬರೆದ ಲೇಖನಗಳ ಸಂಗ್ರಹ (ಸಂಪಾದಿತ).
Very good
But sad story of ladies who suffers a life lonely