1977ರಲ್ಲಿ ಮೈಸೂರಿನಲ್ಲಿ ಆರೆಸ್ಸೆಸ್ ಪ್ರಣೀತ ಸಂಸ್ಥೆಯವರು ಮಳೆಗೋಸ್ಕರ ʻವರುಣ ದೇವನನ್ನು ಸಂಪ್ರೀತಗೊಳಿಸಲುʼ ಎಂದು ಹೇಳಿ ʻಪರ್ಜನ್ಯ ಮಹಾಯಜ್ಞʼ ಎಂಬ ಮೌಢ್ಯದ ಕಾರ್ಯಕ್ರಮವೊಂದನ್ನು ಆರಂಭಿಸಿದರು. ಬನುಮಯ್ಯ ಕಾಲೇಜಿನ ವಿಶಾಲವಾದ ಅಂಗಳದಲ್ಲಿ ದೊಡ್ಡ ಮಂಟಪ, ಪೆಂಡಾಲ್ ಹಾಕಿದ್ದರು. ಬೆಲೆ ಬಾಳುವ ಸೀರೆ ಮತ್ತಿತರ ವಸ್ತ್ರಗಳು, ಆಹಾರ ಪದಾರ್ಥಗಳು, ತುಪ್ಪ ಮುಂತಾದ ಅಮೂಲ್ಯ ವಸ್ತುಗಳನ್ನು ʻಯಜ್ಞೇಶ್ವರನಿಗೆ ಆಹುತಿ ನೀಡುವುದಾಗಿʼ ತಿಳಿದುಬಂದಿತ್ತು.ಮೈಸೂರಿನ ವಿಚಾರವಾದಿ ವೇದಿಕೆಯ ಹೆಸರಿನಲ್ಲಿ ನಾವೆಲ್ಲರೂ ಪ್ರತಿಭಟಿಸಿದೆವು…
ಚಳವಳಿ-ಹೋರಾಟಗಳ ಕುಲುಮೆಯಲ್ಲಿ ರೂಪು ತಳೆಯುತ್ತಿದ್ದ ನನ್ನ ಬದುಕು 1979ರಲ್ಲಿ ಒಂದು ದೊಡ್ಡ ತಿರುವು ಪಡೆದುದನ್ನು ಹೇಳುವ ಮೊದಲು ಅದಕ್ಕಿಂತ ಮುಂಚಿನ ಒಂದೆರಡು ಸ್ವಾರಸ್ಯದ ಸಂದರ್ಭಗಳನ್ನು ಹೇಳಬೇಕೆನಿಸುತ್ತದೆ.
1977ರಲ್ಲಿ ಮೈಸೂರಿನಲ್ಲಿ ಅದ್ಯಾವುದೋ ಬ್ರಾಹ್ಮಣ-ಆರೆಸ್ಸೆಸ್ ಪ್ರಣೀತ ಸಂಸ್ಥೆಯವರು ಮಳೆಗೋಸ್ಕರ ʻವರುಣ ದೇವನನ್ನು ಸಂಪ್ರೀತಗೊಳಿಸಲುʼ ಎಂದು ಹೇಳಿ ʻಪರ್ಜನ್ಯ ಮಹಾಯಜ್ಞʼ ಎಂಬ ಮೌಢ್ಯದ ಕಾರ್ಯಕ್ರಮವೊಂದನ್ನು ಆರಂಭಿಸಿದರು. ಬನುಮಯ್ಯ ಕಾಲೇಜಿನ ವಿಶಾಲವಾದ ಅಂಗಳದಲ್ಲಿ ದೊಡ್ಡ ಮಂಟಪ, ಪೆಂಡಾಲ್ ಹಾಕಿದ್ದರು. ಬೆಲೆ ಬಾಳುವ ಸೀರೆ ಮತ್ತಿತರ ವಸ್ತ್ರಗಳು, ಆಹಾರ ಪದಾರ್ಥಗಳು, ತುಪ್ಪ ಮುಂತಾದ ಅಮೂಲ್ಯ ವಸ್ತುಗಳನ್ನು ʻಯಜ್ಞೇಶ್ವರನಿಗೆ ಆಹುತಿ ನೀಡುವುದಾಗಿʼ (ಅಂದರೆ ಬೆಂಕಿಗೆ ಹಾಕುವುದಾಗಿ) ತಿಳಿದುಬಂದಿತ್ತು. ಮೌಢ್ಯದ ಕಾರ್ಯಕ್ರಮ ಎಂಬುದು ಒಂದು ಕಾರಣವಾದರೆ, ಬರಗಾಲದ ಸಂದರ್ಭದಲ್ಲಿ ಜನಬಳಕೆಯ ಅಮೂಲ್ಯ ವಸ್ತುಗಳನ್ನು ಬೆಂಕಿಗೆ ಹಾಕಿ ವ್ಯರ್ಥ ಮಾಡುವುದು ಸಮಾಜಬಾಹಿರ ಕೃತ್ಯ ಎಂಬ ಕಾರಣವೂ ಸೇರಿ ಈ ಕಾರ್ಯಕ್ರಮವನ್ನು ಮೈಸೂರಿನ ವಿಚಾರವಾದಿ ವೇದಿಕೆಯ (ರ‍್ಯಾಶನಲಿಸ್ಟ್ಸ್ ಫೋರಂನ) ಹೆಸರಿನಲ್ಲಿ ನಾವೆಲ್ಲರೂ ಪ್ರತಿಭಟಿಸಿದೆವು. ಎಂದಿನಂತೆ ಸುಮಾರು 200-250 ಜನರು ಸೇರಿದ್ದೆವು.
ಅದನ್ನು ಕುರಿತು ಯಾರೋ ಗಣೇಶಯ್ಯ ಎನ್ನುವವರು ಒಂದೆರಡು ದಿನಗಳ ನಂತರ ಪ್ರಜಾವಾಣಿಯಲ್ಲಿ ಒಂದು ಓದುಗರ ಪತ್ರ ಬರೆದಿದ್ದರು. ಅದರ ಸಾರಾಂಶ ಹೀಗಿತ್ತು: ʻಅದೊಂದು ದಿನ ಅವರು ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಬನುಮಯ್ಯ ಕಾಲೇಜಿನ ಮುಂದೆ ಒಂದಷ್ಟು ಜನ ಗುಂಪುಗೂಡಿ ಗಲಾಟೆ ಮಾಡುತ್ತಿದ್ದರಂತೆ. ಏನೆಂದು ನೋಡಿದಾಗ ಅಲ್ಲಿ ʻಲೋಕಕಲ್ಯಾಣಕ್ಕಾಗಿʼ ನಡೆಯುತ್ತಿದ್ದ ಪರ್ಜನ್ಯ ಮಹಾಯಜ್ಞವನ್ನು ಇವರೆಲ್ಲ ವಿರೋಧಿಸುತ್ತಿದ್ದರಂತೆ. ಆದರೆ ಸ್ವಲ್ಪ ಹೊತ್ತಿನಲ್ಲಿ ಪೊಲೀಸರು ಬಂದೊಡನೆ, “ಬಲಿಷ್ಠವಾದ ಮಾರುತನ ಮುಂದೆ ಮೋಡಗಳೆಲ್ಲ ಚದುರಿ ಹೋಗುವಂತೆ” (ಇದು ಅವರದ್ದೇ ಉಪಮೆ) ಕ್ಷಣಾರ್ಧದಲ್ಲಿ ಆ ಜನರ ಗುಂಪು ದಿಕ್ಕಾಪಾಲಾಗಿ ಚದುರಿ ಹೋಯಿತಂತೆ….!ʼ ವಾಸ್ತವವಾಗಿ ನಡೆದಿದ್ದೇನೆಂದರೆ, ನಾವು ಅಲ್ಲಿ ಒಂದಷ್ಟು ಹೊತ್ತು ಪ್ರತಿಭಟನೆ ನಡೆಸಿ, ಎಂದಿನಂತೆ ಸಯ್ಯಾಜಿರಾವ್ ರಸ್ತೆ, ಇರ್ವಿನ್ ರಸ್ತೆ, ಅಶೋಕ ರಸ್ತೆಗಳ ಮೂಲಕ ಹಾದು ಪುರಭವನದ ಎದುರು ಸೇರಿ ಪ್ರತಿಭಟನಾ ಸಭೆ ನಡೆಸಿದ್ದೆವು. ರೂಢಿಯಂತೆ ಪೊಲೀಸರೂ ನಮ್ಮೊಂದಿಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಬಂದಿದ್ದರು.
ಈ ʻಲೋಕಕಲ್ಯಾಣʼದ ಕಾರ್ಯಕ್ರಮ ಮತ್ತೂ ಎರಡು ವರ್ಷ ನಡೆಯಿತು. ನಮ್ಮ ಪ್ರತಿಭಟನೆಯನ್ನೂ ನಿಲ್ಲಿಸಲಿಲ್ಲ. ಮೂರನೇ ವರ್ಷದ ಪ್ರತಿಭಟನೆ ಬಹಳ ಜೋರಾಗಿತ್ತು. ಸುಮಾರು ಒಂದೂವರೆ ಸಾವಿರ ಜನರು ಸೇರಿದ್ದರು. (ಒಂದೂವರೆ ಸಾವಿರವೆಂದರೆ ಒಂದೂವರೆ ಸಾವಿರವೇ: ಕೆಲವು ಭಾಷಣಕಾರರು ಮತ್ತು ಕೆಲವು ಸಂಘಟನೆಗಳವರು ಒಂದನ್ನು ಹತ್ತು ಮಾಡಿ ಹೇಳುವಂತೆ ಇದಲ್ಲ. ಒಮ್ಮೆ ನಾಡಿನ ಖ್ಯಾತ ಚಿಂತಕರೊಬ್ಬರು ತಮ್ಮ ತಂಡದೊಂದಿಗೆ ರಾಜ್ಯ ಪ್ರವಾಸ ಮಾಡುತ್ತ ಶಿವಮೊಗ್ಗಕ್ಕೂ ಬಂದಿದ್ದರು. ಭಾಷಣ ಮಾಡುತ್ತ ʻಈಗ ನೀವಿಲ್ಲಿ ಒಂದೂವರೆ ಸಾವಿರ ಜನ ಸೇರಿದ್ದೀರಿʼ ಎಂದರು. ನಾನು ಮತ್ತೆ ಮತ್ತೆ ಎಣಿಸಿ ನೋಡಿದೆ: ಹ್ಯಾಗೆ ಎಣಿಸಿದರೂ ಎಷ್ಟು ʻಗ್ರೇಸ್ ಮಾರ್ಕ್ಸ್ʼ ನೀಡಿದರೂ ಇನ್ನೂರು-ಇನ್ನೂರೈವತ್ತಕ್ಕಿಂತ ಮುಂದೆ ಹೋಗಲಿಲ್ಲ ಎಣಿಕೆ. ಅದೇ ಚಿಂತಕರು ತಮ್ಮ ಪ್ರವಾಸದ ಅಂತ್ಯದಲ್ಲಿ ಬೆಂಗಳೂರಿನಲ್ಲಿ ಸಮಾವೇಶ ಏರ್ಪಡಿಸಿ ಪ್ರಧಾನ ಭಾಷಣ ಮಾಡುತ್ತ, ʻನೀವಿಲ್ಲಿ ಕಡಿಮೆಯೆಂದರೂ ಇಪ್ಪತ್ತು ಸಾವಿರ ಜನ ಸೇರಿದ್ದೀರಿʼ ಎಂದರು. ಆಗಲೂ ನನ್ನ ಎಣಿಕೆ ಏನೇ ಹೆಣಗಿದರೂ ಆರು-ಏಳು-ಎಂಟು ಸಾವಿರವನ್ನು ದಾಟಲು ಒಪ್ಪಲಿಲ್ಲ! ಮೈಸೂರಿನ ನನ್ನ ಒಂದೂವರೆ ಸಾವಿರ ಹಾಗಲ್ಲ) ಈ ಸತತ ಪ್ರತಿಭಟನೆ ಫಲ ನೀಡಿತು. ಜಿಲ್ಲಾಡಳಿತ ಸದರಿ ಸಂಘಟಕರಿಗೆ ಅದನ್ನು ಮುಂದುವರಿಸದಂತೆ ತಾಕೀತು ಮಾಡಿದ್ದರಿಂದ ಮರು ವರ್ಷ ಅದು ನಡೆಯಲಿಲ್ಲ.
ಈ ಹಿನ್ನೆಲೆಯಲ್ಲಿ ನಾನು ಸಂಯುಕ್ತ ಕರ್ನಾಟಕ ಪತ್ರಿಕೆಗೆ ʻಸಿ.ರಾ.ನಾಗರಾಜʼ ಎಂಬ ಸಹಿಯೊಂದಿಗೆ ವಿವರವಾದ ಒಂದು ವಿಶ್ಲೇಷಣಾತ್ಮಕ ಪತ್ರ ಬರೆದೆ. ಅದು ಪತ್ರವಾಗಿ ಪ್ರಕಟವಾಗದೆ, ಸಂಪಾದಕೀಯ ಪುಟದ ಮಧ್ಯದಲ್ಲಿ ದಪ್ಪ ಬಾಕ್ಸ್‌ನಲ್ಲಿ ʻಇದೊಂದು ಸಾಮಾಜಿಕ ಅಪರಾಧʼ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಯಿತು. ಅದಾಗಿ ಕೆಲ ದಿನಗಳ ನಂತರ ಊರಿಗೆ (ಸಿರಿಮನೆಗೆ) ಹೋಗಿದ್ದೆ. ಆಗ ನನ್ನ ಬರಹದ ಕುರಿತು ಅಣ್ಣತಮ್ಮಂದಿರು-ತಂಗಿಯರು, ಅಪ್ಪಯ್ಯ-ಅಮ್ಮ ಎಲ್ಲರ ಸಮ್ಮುಖದಲ್ಲಿ ಒಂದಷ್ಟು ಚರ್ಚೆ ನಡೆಯಿತು. ನಾಲ್ಕಾರು ದಿನ ಇದ್ದು ಮನೆಯಿಂದ ಹೊರಡುವಾಗ ಎಂದಿನಂತೆ ನನ್ನನ್ನು ಬೀಳ್ಕೊಡಲು ಅಮ್ಮ ಕೆಳಜಗಲಿಯ (ʻಪಾತಾಳಂಕಣʼದ) ತುದಿಗೆ ಬಂದು ನಿಂತಿದ್ದವಳು, “ಅಲ್ಲಾ, ಇನ್ಮೇಲೆ ಹಾಗಿದ್ದೆಲ್ಲ ಬರಿಬ್ಯಾಡ ಆಯ್ತೆನಾ?” ಅಂದಳು! ಯಾಕಮ್ಮ? ಎಂದೆ. “ಯಂತಾರೂ, ಹೇಶ್ಗ್ಯಲ್ವೆನಾ?” ಅಂದಳು! ನಮ್ಮ ಕಡೆ ನಾಚಿಕೆ, ಮುಜುಗರ ಎಂಬ ಪದಗಳನ್ನು ಸಾಮಾನ್ಯ ಜನ ಬಳಸುವುದು ಕಡಿಮೆ; ಅದರ ಸಮಾನಾರ್ಥಕ ಪದ ‘ಹೇಶ್ಗೆ!’ “… ಅವ್ರು ಹಾಂಗ್ಹೇಳಿದ್ದು ಕೇಳಿ ನಂಗೊಂದ್ ನಮೂನಿ ಹೇss..ಶ್ಗ್ಯಾತು” ಅಂತ ಮಾತಾಡಿಕೊಳ್ತಿರ್ತಾರೆ.
ಇಲ್ಲಿ ಏನಾಗಿತ್ತಪ್ಪಾಂದರೆ – ಹಿಂದೊಮ್ಮೆ ತೀವ್ರ ಬರಗಾಲ ಬಂದಿದ್ದಾಗ, ನಮ್ಮ ಶೃಂಗೇರಿ ಮಠದಲ್ಲೂ ʻಮಳೆ ಗುರುಗಳು ಅಂತಲೇ ದೇಶಾದ್ಯಂತ ಪ್ರಖ್ಯಾತರು, ಇವರು ಹೋದಲ್ಲೆಲ್ಲ ಎಷ್ಟೋ ವರ್ಷದಿಂದ ಮಳೆಯಾಗದಿದ್ರೂ ಇವರು ಹೋದ ಕೂಡಲೇ ಮಳೆಯಾಗಿ ಬಿಡುತ್ತಂತೆʼ ಎನ್ನಲಾಗಿದ್ದ ಆಗಿನ ಹಿರಿಯ ಗುರುಗಳೇ ತಮ್ಮ ಶಿಷ್ಯರು ಮತ್ತು ʻಋತ್ವಿಕʼರೊಂದಿಗೆ ತುಂಗೆಯಲ್ಲಿ ಎದೆ ಮಟ್ಟದ ನೀರಿನಲ್ಲಿ ಗಂಟೆಗಟ್ಟಲೆ ನಿಂತು ಪ್ರಾರ್ಥನೆ ಮಾಡಿದ್ದುಂಟು; ಮೂರು ದಿನ ಹೀಗೆ ಪ್ರಾರ್ಥನೆ ಮಾಡಿದರೂ ಅದೇನೂ ಫಲ ನೀಡಿರಲಿಲ್ಲ. ಇನ್ನು, ನಮ್ಮ ಮನೆ ದೇವರು – ಕುಲ ದೇವರು ಆದ ಕಿಗ್ಗದ ಋಷ್ಯಶೃಂಗೇಶ್ವರ ದೇವಸ್ಥಾನದಲ್ಲೂ ಇದೇ ರೀತಿ ಮಳೆಗಾಗಿ ಆಗಾಗ ʻರುದ್ರಹೋಮʼಗಳು ನಡೀತಿರ್ತವೆ. ನನ್ನ ಲೇಖನ ಪ್ರಕಟವಾದಾಗ ಕಿಗ್ಗ ಪ್ಯಾಟೆಯಲ್ಲಿ ಆ ಪತ್ರಿಕೆಯ ಪ್ರತಿ ಸುತ್ತಾಡಿತ್ತಂತೆ. ಅದನ್ನು ಬರೆದವನು ಸಿ.ರಾ.ನಾಗರಾಜ ಅಂದರೆ ಸಿರಿಮನೆ ರಾಮಯ್ಯನ ಮಗ ನಾಗರಾಜನೇ ಅಂತ ನಿಷ್ಕರ್ಷೆಯಾಗಿ, ಅದಕ್ಕೆ ಕೆಲವು ಮೆಚ್ಚುಗೆಗಳೂ, ಹಲವು ಖಂಡನೆಗಳೂ ಬಂದಿದ್ದವಂತೆ. ಅದಕ್ಕೇ ನನ್ನಮ್ಮ ಹಾಗಂದಿದ್ದಳು.

ನಾನು ಇಂಥವೆಲ್ಲ ಮೌಢ್ಯಗಳನ್ನು ಟೀಕಿಸುತ್ತಿದ್ದೆನಷ್ಟೆ. “ರುದ್ರಹೋಮ ಮಾಡಿಸಿದ್ರಿಂದ ಮಳೆ ಬಂತು ಅಂತ ಹೇಳ್ತೀರಿ. ಚೆನ್ನಾಗಿ ಮೋಡ ಆಗೂವರೆಗೆ ಕಾದು, ಒಂದೆರಡು ದಿನದೊಳಗೆ ಮಳೆ ಗ್ಯಾರಂಟಿ ಅನ್ನಿಸ್ತಿದ್ದಾಗಲೇ ರುದ್ರಹೋಮ ಮಾಡಿಸ್ತೀರಿ, ರುದ್ರಹೋಮದಿಂದ ಮಳೆ ಬಂತು ಅಂತೀರಿ. ಎಲ್ಲೆಲ್ಲೂ ಮೋಡವೇ ಇಲ್ಲದಿದ್ದಾಗ ಹೋಮ ಮಾಡಿಸಿ, ಮಳೆ ಬರಲಿ ನೋಡೋಣ!” ಅಂತ ನಾನು ಸವಾಲು ಹಾಕ್ತಿದ್ದೆ. ಇದು ನನ್ನ ಚಿಕ್ಕಪ್ಪನವರಿಗೆ (ಸಿರಿಮನೆ ಗಣೇಶಯ್ಯ – ಗಣೇಶ್ಚಿಕ್ಕ) ಸಹಿಸುತ್ತಿರಲಿಲ್ಲ. ಅವರಿಗೂ ನನಗೂ ನಡುವೆ ಒಂದು ರೀತಿ ಸ್ನೇಹ ಮತ್ತು ಸಂಘರ್ಷ ಎರಡೂ ಒಳಗೊಂಡ ಬಾಂಧವ್ಯವಿತ್ತು. ನಮ್ಮೊಳಗೆ ವಾಗ್ವಾದ ನಡೆದು ನನ್ನ ವಾದಗಳಿಗೆ ಉತ್ತರ ಕೊಡಲು ಆಗದೆಹೋದಾಗ ಅವರಿಗೆ ಸಿಟ್ಟೇರುತ್ತಿತ್ತು. ಆ ಸಮಯದಲ್ಲೇ ದೇಶದ ರಾಜಕಾರಣದಲ್ಲಿ ಜನತಾ ಪಾರ್ಟಿ ಕೇಂದ್ರದಲ್ಲಿ ಅಧಿಕಾರ ಉಳಿಸಿಕೊಳ್ಳಲು ಏದುಸಿರು ಬಿಡುತ್ತಿತ್ತು. ನಮ್ಮ ಕಡೆಯವರೆಲ್ಲ (ಮುಖ್ಯವಾಗಿ ಬ್ರಾಹ್ಮಣರು) ಅಂದಿನ ಜನಸಂಘದ ಬೆಂಬಲಿಗರು. ಜನತಾ ಪಾರ್ಟಿಯೊಳಗೆ ಜನಸಂಘವೂ ಇದ್ದುದರಿಂದ ಅದರ ಕಷ್ಟ ಇವರ ಕಷ್ಟವೂ ಆಗಿತ್ತು. ಆಗ ರಾಜನಾರಾಯಣ್ ಎಂಬ ಪ್ರಭಾವಿ ಮಂತ್ರಿ, ಇಂದಿನ ಡಾ. ಸುಬ್ರಮಣಿಯನ್ ಸ್ವಾಮಿ ಅವರಂತೆ, ತಮ್ಮ ಪಕ್ಷವನ್ನೇ, ಅದರ ನಾಯಕರನ್ನೇ ಪದೇಪದೇ ಟೀಕಿಸುತ್ತಿದ್ದರು. ಇದು ಪಕ್ಷಕ್ಕೆ ಮೂಗುಬ್ಬಸ ಉಂಟುಮಾಡಿತ್ತು. ಇಂಥದೇ ಒಂದು ಸಂದರ್ಭದಲ್ಲಿ ನಮ್ಮ ಚಿಕ್ಕಪ್ಪನವರು, “ಈ ನಾಗ್ರಾಜು ಇರುವಷ್ಟು ದಿವ್ಸ ಊರು, ಆ ರಾಜನಾರಾಯಣ್ ಇರುವಷ್ಟು ದಿವ್ಸ ದೇಶ ಉದ್ಧಾರ ಆಗಲ್ಲ…” ಅಂತ ತೀರ್ಮಾನ ಕೊಟ್ಟುಬಿಟ್ಟಿದ್ದರು!
ಮೈಸೂರಿನ ಈ ಕುಲುಮೆಯಲ್ಲಿ ಹದಗೊಳ್ಳುತ್ತ ಬಂದಿದ್ದ ಮತ್ತು ಭಾರತದ ಕ್ರಾಂತಿಯನ್ನು ಹೆಚ್ಚು ಗಂಭೀರವಾಗಿ ತಲೆಗೆ ಹತ್ತಿಸಿಕೊಂಡಿದ್ದ ನಾವೊಂದು ಏಳು ಮಂದಿ ಯುವಜನರು 1979ರಲ್ಲಿ ಮೀಟಿಂಗ್ ನಡೆಸಿ ಒಂದು ದಿಟ್ಟವಾದ ತೀರ್ಮಾನ ತಗೊಂಡೆವು. ನಾವು ಅಂದರೆ: ನಾನು, ಹೇಮಾ, ರತಿ, ಲಕ್ಷ್ಮಿ (ಡಾ. ಲಕ್ಷ್ಮೀನಾರಾಯಣ), ರಾಮು (ʻಹಾಡುಪಾಡುʼ ರಾಮಸ್ವಾಮಿ), ಅವನ ತಮ್ಮ ವೇಣು, ಯು.ಎಚ್.ಗಣೇಶ್ (ಹಿಂದೆ ನನ್ನಂತೆಯೇ ಟೆಲಿಫೋನ್ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದು, ಇಂಗ್ಲಿಷ್ ಎಂ.ಎ. ಮಾಡಿ ತೀರ್ಥಹಳ್ಳಿ ಡಿಗ್ರಿ ಕಾಲೇಜಿನಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿ ನಿವೃತ್ತ) ಇಷ್ಟು ಜನ. ಇಷ್ಟು ಜನರನ್ನು ʻಭಾರತದ ಕ್ರಾಂತಿಯನ್ನು ಹೆಚ್ಚು ಗಂಭೀರವಾಗಿ ತಲೆಗೆ ಹತ್ತಿಸಿಕೊಂಡಿದ್ದವರುʼ ಅಂತ ʻಗುರುತಿಸಿದ್ದುʼ, ʻಆಯ್ಕೆʼ ಮಾಡಿದ್ದು ನಮ್ಮೆಲ್ಲರ ಕ್ರಿಯಾಶೀಲ (ಡೈನಮಿಕ್) ಮುಂದಾಳಾಗಿದ್ದ ಲಕ್ಷ್ಮಿಯೇ. ಮುಂದೆ ಈ ತಂಡವನ್ನು ವಿಸ್ತರಿಸುವುದು ನಮ್ಮ ಗುರಿಯಾಗಿತ್ತು. ಆತನಕ ನಾವೆಲ್ಲರೂ ವೀರ್ರಾಜು, ರಾಮಲಿಂಗಂ, ನರೇಂದ್ರ ಸಿಂಗ್ ಈ ಮೂವರು ಪ್ರೊಫೆಸರ್‌ಗಳ ನಾಯಕತ್ವದಲ್ಲಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತ ಬಂದಿದ್ದೆವು. ಆದರೆ 78-79ರ ಸುಮಾರಿಗೆ ನಮ್ಮ ಈ ಗುಂಪಿಗೆ (ಮುಖ್ಯವಾಗಿ ಲಕ್ಷ್ಮಿಗೆ) ಈ ಹಿರಿತಲೆಗಳ ನಾಯಕತ್ವ ಸಾಕಾಗಲ್ಲ ಅನ್ನಿಸಿಬಿಟ್ಟಿತು. ಇದಕ್ಕೊಂದು ವಿಶೇಷ ಕಾರಣವಿತ್ತು.
ಆಗ ಪಶ್ಚಿಮ ಬಂಗಾಳ ರಾಜ್ಯಕ್ಕೆ ಸೇರಿದ್ದ ಡಾರ್ಜಿಲಿಂಗ್ ಜಿಲ್ಲೆಯ ನಕ್ಸಲ್ಬರಿ ಎಂಬ ಹಳ್ಳಿಯಲ್ಲಿ ಸಶಸ್ತ್ರ ಕ್ರಾಂತಿಕಾರಿ ಹೋರಾಟವನ್ನು (ನಕ್ಸಲ್ ಚಳವಳಿಯನ್ನು) ಆರಂಭಿಸಿದ್ದ ಅದರ ಪ್ರವರ್ತಕ-ನಾಯಕ ಚಾರು ಮಜುಮ್ದಾರ್ ಅವರು ೧೯೭2ರಲ್ಲಿ ಬಂಧನ ಮತ್ತು ಪೊಲೀಸ್ ಕಸ್ಟಡಿಯಲ್ಲಿ ಕ್ರೂರ ಸಾವಿಗೆ ತುತ್ತಾದ ನಂತರ ಚಳವಳಿ ತೀವ್ರ ಹಿನ್ನಡೆ ಅನುಭವಿಸಿತ್ತು. ಬಂಗಾಳದ ಕಾಂಗ್ರೆಸ್-ಸಿಪಿಎಂ ಮೈತ್ರಿ ಸರ್ಕಾರ ಹಾಗೂ ಇಂದಿರಾ ಗಾಂಧಿಯ ʻತುರ್ತು ಪರಿಸ್ಥಿತಿʼ ಅಪಾರ ಸಂಖ್ಯೆಯ ನಕ್ಸಲ್ ಮುಂದಾಳುಗಳನ್ನೂ ಸಾವಿರಾರು ಕಾರ್ಯಕರ್ತರನ್ನೂ ಬಲಿ ತೆಗೆದುಕೊಂಡಿದ್ದವು. ೧೯೭7ರಲ್ಲಿ ತುರ್ತು ಪರಿಸ್ಥಿತಿ ಕೊನೆಗೊಂಡ ಬಳಿಕ ಚಳವಳಿಯನ್ನು ಪುನರ್ ಸಂಘಟಿಸಲು ದೇಶದ ಎರಡು ಮೂರು ಕಡೆ ಗಂಭೀರ ಪ್ರಯತ್ನಗಳು ನಡೆದವು. ಅವುಗಳಲ್ಲಿ ಆಂಧ್ರ ಪ್ರದೇಶದ ಕೊಂಡಪಲ್ಲಿ ಸೀತಾರಾಮಯ್ಯ (ಕೆಎಸ್) ಅವರ ʻಸೆಂಟ್ರಲ್ ಆರ್ಗನೈಸಿಂಗ್ ಕಮಿಟಿʼ(ಸಿಓಸಿ)ಯ ಪ್ರಯತ್ನವೂ ಒಂದು. ಮೈಸೂರಿನಲ್ಲಿದ್ದ ಸಹಾನುಭೂತಿಪರ ಚಿಂತಕರಲ್ಲಿ ಹೆಚ್ಚಿನವರು ಈ ಗುಂಪಿನ ಪ್ರಭಾವದಲ್ಲಿದ್ದವರು.

ಸರಿಸುಮಾರು ಆ ಸಮಯದಲ್ಲೇ ಕ್ರಾಂತಿಕಾರಿ ಲಾವಣಿಕಾರ ʻಗದ್ದರ್ʼ ಅವರ ಪ್ರವೇಶವೂ ಆಗಿತ್ತು. 1977-78ರ ಆಜುಬಾಜಿನಲ್ಲಿ ಆಂಧ್ರಪ್ರದೇಶದಲ್ಲಿ ನಡೆದ ರ್ಯಾಡಿಕಲ್ ಸ್ಟೂಡೆಂಟ್ಸ್ ಯೂನಿಯನ್ (RSU) ಮತ್ತು ರ್ಯಾಡಿಕಲ್ ಯೂತ್ ಲೀಗ್(ಖಙಐ)ಗಳ ಬೃಹತ್ ಸಮಾವೇಶಕ್ಕೆ ಲಕ್ಷ್ಮಿಯೂ ಹೋಗಿ, ಸಿಕ್ಕಾಪಟ್ಟೆ ಸ್ಫೂರ್ತಿಗೊಂಡು (ಇನ್ಸ್ಪೈರ್ – ಫಿದಾ ಆಗಿ!) ಬಂದಿದ್ದ. “… ಗದ್ದರ್ ಅಂತ ಒಬ್ಬ ಯುವಕ ಇದಾನೆ ಮಾರಾಯ. ಐದು-ಐದೂಕಾಲ ಅಡಿಗಿಂತ ಹೆಚ್ಚು ಎತ್ತರವಿಲ್ಲ, ಸ್ವಲ್ಪ ದಪ್ಪಗಿದಾನೆ. ತಾನೇ ರಚಿಸಿದ ಕ್ರಾಂತಿಕಾರಿ ಹಾಡುಗಳನ್ನ ಒಂದು ಹಾಡ್ತಾನೆ ಅಂದ್ರೆ, ಅಬ್ಬಬ್ಬ! ಅದೇನು ಕಂಚಿನ ಕಂಠ, ಅದೇನು ಕುಣಿತ!! ಇಡೀ ವೇದಿಕೆ ತುಂಬ ಆವರಿಸಿಕೊಳ್ತಾನೆ ಮಹಾರಾಯ. ಕೈಯಲ್ಲೊಂದು ಕೆಂಪು ಬಟ್ಟೆ ತುಂಡನ್ನು ಕೆಂಬಾವುಟದ ರೀತಿ ಹಿಡ್ಕೊಂಡು, ʻಎರಝಂಡೆರಝಂಡನೀಯಲೊ ಎರ್ರೆರ್ರೆನಿದೀ ಝಂಡನೀಯಲೊ … … ಬೋಲೊ ಎರಝಂಡೆರಝಂಡೆರಝಂಡೆರಝಂಡ್ ……ʼ ಅಂತ ಅಂವ ಹಾಡ್ತಾ ಇದ್ರೆ ಮೈಯೆಲ್ಲ ರೋಮಾಂಚನ ಆಗೋಗುತ್ತೆ ಕಣಯ್ಯ. ಕೂತಲ್ಲಿ ಕೂರೋಕಾಗಲ್ವೋ! … ” ಅಂತೆಲ್ಲ ಬಾಯಿತುಂಬ ವರ್ಣಿಸುತ್ತ ಅನೇಕ ದಿನ ಆ ಹಾಡುಗಳನ್ನು ಗುನುಗುತ್ತಲೇ ಇದ್ದ! ಕ್ರಾಂತಿಕಾರಿ ಉತ್ಸಾಹ ಅವನಲ್ಲಿ ಉಕ್ಕಿ ಹರಿಯುತ್ತಿತ್ತು.
ಬಹುಶಃ ಅದೇ ಸಮಯದಲ್ಲಿ ಕೆಎಸ್ ಅವರು, ʻಸಶಸ್ತ್ರ ಹೋರಾಟವನ್ನು (ಕೆಲಕಾಲ) ನಿಲ್ಲಿಸೋಣ, ಸಮೂಹ ಸಂಘಟನೆಗಳನ್ನು ಕಟ್ಟೋಣʼ (ʻಸಸ್ಪೆಂಡ್ ಆರ್ಮ್ಡ್ ಸ್ಟ್ರಗಲ್, ಬಿಲ್ಡ್ ಮಾಸ್ ಆರ್ಗನೈಸೇಶನ್ಸ್ʼ) ಅಂತ ಕರೆ ಕೊಟ್ಟು, RSU-(RYL) ಗಳಲ್ಲದೆ ರೈತುಕೂಲಿ ಸಂಘ ಮತ್ತಿತರ ಸಮೂಹ ಸಂಘಟನೆಗಳನ್ನು ದೊಡ್ಡ ಪ್ರಮಾಣದಲ್ಲಿ ಕಟ್ಟತೊಡಗಿದರು. ಆದರೆ ಅವರ ಈ ಕರೆ ದೇಶದೆಲ್ಲೆಡೆ ಒಂದು ರೀತಿ ಗೊಂದಲಕ್ಕೆ ದಾರಿ ಮಾಡಿತು. ನಮ್ಮ ಲಕ್ಷ್ಮಿಯೂ ತೀವ್ರ ಸಂಶಯಕ್ಕೀಡಾದ. “ಇವರು ಹಳ್ಳ ಹಿಡಿದುಬಿಟ್ರು ಕಣಯ್ಯ. ಸಸ್ಪೆಂಡ್ ಆರ್ಮ್ಡ್ ಸ್ಟ್ರಗಲ್ ಅಂತ ಕರೆ ಕೊಟ್ಬಿಟ್ರಲ್ಲಯ್ಯ. … ಆರ್ಮ್ಡ್ ಸ್ಟ್ರಗಲ್ ನಿಲ್ಸಿದ್ರು ಅಂದರೆ ಕ್ರಾಂತಿ ತನ್ನ ಹಾದಿ ಬಿಟ್ಟು ಹಳ್ಳ ಹಿಡಿದಹಾಗೇ ಬಿಡು …” ಅಂತ ಒಂದೇ ಸಮನೆ ಹಳಹಳಿಸತೊಡಗಿದ. ಭಾರತದ ಕ್ರಾಂತಿಯ ಪ್ರಶ್ನೆ ಹಾಗೂ ಸಶಸ್ತ್ರ ಹೋರಾಟವಿಲ್ಲದೆ ಕ್ರಾಂತಿ ಸಾಧ್ಯವಿಲ್ಲ ಎನ್ನುವುದು ಅವನ ಮನಸ್ಸಿನಲ್ಲಿ ಅಷ್ಟು ಗಾಢವಾಗಿ ಬೇರೂರಿತ್ತು.
1977-78ರ ಸಮಯದಲ್ಲಿ ಬಿಹಾರದ ಭೋಜ್ಪುರ ಜಿಲ್ಲೆಯಲ್ಲಿ ʻಒಂದು ಎಂಎಲ್ ಗುಂಪು ದಲಿತ ಮತ್ತು ಅತಿ ಹಿಂದುಳಿದ ಸಮುದಾಯಗಳನ್ನು ಸಶಸ್ತ್ರ ಹೋರಾಟದ ಹಾದಿಯಲ್ಲಿ ಸಂಘಟಿಸುತ್ತಿದೆ, ಅಲ್ಲಿನ ಕಡು ಕ್ರೂರಿಗಳಾದ ಮೇಲ್ಜಾತಿ ಫ್ಯೂಡಲ್ ಭೂಮಾಲೀಕರು ತತ್ತರಿಸಿ ಹೋಗಿದ್ದಾರೆ, ದಲಿತರ ಸುದ್ದಿಯೇ ಬೇಡ ಎಂಬಷ್ಟು ಎದೆಗುಂದಿದ್ದಾರೆ; ಆ ಗುಂಪು ಈಗಾಗಲೇ ಸುಮಾರು 600ರಷ್ಟು ಸಂಖ್ಯೆಯ ರೆಡ್ ಆರ್ಮಿಯನ್ನು ಕಟ್ಟಿದೆ …ʼ ಎಂಬಂತಹ ವರದಿಗಳು ಪತ್ರಿಕೆಗಳಲ್ಲಿ ಬರುತ್ತಿದ್ದವು. ನಮಗೆಲ್ಲ ಬಹಳ ಸ್ಫೂರ್ತಿದಾಯಕವಾಗಿದ್ದ ಈ ವಿದ್ಯಮಾನದ ಬಗ್ಗೆ ಲಕ್ಷ್ಮಿ ಬಹಳ ಆಶಾವಾದಿಯಾಗಿ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದ. ಅದು ಸಿಪಿಐ ಎಂಎಲ್ (ಲಿಬರೇಶನ್) ಪಕ್ಷವಾಗಿತ್ತು. ಅದರ ಅಪ್ರತಿಮ ನಾಯಕ ಮತ್ತು ಜನರಲ್ ಸೆಕ್ರೆಟರಿಯಾಗಿದ್ದ ಕಾಮ್ರೇಡ್ ಜೌಹರ್ ಅವರು 1978ರಲ್ಲಿರಬೇಕು, ಪೊಲೀಸರ ಗುಂಡಿಗೆ ಬಲಿಯಾಗಿ ಹುತಾತ್ಮರಾದ ನಂತರ ಕಾಮ್ರೇಡ್ ವಿನೋದ್ ಮಿಶ್ರಾ ಜನರಲ್ ಸೆಕ್ರೆಟರಿಯಾಗಿದ್ದರು. (ಆಗ ಸಾಮಾನ್ಯವಾಗಿ ಈ ವಿವಿಧ ಸಂಘಟನೆಗಳನ್ನು ʻಪಕ್ಷʼ ಎನ್ನದೆ ʻಕೆಎಸ್ ಗುಂಪುʼ, ʻವಿಎಂ ಗುಂಪುʼ ಮುಂತಾಗಿ ಕರೆಯಲಾಗುತ್ತಿತ್ತು).
ಇದನ್ನೂ ಓದಿ ಜೋಳಿಗೆ | ಮೈಸೂರು ಎಂಬ ಚಳವಳಿ- ಹೋರಾಟಗಳ ಕುಲುಮೆಯಲ್ಲಿ…
ಈ ಸ್ಫೂರ್ತಿ ಹಾಗೂ ಕೆಎಸ್ ಅವರ ಸಸ್ಪೆಂಡ್ ಆರ್ಮ್ಡ್ ಸ್ಟ್ರಗಲ್ ಕರೆ ಎರಡೂ ಸೇರಿ ಲಕ್ಷ್ಮಿ ʻನಾವುಗಳೂ ವಿಎಂ ಗುಂಪಿಗೇ ಸೇರಬೇಕೆಂದುʼ ತೀರ್ಮಾನಿಸಿದ. ಆ ಪ್ರಕಾರವೇ, ಭಾರತದ ಕ್ರಾಂತಿಯ ಬಗ್ಗೆ ಬಹಳ ಉತ್ಕಟವಾಗಿ ತುಡಿಯುತ್ತಿದ್ದ ಏಳು ಜನ ನಮ್ಮಗಳನ್ನು ಸಭೆ ಸೇರಿಸಿದ್ದ. ಈವರೆಗೆ ನಮ್ಮ ಮಾರ್ಗದರ್ಶಕರಾಗಿದ್ದ ಹಿರಿಯರಿಂದ ಬೇರ್ಪಟ್ಟು ನಮ್ಮದೇ ಬೇರೆ ಗುಂಪು ರಚಿಸಿಕೊಳ್ಳಬೇಕು ಹಾಗೂ ಭೋಜ್ಪುರದ ಮಾದರಿಯಲ್ಲಿ ಕರ್ನಾಟಕದಲ್ಲೂ ಸಶಸ್ತ್ರ ಕ್ರಾಂತಿಕಾರಿ ಚಳವಳಿ ನಿರ್ಮಿಸಬೇಕು ಎಂಬುದಾಗಿ ಪ್ರಸ್ತಾಪವಿಟ್ಟ. ನಿಜ ಹೇಳಬೇಕೆಂದರೆ ನಮಗ್ಯಾರಿಗೂ (ನನಗಂತೂ) ಇದನ್ನು ಆಳವಾಗಿ ವಿಶ್ಲೇಷಿಸುವಷ್ಟು ರಾಜಕೀಯ ಪ್ರಬುದ್ಧತೆ ಇನ್ನೂ ಬಂದಿರಲಿಲ್ಲ. ನಮ್ಮ ʻನಾಯಕʼ ಹೇಳಿದ್ದಕ್ಕೆ ಸಹಮತ ವ್ಯಕ್ತಪಡಿಸಿದೆವು. ಹಿರಿಯರನ್ನು ಕರೆಸಿಕೊಂಡು ಅವರ ಮೇಲೆ ʻವಿಮರ್ಶೆʼಯಿಟ್ಟು, ಕರ್ನಾಟಕದಲ್ಲಿ ನಾವು ಬೇರೆ ʻಪಾರ್ಟಿʼ ಕಟ್ಟುವ ತೀರ್ಮಾನವನ್ನು ತಿಳಿಸಿದ್ದಾಯಿತು. ಹೀಗೆ 1979ರ ಆರಂಭದಲ್ಲಿ ನಾವು ಏಳು ಜನರು ಕರ್ನಾಟಕದಲ್ಲಿ ʻವಿಎಂ ಗುಂಪಿನವರುʼ ಎಂದಾಯಿತು. ಲಕ್ಷ್ಮಿ ಆ ಪಕ್ಷದ ಸಂಪರ್ಕವನ್ನೂ ಸಂಪಾದಿಸಿದ. ʻಪಾರ್ಟಿ ಮೆಂಬರ್ಶಿಪ್ʼಗೆ ಅವನು ಮತ್ತು ನಾನು ʻಅಪ್ಲೈʼ ಮಾಡಿದೆವು. ನಮ್ಮ ಗುಂಪಿಗೆ ಒಬ್ಬರು ʻಪಿಆರ್ʼ (ಪ್ರೊಫೆಶನಲ್ ರೆವಲ್ಯೂಶನರಿ – ಪೂರ್ಣಾವಧಿಯ ವೃತ್ತಿಪರ ಕ್ರಾಂತಿಕಾರಿ) ಬೇಕು ಅಂತ ತೀರ್ಮಾನಿಸಲಾಯಿತು. ಆದರೆ ಮಿಕ್ಕವರು ಯಾರೂ ಅದಕ್ಕೆ ಮುಂದೆ ಬರದೆ ಹೋದರು; ಆಗ ಟೆಲಿಫೋನ್ ಇಲಾಖೆಯಲ್ಲಿ ಖಾಯಂ ಉದ್ಯೋಗ ಹೊಂದಿದ್ದ ನಾನೇ ವಾಲಂಟಿಯರ್ ಮಾಡಿ, 1979ರ ಸೆಪ್ಟೆಂಬರಿನಲ್ಲಿ ಉದ್ಯೋಗಕ್ಕೆ ರಾಜೀನಾಮೆಯನ್ನೂ ಕೊಟ್ಟುಬಿಟ್ಟೆ. (ನಾನು ಕ್ರಾಂತಿಗಾಗಿ ಪೂರ್ಣಾವಧಿ ಜೀವನವನ್ನು ಮುಡಿಪಾಗಿಸಬೇಕೆಂದು ಅದಾಗಲೇ ತೀರ್ಮಾನಿಸಿಕೊಂಡು, ಅದಕ್ಕೆ ತಕ್ಕಂತಹ ಸರಳ ಬದುಕನ್ನು ರೂಢಿಸಿಕೊಂಡುಬಿಟ್ಟಿದ್ದೆ) ಇದೇ ಸಮಯದಲ್ಲಿ 1979ರ ಮೇ ತಿಂಗಳಲ್ಲಿ ನಮ್ಮ ಗುಂಪಿಗೆ ಮತ್ತು ಹೇಮಾ ಅವರ ತಾಯಿಗಷ್ಟೇ ತಿಳಿಸಿ ನಾನು-ಹೇಮಾ ಮದುವೆ ಮಾಡಿಕೊಂಡೆವು. (ಹೇಮಾ ಅವರ ತಂದೆಯೂ ಅವರ ಜೊತೆಯಲ್ಲಿ ಇದ್ದರಾದರೂ ಅವರಾಗಲೇ ತುಂಬಾ ಹಣ್ಣಾಗಿದ್ದರಿಂದ ಅವರಿಗೆ ತಿಳಿಸುವ ಅಗತ್ಯ ಕಾಣಲಿಲ್ಲ)
ಈಗ ಮೊದಲಿಗೆ ನಮ್ಮ ಗುಂಪನ್ನು ವಿಸ್ತರಿಸುವ, ಬೆಳೆಸುವ ಪ್ರಯತ್ನ ಶುರು ಮಾಡಿದೆವು.

ಸಿರಿಮನೆ ನಾಗರಾಜ್
ಲೇಖಕ, ಸಾಮಾಜಿಕ ಚಿಂತಕ