(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಆ್ಯಪ್)
ಭೋಪಾಲದಲ್ಲಿ ದೊರಕಿದ ಮೊಟ್ಟೆಗಳು ಫಾಸಿಲುಗಳು. ಅಂದರೆ, ಒಂದಾನೊಂದು ಕಾಲದಲ್ಲಿ ಜೀವಿಸಿದ್ದ ಡೈನೊಸಾರುಗಳ ಮೊಟ್ಟೆಗಳು ಹಾಗೆಯೇ ಶಿಲೆಯಾಗಿಬಿಟ್ಟಂಥವು. ಈ ಮೊಟ್ಟೆಗಳಿದ್ದ ಹೊಲದ ಒಡೆಯ, ಇವುಗಳನ್ನು ತನ್ನ ಕುಲದೇವತೆ ಎಂದು ಪೂಜಿಸುತ್ತಿದ್ದನಂತೆ! ಅವನ ತಂದೆ, ತಾತ, ಮುತ್ತಾತಂದಿರೂ ಪೂಜಿಸುತ್ತಿದ್ದುದರಿಂದ ಆತನೂ ಅದನ್ನು ಮುಂದುವರಿಸಿದ್ದ…
ಮೊನ್ನೆ ಭೋಪಾಲದಲ್ಲಿ ಡೈನೊಸಾರುಗಳ ಮೊಟ್ಟೆಗಳು ಸಿಕ್ಕ ಸುದ್ದಿ ಕೇಳಿದಾಗ ಅಮ್ಮ ಹಿಂದೆ ಹೇಳುತ್ತಿದ್ದ ಕತೆ ನೆನಪಾಯಿತು. ಕಟ್ಟಾ ಸಾಂಪ್ರದಾಯಿಕ ಮನೆಗೆ ಸೊಸೆಯಾಗಿ ಬಂದ ಅಮ್ಮನಿಗೆ, ಅತ್ತೆಯ ಮನೆಯ ಕೆಲವು ಸಂಬಂಧಿಗಳ ನಡವಳಿಕೆ ವಿಚಿತ್ರ ಎನ್ನಿಸುತ್ತಿತ್ತು. ಮನೆಯಲ್ಲಿ ದೇವರ ಪೆಟ್ಟಿಗೆಯನ್ನು ಶುಚಿಗೊಳಿಸಿ, ಅದರಲ್ಲಿದ್ದ ಪಾರಂಪರಿಕವಾಗಿ ಬಂದ ಎಲ್ಲ ಸಣ್ಣ-ಪುಟ್ಟ ಪುತ್ಥಳಿಗಳನ್ನೂ ಚೆನ್ನಾಗಿ ತೊಳೆದು, ನಿತ್ಯವೂ ಹೂ ಏರಿಸಿ ಇಡುತ್ತಿದ್ದಳು. ಎಲ್ಲವೂ ಮಡಿಯಲ್ಲಿಯೇ ಆಗಬೇಕು. ನಾವು ತಮಾಷೆ ಮಾಡಿದರೆ, “ಅಯ್ಯೋ… ನನ್ನ ಮಡಿ ಏನೂ ಇಲ್ಲ. ಯಾಕಂದರೆ, ನಾವು ಸಾಲಿಗ್ರಾಮವನ್ನು ಪೂಜೆ ಮಾಡ್ತಾ ಇಲ್ಲ. ಅದು ಇದ್ದಿದ್ದರೆ ಇನ್ನೂ ಮಡಿ ಬೇಕಿತ್ತು. ನಿಮ್ಮಂತಹವರನ್ನು ಇಟ್ಟುಕೊಂಡು ಆ ಮಡಿ ಎಲ್ಲ ಸಾಧ್ಯವಿಲ್ಲ,” ಅನ್ನುತ್ತಿದ್ದಳು. ಅವಳ ಅತ್ತೆ ಮನೆಯಲ್ಲಿ ಸಾಲಿಗ್ರಾಮ ಇರುವ ಪೆಟ್ಟಿಗೆಯನ್ನು ಮುಟ್ಟಲೂ ಬಿಟ್ಟಿರಲಿಲ್ಲ ಅಂತ ಹೇಳುತ್ತಿದ್ದಳು.
ಈ ಕತೆಗೂ ಡೈನೊಸಾರಿಗೂ ಸಂಬಂಧ ಏನು ಅಂತ ನೀವು ತಲೆ ಕೆಡಿಸಿಕೊಳ್ಳುತ್ತಿದ್ದರೆ ಅದು ನಿಮ್ಮ ತಪ್ಪಲ್ಲ. ಭೋಪಾಲದಲ್ಲಿ ದೊರಕಿದ ಮೊಟ್ಟೆಗಳು ಫಾಸಿಲುಗಳು. ಅಂದರೆ, ಒಂದಾನೊಂದು ಕಾಲದಲ್ಲಿ ಜೀವಿಸಿದ್ದ ಡೈನೊಸಾರುಗಳ ಮೊಟ್ಟೆಗಳು ಹಾಗೆಯೇ ಶಿಲೆಯಾಗಿಬಿಟ್ಟಂಥವು. ಈ ಮೊಟ್ಟೆಗಳನ್ನು ನೋಡಲು ಥೇಟ್ ಕಲ್ಲಿನ ಚೆಂಡಿನಂತೆಯೇ ಕಾಣುತ್ತವೆ. ಭೋಪಾಲದ ಬಳಿಯ ಧಾರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಹೊಲದಲ್ಲಿ ಈ ಮೊಟ್ಟೆಗಳಿದ್ದುವು. ಹತ್ತು ಹನ್ನೆರಡು ದುಂಡಗಿನ ಕಲ್ಲುಗಳನ್ನು ಅಚ್ಚುಕಟ್ಟಾಗಿ ಜೋಡಿಸಿಟ್ಟ ಹಾಗೆ ಕಾಣುತ್ತಿದ್ದುವು. ಅದು ಇದ್ದ ಒಡೆಯ ಅದನ್ನು ತನ್ನ ಕುಲದೇವತೆ ಎಂದು ಪೂಜಿಸುತ್ತಿದ್ದನಂತೆ. ಅವನ ತಂದೆ, ತಾತ, ಮುತ್ತಾತಂದಿರೂ ಪೂಜಿಸುತ್ತಿದ್ದುದರಿಂದ ಆತನೂ ಅದನ್ನು ಮುಂದುವರಿಸಿದ್ದ. ಸಂಪ್ರದಾಯ ಬೆಳೆಯುವುದು ಹೀಗೆಯೇ ಅಲ್ಲವೇ? ಆದರೆ, ಆ ಕಲ್ಲುಗಳು ಅಲ್ಲಿ ಹೇಗೆ ಬಂದುವು? ಅವನ್ನು ಹಾಗೆ ಜೋಡಿಸಿದವರು ಯಾರು? ಎಷ್ಟು ಹಳೆಯವು? ಈ ಯಾವ ಪ್ರಶ್ನೆಗಳನ್ನೂ ಆ ಕುಟುಂಬದವರಾಗಲೀ ಹಳ್ಳಿಯವರಾಗಲೀ ಕೇಳಿರಲಿಲ್ಲ. ಸಂಪ್ರದಾಯದ ಕುರಿತಂತೆ ಇಂತಹ ಪ್ರಶ್ನೆಗಳನ್ನು ಯಾರೂ ಕೇಳುವುದಿಲ್ಲವೆನ್ನಿ! ಆದರೆ ಕೊನೆಗೆ, ಲಖನೌನ ಬೀರ್‌ಬಲ್ ಸಾಹನಿ ಪುರಾತನ ಜೀವಿವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು, “ಇದು ಯಾರೋ ಜೋಡಿಸಿಟ್ಟ ಗುಂಡುಕಲ್ಲುಗಳಲ್ಲ – ಡೈನೊಸಾರುಗಳ ಗೂಡುಗಳಲ್ಲಿ ಅಂದವಾಗಿ ಜೋಡಿಸಿಟ್ಟ ಮೊಟ್ಟೆಗಳು ಕೋಟ್ಯಂತರ ವರ್ಷಗಳ ಕಾಲದ ಅಂತರದಲ್ಲಿ ಶಿಲೆಯಾದಂಥವು,” ಎಂದು ಹೇಳಿದರು. ಡೈನೊಸಾರುಗಳು ಸುಮಾರು ಆರು ಕೋಟಿ ವರ್ಷಗಳ ಹಿಂದೆಯೇ ಅಳಿದುಹೋದುವು ಎನ್ನುವುದು ಗೊತ್ತಿದೆಯಷ್ಟೆ.
ಆ ಹಳ್ಳಿಯವರು ನಂಬಿದರೋ ಇಲ್ಲವೋ ಗೊತ್ತಿಲ್ಲ. ಆದರೆ, ಈ ಸುದ್ದಿಯಂತೂ ಚೆನ್ನಾಗಿಯೇ ಪ್ರಚಾರವಾಯಿತು. ಅಮ್ಮ ಅತ್ಯಂತ ಭಯ, ಭೀತಿಯಿಂದ ಹೇಳುತ್ತಿದ್ದ ಸಾಲಿಗ್ರಾಮವೂ ಇಂತಹುದೇ ಒಂದು ಫಾಸಿಲು ಎನ್ನುವುದು ನೆನಪಾಯಿತು. ಅಮ್ಮನ ಕತೆಯನ್ನು ಕೇಳಿದ್ದ ನನಗೆ, ಸಾಲಿಗ್ರಾಮದ ಶಕ್ತಿಯ ಬಗ್ಗೆ ಅಪಾರ ಕುತೂಹಲವಿತ್ತು ಎನ್ನಿ. ಆದರೆ, ಅದನ್ನು ಪೂಜಿಸುತ್ತಿದ್ದವರ ಮನೆಯಲ್ಲಿ ಹೋಗಿ ಇಣುಕಲು ಸಾಧ್ಯವಿರಲಿಲ್ಲ. ಕೇವಲ ಮನೆಯೊಡೆಯ ಅಥವಾ ಒಡತಿಯಷ್ಟೇ ಅದನ್ನು ಪೂಜಿಸುತ್ತಿದ್ದರು. ಪೂಜಿಸಿದ ಮೇಲೆ ಅದನ್ನು ಭದ್ರವಾಗಿ ತೆಗೆದಿಟ್ಟುಬಿಡುವುದು ವಾಡಿಕೆ. ಇಂತಹ ಸಾಲಿಗ್ರಾಮವನ್ನು ನಾನು ಸ್ನಾತಕೋತ್ತರ ಪದವಿಯನ್ನು ಓದುವಾಗ ಮೊದಲ ಬಾರಿಗೆ ನೋಡಿದೆ. ಶೈಕ್ಷಣಿಕ ಪ್ರವಾಸ ಹೋಗಿದ್ದಾಗ ಭೂವಿಜ್ಞಾನದ ಸಂಶೋಧನಾಲಯವೊಂದರಲ್ಲಿ ಇದನ್ನು ಕಂಡಿದ್ದೆ. ಆಗ ನಮ್ಮ ಶಿಕ್ಷಕರು ಇದು ಸಾಲಿಗ್ರಾಮ ಶಿಲೆ ಎಂದಾಗ ಕಸಿವಿಸಿ ಎನಿಸಿತ್ತು. ಅನಂತರ ಆ ಬಗ್ಗೆ ಅಧ್ಯಯನ ಕೈಗೊಂಡಾಗ, ಸಾಲಿಗ್ರಾಮ ಎನ್ನುವುದೊಂದು ಶಿಲೆ, ಅದರಲ್ಲಿಯೂ ಸತ್ತ ಜೀವಿಯೊಂದರ ಪಳೆಯುಳಿಕೆ ಎಂಬುದು ಅರಿವಾಯಿತು. ಅಂತಹ ಶಿಲೆ ಪೂಜ್ಯವಾದದ್ದು ಹೇಗೆ ಎನ್ನುವುದು ವಿಶೇಷ.

ಪರಂಪರೆಗಳು ಹುಟ್ಟುವುದೇ ಹೀಗೆ. ಯಾವುದೋ ವಿಷಯದ ಬಗ್ಗೆ ಯಾರೋ ಕಲ್ಪಿಸಿದ ರೋಚಕ ಕಲ್ಪನೆಗಳು ಕಾಲಾಂತರದಲ್ಲಿ ಕತೆಗಳಾಗಿ, ಜನಪದ ಹಾಡುಗಳಾಗಿ, ಪುರಾಣಗಳಾಗಿ ಮುಂದುವರಿಯುತ್ತವೆ. ಎಷ್ಟರ ಮಟ್ಟಿಗೆ ಎಂದರೆ, ಈ ಕತೆಗಳೇ ನಿಜವಾದ ಇತಿಹಾಸವೇನೋ ಎನ್ನಿಸಿಬಿಡುವುದೂ ಉಂಟು. ಮಹಾಬಲಿಪುರಂನ ಸಮುದ್ರ ತಟದ ದೇವಾಲಯಗಳನ್ನು ನೋಡಿದವರಿಗೆ ಅಲ್ಲೊಂದು ವಿಚಿತ್ರ ಕಾಣುವುದುಂಟು. ಕೃಷ್ಣನ ಬೆಣ್ಣೆ ಮುದ್ದೆ ಎಂದು ಹೇಳುವ ಕಲ್ಲೊಂದು ಅಲ್ಲಿದೆ. ಆಳೆತ್ತರ ಮತ್ತು ಅಗಲದ ದೊಡ್ಡ ಬಂಡೆ. ಯಾರೋ ಕಡೆದು, ದುಂಡಗಾಗಿಸಿ ಇಟ್ಟಂತೆ ಇದೆ. ಸ್ವಲ್ಪ ತಳ್ಳಿದರೂ ಉರುಳಿಕೊಂಡು ಹೋಗಿಯೇಬಿಡುತ್ತದೆಯೋ ಎನ್ನುವ ಹಾಗೆ ಇನ್ನೊಂದು ಬಂಡೆಯ ಮೇಲೆ ಅದು ನಿಂತಿದೆ. ಕೃಷ್ಣನ ಕತೆಗಳನ್ನು ಕೇಳಿದವರಿಗೆ, ಆತನ ದೈವಶಕ್ತಿಯಲ್ಲಿ ನಂಬಿಕೆ ಇರುವವರಿಗೆ ಇದು ನಿಜಕ್ಕೂ ಒಂದು ಬೆಣ್ಣೆಯ ಮುದ್ದೆಯೇ ಇರಬೇಕು ಎನ್ನಿಸಬಹುದು. ಬಣ್ಣವೂ ಬಿಳಿ. ಉಂಡೆ ಕಟ್ಟಿದಂತೆ ಪರಿಪೂರ್ಣವಾದ ಗೋಲಾಕಾರ. ಆ ಮಟ್ಟಿಗೆ ಅದೊಂದು ಅದ್ಭುತವೇ ಹೌದು. ಆದರೆ, ಅದನ್ನು ಯಾವ ಮನುಷ್ಯರೂ ನಿರ್ಮಿಸಿರಲಿಲ್ಲ ಎನ್ನುವುದನ್ನು ಮಾತ್ರ ಅಲ್ಲಿರುವ ಯಾವ ಗೈಡುಗಳೂ ನಮಗೆ ತಿಳಿಸಲಿಲ್ಲವೆನ್ನಿ.
ನಿಸರ್ಗದ ವಿದ್ಯಮಾನಗಳು ಹೀಗೆ ಪರಂಪರೆಯ, ಸಂಸ್ಕೃತಿಯ ಭಾಗ ಆಗಿಬಿಡುವುದರಲ್ಲಿ ಅಚ್ಚರಿ ಏನಿಲ್ಲ. ಅಚ್ಚರಿ ಏನೆಂದರೆ, ಡೈನೊಸಾರುಗಳಂತಹ ಯಾರೂ ಕಾಣದೇ ಇದ್ದ ಜೀವಿಗಳ ಬಗ್ಗೆ ಇರುವ ಪೌರಾಣಿಕ ಕಥಾನಕಗಳು ಗೊಂದಲವನ್ನು ಉಂಟುಮಾಡುತ್ತವೆ. ಈ ಜನಪದದ ಕತೆಗಳು ಕೇವಲ ಕಲ್ಪನೆಯೇ ಅಥವಾ ಅವುಗಳಿಗೊಂದು ಅರ್ಥ ಇರಬಹುದೇ? ಅಥವಾ ಅವು ನಿಜವಾಗಿ ಘಟಿಸಿದ ಘಟನೆಗಳ ನುಡಿದಾಖಲೆಯೋ? ಉದಾಹರಣೆಗೆ, ಸಾಲಿಗ್ರಾಮದ ಬಗ್ಗೆ ಒಂದು ಕತೆ ಇದೆ. ಶಿವ ಮತ್ತು ಜಲಾಧರ ಎನ್ನುವ ರಾಕ್ಷಸನ ನಡುವೆ ಸ್ಪರ್ಧೆ ಉಂಟಾಯಿತಂತೆ. ತಂತಮ್ಮ ಮಡದಿಯರು ಅಪ್ರತಿಮ ಪತಿವ್ರತೆಯರು ಎನ್ನುವುದರ ಕುರಿತು ಸ್ಪರ್ಧೆ. ಇದನ್ನು ಪರೀಕ್ಷಿಸಲು ಇಬ್ಬರೂ ವೇಷ ಮರೆಸಿಕೊಂಡು ಮತ್ತೊಬ್ಬರ ಮಡದಿಯನ್ನು ಓಲೈಸಬೇಕು; ಯಾರ ಮಡದಿ ವೇಷಧಾರಿ ಗಂಡನನ್ನು ಗುರುತಿಸುತ್ತಾಳೋ ಆತ ಗೆದ್ದ ಹಾಗೆ ಎನ್ನುವುದು ಸ್ಪರ್ಧೆ. ಜಲಾಧರ ಶಿವನ ವೇಷ ಧರಿಸಿಕೊಂಡು ಪಾರ್ವತಿಯ ಬಳಿ ಬಂದಾಗ ಪಾರ್ವತಿ ಅದನ್ನು ಗುರುತಿಸಿಬಿಡುತ್ತಾಳಂತೆ. ಅನಂತರ ಶಿವ ಕೂಡ ಹೀಗೆಯೇ ಜಲಾಧರನ ಮಡದಿಯ ಬಳಿಗೆ ಹೋಗುತ್ತಾನೆ. ಆಕೆ ಅದನ್ನು ಗುರುತಿಸದೆ ಶಿವನ ಓಲೈಕೆಗೆ ಮರುಳಾಗುತ್ತಾಳೆ. ತಾನು ಮೋಸಹೋದೆ ಎಂದು ತಿಳಿದಾಗ, ಕಲ್ಲಾಗು ಎಂದು ಶಿವನನ್ನು ಶಪಿಸುತ್ತಾಳಂತೆ. ಆ ಕಲ್ಲೇ ಸಾಲಿಗ್ರಾಮ. ಅದನ್ನೇ ವಿಷ್ಣು ಸುದರ್ಶನ ಚಕ್ರವನ್ನಾಗಿ ಬಳಸಿಕೊಂಡು ಜಲಾಧರನನ್ನು ಕೊಲ್ಲುತ್ತಾನೆ ಎನ್ನುವುದು ಕತೆ.
ಸಾಲಿಗ್ರಾಮದ ಈ ಕತೆ ಕೇವಲ ಹಿಂದೂಗಳ ಸ್ವತ್ತಲ್ಲ. ಕೆಲವು ಬೌದ್ಧ ಪಂಗಡಗಳಲ್ಲಿಯೂ ಸಾಲಿಗ್ರಾಮವನ್ನು ಪೂಜಿಸುವ ಪದ್ಧತಿ ಇದೆಯಂತೆ. ಸಾಲಿಗ್ರಾಮವನ್ನು ಮರಳಿನಲ್ಲಿಟ್ಟು, ಪೆಟ್ಟಿಗೆಯಲ್ಲಿ ಭದ್ರವಾಗಿ ಇಡುವ ಸಂಪ್ರದಾಯವೂ ಉಂಟು. ಹಾಗೆಯೇ ಸಮುದ್ರದಲ್ಲಿ ದೊರೆಯುವ ಚೆಂಡಿನಂತಹ, ಮೈಯೆಲ್ಲ ಮುಳ್ಳಾಗಿರುವ ಕಡಲಚಿಳ್ಳೆ ಎನ್ನುವ ಜೀವಿಯ ಫಾಸಿಲುಗಳನ್ನು ಜಪಾನೀಯರು ಪೂಜಿಸುತ್ತಾರೆ.

ಸಾಲಿಗ್ರಾಮ ಅಥವಾ ಕಡಲಚಿಳ್ಳೆಯಂತಹ ಜೀವಿಗಳು ಈಗಲೂ ಸಿಗುತ್ತವೆ. ಹೀಗಾಗಿ, ಇವುಗಳ ಬಗ್ಗೆ ಕತೆ ಹುಟ್ಟಿಕೊಳ್ಳುವುದು ಅಚ್ಚರಿ ಎನ್ನಿಸಲಾಗದು. ಆದರೆ, ಕೋಟ್ಯಂತರ ವರ್ಷಗಳ ಹಿಂದೆ ಇದ್ದು ಮರೆಯಾದ ಡೈನೊಸಾರುಗಳ ಬಗೆಗಿನ ಕತೆಗಳು ಹುಟ್ಟಿದ್ದಾದರೂ ಹೇಗೆ? ಇದಕ್ಕೆ ಬಹುಶಃ ಉತ್ತರ ಉ.ಅಮೆರಿಕದ ಬುಡಕಟ್ಟು ಜನಾಂಗಗಳಲ್ಲಿ ದೊರಕಬಹುದು. ಉತ್ತರ ಅಮೆರಿಕದ ಯೂಟಾ ಪ್ರಾಂತ್ಯದ ಬೆಂಗಾಡು ಡೈನೊಸಾರುಗಳ ಫಾಸಿಲುಗಳಿಗೆ ಸುಪ್ರಸಿದ್ಧ. ಇಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಡೈನೊಸಾರುಗಳ ಫಾಸಿಲುಗಳು ದೊರೆತಿವೆ; ಒಂದಲ್ಲ, ಎರಡಲ್ಲ, ನೂರಾರು ಬಗೆಯ ಫಾಸಿಲುಗಳು. ದೈತ್ಯ ಡೈನೊಸಾರುಗಳ ಇಡೀ ಅಸ್ಥಿಪಂಜರ, ಮೊಟ್ಟೆಗಳು, ಗೂಡುಗಳು, ಅಲ್ಲಿನ ಜನರ ಬಳಸುವ ಭರ್ಚಿಯ ಮೊನೆಯಷ್ಟು ದೊಡ್ಡದಾದ ಹಲ್ಲುಗಳು ಎಲ್ಲವೂ ಕಲ್ಲಿನ ರೂಪದಲ್ಲಿ ಸಿಕ್ಕಿವೆ. ಅಷ್ಟೇ ಅಲ್ಲ, ಡೈನೊಸಾರುಗಳು ನಡೆದಾಡಿ ಮೂಡಿದ ಹೆಜ್ಜೆ ಗುರುತುಗಳೂ ಯಥೇಚ್ಛ ಇವೆ. ಇಲ್ಲಿನ ವೈವಿಧ್ಯಮಯ ಫಾಸಿಲುಗಳಿಂದಾಗಿಯೇ ನಾವು ಈ ದೈತ್ಯಜೀವಿಗಳ ಬಗ್ಗೆ ಸಾಕಷ್ಟು ತಿಳಿಯುವುದೂ ಸಾಧ್ಯವಾಗಿದೆ. ಇವುಗಳಲ್ಲಿ ಟೀರೋಡಾಕ್ಟೈಲು ಎನ್ನುವ ಡೈನೊಸಾರಿನ ಹೆಜ್ಜೆ ಗುರುತನ್ನು ಯೂಟಾ ಪ್ರಾಂತ್ಯದಲ್ಲಿ ವಾಸಿಸುವ ಹೋಪಿ, ಅಪಾಚೆ ಹಾಗೂ ನವಾಹೋ ಬುಡಕಟ್ಟಿನ ಜನರು ಪೂಜಿಸುತ್ತಿದ್ದರು. ಈ ಡೈನೊಸಾರಿಗೆ ಕೋಳಿಗೆ ಇರುವ ಹಾಗೆ ಮೂರೇ ಕಾಲ್ಬೆರಳುಗಳು ಇದ್ದುವು. ಹೆಜ್ಜೆ ಗುರುತು ಒಂದು ಮೊಲದ ಗಾತ್ರವಿತ್ತು. ಹೀಗಾಗಿ, ಇದನ್ನು ಅಲ್ಲಿನ ಬುಡಕಟ್ಟು ಜನಾಂಗದವರು ದೈತ್ಯ ಗಿಡುಗ ಎಂದು ಹೆಸರಿಸಿದ್ದರಂತೆ. ಯೂಟಾ ಪ್ರಾಂತ್ಯದಲ್ಲಿ ಅತ್ಯಂತ ಜನಪ್ರಿಯವಾದ ಗರುಡ, ಹದ್ದು, ಗಿಡಗ, ರಣಹದ್ದುಗಳಂತೆಯೇ ಇದುವೂ ಒಂದು ಭೀಕರವಾದ, ಶಕ್ತಿಯುತವಾದ ಹಕ್ಕಿ ಇದ್ದಿರಬೇಕು ಎಂದು ಅವರು ಕಲ್ಪಿಸಿದ್ದರು.
ಚೀನಾದಲ್ಲಿಯೂ ಇದೇ ಬಗೆಯಲ್ಲಿ ದೈತ್ಯ ಡೈನೊಸಾರುಗಳ ಹೆಜ್ಜೆಗುರುತುಗಳು ಪತ್ತೆಯಾಗಿವೆ. ಸುಮಾರು ಐವತ್ತು ವಿಭಿನ್ನ ಪ್ರದೇಶಗಳಲ್ಲಿ ಡೈನೊಸಾರುಗಳ ಹೆಜ್ಜೆಗುರುತುಗಳು ಪತ್ತೆಯಾಗಿವೆ. ಈ ಗುರುತುಗಳಿರುವ ರೀತಿ, ಅವುಗಳ ಆಕಾರ, ಗಾತ್ರ ಇವೆಲ್ಲವನ್ನೂ ಆಯಾ ಪ್ರದೇಶದಲ್ಲಿರುವ ಹಲವು ಜನಪದ ಕತೆಗಳ ಜೊತೆಗೆ ಕೂಡಿಸಿ ವಿಶ್ಲೇಷಿಸಲಾಗಿದೆ. ಈ ವಿಶ್ಲೇಷಣೆಯ ಪ್ರಕಾರ, ಅಲ್ಲಿನ ಜನಪದ ಕತೆಗಳಲ್ಲಿ ಈ ಗುರುತುಗಳನ್ನು ಪುರಾಣಗಳಲ್ಲಿ ಬರುವ ಬೆಂಕಿಯುಗುಳುವ ದೈತ್ಯ ಹಕ್ಕಿ ಡ್ರ್ಯಾಗನ್, ಯಾವುದೋ ಮರ ಅಥವಾ ಪ್ರಾಣಿಯ ಅಂಗ ಇಲ್ಲವೇ ದೇವರ ರೂಪದಲ್ಲಿ ಗುರುತಿಸಿದ್ದಾರೆ.
1982ರ ಆಸುಪಾಸಿನಲ್ಲಿ ಚೀನಾದ ಯುನಾನ್ ಪ್ರಾಂತ್ಯದ ಕುನ್‌ಮಿಂಗ್ ನಗರದ ಸಮೀಪದಲ್ಲಿದ್ದ ಹಳ್ಳಿಯಲ್ಲಿ ಡೈನೊಸಾರುಗಳ ಹೆಜ್ಜೆಗಳನ್ನು ವಿಜ್ಞಾನಿಗಳು ಗುರುತಿಸಿದರು. ಈ ಹೆಜ್ಜೆ ಗುರುತುಗಳನ್ನು ಗುರುತಿಸಲು ಕಾರಣ, ಅಲ್ಲಿ ಆಗ ಪ್ರಚಲಿತವಿದ್ದ ‘ದೇವರ ಕೋಳಿ’ ಎನ್ನುವ ಪೌರಾಣಿಕ ಹಕ್ಕಿಯ ಕತೆಗಳು. ಡೈನೊಸಾರುಗಳ ಹೆಜ್ಜೆ ಗುರುತುಗಳನ್ನು ಆ ಕೋಳಿಯ ಹೆಜ್ಜೆ ಗುರುತುಗಳು ಎಂದು ಅಲ್ಲಿನ ಜನ ಕಲ್ಪಿಸಿದ್ದರು. ಕಣ್ಣಿಗೆ ಕಾಣದ ಅದು ದೈತ್ಯವೆಂದೂ, ಕಲ್ಲಿನಲ್ಲಿ ಗುರುತು ಮೂಡಿಸುವಷ್ಟು ಶಕ್ತಿಯುತವೆಂದೂ ನಂಬಲಾಗಿತ್ತು. ಹಬ್ಬ-ಹರಿದಿನಗಳಲ್ಲಿ ಅದನ್ನು ಪೂಜಿಸುವ ಪರಿಪಾಠವಿತ್ತು. ಈ ಗುರುತುಗಳಿಂದಲೇ ಆ ಪುರಾಣದ ಜೀವಿಗಳು ಹುಟ್ಟಿದುವೇ ಅಥವಾ ಆ ಕಲ್ಪನೆಗೆ ಪುರಾವೆಯಾಗಿ ಇವನ್ನು ಜನರು ನಂಬಿದರೇ ಗೊತ್ತಿಲ್ಲ.

ನಮಗೆ ವಿಕಾಸವಾದವನ್ನು ಕಲಿಸುತ್ತಿದ್ದ ಒಬ್ಬ ಮೇಷ್ಟರು ದಶಾವತಾರವನ್ನು ಉಲ್ಲೇಖಿಸಿ, “ವಿಕಾಸವಾದದ ಪರಿಕಲ್ಪನೆ ಆಗಲೇ ಭಾರತೀಯರಲ್ಲಿ ಇತ್ತು. ಮೀನು, ಆಮೆ, ಹಂದಿ, ಸಿಂಹ ಇತ್ಯಾದಿ ಅವತಾರಗಳು ಜೀವಿವಿಕಾಸದ ಹಾದಿಯಲ್ಲಿ ನಾವು ಗುರುತಿಸಿರುವ ಜೀವಿಗಳ ಕ್ರಮದಲ್ಲಿಯೇ ಇದೆ,” ಎಂದು ವಾದಿಸುತ್ತಿದ್ದರು. ನಾವೂ ನಂಬಿದ್ದೆವು. ಡೈನೊಸಾರುಗಳ ಬಗ್ಗೆ ಇರುವ ಈ ಕಲ್ಪನೆಗಳು, ಕತೆಗಳು, ವಿಶ್ವಾಸ ಅಂತಹ ನಂಬಿಕೆಗಳು ಸರಿಯಲ್ಲವೇನೋ ಎಂದು ಹೇಳುತ್ತಿವೆ. ಡೈನೊಸಾರುಗಳ ಫಾಸಿಲುಗಳನ್ನು ನಮ್ಮ ಪೂರ್ವಜರು ಕಂಡಿರುವುದಂತೂ ಖಂಡಿತ. ಅವು ಇಂದು ಇರುವ ಜೀವಿಗಳ ಕುರುಹುಗಳಲ್ಲ ಎನ್ನುವುದನ್ನೂ ಅವರು ತಿಳಿದಿದ್ದು ಸತ್ಯ. ಆದರೆ, ಅದು ಹೇಗೆ ಆಗಿರಬಹುದು ಎಂಬ ವಾಸ್ತವ ತಿಳಿಯದಿದ್ದಾಗ, ತಮ್ಮ ಅರಿವಿಗೆ ಬಂದ ಕತೆಗಳನ್ನು ಕಟ್ಟಿರಬಹುದು ಎನ್ನಬಹುದಷ್ಟೇ ಹೊರತು ಮೀನು, ಹಂದಿ, ಆಮೆಗಳು ಒಂದಿನ್ನೊಂದು ಅನುಕ್ರಮವಾಗಿ ವಿಕಾಸವಾದ ಜೀವಿವರ್ಗಗಳು ಎನ್ನುವ ಅರಿವು ಇತ್ತು ಎನ್ನಲಾಗದು.
ಈ ಅರಿವು ಬಂದಿದ್ದು – ಫಾಸಿಲುಗಳು ಎಂದರೆ ಏನು, ಅವು ಹೇಗೆ ರೂಪುಗೊಂಡಿರಬಹುದು, ನಾನಾ ಶಿಲೆಗಳಲ್ಲಿ ಇರುವ ಫಾಸಿಲುಗಳ ಸಂಬಂಧವೇನು, ಶಿಲೆಗಳ ಆಯುಸ್ಸು ಎಷ್ಟು… ಇತ್ಯಾದಿ ಎಲ್ಲವನ್ನೂ ತಿಳಿದ ಮೇಲಷ್ಟೆ. ಅದು ಆಗಿದ್ದು ಹತ್ತೊಂಬತ್ತನೆಯ ಶತಮಾನದಲ್ಲಿ. ಅದಕ್ಕೂ ಮೊದಲು ಹುಟ್ಟಿದ ಇಂತಹ ಕತೆಗಳನ್ನು ಹೆಚ್ಚೆಂದರೆ ಅದ್ಭುತ ಕಲ್ಪನೆಗಳು ಎನ್ನಬಹುದೇ ಹೊರತು ವಾಸ್ತವದ ಜನಪದ ದಾಖಲೆಗಳು ಎನ್ನಲಾಗದು. ಬಹುಶಃ ನಮ್ಮ ಪುರಾಣಗಳಲ್ಲಿ ಬರುವ ಜಟಾಯು, ಜರಾಸಂಧ, ರಕ್ತಬೀಜಾಸುರರೆಲ್ಲರೂ ಇಂತಹುದೇ ಇತರೆ ಜೀವಿಗಳ ‘ರೂಪಕ ರೂಪ’ಗಳು ಎಂದರೆ ಸರಿಯಾದೀತು. ಅದೇನೇ ಆಗಲಿ, ಬೆರಗುಗೊಳಿಸುವಂತಹ ಮನುಷ್ಯನ ಕಲ್ಪನಾಶಕ್ತಿ, ಬುದ್ಧಿಶಕ್ತಿಯ ಬಗ್ಗೆ ಈ ಕಾಲ್ಪನಿಕ ಕತೆಗಳು ಅತ್ಯುತ್ತಮ ಪುರಾವೆ.
ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ
ಈ ಮೈಕ್ರೋಸ್ಕೋಪು ವಿಷಯವು ಅತ್ಯಂತ ರುಚಿಯನ್ನು ಹೊಂದಿದೆ! ಭೋಪಾಲ್‌ನಲ್ಲಿ ಸಿಕ್ಕ ಡೈನೊಸಾರ್ ಮೊಟ್ಟೆಗಳು ಮತ್ತು ಚೀನಾದ ದೇವರ ಕೋಳಿಗಳು ನಮ್ಮ ನಾಡಿಗೆ ಅದ್ಭುತ ಸೌಂದರ್ಯವನ್ನು ಕೊಟ್ಟಿವೆ! 😍 ಪ್ರಕೃತಿ ಅದ್ಭುತವಾಗಿದೆ, ನಾವು ಹಾಗೆ ಪ್ರಕೃತಿಯನ್ನು ಕಾಯುವುದು ಮಹತ್ವದ ಕರೆ. 🌿🌾💚