(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ)
"ನೋಡಪ್ಪ, ಇದೆಲ್ಲ ಸೇರಿ ಐದ್ ಸಾವಿರ ಬಂಡವಾಳ. ಬೆಳಗ್ಗೆ ಆರಕ್ಕೊಂಟ್ರೆ ಸಂಜೆ ಆರಾಯ್ತದೆ, ಮನಗೋಗದು. ಎಲ್ಲಾ ಖಾಲಿಯಾದ್ರೆ ಏಳುನೂರ್-ಎಂಟುನೂರಕ್ಕೇನು ಮೋಸಿಲ್ಲ. ದಿನದಲ್ಲಿ ಯಾರಾದ್ರು ಒಬ್ರು ಸಾಲ ನಿಲ್ಲಸ್ತರೆ, ಅದೂ ನೂರಿನ್ನೂರು ಮಾತ್ರ. ಕೆಲವ್ರು ಕೊಡ್ತರೆ, ಇನ್ ಕೆಲವ್ರು ಮರೆತೋದಂಗೆ ನಾಟ್ಕ ಆಡ್ತರೆ. ಗೊತ್ತಾಯ್ತದೆ ನಂಗೆ..."
ಬೆನ್ನು ಬಾಗಿದ ವಯೋವೃದ್ಧರೊಬ್ಬರು ಮೂರು ಚಕ್ರದ ತಳ್ಳುವ ಗಾಡಿಯಲ್ಲಿ ತಾಜಾ ತರಕಾರಿಗಳನ್ನು ತುಂಬಿಕೊಂಡು, ಶಕ್ತಿಯನ್ನೆಲ್ಲ ಬಿಟ್ಟು ನೂಕುತ್ತ, ತರಕಾರಿಗಳ ಹೆಸರು ಕೂಗುತ್ತ ರಸ್ತೆಯಲ್ಲಿ ಹೋಗುತ್ತಿದ್ದರು. ಆ ಕೂಗುವಿಕೆಯಲ್ಲಿ ಒಂದು ರಿದಮ್ ಇತ್ತು. ಆ ರಿದಮ್‌ಗೆ ಮನೆಯೊಳಗಿದ್ದವರ ಕಿವಿ ನಿಮಿರುತ್ತಿತ್ತು. ಕೆಲವು ಹೆಂಗಸರು ಮನೆಯಿಂದ ಇಣುಕಿ ನೋಡಿ ಸುಮ್ಮನಾದರೆ, ಕೆಲವರು ಬೀದಿಗೆ ಬಂದು ತರಕಾರಿ ರೇಟ್ ಕೇಳಿ, ಚೌಕಾಸಿಯಲ್ಲಿ ನಿರತರಾಗುತ್ತಿದ್ದರು. ಆ ಹೆಂಗಸರು ಕೇಳಿದ ರೇಟಿಗೆ ಕೊಂಚವೂ ಬೇಸರ ವ್ಯಕ್ತಪಡಿಸದ ಅವರು, “ಮಾರ್ಕೆಟಲ್ಲೇ ಆ ರೇಟಾಗೈತೆ, ಏನ್ಮಾಡದು ತಗಳಿ,” ಎಂದು, ಅವರು ಏಕವಚನದಲ್ಲಿ ಕೇಳಿದರೂ ಬಹುವಚನದಲ್ಲಿಯೇ ಉತ್ತರಿಸಿ ಮಾರಾಟ ಮಾಡುತ್ತಿದ್ದರು. ಕೊಳ್ಳುವ ಹೆಂಗಸರಿಗೆ ಬೇಸರವಾಗಬಾರದು ಎಂದು, ತೂಗುವಾಗ ಸ್ವಲ್ಪ ಹೆಚ್ಚೇ ತೂಗಿ ಅವರ ಮನಸ್ಸಂತೋಷಪಡಿಸುತ್ತಿದ್ದರು. ನಡೆ-ನುಡಿಯಲ್ಲಿ ಸಜ್ಜನಿಕೆ ಎದ್ದುಕಾಣುತ್ತಿತ್ತು. ಕೊಳ್ಳುವವರು ಕೂಡ ಅವರನ್ನು ಗೌರವದಿಂದಲೇ ಕಾಣುತ್ತಿದ್ದರು. ಅವರಿಗಾಗಿ ಇವರು, ಇವರಿಗಾಗಿ ಅವರು ಕಾಯುವ – ಖರೀದಿಸುವ ಬದುಕಿನ ವ್ಯಾಪಾರ ಇಬ್ಬರನ್ನೂ ಹತ್ತಿರವಾಗಿಸಿತ್ತು.
ಅವರ ಹೆಸರು ನಾರಾಯಣಪ್ಪ. ವಯಸ್ಸು 72. ಬೆಂಗಳೂರಿನ ಶ್ರೀನಿವಾಸ ನಗರದಲ್ಲಿ ಹುಟ್ಟಿ ಬೆಳೆದವರು. ತರಕಾರಿ ತಾತ ಎಂದೇ ಹೆಸರಾದವರು. ಅವರು ವ್ಯಾಪಾರಕ್ಕೆ ಮಾತ್ರ ನಿಲ್ಲುವವರು. ಸುಮ್ಮನೆ ಮಾತು ಅಂದ್ರೆ ಆಗದವರು. ಹಾಗಾಗಿ, ಅವರ ಜೊತೆಗೇ ಹೆಜ್ಜೆ ಹಾಕುತ್ತ, ಪ್ರಶ್ನೆ ಕೇಳಿ ಉತ್ತರ ಪಡೆಯುತ್ತ ಹೋದೆ.
“ನಮಸ್ಕಾರ ತಾತ… ಹೆಂಗಿದೆ ವ್ಯಾಪಾರ??
“ನಡೀತಿದೆ… ಆರಕ್ಕತ್ತಲ್ಲ ಮೂರಕ್ಕಿಳಿಯಲ್ಲ. ಯಾಕಂದ್ರೆ ನಮ್ ಗಾಡಿ ಇರದೇ ಇಷ್ಟು- ನಮ್ ಹೊಟ್ಟೆಯಷ್ಟು…”
“ಟೊಮಟೋ ರೇಟ್ ಜಾಸ್ತಿಯಾಗಿ ಸಿಕ್ತಿಲ್ಲವಂತಲ್ಲ ತಾತ?”
“ಸಿಕ್ತಿಲ್ಲ… ಬ್ಯಾಡ, ಬುಟ್ಟಾಕು. ಟೊಮಟೋ ಇಲ್ಲಾಂದ್ರೆ ಯಾರೂ ಅಡಗೆನೇ ಮಾಡಲ್ವಾ? ಹುಣಸೇ ಹುಳಿ ಬುಡ್ತರೆ, ಅಡಗೆ ಮಾಡ್ತರೆ. ಹಂಗೇ ನಾನುವೇ, ಟೊಮಟೋ ಬುಡ್ತಿನಿ, ಕಡಿಮೆ ಇರದ್ನ ತತ್ತಿನಿ. ನಮ್ಗೆ ಜನಾ ಮುಖ್ಯ. ನನಗೇ ರೇಟ್ ಜಾಸ್ತಿ ಅಂದ್ರೆ, ಅದು ಕೊಳ್ಳೋರಿಗೂ ಜಾಸ್ತಿ ಅಲ್ವಾ? ಜನಕ್ಕೆ ತೊಂದರೆ ಕೊಡಬಾರದು, ಅವರಿಗೆ ತೊಂದರೆ ಕೊಟ್ಟು ನಾವು ಬದುಕಕಾಯ್ತದಾ?”

“ತರಕಾರಿ ತರದೆಲ್ಲಿ? ಯಾವುದಾದರೂ ತೋಟ-ಗೀಟ ನೋಡ್ಕಂಡಿದೀರ?”
“ತೋಟ ಮಡಗವಷ್ಟು ದೊಡ್ಡವನಲ್ಲ ಕಣಪ್ಪಾ… ಅದಿದ್ರೆ ಇಲ್ಯಾಕ್ ಗಾಡಿ ತಳ್ತಿದ್ದೆ? ಸಿಟಿ ಮಾರ್ಕೆಟ್ ಐತಲ್ಲ, ಬೆಳಗ್ಗೆ ಮೂರೂವರೆಗೆಲ್ಲ ಎದ್ದು ಹೋಯ್ತಿನಿ. ಬೆಳಗಿನ ಜಾವದ ನಿದ್ದೇನ ಸಕ್ಕರೆ ನಿದ್ದೆ ಅಂತಾರೆ; ನಲವತ್ತು ವರ್ಷದಿಂದ ಅಂತ ನಿದ್ದೇನೂ ಮಾಡಿಲ್ಲ, ಸಕ್ಕರೆ ಕಾಯಿಲೆನೂ ಇಲ್ಲ. ಮದ್ಲು ತರಕಾರಿನ ಗುಡ್ಡೆ ಹಾಕಿ ಹರಾಜಾಕರು, ನಾವು ಅವರೇಳಿದ್ ರೇಟ್ ಕೊಟ್ ತರಬೇಕಿತ್ತು. ಈಗ ರೈತರು ಚೀಲದಲ್ಲಿ ಇಟ್ಕೊಂಡು ಕೂತಿರ್ತರೆ, ಒಂದೊಂದ್ ದಿನ ಒಂದೊಂದ್ ಥರದ ತರಕಾರಿ ಬಜಾರಿಗೆ ಬತ್ತದೆ. ಒಬ್ಬೊಬ್ಬರು ಒಂದೊಂದು ರೇಟ್ ಹೇಳ್ತರೆ. ನನ್ ಜನಕ್ಕೆ ಏನು ಬೇಕೋ ಅದುನ್ನ ಯಾಪಾರ ಮಾಡ್ಕಂಡು ತತ್ತಿನಿ. ಮನಿಗ್ಬಂದು ಕೈ-ಕಾಲು ತೊಳ್ದು, ಚೀಲದಿಂದ ತರಕಾರಿನೆಲ್ಲ ಸುರ್‍ಕಂಡ್ ಗಾಡಿಗೆ ಜೋಡ್ಸಕ್ಕೆ ನಿಂತ್ರೆ, ಆರೂವರೆ ಏಳಾಯ್ತದೆ. ಆಮೇಲೆ ಹಿಂಗ್ ಏರಿಯಾ ಮೇಲೆ ಹೊಂಟುಬುಡ್ತಿನಿ. ಇವತ್ ನಿಮ್ ಏರಿಯಾ, ನಾಳಿಕ್ಕೆ ಪಕ್ಕದ್ದು, ನಾಡಿದ್ದು ಮತ್ತೆ ನಿಮ್ ಏರಿಯಾ. ಇವತ್ತು ತಗಂಡರು, ನಾಳಿಕ್ಕೂ ಅದನ್ನೇ ಇಟ್ಕಂಡಿರ್ತರೆ… ಅದ್ಕೆ ಒಂದಿನ್ ಬುಟ್ಟು ಬತ್ತಿನಿ…”
“ಗಾಡಿ ತಳ್ಳದು ಕಷ್ಟ ಆಗಕಿಲ್ಲವಾ ತಾತ?”
“ಆಯ್ತದೆ… ಯಾರಿಗ್ ಕಷ್ಟ ಇಲ್ಲ? ಕಷ್ಟಪಡಬೇಕು ಕಣಪ್ಪಾ, ಹಿಟ್ಟುಣ್ಣಬೇಕು ಅಂದ್ರೆ ಕಷ್ಟಪಡಬೇಕು. ನಮ್ ಹಣೆಬರಹದಲ್ಲಿ ತಳ್ಳಬೇಕು ಅಂತಿದ್ರೆ, ಯಾರ್ ಏನು ಮಾಡ್ತರೆ? ಮಳೆ, ಚಳಿ, ಬಿಸ್ಲೂ ಎಲ್ಲ ನನಗಿಂತ ಮುಂಚೆನೇ ಇದ್ದೋ, ನಾನ್ ಹೋದ್ಮೇಲೂ ಇರ್‍ತವೆ. ಅವುಕ್ಕೆ ನಾವ್ ಬಗ್ಬೇಕು, ಅವುನ್ನ ಬಗ್ಗಸಕೋದ್ರೆ ಆಯ್ತದಾ?”
ಈ ಆಡಿಯೊ ಕೇಳಿದ್ದೀರಾ?: ಮಳೆಗಾಲದ ಕತೆಗಳು -1: ಎಮ್ ಎನ್ ನೇಹಾ | ಒಲೆಯ ಮುಂದಿನ ಅಮ್ಮ-ಮಗಳು
“ಎಷ್ಟು ವರ್ಷದಿಂದ ಹಿಂಗ್ ತಳ್ತಿದೀರ ತಾತ?”
“ಅಯ್ಯೋ… ಅದೆಲ್ಲ ಯಾಕೆ? ನನ್ ಕತೆ ಯಾರಿಗೆ ಬೇಕು? ನಾವ್ ದುಡೀಬೇಕು ನಾವ್ ತಿನ್ನಬೇಕು, ನಮಗ್ ನಾವೆ…”
“ಸುಮ್ನೆ ಕೇಳ್ದೆ ತಾತ… ಬೇಜಾರು ಮಾಡ್ಕಬೇಡಿ…”
“ಬೇಜಾರ್ ಯಾಕಪ್ಪಾ… ನಮ್ ಕತೆನ ಯಾರ್ ಕೇಳ್ತರೆ ಅಂತ… ನಾನೇನ್ ಮೈಸೂರ್ ಮಹರಾಜ್ನೆ?” ಎಂದು ತಮ್ಮ ಬಗ್ಗೆ ತಾವೇ ಬೇಸರಿಸಿಕೊಂಡರು.
ಆನಂತರ ಅವರಿಗೆ ಅವರೇ ಸಮಾಧಾನಿಸಿಕೊಂಡು… “ನಲವತ್ತು ವರ್ಷದಿಂದ ಈ ಯಾಪಾರ ಮಾಡ್ತಿದೀನಿ. ಹುಟ್ಟಿ ಬೆಳೆದದ್ದೆಲ್ಲ ಇಲ್ಲೆ ಶ್ರೀನಿವಾಸ ನಗರದಲ್ಲಿ. ಸ್ಲೇಟು-ಬಳಪ ಹಿಡಿದೋನಲ್ಲ. ಸ್ಕೂಲಿಗೆ ಹೋದೋನೂ ಅಲ್ಲ. ತಿರಗಾಡಕಂಡೇ ಕಾಲ ಕಳೆದುಬುಟ್ಟೆ. ಆಮೇಲೆ ನಿಧಾನಕ್ಕೆ ಬುದ್ದಿ ಬಂದ ಮೇಲೆ ಕೈಗೆ ಸಿಕ್ಕಿದ ಕೆಲಸ ಮಾಡ್ತಿದ್ದೆ. ತರಕಾರಿ ಯಾಪಾರ ಮಾಡಕ್ಕೆ ಸುರು ಮಾಡ್ದೆ. ಮೊದ್ಲು, ಬಸವನಗುಡಿ, ಚಾಮರಾಜಪೇಟೆ, ನೆಟ್ಟಕಲ್ಲಪ್ಪ ಸರ್ಕಲ್, ಎನ್ ಆರ್ ಕಾಲನಿ, ಜಯನಗರ, ತಿಲಕನಗರ, ಮಡಿವಾಳದವರೆಗೆ ಹೋಯ್ತಿದ್ದೆ. ಆಗೆಲ್ಲ ಈ ಏರಿಯಾ ಎಲ್ಲ ಎಲ್ಲಿದ್ದೋ? ಈಗ, 20 ವರ್ಷದಲ್ಲಿ ಆಗಿರದು…”
“…ಅಯ್ಯೋ ಆಗಿನ ಕತೆ ಕೇಳು ನೀನು… ವಯಸ್ಸಿತ್ತಲ್ಲ, ಕುಡಿಯ ಚಟಿತ್ತು. ಹೆಂಗ್ ಕುಡಿತಿದ್ದೆ ಅಂದ್ರೆ, ನನ್ ಪಕ್ಕ ಹೆಂಗಸ್ರು ನಿಂತ್ಕಳಕೆ ಹೆದರುತಿದ್ರು, ಸೆರಗಿನಿಂದ ಮೂಗು ಮುಚ್ಕಳರು. ಗಬ್ ಅಂತ ವಾಸ್ನೆ ಹೊಡೆಯದು. ಆ ವಾಸ್ನೆ ಹೋಗ್ಲಿ ಅಂತ ಎಲೆಯಡಿಕೆ ಆಕ್ತಿದ್ದೆ. ಏನೇನೋ ತಿಂತಿದ್ದೆ. ಆಮೇಲ್ಯಾಕೋ ನಂಗೇ ಬೇಜಾರಾಯ್ತು, ಬುಟ್ಟೆ. ಕುಡಿಯದ್ ಬುಟ್ಟು 18 ವರ್ಷ ಆಯ್ತು ನೋಡು. ಇವತ್ತಿನವರ್ಗೂ ಒಂದ್ ತೊಟ್ ಮುಟ್ಟಿಲ್ಲ. ಅಷ್ಟೇ ಅಲ್ಲ, ಕಾಲಿಗ್ ಚಪ್ಲಿನೂ ಹಾಕ್ತಿರಲಿಲ್ಲ. ಈಗ ಹಾಕ್ಕತೀನಿ. ಹಂಗೇ ಬೇಜಾರಾದಾಗ ಬೀಡಿನೂ ಸೇದ್ತಿನಿ. ಇಷ್ಟೇ ನನ್ ತೆವ್ಲು ನೋಡು…”
ಈ ಆಡಿಯೊ ಕೇಳಿದ್ದೀರಾ?: ಮಳೆಗಾಲದ ಕತೆಗಳು – 2: ಪ್ರಕಾಶ್ ಅಲ್ಬುಕರ್ಕ್ | ಬಿರುಮಳೆಯಲ್ಲಿ ಕಾಡಿನ ನಡುವೆ ಬುಲೆಟ್ ಕೈ ಕೊಟ್ಟ ಆ ದಿನ…
“ಹತ್ತು ಗಂಟೆಯಾಯ್ತು… ತಿಂಡಿ ತಿನ್ನದಿಲ್ವಾ ತಾತ?”
“ತಿನ್ನಬೇಕಣಪ್ಪಾ… ಆದ್ರೆ ಯಾಪಾರಾನೆ ಆಗಿಲ್ಲ. ನೀನೇ ನೋಡ್ದಲ್ಲ, ಅಲ್ಲಿಂದ ಇಲ್ಲಿವರ್‍ಗೆ ಕೂಕ್ಕಬಂದಿದ್ದೇ ಆಯ್ತು, ನರ ಹರಕ್ಕಂಡಿದ್ದೇ ಬಂತು, ಯಾರಾದ್ರು ಬಂದ್ರಾ, ತಗಂಡ್ರಾ…? ಹ್ಯೆಂಗ್ ತಿನ್ಲಿ ತಿಂಡಿಯಾ? ಹಿಂಗೊಂದ್ ರೌಂಡ್ ಹೋಯ್ತಿನಿ, ಆಯ್ತದೆ, ತಿಂತಿನಿ. ದಿನಾ ಇದ್ದದ್ದೇ ಇದು…”
“ದಿನಕ್ಕೆ ಎಷ್ಟು ವ್ಯಾಪಾರ ಆಗ್ತದೆ ತಾತ?”
“ನೋಡಪ್ಪ, ಇದೆಲ್ಲ ಸೇರಿ ಐದ್ ಸಾವಿರ ಬಂಡವಾಳ. ಬೆಳಗ್ಗೆ ಆರಕ್ಕೊಂಟ್ರೆ ಸಂಜೆ ಆರಾಯ್ತ”ನೋಡಪ್ಪ, ಇದೆಲ್ಲ ಸೇರಿ ಐದ್ ಸಾವಿರ ಬಂಡವಾಳ. ಬೆಳಗ್ಗೆ ಆರಕ್ಕೊಂಟ್ರೆ ಸಂಜೆ ಆರಾಯ್ತದೆ, ಮನಗೋಗದು. ನನ್ ಅದೃಷ್ಟಕ್ಕೆ ಎಲ್ಲಾ ಖಾಲಿಯಾದ್ರೆ ಏಳುನೂರ್-ಎಂಟುನೂರಕ್ಕೇನು ಮೋಸಿಲ್ಲ. ದಿನದಲ್ಲಿ ಯಾರಾದ್ರು ಒಬ್ರು ಸಾಲ ನಿಲ್ಲಸ್ತರೆ, ಅದೂ ನೂರಿನ್ನೂರು ಮಾತ್ರ. ಕೆಲವ್ರು ಕೊಡ್ತರೆ, ಇನ್ ಕೆಲವ್ರು ಮರೆತೋದಂಗೆ ನಾಟ್ಕ ಆಡ್ತರೆ. ಗೊತ್ತಾಯ್ತದೆ ನಂಗೆ… ಅಂತೋರ್‍ನ ಅಲ್ಲಿಗೇ ಬುಟ್ಟು ಮುಂದಕ್ಕೋಯ್ತಿರ್‍ತಿನಿ. ಇಬ್ರು ಹೆಣ್ಮಕ್ಕಳಿದ್ರು, ಇಬ್ರಿಗೂ ಮದ್ವೆ ಮಾಡಿ ಕಳ್ಸಿದೀನಿ. ಯಾರ್‍ಗೂ ಕೊಡಂಗಿಲ್ಲ, ಯಾರೂ ಕೇಳೋದು ಇಲ್ಲ. ನಾನೂ ನನ್ ಹೆಂಡ್ತಿ ಇಬ್ರೆ. ಮದ್ಲು ಅವ್ಳು ಮನೆಕೆಲಸಕ್ಕೋಯ್ತಿದ್ಲು. ಈಗ ಆಗದಿಲ್ಲ. ನಾನೇ ಬ್ಯಾಡ ಅಂದಿದೀನಿ. ಶ್ರೀನಿವಾಸ ನಗರದಲ್ಲಿ ಬಾಡಿಗೆ ಮನೆ. ಸಾಲ ಐತೆ, ಬಡ್ಡಿ ಕಟ್ಬೇಕು. ಎಲ್ರಿಗೂ ಇದ್ದಂಗೆ ನನ್ಗು ಐತೆ, ಇರ್‍ಲಿ. ಈ ಗಾಡಿ ಐತಲ್ಲ, ಇದೇ ನನ್ನ ಆಸ್ತಿ. ಈ ತಕ್ಕಡಿ, ಬಟ್ಟುಗಳು, ಒಂದಿಷ್ಟು ಪ್ಲಾಸ್ಟಿಕ್ ಕವರ್ ಇಷ್ಟಿದ್ರೆ, ನನ್ ಯಾಪಾರ. ಈ ಗಾಡಿ ರೆಡಿ ಮಾಡ್ಸಿ ಐದೊರ್ಷ ಆಯ್ತು. 15 ಸಾವಿರ ಕೊಟ್ರೆ ಕಲಾಸಿಪಾಳ್ಯದಲ್ಲಿ ಒಂದು ದಿನಕ್ಕೆ ರೆಡಿ ಮಾಡಿಕೊಡ್ತರೆ. ಇದು ನನ್ನ ಐದನೇ ಗಾಡಿ. ಅದುನ್ನ ನಾನ್ ತಳ್ತಿನಿ, ಅದು ನನ್ ತಳ್ತದೆ. ಹಿಂಗೇ ಜೀವನ ಮುಗ್ದೆಹೋಯ್ತಪ್ಪಾ…”

“ಮಳೆ-ಗಿಳೆ ಬಂದು ಉಳುದ್ರೆ?”
“ಅದ್ಕೇನು ಮಾಡಕ್ಕಾಯ್ತದೆ, ಎಲ್ಲಾರ್‍ಗೂ ಆಗಂಗೆ ನನ್ಗೂ ಆಯ್ತದೆ! ದಿನಾ ದುಡ್ ನೋಡಕ್ಕಾಯ್ತದಾ? ಕತ್ಲು-ಬೆಳ್ಕು ಇರಂಗೆ ಲಾಭ-ನಷ್ಟ ಎಲ್ಲ ಇರಬೇಕು. ಅದಿದ್ರೇ ಯಾಪಾರ. ಈಗ ಸುಮಾರ್ ದಿನ ಮಳೆ ಹಿಡ್ಕತ್ತು… ತರಕಾರಿ ಕೊಳ್ತೋದೋ… ಏನ್ಮಾಡದು? ತಿನ್ನೋವಷ್ಟು ತಿನ್ನದು, ಮಿಕ್ಕದವು ಅಕ್ಕಪಕ್ಕದೋರಿಗೆ ಕೊಡದು…”
“ಕಾಯಿಲೆ ಬಂದು ಮಲಗಿದ್ದೇನಾದ್ರು ಇದೆಯಾ?”
“ಅದ್ಯಂತದೋ ಬತ್ತಲ್ಲ… ಕೊರೊನಾ ಅಂತ. ಮಣ್ ತಿಂದುಬುಟೋ. ಅವತ್ತಿಂದ್ ಅವತ್ಗೆ ದುಡ್ದು ತಿನ್ನೋ ಜನ ನಾವು. ತಿಂಗಳಾನುಗಟ್ಟಳೆ ಮನೆಯಿಂದ ಹೊರಗೆ ಬರಂಗಿಲ್ಲ ಅಂದ್ರೆ ಏನ್ಮಾಡದು? ಯಾಪಾರ ಹೋಗ್ಲಿ, ತಿನ್ನಕ್ಕೂ ಏನೂ ಇಲ್ದಂಗಾಗೋಯ್ತು. ದೇವರು ದೊಡ್ಡೋನು, ನಮ್ಗೇನು ಕೊರೊನಾ ಅಂಟ್ಕಳಿಲ್ಲ. ಊಟಿಲ್ಲದೆ ಹಂಗೇ ಸತ್ತೋದ್ರು ಬೇಜಾರಿಲ್ಲ, ಆದ್ರೆ ಆಸ್ಪತ್ರೆ ಅಲೆಯದ್ ಬ್ಯಾಡ ಕಣಪ್ಪಾ. ಆಮ್ಯಾಲೆ ನಮ್ ಜನವ್ರಲಪ್ಪಾ, ಇನ್ನೂ ಒಳ್ಳೇರವರೆ. ಆ ಟೇಮಲ್ಲಿ ದವಸ-ಧಾನ್ಯ ಎಲ್ಲ ಕೊಟ್ರು. ಹ್ಯೆಂಗೋ ಕಾಲ ಹಾಕ್ದೊ. ಸಾಲ ಕೊಟ್ಟೋರು ಕೂಡ ಬಡ್ಡಿ ಬುಟ್ರು. ಕಾಲ ನೂಕೆಬುಟ್ಟೊ…”
ನಡೆ-ನುಡಿಯಲ್ಲಿ ಒರಟರಂತೆ ಕಾಣುವ ತರಕಾರಿ ತಾತ ತಿಳಿನೀರ ಕೊಳದಂತಹ ವ್ಯಕ್ತಿತ್ವದವರು. ಸುತ್ತಮುತ್ತಲ ಸಮಾಜ ತಮ್ಮನ್ನು ಕೈ ಹಿಡಿದಿದೆ, ಕಾಪಾಡಿದೆ, ನಾನ್ ಜನರಿಗೆ ಒಳ್ಳೆಯದು ಮಾಡಬೇಕು ಎಂಬ ಸರಳ ನ್ಯಾಯಕ್ಕೆ ನಿಷ್ಠರಾದವರು. ಇದ್ದಕ್ಕಿದ್ದಂತೆ ಜೋರಾಗಿ, “ಆರೋಗ್ಯಕ್ಕೊಳ್ಳೇದು ತರಕಾರಿ…” ಎಂದು ಕೂಗತೊಡಗಿದರು. ಅವರು, ಅವರ ತರಕಾರಿ ಗಾಡಿಯ ಫೋಟೊ ತೆಗೆಯತೊಡಗಿದೆ. ತಕ್ಷಣ, “ಯಾಕಪ್ಪಾ… ಪೊಲೀಸ್ನೋರಿಗೇನಾದ್ರು ಕೊಡಕಾ? ನಾನೇ ಎಲ್ಲಾ ಹೇಳಿದಿನಲ್ಲ, ಅಲ್ಲೂ ಅದೇ ಹೇಳ್ತಿನಿ ನಡಿ. ಯಾರ್‍ಗೇನ್ ಹೆದರಕಳದಿಲ್ಲ, ನಾನೇನ್ ಮುಚ್ಚಿಟ್ಟಿಲ್ಲ. ಇಷ್ಟು ದಿನ ತರಕಾರಿ ಕೊಟ್ಟು ಜನ್ರ ಆರೋಗ್ಯ ಕಾಪಾಡಿದೀನಿ, ಜನ್ರಿಗೆ ಬೇಕಾದ್ರೆ ಬುಡಸ್ಕತರೆ,” ಎಂದು ಜೇಬಿನಿಂದ ಬೀಡಿ ಕಟ್ ತೆಗೆದು, ಒಂದು ಬೀಡಿ ಎಳೆದು ಬಾಯಿಗಿಟ್ಟು ಕಡ್ಡಿ ಗೀರಿದರು. ದಮ್ ಎಳೆದು, ಪುಸ್ ಪುಸ್ ಅಂತ ಹೊಗೆ ಬಿಟ್ಟು, “ತರಕಾರೀ…” ಎಂದು ರಾಗವಾಗಿ ಕೂಗುತ್ತಾ ಗಾಡಿ ತಳ್ಳತೊಡಗಿದರು.
ಬರಹಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ
ನಿರೂಪಣೆ ಮಾತ್ರ ಅದ್ಭುತ. ಮನ ಮುಟ್ಟುವಂತಿತ್ತು ಸಂಭಾಷಣೆ….