“ಮಣ್ ಮುಚ್ಚೋದು ಮನ್ಸಿಗೆ ಕಷ್ಟ ಕೊಡ್ತದೆ, ಅದ್ನ ಮರಿಯಕ್ಕೆ ನಾವು ಕುಡಿತಿವಿ. ನಾವು ಒಟ್ಟು ಹನ್ನೆರಡು ಜನ ಇದ್ದೋ, ಈಗ ಮೂರು ಜನಾಗಿದೀವಿ. ಆ ಒಂಬತ್ ಜನ ಕುಡ್ದೇ ಸತ್ತೋದ್ರು. ಆಗ ಬೆಳಗ್ಗೆ ಆರು ಗಂಟೆಗೇ ಕುಡಿತಿದ್ದೆ, ಎಲ್ಲೆಂದ್ರಲ್ಲಿ ಚೆಲ್ಲಾಡೋಯ್ತಿದ್ದೆ. ಕುಡಿಯದ್ ಬುಟ್ಟು ಇಲ್ಲಿಗೆ ಅದ್ನಾರು ವರ್ಷ ಆಯ್ತು…”
(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಆ್ಯಪ್)
ಶ್ರೀರಾಮಪುರದ ಬಳಿಯ ಹರಿಶ್ಚಂದ್ರ ಘಾಟ್ ಸ್ಮಶಾನ. ಗೇಟು ದಾಟಿ ಒಳಗೆ ಹೋಗುತ್ತಿದ್ದಂತೆ ದೊಡ್ಡ-ದೊಡ್ಡ ಮರಗಳು. ಕಾಗೆ-ಗೂಬೆ-ಹದ್ದುಗಳ ಹಾರಾಟ. ಎತ್ತ ನೋಡಿದರೂ ಗೋರಿಗಳು. ಕಾಲಿಡಲೂ ಜಾಗವಿಲ್ಲದಷ್ಟು, ಅಕ್ಕ-ಪಕ್ಕ, ಒಂದರ ಮೇಲೊಂದು ಗೋರಿಗಳು. ಅವರವರ ಆಳ್ತನಕ್ಕೆ ತಕ್ಕಂತೆ ಗೋರಿಗಳಿಗೆ ಮಾರ್ಬಲ್ಲು, ಕಡಪಾ ಕಲ್ಲು, ಕಬ್ಬಿಣದ ಸರಳುಗಳ ವಿನ್ಯಾಸ, ಹೆಸರು ಕೆತ್ತನೆ-ಅಳಿದರೂ ಉಳಿಸಿಹೋಗುವ ಹಠ. ಎಲ್ಲೋ ಕೆಲವು ಮಣ್ಣಿನ ಗುದ್ದುಗಳು. ಅವುಗಳ ಮೇಲೆ ಒಣಗಿದ ಹೂವು, ಚೆಲ್ಲಾಡಿದ ಹರಿಶಿನ-ಕುಂಕುಮ, ಉರಿದ ಊದುಬತ್ತಿ ಕಡ್ಡಿಗಳು – ವಿಚಿತ್ರ ವಾಸನೆಯನ್ನು, ನಾಗರಿಕ ಜಗತ್ತಿನೊಳಗಿದ್ದು ಬೇರೆಯದೇ ಲೋಕವನ್ನು ತೆರೆದು ತೋರಿತ್ತು.
ಯಾವುದೋ ಒಂದು ಗೋರಿಯ ಮೇಲೆ ಬೆಳಗಿನ ಹತ್ತು ಗಂಟೆ ಸಮಯದಲ್ಲಿ ಮಧ್ಯವಯಸ್ಕರೊಬ್ಬರು ಮಲಗಿದ್ದರು. ಗೋರಿಯ ಒಳಗಾದರೆ ಶವ, ಮೇಲಾದರೆ? ಬದುಕಿರುತ್ತಾರೆ, ಸ್ಮಶಾನಕ್ಕೆ ಸಂಬಂಧಿಸಿದವರೇ ಆಗಿರುತ್ತಾರೆ ಎಂಬ ನಂಬಿಕೆಯ ಮೇಲೆ ಮುಟ್ಟಿ, “ನಮಸ್ಕಾರ…” ಎಂದೆ. ಎದ್ದರು, ನಮಸ್ಕರಿಸಿದರು. “ಗುಂಡಿ-ಗಿಂಡಿ ಏನಾದ್ರೂ?” ಎಂದು ಪ್ರಶ್ನಾರ್ಥಕವಾಗಿ ನೋಡಿದರು.
“ಸಾವೇನೂ ಆಗಿಲ್ಲ… ನಿಮ್ಮನ್ನೇ ನೋಡಲು, ಮಾತನಾಡಿಸಲು ಬಂದೆ,” ಎಂದು ಪತ್ರಿಕೆ, ಪತ್ರಕರ್ತ ಎಂದೆಲ್ಲ ವಿವರಿಸಿದೆ. “ಗುಂಡಿ ತೆಗಿಯಂಗಿಲ್ಲ ಅಂದ್ಮೇಲೆ ಮಾತಾಡಿ ಪ್ರಯೋಜನವಿಲ್ಲ. ನಾವಂಥ ದೊಡ್ ಜನಾನೂ ಅಲ್ಲ,” ಎಂದು ಮುಖ ನೋಡಿದರು. ಜೊತೆಗೆ ಸುಖಾಸುಮ್ಮನೆ ಸ್ಮಶಾನದೊಳಗೆ ಬರೋದು, ಯಾರಿಗೂ ಬೇಡವಾದ ನಮ್ಮಂಥೋರನ್ನು ಮಾತನಾಡಿಸೋದು, ಇದರಿಂದ ಇವರಿಗೇನೋ ಲಾಭ ಇರಬಹುದು ಎಂಬ ಅನುಮಾನವೂ ಅವರ ಮುಖದ ಮೇಲೆ ಸುಳಿದಾಡಿತು.
ಅವರ ಅನುಮಾನ ಹೋಗಲಾಡಿಸಲು “ತಿಂಡಿ ತಿಂದ್ರಾ?” ಎಂದು ಮಾತಿಗೆಳೆದೆ. “ಬೆಳಗಿಂದ ಯಾವ ಬಾಡಿನೂ ಬಂದಿಲ್ಲ, ತಿಂದಿಲ್ಲ…” ಎಂದು ಮಾತು ತುಂಡರಿಸಿ, ಮುಖವನ್ನು ಮತ್ತೊಂದು ದಿಕ್ಕಿಗೆ ತಿರುಗಿಸಿ ಕೂತರು. “ಬನ್ನಿ, ತಿಂಡಿ ಮಾಡ್ಕೊಂಡ್ ಬರೋಣ,” ಎಂದಿದ್ದಕ್ಕೆ “ಬ್ಯಾಡ ಬುಡಿ…” ಎಂದವರು ಅರೆಕ್ಷಣ, “ದಿನಾ ಬತ್ತಿರ!” ಎಂದು ವ್ಯಂಗ್ಯವಾಗಿ ಮುಖ ನೋಡಿದರು.
ಅವರ ಹೆಸರು ಕೃಷ್ಣಪ್ಪ. ವಯಸ್ಸು 56. ಹರಿಶ್ಚಂದ್ರ ಘಾಟ್‌ನಲ್ಲಿ ಗುಂಡಿ ತೋಡುವುದು, ಮುಚ್ಚುವುದು, ಗುದ್ದು ಮಾಡುವುದು ಅವರ ಕೆಲಸ. ಮಾಸಿದ ಶರ್ಟು-ಪ್ಯಾಂಟು, ಕಾಲಿಗೆ ಚಪ್ಪಲಿ, ಜೇಬಲ್ಲಿ ಬೀಡಿ ಬೆಂಕಿ ಪೊಟ್ಟಣ, ಮೊಬೈಲ್ ಫೋನು, ಜೊತೆಗೆ ಗುದ್ದಲಿ, ಹಾರೆ, ಬಾಂಡ್ಲಿ- ಅಷ್ಟೇ ಅವರ ಆಸ್ತಿ. ಓದಲಿಕ್ಕೆ-ಬರೆಯಲಿಕ್ಕೆ ಬಾರದ, ದೈಹಿಕ ಶ್ರಮ ನೆಚ್ಚಿ ಕಳೆದ 38 ವರ್ಷಗಳಿಂದ ಬದುಕು ನೂಕುತ್ತಿರುವ ಕೃಷ್ಣಪ್ಪನವರ ಮುಖದ ಮೇಲಿನ ವ್ಯಂಗ್ಯವನ್ನು ಹೋಗಲಾಡಿಸಲು, “ಜಾಗ ಖಾಲಿ ಇಲ್ಲ ಎಂದು ಬೋರ್ಡ್ ಹಾಕಿದ್ದಾರಲ್ಲ, ಸತ್ರೂ ಜಾಗಿಲ್ವಾ, ಆರಡಿ-ಮೂರಡಿನೂ ಇಲ್ದಂಗಾಗೋಯ್ತ?” ಎಂದೆ.
“ಜನ ಜಾಸ್ತಿ ಆದ್ರೆ ಏನ್ ಮಾಡದು? ಈಗ ನೋಡಿ… ನಾನ್ ಚಿಕ್ಕೋನಾಗಿದ್ದಾಗ ಹರಿಶ್ಚಂದ್ರ ಘಾಟ್ ಅಂದ್ರೆ ಕಾಡ್ ಥರ ಇತ್ತು. ಜನ ಈ ಕಡಿಕೆ ಸುಳಿತಿರಲಿಲ್ಲ. ಮರ- ಮಶಾಣ – ಗೌವ್ಗತ್ಲು ನೋಡಿ ಭಯಕ್ ಬೀಳರು. ಆಗ ಜನ ಕಮ್ಮಿ ಇದ್ರು, ಗುಂಡಿ ಜಾಸ್ತಿ ತೋಡ್ತಿದ್ದೆ. ಈಗ ಜನ ಜಾಸ್ತಿ ಆಗವ್ರೆ, ಜಾಗ ಇಲ್ದಂಗಾಗದೆ; ಬರ್ನಿಂಗ್ ಬಂದದೆ, ಗುಂಡಿ ತೋಡ್ದಂಗಾಗದೆ. ಊಣಕೆ ಜಾಗವೇ ಇಲ್ದೆ ಹೋದ್ರೆ ಏನ್ಮಾಡ್ತರೆ, ಬೋರ್ಡು ಹಾಕ್ತರೆ, ಇನ್ನೊಂದು ಹಾಕ್ತರೆ…” ಎಂದು ಸ್ಮಶಾನದ ಇಹ-ಪರಗಳನ್ನು ತೆರೆದಿಟ್ಟರು.
“ಆಗ ದಿನಕ್ಕೆ ಎಷ್ಟು ಗುಂಡಿ ತೋಡ್ತಿದ್ರಿ?” ಎಂದೆ. “ಆಗ ನಾವು ಹನ್ನೆರಡು ಜನ ಇದ್ದೋ. ದಿನಕ್ಕೆ ಏನಿಲ್ಲ ಅಂದ್ರು ಐದಾರು ಗುಂಡಿ ತೋಡತಿದ್ದೊ. ವಯಸ್ಸೂ ಇತ್ತು, ಒಳ್ಳೆ ದುಡ್ಡೂ ಸಿಕ್ತಿತ್ತು. ಈಗ ಮಶಾಣನೂ ಒತ್ತುವರಿ ಆಯ್ತಾ ಬಂದು ನಾಕೆಕರೆ ಉಳದದೆ. ಅದರಲ್ಲೂ, ಆ ಕಡಿಕೆ ಸಾಬ್ರುದು, ಈ ಕಡಿಕೆ ಸೌದೆ ಸುಡೋದು, ಪಕ್ಕಕ್ಕೆ ಕರೆಂಟ್ ಬರ್ನಿಂಗೂ, ಎಲ್ಲ ಇದರೊಳಗೆ ಆಗಬೇಕು, ಜಾಗಯಿಲ್ದಂಗಾಗದೆ,” ಎಂದು ನಿಟ್ಟುಸಿರುಬಿಟ್ಟರು.
“ಹಂಗಾದ್ರೆ ಈಗ ಯಾರೂ ಗುಂಡಿ ತೋಡಿಸಲ್ಲ… ಮತ್ತೆ ನೀವ್ ಯಾರಿಗೆ ಕಾಯ್ತಿದ್ದೀರ?” ಎಂದೆ. “ಸಣ್ ಮಕ್ಳು ಸಾಯ್ತವಲ್ಲ… ಮಕ್ಳನ್ನ ಬರ್ನ್ ಮಾಡದಿಲ್ಲ, ಸೌದೆ ಸುಡೋದು ಈಗಿಲ್ಲ, ಊಣ್ತರೆ. ಆದ್ರೆ ನಮ್ ಮಶಾಣದಲ್ಲಿ ಜಾಗವೇ ಇಲ್ಲ. ಏನಾದ್ರು ಮಾಡಿ ಜಾಗ ಮಾಡಿಕೊಡಿ ಅಂತ ಕೇಳ್ಕತರೆ, ಇಲ್ಲ ಅನ್ನಕ್ಕಾಗದಿಲ್ಲ. ಹೆಜ್ಹೆಜ್ಜೆಗೂ ಗೋರಿಗಳೇ, ಅವುಗಳ ನಡುವೆಯೇ ಹಂಗೂ ಹಿಂಗೂ ಜಾಗ ಮಾಡಿ, ಗುಂಡಿ ತೋಡಿಕೊಡ್ತಿವಿ. ಒಂದರ ಮೇಲೊಂದು ಹೆಣ ಬೀಳ್ತವೆ, ಏನ್ಮಾಡದು? ಹುಟ್ಟಿದ ತಕ್ಷಣ ಅದು ಇದು ಆಗಿ ಮಕ್ಕಳು ಸತ್ತರೆ ಏನು ಅನ್ನಸಲ್ಲ. ಕೈಯಿಗ್ ಬಂದು, ಎತ್ತಾಡಿಸಿದ ಮಕ್ಳು, ಆಡೋ ಮಕ್ಳು, ಬೆಳೆದುನಿಂತ ಮಕ್ಳು ಸತ್ರೆ, ಸೈಸಕ್ಕಾಗದಿಲ್ಲ. ಅಪ್ಪ-ಅಮ್ಮಂದಿರ್ ಬುಡಿ, ಮಣ್ ಮುಚ್ವಾಗ ನಮ್ಗೇ ನೋವಾಯ್ತದೆ. ಕರುಳು ಕಿವುಚ್ತದೆ, ಸಂಕಟಾಯ್ತದೆ. ಮಣ್ ಮುಚ್ಚದಿದ್ಯಲ್ಲ… ಒಬ್ ವ್ಯಕ್ತಿನ ಈ ಪ್ರಪಂಚದಿಂದ ಇಲ್ದಂಗ್ ಮಾಡೋ ಕೆಲ್ಸ. ಮನ್ಸಿಗೆ ಬಾಳ ಕಷ್ಟ ಕೊಡೋ ಕೆಲ್ಸ. ಇದ್ ಬುಟ್ರೆ ಬ್ಯಾರೆ ಕೆಲ್ಸ ಗೊತ್ತಿಲ್ಲ. ಹಂಗಾಗಿ ಹಲ್ ಕಚ್ಕಂಡ್ ಮಾಡ್ಕಂಡ್ ಹೋಯ್ತಿದೀನಿ…” ಎಂದರು.
“ಮಣ್ ಮುಚ್ಚೋದು ಕಷ್ಟದ ಕೆಲ್ಸ ಅಂದ್ರಿ, ಅದಕ್ಕೇ ಏನೋ… ಗುಂಡಿ ತೋಡೋರು ಸಾಮಾನ್ಯವಾಗಿ ಕುಡಿಯದ್ ಕಲಿತರೆ, ಅಲ್ವಾ?” ಎಂದೆ.
“ಮಣ್ ಮುಚ್ಚೋದು ಮನ್ಸಿಗೆ ಕಷ್ಟ ಕೊಡ್ತದೆ, ಅದ್ನ ಮರಿಯಕ್ಕೆ ನಾವು ಕುಡಿತಿವಿ. ನಾವು ಒಟ್ಟು ಹನ್ನೆರಡು ಜನ ಇದ್ದೋ, ಈಗ ಮೂರು ಜನಾಗಿದೀವಿ. ಆ ಒಂಬತ್ ಜನ ಕುಡ್ದೇ ಸತ್ತೋದ್ರು. ಆಗ ಬೆಳಗ್ಗೆ ಆರು ಗಂಟೆಗೇ ಕುಡಿತಿದ್ದೆ, ಎಲ್ಲೆಂದ್ರಲ್ಲಿ ಚೆಲ್ಲಾಡೋಯ್ತಿದ್ದೆ. ಮಶಾಣದ ಕ್ವಾಟ್ರಸ್ಸಲ್ಲೇ ಮನಿತ್ತು. ಸಂಸಾರೆಲ್ಲ ಇಲ್ಲೇ ಇತ್ತು. ಇಬ್ಬರು ಮಕ್ಕಳು, ಬೆಳೆದು ನಿಂತೋ… ಮಗ ಹತ್ತನೇ ಕ್ಲಾಸ್‌ಗೆ ಹೋಗ್ವಾಗ ಒಂದಿನ, ‘ಅಪ್ಪ, ನೀನಿಂಗ್ ಕುಡಿತಿದ್ರೆ, ನಾನ್ ಮನೆ ಬುಟ್ಟು ಹೋಯ್ತಿನಿ, ತಿರ್ಗಿ ಬರದಿಲ್ಲ’ ಅಂದ. ನನ್ ಹೆಂಡ್ತಿದ್ದೋಳು, ‘ಮಶಾಣಾಂತ ಈಗ್ಲೇ ನಮ್ ಮನಿಗ್ ಯಾರೂ ನೆಂಟರಿಷ್ಟರು ಬರದಿಲ್ಲ, ಹೆಣ್ಮಗೈತೆ, ಮುಂದಕ್ಕೆ ಮದ್ವೆ ಮಾಡ್ಬೇಕು, ಬರೋರು-ಹೋಗೋರು ಯಾರ್ ಬತ್ತರೆ’ ಅಂದ್ಲು. ಅವತ್ತೆ ಶಪಥ ಮಾಡ್ದೆ, ಕುಡಿಯದ್ ಬುಟ್ಟೆ. ಇಲ್ಲಿಗೆ ಅದ್ನಾರು ವರ್ಷ ಆಯ್ತು, ಕುಡಿತಾಯಿಲ್ಲ. ಮಶಾಣದಲ್ಲಿದ್ದ ಕ್ವಾಟ್ರಸ್ನೂ ಒಡ್ದಾಕುದ್ರು. ಈಗ ಹೊಸಕೋಟೆಯ ಬೂದಿಗೆರೆ ಕ್ರಾಸ್‌ನಲ್ಲಿ ಬಾಡಿಗೆ ಮನೇಲಿದೀವಿ. ಮಗ-ಮಗಳು, ಇಬ್ರಿಗೂ ಮದ್ವೆ ಮಾಡಿದೀನಿ, ಇಬ್ರಿಗೂ ಮಕ್ಳವೆ. ಮಗ್ನೂ ಹೆಂಡ್ತಿನೂ ಕೆಲಸಕ್ಕೆ ಹೋಯ್ತರೆ, ಹಂಗಾಗಿ ಜೀವನ ನಡೀತಾಯ್ತೆ,” ಎಂದರು.
“ಇಲ್ಲಿಯವರೆಗೆ ಅಂದಾಜು ಎಷ್ಟು ಗುಂಡಿ ತೋಡಿ, ಎಷ್ಟು ಹೆಣ ಮಣ್ ಮಾಡಿರಬಹುದು? ಎಂದೆ. “ಎಲ್ ಲ್ಯಕ್ಕ ಹಿಡಿತಿರಾ? ಚಿಕ್ಕೋನಿದ್ದಾಗನಿಂದಲೂ ಈ ಮಶಾಣದಲ್ಲೆ ಆಡಿ ಬೆಳ್ದೋನು. ನಮ್ಮಕ್ಕನ ಗಂಡ-ಭಾವ ಗುಂಡಿ ಹೊಡಿತಿದ್ರು, ನಾನ್ ಅವರ ಮನೇಲಿದ್ದೆ. ನಮ್ ಭಾವ ತೀರ್‍ಕಂಡ್ರು, ಅವರ ಕೆಲ್ಸ ನಾನ್ ಮುಂದುವರೆಸ್ದೆ. ಆಗ ನನ್ ವಯಸ್ಸು ಒಂದ್ ಹದಿನೆಂಟಿರಬಹುದು. ಆಗಿನಿಂದಲೂ, ಗುಂಡಿ ಹೊಡಿತನೇ ಇದೀನಿ, ವಯಸ್ಸಿದ್ದಾಗ ದಿನಕ್ಕೆ ಐದಾರು ಹೊಡೀತಿದ್ದೆ. ಇವತ್ತು ನಂಗೆ ಐವತ್ತಾರೋರ್ಸ… ಲ್ಯಕ್ಕ ಹಾಕಳಿ,” ಎಂದು ಮುಖ ನೋಡಿದರು.
ಅವರು ಹೇಳಿದ ಪ್ರಕಾರ, ಲೆಕ್ಕ ಹಾಕಿದರೆ, ಇವತ್ತಿಗೆ 38 ವರ್ಷಗಳ ಕಾಲ ಗುಂಡಿ ತೋಡಿದ್ದಾರೆ. ದಿನಕ್ಕೆ ಸರಾಸರಿ ಎರಡು ಎಂದು ಲೆಕ್ಕ ಹಿಡಿದರೂ, ಇಪ್ಪತ್ತೈದು ಸಾವಿರಕ್ಕೂ ಮೇಲಾಗುತ್ತದೆ. ಈ ವ್ಯಕ್ತಿ ವಿದೇಶದಲ್ಲೇನಾದರೂ ಇದ್ದಿದ್ದರೆ, ಇಷ್ಟೊತ್ತಿಗೆ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗುತ್ತಿದ್ದರು. ಆದರೆ, ಅದನ್ನು ಸಾಧನೆ ಎನ್ನದ, ಅದರ ಪರಿವೆಯೂ ಇಲ್ಲದ ಕೃಷ್ಣಪ್ಪನವರು ಸುಮ್ಮನೆ ನಸುನಗೆ ನಕ್ಕರು. ಮಾತು ಮುಂದುವರಿಸಿ, “ಒಂದು ಗುಂಡಿಗೆ ಎಷ್ಟು ಚಾರ್ಜ್ ಮಾಡ್ತಿರಾ?” ಎಂದೆ.
“ಮಕ್ಳದಲ್ವೇ… ಅವರೇ ದುಃಖದಲ್ಲಿರ್ತರೆ, ಕೇಳದ್ಯಂಗೆ? ಅವರು ಕೊಟ್ಟಷ್ಟು. ಇಷ್ಟೇ ಬೇಕು ಅಂತ ಕೇಳಕ್ಕಾಯ್ತದಾ, ಕೆಲವ್ರು ಐನೂರು ಕೊಡ್ತರೆ, ಕೆಲವ್ರು ಸಾವ್ರ ಕೊಡ್ತರೆ, ಅದೂ ದಿನಾ ಇಲ್ಲ. ಮೂರು ದಿನಕ್ಕೊಂದು ಸಿಕ್ತದೆ. ನೋಡಿ, ಇವತ್ ಬೆಳಗ್ನಿಂದ ಒಂದೂ ಇಲ್ಲ. ಕಾದು ಹಂಗೇ ಮನಿಕಂಡಿದೀನಿ,” ಎಂದರು. ಮಾತು ಮುಂದುವರಿಸಿದ ಕೃಷ್ಣಪ್ಪ, “ಒಂದೊಂದ್ಸಲ ದೊಡ್ಡ ಗುಂಡಿನೂ ಹೊಡಿತಿವಿ, ಯಾರೋ ದೊಡ್ಡೋರು ಸತ್ರೆ, ಅವ್ರು ಮಣ್ ಮಾಡ್ಲೇಬೇಕು ಅಂತ ಹಠ ಹಿಡ್ದು ಅವ್ರು ಗೊತ್ತು, ಇವ್ರು ಗೊತ್ತು ಅಂತ ಅವರಿವರ ಕೈಲಿ ಹೇಳ್ಸಿದ್ರೆ, ತಕ್ಕೊಡ್ತಿವಿ. ಅವ್ರು ಸ್ವಲ್ಪ ದುಡ್ ಜಾಸ್ತಿ ಕೊಡ್ತರೆ. ದೊಡ್ಡರಾದ್ರೇನೂ, ದುಡ್ಡಿದ್ರೇನೂ… ಎಲ್ರೂ ಒಂದಿನ ಹೋಗ್ಲೇಬೇಕು. ಹುಟ್ಟಿದ ಮೇಲೆ ಸಾಯಲೇಬೇಕು. ಇದ್ದಾಗ ಒಂದು ಒಳ್ಳೆ ಕೆಲ್ಸ ಮಾಡ್ಬೇಕು. ಇಂಥೋನಿದ್ದ ಕಣಪ್ಪ ಅಂತ ಜನ ಮಾತಾಡ್ಬೇಕು, ಅಲ್ವೇ?” ಎಂದರು.

“ಯಾವೂರು ನಿಮ್ದು?” ಅಂದೆ. “ನಮ್ಮೂರು ದೊಡ್ಡಬಳ್ಳಾಪುರ ಹತ್ರದ ಅರದೇಶಳ್ಳಿ. ಮನೆ ತುಂಬಾ ಮಕ್ಳು, ಬಡತನ. ಮನೇಲಿ ತೆಲುಗು ಮಾತಾಡ್ತಿದ್ದೋ. ಈ ಕೆಲ್ಸಕ್ಕೆ ಬರೋರು ಹೆಚ್ಗೆ ತೆಲುಗನೋರೆ. ಬೀದೀಲಿ ಕನ್ನಡ ಕಲ್ತೆ. ಚಿಕ್ಕಂದಿನಲ್ಲೇ ಊರು ಬುಟ್ಟೆ. ನಮ್ಮಕ್ಕನಿಗೆ ಬೆಂಗಳೂರಿಗೆ ಮದುವೆ ಮಾಡಿಕೊಟ್ಟಿದ್ದೋ, ಅವರ ಸಂಸಾರ ಈ ಮಶಾಣದ ಕ್ವಾಟ್ರಸ್ಸಲ್ಲಿತ್ತು. ನಮ್ ಭಾವಂಗೆ ಗುಂಡಿ ತೋಡೋ ಕೆಲ್ಸ. ಅವರ ಮನೇಲಿ ಆಡಕಂಡ್ ಬೆಳ್ದೆ. ಓದಕ್ಕೇನೂ ಹೋಗ್ಲಿಲ್ಲ. ಬೆಳಗೆದ್ ಕಣ್ಬುಟ್ರೆ ಈ ಗೋರಿ-ಗುದ್‌ಗಳೇ ಕಾಣ್ತಿದ್ದೋ. ಹಂಗಾಗಿ ಹೆಣ, ಸಾವು, ದೆವ್ವ, ಪಿಶಾಚಿಗಳ ಜೊತೆಗೇ ಆಟ ಆಡ್ದೆ. ಗೋರಿ ಮೇಲ್ ಮಲಕಳದೇನ್ ಹೊಸ್ದಲ್ಲ, ದೆವ್ವ-ಪಿಶಾಚಿಗಳ ಬಗ್ಗೆ ಹೆದ್ರಿಕೇನೂ ಇಲ್ಲ. ಹಂಗ್ ನೋಡುದ್ರೆ… ಜೀವಂತ ದೆವ್ವ-ಪಿಶಾಚಿಗಳ ಕಂಡ್ರೆ ಭಯ ಜಾಸ್ತಿ ನಂಗೆ,” ಎಂದು ನಗಾಡಿದರು.
ಸುಮಾರು ಐವತ್ತು ವರ್ಷಗಳಿಂದ ಸ್ಮಶಾನದಲ್ಲಿಯೇ ಇರುವ, ಸಾವು-ಸಂಕಟಗಳನ್ನು ಪ್ರತಿದಿನ ಕಂಡಿರುವ ಕೃಷ್ಣಪ್ಪನವರಲ್ಲಿ ಭಾವನೆಗಳೇ ಬತ್ತಿಹೋಗಿವೆ. ವಯಸ್ಸಾಗಿ ದೈಹಿಕ ಶ್ರಮ ಸುಸ್ತು ಹೊಡೆಸಿದೆ. ಜೊತೆಗೆ, ಮಾಡ್ತಿದ್ದ ಕೆಲಸ ಖುಷಿ ಮತ್ತು ಕಾಸು ತಂದುಕೊಡದಿದ್ದರಿಂದ ಜೀವನದಲ್ಲಿ ಜಿಗುಪ್ಸೆ ಮೂಡಿಸಿದೆ. ಬದುಕಿನಲ್ಲಿ ಸಣ್ಣ ಬದಲಾವಣೆಯನ್ನೂ ತರದಿದ್ದರಿಂದ ಬದುಕಿನ ಬಗ್ಗೆ ಭರವಸೆಯೇ ಹೋಗಿದೆ.
ಇವುಗಳ ನಡುವೆಯೇ, ‘ಹೋದವರೆಲ್ಲ ಒಳ್ಳೆಯವರು’ ಎಂದು ನಂಬುವ, ಅಂತಹ ಸಾವಿರಾರು ಒಳ್ಳೆಯವರ ನಿರ್ಗಮನಕ್ಕಾಗಿ ಮಾಡಿದ ಕೆಲಸವನ್ನು ‘ದೇವರ ಕೆಲಸ’ ಎಂದು ಭಾವಿಸುವ ಕೃಷ್ಣಪ್ಪನವರು, “ಗುಂಡಿ ತೋಡಿ ಮುಚ್ಚವರ್ಗು ಮಾತ್ರ ನಮ್ಗೆ ಮರ್ಯಾದೆ, ಆಮ್ಯಾಲೆ ಹೆಣ ಎಸ್ತು ಮನೆಗೋಯ್ತರಲ್ಲ, ಹಂಗೆ ನಮ್ಮುನ್ನು ಎಸ್ತ್ ಹೋಯ್ತಿರ್ತರೆ,” ಎಂದರು. ಸ್ವಲ್ಪ ಹೊತ್ತು ಸುಮ್ಮನಿದ್ದು ಗೋರಿಗಳತ್ತ ನೋಡಿ, “ಗೇಟ್ ದಾಟ್ತಿದ್ದಂಗೆ ಜೊತೆಗಿದ್ದೋರ್ನೆ ಮರ್ತು ಮುಂದಕ್ಕೋಯ್ತರೆ ಅಂದ್ರೆ, ಇನ್ನ ನಮ್ಮುನ್ ನೆನಕತರಾ… ಬುಡಿ,” ಎಂದ ಕೃಷ್ಣಪ್ಪನವರು, ಮನುಷ್ಯರ ಸ್ವಾರ್ಥ, ದುರಾಸೆ, ದುರ್ಗುಣಗಳ ಬಗ್ಗೆ ಭಾರೀ ಬೇಸರ ವ್ಯಕ್ತಪಡಿಸಿದರು. “ಉಸಿರಿದ್ರೆ ಮನುಸ್ರು, ಉಸುರು ನಿಂತ್ರೆ ಹೆಣ, ಇದೇ ಅರ್ತಾಗದಿಲ್ಲ ನೋಡಿ…” ಎಂದು ಬದುಕಿನ ಫಿಲಾಸಫಿಯತ್ತ ಹೊರಳಿದರು.
ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ