ನೀಗೊನಿ | ಕುಂಟ್ನಾಯಿ ಕಚ್ಚಿದ್ದೇ ತಡ ನನ್ಜ ನಾಯ್ಗಳಿಗಿಂತಲೂ ಜೋರಾಗಿ ಅರಚಿದ!

Date:

Advertisements
ಅಭಿಮನ್ಯು ಒಬ್ನೇ ಚಕ್ರವ್ಯೂಹ ಬೇದುಸ್ವಾಗ ಎಲ್ಲ ಕೌರವರೂ ಸುತ್ತ ಆವರಿಸಿ ಅಭಿಮನ್ಯುವನ್ನು ಸದೆಬಡಿವ ಪರಸಂಗ ನನ್ಜಂಗೆ ನೆನಪಿಗೆ ಬಂತು. ತಾನು ಅಭಿಮನ್ಯುವೆಂದೂ ತನ್ನ ಸುತ್ತಿರುವವರೆಲ್ಲ ಕೌರವರೆಂದೂ ಬಗೆದು, ಕೈಯಲ್ಲಿರುವ ದೊಣ್ಣೆಯನ್ನೇ ಕತ್ತಿಯಂತೆ ಝಳಪಿಸತೊಡಗಿದ

ಮೊದಲ ಸಂಚಿಕೆ: ನೀಗೊನಿ | ‘ನೀಗೊನಿ’ ಅನ್ತ ಯಾರಾದ್ರೂ ಊರಿಗೆ ಹೆಸ್ರು ಕಟ್ತಾರಾ?

ಎರಡನೇ ಸಂಚಿಕೆ: ನೀಗೊನಿ | ಕೋಡಿಗೆ ನೆನ್ಪಾತು, ‘ಈ ದಿಕ್ಕಾಗೆ ಮನ್ಸುರನ್ನ ತಿನ್ನೋ ಜನ ಐತೆ…’

ಸಂಚಿಕೆ – ಮೂರು

Advertisements

ಒನ್ಸಾರಿ ಏನಾತು ಅನ್ದ್ರೇ… ಅತ್ತೆಸಿತ್ತೇ ಮಳೆ. ನಾಯ್ಗಳು ಊರಲ್ಲಿ ಸಿಕ್ಕಾಪಟ್ಟೆ ಹೆಚ್ಚಾಗಿದ್ವು. ಒನ್ದೆಣ್ನಾಯಿ ಯಿನ್ದೆ ಹತ್ತಾರು ಗನ್ಡ್ನಾಯಿಗಳು ತಮ್ಮ ಪುರುಷತ್ವ ತೋರ್ಸಲು ಹೆಣಗಾಡ್ತಿದ್ವು. ಸದಾ ಓ… ಎನ್ವ ಕೂಗಾಟ, ಕುಯ್ಯಿ ಕುಯ್ಯಿ ಅನ್ವ ಹೆಣಗಾಟ ಯಾವಾಗ್ಲೂ ಇದ್ದದ್ದೇ. ತಮ್ಮ ಸಂಗಾತಿಯನ್ನು ಇನ್ಯಾರಿಗೂ ಸಿಗ್ದನ್ಗೆ ಕಾಪಾಡೋದು, ಈ ಇಪ್ರೀತಾ ಸೊಳಿಲಿ ತಮ್ಮ ಪರಮಸುಖವನ್ನು ಕಾಪಿಟ್ಟುಕೊಳ್ಳುವುದು ಗನ್ಡುನಾಯಿಗಳಿಗೆ ಸವಾಲಿನ ಕೆಲಸ ಆಗಿತ್ತು. ಆ ಕೇರಿ-ಈ ಕೇರಿ ಎನ್ನದೆ. ಈ ಬೋಡಯ್ಯನಿದ್ದ ಅಳ್ಳಿಮರದಿನ್ದ ಆರಮ್ಬಾ ಮಾಡ್ಕೊನ್ಡು ಬ್ರಾಮ್ರ ಕೇರಿಗೆ, ಬ್ರಾಮ್ರ ಕೇರಿನ್ದ ವಕ್ಲಾರ ಕೇರಿಗೆ, ವಕ್ಲಾರಿ ಕೇರಿನ್ದ ನಾಯ್ಕರಟ್ಟಿಗೆ, ನಾಯ್ಕರಟ್ಟೀಲೂ ದಕ್ದಿಲ್ಲಂದ್ರೆ ಮತ್ತೆ ಮಡ್ವಾಳ್ರ ಕೇರಿಗೆ, ಮುನ್ದಕ ಹಜಾಮ ರನ್ಗನ ಮನೆದಾಟಿ ಸೋಲು ಸೋಲಾಗಿ ಹರ್ದು ಹೋಗ್ತಿದ್ವು. ಅವ್ಕೆ ಯಾವ ಕೇರಿಗಳೆಮ್ಬ ಭವಬನ್ಧಾನಗಳೀರಲೇ ಇಲ್ಲ. ಎಲ್ಲಿ ಬೇಕಾದ್ರೂ ಓಡಾಡಬೋದಿತ್ತು. ಕೇರಿ-ಕೇರಿಯ ಜನ ಸಿಟ್ಟಿನ್ದ ಓಡಿಸುತ್ತಿದ್ರೂ ಮತ್ತೊನ್ದು ಕೇರಿ ದಾಟಿ ಮತ್ತಾಗಲೇ ಹಾಜರಾಗ್ಬಿಡ್ತಿದ್ವು.

ಬ್ರಾಮ್ರ ಕೇರೀಲಿ ಒನ್ದ್ ಹೆಣ್ನಾಯಿ ಹಿನ್ದೆ ಇಟೊನ್ದ್ ಗನ್ಡು ನಾಯಿಗಳು ಹೋಗ್ತಾಯಿರೋದು ಮಡಿಯುಟ್ಟ ಶನ್ಕ್ರಯ್ಯನಿಗೆ ಎಲ್ಲಿಲ್ಲದ ಮುಜುಗರ. ರಾತ್ರಿ ಮಗ್ಗಲಿಗೆ ಬರದ ಮಡದಿ ನೆನೆದು, “ಥೂ ಈ ಹೆಣ್ನಾಯಿನ್ದಲೇ ಎಲ್ಲ… ಹಚ್ಛಾ,” ಎನ್ದು ಓಡಿಸುವನು. ಆಗತಾನೇ ವಯಸ್ಸಿಗೆ ಬನ್ದ ಮರಿಬ್ರಾಮ್ರ ಹುಡುಗರ್ಲೆಲ್ಲಾ ಸೋಜಿಗದಿನ್ದ ನಾಯಿಗಳ ಬನ್ಧಾನಯಿಲ್ಲದ ರಸಿಕತನವನ್ನು ಆಸ್ವಾದಿಸುತ್ತಾ ತಮ್ಮ ಭವಿಷ್ಯದ ಸನ್ಗಾತಿಯನ್ನು ಕಲ್ಪಿಸಿಕೊನ್ಡು ಸುಖಿಸುತ್ತಿದ್ದರು. ಅಲ್ಲೇ ಬಾಗಿಲ ಸೊನ್ದಿಯಲ್ಲಿ ನಾಯ್ಗಳ ಭಯ್ವಿಲ್ಲದ ರಾಸಲೀಲೆಯನ್ನು ತನ್ನನ್ನು ಯಾರೂ ನೋಡುತ್ತಿಲ್ಲ ಎಮ್ಬುದನ್ನು ಖಾತ್ರಿಪಡಿಸಿಕೊಂಡು ಗನ್ಡನಿದ್ದು ವಿಧವೆಯನ್ಗೇ ಬದುಕುತ್ತಿರುವ ಕಾನ್ತಮ್ಮಳ ತಲ್ಲೀನ ನೋಟವಾದರೆ, ಇನ್ನು ಗನ್ಡನಿಲ್ಲದೆ ಬದುಕುತ್ತಿರುವ ರಮಾಳಿಗನ್ತೂ ಆ ನಾಯ್ಗಳ ರಸಿಕತನ ಕಳೆದುಹೋದ ಸುಖವನ್ನು ಅಣಕಿಸುವನ್ತೇ ಕಾಣಿಸುತ್ತಿತ್ತು.

ಈ ಆಡಿಯೊ ಕೇಳಿದ್ದೀರಾ?: ಮನಸ್ಸಿನ ಕತೆಗಳು | ನಿಮ್ಮ ಮಗು ಕಲಿಕೆಯಲ್ಲಿ ಸಮಸ್ಯೆ ಎದುರಿಸಿದಾಗ ನೀವು ಮೊದಲು ಮಾಡಬೇಕಾದ್ದೇನು?

ಬ್ರಾಮ್ರ ಕೇರಿ ಕತೆ ಈ ತರವಾದ್ರ, ವಕ್ಲರ ಕೇರೀಲಿ, “ಯಲಾ ಯಲಾ ಯನ್ತಾ ಯೋಗ ಈ ನಾಯ್ಗಳ್ಗೆ! ನಮ್ಗೆ ಈ ಯೋಗ ಇಲ್ವಲ್ಲಪ್ಪ…” ಯನ್ದು ಸೋಮ, ಬಾಳ ದಿನದಿಂದ ಕಣ್ಣಾಕಿದ್ದ ವೀರರನ್ಗನಾ ಹೆನ್ಡಿತಿಯ ಜತೆ ಕೂಡುವ ಕನಸು ಕಾಣುತ್ತಿದ್ದ. ಯಿನ್ತಾ ನಾಯಿಗಳು ಜಾತ್ಭೇದವಿಲ್ಲದೆ, ಲಿನ್ಗಭೇದವಿಲ್ಲದೆ, ವಯೋಭೇದವಿಲ್ಲದೆ ಎಲ್ಲರಿಗೂ ತರಾವರಿ ಭಾವಗಳನ್ನು ಹುಟ್ಟಿಸಿಬಿಡುತ್ತಿದ್ದವು. ನಾಯ್ಗಳ ರೀತಿಯ ಬದುಕು ನಮ್ಮದಾಗಿಲ್ಲವಲ್ಲ ಯನ್ದೂ ಆಗ ತಾನೇ ವಯಸ್ಸಿಗೆ ಬನ್ದಾ ಹುಡ್ಗುರು ನಾಯ್ಗಳ ಮೇಲೆ ಕರುಬೋದುನ್ಟೂ. ಆದಾಗ್ಯೂ ಯಿನ್ತಾ ವಯಸ್ಸಿನುಡುಗರಿಗೆ ಟ್ರೇನಿನ್ಗೂ ನೀಡುವ ಪದುಮಕ್ಕಳ ಸನಿಹವನ್ನು ವನ್ದು ಚಣ ಕಾಲ ಗೆಪ್ತಿಗೆ ತಕ್ಕನ್ಡು ನೀರಾಗುವುದು ಈ ಪಡ್ಡೆಹುಡುಗ್ರಿಗೆ ಸಹಜವಾಗಿತ್ತು. ನಾಯಿಗಳು ನರ್ಮನಸ್ರ ನರವನ್ನು ನಿಗುರಿಸುವ ಕೆಲಸ ಮಾಡಿದರೆ ಯಾರಿಗೂ ಬೇಸರವಾಗುತ್ತಿರಲಿಲ್ಲ.

ಯಾರಿಗೂ ಆಗದ ಸನ್ಕಟ ಅಲ್ಲಿ ನಿನ್ತಿದ್ದ ನನ್ಜನಿಗೆ ಅದ್ಯಾಕೆ ಕಾಡಿತೋ. ವಯಸಿಗೆ ಬನ್ದರೂ ವನ್ದೆಣ್ಣು ಕಣ್ಣೆತ್ತಿ ನೋಡದ ತನ್ನನ್ನ, ಈ ನಾಯಿಗಳು ಹಿನ್ಡು ಹಿನ್ಡಾಗಿ ತಿರುಗುತಿರುವುದು ನಂಜನಿಗೆ ಅಸೂಯೆ ಹುಟ್ಟಿಸಿಬಿಟ್ಟಿತು. ವಯಸ್ಸಿಗೆ ಬನ್ದು, ನಾನೂ ಗನ್ಡಸೂ ಯೆನ್ದು ಎಷ್ಟೋ ಬಾರಿ ಊರಿನ ಹೆಣ್ಮಕ್ಕಳಿಗೆ ತೋರಿಸಲು ವಿವಿಧೋಪಾಯಗಳನ್ನು ಮಾಡಿ ಸಾಕಷ್ಟು ಹೆಣಗಿದ್ದ. ಕೆಲ್ವು ಸಭ್ಯ ಉಪಾಯಗಳಿದ್ರೆ, ಇನ್ನು ಕೆಲ್ವು ಅದ್ನ ಮೀರ್ದವುಗಳಾಗಿದ್ವು. ಯಾರೂ ಇಲ್ದ ಸಮ್ಯದಲ್ಲಿ ಒನ್ದೇ ಹೆಣ್ಣು ಬತ್ತಿರೋ ವತ್ನಲ್ಲಿ ಉಚ್ಚೆ ಮಾಡನ್ಗೆ ನಿಕ್ಕರ್‍ನ ಬದಿಗೆ ಸರಿಸಿ ಯತ್ಲೋ ನೋಡ್ತೋ ನಿಲ್ಲೋದು. ತನಗೇನೂ ಗೊತ್ತಿಲ್ದನ್ಗೆ, ಆ ಹುಡ್ಗೆ ಅದ್ನ ನೋಡಿ ನನ್ಕಡೆ ಬರ್ಲಿ ಅನ್ತಾ… ಇನ್ತವು ಏನೇನೋ ಯತನ ಮಾಡ್ತಿದ್ದ. ಆದ್ರೆ ಈ ಹಾಳಾದ್ದ ಹೆಣ್ಮಕ್ಕಳು ಕಣ್ಣೆತ್ತಿಯೂ ಅವ್ನನ್ನಾ ನೋಡ್ತಿರಲಿಲ್ಲ. ಮೂಸಿಯೂ ನೋಡದ ಹೆಣ್ಣುಗಳ ಬಗ್ಗೆ ಆಕ್ರೋಶ ಹೊಗೆಯಾಡುತ್ತಿತ್ತು. ಹೆಣ್ಣುರೂಪದಲ್ಲಿರುವ ಏನನ್ನೇ ಕನ್ಡರೂ ಅವನಿಗೆ ಸಹನೆಯ ಕಟ್ಟೆಯೊಡೆಯುತಿತ್ತು. ಅನ್ತದ್ರಲ್ಲಿ ನಾಯ್ಗಳ ತಡೆಯಿಲ್ಲದ ರಾಸಲೀಲೆಯನ್ನು ನೋಡಿ ಸಹಿಸಲು ಸಾಧ್ಯವೇ? ತನಗೆ ದಕ್ಕದ ಸುಖ ಆ ನಾಯಿಗಳಿಗೇಕೆ ಯಮ್ಬುದು ಅವನ ಅನ್ತರನ್ಗದ ದನಿಯಾಗಿತ್ತೋ ಏನೋ. ಜತೆಗೆ ಆ ನಾಯಿಗಳೆಲ್ಲ ತನ್ನನ್ನು ಅಣಕಿಸುತ್ತವೆ ಎಂದು ಆ ಕ್ಷಣದಲ್ಲಿ ಅವನಿಗನಿಸತೊಡಗಿತು. ನಾಯ್ಗಳ ಗನ್ಡಸ್ತನದ ಮುನ್ದೆ ತನ್ನದು ಏನೂ ಇಲ್ಲ ಎಮ್ಬನ್ತೆ ಕಾಣತೊಡಗಿತು. ತನ್ನ ಕಣ್ಣೆತ್ತಿ ನೋಡದ ಎಲ್ಲ ಹೆಣ್ಣುಗಳ ರೂಪವಾಗಿ ಆ ಹೆಣ್ಣಾಯಿ ಕಾಣತೊಡಗಿತು. “ಈ ಹಡಬೆಗುಟ್ಟಿದೋವು ನನ್ನ ನೋಡಲ್ಲ ಅಲ್ವ…” ಎನ್ದುಕೊನ್ಡು ಎಲ್ಲ ಹೆಣ್ಣುಗಳಿಗೆ ಹೊಡಿತಿನಿ ನೋಡೆನ್ದು ಅನ್ಡಿಗೆ ಅನ್ಟಿಕೊನ್ಡು ಅಲೆಯುತ್ತಿದ್ದ ಹೆಣ್ಣು ನಾಯಿಗೆ ದೊಣ್ಣೆ ತಗೊನ್ಡು ಎತ್ತಿದ್ದೇ ಒನ್ದೇಟು ಬಿಟ್ಟ. ನನ್ಜ ಹೊಡೆದ ಏಟಿಗೆ ಗನ್ಡು ನಾಯಿಗಳೆಲ್ಲ ಅವ್ನ ವಿರುದ್ಧ ತಿರುಗಿಬಿದ್ದವು.

ನಾಯಿಗಳು

ಎಲ್ಲ ನಾಯಿಗಳು ಒಂದೇ ಸಮನೇ ನನ್ಜನ ಕಡೆ ಬೊಗುಳುತ್ತ ಮುನ್ನುಗ್ಗಿದವು. ನನ್ಜ ಸುತ್ತಮುತ್ತ ನೋಡಿದ – ಯಾರಾದ್ರೂ ಸಹಾಯಕ್ಕೆ ಬರ್ತಾರೇನೋ ಅಂತ. ಊಹೂಂ… ಯಾರೂ ಕಾಣಲಿಲ್ಲ. ಎಲ್ರೂ ಅವ್ರ ಪಾಡಿಗೆ ಆನೆಕಟ್ಟೋ, ಹುಲಿಕಟ್ಟೋ ಆಟ್ದಲ್ಲಿ ಮುಳ್ಗಿದ್ರು. ಅದಲ್ದೇ, ನನ್ಜನದು ಅಂಥಾ ಮಹತ್ಕಾರ್ಯವೇನೂ ಆಗಿರಲಿಲ್ಲವಾದ ಕಾರಣ ಯಾರೂ ಯೀ ಕಡೆ ಕಣ್ಣೆತ್ತಿಯೂ ನೋಡಲಿಲ್ಲ. ತನಗೆ ಧೈರ್ಯ ತುಂಬಲೂ ಯಾರೂ ಬರದಿದ್ದುದು, ಅಲ್ಲಿನ ನಾಯಿಗಳೆಲ್ಲ ಒಟ್ಟಾಗುತ್ತಿರುವುದನ್ನು ನೋಡಿ, “ಥೂ… ಈ ನಾಯ್ಗಳಿಗೆ ಇರೋ ಒಗಟ್ಟು ನಮ್ಮ ನರಮನುಸ್ರುಗೆ ಇಲ್ವಲ್ಲ…! ನನ್ನನ್ನ ನಾನೇ ಕಾಪಾಡ್ಕಬೇಕು…” ಎನ್ದು ಅಸಹಾಯಕನಾಗಿ ಕಾಲು ನುಗ್ಗಿದ ಕಡೆ ಓಡಲು ಯತ್ನಿಸಿದ. ಆದರೂ ತನ್ನ ಕೈಯಲ್ಲಿ ದೊಣ್ಣೆಯಿರುವುದನ್ನು ಜಪ್ತಿ ಮಾಡಿಕೊಂಡು, ಬಂದ ನಾಯಿಗಳಿಗೆಲ್ಲ ಹಿಗ್ಗಾಮುಗ್ಗಾ ಹೊಡೆಯಲಾರಂಭಿಸಿದ. ಈ ದೃಶ್ಯ ಅವನಿಗೆ ರಣರಂಗವಾಗಿ ಕಾಣತೊಡಗಿತು. ಸುಗ್ಗಿದಿನ್ದಲ್ಲಿ ‘ಅಭಿಮನ್ಯು ಕಾಳ್ಗ’ ನಾಟ್ಕ ಆಡುಸ್ತಿದ್ದ ಕುಂಭಿನರಸಯ್ಯ ಮಾಸ್ತ್ರು ಹೇಳ್ತಿದ್ದ, ಅಭಿಮನ್ಯು ಒಬ್ನೇ ಚಕ್ರವ್ಯೂಹ ಬೇದುಸ್ವಾಗ ಎಲ್ಲ ಕೌರವರೂ ಸುತ್ತ ಆವರಿಸಿ ಅಭಿಮನ್ಯುವನ್ನು ಸದೆಬಡಿವ ಪರಸಂಗ ನೆನಪಿಗೆ ಬಂತು. ತಾನು ಅಭಿಮನ್ಯುವೆಂದೂ ತನ್ನ ಸುತ್ತಿರುವವರೆಲ್ಲ ಕೌರವರೆಂದೂ ಬಗೆದೂ, ಅಭಿಮನ್ಯು ದುರ್ಯೋಧನನ ಬಣ್ಣದ ಮಾತಿಗೆ ಮರುಳಾದಂತೆ ತಾನು ಯಾವ್ದೇ ಕಾರಣಕ್ಕೂ ಮರುಳಾಗಬಾರದೆಂದು ಯೋಚಿಸಿ, ಕೈಯಲ್ಲಿರುವ ದೊಣ್ಣೆಯನ್ನೇ ಕತ್ತಿಯಂತೆ ಝಳಪಿಸತೊಡಗಿದ. ನಂಜನ ಸುತ್ತ ನಿಂತ ನಾಯಿಗಳು ಎರಡು ಅಸ್ತ್ರಗಳನ್ನು ಬಳಸಿ ನನ್ಜನ ಮೇಲೆ ಪ್ರಯೋಗಿಸುತ್ತಿದ್ದವು. ಬೊಗಳುವ ಮತ್ತು ಕಚ್ಚುವ ಎರಡು ಅಸ್ತ್ರಗಳ ದಾಳಿಯಲ್ಲಿ ಧೈರ್ಯ ಕಳೆದುಕೊಳ್ಳದೆ ಎಷ್ಟು ಹೊತ್ತು ಹೋರಾಡುವುದು?

ನನ್ಜನಿಗೂ ಸಾಕಾಗತೊಡಗಿತು. ಇದೇನೂ ಮುಗಿಯುವ ಹಾಗೆ ಕಾಣಲಿಲ್ಲ. ಯಾಕಾದ್ರೂ ಇವುಗಳ ತಂಟೆಗೆ ಹೋದ್ನೋ ಅನ್ನಿಸತೊಡಗಿತ್ತು. ತಮ್ಮ ರಸಮಯ ಸಮಯವನ್ನು ಭಂಗಗೊಳಿಸಿದನಲ್ಲ ಇವನು ಎಂಬುದು ನಾಯ್ಗಳ ವಾದವಾಗಿತ್ತು. ಈ ವಾದ ಮತ್ತು ಪ್ರತಿವಾದಕ್ಕೆ ತೀರ್ಪು ಕೊಡುವವರಿಲ್ಲದೆ ಅನಾಥ ವಸ್ತುವಾಗತೊಡಗಿತು ಆ ಘಟನೆ. ಸುಸ್ತಾಗಿ ಈ ಹೋರಾಟವನ್ನು ಕೊನೆಗಾಣಿಸಬೇಕು ಎಂದುಕೊಳ್ಳುತ್ತಾ ನಂಜ ತನ್ನ ಕ್ರಿಯೆಯನ್ನು ನಿಧಾನ ಮಾಡತೊಡಗಿದ. ಈ ಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ ಕುಂಟ ಸೀಳ್ನಾಯಿ ತನ್ನ ವಾದವನ್ನು ತಾರ್ಕಿಕ ಅಂತ್ಯ ಕಾಣಿಸಲು ವೀರಾವೇಷದಿಂದ ನುಗ್ಗಿದ್ದೇ ನಂಜನ ಮೊಣಕಾಲ ಹಿಮ್ಬದಿಯ ಮೆತು ಮಾಮ್ಸನ್ನ ಹಿಡಿದೆಳೆಯಿತು – ಜತೆಗಾರರು ಸಹಾಯಕ್ಕೆ ಬರುವರೆಂಬ ಧೈರ್ಯದಿಂದ. ಹಲ್ಲಲಿ ಕಾಲನ್ನ ಕಚ್ಚಿಕೊಂಡೇ ಹಿಂದಿರುಗಿ ನೋಡಿತು. ತನ್ನ ಸಹಗಾರರ್ಯಾರು ಒಂದೆಜ್ಜೆಯನ್ನೂ ಮುಂದಿಟ್ಟಿಲ್ಲ. ಬಾಯಲ್ಲಿ ಮಾತ್ರ ಆಕ್ರೋಶ. ನನ್ನಷ್ಟು ಶಕ್ತಿಯಿಲ್ಲದವು ಎಂದು ಅವುಗಳ ಬಗೆಗೆ ನಗು ಬಂತು. ತನ್ಕಣ್ಣು ಮುನ್ದೆನೇ ತನ್ನ ಸರೀರದ ಒನ್ದಷ್ಟು ಬಾಡು ಆ ನಾಯ ಬಾಯೊಳಗಿದ್ದುದು ಕನ್ಡು ನನ್ಜ ನಾಯ್ಗಳಿಗಿಂತಲೂ ಜೋರಾಗಿ ಅರಚಿದ, ನೋವಿನಿಂದ ಕೂಗಿದ. ತನ್ನ ಕಾಲ ಮಾಂಸವನ್ನು ಕಿತ್ತು ತಿನ್ನುತ್ತಿರುವ ಆ ಕುಂಟ್ನಾಯಿಯನ್ನು ನೋಡಿ ಅವನಿಗೆ ಸಿಟ್ಟು ಆಕ್ರೋಶ ಹೆಚ್ಚಿತ್ತು. ಬಲಿಷ್ಠ ನಾಯಿಗಳೇ ದೂರದಲ್ಲಿ ನಿಂತು ಬರಲಾರದೆ ಬರೀ ಬೊಗುಳುತಿವೆ. ಇದ್ಯಾವೋದೋ ಈ ಕುಂಟ್ನಾಯಿ ಕಚ್ಚಿಬಿಡ್ತಾಲ್ಲ ಎಂಬುದು ತನ್ನ ಗಂಡಸ್ತನಕ್ಕೆ ಸವಾಲೆಸೆದಂತಿತ್ತು. ತನ್ನ ಕಾಲು ನೋಡಿಕೊಂಡು, ಭವಿಷ್ಯದಲ್ಲಿ ತಾನು ಆ ನಾಯಿಯ ರೀತಿ ಕುಂಟಾಗುತ್ತೇನೆಂಬ ಭಯ ಶುರುವಾಯಿತು. ಅದಕ್ಕೊಂದು ಗತಿ ಕಾಣಿಸಬೇಕೆಂದು ನಿರ್ಧರಿಸಿ, ಕೈಯಲ್ಲಿದ್ದ ದೊಣ್ಣೆಗೆ ತನ್ನ ಶಕ್ತಿಯನ್ನೆಲ್ಲ ತುಂಬಿ ಒಮ್ಮೆಲೆ ಆ ಕುಂಟ್ನಾಯಿಗೆ ಎತ್ತಿದ್ದೇ ಹೊಡೆದ…

ಬರಹಗಳನ್ನು ಆಲಿಸಲು ಇಲ್ಲಿ ಕ್ಲಿಕ್ ಮಾಡಿ: ಈದಿನ.ಕಾಮ್ ಕೇಳುದಾಣ

ಕಲಾಕೃತಿಗಳ ಕೃಪೆ: Unsplash ಜಾಲತಾಣ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ರವಿಕುಮಾರ್ ನೀಹ
ರವಿಕುಮಾರ್ ನೀಹ
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ನೀಲಗೊಂಡನಹಳ್ಳಿಯವರು. ಕನ್ನಡ ಮೇಷ್ಟ್ರು. ಕನ್ನಡ ಸಾಹಿತ್ಯ ವಿಮರ್ಶೆಗೆ ಹೊಸ ಪರಿಭಾಷೆಗಳನ್ನು ಜೋಡಿಸಿದ ಗಮನಾರ್ಹ ವಿಮರ್ಶಕ. ಇತ್ತೀಚೆಗೆ ಬಿಡುಗಡೆಯಾದ 'ಅರಸು ಕುರನ್ಗರಾಯ' ಕೃತಿ ಇವರ ಸಂಶೋಧನಾ ಆಸಕ್ತಿಯನ್ನು ಮತ್ತು ನಿಜವಾದ ನೆಲಮೂಲದ ಸಂಶೋಧನೆಗಳು ಸಾಗಬೇಕಾದ ಹಾದಿಯನ್ನು ಸಾರುವ ಅಪೂರ್ವ ದಾಖಲೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X