ನೀಗೊನಿ | ‘ನೀಗೊನಿ’ ಅನ್ತ ಯಾರಾದ್ರೂ ಊರಿಗೆ ಹೆಸ್ರು ಕಟ್ತಾರಾ?

Date:

ಕೊರಟಗೆರೆ ಸೀಮೆಯ ಕನ್ನಡದಲ್ಲಿ ಕೇಳಿ/ಓದಿ, ರವಿಕುಮಾರ್ ನೀಹ ಅವರ ಅಪ್ರಕಟಿತ ಕಾದಂಬರಿ 'ನೀಗೊನಿ'ಯ ಪುಟಗಳು | 'ಏನಿರಬಹುದು ನೀಗೊನಿ ಅನ್ಗನ್ದ್ರೆ?' - ಯೋಚಿಸಿದ್ದ ಚಿಕ್ಕಯ್ಯ. ಕೇಳಿರದಿದ್ದ ಊರಿಗೆ ನನ್ಟಸ್ತನ ಬೆಳಸ್ತಿನಿ ಅನ್ತ ಆತ ಕನಸು ಮನಸಿನಲ್ಲಿಯೂ ಅನ್ದಾಜಿಸಿರಲಿಲ್ಲ!

1

…ನೆಡ್ದೂ ನೆಡ್ದೂ ಚಿಕ್ಕಯ್ಯನ್ಗೆ ಕಾಲೆಲ್ಲ ಅಸ್ಗೆಟ್ಟೋಗಿತ್ತು. ನಡಿಬೇಕಾದ ದಾರಿ ಯಿನ್ನೂ ಸ್ಯಾನೇ ದೂರನೇ ಐತೆ ಅನ್ನುಸ್ತು. ಮೊದ್ಲೆಲ್ಲ ದಡದಡನೇ ಕರ್ಕೊನ್ಡು ಊರ್ಗೆ ಮುಟ್ಟುಸ್ತಿದ್ದ ದಾರಿನೇ ಇನ್ದ್ಯಾಕೋ ಮುನ್ಸಿಕೊನ್ಡಿತ್ತು. ಯಿನ್ದೆಲ್ಲ ಯಿನ್ಗಾಗಿರ್ಲಿಲ್ಲ ಚಿಕ್ಕಯ್ಯನ್ಗೇ. ಮಗ್ಳ ಮದ್ವೆಯಾದಾಗ್ನಿನ್ದ ಯೀ ದಾರ್ಗೆ ಅವ್ನ ಎಲ್ಯಡಿಕೆಯಷ್ಟೇ ನೆನ್ಟುಸ್ತ. ಯಿನ್ನೂ ಒನ್ಪರ್ಲಾನ್ಗ್ ಸೈತ ಬನ್ದಿಲ್ಲ. ಆಗ್ಲೇ ದಣ್ವು ವಡ್ಲಿಗೆ ಬನ್ದು ಕುನ್ತಿತ್ತು. ಬಾಯ್ಲಿ ಎಲ್ಯಡಿಕೆ ಮಡ್ಕನ್ಡು ನಡದ್ರೇ ಕಣ್ಮುಚ್ಚಿ ಬಿಡೋದ್ರಾಗೆ ಮಗ್ಳೂರು ಸೇರ್ಬಿಡ್ತಿದ್ದ. ಯೆಷ್ಟೋ ಜಿನ ಹಗ್ಲುರಾತ್ರಿ ಎನ್ದೆ, ಮಳೆ-ಗಾಳಿ ಎನ್ದೆ ಯೀ ದಾರೀಲಿ ನಡ್ದಾಡಿದ್ದ. ಯೀ ಹಾದಿಯ ಕಲ್ಲು ಕಲ್ಲುಗಳೊನ್ದಿಗೂ ಅವ್ನಿಗೆ ನೆನ್ಟುಸ್ತನ ಬೆಳ್ದೋಗಿತ್ತು. ಬನ್ದಾಗ್ಲೆಲ್ಲ ಆ ಕಲ್ಗಳ ಸೇಮ ಚಮಾಚಾರಗಳ್ನ ಇಚ್ಯಾರಿಸಿಕೊಳ್ತಲೇ ನಡಿತ್ತಿದ್ದ. ಒಬ್ಬಂಟಿಯ್ಯಾಗಿ ನಡುದ್ರೂ ಅವ್ನಿಗೆ ಬೇಸ್ರಿಕೆ ಆದ ಜಿನ್ಗಳೇ ಯಿಲ್ಲ. ಗೆಣಕಾರ್ನನ್ತೆ ಅಲ್ಲಲ್ಲಿ ಇದ್ದ ಕಲ್ಲುಗ್ಳು ಕತಿ ಹೇಳ್ತಿದ್ವು, ಬೇಸ್ರಿಕೆನಾ ಕಳಿತಿದ್ವು. ಯೀ ಬಾರೆಯನ್ನ ಹತ್ತಿ ಕೆಳ್ಗಿಳಿದು ನ್ಯಾರ್ಳೆತೋಪ್ನ ದಾಟುದ್ರೆ ಕರ್ಕಲ್ಲುಗುಟ್ಟೆ ಎದ್ರಾಗ್ತಿತ್ತು. ನ್ಯಾರ್ಳೆತೋಪಲ್ಲಿ ನ್ಯಾರ್ಳೆಣ್ಣನ್ನ ಕಿತ್ಕನ್ಡು ಕರ್ಕಲ್ಲುಗುಟ್ಟೇಲಿ ಕುನ್ತು ತಿನ್ನೋದೆ ವನ್ದು ಐಭೋಗ. ದಣ್ವಾರ್ಸಕೊನ್ಡು ಆ ಜಲ್ದಿಹಳ್ದ ನೀರ್ನ ಕುಡ್ದು ನಡೂದ್ರೇ ಮಗ್ಳೂರನ್ನು ಮುಟ್ಬೋದಿತ್ತು.

ಈ ಆಡಿಯೊ ಕೇಳಿದ್ದೀರಾ?: ಮನಸ್ಸಿನ ಕತೆಗಳು | ಪುನೀತ್ ರಾಜಕುಮಾರ್ ಅಭಿಮಾನಿಯೊಬ್ಬರ ಪ್ಯಾನಿಕ್ ಅಟ್ಯಾಕ್‌ ಕತೆ

ಯೀ ಹಾದಿಯಲ್ದೇ ಗೊಲ್ಲಳ್ಳಿ ತವಾಸು ಇನ್ನೊಂದಾದಿಯಿತ್ತು. ಆ ಹಾದೆಗೆ ಹೋದ್ರೇ ಸಲೀಸಾಗಿ ಹೋಗ್ಬಹುದಿತ್ತು. ಆದ್ರ ಯೀ ಹಾದಿ ಸ್ವಲ್ಪ ಹತ್ರ ಅಮ್ತಾ ಚಿಕ್ಕಯ್ಯ ಈ ಕರ್ಕಲ್ಲುಗುಟ್ಟೆ ಹಾದಿ ಹಿಡ್ದಿದ್ದ. ಅದಲ್ದೇ ಚಿಕ್ಕಯ್ಯನ್ಗೇ ಜನ್ಗಳ ಜತೆ ಸೇರೋದು ಮೊದ್ಲ್ಲಿನ್ದಿಲೂ ವಾಡ್ಕೆ ಇರ್ಲಿಲ್ಲ. ಗೊಲ್ಲಳ್ಳಿ ಹಾದೆಗೇ ಹೋದ್ರೇ ದನ ಕಾಯ್ವ ಹುಡುಗ್ರು, ಕಾಡ್ಗೋಗಿ ಸೌದೆ ಪುಳ್ಳೆ ತರೋರೆಲ್ಲ ಸಿಕ್ಕಿ ಚಿಕ್ಕಯ್ಯನ ಆಡ್ಕಳರು. “ಏನ್ ಚಿಕ್ಕ… ಊರ್ಗೀರ್ ಬಿಟ್ಯಾ ಯೆಂಗೇ! ಇಷ್ಟತ್ತಿನ್ನಾಗೆ ಹೊನ್ಟೆ?” ಯಿನ್ಗೇ ಯೇನೇನೋ ಕೇಳ್ಬಿಡೋರು. ಆ ಕಡ್ಯ ಹಾದ್ಯೇನೋ ಸಲೀಸಾಗೇ ಐತೆ. ಗೊಲ್ಲಳ್ಳಿ, ಅದ್ನಾ ಬಿಟ್ರೆ ಮುನ್ನಡ್ದು ಹ್ವಾದ್ರೇ ರಾಮ್ಪುರ, ಅದ್ನ ಬಲುಕ್ಕೆ ಬಿಟ್ಕನ್ಡು ಈರಕ್ಕನ್‍ಸಮ್ದ್ರ ತಲ್ಪುದ್ರೆ. ಅಲ್ಲಿ ಮಾದ್ರು, ಸರಣ್ರು, ವಲೇರು, ವಕ್ಲುಮಕ್ಳು, ನೆನಿಬಾರ್ದೋರು ಇಂಗೆಲ್ಲ ಕುಲ್ಕಕೊಂದು ಜಾತಿ ಐತೆ. ಅದ್ರಲ್ಲೂ ಮಾದಿಗ್ರದೇ ದೊಡ್ಡಟ್ಟಿ. ಅಲ್ಲೇ ಸಿಕ್ದೊರೆಲ್ಲ, “ಏನ್ ಮಾವೋ ಯಿಟೊತ್ನಾಗೆ… ಬಾ ಉನ್ಡೋಗಿವನ್ತೇ…” ಅನ್ನೋರು. ಅವ್ರನ್ನೆಲ್ಲ ಸಮಾನ್ಸಿ ಮಗ್ಳ ಮನಿಗೆ ವಾಗೋವಷ್ಟತ್ಗೆ ಮೂರ್ಜಿನ ಆಗ್ಬಿಡೋದು. ಈರಕ್ಕನ್‍ಸಮ್ದ್ರ ಊರೊಳಗೆ ಒನ್ಪರ್ಲಾನ್ಗು ಹ್ವಾದ್ರೇ ಬೈಚ್ರಳ್ಳಿ, ಅದ್ನ ಬಿಟ್ಟು ನಾಗೇನಳ್ಳಿ ಬಾರೆ, ಅದ್ನೂ ಬಳಸ್ಕೊನ್ಡು ವಡ್ರಳ್ಳಿಯಿನ್ದ ಹ್ವಾಗ್ಬೇಕಿತ್ತು. ಹಾದಿನೂ ದೂರ. ಸಿಕ್ಕಡೆಯೆಲ್ಲ ರಂಕ್ಲೂ ರಾಮಾಣ್ಯ, ಅದಲ್ದೆ ಗೊಲ್ಲಳ್ಳಿಗೆ ಹ್ವಾದ್ರೇ ತನ್ಗಿ ಮಗ್ಳು ಈರಿನಾ ಅಲ್ಲೇ ಕೊಟ್ಟಿರೋದು. ಅವ್ಳು ಸುಮ್ನೇ ಬಿಟ್ಟಾಳ! “ಇಲ್ಲೇ ಇರ್ಮಾವ…” ಅನ್ತ ಹಿಂದ್ಬೀಳ್ತಳೇ. ಇದ್ನೆಲ್ಲ ಆಗ್ಬುಟ್ರೆ ತನ್ನೂರ್ಗೆ ಹ್ವಾಗಕ್ಕೆ ವಾರ್ದಮ್ಯಾಲೆ ತಿಂಗ್ಳಾದ್ರೂ ಆಗ್ತಿತ್ತು. ಕಷ್ಟ ಆದ್ರೂ ಸರಿ. ಯೀ ಕರ್ಕಲ್ಲುಗುಟ್ಟೆ ಹಾದಿನೇ ಸರಿ ಎನ್ದು ಈ ಹಾದ್ಯಾಗೆ ನಡ್ದಿದ್ದ ಚಿಕ್ಕಯ್ಯ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
ನೀಗೊನಿ
ಸಾಂದರ್ಭಿಕ ಚಿತ್ರ | ಕೃಪೆ: ಎಲ್‌ಎಲ್‌ಸಿ ಫೋಟೊ ಸ್ಟ್ರೀಮ್

ಇದು ಹತ್ರದ ಹಾದಿ. ಗೊಲ್ಲಳ್ಳಿನಾ ಬಲಕ್ಕೆ ಬಿಟ್ಕನ್ಡು ನಡೆದು ಹ್ವಾದ್ರೇ ಅದ್ಗ ಇದ್ಗ ಅನ್ವಾಗ ರಾಮ್ಪುರದ ದಿಣ್ಣೆಗೆ ಹ್ವಾಗ್‍ಬೌದು. ರಾಮ್ಪುರ ದಿಣ್ಣೆಯಿನ್ದ ಕೆಳಕ್ಕಿಳಿದು ಊರಿನ್ದ ಕೆಳ್ಕೆ ಸಾಗಿ ಹಾಗೆ ಮುನ್ದಕೆ ಹ್ವಾದ್ರೆ ಜಯ್ಮನ್ಗಲಿ ಹರ್ಯೋ ಹಾದ್ಯಾಗೆ ಗಿಡ್ಮರಗಳಿನ್ದ ತುಮ್ಬಿರೋ ಕಾಡ್ದಾರಿ. ಸುತ್ಮುತ್ಲೋರೆಲ್ಲ ಕಾಡ್ನಾಗೆ ಓಡಾಡಕ್ಕೆ ಮಾಡ್ಕನ್ಡಿರೋ ಹಾದ್ಯಾಗೆ ನಡ್ದೂ ಹೀರಪ್ಪನ ಬೆಟ್ಟ ಹತ್ತುದ್ರೆ, ಅಲ್ಲಿ ಜಯ್ಮನ್ಗಲಿ ನದೀ ಬೆಟ್ದಲ್ಲಿ ಕವ್ಲುಕವ್ಲಾಗಿ ಹರಿತದೆ. ಅಲ್ಲಿ ಆ ಕಡೀಬೆಟ್ಟ ಯೀ ಕಡಿಬೆಟ್ಗಳ ನಡುವೆ ಬಮ್ಬುಗಳ ಸೇತ್ವೆ ಕಟ್ಟಿ ಓಡಾಡಕ್ಕೆ ಮಾಡ್ಕನ್ಡಿರೋ ಹಾದಿಗೇ ತಟಾದ್ರೆ ಸಾಕಿತ್ತು ಮಗ್ಳು ಮನೆ ಸಿಕ್ಬಿಡೋದು. ಅದೂ ಮಳ್ಗಾಲ್ದಾಗೆ ಈ ಹಾದಿ ಕಷ್ಟ ಕಷ್ಟ. ಬೇಸ್ಗೆಲೀ ಜಯ್ಮನ್ಗಲಿ ಸಾನ್ತವಾಗಿ ಸಣ್ದಾಗಿ ಹರ್ಯೋದು. ಯೆನ್ಗೋ ನಡ್ಯದು. ಯಿನ್ಗಾಗಿ ಚಿಕ್ಕಯ್ಯ ಯೀ ಹಾದಿನಾ ಆರುಸ್ಕನ್ಡಿದ್ದು. ಅದ್ಗಾ ಇದ್ಗಾ ಅನ್ವಾಗ ಬನ್ದು ವಾಪ್ಸು ಆಗ್ಬಿಡಬೌದಿತ್ತು. ಮೊದಲಿನ್ದಲೂ ಯಿನ್ಗೆ ನಡೀತಿತ್ತು. ಯೆನ್ದೂ ದಣ್ವಾಗಿದೆ ಅಮ್ತಾ ಯೇಳ್ದವನ್ನಲ್ಲ. ಚಿಕ್ಕಯ್ಯ ನಡ್ವ ಬಿರ್ಸಿಗೆ ದಣ್ವೇ ದಿಕ್ಪಾಲಾಗಿ ಓಡೋಗ್ತಿತ್ತು. ಯೆಷ್ಟೋ ರಾತ್ರಿಗ್ಳು ಯೀ ಹಾದೀಲಿ ಬಾಡು-ಬಳ್ಳೇನಾ ಮನ್ಕ್ರೀಲಿ ಹಾಕೊನ್ಡು ಹೊತ್ತು ಮಗ್ಳ ಮನ್ಗೆ ಕೊಟ್ಟು ಬನ್ದಿದ್ದ, ಮೇಕೆಗಳ್ನೂ, ದನಗಳ್ನೂ, ಮಗ್ಳ ಪಾಲ್ಗೆ ಬನ್ದಿದ್ದ ಬೆಳ್ಳುಳ್ಳಿಯನ್ನು ಯೀ ಹಾದಿಯಲ್ಲೇ ಹ್ವಾಡ್ಕನ್ಡು ಹ್ವಾಗಿದ್ದ. ಯೀ ಹಾದಿ ಇವ್ನಿಗೆ ಆಟೊನ್ದು ವಾಡ್ಕೆ.

ಈ ಆಡಿಯೊ ಕೇಳಿದ್ದೀರಾ?: ನಮ್ ಜನ | ಒಂಟಿ ಕಣ್ಣಿನ ಒಬ್ಬಂಟಿ ಬದುಕಿನ ಆಟೋ ಗೌಸ್ ಸಾಹೇಬ್ರು

ಆದ್ರೇ ಇನ್ದೇಕೋ ಅವ್ನಿಗೆ ಯೀ ಹಾದಿ ಪರ್ಚಯ ಇಲ್ದನ್ಗೆ ಆಗ್ತಾ ಯೀದೆ ಅನ್ನಿಸ್ತು. ಏನಾದ್ರೂ ಯೀ ಹಾದಿ ನನ್ಮ್ಯಾಲೇ ಮುನ್ಸಕಂಡಿದೆಯಾ ಅನ್ಕನ್ಡ ಚಿಕ್ಕಯ್ಯ. ನಾನೇನಾದರೂ ತೆಪ್ಪು ಮಾಡಿದ್ನೇ? ಜೀಮಾನ್ದಾಗೆ ಯೇಟುಬಾರಿ ಯೀ ಹಾದೀಲಿ ಹ್ವಾಗಿಲ್ಲ. ಯೆನ್ತೆನ್ತ ರಾತ್ರೀಲಿ ಯಿದೇ ಹಾದಿ ಹಾಲ್ಬೆಳಕನ್ನ ಹರ್ಡಿ ಕೈ ಹಿಡಿದು ಕರ್ದೊಯ್ದಿಲ್ಲ. ಇನ್ದ್ಯಾಕೆ ಬೇಸ್ರ ಮಾಡ್ಕನ್ಡಿದೆ. ನಡೆಯುತ್ತಿದ್ದನ್ತೆ ಸರೀಳ್ದ ಹರ್ಸ ಕಡ್ಮೆಯಾಗಿ ಕಾಲಲ್ಲಿ ಜೋಮು ಹಿಡ್ಕನ್ಡಗಾತು. ಮಗ್ಳ ಮದ್ವಿಯಾದಾಗಿನಿನ್ದ ಗೆಣೆಕಾರನನ್ತೆ ಬರ್ತಿದ್ದ ಯೀ ಹಾದಿಗೆ ಏನಾದ್ರೂ ವಯಸ್ಸಾಯಿತೇ? ಇಲ್ಲ ತನ್ಗೇನಾದ್ರೂ ವಯಸಾಯಿತೇ? ಉಬ್ಬುಸ ಬರತೊಡಗಿತು, ಏದುಸಿರು ಬಿಟ್ಟ. ಅಲ್ಲೇ ಒನ್ದು ಬಣ್ಡೆ ಮ್ಯಾಲೆ ಕುಕ್ಕರಗಾಲಿನಲ್ಲಿ ಕುನ್ತ. ಆ ಬಣ್ಡೆ ಯೀ ಹಿನ್ದಿನನ್ತೆ ನಕ್ಕಿತು. “ಬಾರಪೊ ಬಾಳ ದಿನ ಆಯ್ತು ಸಿಕ್ಕಿ…” ಎನ್ದು ಕರ್ದೂ ಕೂರಿಸಿಕೊನ್ಡಿತು. ಯಾವಾಗಿನನ್ತೆ ಅಡ್ಕೆಲೆ ಚೀಲದಿನ್ದ ಎಲ್ಯಡಕೆನೂ ವಗೇಪುಡೀನೂ ಹಾಕಿಕೊನ್ಡು ಮೆಲ್ಲತೊಡಗಿದ. ಮೆಲ್ಲುತ್ತಾ-ಮೆಲ್ಲುತ್ತಾ ತನ್ನ ಮಗ್ಳ ಬದ್ಕು ಕಣ್ಣಮುನ್ದೆ ಬನ್ದ ಆಗಾಯ್ತು.

2

ಕಣ್ಣಮುನ್ದೆ ಬನ್ದ ದೊಡ್ಡೀರಿ ಚಿಕ್ಕಯ್ಯನ್ಗೇ ಹುಟ್ಟಿದ ಮೂರು ಹೆಣ್ಮಕ್ಳಲ್ಲಿ ಕೊನೆ ಮಗ್ಳು. ಅತಿ ಮುದ್ನಿನ್ದ ಬೆಳ್ಸಿದ ದೊಡ್ಡೀರಿನ ಮದ್ವೆ ಮಾಡಿ ಮನ್ದುಮ್ಬಿ ಬರ್ವಾಗ ಚಿಕ್ಕಯ್ಯ ಹರಿವ ಹಳ್ಳವೇ ಆಗಿದ್ದ. ತನ್ನೊಳಗೆ ಅದ್ಮಿಟ್ಟಿದ್ದ ಮಗ್ಳ ಮ್ಯಾಲ್ನ ಪಿರುತಿ ಅವತ್ತು ಕಟ್ಟೆಯೊಡೆದಿತ್ತು. ತನ್ನೂರು ಕರಿವನ್ಗಲನ್ನು ಎನ್ದು ಬಿಟ್ಟು ಹೊರಬರ್ದವ ಮಗ್ಳ ಮದ್ವೆಗಾಗಿ ಊರನ್ನು ಬಿಟ್ಟಿದ್ದವ ಅಷ್ಟೇ. ಕರಿವನ್ಗಲ ಬರೀ ಬನ್ಡೆಗ್ಳೇ ತುಂಬಿದ್ದ ಹಳ್ಳಿ. ಹೊತ್ತು ನೆತ್ತಿಮ್ಯಾಕೆ ಬರೋ ಟೇಮಾದ್ರೂ ಸೂರಪ್ಪ ಆ ಊರಿಗೆ ಬರಲು ಏಗುತ್ತಿದ್ದ. ಆದಾಗ್ಯೂ ತನ್ನ ಕಾಯ್ಕದಲ್ಲಿ ಪರ್ಪನ್ಚ ಯಾಕ್ ಮಾಡ್ಬೇಕು ಅನ್ತ ಜಿನ್ಕೆ ಒಮ್ಮೆಯಾದರೂ ಆ ಹಳ್ಳಿಗೆ ನಿರ್ವನ್ಚನೆಯಿಲ್ದೆ ಬನ್ದೋಗುತ್ತಿದ್ದ. ಸೂರಪ್ಪನ ಜಗತ್ತಿನ ನಿತ್ಯಕಾಯಕದಲ್ಲಿ ಈ ಹಳ್ಳಿಗೆ ಬನ್ದೋಗುವುದೇ ಅತಿ ಪ್ರಯಾಸದಾಗಿತ್ತು. ಆ ಸೂರಪ್ಪನಲ್ಲದೇ ಬೇರೆ ಯಾರಾದರೂ ಆಗಿದ್ದರೆ ಆ ಊರನ್ನ ಸೈಡಿಗೆ ಬಿಟ್ಟುಬಿಡುತ್ತಿದ್ದರೋ ಏನೋ? ಯಾರ ಗಮನಕ್ಕೂ ಬಾರದೆ ದೂರಕ್ಕೆ ತಗ್ಗಿನ ತಾವು ಪಡ್ದು ಹುದುಗಿದ್ದ ಆ ಹಳ್ಳಿ ಅಕ್ಕಪಕ್ಕದವರ ಗ್ಯಾನಕ್ಕೂ ಬನ್ದಿರಲಿಲ್ಲ. ಆ ಹಳ್ಳಿಯ ಜನ ಅಲ್ಲಿಯೇ ಹುಟ್ಟಿ ಅಲ್ಲಿಯೇ ಬೆಳೆದು ಅಲ್ಲಿಯೇ ಮದ್ವೆಯಾಗಿ ತಮ್ಮ ಜೀವ್ಮಾನನ ಅಲ್ಲೇ ಕೊನೆಗಾಣಿಸ್ಕೊಳ್ತಿದ್ರು. ಚಿಕ್ಕಯ್ಯನ ಕತೆಯೂ ಇದೇ ಆಗಿತ್ತು. ಹೀಗಾಗಿ ಚಿಕ್ಕಯ್ಯನ್ಗೂ ಬೇರೆ ಊರಿನ ಸಮ್ಬನ್ದ ಸಮಾನ್ಸ ಬನ್ದಿರಲಿಲ್ಲ. ಆದ್ರೆ ಅದ್ಯಾವಾಗ ಆ ಕೋಡಿ ಈ ಊರಿಗೆ ಬನ್ದನೋ ಅವಾಗಲಿನ್ದ ಆ ಹಳ್ಳಿಗೆ ಬೇರೆ ಜನ್ರ ಪರ್ಚಯ ಸಿಗುವ ಹಾಗಾಯಿತು. ಕೋಡಿ ದೂರದ ಊರಿನವ ಅವನು ಹಾದಿ ತಪ್ಪಿ ಬನ್ದು ಈ ಕೊಮ್ಪೆಗೆ ಸೇರ್ಕೊನ್ಡಿದ್ದ. ಹೊಸ ಹಾದಿಯನ್ನ ಕೋಡಿ ಸೋಸಿಬಿಟ್ಟಿದ್ದ. ಹಾದಿಯಿರದ ಮುಳ್ಳುಕಲ್ಲುಗಳನ್ನು ತುಳಿಯುತ್ತಾ, ನಡೆಯುತ್ತಾ ದಿಕ್ಕು ತಪ್ಪಿದ್ದ ಕೋಡಿ ಬಾಯಲ್ಲೇ ಮೊದಲು ಆ ಊರಿನ ಹೆಸರು ಕೇಳಿದ್ದು ಚಿಕ್ಕಯ್ಯ. “ಏನದು? ಏನೂರದು? ನೀಗೊನಿ. ನೀಗೊನಿ ಅನ್ತ ಯಾರಾದ್ರೂ ಊರಿಗೆ ಹೆಸ್ರು ಕಟ್ತಾರಾ? ಏನಿರಬಹುದು ನೀಗೊನಿ ಅನ್ಗನ್ದ್ರೆ?” ಅನ್ತ ಎಷ್ಟೆಷ್ಟು ಸಾರಿ ಯೋಚಿಸಿದ್ದ ಚಿಕ್ಕಯ್ಯ. ಉಹೂಂ… ತಲೆಗೆ ಬರಲೊಲ್ದು. ಎನ್ದೂ ಕೇಳದಿದ್ದ, ಮೊದಲ ಬಾರಿಗೆ ಕೇಳಿದ್ದ ನೀಗೊನಿ ಅನ್ನ ಊರಿಗೆ ನನ್ಟಸ್ತನ ಬೆಳಸ್ತಿನಿ ಅನ್ತ ಚಿಕ್ಕಯ್ಯ ಕನಸು ಮನಸಿನಲ್ಲಿಯೂ ಅನ್ದಾಜಿಸಿರಲಿಲ್ಲ. ಆದ್ರೆ ನಡ್ದೇಬಿಟ್ಟಿತ್ತು.

ಮುಖ್ಯ ಚಿತ್ರ ಕೃಪೆ: ಲಿಂಗೇಶ್ವರನ್ ಮಾರಿಮುತ್ತು

ಪೋಸ್ಟ್ ಹಂಚಿಕೊಳ್ಳಿ:

ರವಿಕುಮಾರ್ ನೀಹ
ರವಿಕುಮಾರ್ ನೀಹ
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ನೀಲಗೊಂಡನಹಳ್ಳಿಯವರು. ಕನ್ನಡ ಮೇಷ್ಟ್ರು. ಕನ್ನಡ ಸಾಹಿತ್ಯ ವಿಮರ್ಶೆಗೆ ಹೊಸ ಪರಿಭಾಷೆಗಳನ್ನು ಜೋಡಿಸಿದ ಗಮನಾರ್ಹ ವಿಮರ್ಶಕ. ಇತ್ತೀಚೆಗೆ ಬಿಡುಗಡೆಯಾದ 'ಅರಸು ಕುರನ್ಗರಾಯ' ಕೃತಿ ಇವರ ಸಂಶೋಧನಾ ಆಸಕ್ತಿಯನ್ನು ಮತ್ತು ನಿಜವಾದ ನೆಲಮೂಲದ ಸಂಶೋಧನೆಗಳು ಸಾಗಬೇಕಾದ ಹಾದಿಯನ್ನು ಸಾರುವ ಅಪೂರ್ವ ದಾಖಲೆ.

7 COMMENTS

    • ಧನ್ಯವಾದ ಸರ್. ಈದಿನ.ಕಾಮ್‌ಗೆ ಭೇಟಿ ಕೊಟ್ಟಿದ್ದಕ್ಕಾಗಿ ನನ್ನಿ. ನಿಮ್ಮ ಇನ್ನಷ್ಟು ಪ್ರತಿಕ್ರಿಯೆಗಳಿಗಾಗಿ ಕಾಯ್ತಿರ್ತೇವೆ.

  1. ಚೆನ್ನಾಗಿದೆ ಸರ್…. ಆಡುಭಾಷೆ ಓದೋಕೆ ಒಳ್ಳೆ ಮುದ ನೀಡುತ್ತೆ… ಮುದ್ದಾಗಿದೆ

    • ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು ಸರ್. ಈದಿನ.ಕಾಮ್‌ಗೆ ಭೇಟಿ ಕೊಟ್ಟಿದ್ದಕ್ಕಾಗಿ ನನ್ನಿ. ನಿಮ್ಮ ಇನ್ನಷ್ಟು ಪ್ರತಿಕ್ರಿಯೆಗಳಿಗಾಗಿ ಕಾಯ್ತಿರ್ತೇವೆ.

  2. ಕಾದಂಬಾರಿ ಓದುವ ಶೈಲಿ ಭಾಷೆ ಕುಸುಮ ಬಾಲೆಯ ಭಾಷೆಯನ್ನು ನೆನಪಿಸಿತು.ಒಂದೊಳ್ಳೆ ಪ್ರಯತ್ನ ನನ್ನ ನೆಲದ ಭಾಷೆ ನಾಡಿನಾದ್ಯಂತ ಪಸರಿಸಲಿ.ಅಭಿನಂದನೆಗಳು ಬ್ರದರ್

  3. ಕಾದಂಬರಿಯನ್ನು ಓದುವ ಶೈಲಿ ಭಾಷೆ ಕುಸುಮ ಬಾಲೆಯ ಭಾಷೆಯನ್ನು ನೆನಪಿಸಿತು.ಒಂದೊಳ್ಳೆ ಪ್ರಯತ್ನ ನನ್ನ ನೆಲದ ಭಾಷೆ ನಾಡಿನಾದ್ಯಂತ ಪಸರಿಸಲಿ.ಅಭಿನಂದನೆಗಳು ಬ್ರದರ್

    REPLY

    • ನಿಮ್ಮ ಆಶಯದಂತಾಗಲಿ ಸರ್. ಈದಿನ.ಕಾಮ್‌ಗೆ ಭೇಟಿ ಕೊಟ್ಟಿದ್ದಕ್ಕಾಗಿ ನನ್ನಿ. ನಿಮ್ಮ ಇನ್ನಷ್ಟು ಪ್ರತಿಕ್ರಿಯೆಗಳಿಗಾಗಿ ಕಾಯ್ತಿರ್ತೇವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊಸಿಲ ಒಳಗೆ-ಹೊರಗೆ | ಬ್ರಾ… ಪ್ರತಿಭಟನೆ ಮತ್ತು ಬಿಡುಗಡೆಯ ಭಾವ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮೈಕ್ರೋಸ್ಕೋಪು | ಅಯೋಧ್ಯೆ ರಾಮ ಮಂದಿರದಲ್ಲಿ ‘ವಿಜ್ಞಾನ’ ಬಳಕೆ; ನಿಜಕ್ಕೂ ದೇಶದಲ್ಲಿ ಇದೇ ಮೊದಲಾ?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸಿಲ ಒಳಗೆ-ಹೊರಗೆ | ನೀವು ಕೊಕ್ಕರೆಯಾದರೂ ಸರಿಯಲ್ಲ, ನರಿಯಾದರೂ ಸರಿಯಲ್ಲ; ಯಾಕೆಂದರೆ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...