ಜಾಗತೀಕರಣ ಕಾಲದ ಎಸ್ಈಝಡ್ಗಳ ಶಿಶುರೂಪದಂತೆ ಸಾತನೂರು-ಬಿಡದಿಗಳಲ್ಲಿ ನಿರ್ಮಿಸಲು ಸರ್ಕಾರ ಅನುಮತಿಸಿದ್ದ ʻಜಪಾನ್ ಕೈಗಾರಿಕಾ ನಗರʼದ ವಿರುದ್ಧದ ಯಶಸ್ವಿ ಹೋರಾಟ, ತುಂಗಾಮೂಲ ಮತ್ತು ಭದ್ರಾಮೂಲ ಉಳಿವಿಗಾಗಿ, ʻನೈಸ್ʼ ರಸ್ತೆ (ಬಿಎಂಐಸಿ) ವಿರುದ್ಧ, ಬೀದರ್ನಲ್ಲಿ ರಾಸಾಯನಿಕ ಕಾರ್ಖಾನೆಗಳ ವಿರುದ್ಧ, ಕುದುರೆಮುಖ ರಾಷ್ಟ್ರೀಯ ಉದ್ಯಾನದ ಹೆಸರಿನಲ್ಲಿ ಆದಿವಾಸಿಗಳ ಮತ್ತು ಅರಣ್ಯ ಅವಲಂಬಿತ ಪಾರಂಪರಿಕ ರೈತಾಪಿಯ ಎತ್ತಂಗಡಿಯ ವಿರುದ್ಧ … ಹೀಗೆ ಹಲವು ದೀರ್ಘಕಾಲಿಕವಾದ ದೊಡ್ಡದೊಡ್ಡ ಯಶಸ್ವಿ ಹೋರಾಟಗಳನ್ನು ಕವಿರಂ ಮುನ್ನಡೆಸಿತ್ತು.
ಸಮಗ್ರ ಕರ್ನಾಟಕದ ಮೇಲೆ ಜಾಗತಿಕ ಬಂಡವಾಳಶಾಹಿ (ಸಾಮ್ರಾಜ್ಯಶಾಹಿ) ಮತ್ತು ಕೇಂದ್ರ ಸರ್ಕಾರದಿಂದ ನಡೆಯುವ ಎಲ್ಲಾ ರೀತಿಯ ದಾಳಿ- ದಬ್ಬಾಳಿಕೆ ಮತ್ತು ಹೇರಿಕೆಗಳನ್ನೂ, ಸ್ಥಳೀಯ ಭಾಷೆಗಳ ಮೇಲೆ ಇಂಗ್ಲಿಷ್, ಹಿಂದಿ, ಸಂಸ್ಕೃತಗಳ ಹೇರಿಕೆಯನ್ನೂ ವಿರೋಧಿಸುತ್ತ, ಕನ್ನಡ ಭಾಷೆ-ಅಸ್ಮಿತೆ-ಸಂಸ್ಕೃತಿ-ನೆಲ-ಜಲ-ಜನ-ಸಂಪನ್ಮೂಲ ಎಲ್ಲವನ್ನೂ ರಕ್ಷಿಸಿಕೊಳ್ಳುವ ಪ್ರಧಾನ ಗುರಿಯೊಂದಿಗೆ, ಹಲವು ಮಂದಿ ಕನ್ನಡ ಚಳವಳಿಗಾರರ ಮತ್ತು ಸಂಘಟನೆಗಳ ಶ್ರಮದಿಂದ 1989ರ ನವೆಂಬರಿನಲ್ಲಿ ʻಕರ್ನಾಟಕ ವಿಮೋಚನಾ ರಂಗʼ (ಕವಿರಂ) ಎಂಬ ಜನಪರ ಹೋರಾಟದ ಸಂಘಟನೆ ಆರಂಭವಾಗಿತ್ತು.
“ಭಾರತ ಎನ್ನುವುದು ಒಂದು ʻರಾಷ್ಟ್ರʼವಲ್ಲ, ಒಂದು ದೇಶ; ಅದು ಹಲವು ʻರಾಷ್ಟ್ರʼಗಳ ಒಕ್ಕೂಟ ಅಷ್ಟೇ. ವಿವಿಧ ಭಾಷಾವಾರು ಪ್ರಾಂತಗಳೆಂದರೆ ಯೂರೋಪಿನ ಹಲವಾರು ಸಣ್ಣಪುಟ್ಟ ದೇಶಗಳಂತೆಯೇ ಸ್ವತಂತ್ರ ಅಸ್ತಿತ್ವ ಹೊಂದುವ ಎಲ್ಲ ಅರ್ಹತೆ, ಸಾಧನ ಸಾಮಗ್ರಿಗಳನ್ನೂ ಹೊಂದಿರುವ ʻರಾಷ್ಟ್ರʼಗಳೇ. ಸಮಾನ ಶತ್ರುವಾಗಿದ್ದ ಬ್ರಿಟಿಷ್ ವಸಾಹತುಶಾಹಿಯ ವಿರುದ್ಧದ ದೀರ್ಘಕಾಲದ ಹೋರಾಟದ ಪ್ರಕ್ರಿಯೆಯಿಂದಾಗಿ ಅವೆಲ್ಲವೂ ಒಕ್ಕೂಟ ತತ್ವದಡಿಯಲ್ಲಿ ಒಂದುಗೂಡಿವೆ. ಒಕ್ಕೂಟ ವ್ಯವಸ್ಥೆಯಡಿ ತಮ್ಮ ವಿಕಸನ, ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ ಎಂದು ಅವುಗಳಿಗೆ ಅನ್ನಿಸಿದಲ್ಲಿ ಪ್ರತ್ಯೇಕಗೊಳ್ಳುವ (cessation) ಹಕ್ಕನ್ನೂ ಒಳಗೊಂಡಂತೆ ಅವೆಲ್ಲಕ್ಕೂ ಸ್ವಯಂ-ನಿರ್ಣಯದ (self determination) ಹಕ್ಕಿದೆ. ಆದ್ದರಿಂದ ಕೇಂದ್ರ ಸರ್ಕಾರವು ರಾಜ್ಯಗಳ ಮೇಲೆ ಯಾವುದೇ ಹೇರಿಕೆ, ಏಕಾಧಿಪತ್ಯ (ಡಾಮಿನೇಶನ್) ನಡೆಸಬಾರದು. ಒಂದು ಹೂದೋಟದಲ್ಲಿನ ಎಲ್ಲ ಬಗೆಯ ಹೂಗಿಡಗಳೂ ಸ್ವತಂತ್ರವಾಗಿ ಬೆಳೆದು ಅರಳುವಂತೆ ಈ ರಾಷ್ಟ್ರೀಯತೆಗಳಿಗೂ ವಿಕಾಸಗೊಳ್ಳಲು ಮುಕ್ತ ಅವಕಾಶ ಇರಬೇಕು …” ಎನ್ನುವುದು ಸ್ಥೂಲವಾಗಿ ಕವಿರಂನ ವಿಚಾರಧಾರೆಯಾಗಿತ್ತು. ವಾಸ್ತವವೆಂದರೆ, 1980ರ ದಶಕದಲ್ಲೇ ಈ ರೀತಿಯ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಮುಂದಿಟ್ಟವರು ಕನ್ನಡದ ಖ್ಯಾತ ಸಂಸ್ಕೃತಿ ಚಿಂತಕ ಡಾ. ಡಿ.ಆರ್. ನಾಗರಾಜ್ ಅವರು. (ಅದಕ್ಕಿಂತ ಎಷ್ಟೋ ಮೊದಲೇ ತಮಿಳುನಾಡಿನ ಹಲವಾರು ಸಂಘಟನೆಗಳು ಮತ್ತೆಮತ್ತೆ ಪ್ರತ್ಯೇಕ ತಮಿಳ್ನಾಡಿನ ಘೋಷಣೆ ಎತ್ತಿದ್ದವು.)
ಜಾಗತೀಕರಣ ಕಾಲದ ಎಸ್ಈಝಡ್ಗಳ ಶಿಶುರೂಪದಂತೆ ಸಾತನೂರು-ಬಿಡದಿಗಳಲ್ಲಿ ನಿರ್ಮಿಸಲು ಸರ್ಕಾರ ಅನುಮತಿಸಿದ್ದ ʻಜಪಾನ್ ಕೈಗಾರಿಕಾ ನಗರʼದ ವಿರುದ್ಧದ ಯಶಸ್ವಿ ಹೋರಾಟ, ತುಂಗಾಮೂಲ ಮತ್ತು ಭದ್ರಾಮೂಲ ಉಳಿವಿಗಾಗಿ, ʻನೈಸ್ʼ ರಸ್ತೆ (ಬಿಎಂಐಸಿ) ವಿರುದ್ಧ, ಬೀದರ್ನಲ್ಲಿ ರಾಸಾಯನಿಕ ಕಾರ್ಖಾನೆಗಳ ವಿರುದ್ಧ, ಕುದುರೆಮುಖ ರಾಷ್ಟ್ರೀಯ ಉದ್ಯಾನದ ಹೆಸರಿನಲ್ಲಿ ಆದಿವಾಸಿಗಳ ಮತ್ತು ಅರಣ್ಯ ಅವಲಂಬಿತ ಪಾರಂಪರಿಕ ರೈತಾಪಿಯ ಎತ್ತಂಗಡಿಯ ವಿರುದ್ಧ … ಹೀಗೆ ಹಲವು ದೀರ್ಘಕಾಲಿಕವಾದ ದೊಡ್ಡದೊಡ್ಡ ಯಶಸ್ವಿ ಹೋರಾಟಗಳನ್ನು ಕವಿರಂ ಮುನ್ನಡೆಸಿತ್ತು. ರಾಜ್ಯದ ಎಲ್ಲೆಡೆ ಬಹುತೇಕ ಪ್ರಜ್ಞಾವಂತರ, ಜನಪರ ಮತ್ತು ಕನ್ನಡಪರ ಸಂಘಟನೆಗಳ ಬೆಂಬಲವನ್ನು ಅದು ಗಳಿಸಿತ್ತು. ಬಹುಪಾಲು ಹೋರಾಟಗಳನ್ನು ಇತರ ಅನೇಕ ಸಮಾನ ಮನಸ್ಕ ಸಂಘಟನೆಗಳೊದಿಗೆ ಜಂಟಿ ಹೋರಾಟ ಸಮಿತಿಗಳನ್ನು ಕಟ್ಟಿಯೇ ಅದು ಮುನ್ನಡೆಸಿತ್ತು. ಆದರೆ 2002ರ ಹೊತ್ತಿಗೆ ನಕ್ಸಲ್ ಚಳವಳಿಯೊಂದಿಗೆ ತಳುಕು ಹಾಕಿಕೊಂಡ ಪರಿಣಾಮವಾಗಿ ಪೊಲೀಸರ ದಮನಕ್ಕೆ ತುತ್ತಾದ ಅದು ಕ್ಷೀಣಿಸುತ್ತಾ ಕ್ರಮೇಣ ಅಸ್ತಂಗತವಾಯಿತು.
ನಾನಿಲ್ಲಿ ಹೇಳಹೊರಟಿರುವುದು ಬೀದರ್ನ ರಾಸಾಯನಿಕ ಕಾರ್ಖಾನೆಗಳ ವಿರುದ್ಧ ಮೂರು ವರ್ಷಕ್ಕೂ ಹೆಚ್ಚುಕಾಲ ನಡೆದು ಯಶಸ್ವಿಯಾದ ಹೋರಾಟದ ಬಗ್ಗೆ.
ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಧೋಖಾ
ನಾನು 1991ರಲ್ಲಿನ್ನೂ ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ʻಮುಂಜಾವುʼ ಪತ್ರಿಕೆ ನಡೆಸುತ್ತಿದ್ದಾಗಲೇ ಕವಿರಂ ಸೇರಿದ್ದೆ. ಬಳಿಕ ರಾಜ್ಯ ಸಮಿತಿ ಸದಸ್ಯನಾಗಿ, ನಂತರ ಅದರ ರಾಜ್ಯ ಕಾರ್ಯದರ್ಶಿಗಳಲ್ಲಿ ಒಬ್ಬನಾಗಿ ಆಯ್ಕೆಯಾಗಿದ್ದೆ. ಬಂಜಗೆರೆ ಜಯಪ್ರಕಾಶ್ ಅದರ ರಾಜ್ಯ ಅಧ್ಯಕ್ಷರು ಮತ್ತು ಮಳವಳ್ಳಿಯ ಉಜ್ಜನಿಗೌಡ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಕವಿರಂಅನ್ನು ಉತ್ತರ ಕರ್ನಾಟಕಕ್ಕೆ ವಿಸ್ತರಿಸಲು, ಅದರ ಭಾಗವಾಗಿ ಮೊದಲಿಗೆ ಕಲ್ಯಾಣ ಕರ್ನಾಟಕಕ್ಕೆ ವಿಸ್ತರಿಸಲು ರಾಜ್ಯ ಸಮಿತಿ ತೀರ್ಮಾನಿಸಿತು. ಆ ಉದ್ದೇಶದಿಂದ ನಾನು 1992ರ ಡಿಸೆಂಬರ್ನಲ್ಲಿ ಪತ್ರಿಕೆ ನಿಲ್ಲಿಸಿ, ಕವಿರಂನ ಪೂರ್ಣಾವಧಿ ಸಂಘಟಕನಾಗಿ 1993ರಲ್ಲಿ ಸಂಸಾರ ಸಮೇತ ಗುಲ್ಬರ್ಗಕ್ಕೆ ಸ್ಥಳಾಂತರಗೊಂಡಿದ್ದೆ.
ಆಗ ಕವಿರಂ ರಾಜ್ಯ ಸಮಿತಿ ಸದಸ್ಯರಾಗಿದ್ದ ಬೀದರ್ನ ಹೈಸ್ಕೂಲ್ ಹೆಡ್ಮಾಸ್ತರು ಬಿ.ಜಿ.ಸಿದ್ಬಟ್ಟೆ ಅವರು ಬೀದರ್ ಸಮೀಪದಲ್ಲಿ ಸ್ಥಾಪನೆಯಾಗಿದ್ದ ಹತ್ತಾರು ರಾಸಾಯನಿಕ ಕಾರ್ಖಾನೆಗಳ ಮಾಲಿನ್ಯದಿಂದ ಅಲ್ಲಿನ ಹಲವು ಹಳ್ಳಿಗಳು ತೀವ್ರ ಸಮಸ್ಯೆಗೆ ಈಡಾಗಿರುವುದು ಮತ್ತು ರೈತರು ಅದರ ವಿರುದ್ಧ ದನಿಯೆತ್ತಿರುವುದನ್ನು ರಾಜ್ಯ ಸಮಿತಿ ಸಭೆಯಲ್ಲಿ ತಿಳಿಸಿ, ಅದರ ವಿರುದ್ಧ ಕವಿರಂ ಹೋರಾಟ ಕೈಗೆತ್ತಿಕೊಳ್ಳಬೇಕೆಂದು ಪ್ರಸ್ತಾಪವಿಟ್ಟರು. ಆ ಬಗ್ಗೆ ತೀರ್ಮಾನಿಸುವ ಮುನ್ನ ರಾಜ್ಯ ಸಮಿತಿಯ ಸೂಚನೆಯಂತೆ ಆ ಸಮಸ್ಯೆಯ ಕುರಿತು ನಾನು ಬೀದರ್ನಲ್ಲಿ ಸಿದ್ಬಟ್ಟೆಯವರ ಜೊತೆ ಹಳ್ಳಿಗಳಲ್ಲಿ ಸುತ್ತಾಡಿ, ರೈತರನ್ನೂ ಮುಖಂಡರನ್ನೂ ಸಂದರ್ಶಿಸಿ ಅಗತ್ಯ ಮಾಹಿತಿ ಸಂಗ್ರಹಿಸಿದೆ, ರೈತಾಪಿ ಜನತೆ ಈ ಸಮಸ್ಯೆಯ ವಿರುದ್ಧ ಹೋರಾಟಕ್ಕೆ ಸಿದ್ಧರಿರುವುದನ್ನೂ ಗುರುತಿಸಿದೆ. ಕೊಳ್ಹಾರ, ನಿಜಾಂಪೂರ, ಹಜ್ಜರಗಿ, ಕಮಾಲಪೂರ, ಬೆಳ್ಳೂರು, ಬಕಚೌಡಿ, ನೌಬಾದ್ ಹಾಗೂ ಕಪಲಾಪುರ ಇವು ತೀವ್ರ ಸಮಸ್ಯೆಗೆ ಈಡಾಗಿದ್ದ ಪ್ರಮುಖ ಹಳ್ಳಿಗಳಾಗಿದ್ದವು. ಬೀದರ್ ನಗರದಿಂದ ಪಶ್ಚಿಮಕ್ಕೆ 7 ಕಿ.ಮೀ. ದೂರದಲ್ಲಿ ನೌಬಾದ್ನಿಂದ ಮುಂದಕ್ಕೆ ಹೆದ್ದಾರಿಯ ಎರಡೂ ಮಗ್ಗಲಲ್ಲಿ 1760 ಎಕರೆ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಖರೀದಿಸಿ ʻಕೊಳ್ಹಾರ ಕೈಗಾರಿಕಾ ಪ್ರದೇಶʼವನ್ನು ನಿರ್ಮಿಸಿತ್ತು. ರೈತರಿಗೆ ಎಕರೆಗೆ ಕೆಲವೇ ಸಾವಿರ ರೂ. (ಹೆಚ್ಚಾಗಿ 10 ಸಾವಿರದೊಳಗೆ) ಬೆಲೆ ನೀಡಲಾಗಿತ್ತು. ಅಲ್ಲಿ ಸ್ಥಾಪನೆಯಾಗುವ ಕೈಗಾರಿಕೆಗಳಲ್ಲಿ ರೈತರಿಗೆ ಮನೆಗೊಂದು ಉದ್ಯೋಗ ನೀಡುವ ಭರವಸೆಯನ್ನು ಅಧಿಕಾರಿಗಳೂ ಜನಪ್ರತಿನಿಧಿಗಳೂ ನೀಡಿದ್ದರು. ಎಲ್ಲಾ ಕಡೆಯಂತೆ ಇಲ್ಲಿಯೂ ಸಹ ಎಂತಹ ಕೈಗಾರಿಕೆಗಳು ಬರಲಿವೆ, ಅವುಗಳಿಂದ ಹಳ್ಳಿಗಳ ಹೊಲಗಳಿಗೆ, ನೀರಿನ ಮೂಲಗಳಿಗೆ ಹಾಗೂ ಜನ-ಜಾನುವಾರುಗಳಿಗೆ ಏನಾದರೂ ಅಪಾಯ ಇದೆಯಾ ಮುಂತಾದ ಯಾವ ಮಾಹಿತಿಯನ್ನೂ ರೈತರಿಗೆ ಹಾಗಿರಲಿ, ಗ್ರಾಮ ಪಂಚಾಯ್ತಿಗೆ ಕೂಡ ನೀಡಿರಲಿಲ್ಲ. ಕಾರ್ಖಾನೆಗಳು ಆರಂಭವಾದಾಗಲೇ ಗೊತ್ತಾಗಿದ್ದು – ಅವೆಲ್ಲ ರಾಸಾಯನಿಕ ಕಾರ್ಖಾನೆಗಳೆಂದು.
ರಾಸಾಯನಿಕ ಮಾಲಿನ್ಯದ ʻನರಕʼ
ವಾಸ್ತವವೇನೆಂದರೆ, ಹೈದರಾಬಾದಿಗೆ ಸಮೀಪದ ಪಟ್ಟಂಚೆರುವು ಎಂಬ ಬೃಹತ್ ಕೈಗಾರಿಕಾ ಪ್ರದೇಶದಲ್ಲಿ ಅಸಂಖ್ಯಾತ ರಾಸಾಯನಿಕ ಕಾರ್ಖಾನೆಗಳು ತುಂಬಿಹೋಗಿ, ಅವುಗಳ ಜಲ ಮತ್ತು ವಾಯು ಮಾಲಿನ್ಯ ಹೈದರಾಬಾದ್ ನಗರವನ್ನೂ ಒಳಗೊಂಡಂತೆ ಸುತ್ತಲಿನ ಹತ್ತಾರು ಕಿ.ಮೀ. ಪ್ರದೇಶವನ್ನು ವರ್ಷವಿಡೀ ಬಾಧಿಸುತ್ತಿತ್ತು. ಅಲ್ಲಿ ಇನ್ನು ರಾಸಾಯನಿಕ ಕಾರ್ಖಾನೆಗಳನ್ನು ಸ್ಥಾಪಿಸಲು ಪರವಾನಗಿ ಕೊಡಬಾರದೆಂದೂ, ಇರುವವನ್ನು ಬೇರೆ ರಾಜ್ಯಗಳಿಗೆ ಸ್ಥಳಾಂತರಿಸುವಂತೆ ಉತ್ತೇಜಿಸಬೇಕೆಂದೂ ಅಂದಿನ ಅವಿಭಜಿತ ಆಂಧ್ರಪ್ರದೇಶ ಸರ್ಕಾರ ತೀರ್ಮಾನಿಸಿತ್ತು. ಹೀಗಾಗಿ ಆ ಕಾರ್ಖಾನೆಗಳ ಮಾಲೀಕರು ಕರ್ನಾಟಕದತ್ತ ಮುಖ ಮಾಡಿದ್ದರು. ನಿಜಾಮರ ಆಡಳಿತಕ್ಕೆ ಒಳಪಟ್ಟಿದ್ದ ಬೀದರ್ ನಗರ ಹಿಂದಿನ ಕಾಲದಿಂದಲೂ ಒಂದು ರೀತಿಯಲ್ಲಿ ಹೈದರಾಬಾದಿನ ಒಂದು ಉಪನಗರದ ರೀತಿಯಲ್ಲೇ ಉಳಿದುಬಂದ ನಗರವಾಗಿದೆ. [ಈಗಲೂ ಸುತ್ತಮುತ್ತಲ ಊರುಗಳ ಜನ ಬೀದರ್ಗೆ ಕ್ವಾಟೆ (ಕೋಟೆ – ಅಂದರೆ ಇಲ್ಲೇ ಹತ್ತಿರದಲ್ಲಿರುವ ಪೇಟೆ ಎಂಬಂತೆ) ಅಂತಲೂ, ಹೈದರಾಬಾದಿಗೆ ಶಾರ (ಶಹರ, ಅದರೆ ಪಟ್ಟಣ) ಅಂತಲೂ ಕರೆಯುವುದು ರೂಢಿ]. ಅಲ್ಲಿನ ರಾಸಾಯನಿಕ ಕಾರ್ಖಾನೆಗಳ ಸ್ಥಳಾಂತರದ ಪ್ರಸ್ತಾಪದ ಹಿನ್ನೆಲೆಯಲ್ಲಿ ಕರ್ನಾಟಕದ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಮಟ್ಟದಲ್ಲಿ ʻಏನೇನುʼ ನಡೆಯಿತೋ! ಅಂತೂ ಬೀದರ್ ಬಳಿ ಕೈಗಾರಿಕಾ ಪ್ರದೇಶ ರಚನೆಯಾಯಿತು, ಅದನ್ನು ಕೆಮಿಕಲ್ ಝೋನ್ ಅಂತ ರಾಜ್ಯ ಸರ್ಕಾರ ತೀರ್ಮಾನಿಸಿತು! ಹೊರ ರಾಜ್ಯಗಳಿಂದ ಮಾತ್ರವಲ್ಲದೆ, ನಮ್ಮ ರಾಜ್ಯದ್ದೇ ಬೇರೆ ಕಡೆಗಳಲ್ಲಿ ಕೆಮಿಕಲ್ ಕಾರ್ಖಾನೆಗಳಿಗೆ ಅರ್ಜಿ ಬಂದಾಗಲೂ ಅದನ್ನು ಬೀದರ್ನಲ್ಲಿ ಸ್ಥಾಪಿಸಲು ಪ್ರೋತ್ಸಾಹಿಸಲಾಯಿತು, ಹಾಗೂ ಇಲ್ಲಿ ಕೈಗಾರಿಕೆ ಸ್ಥಾಪಿಸುವವರಿಗೆ ಅನೇಕಾನೇಕ ರಿಯಾಯ್ತಿ-ವಿನಾಯ್ತಿ-ಉಚಿತಗಳನ್ನು ಆಫರ್ ಮಾಡಲಾಯಿತು.
ದಿನದ ಇಪ್ಪತ್ನಾಲ್ಕು ಗಂಟೆಯೂ ಕೆಲಸ ನಡೆಯುವ ಅವುಗಳಲ್ಲಿ ವಿವಿಧ ರಾಸಾಯನಿಕ ಮೂಲ ಪದಾರ್ಥಗಳನ್ನು ಸಂಸ್ಕರಿಸಿ ಸಿಪ್ರೊಫ್ಲೋಕ್ಸಾಸಿನ್ ಮತ್ತಿತರ ಜೀವರಕ್ಷಕ ಔಷಧಿಗಳನ್ನು ಪುಡಿಯ ರೂಪದಲ್ಲಿ ಟನ್ಗಟ್ಟಲೆ ಪ್ರಮಾಣದಲ್ಲಿ ತಯಾರಿಸಲಾಗುತ್ತಿತ್ತು, ನಂತರ ಅದನ್ನು ಕಚ್ಚಾ ಪದಾರ್ಥದಂತೆ ಚೀನಾದಂತಹ ದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು. ಇದು ಅತ್ಯಂತ ಲಾಭದಾಯಕ ಉದ್ಯಮ ಮತ್ತು ವ್ಯವಹಾರವಾಗಿತ್ತು. ಆದರೆ ಅದರಿಂದ ಉತ್ಪತ್ತಿಯಾಗುವ ಅಪಾರ ಪ್ರಮಾಣದ ದ್ರವರೂಪದ ತ್ಯಾಜ್ಯವನ್ನು ರಸ್ತೆ ಪಕ್ಕದ ಚರಂಡಿಗಳು ಮತ್ತು ಎಲ್ಲೆಂದರಲ್ಲಿ ಹರಿಬಿಡಲಾಗುತ್ತಿತ್ತು. ಅದು ಬಾವಿಗಳು, ಬೋರ್ವೆಲ್ಗಳು, ಕೆರೆ ಮತ್ತಿತರ ಎಲ್ಲ ಜಲಮೂಲಗಳಲ್ಲೂ ಬೆರೆಯುತ್ತಿತ್ತು. ಮತ್ತೊಂದೆಡೆ ಅಸಾಧ್ಯ ದುರ್ವಾಸನೆ ಮತ್ತು ಘಾಟಿನಿಂದ ಕೂಡಿದ ಗಾಳಿ ಸುತ್ತಮುತ್ತಲ ಹಳ್ಳಿಗಳಲ್ಲದೆ ಬೀದರ್ ನಗರಕ್ಕೂ ಬೀಸಿಬರುತ್ತಿತ್ತು. ವಿಶೇಷವಾಗಿ ಸಂಜೆಯ ಹೊತ್ತು ಹಾಗೂ ಪಶ್ಚಿಮದಿಂದ ಗಾಳಿ ಬೀಸುವ ಸೀಸನ್ನಲ್ಲಂತೂ ಬೀದರ್ ಜನಜೀವನ ನರಕವಾಗುತ್ತಿತ್ತು. ಕಾರ್ಖಾನೆಗಳು ತಮ್ಮ ದ್ರವ ತ್ಯಾಜ್ಯ ಮತ್ತು ಮಲಿನ ಗಾಳಿಯ ಶುದ್ಧೀಕರಣಕ್ಕೆ ಯಾವುದೇ ವ್ಯವಸ್ಥೆಯನ್ನು ಅಳವಡಿಸಿಕೊಂಡಿರಲಿಲ್ಲ. ಅದಾಗಲೇ 16 ಕಾರ್ಖಾನೆಗಳು ಕೆಲಸ ಆರಂಭಿಸಿದ್ದು, 1992ರಲ್ಲೇ ಇನ್ನೂ 30ಕ್ಕೂ ಹೆಚ್ಚು ಕಾರ್ಖಾನೆಗಳ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಕೆಲವೇ ವರ್ಷಗಳಲ್ಲಿ ನೂರಾರು ಕೆಮಿಕಲ್ ಕಾರ್ಖಾನೆಗಳು ತಲೆಯೆತ್ತಿ ಇದೊಂದು ಪಟ್ಟಂಚೆರುವನ್ನೂ ಮೀರಿದ ನರಕವಾಗುತ್ತಿದ್ದುದರಲ್ಲಿ ಸಂಶಯವಿರಲಿಲ್ಲ.
ಸಿಹಿನೀರಿನ ಚಿಲುಮೆಗೆ ರಾಸಾಯನಿಕ ವಿಷ
ವಾಸ್ತವದಲ್ಲಿ ಒಂದು ಪ್ರಸ್ಥಭೂಮಿಯ ಮೇಲೆ ಹರಡಿರುವ ಬೀದರ್ ನಗರ ಮತ್ತು ಅದರ ಸುತ್ತಲ ಪ್ರದೇಶ ಮುರಕಲ್ಲಿನ (ಜಂಬಿಟ್ಟಿಗೆ) ನೆಲವನ್ನು ಹೊಂದಿದೆ. ಬಾವಿ-ಬೋರ್ವೆಲ್ಗಳಲ್ಲಿ 100 ಅಡಿಗಳೊಳಗೇ ಸಿಹಿಯಾದ ನೀರು ಯಥೇಚ್ಛವಾಗಿ ದೊರೆಯುತ್ತದೆ. ಈ ಅಪರೂಪದ ನೀರಿನ ಸೌಕರ್ಯವನ್ನು ಕಂಡೇ ಗುರು ನಾನಕರು ಬೀದರ್ನಲ್ಲಿ ದೊಡ್ಡದೊಂದು ಗುರುದ್ವಾರಾವನ್ನು ಸ್ಥಾಪಿಸಿದ್ದಾರೆ. ಅದು ದೇಶಾದ್ಯಂತದ ಸಿಖ್ಖರ ಅತ್ಯಂತ ಪವಿತ್ರ ಯಾತ್ರಾ ಸ್ಥಳಗಳಲ್ಲಿ ಒಂದೆನ್ನಿಸಿದೆ. ನಾನಕ್ ಝರನಾ, ನರಸಿಂಹ ಝರನಾ ರೀತಿಯ, 365 ದಿನವೂ ಉಕ್ಕಿಹರಿಯುವ ನೀರಿನ ಝರಿಗಳ ಅತ್ಯಂತ ಸವಿಯಾದ ನೀರು ಬಹಳ ಪ್ರಖ್ಯಾತವಾಗಿದೆ. ಬೀದರ್ ನಗರದಲ್ಲಿ ಕೆಲಸ ಮಾಡಿ ಬೆಂಗಳೂರಿಗೆ ವರ್ಗವಾಗುವ ಸರ್ಕಾರಿ ಅಧಿಕಾರಿಗಳು ನಂತರ ತಮ್ಮ ಮನೆಗಳಲ್ಲಿ ಅಡಿಗೆಗೆ ಮತ್ತು ಕುಡಿಯಲು ಇಲ್ಲಿಂದ ನೂರಾರು ಸಂಖ್ಯೆಯ ಕ್ಯಾನುಗಳಲ್ಲಿ ಲಗ್ಷುರಿ ಬಸ್ಗಳ ಮೂಲಕ ಸರಬರಾಜಾಗುವ ಕುಡಿಯುವ ನೀರನ್ನೇ ತರಿಸಿಕೊಳ್ಳುವುದು ಚಾಲ್ತಿಗೆ ಬಂದಿದೆ!
ಸರ್ವತೋಮುಖ ವಿನಾಶವೇ ʻಅಭಿವೃದ್ಧಿʼ!
ಕಾರ್ಖಾನೆಗಳು ಕೆಲಸ ಆರಂಭಿಸಿ ಒಂದು ವರ್ಷದ ಹೊತ್ತಿಗೇ ಸಮಸ್ಯೆ ಜನರ, ರೈತರ ಅರಿವಿಗೆ ಬರತೊಡಗಿತ್ತು. ಹಿಂದೆಲ್ಲಾ ದನಕರು ಕುರಿಮೇಕೆಗಳು ಮೇಯಲು ಹೋಗಿ, ಸ್ವಚ್ಛ ನೀರಿನಿಂದ ಹರಿಯುತ್ತಿದ್ದ ಅಲ್ಲಿನ ಕಾಲುವೆಗಳ ನೀರನ್ನು ಕುಡಿಯುತ್ತಿದ್ದವು. ಆದರೆ ಈಗ ಅದೇ ನೀರನ್ನು ಕುಡಿದಾಗ ಹೊಟ್ಟೆ ಉಬ್ಬರಿಸಿ ನವ ರಂಧ್ರಗಳಿಂದಲೂ ರಕ್ತ ಸೋರಿ ಸಾಯತೊಡಗಿದವು. ಮುರಕಲ್ಲಿನ ನೆಲವಾದ್ದರಿಂದ ಆ ಕೆಮಿಕಲ್ ತ್ಯಾಜ್ಯದ ನೀರು ದೂರದೂರದವರೆಗೆ ಹರಡಿ, ತುಂಬಾ ಆಳಕ್ಕೂ ಇಂಗುತ್ತಿತ್ತು. ಹಾಗಾಗಿ ಬೋರ್ವೆಲ್ಗಳನ್ನು 400 ಅಡಿಗಿಂತ ಆಳಕ್ಕೆ ಕೊರೆಸಿದರೂ ಕೆಮಿಕಲ್ ಘಾಟಿನ ನೀರು ಬರತೊಡಗಿತು. ಅದೇ ನೀರನ್ನು ಹೊಲಕ್ಕೆ ಹರಿಸಿದಾಗ ಇಳುವರಿ ಕಡಿಮೆಯಾಗುತ್ತ ಬಂತು. ಆ ನೀರಿನಿಂದ ದ್ರಾಕ್ಷಿ ಬೆಳೆದಾಗ ಬಲಿತ ಕಾಯಿಗಳು ಹಣ್ಣಾಗುವ ಬದಲು ಒಡೆದು ರಸ ಸೋರಿ ಕೊಳೆಯತೊಡಗಿದವು. ಆ ಪ್ರದೇಶದ ಒಂದು ಅತಿಮುಖ್ಯ ವಾಣಿಜ್ಯ ಬೆಳೆಯಾಗಿರುವ ಕಬ್ಬಿನಿಂದ ಬೆಲ್ಲ ತಯಾರಿಸಿದರೆ ಅದು ಗಟ್ಟಿಯಾಗುವ ಬದಲು ಕರ್ರನೆ ರಾಡಿಯಾಗಿ ಉಳಿಯತೊಡಗಿತು. ಕೋಳಾರ, ನಿಜಾಂಪುರ, ಬಕಚೌಡಿಗಳ ಜಮೀನುಗಳಿಗೆ ನೀರುಣಿಸುವ ನಿಜಾಂಪುರ ಕೆರೆಯ ಸ್ವಚ್ಛ ನೀರು ಇದೀಗ ಕಪ್ಪಾಗಿ ಘಾಟು ಸೂಸತೊಡಗಿತು; ಅದರ ನೀರು ಕೈಕಾಲಿಗೆ ತಾಕಿದರೆ ಚರ್ಮಕ್ಕೆ ಉರಿ, ತುರಿಕೆ, ಕಜ್ಜಿ ಮುಂತಾದ ಸಮಸ್ಯೆಗಳು ಆರಂಭವಾದವು. ಎಲ್ಲಾ ತೆರೆದ ಬಾವಿಗಳ ಮತ್ತು ಬೋರ್ವೆಲ್ಗಳ ನೀರಿನಲ್ಲೂ ಕೆಮಿಕಲ್ ಅಂಶ ಗಮನಕ್ಕೆ ಬರತೊಡಗಿತು. ಜನರಲ್ಲಿ ಉಸಿರಾಟದ ತೊಂದರೆ, ಹುಟ್ಟುವ ಕೂಸುಗಳಲ್ಲಿ ತೀವ್ರತರನಾದ ಕಾಯಿಲೆ ಅಥವಾ ಅಂಗವಿಕಲತೆ ಮುಂತಾದ ಹಿಂದೆಂದೂ ಇರದಿದ್ದ ಹೊಸಹೊಸ ಕಾಯಿಲೆಗಳು ಕಾಣಿಸಿಕೊಳ್ಳತೊಡಗಿದವು.
ಹಳ್ಳಿಗರು ಬಿಡಿಬಿಡಿಯಾಗಿ ತಮಗೆ ಸಾಧ್ಯವಿದ್ದ ರೀತಿಗಳಲ್ಲಿ ವಿರೋಧ ವ್ಯಕ್ತಪಡಿಸತೊಡಗಿದರು. ಪತ್ರಿಕೆಗಳವರ ಬಳಿ ಹೋಗಿ ವರದಿಗಳನ್ನು ಬರೆಸಿದರು. ತಾವೇ ಬರೆಯಬಲ್ಲ ಒಬ್ಬಿಬ್ಬರು ಶ್ಯಾಣ್ಯಾರು ಅಧಿಕಾರಿಗಳಿಗೆ ದೂರು ಬರೆದು, ಅಥವಾ ನಾಲ್ಕಾರು ಜನ ಗುಂಪುಗೂಡಿ ಹೋಗಿ ಮಾಲೀಕರನ್ನು ಅಂಜಿಸಿ ಆಗೀಗ ಅಷ್ಟಿಷ್ಟು ವಸೂಲಿ ಮಾಡತೊಡಗಿದರು! ಇಲ್ಲವೇ ಕಾರ್ಖಾನೆಗಳಲ್ಲಿ ʻಲೇಬರ್ ಕಾಂಟ್ರಾಕ್ಟ್ʼ ಮುಂತಾದ್ದೇನಾದರೂ ಗುತ್ತಿಗೆ ಗಿಟ್ಟಿಸಿಕೊಂಡರು. ಆದರೆ ಸಂಘಟಿತ ಪ್ರತಿರೋಧ ಇಲ್ಲದ್ದರಿಂದ ಮಾಲಿನ್ಯ ಅಡೆತಡೆಯಿಲ್ಲದೆ ಮುಂದುವರಿಯಿತು, ಅಂತೆಯೇ ಜನರ ಕಷ್ಟನಷ್ಟಗಳೂ ಮುಂದುವರಿದವು.
ಬಹುಪಾಲು ಕಾರ್ಖಾನೆಗಳ ಮಾಲೀಕರು ಆಂಧ್ರದ ರೆಡ್ಡಿಗಳೇ ಆಗಿದ್ದರು. ತಮ್ಮಲ್ಲಿನ ಎಲ್ಲ ಖಾಯಂ ಆಪರೇಟರ್ ಹುದ್ದೆಗಳಿಗೂ ಆಂಧ್ರದವರನ್ನೇ ನೇಮಿಸಿಕೊಂಡಿದ್ದರು. ʻಕೆಲಸದ ಅನುಭವ ಇಲ್ಲʼ ಎಂಬ ನೆಪ ಹೇಳಿ ಸ್ಥಳೀಯರಿಗೆ ಖಾಯಂ ಕೆಲಸ ನಿರಾಕರಿಸಿದ್ದರು; ಹೆಲ್ಪರ್ಗಳಾಗಿ ಮಾತ್ರ ಸ್ಥಳೀಯರನ್ನು ಅದೂ ಗುತ್ತಿಗೆದಾರರ ಮೂಲಕ ತೆಗೆದುಕೊಳ್ಳುತ್ತಿದ್ದರು. ಒಬ್ಬೊಬ್ಬ ಹೆಲ್ಪರ್ನ ಹೆಸರಲ್ಲಿ ಗುತ್ತಿಗೆದಾರರಿಗೆ 1000ದಿಂದ 1200 ರೂ. ನೀಡುತ್ತಿದ್ದರು. ಅವರು ಹೆಲ್ಪರ್ಗೆ 650-700 ರೂ. ನೀಡುತ್ತಿದ್ದರು. ಅಲ್ಲಿನ ಪ್ರಭಾವಿಗಳಿಗೆ ʻಲೇಬರ್ ಕಾಂಟ್ರಾಕ್ಟ್ʼ ಎನ್ನುವುದೊಂದು ಸುಲಭ ಹಣ ಗಳಿಕೆಯ ಸಾಧನವಾಗಿತ್ತು. ಎಷ್ಟು ಕಾಲ ದುಡಿದರೂ ಯಾವ ಹೆಲ್ಪರ್ನನ್ನೂ ಖಾಯಂ ಮಾಡುತ್ತಿರಲಿಲ್ಲ. ಬದಲಿಗೆ ಕೆಮಿಕಲ್ ಜೊತೆಯಲ್ಲೇ ದಿನಕ್ಕೆ 8ರಿಂದ 10 ಗಂಟೆ ಕೆಲಸ, ಅನೇಕ ವೇಳೆ ʻಡಬಲ್ ಡ್ಯೂಟಿʼ ಮಾಡಿದ ಪರಿಣಾಮ ಕಾರ್ಮಿಕರಿಗೆ ಬಹುಬೇಗನೇ ಉಸಿರಾಟದ ತೀವ್ರ ತೊಂದರೆ ಮತ್ತು ಚರ್ಮರೋಗಗಳು ಅಂಟಿಕೊಳ್ಳತೊಡಗಿದವು. ಆದರೆ ಅದರ ಬಗ್ಗೆ ಮಾಲೀಕರಾಗಲಿ ಗುತ್ತಿಗೆ ಹಿಡಿದಿದ್ದವರಾಗಲಿ ಯಾವುದೇ ಜವಾಬ್ದಾರಿ ತೆಗೆದುಕೊಳ್ಳುತ್ತಿರಲಿಲ್ಲ. ಕಾರ್ಮಿಕ ಇಲಾಖೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಯಥಾಪ್ರಕಾರ ಈ ಪರಿಸ್ಥಿತಿ ನಿರಂತರ ಹಾಲು ಕರೆವ ಕಾಮಧೇನುವಿನಂತಾಗಿತ್ತು. ಹೇಗೂ ದೊಡ್ಡ ಲಾಭ ತರುವ ವ್ಯವಹಾರವಾದುದರಿಂದ ಯಾವುದೇ ಅಧಿಕಾರಿಗಳಿಗೂ ನಿಯಮಿತವಾದ ಸಂಪಾದನೆಗೆ ಎಂದೂ ಕೊರತೆಯಾಗಿದ್ದಿಲ್ಲ!
ಹೋರಾಟಕ್ಕೆ ನಿರ್ಧಾರ: ʻಚಾರ್ಟರ್ ಆಫ್ ಡಿಮ್ಯಾಂಡ್ಸ್ʼ
ಇಷ್ಟೆಲ್ಲ ಮಾಹಿತಿ ದೊರೆತ ನಂತರ ರಾಜ್ಯ ಸಮಿತಿ ಆ ಹೋರಾಟವನ್ನು ಕೈಗೆತ್ತಿಕೊಳ್ಳಲು ತೀರ್ಮಾನಿಸಿತು. ಅದರಂತೆ ನಾನು ’93ರ ಡಿಸೆಂಬರಿನಲ್ಲಿ ಬೀದರ್ನಲ್ಲಿ ಸಿದ್ಬಟ್ಟೆಯವರ ನೆರವಿನಿಂದ ಸಮಾನ ಮನಸ್ಕರ ಸಭೆ ಸೇರಿಸಿ ವಿಚಾರ ಮುಂದಿಟ್ಟಾಗ ಸರ್ವಸಮ್ಮತಿಯ ಬೆಂಬಲ ವ್ಯಕ್ತವಾಯಿತು. ಬೀದರ್ನ ದಲಿತ, ರೈತ, ಕಾರ್ಮಿಕ, ಹಿಂದುಳಿದ ಮತ್ತಿತರ ಎಲ್ಲ ಜನಪರ ಹೋರಾಟಗಳ ಸತತ ಒಡನಾಡಿಗಳಾಗಿದ್ದ ಪತ್ರಕರ್ತ ವಿಶ್ವನಾಥರಾವ್ ಪಾಟೀಲ್ ʻದಮನ್ʼ, ಹಣಮಂತಪ್ಪಾ ಪಾಟೀಲ್ ಮಾಸ್ತರು, ಪ್ರೊ. ಶಿವರಾಜ ಕಾಡೋದೆ ಹಾಗೂ ಸಿದ್ಬಟ್ಟೆ ಇವರೆಲ್ಲರೂ ಬೀದರ್ ಮತ್ತು ಸುತ್ತಮುತ್ತಲಲ್ಲಿ ಬಹಳ ಗೌರವಾನ್ವಿತರಾಗಿದ್ದವರು. ಅವರುಗಳಿದ್ದ ನಮ್ಮ ತಂಡ ಬಾಧಿತ ಹಳ್ಳಿಗಳ ಪಂಚಾಯತ್ ಕೇಂದ್ರ ಹಳ್ಳಿಯಾದ ಕೊಳ್ಹಾರಕ್ಕೆ ಹೋಗಿ, ನೌಬಾದ್, ನಿಜಾಂಪುರ, ಬೆಳ್ಳೂರು, ಬಕಚೌಡಿಗಳನ್ನೂ ಒಳಗೊಂಡು ಮುಖಂಡರ ಸಭೆ ಸೇರಿಸಿ ವಿವರವಾಗಿ ಚರ್ಚಿಸಿದೆವು. ಹೋರಾಟ ಆರಂಭಿಸಬೇಕೆಂಬ ಸರ್ವಾನುಮತದ ತೀರ್ಮಾನವಾಗಿ, ಎಲ್ಲ ಬಾಧಿತ ಹಳ್ಳಿಗಳ ಪ್ರತಿನಿಧಿಗಳನ್ನೊಳಗೊಂಡ ʻಕೊಳ್ಹಾರ ಕೈಗಾರಿಕಾ ಮಾಲಿನ್ಯ ವಿರೋಧಿ ಹೋರಾಟ ಸಮಿತಿʼ ರಚನೆಯಾಯಿತು. ನನ್ನನ್ನು ಅದರ ಸಂಚಾಲಕನಾಗಿ ನೇಮಿಸಿಕೊಂಡರು. ನಮ್ಮ ಡಿಮ್ಯಾಂಡ್ಗಳನ್ನೂ ಪಟ್ಟಿ ಮಾಡಲಾಯಿತು.
- ಮೊಟ್ಟಮೊದಲಿಗೆ ಕೈಗಾರಿಕೆಗಳ ಮಾಲಿನ್ಯವನ್ನು ತಡೆಗಟ್ಟಬೇಕು: ಅದಕ್ಕಾಗಿ ದ್ರವ ಮತ್ತು ಅನಿಲ ತ್ಯಾಜ್ಯಗಳ ಶುದ್ಧೀಕರಣದ ಘಟಕಗಳನ್ನು ಎಲ್ಲ ಕಾರ್ಖಾನೆಗಳೂ ನಿರ್ಮಿಸಿಕೊಳ್ಳಬೇಕು. ಸಾಧ್ಯವಿದ್ದರೆ ಸಾಮೂಹಿಕ ಶುದ್ಧೀಕರಣ ಘಟಕ ಸ್ಥಾಪಿಸಬಹುದು. ಇದನ್ನು ಕಾಲಮಿತಿಯಲ್ಲಿ ಅತ್ಯಂತ ಶೀಘ್ರವಾಗಿ ಮಾಡಬೇಕು.
- ಹೊಸದಾಗಿ ರಾಸಾಯನಿಕ ಕಾರ್ಖಾನೆಗಳನ್ನು ಸ್ಥಾಪಿಸಬಾರದು. ಹಿಂದುಳಿದ ಈ ಜಿಲ್ಲೆಯ ಜನರ ನಿಜವಾದ ಅಭಿವೃದ್ಧಿಗೆ ಪೂರಕವಾದ ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು.
- ಈಗಿರುವ ಕಾರ್ಖಾನೆಗಳಲ್ಲಿ ಖಾಯಂ ಹುದ್ದೆಗಳಲ್ಲಿ ಗುತ್ತಿಗೆ ಪದ್ಧತಿ ಕೈಬಿಟ್ಟು ಸ್ಥಳೀಯರನ್ನು ನೇಮಕ ಮಾಡಿಕೊಳ್ಳಬೇಕು. ಅನುಭವ ಇಲ್ಲ ಎಂದಾದರೆ ಅಗತ್ಯಕ್ಕೆ ತಕ್ಕಂತೆ ಮೂರೋ ನಾಲ್ಕೋ ತಿಂಗಳ ತರಬೇತಿ ಕೊಟ್ಟು ಖಾಯಂ ಮಾಡಿಕೊಳ್ಳಬೇಕು.
- ಕಾರ್ಮಿಕರಿಗೆ ಕೆಮಿಕಲ್ ಕಾರಣದಿಂದ ಉಂಟಾಗುವ ಕಾಯಿಲೆಗಳಿಗೆ ಕಾರ್ಖಾನೆ ಮಾಲೀಕರೇ ತಮ್ಮ ಖರ್ಚಿನಲ್ಲಿ ಚಿಕಿತ್ಸೆ ಕೊಡಿಸಬೇಕು. ಎಲ್ಲ ಕಾರ್ಮಿಕರಿಗೂ ಇಎಸ್ಐ, ಪಿಎಫ್ ನೀಡಬೇಕು.
- ತ್ಯಾಜ್ಯ ನೀರು ಕುಡಿದು ಸತ್ತ ಜಾನುವಾರುಗಳ ಮಾಲೀಕರಿಗೆ ಸಮರ್ಪಕ ಪರಿಹಾರ ನೀಡಬೇಕು.
- ಕಾರ್ಖಾನೆಗಳು ಸ್ಥಳೀಯ ಪಂಚಾಯ್ತಿಗಳೊಂದಿಗೆ ಸಮನ್ವಯದಲ್ಲಿ ಹಳ್ಳಿಗಳ ಅಭಿವೃದ್ಧಿಗೆ ತಮ್ಮ ಲಾಭದ ಒಂದಂಶವನ್ನು ನೀಡಬೇಕು.
- ಇವು ಪ್ರಮುಖ ಡಿಮ್ಯಾಂಡ್ಗಳಾಗಿದ್ದವು. ಇದನ್ನು ಸರ್ಕಾರಕ್ಕೆ ಸಲ್ಲಿಸಲು ಜಿಲ್ಲಾಧಿಕಾರಿಯ ಭೇಟಿಗೆ ಮುಖಂಡರ ಒಂದು ನಿಯೋಗವನ್ನು ರಚಿಸಲಾಯಿತು. ತಡ ಮಾಡದೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಿದ್ದಲ್ಲದೆ, ಎಲ್ಲ ಬಾಧಿತ ಹಳ್ಳಿಗಳ ಕುಡಿಯುವ ನೀರಿನ ಮತ್ತು ಇತರ ಜಲಮೂಲಗಳ ನೀರಿನ ಪರೀಕ್ಷೆ ನಡೆಸುವಂತೆ, ಹಳ್ಳಿಗಳಲ್ಲಿ ಹೊಸದಾಗಿ ಕಂಡುಬರುತ್ತಿರುವ ಕಾಯಿಲೆಗಳನ್ನು ಗುರುತಿಸುವಂತೆ, ಹಾಗೂ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಯನ್ನು ಕೋರಲಾಯಿತು. ಸೂಕ್ತ ಕ್ರಮ ಕೈಗೊಳ್ಳುವುದಕ್ಕೆ/ಆರಂಭಿಸುವುದಕ್ಕೆ ಎರಡು ತಿಂಗಳು, ಅಂದರೆ 1994ರ ಫೆಬ್ರವರಿವರೆಗೆ ಗಡುವು ನೀಡಿ, ಕ್ರಮ ಕೈಗೊಳ್ಳದಿದ್ದಲ್ಲಿ ತೀವ್ರ ಹೋರಾಟ ಆರಂಭಿಸುವ ಎಚ್ಚರಿಕೆಯನ್ನೂ ನೀಡಲಾಯಿತು. ಎಲ್ಲಾ ಕಡೆ ಯಾವಾಗಲೂ ನಡೆಯುವಂತೆಯೇ, ಜಿಲ್ಲಾಡಳಿತವಾಗಲಿ ಸರ್ಕಾರವಾಗಲಿ ಏನೂ ಕ್ರಮ ಕೈಗೊಳ್ಳಲಿಲ್ಲ. 1994ರ ಫೆಬ್ರವರಿ ಮಧ್ಯಭಾಗದಲ್ಲಿ ಸಮಿತಿ ಸಭೆ ಸೇರಿ, ಫೆಬ್ರವರಿ 27ರಂದು ಪ್ರತಿಭಟನೆ ನಡೆಸಬೇಕೆಂದು ತೀರ್ಮಾನಿಸಲಾಯಿತು. ಬಾಧಿತ ಹಳ್ಳಿಗಳಲ್ಲಿ ಫೆಬ್ರವರಿ ಮೂರನೇ ವಾರ ವ್ಯಾಪಕವಾಗಿ ಪ್ರಚಾರ ಕಾರ್ಯಕ್ರಮ ನಡೆಸಿ ಹೋರಾಟಕ್ಕೆ ಜನರನ್ನು ಅಣಿಗೊಳಿಸುವ ಪ್ರಯತ್ನ ಮಾಡಲಾಯಿತು. ಹಳ್ಳಿಗಳ ಯುವಕರು ಬಹಳ ಉತ್ಸಾಹದಿಂದ ಪ್ರಚಾರದಲ್ಲಿ ಭಾಗವಹಿಸಿದರು. ಹಳೆಯ ಹೋರಾಟದ ಹಾಡುಗಳ ರಾಗಗಳನ್ನೇ ಬಳಸಿ ಮಾಲಿನ್ಯದ ಬಗ್ಗೆ ಹಾಡುಗಳನ್ನು ಬರೆದು ಪ್ರಾಕ್ಟೀಸ್ ಮಾಡಲಾಯ್ತು. ಪ್ರಗತಿಪರ ವಿದ್ಯಾರ್ಥಿ ಕೇಂದ್ರದ ಬೀದರ್ ಘಟಕದ ನಂದಕುಮಾರ್ ಮತ್ತು ಗೆಳೆಯರು ಬಂದು ಪ್ರಚಾರಕ್ಕೆ ಹೆಗಲು ನೀಡಿದರು. 27ರಂದು ಪ್ರತಿಭಟನೆ ನಡೆಸಲಾಗುವುದೆಂದು ಡಿಸಿಗೆ, ಎಸ್ಪಿಗೆ ತಿಳಿಸಲಾಯಿತು. ಹೋರಾಟ ಸಮಿತಿಯ ಬ್ಯಾನರ್, ಪ್ರಚಾರದ ಕರಪತ್ರ, ಹೋರಾಟದ ದಿನಕ್ಕಾಗಿ ತಮಟೆ ಎಲ್ಲ ಸಿದ್ಧವಾಯಿತು. (ಮುಂದುವರಿಯುವುದು.)
(ಮುಂದಿನ ಭಾಗದಲ್ಲಿ: ಲಾಠಿ ಚಾರ್ಜ್, ಜೈಲು, ಕೋರ್ಟು, ಬೀದರ್ ಬಂದ್, ವಿಜಯೋತ್ಸವ, ಇತ್ಯಾದಿ.)

ಸಿರಿಮನೆ ನಾಗರಾಜ್
ಲೇಖಕ, ಸಾಮಾಜಿಕ ಚಿಂತಕ