ಚಂದ್ರಯಾನ-3 ಎಲ್ಲರ ನಿರೀಕ್ಷೆಯನ್ನೂ ಮೀರಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಿತು ಎನ್ನುವಾಗಲೇ, ಅದು ಇಳಿದದ್ದು ದಕ್ಷಿಣ ಧ್ರುವದಲ್ಲಿ ಅಲ್ಲ ಅಂತ ಚೀನಾದ ವಿಜ್ಞಾನಿಗಳು ವಿವಾದ ಎಬ್ಬಿಸಿದ್ದಾರೆ. ಇದುವೂ ಒಂದು ಸಿನಿಮಾಗೆ ಕತೆ ಆಗಬಹುದು…
(ಆಡಿಯೊ ಪೂರ್ಣಪ್ರಮಾಣದಲ್ಲಿ ಸಿಗದಿದ್ದಲ್ಲಿ, ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ‘ಸ್ಪಾಟಿಫೈ’ನಲ್ಲಿ ಕೇಳಿ…)
ಇತ್ತೀಚೆಗಂತೂ ಅಂತರಿಕ್ಷದ ಬಗ್ಗೆ ಗುಲ್ಲೋ ಗುಲ್ಲು ಎದ್ದಿದೆ. ಕಳೆದ ನಾಲ್ಕು ವರ್ಷದಲ್ಲಿ ಅಂತರಿಕ್ಷ ಸಂಶೋಧನೆ ಅಥವಾ ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳ ಕುರಿತು ಎರಡು ಸಿನಿಮಾ ಕೂಡ ಬಂದುಬಿಟ್ಟಿವೆ. ಸಿನಿಮಾದಲ್ಲಿ ಎಷ್ಟರಮಟ್ಟಿಗೆ ಸತ್ಯವನ್ನು ಹೇಳಿದರೋ ಅಥವಾ ಅವು ಕೇವಲ ಪುರಾಣವೋ ಗೊತ್ತಿಲ್ಲ. ಆದರೆ, ಇಂತಹ ಸಿನಿಮಾಗಳಿಗೆ ಬೇಕಾದಷ್ಟು ಹೂರಣ ನೀಡುವ ಸಂಗತಿಗಳು ನಡೆಯುತ್ತಿವೆ.
ಚಂದ್ರಯಾನ-3 ಎಲ್ಲರ ನಿರೀಕ್ಷೆಯನ್ನೂ ಮೀರಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಿತು ಎನ್ನುವಾಗಲೇ, ಅದು ಇಳಿದದ್ದು ದಕ್ಷಿಣ ಧ್ರುವದಲ್ಲಿ ಅಲ್ಲ ಅಂತ ಚೀನಾದ ವಿಜ್ಞಾನಿಗಳು ವಿವಾದ ಎಬ್ಬಿಸಿದ್ದಾರೆ. ಇದುವೂ ಒಂದು ಸಿನಿಮಾಗೆ ಕತೆ ಆಗಬಹುದು.
ಅಮೆರಿಕನ್ನರು ‘ಬೆನ್ನು’ ಎನ್ನುವ ಕ್ಷುದ್ರಗ್ರಹದಿಂದ ಮಣ್ಣು ಹೊತ್ತು ತರಿಸಿದ್ದಾರೆ. ಅದರಲ್ಲಿ ನೀರು, ಕಾರ್ಬನ್ನು ಎರಡೂ ಇವೆಯಂತೆ. ಇವು ಜೀವಕ್ಕೆ ಅವಶ್ಯವಾದ್ದರಿಂದ, ಮುಂದೆ ಕ್ಷುದ್ರಗ್ರಹದಲ್ಲಿ ಜೀವಿ ಇದೆ ಎನ್ನುವ ಕತೆಯನ್ನೂ ಸಿನಿಮಾ ಮಾಡಬಹುದು. ಹೀಗೆ, ಅಂತರಿಕ್ಷದ ಸಾಧನೆಗಳು ಸಿನಿಮಾದವರಿಗೆ, ಅದರಲ್ಲಿಯೂ ಭಾರತೀಯ ಸಿನಿಮಾ ತಯಾರಕರಿಗೆ ಪ್ರೇರಣೆ ಆಗಿವೆ. ಅಂದ ಹಾಗೆ, ಅಂತರಿಕ್ಷ ಸಂಶೋಧಕರು ಸಿನಿಮಾ ತಯಾರಕರಿಂದ, ಅದರಲ್ಲಿಯೂ ಭಾರತೀಯ ಸಿನಿಮಾ ತಯಾರಕರಿಂದ ಪ್ರೇರಣೆ ಪಡೆಯುವ ಸಮಯ ಬಂದಿರಬಹುದು. ‘ಸೈನ್ಸ್’ ಪತ್ರಿಕೆಯಲ್ಲಿ ವರದಿಯಾಗಿರುವ ಪ್ರಕಾರ, ಲಕ್ಷಾಂತರ ಉಪಗ್ರಹಗಳ ಹಾರಾಟಕ್ಕೆ ಅರ್ಜಿಗಳು ಬಂದಿವೆಯಂತೆ. ಉಪಗ್ರಹಗಳು ಬಳಸುವ ನಿರ್ದಿಷ್ಟ ರೇಡಿಯೊ ತರಂಗಗಳನ್ನು ಬೇರೆ ಯಾರೂ ಬಳಸದಿರಲಿ ಎಂದು ಉಪಗ್ರಹ ತಯಾರಕರು ಮುಂದಾಗಿಯೇ ಅರ್ಜಿ ಹಾಕಿ, ಆ ರೇಡಿಯೊ ತರಂಗಾಂತರಗಳನ್ನು ಕಾದಿರಿಸುತ್ತಿದ್ದಾರಂತೆ. ಥೇಟ್ – ಭಾರತೀಯ ಸಿನಿಮಾ ತಯಾರಕರು ಸಿನಿಮಾ ಕತೆ ಬರೆಯುವ ಮುನ್ನವೇ ಟೈಟಲ್ಲುಗಳನ್ನು ಫಿಲ್ಮ್ ಛೇಂಬರಿನಲ್ಲಿ ದಾಖಲಿಸಿರುತ್ತಾರಲ್ಲ ಹಾಗೆ.
ಸಿನಿಮಾ ಟೈಟಲ್ಲುಗಳ ವಿವಾದ ಗೊತ್ತೇ ಇದೆ. ದ್ವಾರಕೀಶ್ ಅವರು ‘ವಿಷ್ಣುವರ್ಧನ’ ಎನ್ನುವ ಚಿತ್ರ ತಯಾರಿಸಲು ಹೆಸರು ನೋಂದಾಯಿಸಿದಾಗ ವಿವಾದ ಎದ್ದಿತ್ತು. ಇತ್ತೀಚೆಗೆ ‘ಬಸವಣ್ಣ’ ಎಂಬ ಹೆಸರಿನಲ್ಲಿ ಚಿತ್ರ ತಯಾರಿಸುತ್ತೇವೆಂದು ಹೇಳಿದ ನಿರ್ಮಾಪಕರು ವಿವಾದಗಳಿಂದಾಗಿ ಚಿತ್ರದ ಹೆಸರನ್ನು ಮೂರು ಬಾರಿ ಬದಲಾಯಿಸಬೇಕಾಯಿತು. ಇನ್ನು, ಕೆಲವು ಸಂದರ್ಭಗಳಲ್ಲಿ ಕತೆಗೆ ತಕ್ಕ ಹೆಸರು ಇಡಬೇಕು ಅಂದರೂ, ಇನ್ಯಾರೋ ಆ ಹೆಸರನ್ನು ರಿಜಿಸ್ಟರು ಮಾಡಿಸಿರುವುದರಿಂದ ಬೇರೆ ಟೈಟಲ್ಲು ಕೊಡಬೇಕಾಗಿ ಬಂದಿದ್ದು ನಮಗೆ ತಿಳಿದಿದೆ. ಹೀಗೆ ಇನ್ನೂ ಆಗದ ಕೆಲಸದ ಬಗ್ಗೆ ಮೊದಲೇ ತಮ್ಮ ಹಕ್ಕನ್ನು ಸ್ಥಾಪಿಸುವ ವಿದ್ಯಮಾನ ಕೇವಲ ಸಿನಿಮಾರಂಗಕ್ಕೆ ಮಾತ್ರ ಮೀಸಲಾಗಿಲ್ಲ. ಅದು ಈಗ ಅಂತರಿಕ್ಷ ಸಂಶೋಧನೆಗೂ ಲಗ್ಗೆ ಇಟ್ಟಿದೆ ಎನ್ನಬಹುದು.
ಅಂತರಿಕ್ಷ ಸಂಶೋಧನೆಯಲ್ಲಿ ಇಂತಹ ಗೋಜು ಏಕೆ? ಸಿನಿಮಾದಲ್ಲಿ ಪೈಪೋಟಿ ಸಹಜ. ಜೊತೆಗೆ ಲಾಭವನ್ನು ಖಾತ್ರಿ ಮಾಡಿಕೊಳ್ಳುವುದು ಅಗತ್ಯವಾದ್ದರಿಂದ ಹೀಗೆ ಹೆಸರನ್ನೂ ಕಾದಿರಿಸಿಕೊಳ್ಳುವುದು ಅವಶ್ಯ. ಅಂತರಿಕ್ಷದಲ್ಲಿರುವ ಉಪಗ್ರಹಗಳಿಗೆ ಇದು ಅಗತ್ಯವೇ ಎಂದಿರಾ? ಅಂತರಿಕ್ಷ ಸಂಶೋಧನೆ ಅಥವಾ ಚಟುವಟಿಕೆಗಳು ಈಗ ಕೇವಲ ವಿಜ್ಞಾನ-ತಂತ್ರಜ್ಞಾನವಾಗಿ ಉಳಿದಿಲ್ಲ. ಅವು ಬಲು ದೊಡ್ಡ ಉದ್ಯಮವಾಗಿವೆ. ಲಾಭದಾಯಕವೂ ಹೌದು. ಕೆಲವೇ ದಶಕಗಳ ಹಿಂದೆ ಅಂತರಿಕ್ಷ ಶೋಧಗಳನ್ನು ಮಿಲಿಟರಿಯೊಂದಿಗೆ ಹೋಲಿಸಲಾಗುತ್ತಿತ್ತು. ಅತ್ಯಂತ ಗುಪ್ತವಾದ ಚಟುವಟಿಕೆಗಳಾಗಿದ್ದುವು. ಈಗ ಹಾಗಿಲ್ಲ. ಯಾವುದೇ ಗ್ರಾಹಕ ಸಾಮಗ್ರಿಯಂತೆ ಅಂತರಿಕ್ಷದಲ್ಲಿರುವ ಉಪಗ್ರಹಗಳು, ಅವುಗಳ ಸೇವೆಗಳು ಮಾರಾಟಕ್ಕೆ ಇವೆ. ಫಲವಾಗಿ ಸ್ಪೇಸ್-ಎಕ್ಸ್‌ನಂತಹ ಖಾಸಗಿ ಸಂಸ್ಥೆಗಳು ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿ, ಅಂತರಿಕ್ಷದ ಚಟುವಟಿಕೆಗಳಲ್ಲಿ ತೊಡಗಿಕೊಂಡಿವೆ.
ಇದರಲ್ಲಿಯೂ ಉಪಗ್ರಹಗಳ ಉಡಾವಣೆ ಮತ್ತು ಅವುಗಳ ಬಳಕೆ ಬಹಳ ಲಾಭದಾಯಕ ಉದ್ಯಮ. ಟೆಲಿವಿಷನ್ ಬಂದ ಲಾಗಾಯ್ತು, ಭೂಸ್ಥಿರ ಕಕ್ಷೆಯಲ್ಲಿ ಇರುವ ಉಪಗ್ರಹಗಳಿಗೆ ಬೇಡಿಕೆ ಹೆಚ್ಚಾಯಿತು. ನಮ್ಮ ಇನ್ಸಾಟ್ ಉಪಗ್ರಹಗಳಂತಹ ಇವು ಬಹಳ ಎತ್ತರದಲ್ಲಿ, ಭೂಮಿಯ ಜೊತೆಗೇ ಪ್ರದಕ್ಷಿಣೆ ಬರುತ್ತಿರುತ್ತವೆ. ಹೀಗಾಗಿ, ಯಾವುದೇ ಕ್ಷಣವೂ ಅವು ನಿರ್ದಿಷ್ಟ ಜಾಗದಲ್ಲಿಯೇ ಇರುವಂತೆ ತೋರುತ್ತದೆ. ಅದನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಬೆಳಕನ್ನು ಪ್ರತಿಫಲಿಸಲು ಬಳಸುವ ಕನ್ನಡಿಯಂತೆ ಸಂಪರ್ಕ ಸಾಧನವನ್ನಾಗಿ ಬಳಸಬಹುದು. ಟೆಲಿವಿಷನ್ನುಗಳು ಮತ್ತು ದೂರವಾಣಿಗಳಿಗೆ ಇವು ಅಂತರಿಕ್ಷದಲ್ಲಿರುವ ಕಂಬಗಳಂತೆ.
ಭೂಮಿಗೆ ಬಹಳ ಹತ್ತಿರದಲ್ಲಿ ಚಲಿಸುವ ಉಪಗ್ರಹಗಳೂ ಇವೆ. ಇವನ್ನು ‘ನಿಯರ್ ಅರ್ಥ್ ಆರ್ಬಿಟ್ ಉಪಗ್ರಹಗಳು’ ಅಥವಾ ಭೂನಿಕಟ ಪಥದ ಉಪಗ್ರಹಗಳು ಎನ್ನುತ್ತಾರೆ. ಗುಪ್ತಚಾರಿಕೆ ಅಥವಾ ಸ್ಪೈ ಉಪಗ್ರಹಗಳು, ರಿಮೋಟ್ ಸೆನ್ಸಿಂಗ್ ಅಥವಾ ದೂರಸಂವೇದಿ ಉಪಗ್ರಹಗಳು, ಜಿಯೋಮ್ಯಾಪಿಂಗ್, ವಿಮಾನ ಹಾಗೂ ಹಡಗುಗಳಿಗೆ ಹಾದಿ ತೋರಿಸುವ ಉಪಗ್ರಹಗಳು ಮೊದಲಾದವುಗಳಿವೆ. ಇತ್ತೀಚೆಗೆ ವಿವಿಧ ಪ್ರದೇಶಗಳಿಗೆ ಇಂಟರ್‌ನೆಟ್ ಸೌಲಭ್ಯ ಒದಗಿಸಲೂ ಉಪಗ್ರಹಗಳನ್ನು ಬಳಸಲಾಗುತ್ತಿದೆ. ಇವೆಲ್ಲವೂ ಈಗ ವಾಣಿಜ್ಯದ ಕತೆಗಳು. ಖಾಸಗಿ ಕಂಪನಿಗಳೂ ಇವನ್ನು ಉಪಯೋಗಿಸಿಕೊಂಡು ಸೇವೆಗಳನ್ನು ನೀಡುತ್ತಿವೆ.
ಹೀಗಾಗಿ, ಈಗ ಉಪಗ್ರಹಗಳು ಎಂದರೆ ಕೇವಲ ಇಸ್ರೊ, ನಾಸಾ ಅಥವಾ ಯುರೋಪಿಯನ್ ಸ್ಪೇಸ್ ಏಜೆನ್ಸಿಗಳು ಉಡಾಯಿಸುವ ಉಪಗ್ರಹಗಳಷ್ಟೇ ಅಲ್ಲ; ಗೂಗಲ್, ಸ್ಪೇಸ್ ಎಕ್ಸ್‌ನಂತಹ ಖಾಸಗಿ ಸಂಸ್ಥೆಗಳೂ, ಕೆಲವು ಶೈಕ್ಷಣಿಕ ಸಂಸ್ಥೆಗಳೂ ಉಪಗ್ರಹಗಳನ್ನು ತಯಾರಿಸಿ ಹಾರಿಸುತ್ತಿವೆ. ಉಪಗ್ರಹಗಳ ತಯಾರಿಕೆ ಸರಳವಾಗಿರುವುದೂ, ಅದಕ್ಕೆ ಬೇಕಾದ ಸಾಮಗ್ರಿಗಳು ಈಗ ಸುಲಭವಾಗಿ ದೊರೆಯುತ್ತಿರುವುದೂ ಇದಕ್ಕೆ ಒಂದು ಕಾರಣ. ಭಾರತದಲ್ಲಿಯೇ ಇಸ್ರೊ ಸಂಸ್ಥೆ ಹಲವಾರು ಕಾಲೇಜು ವಿದ್ಯಾರ್ಥಿಗಳಿಗೆ ಉಪಗ್ರಹಗಳನ್ನು ತಯಾರಿಸುವ ತರಬೇತಿ ಕೊಟ್ಟು, ಅವರು ನಿರ್ಮಿಸಿದವುಗಳನ್ನು ಅಂತರಿಕ್ಷಕ್ಕೆ ಉಡಾಯಿಸಿದೆ. 30 ವರ್ಷಗಳ ಹಿಂದೆ ಒಂದು ರಾಕೆಟ್ಟು ಒಂದು ಉಪಗ್ರಹವನ್ನು ಹೊತ್ತೊಯ್ಯುವುದೇ ಸುದ್ದಿ ಎನಿಸುತ್ತಿತ್ತು. ಈಗಲೂ ಅದು ಸುದ್ದಿಯೇ! ಏಕೆಂದರೆ, ಅದು ಅಪರೂಪದ ಸಂಗತಿ. ಹಲವಾರು ಉಪಗ್ರಹಗಳನ್ನು ಒಮ್ಮೆಲೇ ಉಡಾಯಿಸುವ ಪದ್ಧತಿ ಈಗ ರೂಢಿಯಲ್ಲಿದೆ. ಕಳೆದ ಬಾರಿ 600 ಪುಟ್ಟ ಉಪಗ್ರಹಗಳನ್ನು ಉಡಾಯಿಸಿ ಇಸ್ರೊ ವಿಶ್ವದಾಖಲೆಯನ್ನೂ ಸೃಷ್ಟಿಸಿತ್ತು.
ಇನ್ನು ಸ್ಪೇಸ್ ಎಕ್ಸ್ ಮೊದಲಾದ ಕಂಪನಿಗಳು ಉಪಗ್ರಹಗಳ ಮಾಲೆಯನ್ನೇ ಹಾರಿಸುತ್ತಿವೆ. ಸ್ಪೇಸ್ ಎಕ್ಸ್ ಕಂಪನಿಯ ‘ಸ್ಟಾರ್ ಲಿಂಕ್’ ಉಪಗ್ರಹಗಳು ಗುಂಪು, ಗುಂಪಾಗಿ ಒಟ್ಟಿಗೇ ಹಾರಿಸಿದಂತಹ ಉಪಗ್ರಹಗಳ ಸರಮಾಲೆ. ಇಂಟರ್‌ನೆಟ್ ಸಂಪರ್ಕ, ದೂರವಾಣಿ ಸಂಪರ್ಕ ಒದಗಿಸಲು ಇವನ್ನು ಬಳಸುವುದು ಯೋಜನೆ. ಈ ಸಂಪರ್ಕ ಕಾರ್ಯಕ್ಕೆ ರೇಡಿಯೊ ತರಂಗಗಳು ಬೇಕಷ್ಟೆ. ಸಾಮಾನ್ಯವಾಗಿ ಪ್ರತಿಯೊಂದು ಉಪಗ್ರಹವೂ ಬಳಸುವ ರೇಡಿಯೊ ತರಂಗದ ಫ್ರೀಕ್ವೆನ್ಸಿ ಅಥವಾ ತರಂಗಾಂತರಗಳನ್ನು ಮೊದಲೇ ನಿರ್ಧರಿಸಲಾಗುತ್ತದೆ. ಇದು ಆ ಉಪಗ್ರಹದ ಭಾಷೆ ಎಂದರೂ ತಪ್ಪೇನಲ್ಲ. ಆ ಭಾಷೆಯನ್ನಷ್ಟೇ ಅದು ಬಳಸಬೇಕು. ಹೀಗೆ, ಪ್ರತಿಯೊಂದು ಉಪಗ್ರಹಕ್ಕೂ ಅದರದ್ದೇ ರೇಡಿಯೊ ತರಂಗಗಳನ್ನು ಒದಗಿಸಲಾಗುತ್ತದೆ. 91.7 ಎಫ್‌ಎಂ ರೇಡಿಯೋಗೆ 91.7 ಮೆಗಾ ಹರ್ಟ್ಸ್ ತರಂಗಾಂತರದ ರೇಡಿಯೊ ತರಂಗಗಳನ್ನಷ್ಟೇ ಬಳಸಲು ಅನುಮತಿ ಇದೆ.
ಈ ಸಂಪರ್ಕದ ಅಲೆಗಳನ್ನು ಒದಗಿಸುವುದು ಮುಂದೆ ಕಷ್ಟವಾಗಬಹುದು ಎನ್ನುವುದು – ಇವುಗಳ ಲೆಕ್ಕಾಚಾರ ಇಡುವ ಅಂತಾರಾಷ್ಟ್ರೀಯ ದೂರ ಸಂವಹನ ಸಂಘಟನೆ ಅಥವಾ ‘ಐಟಿಯು’ ಆತಂಕ. ಐಟಿಯು ದೂರಸಂಪರ್ಕ ಸೇವೆಯನ್ನು ನಿಯಂತ್ರಿಸುವ ಅಂತಾರಾಷ್ಟ್ರೀಯ ಸಂಸ್ಥೆ. ಪ್ರಪಂಚದ ಬಹುತೇಕ ದೇಶಗಳು ಇದರ ಸದಸ್ಯರಾಗಿರುತ್ತಾರೆ. ತಮ್ಮ ದೇಶದ ಸರ್ಕಾರಿ ಇಲ್ಲವೇ ಖಾಸಗಿ ಸಂಸ್ಥೆಗಳು ಉಪಗ್ರಹಗಳನ್ನು ಉಡಾಯಿಸಬೇಕೆಂದರೆ ಎಂತಹ ರೇಡಿಯೊ ಫ್ರೀಕ್ವೆನ್ಸಿಯನ್ನು ಬಳಸುತ್ತೇವೆ ಎಂದು ಈ ಸಂಸ್ಥೆಗೆ ತಿಳಿಸಬೇಕು. ಅಂತಹ ಫ್ರೀಕ್ವೆನ್ಸಿಯನ್ನು ಇನ್ಯಾವುದೇ ದೇಶ ಅಥವಾ ಸಂಸ್ಥೆ ಬೇರೆ ಯಾವುದೇ ಕಾರ್ಯಗಳಿಗೆ ಬಳಸುತ್ತಿಲ್ಲ ಎನ್ನುವುದನ್ನು ಈ ವ್ಯವಸ್ಥೆ ಖಾತ್ರಿಪಡಿಸುತ್ತದೆ. ಹೀಗೆ, ವಿವಾದಗಳು ಬಾರದಂತೆ ಮತ್ತು ನಿರ್ದಿಷ್ಟ ಉಪಗ್ರಹಗಳ ಜೊತೆಗಿನ ಸಂಪರ್ಕ, ಸಂವಹನಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಬಹುದು. ಬೇಕಾಬಿಟ್ಟಿ ರೇಡಿಯೊ ತರಂಗಗಳನ್ನು ಎಲ್ಲರೂ ಬಳಸಿದರೆ ಗೊಂದಲವೇ ಹೆಚ್ಚು, ಸಂವಹನಕ್ಕೆ ಅಡಚಣೆಯೂ ಹೆಚ್ಚು. ಇದು – ಈ ಸಂಸ್ಥೆಯಲ್ಲಿ ಫ್ರೀಕ್ವೆನ್ಸಿಗಳನ್ನು ನೋಂದಾಯಿಸಿ, ಕಾದಿರಿಸುವುದರ ಉದ್ದೇಶ.
ಅಬ್ಬಬ್ಬಾ ಎಂದರೆ ಎಷ್ಟು ಉಪಗ್ರಹಗಳು ಇದ್ದಾವು? ಕರ್ನಾಟಕದಲ್ಲಿ ಪ್ರತಿವರ್ಷ ಏನಿಲ್ಲ ಅಂದರೂ 300-400 ಸಿನಿಮಾಗಳು ಸೆಟ್ಟೇರುತ್ತವೆ. ಅವಕ್ಕೆಲ್ಲ ವಿಶಿಷ್ಟ ಹೆಸರು ಬೇಡವೇ? ಪ್ರಪಂಚದಲ್ಲಿ ಉಪಗ್ರಹಗಳನ್ನು ಹಾರಿಸುವ ಸಾಮರ್ಥ್ಯ ಇರೋ ದೇಶಗಳೇ ಕೆಲವು. ಅವೂ ಪ್ರತಿದಿನವೂ ಉಪಗ್ರಹಗಳನ್ನು ಸೆಟ್ಟೇರಿಸುವುದಿಲ್ಲವಲ್ಲ! ಸುಮ್ಮನೆ ಚಿಂತೆ ಯಾಕೆ ಅಂದಿರಾ? ತಾಳಿ. ಇವತ್ತಿನ ಲೆಕ್ಕಾಚಾರದ ಪ್ರಕಾರ, ಭೂನಿಕಟ ಕಕ್ಷೆಯಲ್ಲಿ 5,000ಕ್ಕೂ ಹೆಚ್ಚು ಉಪಗ್ರಹಗಳು ಹಾರುತ್ತಿವೆ. ಇವುಗಳಲ್ಲಿ 4,500 ಕೇವಲ ಸ್ಟಾರ್ ಲಿಂಕ್ ಗುಂಪಿನ ಉಪಗ್ರಹಗಳು. ಅಷ್ಟೇ ಅಲ್ಲ, ಮುಂದಿನ ವರ್ಷಗಳಲ್ಲಿ ಹೀಗೆಯೇ ಗುಂಪುಗುಂಪಾಗಿ ಉಪಗ್ರಹಗಳನ್ನು ಎಲ್ಲರೂ ಹಾರಿಸುತ್ತಿದ್ದರೆ, ಹಲವು ಲಕ್ಷ ಉಪಗ್ರಹಗಳು ಭೂಮಿಯನ್ನು ಪ್ರದಕ್ಷಿಣೆ ಹಾಕುತ್ತಿರುತ್ತವೆ.
‘ಸೈನ್ಸ್’ ಪತ್ರಿಕೆಯು, ಐಟಿಯು ಸ್ವೀಕರಿಸಿದ ಅರ್ಜಿಗಳ ಆಧಾರದ ಮೇಲೆ ಕಳೆದ ಐದು ವರ್ಷಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಸಂಖ್ಯೆಯ ಉಪಗ್ರಹಗಳಿಗೆ ರೇಡಿಯೊ ತರಂಗಗಳನ್ನು ಕಾದಿರಿಸಲು ವಿನಂತಿಗಳು ಬಂದಿವೆ ಎಂದು ವರದಿ ಮಾಡಿದೆ. ಸಿನಿಮಾ ಪರಿಭಾಷೆಯಲ್ಲಿ ಹೇಳುವುದಾದರೆ, ಅಷ್ಟೊಂದು ಸಿನಿಮಾಗಳಿಗೆ ಹೆಸರುಗಳನ್ನು ಕಾದಿರಿಸಲಾಗಿದೆ. ಈ ಅರ್ಜಿಗಳನ್ನು ವಿವಿಧ ದೇಶಗಳು, ಕಂಪನಿಗಳು ಸಲ್ಲಿಸಿವೆ. ಉಪಗ್ರಹಗಳ ಗುಂಪಿಗಾಗಿ ಒಟ್ಟು 300 ವಿನಂತಿಗಳಿದ್ದು, 90 ಸಾವಿರಕ್ಕೂ ಹೆಚ್ಚು ಉಪಗ್ರಹಗಳಿರುವ ಗುಂಪುಗಳಿಗಾಗಿ ಅರ್ಜಿ ಸಲ್ಲಿಸಲಾಗಿದೆ. ಒಂದು ಕಂಪನಿಯಂತೂ ಮೂರು ಲಕ್ಷಕ್ಕೂ ಹೆಚ್ಚು ಉಪಗ್ರಹಗಳಿರುವ ಗುಂಪಿಗೆ ವಿನಂತಿ ಸಲ್ಲಿಸಿದೆ.
ಎಲ್ಲರಿಗೂ ಕೊಟ್ಟರೆ ಆಯಿತು ಎಂದಿರಾ? ಈ ಹಿಂದೆ ‘ಟೋಂಗಾ’ ಎನ್ನುವ ದೇಶವೊಂದು ಹೀಗೆಯೇ ಹಲವು ಫ್ರೀಕ್ವೆನ್ಸಿಗಳನ್ನು ಕಾದಿರಿಸಿತ್ತು. ಅದನ್ನು ಅನಂತರ ಬೇರೆ ದೇಶಗಳಿಗೆ ಅದು ಮಾರಿತ್ತು. ಸ್ವತಃ ಯಾವುದನ್ನೂ ಬಳಸಿರಲಿಲ್ಲ. ಅರ್ಥಾತ್, ಈ ವ್ಯವಸ್ಥೆಯನ್ನು ಅದು ದುರುಪಯೋಗಪಡಿಸಿಕೊಂಡಿತ್ತು ಎನ್ನಬಹುದು; ನಮ್ಮಲ್ಲಿ ಸ್ಪೆಕ್ಟ್ರಂ ಹರಾಜು ಆದ ಹಾಗೆ ಎನ್ನಿ. ಇದಕ್ಕೆ ಅವಕಾಶ ಕೊಡಬಾರದು ಎಂದು ಈಗ ‘ಐಟಿಯು’ ಒಂದು ನಿಯಮ ಮಾಡಿದೆ. ಯಾವುದೇ ಅರ್ಜಿಯೂ ಏಳು ವರ್ಷಗಳಿಗಿಂತ ಹೆಚ್ಚು ಅವಧಿಗೆ ಚಾಲ್ತಿಯಲ್ಲಿ ಇರುವುದಿಲ್ಲ. ಏಳು ವರ್ಷಗಳೊಳಗೆ ಕಾದಿರಿಸಿದ ಫ್ರೀಕ್ವೆನ್ಸಿಗಳು ಬಳಕೆಯಾಗದೆ ಹೋದರೆ ಅವನ್ನು ಬೇರೆಯವರು ಪಡೆಯಬಹುದು ಎಂಬ ನಿಯಮ ಬಂದಿದೆ. ಇತ್ತೀಚೆಗೆ ಇನ್ನೂ ಒಂದು ನಿಯಮ ತರಲಾಗಿದೆ; ಆ ಪ್ರಕಾರ, ಮೊದಲ ಎರಡು ವರ್ಷಗಳೊಳಗೆ ಕಾದಿರಿಸಿರುವ ಫ್ರೀಕ್ವೆನ್ಸಿಗಳಲ್ಲಿ ಎಲ್ಲವನ್ನೂ ಅಲ್ಲದಿದ್ದರೂ ಕೆಲವನ್ನಾದರೂ ಬಳಸಲು ಆರಂಭಿಸಬೇಕು. ಕಾರಣ ಇಷ್ಟೆ… ಸ್ಟಾರ್ ಲಿಂಕಿನಂತಹ ಸಂಸ್ಥೆಗಳು ಗುಂಪುಗುಂಪಾಗಿ ಉಪಗ್ರಹಗಳನ್ನು ಹಾರಿಸುವಾಗ, ಒಂದೇ ಗುಂಪಿನಲ್ಲಿ ಬೇರೆ-ಬೇರೆ ಅರ್ಜಿಯಲ್ಲಿ ನಮೂದಿಸಿದ ಫ್ರೀಕ್ವೆನ್ಸಿಗಳನ್ನು ಬಳಸುತ್ತಿವೆ. ಒಂದು ರೀತಿಯಲ್ಲಿ ತಿರುಪತಿ ಕ್ಷೌರದ ಹಾಗೆ. ಉಳಿದವನ್ನು ಬೇರೆಯವರೂ ಬಳಸುವಂತಿಲ್ಲ!
ಹೀಗೇ ಆದರೆ ಮುಂದೆ ಹೊಸ ಉಪಗ್ರಹಗಳಿಗೆ ನೀಡಲು ಫ್ರೀಕ್ವೆನ್ಸಿ ಉಳಿದಿರುತ್ತದೆಯೋ ಇಲ್ಲವೋ ಎನ್ನುವ ಆತಂಕವೂ ಇದೆ. ಇನ್ನೂ ಒಂದು ಆತಂಕವಿದೆ; ಕೆಲವು ಉಪಗ್ರಹಗಳು ಭೂಮಿಗೆ ಬಹಳ ಹತ್ತಿರದಲ್ಲಿ ಇರುವುದರಿಂದ ಆಕಾಶದಲ್ಲಿ ಇರುವ ಬೇರೆ ಎಲ್ಲ ನಕ್ಷತ್ರಗಳಿಗಿಂತಲೂ ಗಾಢವಾಗಿ ಹೊಳೆಯುವುದೂ ಉಂಟು. ಇದು ಆಕಾಶ ವೀಕ್ಷಣೆ ಮಾಡುವ ಖಗೋಳ ವಿಜ್ಞಾನಿಗಳಿಗೆ ತೊಂದರೆ ಉಂಟುಮಾಡಬಹುದು ಎಂದು ಮೊನ್ನೆ ‘ನೇಚರ್’ ನಿಯತಕಾಲಿಕೆ ವರದಿ ಮಾಡಿತ್ತು. ಇನ್ನು, ಇಂತಹ ಲಕ್ಷಾಂತರ ಕೃತಕ ತಾರೆಗಳು ಆಕಾಶ ಸೇರಿದರೆ ಕತೆ ಏನೋ? ಗೊತ್ತಿಲ್ಲ.
ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ