(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ಸ್ ಅಥವಾ ಸ್ಪಾಟಿಫೈ ಮ್ಯೂಸಿಕ್)
ಚೀನಾದ ಕ್ಯುನ್‌ಮಿಂಗ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ ಪ್ರೈಮೇಟು ವೈದ್ಯವಿಜ್ಞಾನ ಸಂಶೋಧನಾಲಯದ ವಿಜ್ಞಾನಿ ಟಾನ್ ಟು ಮತ್ತು ಸಂಗಡಿಗರು ಮನುಷ್ಯ ಮತ್ತು ಮಂಗಗಳ ಅಂಶಗಳೆರಡೂ ಇರುವಂತಹ ಮಂಗನ ಮರಿಗಳನ್ನು ಸೃಷ್ಟಿಸಿ ಸುದ್ದಿಯಾಗಿದ್ದಾರೆ…
ಮಂಗನಿಂದ ಮಾನವನ ವಿಕಾಸವಾಗಿದೆ ಅಂದರೆ ಬಹಳಷ್ಟು ಜನ ವಾದಕ್ಕೆ ಇಳಿಯುತ್ತಾರೆ. ಹಾಗಿದ್ದರೆ, ಈಗ ಇರುವ ಮಂಗಗಳು ವಿಕಾಸ ಆಗಿ ಮನುಷ್ಯರಾಗುತ್ತಿಲ್ಲವೇಕೆ ಎಂದು ಪ್ರಶ್ನಿಸುತ್ತಾರೆ. ಉಲ್ಟಾ ಪ್ರಶ್ನೆ ಕೇಳುವುದಿಲ್ಲವೆನ್ನಿ; ಮನುಷ್ಯ ಮಂಗ ಆಗುತ್ತಿಲ್ಲವೇಕೆ ಅಂತ. ಮನುಷ್ಯ ಎಂದರೆ ಎಲ್ಲ ಜೀವಿಗಳಿಗಿಂತ ಭಿನ್ನ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಮನುಷ್ಯ ಎನ್ನುವ ಜೀವಿ ವಿಶೇಷವಲ್ಲ. ನಾವೂ ಎಲ್ಲ ಪ್ರಾಣಿಗಳಂತೆಯೇ. ಈ ಮಾತಿಗೆ ಇನ್ನೊಂದು ವಿಶಿಷ್ಟ ಪುರಾವೆಯನ್ನು ‘ಸೆಲ್’ ಪತ್ರಿಕೆ ಪ್ರಕಟಿಸಿದೆ. ಚೀನಾದ ಕ್ಯುನ್‌ಮಿಂಗ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ ಪ್ರೈಮೇಟು ವೈದ್ಯವಿಜ್ಞಾನ ಸಂಶೋಧನಾಲಯದ ವಿಜ್ಞಾನಿ ಟಾನ್ ಟು ಮತ್ತು ಸಂಗಡಿಗರು ಮನುಷ್ಯ ಮತ್ತು ಮಂಗಗಳ ಅಂಶಗಳೆರಡೂ ಇರುವಂತಹ ಮಂಗನ ಮರಿಗಳನ್ನು ಸೃಷ್ಟಿಸಿದ್ದಾರೆ ಎಂಬುದು ಸುದ್ದಿ.
ಅಯ್ಯೋ… ಇದೇನು ಮಹಾ! ನಮ್ಮ ಪುರಾಣದಲ್ಲಿ ಇಂತಹ ಪ್ರಾಣಿ, ಮನುಷ್ಯರ ಮಿಶ್ರಜೀವಿಗಳು ಬಹಳಷ್ಟಿವೆ ಎಂದಿರಾ? ಹೌದು; ಪೂಜೆಗೆಂದು ಹಿಂದೂಗಳು ಮೊದಲು ಮಣೆ ಹಾಕುವ ಗಣೇಶನೇ ಇದಕ್ಕೆ ಉದಾಹರಣೆ. ಆನೆಯ ತಲೆ, ಮನುಷ್ಯನ ದೇಹ. ಹಾಗಂತ, ಗಣೇಶ ಇಂತಹ ಒಬ್ಬಂಟಿ ಜೀವಿಯಲ್ಲ. ನರಸಿಂಹ ಗೊತ್ತಿರಬೇಕಲ್ಲ? ಸಿಂಹದ ತಲೆ ಮತ್ತು ಮನುಷ್ಯರ ದೇಹ ಇರುವ ರೂಪ. ಜಾಂಬವಂತನೂ ಅಷ್ಟೆ; ಕರಡಿಯ ದೇಹ, ಮಾನವನ ನಡೆ. ಶರಭನಂತೂ ಅರ್ಧ ನವಿಲು, ಅರ್ಧ ಸಿಂಹದ ಸ್ವರೂಪ. ವರಾಹನೂ ಅಷ್ಟೆ; ಹಂದಿ ಮತ್ತು ಮನುಷ್ಯರ ಮಿಶ್ರ ರೂಪ. ಇವೆಲ್ಲ ಕಲ್ಪನೆಯೇ ಸರಿ.
ಇಂತಹ ಕಲ್ಪನಾಜೀವಿಗಳು ಕೇವಲ ಭಾರತೀಯರ ಸೊತ್ತಲ್ಲವೆನ್ನಿ. ಇತ್ತೀಚೆಗೆ ಮಕ್ಕಳ ಮನ ಸೆಳೆದಿದ್ದ ‘ಹ್ಯಾರಿ ಪಾಟರ್’ ಸರಣಿಯ ಸಿನಿಮಾಗಳಲ್ಲಿ ಈ ರೀತಿಯ ಜೀವಿಗಳನ್ನು ಅದ್ಭುತವಾಗಿ ಕಲ್ಪಿಸಿ, ತೋರಿಸಿದ್ದನ್ನು ನಾವು ಯಾರೂ ಮರೆತಿಲ್ಲ. ಗ್ರೀಕ್ ಪುರಾಣದಲ್ಲಿಯೂ ಇಂತಹ ಜೀವಿಗಳು ಯಥೇಚ್ಛವಾಗಿವೆ; ಅದರಲ್ಲಿ ಒಂದನ್ನು ವಿಶೇಷವಾಗಿ ಇಲ್ಲಿ ಹೇಳಲೇಬೇಕು. ‘ಖೈಮೆರಾ’ ಎನ್ನುವ ಈ ಜೀವಿಯ ದೇಹ ಸಿಂಹದ್ದು, ತಲೆ ಮನುಷ್ಯನದ್ದು. ಬೆನ್ನಿನ ಮೇಲೊಂದು ಆಡಿನ ತಲೆ ಎಕ್ಸ್‌ಟ್ರಾ. ಬಾಲವಂತೂ ಹಾವು. ಹಾವಿನ ಬಾಲವಲ್ಲ, ಹಾವೇ! ಈ ಜೀವಿಯ ಹೆಸರನ್ನೇ ಜೀವಿವಿಜ್ಞಾನಿಗಳು ಒಂದು ವಿದ್ಯಮಾನವನ್ನಾಗಿ ಗುರುತಿಸಿದ್ದಾರೆ. ಹಲವು ಜೀವಿಗಳ ಅಂಗಗಳಿರುವ ಅಥವಾ ಅಂಗಾಂಶವಾದರೂ ಸರಿಯೇ, ಅಂತಹವನ್ನು ‘ಖೈಮೆರಾ’ ಎಂದು ಹೆಸರಿಸುತ್ತಾರೆ. ಖೈಮೆರಾಗಳ ಸೃಷ್ಟಿ ಮತ್ತು ಅಧ್ಯಯನ ಜೀವಿಗಳ ಬೆಳವಣಿಗೆ, ಸಂತಾನೋತ್ಪತ್ತಿ, ವಿಕಾಸ ಮೊದಲಾದ ಹಲವಾರು ಜಟಿಲ ವಿದ್ಯಮಾನಗಳ ಬಗ್ಗೆ ನಮಗೆ ಅರಿವು ಮೂಡಿಸಿದೆ ಎನ್ನಬಹುದು.
18ನೇ ಶತಮಾನದವರೆಗೂ ಮನುಷ್ಯನನ್ನು ವಿಶಿಷ್ಟ ಜೀವಿ ಎಂದೇ ಬಿಂಬಿಸಲಾಗಿತ್ತು. ಮನುಷ್ಯನ ಜೊತೆಗೆ ಬೇರೆ ಯಾವ ಜೀವಿಯ ಅಂಗವನ್ನಾಗಲೀ, ರಕ್ತವನ್ನಾಗಲೀ ಬೆರೆಸಿದರೆ ಮನುಷ್ಯ ನೀಚನಾಗುತ್ತಾನೆ ಎಂಬ ನಂಬಿಕೆಯೂ ಇತ್ತು. 17ರಿಂದ 19ನೇ ಶತಮಾನದವರೆಗೂ ಹೀಗೆ ಒಂದು ಜೀವಿಯಿಂದ ಇನ್ನೊಂದು ಜೀವಿಗೆ ಅಂಗಗಳನ್ನು ಕಸಿ ಮಾಡಬಹುದು ಎನ್ನುವ ನಂಬಿಕೆ ಇತ್ತು. ಹಲವರು ಇದನ್ನು ಪ್ರಯತ್ನಿಸಿದ್ದರು. ಗ್ರೀಕ್ ಪುರಾಣದಲ್ಲಿ ಡೀಡಾಲಸ್ ಎಂಬ ಹೀರೋ ಇದ್ದ. ಈತನನ್ನು ಸೆರೆಹಿಡಿದು ಒಂದು ದ್ವೀಪದಲ್ಲಿ ಬಂಧಿಸಿ ಇಟ್ಟಿದ್ದರಂತೆ. ಅಲ್ಲಿದ್ದ ಹಕ್ಕಿಗಳ ರೆಕ್ಕೆ-ಪುಕ್ಕಗಳನ್ನು ತನ್ನ ಮೈಗೆ ಕಸಿ ಮಾಡಿಕೊಂಡು, ದ್ವೀಪದಿಂದ ಹಾರಿ ತಪ್ಪಿಸಿಕೊಂಡು ಹೋದ ಎನ್ನುವ ಕತೆ ಇದೆ. ಇವನ ಮಗ ಐಕಾರಸ್ ಎಂಬಾತ ಇದೇ ರೀತಿ ಮಾಡಲು ಹೋಗಿ ಸಾಧ್ಯವಾಗದೆ, ಸಮುದ್ರಕ್ಕೆ ಬಿದ್ದು ಸತ್ತನಂತೆ. ಆತ ಬಿದ್ದು ಸತ್ತ ಸಮುದ್ರವನ್ನು ‘ಐಕಾರಸ್ ಸಮುದ್ರ’ ಎಂದೇ ಈಗಲೂ ಕರೆಯುತ್ತಾರೆ.
ಹೀಗೆ, ತಮ್ಮದಲ್ಲದ ದೇಹಾಂಶವನ್ನು ಕೂಡಿಸಿಕೊಳ್ಳುವುದು ಸಾಧ್ಯ ಎನ್ನುವ ಕಲ್ಪನೆ ಎಲ್ಲ ಜನತೆಯಲ್ಲಿಯೂ ಮನೆ ಮಾಡಿತ್ತು. ಸುಶ್ರುತ ಕೂಡ ಕತ್ತರಿಸಿದ ಮೂಗನ್ನು ಮತ್ತೆ ಹೊಲಿದಿದ್ದನೆಂಬ ವರದಿ ಇದೆ. ಅದು ಅದೇ ವ್ಯಕ್ತಿಯ ಮೂಗೋ ಅಥವಾ ಇನ್ಯಾರದ್ದೋ ಎನ್ನುವ ವಿವರಗಳು ಇಲ್ಲ. ತಮ್ಮದೇ ಅಂಗದ ಕಸಿ ಕೂಡ ವಿಫಲವಾಗುವ ಸಂದರ್ಭದಲ್ಲಿ, ಇನ್ನೊಬ್ಬ ವ್ಯಕ್ತಿಯ ಅಂಗವನ್ನು ಎರವಲು ಪಡೆಯುವುದು ಕಷ್ಟ. ಇನ್ನು, ಬೇರೆ ಪ್ರಾಣಿಯ ಅಂಗ, ಅದರಲ್ಲಿಯೂ ಆನೆ, ಕುದುರೆ, ಮೊದಲಾದ ಬಲು ದೂರದ ನೆಂಟಪ್ರಾಣಿಗಳಿಂದ ಅಂಗಗಳನ್ನು ತೆಗೆದು ಕಸಿ ಮಾಡಿದರೆ ಅವು ಉಳಿಯುವುದು ಅಸಾಧ್ಯವೇ.
‘ಖೈಮೆರಾ’ ಇಂತಹ ಅಂಗಗಳ ಕಸಿಯ ವಿಷಯವಲ್ಲ. ಅದು ಸಹಜವಾಗಿಯೇ ಎರಡು ಜೀವಿಯ ಅಥವಾ ಪ್ರಾಣಿಯ ಅಂಗಾಂಶ ಇರುವ ಹುಟ್ಟು ಎನ್ನಬಹುದು. ಹೆಸರು ಪೌರಾಣಿಕದ್ದೇ ಆದರೂ ಪರಿಕಲ್ಪನೆ ಅತ್ಯಂತ ನವೀನವಾದದ್ದು ಎನ್ನಬಹುದು. ಈ ಪರಿಕಲ್ಪನೆ ಶುರುವಾಗಿದ್ದು ಬಹುಶಃ ಪ್ರಾಣಿಗಳಲ್ಲಿ ಅಥವಾ ಜೀವಿಗಳಲ್ಲಿ ಎಂದರೂ ತಪ್ಪೇನಿಲ್ಲ – ಸಂತಾನೋತ್ಪತ್ತಿ ಹೇಗಾಗುತ್ತದೆ ಎನ್ನುವ ಅರಿವಿನಿಂದ. ಬಹಳ ಹಿಂದೆ ಗಂಡು-ಹೆಣ್ಣು ಕೂಡಿದರೆ ಹೊಸ ಜೀವ ಹುಟ್ಟುತ್ತದೆ ಎನ್ನುವುದಷ್ಟೇ ತಿಳಿದಿತ್ತು. ಮನುಷ್ಯರಲ್ಲಿ ಇದು ಮಹಿಳೆಯರ ಋತುಸ್ರಾವಕ್ಕೆ ಮತ್ತು ಗಂಡಿನ ಜೊತೆ ಮಿಲನಕ್ಕೆ ಸಂಬಂಧಿಸಿದ್ದು ಎಂಬುದೂ ಅರಿವಾಗಿತ್ತು ಎನ್ನಿ. ಆದರೆ ಇದು ಹೇಗಾಗುತ್ತದೆ? ಏನು ಪ್ರಕ್ರಿಯೆ? ಏನೇನು ಬದಲಾವಣೆಗಳಾಗುತ್ತವೆ? ಇದ್ದಕ್ಕಿದ್ದ ಹಾಗೆ ಒಂದು ಜೀವ, ನಿರ್ದಿಷ್ಟ ಆಕಾರದೊಂದಿಗೆ ಹೇಗೆ ರೂಪು ತಳೆಯುತ್ತದೆ? ಎನ್ನುವುದೆಲ್ಲವೂ ಕೌತುಕಮಯ ಪ್ರಶ್ನೆಗಳಾಗಿದ್ದುವು. ಸೂಕ್ಷ್ಮದರ್ಶಕಗಳಂತಹ ಹಲವು ಸಾಧನಗಳು ಮತ್ತು ತಂತ್ರಗಳು ಸಿದ್ಧಿಸಿದ ಮೇಲೆ ಈ ಅರಿವೂ ನಮಗೆ ಸ್ಪಷ್ಟವಾಯಿತು.
ಇದೀಗ ಈ ಅರಿವಿನ ಮುಂದುವರಿಕೆಯೇ ಕ್ಲೋನಿಂಗು, ಪ್ರನಾಳ ಶಿಶುಗಳ ಸೃಷ್ಟಿ, ಸ್ಟೆಮ್ ಸೆಲ್‌ಗಳ ಬಳಕೆ ಎನ್ನಬಹುದು. ಇಪ್ಪತ್ತನೆಯ ಶತಮಾನದ ಆದಿಭಾಗದಿಂದ ಇಂದಿನವರೆಗೆ ಈ ಎಲ್ಲ ಕ್ಷೇತ್ರಗಳಲ್ಲಿಯೂ ಸಾಕಷ್ಟು ಬೆಳವಣಿಗೆಗಳಾಗಿವೆ. ಖೈಮೆರಾಗಳು ಹೇಗಾಗಬಹುದು ಎನ್ನುವ ಕಲ್ಪನೆ ಸ್ಪಷ್ಟವಾಗಿದೆ. ಈ ತರ್ಕಗಳು ಎಷ್ಟು ಮಟ್ಟಿಗೆ ಸತ್ಯ ಎನ್ನುವುದರ ಪರೀಕ್ಷೆ ಹಲವು ಬಗೆಯ ಖೈಮೆರಾಗಳಿಗೆ ಹಾದಿ ಮಾಡಿಕೊಟ್ಟಿದೆ.
ಬಹುಶಃ ಮೊತ್ತಮೊದಲನೆಯದಾಗಿ ಮನುಷ್ಯ ಪ್ರಯತ್ನದಿಂದ ಹುಟ್ಟಿದ ಖೈಮೆರಾ ಒಂದು ಕಪ್ಪೆ ಎನ್ನಬಹುದು. ಮೊಟ್ಟೆಗಳು ಹೇಗೆ ಬೆಳೆಯುತ್ತವೆ ಮತ್ತು ಅವುಗಳಲ್ಲಿ ವಿವಿಧ ಅಂಗಗಳು ಹೇಗೆ ರೂಪುಗೊಳ್ಳುತ್ತವೆ ಎನ್ನುವುದನ್ನು ತಿಳಿಯಲು ಹ್ಯಾನ್ಸ್ ಸ್ಪೀಮನ್ ಎಂಬಾತ ಪ್ರಯೋಗಗಳನ್ನು ಮಾಡಿದ್ದ. ಕಪ್ಪೆಯ ಮೊಟ್ಟೆ ಬೆಳೆಯುವಾಗ, ಅದರಲ್ಲಿ ನಿರ್ದಿಷ್ಟ ಭಾಗಗಳನ್ನು ಸುಟ್ಟುಬಿಡುತ್ತಿದ್ದ. ಆ ನಂತರ ಯಾವ ಅಂಗಗಳು ಊನವಾಗಿ ಕಪ್ಪೆ ಹುಟ್ಟುತ್ತದೆ ಎಂದು ಗಮನಿಸಿದ್ದ. ಈ ಪ್ರಯೋಗಗಳ ಮುಂದಿನ ಭಾಗವಾಗಿ ಒಂದು ಮೊಟ್ಟೆಯ ಭಾಗವೊಂದನ್ನು ಸುಟ್ಟು, ಆ ಭಾಗದಲ್ಲಿ ಬೇರೊಂದು ಕಪ್ಪೆಯ, ಬೇರೊಂದು ಅಂಗ-ಭಾಗವನ್ನು ಕಸಿ ಮಾಡಿ ಪ್ರಯತ್ನಿಸಿದ್ದ. ಹೀಗೆ ಬಾಲದಲ್ಲಿಯೂ ಕಣ್ಣು ಇರುವ ಕಪ್ಪೆಗಳನ್ನು ಸೃಷ್ಟಿಸಿದ್ದ.
ಕಪ್ಪೆಗೆ ಇನ್ನೊಂದು ಕಪ್ಪೆಯದೇ ಅಂಗಗಳನ್ನು ಕೂಡಿಸುವುದು ಅಸಹಜವಾದರೂ ವಿಚಿತ್ರ ಸೃಷ್ಟಿಯಲ್ಲವಷ್ಟೆ! ಅದೇ ಕಪ್ಪೆಗೆ ಹಾವಿನದ್ದೋ, ಇಲಿಯದ್ದೋ ಅಂಗಗಳನ್ನು ಕೂಡಿಸಬಹುದೇ? ಇದು ಬಹಳ ಕುತೂಹಲಕರ ಪ್ರಶ್ನೆ. ಏಕೆಂದರೆ, ನಮ್ಮ ಇಂದಿನ ಅರಿವಿನ ಪ್ರಕಾರ ವಿಕಾಸದ ಹಾದಿಯಲ್ಲಿ ಎಷ್ಟು ನಿಕಟ ಸಂಬಂಧವಿರುತ್ತದೆಯೋ ಅಷ್ಟರ ಮಟ್ಟಿಗೆ ಎರಡು ಜೀವಿಗಳ ಗುಣಗಳಲ್ಲಿ ಸಾಮ್ಯ ಹೆಚ್ಚು. ಉದಾಹರಣೆಗೆ, ಮಂಗಗಳಿಗೆ ಮನುಷ್ಯರ ಅಂಗಗಳನ್ನು ಕಸಿ ಮಾಡಬಹುದೇನೋ; ಆದರೆ, ಸಿಂಹಗಳದ್ದು ಆಗಲಿಕ್ಕಿಲ್ಲ ಎನ್ನುವ ತರ್ಕವಿತ್ತು. ಮೀನು ಇತ್ಯಾದಿಗಳ ಅಂಗಗಳಂತೂ ಬೆಳೆಯುವುದೇ ಇಲ್ಲ ಎನ್ನುವ ಭಾವನೆಯೂ ಇತ್ತು.
20ನೇ ಶತಮಾನದಲ್ಲಿ ತಳಿವಿಜ್ಞಾನದಲ್ಲಿ ನಡೆದ ಬೆಳವಣಿಗೆಗಳು ಇವು ಏಕೆ ಸಾಧ್ಯವಿಲ್ಲ ಎನ್ನುವ ಪ್ರಶ್ನೆಯನ್ನೂ ಮುಂದಿಟ್ಟಿದ್ದವು. ಎಲ್ಲ ಜೀವಿಗಳಲ್ಲಿಯೂ ತಳಿ ರಾಸಾಯನಿಕ ಡಿಎನ್‌ಎಯೇ ಆದರೆ, ಅದರಲ್ಲಿ ಇರುವ ಮಾಹಿತಿಯನ್ನು ಇತರೆ ಜೀವಿಗಳಲ್ಲಿಯೂ ಪ್ರಕಟಿಸುವುದು ಸಾಧ್ಯವಾಗಬೇಕು. ಹೀಗೆ, ಮನುಷ್ಯರ ಪ್ರೊಟೀನನ್ನು ಬ್ಯಾಕ್ಟೀರಿಯಾಗಳಲ್ಲಿ, ಇಲಿಗಳಲ್ಲಿ ತಯಾರಿಸಿದ್ದೂ ಆಯಿತು. ಆದರೆ, ಇವು ಒಂದೋ ಎರಡೋ ಜೀನುಗಳ ಕತೆ. ಒಂದು ಇಡೀ ಜೀವಕೋಶ ಎಂದರೆ ಸಾವಿರಾರು ಜೀನುಗಳ ಸಮೂಹ. ಅವನ್ನು ಒಟ್ಟಿಗೇ ಬೇರೆ ಜೀವಿಯಲ್ಲಿ ಕೂಡಿಸಿದರೆ ಏನಾಗಬಹುದು?
ಈ ವರ್ಷದ ಮೊದಲಲ್ಲಿ ನಿಧನರಾದ ಐಯಾನ್ ವಿಲ್ಮಟ್ ಮೂವತ್ತು ವರ್ಷಗಳ ಹಿಂದೆ ‘ಡಾಲಿ’ ಎನ್ನುವ ತದ್ರೂಪಿಯನ್ನು ಸೃಷ್ಟಿಸಿದ್ದರು. ಕುರಿಯ ಅಂಡವೊಂದರಲ್ಲಿ ಇದ್ದ ಎಲ್ಲ ಜೀನುಗಳನ್ನು ತೆಗೆದು ಹಾಕಿ, ಬೇರೊಂದು ಕುರಿಯ ಜೀನನ್ನು ಹಾಕಿದ್ದರು. ಹೀಗೆ ಎರಡನೆಯ ಕುರಿಯ ತದ್ರೂಪಿ ಸೃಷ್ಟಿಯಾಗಿತ್ತು. ಈಗ ಟಾನ್ ಟು ತಂಡ ಇದೇ ರೀತಿಯಲ್ಲಿ ಮಂಗಗಳ ಅಂಡದಲ್ಲಿ ಮನುಷ್ಯರ ಜೀನುಗಳನ್ನು ಸೇರಿಸಿ, ಏನಾಗುತ್ತದೆ ಎಂದು ಪ್ರಯೋಗ ಮಾಡಿದೆ. ಹೀಗೆ ಹುಟ್ಟಿದ ಮಂಗಗಳಲ್ಲಿ ಮನುಷ್ಯನ ಜೀವಕೋಶಗಳೂ ಬೆಳೆದಿದ್ದುವು. ಕೆಲವು ಭಾಗಗಳಲ್ಲಿ ಮನುಷ್ಯನ ಜೀವಕೋಶಗಳೇ ಇದ್ದವು ಎಂದು ಇವರು ನಿರೂಪಿಸಿದ್ದಾರೆ.
ಟಾನ್ ಟು ‘ಖೈಮೆರಾ’ವನ್ನು ಸೃಷ್ಟಿಸಿದ್ದು ಹೀಗೆ. ತಂಡವು ಮೊದಲು ಮಂಗಗಳ ಭ್ರೂಣವನ್ನು ತೆಗೆದು ಪ್ರಯೋಗಾಲಯದಲ್ಲಿ ಕೃಷಿ ಮಾಡಿತು. ಸಾಮಾನ್ಯವಾಗಿ ಭ್ರೂಣಗಳು ಬೆಳೆಯುವಾಗ ಒಂದು ಹಂತದಲ್ಲಿ ಪೊಳ್ಳು ಚೆಂಡಿನ ಸ್ವರೂಪ ಪಡೆಯುತ್ತವೆ. ಒಳಗೆ ಖಾಲಿಯಾದ ಜಾಗದ ಹೊರಗೆ ಮೂರು ಪದರಗಳಲ್ಲಿ ಜೀವಕೋಶಗಳಿರುತ್ತವೆ. ಈ ಹಂತದಲ್ಲಿ ಮನುಷ್ಯನ ರಕ್ತಕೋಶದಿಂದ ತೆಗೆದ ಸ್ಟೆಮ್ ಸೆಲ್ ಅರ್ಥಾತ್ ಆಕರಕೋಶಗಳನ್ನು ಟಾನ್ ಟು ತಂಡ ಮಂಗಗಳ ಭ್ರೂಣದೊಳಗಿನ ಜಾಗೆಯೊಳಗೆ ಸೇರಿಸಿದೆ. ಸ್ಟೆಮ್ ಸೆಲ್ಲುಗಳು ದೇಹದ ಯಾವುದೇ ಜೀವಕೋಶವಾಗಿಯೂ ಬೆಳೆಯುವ ಶಕ್ತಿಯುಳ್ಳವು. ಹೀಗೆ ಮನುಷ್ಯನ ಅಕರಕೋಶಗಳನ್ನು ಸೇರಿಸಿದ ಭ್ರೂಣಗಳನ್ನು ಎಂದಿನಂತೆ ಬೆಳಸಿದೆ. ನಂತರ ವಿವಿಧ ಹಂತಗಳಲ್ಲಿ ಎಲ್ಲೆಲ್ಲಿ ಮನುಷ್ಯರ ಜೀವಕೋಶಗಳಿವೆ ಎಂದು ತಂಡ ಪರಿಶೀಲಿಸಿದೆ. ಇದಕ್ಕಾಗಿಯೂ ಒಂದು ತಂತ್ರವನ್ನು ಹೂಡಬೇಕಿತ್ತು. ಮನುಷ್ಯರ ಆಕರ ಕೋಶಗಳನ್ನು ಮೀನುಗಳಲ್ಲಿ ಇರುವ ಒಂದು ಪ್ರೊಟೀನು ತಯಾರಿಸುವಂತೆ ಬದಲಾಯಿಸಿದ್ದರು. ಈ ಪ್ರೊಟೀನಿನ ಮೇಲೆ ಅಲ್ಟ್ರಾವಯಲೆಟ್ ಕಿರಣಗಳು ಬಿದ್ದರೆ ಅದು ಹಸಿರಾಗಿ ಹೊಳೆಯುತ್ತದೆ. ಹೀಗೆ ಅದು ಎಲ್ಲಿದ್ದರೂ ಗುರುತಿಸಬಹುದು. ಮಂಗದ ಭ್ರೂಣಗಳಲ್ಲಿ ಈ ಪ್ರೊಟೀನು ಕೆಲವು ಕೋಶಗಳಲ್ಲಿ ಇದ್ದುದು ಪತ್ತೆಯಾಯಿತು. ಅಂದರೆ, ಮಂಗದ ಭ್ರೂಣದಲ್ಲಿ ಮನುಷ್ಯರ ಕೋಶಗಳು ಬೆರೆತುಕೊಂಡಿವೆ ಎಂದಾಯಿತಷ್ಟೆ. ಈ ಭ್ರೂಣಗಳನ್ನು ಮರಿಯಾಗುವವರೆಗೂ ಬೆಳೆಸಿ ಪರೀಕ್ಷಿಸಿದ್ದಾರೆ. ಇಂತಹ ಮರಿಗಳಲ್ಲಿ ಅಲ್ಲಲ್ಲಿ ತೇಪೆಯ ಹಾಗೆ ಹಸಿರು ಬಣ್ಣದ ಜೀವಕೋಶಗಳಿದ್ದವು. ಬೆಳಕು ಬಿದ್ದೊಡನೆ ಆ ಜಾಗ ಹಸಿರಾಗುತ್ತಿತ್ತು. ಹೀಗೆ, ಬೆರಳ ತುದಿ, ತುಟಿ, ಕೆನ್ನೆ ಮೊದಲಾದೆಡೆ ಇರುವ ಚರ್ಮದ ಪದರಗಳಲ್ಲಿ ಮಂಗದ ಕೋಶಗಳೊಟ್ಟಿಗೆ ಮನುಷ್ಯನ ಕೋಶವೂ ಇತ್ತು. ಖೈಮೆರಾ ಜೀವಿಯ ಸೃಷ್ಟಿಯಾಗಿದ್ದು ಹೀಗೆ. ಮೊತ್ತಮೊದಲ ಬಾರಿಗೆ ಹೀಗೆ ಎರಡು ಬೇರೆ-ಬೇರೆ ಜೀವಿವರ್ಗಕ್ಕೆ ಸೇರಿದ ಪ್ರಾಣಿಗಳ ಅಂಗಾಂಶಗಳು ಬೆರೆತ ಜೀವಿ ಸೃಷ್ಟಿಯಾಯಿತು.
ಹಾಗಂತ, ಮನುಷ್ಯರಲ್ಲಿ ಖೈಮೆರಾಗಳು ಇರಲೇ ಇಲ್ಲವೆಂತಲ್ಲ. ಮನುಷ್ಯರಲ್ಲಿಯೂ ಎರಡು ವಿಭಿನ್ನ ವ್ಯಕ್ತಿಗಳ ಅಂಶಗಳು ಬೆರೆತಂಥವರು ಹುಟ್ಟಬಹುದು. ಸಾಮಾನ್ಯವಾಗಿ ಇದು ಭ್ರೂಣದ ಹಂತದಲ್ಲಿ ಆಗುವ ಎಡವಟ್ಟುಗಳ ಫಲ. ಇವುಗಳಲ್ಲಿ ಮೂರು ವಿಧಗಳನ್ನು ಗುರುತಿಸಿದ್ದಾರೆ. ಮೊದಲನೆಯ ವಿಧದಲ್ಲಿ, ಭ್ರೂಣ ಬೆಳೆಯುತ್ತಿರುವಾಗ ಅಪ್ಪಿತಪ್ಪಿ ತಾಯಿಯ ಜೀವಕೋಶಗಳು ಹೊಕ್ಕಳ ಬಳ್ಳಿಯನ್ನೂ ದಾಟಿ ಸಾಗಿ ಭ್ರೂಣದೊಳಗೆ ಬೆರೆತುಹೋಗಬಹುದು. ಇಂತಹ ಮಕ್ಕಳಲ್ಲಿ ಕೆಲವು ಅಂಗಗಳಲ್ಲಿ ತಾಯಿಯ ಅಂಶವೂ ಇರುತ್ತದೆ. ಇವನ್ನು ‘ಮೈಕ್ರೊ ಖೈಮೆರಾ’ ಎನ್ನುತ್ತಾರೆ. ಎರಡನೆಯದಾಗಿ, ಅಪರೂಪಕ್ಕೆ ಎರಡು ಭ್ರೂಣಗಳು ಒಟ್ಟಿಗೇ ರೂಪುಗೊಳ್ಳಬಹುದು. ಇವು ಗರ್ಭದಲ್ಲಿಯೇ ಮಿಶ್ರವಾಗಿ ಒಂದೇ ಆಗಿ ಬೆಳೆಯುವುದೂ ಉಂಟು. ಇದು ಮತ್ತೊಂದು ಬಗೆಯ ಖೈಮೆರಾ; ಇದನ್ನು ಫ್ಯೂಶನ್ ಅಥವಾ ಬೆಸುಗೆಯಿಂದ ಆದ ಖೈಮೆರಾ ಎಂದು ಕರೆಯುವುದುಂಟು. ಮೂರನೆಯದು, ತದ್ರೂಪಿಗಳಲ್ಲದ ಅವಳಿಗಳು ಗರ್ಭದಲ್ಲಿದ್ದಾಗ ಆಗುವಂಥದ್ದು. ಅಂತಹ ಸಂದರ್ಭದಲ್ಲಿ ಒಂದು ಭ್ರೂಣದ ಜೀವಕೋಶಗಳು ಇನ್ನೊಂದಕ್ಕೆ ವರ್ಗಾವಣೆ ಆಗಬಹುದು. ಹೀಗೆ, ಜೀವಕೋಶಗಳ ವಿತರಣೆಯಿಂದಾಗಿಯೂ ಎರಡು ವಿಭಿನ್ನ ತಳಿಗುಣಗಳ ಅಂಗಾಂಶಗಳು ಇರುವ ಮರಿ, ಮಗು ಹುಟ್ಟುತ್ತದೆ.
ಸಾಮಾನ್ಯವಾಗಿ ಸಹಜವಾಗಿ ಆಗುವ ಈ ಖೈಮೆರಾಗಳು ಸಾಧಾರಣ ವ್ಯಕ್ತಿಯಂತೆಯೇ ಇರುವುದರಿಂದ ವಿಶೇಷ ಎನ್ನಿಸುವುದಿಲ್ಲ. ಗಣೇಶನೂ ಅಲ್ಲ, ನಾರಸಿಂಹನಂತೆಯೂ ವಿಚಿತ್ರವಾಗಿರುವುದಿಲ್ಲ. ಆದರೆ, ಖೈಮೆರಾ ಆಗಿರುವುದರಿಂದ ವಿಶೇಷ ಸಮಸ್ಯೆಗಳು ಉಂಟಾಗಬಹುದು. ಇದೋ, ಅಂತಹ ತಂದೆಯೊಬ್ಬನ ಕತೆ – ಅಮೆರಿಕದಲ್ಲಿ ನಡೆದಿದ್ದು. ತಂದೆ-ತಾಯಿಯರು ಮಗುವಾಗಲಿಲ್ಲವೆಂದು ಕೃತಕ ಗರ್ಭಧಾರಣೆಗೆ ಮೊರೆಹೋದರು. ತಂದೆಯ ವೀರ್ಯವನ್ನು ನೇರವಾಗಿ ತಾಯಿಯ ಗರ್ಭದೊಳಗೆ ಸೇರಿಸಿ ಗರ್ಭ ಧರಿಸುವಂತೆ ಮಾಡಿದರು. ಮಗು ಹುಟ್ಟುವ ವೇಳೆಯಲ್ಲಿ ಎಂದಿನಂತೆ ರಕ್ತ ಪರೀಕ್ಷೆ ಮಾಡಿದಾಗ ವಿಚಿತ್ರ ಫಲಿತಾಂಶ ಬಂದಿತು. ತಂದೆಯದ್ದೂ, ತಾಯಿಯದ್ದೂ ಎ ಗ್ರೂಪಿನ ರಕ್ತವೇ ಇದ್ದರೂ, ಮಗುವಿನದ್ದು ಮಾತ್ರ ಎಬಿ ಗ್ರೂಪಿನದಾಗಿತ್ತು. ಅದು ಅಸಂಭವ. ಹೀಗಾಗಿ, ಹಲವಾರು ಬಾರಿ ತಂದೆ-ತಾಯಿಯ ಪರೀಕ್ಷೆ ನಡೆಸಿದರು. ಡಿಎನ್‌ಎ ಪರೀಕ್ಷೆಯಲ್ಲಿಯೂ ತಂದೆ ಮತ್ತು ಮಗುವಿನ ಡಿಎನ್‌ಎ ಹೋಲಿಕೆ ಇರಲಿಲ್ಲ.
ಭಾರತದಲ್ಲಿ ಇದು ಆಗಿದ್ದಿದ್ದರೆ ಬಹುಶಃ ಮಗುವನ್ನು ಕದ್ದಿರಬೇಕು ಎಂದುಬಿಡಬಹುದಿತ್ತು. ಆದರೆ, ಅಲ್ಲಿನ ವೈದ್ಯರಿಗೆ ಎಲ್ಲೋ ಏನೋ ಸಮಸ್ಯೆ ಇರಬೇಕು ಎಂದು ಅನ್ನಿಸಿ, ಮರುಪರೀಕ್ಷೆಗಳನ್ನು ನಡೆಸಿದರು. ಆಗ ತಿಳಿದದ್ದು, ತಂದೆ ಒಬ್ಬ ಖೈಮೆರಾ. ಭ್ರೂಣಾವಸ್ಥೆಯಲ್ಲಿ ಆತ ಎರಡು ಭ್ರೂಣಗಳು ಬೆರೆತು ಹುಟ್ಟಿದ ಮಿಶ್ರಭ್ರೂಣದಿಂದ ಹುಟ್ಟಿದ್ದ. ಅಂದರೆ, ಆತನ ವೀರ್ಯದಲ್ಲಿದ್ದ ಜೀನು ಸಮೂಹ ಬೇರೆ, ಆತನ ಡಿಎನ್‌ಎ ಪರೀಕ್ಷೆಗೆಂದು ತೆಗೆದ ಬಾಯಿಯಂಗುಳಿನ, ರಕ್ತದ ಹಾಗೂ ಚರ್ಮದ ಜೀವಕೋಶಗಳಲ್ಲಿನ ಜೀನು ಸಮೂಹ ಬೇರೆ ಇತ್ತು. ಹೀಗಾಗಿ, ಈತನ ರಕ್ತ ಎ ವರ್ಗದ್ದಾದರೂ ಮಗುವಿನಲ್ಲಿ ಬಿ ವರ್ಗದ್ದೂ ಗುಣವಿತ್ತು. ಅದು ‘ಎಬಿ’ ಆಗಿತ್ತು. ಇದೇ ರೀತಿಯ ಇನ್ನೊಂದು ಕೇಸಿನಲ್ಲಿ ಒಬ್ಬಂಟಿ ತಾಯಿ, ತನ್ನಿಬ್ಬರು ಮಕ್ಕಳಿಗೂ ನೆರವಿನ ಭತ್ಯೆಗಾಗಿ ಅರ್ಜಿ ಹಾಕಿದ್ದಳು. ಅದರೆ, ಡಿಎನ್‌ಎ ಪರೀಕ್ಷೆಯಲ್ಲಿ ವೈದ್ಯರು ಅವರಿಬ್ಬರೂ ಇವಳ ಮಕ್ಕಳೇ ಅಲ್ಲ ಎಂದುಬಿಟ್ಟಿದ್ದರು. ದುರದೃಷ್ಟವಶಾತ್, ಆಕೆ ಡಿಎನ್‌ಎ ಪರೀಕ್ಷೆ ತಪ್ಪಿರಬಹುದು ಎಂದು ಹೇಳಿದರೂ ಕಾನೂನು ಅದನ್ನು ಒಪ್ಪಿರಲಿಲ್ಲ.
ಇದು ಸಹಜವಾಗಿ ಆಗುವ ಖೈಮೆರಾಗಳಿಗೆ ಎದುರಾದ ಕಾನೂನು ತೊಡಕು. ಇನ್ನು, ನಿಜವಾಗಿಯೂ ಮಂಗ, ಮಾನವ ಅಥವಾ ಹಂದಿ-ಮಾನವ ಖೈಮೆರಾಗಳ ಗತಿ ಏನೋ? ಹಂದಿಯ ಹಲವಾರು ಅಂಗಗಳು ಮನುಷ್ಯರಿಗೆ ಹೊಂದುವುದರಿಂದ ಅದರ ಅಂಗಗಳನ್ನು ಮನುಷ್ಯರಿಗೆ ಕಸಿ ಮಾಡುವ ಯೋಚನೆ ಇದೆ. ಪ್ರಯೋಗಗಳು ನಡೆಯುತ್ತಿವೆ. ಮುಂದೆ ಖೈಮೆರಾಗಳನ್ನು ಸೃಷ್ಟಿಸಿ, ಅವುಗಳಿಂದ ಸುಲಭವಾಗಿ ದೇಹಕ್ಕೆ ಒಗ್ಗುವ ಅಂಗಗಳನ್ನು ಹೆಕ್ಕಲೂಬಹುದು. ಹಾಗಾದಾಗ, ಕಾನೂನಿನ ಬಿಕ್ಕಟ್ಟುಗಳು ಏನೇನಿರಬಹುದು ಎಂದು ಕಲ್ಪಿಸಿಕೊಳ್ಳುವುದೂ ಕಷ್ಟವೇ.
ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ