ಪೊಲೀಸರಿಗೆ ದೂರು ಸಲ್ಲಿಸುವಂತೆ ತಮ್ಮ ಸಿಬ್ಬಂದಿಗೆ ಹೇಳುವ ಬದಲಿಗೆ, ಸಮಯಕ್ಕೆ ಸರಿಯಾಗಿ ಹೊರಡುವ ನಿರ್ಧಾರ ಮಾಡಿದ ವಿಮಾನದ ಸಿಬ್ಬಂದಿಗೆ ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಿದ್ದರೆ ರಾಜ್ಯಪಾಲ ಗೆಹ್ಲೋತ್ ಜನಸಾಮಾನ್ಯರ ದೃಷ್ಟಿಯಲ್ಲಿ ಹೀರೋ ಆಗಿರುತ್ತಿದ್ದರು. ಆದರೆ ಆದದ್ದೇ ಬೇರೆ...
ಕರ್ನಾಟಕದ ರಾಜ್ಯಪಾಲ ತಾವರಚಂದ್ ಗೆಹ್ಲೋತ್ ಅವರು ತಡವಾಗಿ ಬಂದರೆಂಬ ಕಾರಣಕ್ಕೆ, ಅವರನ್ನು ಬಿಟ್ಟು ಏರ್ ಏಷ್ಯಾ ವಿಮಾನ ಹಾರಿತೆಂಬುದು ಜುಲೈ 27ರ ಗುರುವಾರದ ಬಿಸಿ-ಬಿಸಿ ಸುದ್ದಿ. ಕರ್ನಾಟಕದ ಎಲ್ಲ ಸುದ್ದಿ ಮಾಧ್ಯಮಗಳು ಈ ಸಂಗತಿಯನ್ನು ಯಾವುದೇ ಮನರಂಜನಾ ಸುದ್ದಿಗೆ ಕಡಿಮೆಯಲ್ಲ ಎಂಬಂತೆ ಪ್ರಸಾರ ಮಾಡಿದವು ಮತ್ತು ಪ್ರಕಟಿಸಿದವು.
ಹೀಗೆ ವಿಚಿತ್ರ ಸದ್ದು ಮಾಡಿದ ಈ ಸುದ್ದಿಗಳು ಅತ್ಯಂತ ಸ್ವಾರಸ್ಯಕರ ವಿರೋಧಾಭಾಸಗಳನ್ನು ಹೊಂದಿದ್ದವು ಎಂಬುದು ಗಮನಾರ್ಹ. ಕೆಲವು ಮಾಧ್ಯಮಗಳ ಪ್ರಕಾರ, ಗೆಹ್ಲೋತ್ ಅವರು ಹತ್ತು ನಿಮಿಷ ತಡ ಮಾಡಿಕೊಂಡಿದ್ದರು. ಮತ್ತೆ ಕೆಲವು ಮಾಧ್ಯಮಗಳ ಪ್ರಕಾರ, ಅವರು ಕೇವಲ ಒಂದು ನಿಮಿಷ ಮಾತ್ರವೇ ತಡವಾಗಿ ಬಂದಿದ್ದರು. ಕೆಲವು ಮಾಧ್ಯಮಗಳ ಪ್ರಕಾರ, ರಾಜ್ಯಪಾಲರು ತಡವಾಗಿ ಬರುವುದಾಗಿ ಸಂಬಂಧಿಸಿದವರಿಗೆ ಮೊದಲೇ ತಿಳಿಸಲಾಗಿತ್ತು. ಇನ್ನು ಕೆಲವು ಮಾಧ್ಯಮಗಳ ಪ್ರಕಾರವಂತೂ, ಟೇಕಾಫ್‌ಗೆ ಮೊದಲೇ ಗೆಹ್ಲೋತ್ ಅವರು ವಿಮಾನ ಏರುವ ಏಣಿಯ ಬಳಿ ತಲುಪಿದ್ದರು; ಆದರೆ ತಡವಾಗಿ ಬಂದ ಕಾರಣ ಸಿಬ್ಬಂದಿ ಪ್ರವೇಶ ನಿರಾಕರಿಸಿದರು. ಒಂದೇ ಒಂದು ಇಂಗ್ಲಿಷ್ ದಿನಪತ್ರಿಕೆ ಮಾತ್ರ, ಗೆಹ್ಲೋತ್ ಅವರು ಹತ್ತು ನಿಮಿಷ ಮೊದಲೇ ವಿಮಾನ ನಿಲ್ದಾಣದ ಲಾಂಜ್‌ಗೆ ಬಂದಿದ್ದಾಗಿಯೂ, ನಂತರ ಶೌಚಾಲಯ ಬಳಸಲು ತೆರಳಿದ್ದರಿಂದ ತಡವಾಗಿದ್ದಾಗಿಯೂ ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. “ರಾಜ್ಯಪಾಲರು ದೊಡ್ಡ ಮನುಷ್ಯರು; ಅವರನ್ನು ಬಿಟ್ಟು ಹೋಗುವುದೆಂದರೇನು?” ಎಂಬ ಘನವಾದ ದನಿ ಹೊರಿಸಿ ಸುದ್ದಿ ಮಾಡಿದ್ದರೂ, ಹೂರಣದಲ್ಲಿ ಹೀಗೆ ಭರಪೂರ ಎಡಬಿಡಂಗಿತನ, ಅಧ್ವಾನ.
ಕೇವಲ ತಡವಾಗಿ ಬಂದಿದ್ದಕ್ಕೆ ವಿಮಾನದ ಮಂದಿ ರಾಜ್ಯಪಾಲರನ್ನು ಬಿಟ್ಟು ಹೊರಟಿದ್ದು ಶಿಷ್ಟಾಚಾರದ (ಪ್ರೊಟೊಕಾಲ್) ಪ್ರಕಾರ ಅಪಚಾರ. ಹಾಗಾಗಿ, ಗೆಹ್ಲೋತ್ ಸಿಟ್ಟಾಗಿ, ಪೊಲೀಸ್ ದೂರು ಸಲ್ಲಿಸುವಂತೆ ತಮ್ಮ ಅಧಿಕಾರಿಗಳಿಗೆ ಹೇಳಿದ್ದಾಯಿತು. ಅತ್ತ, ಏರ್ ಏಷ್ಯಾ ಸಂಸ್ಥೆ ಕ್ಷಮೆ ಕೇಳಿ, ಆಂತರಿಕ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದೂ ಆಯಿತು. ಆದರೆ, ಜನಸಾಮಾನ್ಯರ ಅತ್ಯಂತ ಸರಳ ಪ್ರಶ್ನೆಗಳೇನೆಂದರೆ; ರಾಜ್ಯಪಾಲರು ಹತ್ತು ನಿಮಿಷದ ಬದಲಿಗೆ ಅರ್ಧ ಗಂಟೆ ತಡವಾಗಿ ಬಂದರೂ ವಿಮಾನ ಅವರಿಗಾಗಿ ಕಾಯಬೇಕೇ? ಸಂವಿಧಾನದಿಂದ ಪಡೆದ ಅಧಿಕಾರದ ಕಾರಣಕ್ಕೆ ಸಿಕ್ಕ ವಿಶೇಷ ಸೌಲಭ್ಯಗಳನ್ನು ಇತರರಿಗೆ ತೊಂದರೆಯಾಗುವಂತೆ (ಈ ಪ್ರಕರಣದಲ್ಲಿ ಹೇಳುವುದಾದರೆ, ಒಂದು ವೇಳೆ ವಿಮಾನ ತಡವಾಗಿ ಹೊರಟು ಇತರೆ ಪ್ರಯಾಣಿಕರು ಅನುಭವಿಸಬಹುದಾದ ತೊಂದರೆ) ಬಳಸಬಹುದೇ?
ಈ ಸಂಪಾದಕೀಯ ಓದಿದ್ದೀರಾ?: 'ಮೇಲ್ಜಾತಿ ಬಿಗಿಮುಷ್ಟಿ'ಯಲ್ಲಿ ಹೈಕೋರ್ಟುಗಳು-ಬಹುಜನರೇಕೆ ದೂರ ದೂರ?
ಜನಸಾಮಾನ್ಯರಿಗೆ ಪ್ರಭುತ್ವದ ಮೇಲೆ ಅಸಹನೆ ಹುಟ್ಟುವುದು ಇಂಥವೇ ಕಾರಣಗಳಿಗೆ. ಭಾರತೀಯ ಸಂವಿಧಾನವು ಸಾರುವ, ‘ಕಾನೂನಿನೆದುರು ಎಲ್ಲರೂ ಸಮಾನರು’ ಎಂಬ ಮಾತು, ವಿಶೇಷಾಧಿಕಾರ ಹೊಂದಿದವರಿಗೆ ಅಥವಾ ರಾಜಕಾರಣಿಗಳು, ಉದ್ಯಮಿಗಳು, ನ್ಯಾಯಾಧೀಶರು, ವಕೀಲರು, ಪೊಲೀಸರು, ಪತ್ರಕರ್ತರು ಎಂಬ ಸ್ಥಾನವು ದಯಪಾಲಿಸುವ ‘ಇಮ್ಯುನಿಟಿ’ ಪಡೆದವರಿಗೆ ಅನ್ವಯವಾಗುವುದು ಅತ್ಯಂತ ಅಪರೂಪ. ಹಾಗಾಗಿಯೇ, ಮುಖ್ಯಮಂತ್ರಿಯಾದವರು ತನಗೆ ‘ಝೀರೊ ಟ್ರಾಫಿಕ್’ ಸೌಲಭ್ಯ ಬೇಡವೆನ್ನುವುದು, ಸಚಿವರಾದವರು ತನಗೆ ರಕ್ಷಣಾ ತಂಡ ಅನಗತ್ಯವೆಂದು ಹೇಳುವುದು, ಅಧಿಕಾರಸ್ಥರು ಪ್ರೊಟೊಕಾಲ್ ಎಂಬ ಆಡಳಿತಾತ್ಮಕ ಶ್ರೀರಕ್ಷೆಯನ್ನು ಮೀರಿ ಎಲ್ಲರೊಂದಿಗೆ ಬೆರೆಯುವುದು, ತಮಗಿರುವ ‘ಇಮ್ಯುನಿಟಿ’ಯಾಚೆಗೂ ಅಧಿಕಾರ ಹೊಂದಿದ ವ್ಯಕ್ತಿಗಳಿಗೆ ಯಾವುದೇ ಶಿಕ್ಷೆಯಾಗುವುದು – ಜನಸಾಮಾನ್ಯರ ದೃಷ್ಟಿಯಲ್ಲಿ ಕ್ರಾಂತಿಕಾರಕ ಬದಲಾವಣೆ ಎನಿಸಿಕೊಳ್ಳುತ್ತದೆ. ಜೊತೆಗೆ, ಈ ನೆಲದ ಸಂವಿಧಾನದ ಮೇಲಿನ ಪ್ರೀತಿ ಹೆಚ್ಚಿಸುತ್ತದೆ. ಬದಲಿಗೆ, ತಮಗಿರುವ ಅಧಿಕಾರ, ಪ್ರೊಟೊಕಾಲ್ ಬಳಸಿ ವಿಶೇಷ ಸವಲತ್ತು ಸಿಗುವಂತೆ ನೋಡಿಕೊಳ್ಳುವ, ಅದು ಸಿಗದಿದ್ದಾಗ ತಮಗಿರುವ ಅಧಿಕಾರ ಚಲಾಯಿಸಿ ಸೇಡಿನ ರಾಜಕಾರಣಕ್ಕೆ ಮುಂದಾಗುವವರನ್ನು ಜನಸಾಮಾನ್ಯರು ಅಹಂಕಾರಿಗಳೆಂದು ನಿರ್ಧರಿಸುವುದು ಸಹಜ. ಈ ಪ್ರಕರಣದಲ್ಲಿ, ಪೊಲೀಸ್ ದೂರಿನ ಬದಲಿಗೆ, ಸಮಯಕ್ಕೆ ಸರಿಯಾಗಿ ಹೊರಡುವ ನಿರ್ಧಾರ ಮಾಡಿದ ವಿಮಾನದ ಸಿಬ್ಬಂದಿಗೆ, ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಿದ್ದರೆ ರಾಜ್ಯಪಾಲ ಗೆಹ್ಲೋತ್ ಜನಸಾಮಾನ್ಯರ ದೃಷ್ಟಿಯಲ್ಲಿ ಹೀರೋ ಆಗಿರುತ್ತಿದ್ದರು.
ರಾಷ್ಟ್ರಪತಿ ಮತ್ತು ರಾಜ್ಯಪಾಲರುಗಳಿಗೆ ಇರುವ ವಿಶೇಷ ಸವಲತ್ತುಗಳು ಪ್ರಜಾಪ್ರಭುತ್ವಕ್ಕೆ ಪೂರಕವಾದುದಲ್ಲ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗಾಗಿಯೇ, ರಾಜಪ್ರಭುತ್ವವನ್ನು ಪ್ರತಿನಿಧಿಸುವಂತಹ ಸವಲತ್ತುಗಳನ್ನು ಕಡಿತಗೊಳಿಸಬೇಕು ಎಂಬ ಪ್ರತಿಪಾದನೆ ಬಹಳ ಕಾಲದಿಂದಲೂ ಚಾಲ್ತಿಯಲ್ಲಿದೆ. ಇಂತಹ ಹೊತ್ತಿನಲ್ಲಿ, ಶಿಷ್ಟಾಚಾರದ ಹೆಸರಿನಲ್ಲಿ ನಡೆಸುವ ಇಂತಹ ಅಧಿಕಾರ ಚಲಾವಣೆಗಳು ತಮ್ಮ ವ್ಯಕ್ತಿತ್ವಕ್ಕೂ, ಸಂವಿಧಾನದ ಘನತೆಗೂ ಚ್ಯುತಿ ತರುತ್ತವೆ.
ಬರಹಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ