ಮಹಿಳಾ ಮೀಸಲಾತಿಯ ಸಾಮಾಜಿಕ ನ್ಯಾಯ ಹಾಗೂ ಕ್ಷೇತ್ರ ಪುನರ್ ವಿಂಗಡಣೆಯ ರಾಜಕೀಯ ಅನ್ಯಾಯ- ಎರಡನ್ನೂ ದೇವೇಗೌಡರು ಖುದ್ದಾಗಿ ಕಂಡವರು. ಇದನ್ನೇ ಮೋದಿ ಸರ್ಕಾರ ಮಾಡಲು ಹೊರಟಾಗ- ಪಕ್ಷವನ್ನು ಮೀರಿದ ಹಿರಿತನದಿಂದ ಬುದ್ಧಿ ಹೇಳುವ ಸ್ಥಾನದಲ್ಲಿರುವ ಗೌಡರು, ಇದು ತಪ್ಪು ಎಂದು ಹೇಳುತ್ತಿಲ್ಲವೇಕೆ?
ಕೇಂದ್ರ ಸರ್ಕಾರವು ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮತಕ್ಕೆ ಹಾಕಿದ ಸಂವಿಧಾನದ(131ನೇ) ತಿದ್ದುಪಡಿ ಮಸೂದೆ, ಕ್ಷೇತ್ರ ಮರುವಿಂಗಡಣೆ(ಡಿಲಿಮಿಟೇಶನ್) ಮಸೂದೆ ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳ(ತಿದ್ದುಪಡಿ) ಮಸೂದೆ-2026 ಎಂಬ ಮೂರು ಮಸೂದೆಗಳಿಗೆ ಸೋಲು ಆಯಿತು.
ಮೂರು ಮಸೂದೆಗಳಿಗೆ ಸೋಲು ಆಗುತ್ತದೆ ಎಂದು ಮೋದಿ ಮತ್ತು ಅಮಿತ್ ಶಾಗಳಿಗೆ ಗೊತ್ತಿತ್ತು. ಗೊತ್ತಿದ್ದೇ ಕ್ಷೇತ್ರ ಪುನರ್ ವಿಂಗಡಣೆ ಜೊತೆಗೆ ಮಹಿಳಾ ಮೀಸಲಾತಿಯನ್ನು ಜೋಡಿಸಿದ್ದರು. ಸೋಲಾಗುತ್ತಿದ್ದಂತೆ, ಮಹಿಳೆಯರನ್ನೇ ಮುಂದಿಟ್ಟು ‘ವಿರೋಧ ಪಕ್ಷದವರು ಮಹಿಳಾ ವಿರೋಧಿಗಳು’ ಎಂದು ಬಾಣ ಬಿಡತೊಡಗಿದರು. ಈಗ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಲಾಭ ಪಡೆಯಲು ಹವಣಿಸುತ್ತಿದ್ದಾರೆ.
ಮಹಿಳಾ ಮೀಸಲಾತಿ ಮಸೂದೆಯನ್ನು ನಾವು ಬೆಂಬಲಿಸಿದ್ದೇವೆ. ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ 2023ರಲ್ಲಿಯೇ ಅಂಗೀಕಾರವಾಗಿದೆ. ಆದರೆ 40 ತಿಂಗಳು ಕಳೆದರೂ ಮೋದಿ ಮತ್ತು ಶಾ ಸರ್ಕಾರ ಜಾರಿ ಮಾಡಲಿಲ್ಲ. ಈಗ ನಾವು ವಿರೋಧಿಸುತ್ತಿರುವುದು ಕ್ಷೇತ್ರ ಮರುವಿಂಗಡಣೆ ಮತ್ತು ಸಂವಿಧಾನ ತಿದ್ದುಪತಿ ಮಸೂದೆಗೆ ಎಂದು ವಿರೋಧ ಪಕ್ಷದ ನಾಯಕರು ಸ್ಪಷ್ಪಪಡಿಸಿದ್ದಾರೆ. ಜೊತೆಗೆ ಮೋಶಾರ ಬಣ್ಣವಿಲ್ಲದ ಬೀದಿ ನಾಟಕವನ್ನು ಬಯಲು ಮಾಡುತ್ತಿದ್ದಾರೆ.
ಇದನ್ನು ಓದಿದ್ದೀರಾ?: ದೇಶಕ್ಕೆ ದೇಶವೇ ಎದ್ದು ನಿಂತು ಮೋದಿಯವರಿಗೆ ಚಪ್ಪಾಳೆ ತಟ್ಟುವಂತಾಗಲಿ!
ಈ ಸಂದರ್ಭದಲ್ಲಿ ಕರ್ನಾಟಕದ ಜನತೆ ಕುತೂಹಲದಿಂದ ಗಮನಿಸುತ್ತಿರುವುದು, ರಾಜ್ಯಸಭೆಯಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಇಬ್ಬರು ಹಿರಿಯ ರಾಜಕಾರಣಿಗಳ ನಡೆ ಮತ್ತು ನುಡಿಗಳನ್ನು. ಒಬ್ಬರು 93ರ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ; ಮತ್ತೊಬ್ಬರು 83ರ ಮಲ್ಲಿಕಾರ್ಜುನ ಖರ್ಗೆ. ಈ ಇಬ್ಬರೂ ಸ್ವಾತಂತ್ರ್ಯಾನಂತರದ ದೇಶದ ರಾಜಕಾರಣವನ್ನು ಬಹಳ ಹತ್ತಿರದಿಂದ ಕಂಡವರು. ಅಧಿಕಾರದ ಸ್ಥಾನಗಳನ್ನು ಏರಿದವರು. ಕಾಯ್ದೆ-ಕಾನೂನುಗಳನ್ನು ರೂಪಿಸಿದವರು. ದೇಶದ ರಾಜಕೀಯ, ಸಾಮಾಜಿಕ ಬದಲಾವಣೆಗೆ ಕಾರಣರಾದವರು.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆಯವರು ಈಗಾಗಲೇ ಮಹಿಳಾ ಮೀಸಲಾತಿಯ ಪರವಿದ್ದು, ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣ ಭಾರತಕ್ಕೆ ಆಗುವ ರಾಜಕೀಯ ಅನ್ಯಾಯ ಕುರಿತು ಮಾತನಾಡುತ್ತಿದ್ದಾರೆ. ಆದರೆ ಮಾಜಿ ಪ್ರಧಾನಿ ದೇವೇಗೌಡರು ಮೌನವಾಗಿದ್ದಾರೆ.
ಆಶ್ಚರ್ಯವೆಂದರೆ, 1996ರಲ್ಲಿ ಎಚ್.ಡಿ. ದೇವೇಗೌಡರು ಪ್ರಧಾನಮಂತ್ರಿಗಳಾಗಿದ್ದಾಗ ಮಹಿಳಾ ಮೀಸಲಾತಿ ಕಾಯ್ದೆಯನ್ನು ಜಾರಿಗೆ ತರುವ ಧೈರ್ಯ ಮಾಡಿದ್ದರು. ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡುವ ಪ್ರಸ್ತಾಪ ರಾಜಕೀಯವಾಗಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ಹಲವು ಪಕ್ಷಗಳು ಬೆಂಬಲ ವ್ಯಕ್ತಪಡಿಸಿದರೂ; ಜಾತಿ, ವರ್ಗ ಮತ್ತು ಪ್ರಾದೇಶಿಕ ಸಮತೋಲನದ ಪ್ರಶ್ನೆಗಳು ಈ ಕಾಯ್ದೆ ಜಾರಿಗೆ ತೊಡಕಾಗಿ ಪರಿಣಮಿಸಿತ್ತು.
ದೇವೇಗೌಡರಂತಹ ಹಿರಿಯ ನಾಯಕರು ರಾಜಕೀಯ ಕ್ಷೇತ್ರದಲ್ಲಿ ಮಹಿಳಾ ಪ್ರತಿನಿಧಿತ್ವವನ್ನು ಹೆಚ್ಚಿಸುವ ಅಗತ್ಯವನ್ನು ಅರಿತವರಾಗಿದ್ದರು. ಅವರ ಒಲವು ಮತ್ತು ನಿಲುವು ಸ್ಪಷ್ಟವಾಗಿತ್ತು. ಅದು ದೇಶದ ರಾಜಕೀಯ ಇತಿಹಾಸದ ಪುಟಗಳಲ್ಲಿ ದಾಖಲಾಗಿತ್ತು. ಆದರೆ, ಹಿಂದುಳಿದ ವರ್ಗಗಳ ಮಹಿಳೆಯರಿಗೆ ಪ್ರತ್ಯೇಕ ಅವಕಾಶ ನೀಡಬೇಕೆಂಬ ಅಭಿಪ್ರಾಯ ರಾಜಕೀಯ ವಲಯದಲ್ಲಿ ಬಲವಾಗಿತ್ತು. ಈ ಸಂಕೀರ್ಣ ಸಮೀಕರಣಗಳ ನಡುವೆ, ಮಹಿಳಾ ಮೀಸಲಾತಿ ಪ್ರಶ್ನೆ ಕೇವಲ ಲಿಂಗ ನ್ಯಾಯದ ವಿಷಯವಲ್ಲ, ಸಾಮಾಜಿಕ ನ್ಯಾಯದ ವಿಶಾಲ ದೃಷ್ಟಿಕೋನದಲ್ಲಿ ನೋಡುವ ಅಗತ್ಯವಿದೆ ಎನ್ನುವುದನ್ನು ಸಾರಿತ್ತು. ಆ ಕಾರಣಕ್ಕೆ ಮಹಿಳಾ ಮೀಸಲಾತಿಗೆ ಸೋಲಾಗಿತ್ತು. ಆದರೆ, ಗೌಡರ ರಾಜಕೀಯ ನಡೆ ಪ್ರಶಂಸೆಗೆ ಪಾತ್ರವಾಗಿತ್ತು.
2004ರಲ್ಲಿ, ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ, ಧರಂಸಿಂಗ್ ಮುಖ್ಯಮಂತ್ರಿಗಳಾಗಿದ್ದಾಗ, ವಿಧಾನಸಭಾ ಕ್ಷೇತ್ರಗಳ ಪುನರ್ವಿಂಗಡಣೆ ನಡೆದಿತ್ತು. ಕ್ಷೇತ್ರ ಪುನರ್ವಿಂಗಡಣೆ ಎಂಬುದು ಡಿಲಿಮಿಟೇಷನ್ ಕಮಿಷನ್ ಆಫ್ ಇಂಡಿಯಾದ ಮೂಲಕ ನಡೆಯುವ ಸಂವಿಧಾನಾತ್ಮಕ ಪ್ರಕ್ರಿಯೆಯಾದರೂ, ಅದರಲ್ಲಿ ಮಾಜಿ ಪ್ರಧಾನಿ ದೇವೇಗೌಡರ ‘ಕೈವಾಡ’ವಿತ್ತು ಎಂಬ ಸುದ್ದಿ ಇತ್ತು. ಕ್ಷೇತ್ರ ಪುನರ್ವಿಂಗಡಣೆಯ ನಂತರ ನಡೆದ 2008ರ ವಿಧಾನಸಭಾ ಚುನಾವಣೆಯಲ್ಲಿ ಅದು ನಿಚ್ಚಳವಾಗಿ ಕಂಡಿತ್ತು.
ಆ ಸಂದರ್ಭದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳನ್ನು ಗಮನಿಸುವುದಾದರೆ, ಜೆಡಿಎಸ್ನಿಂದ ಉಪಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರನ್ನು 2005ರಲ್ಲಿ ಪಕ್ಷದಿಂದ ಹೊರಹಾಕಲಾಗಿತ್ತು. ಅವರು ಕಾಂಗ್ರೆಸ್ ಪಕ್ಷ ಸೇರಿದ್ದರು. ಗೌಡರು ಆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಬದಲಿಗೆ ಪುತ್ರ ಎಚ್.ಡಿ. ರೇವಣ್ಣ ಪ್ರತಿನಿಧಿಸುತ್ತಿದ್ದ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರವನ್ನು ಭದ್ರ ಮಾಡಿಕೊಳ್ಳುವತ್ತ ಯೋಚಿಸಿದರು. ಕ್ಷೇತ್ರ ಪುನರ್ವಿಂಗಡಣೆಯಲ್ಲಿ ಆ ಕ್ಷೇತ್ರದ ವ್ಯಾಪ್ತಿಗೊಳಪಡುವ ಪಟ್ಟಣದಿಂದ 12 ಕಿ.ಮೀ. ದೂರದಲ್ಲಿರುವ ಹಳ್ಳಿಮೈಸೂರು ಹೋಬಳಿಯನ್ನು ಕಿತ್ತು ಪಕ್ಕದ ಅರಕಲಗೂಡು ವಿಧಾನಸಭಾ ಕ್ಷೇತ್ರಕ್ಕೆ ಸೇರಿಸಿದ್ದರು. ಹೊಳೆನರಸೀಪುರದಿಂದ 40 ಕಿ.ಮೀ. ದೂರದಲ್ಲಿರುವ ದುದ್ದ ಹೋಬಳಿಯನ್ನು ಹೊಳೆನರಸೀಪುರಕ್ಕೆ ಜೋಡಿಸಿದ್ದರು.
ಏಕೆಂದರೆ, ಹಳ್ಳಿಮೈಸೂರು ಹೋಬಳಿಯಲ್ಲಿ ಕುರುಬ ಮತದಾರರ ಸಂಖ್ಯೆ ಹೆಚ್ಚಾಗಿತ್ತು. ಸಿದ್ದರಾಮಯ್ಯನವರ ಕಾರಣಕ್ಕೆ ಪುತ್ರನ ಗೆಲುವಿಗೆ ತೊಡಕುಂಟಾಗಬಹುದೆಂದು ಭಾವಿಸಿದ ಗೌಡರು, ಅದನ್ನು ಅರಕಲಗೂಡಿಗೆ ಸೇರಿಸಿದ್ದರು. ಒಕ್ಕಲಿಗರೇ ಹೆಚ್ಚಾಗಿದ್ದ ದುದ್ದ ಹೋಬಳಿಯನ್ನು ಹೊಳೆನರಸೀಪುರಕ್ಕೆ ಜೋಡಿಸಿದ್ದರು. ಅಷ್ಟೇ ಅಲ್ಲ, ಹಾಸನ ಜಿಲ್ಲೆಯನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಬೇಕೆಂಬ ದುರಾಸೆಯಿಂದ, ಕಾಂಗ್ರೆಸ್ನಿಂದ ಗೆದ್ದಿದ್ದ, ಸಚಿವರಾಗಿ ಬೆಳೆಯುತ್ತಿದ್ದ ಗಂಡಸಿ ಶಿವರಾಂ ಪ್ರತಿನಿಧಿಸುತ್ತಿದ್ದ ಗಂಡಸಿ ಕ್ಷೇತ್ರವನ್ನೇ ಇಲ್ಲವಾಗಿಸಿ, ಅದನ್ನು ಅರಸೀಕೆರೆ, ಹಾಸನ ಮತ್ತು ಹೊಳೆನರಸೀಪುರಕ್ಕೆ ಹಂಚಿದ್ದರು. ಅದೇ ರೀತಿ ಬೆಂಗಳೂರು ಗ್ರಾಮಾಂತರದಿಂದ ಗೆಲ್ಲುತ್ತಿದ್ದ ಮತ್ತೊಬ್ಬ ಒಕ್ಕಲಿಗ ನಾಯಕ ಡಿ.ಕೆ. ಶಿವಕುಮಾರ್ ಅವರ ಸಾತನೂರು ಕ್ಷೇತ್ರವನ್ನು ಇಲ್ಲದಂತೆ ಮಾಡಿದ್ದರು. ಕ್ಷೇತ್ರವಿಲ್ಲದೆ ಅತಂತ್ರರಾದ ಗಂಡಸಿ ಶಿವರಾಂ- 2008ರಿಂದ 2023ರವರೆಗೆ ನಾಲ್ಕು ಚುನಾವಣೆಗಳು ಬಂದುಹೋದರೂ, ತಮ್ಮದೇ ಆದ ಕ್ಷೇತ್ರವಿಲ್ಲದೆ ಗೆಲ್ಲಲಾಗಿಲ್ಲ.
ಇದು ಅಧಿಕಾರದಲ್ಲಿರುವ ಪಕ್ಷಗಳು ಮತ್ತು ನಾಯಕರು ಕ್ಷೇತ್ರ ಪುನರ್ವಿಂಗಡಣೆಯನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಬಗೆಗಿನ ಒಂದೆರಡು ಉದಾಹರಣೆಯಷ್ಟೇ.
ಇದನ್ನು ಓದಿದ್ದೀರಾ?: ನಾರಿ ಶಕ್ತಿ Vs ನೇತಾರ ಶಕ್ತಿ: ಮಹಿಳಾ ಮೀಸಲಾತಿ ಮಸೂದೆ ರಾಜಕೀಯದಾಟ
ಅಂದರೆ ಮಹಿಳಾ ಮೀಸಲಾತಿಯ ಸಾಮಾಜಿಕ ನ್ಯಾಯ ಹಾಗೂ ಕ್ಷೇತ್ರ ಪುನರ್ ವಿಂಗಡಣೆಯಿಂದ ದಕ್ಷಿಣ ಭಾರತದ ರಾಜ್ಯಗಳ ಸ್ಥಾನಗಳನ್ನು ಕಡಿತಗೊಳಿಸುವ ರಾಜಕೀಯ ಅನ್ಯಾಯ- ಎರಡನ್ನೂ ದೇವೇಗೌಡರು ಖುದ್ದಾಗಿ ಕಂಡವರು. ಇದನ್ನೇ ಮೋದಿ ಸರ್ಕಾರ ಮಾಡಲು ಹೊರಟಾಗ- ಪಕ್ಷವನ್ನು ಮೀರಿದ ಹಿರಿತನದಿಂದ ಬುದ್ಧಿ ಹೇಳುವ ಸ್ಥಾನದಲ್ಲಿರುವ ಗೌಡರು, ಇದು ತಪ್ಪು ಎಂದು ಹೇಳುತ್ತಿಲ್ಲವೇಕೆ? ಮಹಿಳಾ ಮೀಸಲಾತಿ ಎಂಬ ಬಿಜೆಪಿಯ ನಾಟಕವನ್ನು ಹಾಗೂ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣ ಭಾರತಕ್ಕೆ ಆಗುವ ರಾಜಕೀಯ ಅನ್ಯಾಯವನ್ನು ಕಂಡೂ ಕಾಣದಂತೆ ಇರುವುದೇಕೆ?
ಹರದನಹಳ್ಳಿಯ ಬಡ ರೈತನ ಮಗ ಎಚ್.ಡಿ. ದೇವೇಗೌಡ, ದೇಶದ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದವರು. ಸಾಮಾನ್ಯ ಪ್ರಜೆ ಹಳ್ಳಿಯಿಂದ ದಿಲ್ಲಿಗೆ ಹೋಗಬಹುದು ಎಂಬ ಪ್ರಜಾಪ್ರಭುತ್ವದ ಸೊಗಸನ್ನು ಸಾರಿದವರು. ಈಗ 93ನೇ ಇಳಿವಯಸ್ಸಿನಲ್ಲಿ ತಮ್ಮನ್ನು ಪೊರೆದ, ಪೋಷಿಸಿದ ಜನರ ಜೊತೆ ನಿಂತಿದ್ದರೆ, ದೊಡ್ಡಗೌಡರಾಗುತ್ತಿದ್ದರಲ್ಲವೇ? ಪಕ್ಷ, ಜಾತಿ, ಪಂಥಗಳನ್ನು ಮೀರಿದ ಮುತ್ಸದ್ದಿತನ ತೋರಿದ್ದರೆ, ದಕ್ಷಿಣ ಭಾರತದ ದನಿಯಾಗಿ ದಾಖಲಾಗುತ್ತಿದ್ದರಲ್ಲವೇ?





