ಒಂದು ಚಿತ್ರಕ್ಕಿರುವ ಶಕ್ತಿಗೆ ಸಾವಿರಾರು ಪದಗಳು ಸಾಟಿಯಿಲ್ಲ ಎಂಬ ಮಾತಿದೆ. ಚಿತ್ರಕ್ಕೆ ಮಹಾ ಕಾದಂಬರಿಯೂ ಸೆರೆ ಹಿಡಿಯಲಾಗದ್ದನ್ನೂ ಸೆರೆ ಹಿಡಿಯುವ ಸಾಮರ್ಥ್ಯವಿರುತ್ತದೆ. ಮುಂದೊಂದು ದಿನ ಜಗತ್ತು ಇರಾನ್, ಇಸ್ರೇಲ್ ಮತ್ತು ಅಮೆರಿಕದ ಯುದ್ಧದ ಪರಿಣಾಮವೇನು? ಎಂದು ಯಾರಾದರೂ ಕೆದಕಿದರೆ ದಕ್ಷಿಣ ಇರಾನ್ ಪ್ರಾಂತ್ಯದ ಮಿನಬ್ ಪಟ್ಟಣದಲ್ಲಿ ಸಾಲಾಗಿ ತೋಡಲ್ಪಟ್ಟ ಪುಟ್ಟ ಗೋರಿಗಳ ಚಿತ್ರವನ್ನೊಮ್ಮೆ ತೋರಿಸಿದರೆ ಸಾಕು ಅನ್ನಿಸುತ್ತದೆ.
ಮನಸ್ಸಿನ ವೇಗವೆಷ್ಟು? ನೆನಪಿನ ಆಳ, ವಿಸ್ತಾರವೆಷ್ಟು? ನಿಖರ ಉತ್ತರ ಸಿಗಲಾರದು. ನಾನು ನಿಮಗೆ ಹೇಳಬಹುದು “ಒಂದು ಬಿಳಿಯ ಆನೆಯನ್ನು ಕಲ್ಪಿಸಿಕೊಳ್ಳಬೇಡಿ” ಎಂದು, ಆದರೆ ಮನಸ್ಸು ಈಗಾಗಲೇ ನಿಮಗೆ ಬಿಳಿಯ ಆನೆಯನ್ನು ತೋರಿಸಿಬಿಟ್ಟಿರುತ್ತದೆ! ಮೊದಲ ತರಗತಿಯ ನಿಮ್ಮ ನೆಚ್ಚಿನ ಟೀಚರ್ ಎಂದೊಡನೆ ನಿಮ್ಮ ನೆನಪು ಅವರನ್ನು ನಿಮ್ಮ ಕಣ್ಮುಂದೆ ತಂದು ನಿಲ್ಲಿಸಿರುತ್ತದೆ. ಮೆದುಳಿನ ಡೇಟಾ ರಿಟ್ರೀವಲ್ ಸ್ಪೀಡ್ ವಿಸ್ಮಯವೇ ಸರಿ. ಆದರೆ ನಮ್ಮ ನೆನಪಿನ ಕುರಿತಾದ ಮತ್ತೊಂದು ವಿಸ್ಮಯವೂ ಇದೆ. ಉದ್ದೇಶಪೂರ್ವಕವಾಗಿ ನಾವು ಕೆಲ ಘಟನೆಗಳನ್ನು, ವಿಷಯವನ್ನು ಮರೆಯುತ್ತೇವೆ ಅಥವಾ ಮರೆತವರಂತೆ ನಟಿಸುತ್ತೇವೆ. WE deliberately ignore our TROUBLING THOUGHTS. ಇದೊಂದು ಸರ್ವೈವಲ್ ಸ್ಟ್ರಾಟಜಿ ಕೂಡ ಇರಬಹುದು, ಆದರೆ ಎಲ್ಲವನ್ನೂ ಮರೆಯುವುದು ಅಪಾಯಕಾರಿ. ಇತಿಹಾಸದ ಕರಾಳ ಪುಟಗಳನ್ನು ಮರೆಯುವ ಸಮೂಹ ಪದೇ ಪದೇ ಮಾಡಿದ ತಪ್ಪನ್ನೇ ಮಾಡುತ್ತಿರುತ್ತದೆ. ಐತಿಹಾಸಿಕ ದಾಖಲೆಗಳು, ಕಾದಂಬರಿಗಳು, ಕಥೆಗಳು ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಕೆಲ ಚಿತ್ರಗಳು- ಮರೆವು ನಮ್ಮನ್ನು ಆವರಿಸದ ಹಾಗೆ ನೋಡಿಕೊಳ್ಳುತ್ತವೆ.
ಒಂದು ಚಿತ್ರಕ್ಕಿರುವ ಶಕ್ತಿಗೆ ಸಾವಿರಾರು ಪದಗಳು ಸಾಟಿಯಿಲ್ಲ ಎಂಬ ಮಾತಿದೆ. ಚಿತ್ರಕ್ಕೆ ಮಹಾ ಕಾದಂಬರಿಯೂ ಸೆರೆ ಹಿಡಿಯಲಾಗದ್ದನ್ನೂ ಸೆರೆ ಹಿಡಿಯುವ ಸಾಮರ್ಥ್ಯವಿರುತ್ತದೆ. ಮುಂದೊಂದು ದಿನ ಜಗತ್ತು ಇರಾನ್, ಇಸ್ರೇಲ್ ಮತ್ತು ಅಮೆರಿಕದ ಯುದ್ಧದ ಪರಿಣಾಮವೇನು? ಎಕನಾಮಿಕ್ಸ್, ಟ್ರೇಡ್ ಮೀರಿ What was the human cost of war ಅಂತ ಯಾರಾದರೂ ಕೆದಕಿದರೆ ದಕ್ಷಿಣ ಇರಾನ್ ಪ್ರಾಂತ್ಯದ ಮಿನಬ್ ಪಟ್ಟಣದಲ್ಲಿ ಸಾಲಾಗಿ ತೋಡಲ್ಪಟ್ಟ ಪುಟ್ಟ ಗೋರಿಗಳ ಚಿತ್ರವನ್ನೊಮ್ಮೆ ತೋರಿಸಿದರೆ ಸಾಕು ಅನ್ನಿಸುತ್ತದೆ.
ಯುದ್ಧದ ಆರಂಭಿಕ ದಿನಗಳಲ್ಲಿ ಮಿನಬ್ ಪಟ್ಟಣದ ಶಾಲೆಯ ಮೇಲೆ ಬಾಂಬ್ ದಾಳಿ ನಡೆದಿತ್ತು, ಅದರಲ್ಲಿ 165 ಮಕ್ಕಳು ಪ್ರಾಣ ಕಳೆದುಕೊಂಡಿದ್ದರು. ಇರಾನ್ ಅಮೆರಿಕವನ್ನು ಈ ಕುಕೃತ್ಯಕ್ಕೆ ದೂರಿದರೆ; ಅಮೆರಿಕ ಇರಾನನ್ನು ಹೊಣೆಯಾಗಿಸಿತ್ತು. ಇದು ಇರಾನ್ ಎಸಗಿದ ಕೃತ್ಯ. ಅವರು ಬಳಸುವ ಆಯುಧಗಳಿಗೆ ನಿಖರತೆಯಿಲ್ಲ. ಗುರಿಯಿಲ್ಲದೆ ಸಾಗುವ ಅವರ ಕ್ಷಿಪಣಿಗಳು ಎಲ್ಲೆಂದರಲ್ಲಿ ಸ್ಫೋಟಿಸುತ್ತವೆ ಎಂದು ಹೇಳಿ ಡೊನಾಲ್ಡ್ ಟ್ರಂಪ್ ಕೈತೊಳೆದುಕೊಂಡಿದ್ದರು.
ಈ ಹಿರಿಯರ ಆರೋಪ ಪ್ರತ್ಯಾರೋಪ ಬದಿಗಿಡೋಣ. ಪುಟ್ಟ ಗೋರಿಗಳ ಚಿತ್ರ ನೋಡಿದ ಕ್ಷಣ ನನಗೆ ನೆನಪಾಗಿದ್ದು ಮಜೀದ್ ಮಜೀದೀ ನಿರ್ದೇಶನದ ‘Children of Heaven’. ‘Children of Heaven’ ಚಲನಚಿತ್ರದ ಅಲಿ ಮತ್ತವನ ತಂಗಿ ಜಹ್ರಾಳನ್ನು ಯಾರು ತಾನೇ ಮರೆಯಲು ಸಾಧ್ಯ? ಮಿನಬ್ ಪಟ್ಟಣದ ಶಾಲೆಯಲ್ಲಿ ಜಹ್ರಾ ಇದ್ದಿರಬಹುದೇ ಎಂಬ ಆತಂಕ ಕಾಡಿತು. ಒಂದು ಕ್ಷಣ ಕಣ್ಮುಂದೆ ‘ದ ರನ್ನರ್’, ‘ದ ವೈಟ್ ಬಲೂನ್’, ‘ದ ಆಪಲ್’ ಚಿತ್ರಗಳ ಪುಟ್ಟಪೋರರು ಪ್ರತ್ಯಕ್ಷರಾದರು. ‘Color of paradise’ ಚಿತ್ರದ ದೃಷ್ಟಿ ಇಲ್ಲದ ಪೋರನೊಬ್ಬ ಮಿನಬ್ ಪಟ್ಟಣದ ಗೋರಿಯಲ್ಲಿ ಮಲಗಿರುವನೇ ಎಂಬ ಆಲೋಚನೆಯೇ ನನ್ನನ್ನು ವಿಚಲಿತಗೊಳಿಸಿತು. (ಇಸ್ಲಾಮಿಕ್ ಕ್ರಾಂತಿಯ ನಂತರದ ದಿನಗಳಲ್ಲಿ ಇರಾನಿನ ಪ್ರಖ್ಯಾತ ಚಲನಚಿತ್ರ ನಿರ್ದೇಶಕರು ತಮ್ಮ ಚಿತ್ರಗಳಲ್ಲಿ ಮಕ್ಕಳನ್ನು ಮುಖ್ಯ ಪಾತ್ರಧಾರಿಗಳನ್ನಾಗಿ ಕಾಸ್ಟ್ ಮಾಡಿಕೊಂಡರು. ಇರಾನಿನ censorship bypass ಮಾಡುವ ತಂತ್ರ ಅದಾಗಿತ್ತು ಅನಿಸುತ್ತದೆ. ಸಿದ್ಧಾಂತ, ಮತಾಂಧತೆಗಳಲ್ಲಿ ಮುಳುಗಿದ ವಯಸ್ಕರ ಜಗತ್ತಿಗೆ ಎದುರಾಗಿ ಮುಗ್ಧ ಮಕ್ಕಳ ಸರಳ ಸಹಜ ಭಾವನಾತ್ಮಕ ಜಗತ್ತನ್ನು ಇರಾನಿನ ನಿರ್ದೇಶಕರು ಜನರ ಮುಂದೆ ಇಟ್ಟರು. ಪ್ರತಿರೋಧ, ಬಂಡಾಯದ ಮಾರ್ಗವೂ ಇದಾಗಿತ್ತು. ಮಕ್ಕಳು ಅನುಭವಿಸುತ್ತಿರುವ ಏಲಿಯನೇಷನ್, anxiety ಮತ್ತು ಇರಾನಿ ಸಮಾಜದಲ್ಲಿದ್ದ ಅಸಮಾನತೆ, ಬಡತನ, ನಿರುದ್ಯೋಗ ಮತ್ತು ಕಣ್ಗಾವಲ ಕುರಿತು ಜಗತ್ತಿಗೆ ಪರಿಚಯಿಸಿದರು.)
ಇದನ್ನು ಓದಿದ್ದೀರಾ?: ಪ್ರೊ. ಜಾನ್ ಮೀರ್‌ಶೈಮರ್: ಇರಾನ್ ಮೇಲೆ ಇಸ್ರೇಲ್ ಅಣು ದಾಳಿ ನಡೆಸಿದರೆ ಅಚ್ಚರಿ ಪಡಬೇಕಿಲ್ಲ!
1972ರ ವಿಯೆಟ್ನಾಂ ಯುದ್ಧದ ಸಮಯದಲ್ಲಿ ಅಮೆರಿಕ ನಾಪಾಂ ಎಂಬ ಬಾಂಬ್ ಬಳಸಿತು. ನಾಪಾಂ ಬಹಳ ದಹನಕಾರಿ ಗ್ಯಾಸೋಲಿನ್ ಲೋಳೆ. ವಿಯೆಟ್ನಾಂ ದಟ್ಟ ಕಾಡನ್ನು, ಗುಡಿಸಲುಗಳನ್ನು ಸುಡಲು ಅಮೆರಿಕ ನಾಪಾಂ ಬಳಸಿತು. ಮುಂದುವರೆದು ನಾಪಾಂ ಅನ್ನು ಹಳ್ಳಿ, ಪಟ್ಟಣಗಳಿಗೆ ಸಿಂಪಡಿಸಲಾಯಿತು. ಆ ದಿನಗಳಲ್ಲಿ ಅಸೋಸಿಯೇಟೆಡ್ ಪ್ರೆಸ್ ಫೋಟೋಗ್ರಾಫರ್ ನಿಕ್ ಉತ್ ಕ್ಲಿಕ್ಕಿಸಿದ ಚಿತ್ರ ‘ನಾಪಾಂ ಗರ್ಲ್’ ಅಂತಲೇ ಚಿರಪರಿಚಿತವಾಯಿತು. ವಿಯೆಟ್ನಾಮಿನ ಹಳ್ಳಿಯೊಂದರ ಮೇಲೆ ಅಮೆರಿಕನ್ ಪಡೆ ನಾಪಾಂ ಸುರಿಸಿದೆ. ಇಡೀ ಹಳ್ಳಿ ಧಗ ಧಗ ಉರಿಯುತ್ತಿದೆ. ನಗ್ನಳಾದ ಅರೆಬರೆ ಸುಟ್ಟ ದೇಹದ ಒಂಬತ್ತು ವರುಷದ ಕಿಮ್ ಪಿಕ್ ತನ್ನ ಕೈಗಳನ್ನು ಅಗಲವಾಗಿ ಚಾಚಿ ಅಳುತ್ತಾ ಓಡಿಬರುತ್ತಿರುವ ದೃಶ್ಯವನ್ನು ನಿಕ್ ಸೆರೆಹಿಡಿದಿದ್ದ. ವಿಯೆಟ್ನಾಂನಲ್ಲಿ ಅಮೆರಿಕ ಎಸಗುತ್ತಿದ್ದ ಅಮಾನವೀಯ ಕೃತ್ಯಗಳನ್ನು ಕ್ಯಾಮೆರಾ ಬಂಧಿಸಿತ್ತು. ಪ್ರಖ್ಯಾತ ಲೇಖಕಿ ಸೂಸನ್ ಸೊಂಟಾಗ್ ಪ್ರಕಾರ “ಈ ಚಿತ್ರ ಅಮೆರಿಕ ವಿಯೆಟ್ನಾಂ ಮೇಲೆ ಸಾರಿದ್ದ ಅನಾವಶ್ಯಕ ಯುದ್ಧದ ಕುರಿತು ವಾಕರಿಕೆ ಮೂಡಿಸಿತು. ಮುಂದೆ ಭಾರಿ ಪ್ರತಿಭಟನೆಗಳಿಗೆ ಕಾರಣವಾಯಿತು”.

1936, ಆರ್ಥಿಕ ಮುಗ್ಗಟ್ಟು ಉಲ್ಬಣವಾಗಿತ್ತು. ಡೊರೊಥಿಯಾ ಲ್ಯಾಂಜ್ ಕ್ಲಿಕ್ಕಿಸಿದ ‘ಮೈಗ್ರೆಂಟ್ ಮದರ್’ ಎರಡನೇ ಮಹಾಯುದ್ಧಪೂರ್ವ ದಿನಗಳ, ಬಡತನದ ಭೀಕರತೆ ವಲಸಿಗ ತಾಯಿಯ ಮುಖದಲ್ಲಿ ಕಂಡಿತ್ತು. ಸುಕ್ಕುಗಟ್ಟಿದ ಹಣೆ, ದುಃಖ ಮಡುಗಟ್ಟಿದರು ಸೋಲೊಪ್ಪದ ಕಂಗಳು, ಅರೆಪ್ರಜ್ಞಾವಸ್ಥೆಯಲ್ಲಿರುವ ಆಕೆಯ ಹಸಿದ ಮಕ್ಕಳು… ಎಷ್ಟೆಲ್ಲಾ ಕಥೆ ಹೇಳಿತ್ತು. ಬಹುಶಃ ನಿರಂಕುಶಮತಿಗಳು ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದ್ದರೆ ಮಹಾಯುದ್ಧವನ್ನೇ ತಡೆಯಬಹುದಿತ್ತೇನೋ?
1993, ಸುಡಾನ್. ಹಲವು ವರುಷಗಳ ಆಂತರಿಕ ಕಲಹ, ಅಸಮರ್ಥ ಆಡಳಿತ ವ್ಯವಸ್ಥೆ ಬರಗಾಲವನ್ನು ಸೃಷ್ಟಿಸಿದೆ. ಹಸಿವಿನಿಂದ ಜನ ಬೀದಿ ಬೀದಿಯಲ್ಲಿ ಸಾಯುತ್ತಿದ್ದಾರೆ. ದಕ್ಷಿಣ ಆಫ್ರಿಕಾದ ಕೆವಿನ್ ಕಾರ್ಟರ್ ತೆಗೆದ ಮನಕಲಕುವ ಚಿತ್ರದಲ್ಲಿ ಸಹಾಯ ಕೇಂದ್ರಕ್ಕೆ ಹೋಗಲಾಗದ ಮಗುವೊಂದು ಮರುಭೂಮಿಯಲ್ಲಿ ಪ್ರಾಣಬಿಡುವ ಹಂತದಲ್ಲಿದೆ. ಮಗುವಿನ ಕೊನೆಯುಸಿರಿಗಾಗಿ ರಣಹದ್ದೊಂದು ಪಕ್ಕದಲ್ಲೇ ನಿಂತು ಕಾಯುತ್ತಲಿದೆ. ಹದ್ದಿನ ಹಸಿವು ನೀಗಿಸಲು ಮಗುವಿನ ಪ್ರಾಣ ಹೋಗಬೇಕು!
1985ರ ನ್ಯಾಷನಲ್ ಜಿಯೋಗ್ರಾಫಿಕ್ ಮ್ಯಾಗಜೀನಿನ ಮುಖಪುಟದಲ್ಲಿ ಅಫ್ಘಾನ್ ತರುಣಿಯ ಚಿತ್ರವೊಂದು ಪ್ರಕಟಿತವಾಯಿತು. ಅಫ್ಘಾನ್ ದೇಶ ಶೀತಲ ಸಮರದ ರಣರಂಗವಾಗಿದ್ದು, ಅಫ್ಘಾನ್ ನಿರಾಶ್ರಿತರು ಪಾಕಿಸ್ತಾನದಲ್ಲಿ ಹೆಣಗಾಡಿದ್ದು, ಮುಂದುವರೆದು ಮಹಿಳಾ ಹಕ್ಕುಗಳು ಮುಜಾಹಿದೀನ್, ತಾಲಿಬಾನಿಗಳ ಹಿಡಿತದಲ್ಲಿ ಕಮರಿಹೋಗಿದ್ದನ್ನು ಆ ತರುಣಿಯ ಭಯಭೀತ ಕಣ್ಣುಗಳಲ್ಲಿ ನೋಡಬಹುದಿತ್ತು. ಸ್ಟೀವ್ ಮ್ಯಕ್ಯಾರಿ ಕ್ಲಿಕ್ಕಿಸಿದ ಈ ಚಿತ್ರ ಎರಡು ದಶಕಗಳ ಕರಾಳ ಕಥೆಯನ್ನು ಜನರ ಮುಂದಿಟ್ಟಿತ್ತು.
ಸೆಪ್ಟೆಂಬರ್ 2, 2015. ತುರ್ಕಿಯ ದೇಶದ ಪತ್ರಕರ್ತ ನಿಲುಫರ್ ಡೆಮರ್ ತೆಗೆದ ಚಿತ್ರ ಎಲ್ಲೆಡೆ ವೈರಲ್ ಆಗಿ ಎಲ್ಲರ ಮನ ಕಲುಕಿತು. ಐಸಿಲ್ (ISIL) ಉಗ್ರರ ಉಪಟಳ ಮತ್ತು ಕೊನೆಯಿಲ್ಲದ ಸಿರಿಯಾ ದೇಶದ ಆಂತರಿಕ ಕಲಹ, ಎರಡು ವರುಷದ ಹಸುಳೆ ಅಲನ್ ಕುರ್ಡಿಯ (kurds ಜನಾಂಗಕ್ಕೆ ಸೇರಿದವರು) ಕುಟುಂಬವನ್ನು ಕಂಗಾಲಾಗಿಸಿತ್ತು. ಹೊಸ ಬದುಕು ಹರಸಿ ಮೊದಲು ತುರ್ಕಿಯ ದೇಶಕ್ಕೆ, ನಂತರ ಅಲ್ಲಿಂದ ಯುರೋಪಿಯನ್ ದೇಶದ ಕಡೆ ನೆಮ್ಮದಿಯ ಜೀವನ ಹರಸಿ ಹೊರಟ ಸಿರಿಯನ್ ನಿರಾಶ್ರಿತರ ಹಾಯಿ ದೋಣಿಯೊಂದು ಮುಳುಗಿಹೋಗಿತ್ತು. ಪ್ಲಾಸ್ಟಿಕ್ ದೋಣಿಯಲ್ಲಿ ಸಾಗರ ದಾಟುವ ಸಾಹಸ ಮಾಡಿದ ಕುಟುಂಬದ ಡೆಸ್ಪೆರೇಷನ್ ಹೇಗಿದ್ದಿರಬಹುದು? (ಅಮೆರಿಕನ್ ಕಾರ್ಗೊ ವಿಮಾನದ ಮೇಲೇರಿ ಅಫ್ಘಾನ್ ದೇಶವನ್ನು ತೊರೆಯಬಯಸಿದ ಬಡ ನಾಗರಿಕರ ಡೆಸ್ಪೆರೇಷನ್ ತರ ಇದ್ದಿರಬಹುದು).
ದೋಣಿ ಗುರಿ ಮುಟ್ಟಲಿಲ್ಲ, ಆದರೆ ಅಲೆನ್ ಕುರ್ಡಿ ಮೃತ ದೇಹವನ್ನು ಸಾಗರದ ಅಲೆಗಳು ದಡ ಮುಟ್ಟಿಸಿದ್ದವು. ಕೆಂಪು ಟೀಶರ್ಟ್ ತೊಟ್ಟ ಪುಟ್ಟ ಪಾದರಕ್ಷೆಗಳನ್ನು ಹಾಕಿಕೊಂಡಿದ್ದ ಅಲೆನ್ ಮಕಾಡೆ ಮಲಗಿದ್ದ. ಮಾನವ ಕುಲ ಉತ್ಕಟವಾಗಿ ಅನುಸರಿಸುತ್ತಿರುವ ಅಸಡ್ಡೆ ತಾತ್ಸಾರ ಮನೋಭಾವ, ಸ್ವಾರ್ಥ, ಮಾನವ ವಿರೋಧಿ ಜಾಗತಿಕ ನೀತಿಗಳು, ಹಣ, ಅಧಿಕಾರದಾಸೆ ನಡುವೆ ಅಲೆನ್ ಕುರ್ಡಿಗೆ ಬದುಕುವ ಯಾವ ಹಂಬಲವೂ ಇರಲಿಲ್ಲ ಅನ್ನಿಸುತ್ತದೆ.

ನಾಪಾಂ ಗರ್ಲ್ ಚಿಕಿತ್ಸೆ ಪಡೆದು ಕೆನಡಾದ ಪ್ರಜೆಯಾದಳು, ಶಾಂತಿಯನ್ನು ಪ್ರತಿಪಾದಿಸಿದಳು. ಮೈಗ್ರೆಂಟ್ ಮದರ್ ಕ್ಯಾಲಿಫೋರ್ನಿಯಾದಲ್ಲಿ ನೆಲಸಿ ಹತ್ತು ಮಕ್ಕಳನ್ನು ಸಾಕಿ ಸಲಹಿ ತನ್ನ ಎಂಬತ್ತನೇ ವಯಸ್ಸಿಗೆ ಕಾಲವಾದಳು. ಹಸಿದ ಸುಡಾನ್ ಮಗು ಏನಾಯಿತು ಎಂಬ ಪ್ರಶ್ನೆಗೆ ಉತ್ತರ ಸಿಗದೆ ಕಂಗಾಲಾದ ಫೋಟೋಗ್ರಾಫರ್ ಕೆವಿನ್ ಕಾರ್ಟರ್ ಆತ್ಮಹತ್ಯೆ ಮಾಡಿಕೊಂಡ. ಅಲ್ ಖೈದಾ, ತಾಲಿಬಾನ್ ಆಳ್ವಿಕೆ ಉತ್ತುಂಗದಲ್ಲಿದ್ದಾಗ ಮತ್ತೆ ಅಫ್ಘಾನಿಸ್ತಾನಕ್ಕೆ ಕಾಲಿಟ್ಟ ಸ್ಟೀವ್ ಮ್ಯಕ್ಯಾರಿ ಅಫ್ಘಾನ್ ಮೊನಾಲಿಸಾಳನ್ನು ಬಹಳ ಕಷ್ಟಪಟ್ಟು ಹುಡುಕಿದ. ಅವಳ ಕಣ್ಣುಗಳಲ್ಲಿ ಅದೇ ಭೀತಿಯಿತ್ತು. ಸಾಗರದ ದಂಡೆಯಲ್ಲಿ ಮಲಗಿದ ಮಗು ಅಲೆನ್ ಕುರ್ಡಿಯ ಚಿತ್ರ ನಮ್ಮನ್ನು ಕಾಡುತ್ತಲೇ ಇರುವಾಗ ಮಿನಬ್ ಪಟ್ಟಣದ ಸಾಲು ಸಾಲು ಸಮಾಧಿಯ ಚಿತ್ರ ಇರಾನ್/ಇಸ್ರೇಲ್/ಅಮೆರಿಕ ಕದನದ ಕರಾಳ ಚಹರೆಯನ್ನು ಜನರ ಮುಂದಿಟ್ಟಿದೆ. ನನ್ನನ್ನು ಕಾಡುತ್ತಿರುವ ಪ್ರಶ್ನೆ ಒಂದೇ- ಸತ್ತ ಪುಟಾಣಿಗಳಲ್ಲಿ ಜಹ್ರಾ ಕೂಡ ಇದ್ದಳೆ ಎಂಬುದು…

ಹರೀಶ್ ಗಂಗಾಧರ್
ಲೇಖಕ, ಪ್ರಾಧ್ಯಾಪಕ




