ಈ ದಿನ ಸಂಪಾದಕೀಯ | ಬಡವರ ಗ್ಯಾರಂಟಿ ಮತ್ತು ಉಳ್ಳವರ-ಉಂಡವರ ವಿಕೃತಿ

Date:

Advertisements
ಬಡವರ ಗ್ಯಾರಂಟಿಗಳ ಬಗ್ಗೆ ನಿಜಕ್ಕೂ ಹೊಟ್ಟೆಗೆ ಬೆಂಕಿ ಬೀಳಿಸಿಕೊಂಡಿರುವವರು, ಒಳಗಿನ ಹೊಲಸನ್ನೆಲ್ಲ ಕಾರಿಕೊಳ್ಳುತ್ತಿರುವವರು ಇಬ್ಬರು- ಉಳ್ಳವರು ಮತ್ತು ಉಂಡವರು. ಉಳ್ಳವರು ಕೊಬ್ಬಿನಿಂದ ಬೊಬ್ಬೆ ಹಾಕುತ್ತಿದ್ದರೆ; ಉಂಡವರು- ಮಾರಿಕೊಂಡ ಪತ್ರಕರ್ತರು- ವಿವೇಕ ಮರೆತು ವಿಕೃತರಾಗಿದ್ದಾರೆ.

ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವ ಮನೆಯ ಯಜಮಾನಿಗೆ ಮಾಸಿಕ ರೂ. 2000 ಸಹಾಯಧನ, 200 ಯುನಿಟ್‌ವರೆಗೆ ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಪದವೀಧರ ನಿರುದ್ಯೋಗಿಗಳಿಗೆ ರೂ. 3000 ಮತ್ತು ಡಿಪ್ಲೊಮಾ ಓದಿದವರಿಗೆ ರೂ. 1,500 ಸಹಾಯಧನ ನೀಡುವ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.

`ಇನ್ಮುಂದೆ ರಾಜ್ಯದಲ್ಲಿ ಯಾರೂ ಕರೆಂಟ್ ಬಿಲ್ ಕಟ್ಬೇಡಿ, ಬಸ್ ಟಿಕೆಟ್ ತಗೋಬೇಡಿ’ ಎಂದು ಶಾಸಕ ಆರ್. ಅಶೋಕ್ ವಾಗ್ದಾಳಿ. `ಅವ್ರೆ ಹೇಳವ್ರೆ, 200 ಯೂನಿಟ್ ಫ್ರೀ ಅಂತ… ನೀನು ಕಟ್ಟಬ್ಯಾಡ ಅಂದಿದ್ಯಲ್ಲಪ್ಪ, ನಾವ್ ಕರೆಂಟ್ ಬಿಲ್ ಕಟ್ಟಲ್ಲ ಅಂತಿದಾರೆ, ಕಾಂಗ್ರೆಸ್ ಏನು ಹೇಳಿದೆ ಅದನ್ನು ಜನ ಕೇಳ್ತಿದಾರೆ, ಕೊಡ್ಲಿ…’ ಎಂದು ಶಾಸಕ ಅಶ್ವತ್ಥ ನಾರಾಯಣ್ ವ್ಯಂಗ್ಯ. `ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನಲ್ಲಿ ಷರತ್ತುಗಳು ಅನ್ವಯ ಎಂದು ಎಲ್ಲೂ ಹಾಕಿಲ್ಲ. ಜೂನ್ 1ರವರೆಗೆ ಕಾಯುತ್ತೇನೆ. ಷರತ್ತುಗಳನ್ನು ಹಾಕಿದರೆ ಜೂನ್ 1ರಿಂದಲೇ ಹೋರಾಟ ಮಾಡುತ್ತೇವೆ’ ಎಂದು ಮೈಸೂರಿನ ಸಂಸದ ಪ್ರತಾಪ್ ಸಿಂಹ ಧಮ್ಕಿ.

ಪ್ರಶ್ನೆ ಇರುವುದು ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳ ಬಗ್ಗೆಯೂ ಅಲ್ಲ, ವಿರೋಧ ಪಕ್ಷಗಳ ಗೇಲಿ, ವ್ಯಂಗ್ಯ, ಧಮ್ಕಿಗಳ ಬಗ್ಗೆಯೂ ಅಲ್ಲ. ಬಿಜೆಪಿ ಪ್ರತಿಪಕ್ಷವಾಗಿ ಕೆಲಸ ಮಾಡುವ, ಜನರ ಭಾವನೆಯನ್ನು ಸರ್ಕಾರಕ್ಕೆ ಮುಟ್ಟಿಸುವ, ಎಚ್ಚರಿಸುವ ಕೆಲಸ ಮಾಡುತ್ತಿದೆ. ದಾರಿ ಮತ್ತು ಧಾಟಿ ಬೇರೆ ಇರಬಹುದು, ಇರಲಿ. ಹಾಗೆಯೇ ಕಾಂಗ್ರೆಸ್, ಜನರಿಂದ ಆಯ್ಕೆಯಾಗಿದ್ದೇವೆ, ಮಾತು ಕೊಟ್ಟಿದ್ದೇವೆ, ಜಾರಿಗೆ ತಂದೇ ತೀರುತ್ತೇವೆ ಎನ್ನುತ್ತಿದೆ. ಮಾತು ಬಲ್ಲ ವೃತ್ತಿವಂತ ರಾಜಕಾರಣಿಗಳಿಗೆ ಇದೆಲ್ಲ ಮಾಮೂಲಿ. ಇವರ ಜಾಗದಲ್ಲಿ ಅವರು, ಅವರ ಜಾಗದಲ್ಲಿ ಇವರು, ದೋಸೆ ಮಗುಚಿಹಾಕಿದಷ್ಟೇ ಮಾತು ಮರೆಸುವುದು ಕೂಡ ಸಲೀಸು.

Advertisements

ಆದರೆ, ನಿಜಕ್ಕೂ ಹೊಟ್ಟೆಗೆ ಬೆಂಕಿ ಬೀಳಿಸಿಕೊಂಡಿರುವವರು, ಒಳಗಿನ ಹೊಲಸನ್ನೆಲ್ಲ ಕಾರಿಕೊಳ್ಳುತ್ತಿರುವವರು ಇಬ್ಬರು- ಉಳ್ಳವರು ಮತ್ತು ಉಂಡವರು. ಉಳ್ಳವರು- ನಮ್ಮ ತೆರಿಗೆ ಹಣ ಬಿಟ್ಟಿ ಭಾಗ್ಯಗಳಿಗೆ ವ್ಯರ್ಥವಾಗಬಾರದು ಎಂದು ಸೋಷಿಯಲ್ ಮೀಡಿಯಾದಲ್ಲಿ ಬೊಬ್ಬೆ ಹೊಡೆಯುತ್ತಿದ್ದಾರೆ. ಉಂಡವರು- ಮಾರಿಕೊಂಡ ಪತ್ರಕರ್ತರು- ವಿವೇಕ ಮರೆತು ತಮ್ಮ ವಿಕೃತಿಯನ್ನೆಲ್ಲ ಮಾಧ್ಯಮಗಳ ಮೂಲಕ ಹೊರಹಾಕುತ್ತಿದ್ದಾರೆ. ಸಮಾಜವನ್ನು ಸದೃಢಗೊಳಿಸಬೇಕಾದವರು, ಸಹಬಾಳ್ವೆಗೆ ಸಹಕರಿಸಬೇಕಾದರು, ಕೆಟ್ಟದ್ದನ್ನು ಕೊಟ್ಟು ವಾತಾವರಣವನ್ನು ಕಲುಷಿತಗೊಳಿಸುತ್ತಿದ್ದಾರೆ.

ಇದನ್ನು ಓದಿದ್ದೀರಾ?: ‘ಈ ದಿನ’ ಸಂಪಾದಕೀಯ | ಒಡಿಶಾ ಎದುರಿಸುತ್ತಿರುವ ಮಾಸಾಶನ ಸಮಸ್ಯೆ ಕರ್ನಾಟಕವನ್ನು ಕಾಡದಿರಲಿ

ಸರ್ಕಾರ ಬಡವರಿಗೆ ಕೊಡುವ ಉಚಿತ ಕೊಡುಗೆಗಳ ಬಗ್ಗೆ ಹೊಟ್ಟೆ ತುಂಬಿದ ಉಳ್ಳವರ ವ್ಯಂಗ್ಯ ಇವತ್ತಿನದಲ್ಲ. ಬ್ರಿಟಿಷರ ಬಿಗಿಮುಷ್ಟಿಯಿಂದ ಬಿಡುಗಡೆ ಪಡೆದ ಭಾರತ, ಅರಿವೆ-ಅಕ್ಷರ-ಹಸಿವನ್ನು ಕಾಲಕಾಲಕ್ಕೆ ಗೆಲ್ಲುತ್ತಲೇ ಬಂದಿದೆ.  ಅಲ್ಲಿಂದ ಇಲ್ಲಿಯವರೆಗೆ ಬಂದುಹೋದ ಸರ್ಕಾರಗಳೆಲ್ಲ ಇಂತಹ ಉಚಿತ ಕೊಡುಗೆಗಳ ಮೂಲಕವೇ ಇಂದು ಈ ದೇಶವನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿವೆ. ಅಂದು ಹಸಿವಿನಿಂದ ನರಳುತ್ತಿದ್ದವರು ಇಂದು ಹೊಟ್ಟೆ ತುಂಬಿದ ಹಣವಂತರಾಗಿದ್ದಾರೆ. ಹಾದು ಬಂದ ಹಾದಿಯನ್ನೇ ಮರೆತು ಹದ್ದುಗಳಾಗಿ ಚೀರಾಡುತ್ತಿದ್ದಾರೆ. ಬಡವರಿದ್ದರಲ್ಲವೇ ಶ್ರೀಮಂತರು ಎಂದು ಗೊತ್ತಾಗುವುದು? ಎಲ್ಲರೂ ಶ್ರೀಮಂತರಾದರೆ, ಶ್ರೀಮಂತರೆಂದು ಕರೆಯುವುದಾದರೂ ಯಾರನ್ನು? ಅವಿವೇಕಿಗಳಿಗೆ ಅದೂ ಕೂಡ ಅರ್ಥವಾಗುತ್ತಿಲ್ಲ. 

ಅಸಲಿಗೆ, ಸರ್ಕಾರ ನೀಡುವ ಯಾವುದೇ ಉಚಿತ ಕೊಡುಗೆಗಳು ಉಚಿತವಲ್ಲ. ಜನರ ತೆರಿಗೆಯ ಹಣದ ಒಂದು ಪಾಲನ್ನು ಜನರಿಗೇ ನೀಡುವ ಯೋಜನೆಗಳಷ್ಟೇ. ಸರಕಾರಗಳು ಸಂಗ್ರಹಿಸುವ ತೆರಿಗೆಯಲ್ಲಿ 35 ರೂಪಾಯಿ ನೇರ ತೆರಿಗೆಯಿಂದ- ಉಳ್ಳವರಿಂದ ಬಂದರೆ, 65 ರೂಪಾಯಿ ಪರೋಕ್ಷ ತೆರಿಗೆಯಿಂದ- ಬಡವರಿಂದ ಬರುತ್ತಿದೆ. ಇಷ್ಟೊಂದು ದೊಡ್ಡ ಪ್ರಮಾಣದ ತೆರಿಗೆ ಸರಕಾರಕ್ಕೆ ಹೋಗುತ್ತಿದೆ ಎಂಬ ಅರಿವೂ ಕೂಡ ಬಡವರಿಗಿಲ್ಲ. ಆದರೆ ಕೊಡುತ್ತಿರುವ ಕೊಸರಿನಷ್ಟು ತೆರಿಗೆಯನ್ನೇ ಭಾರೀ ಎಂದು ಭ್ರಮಿಸಿ, ನಮ್ಮ ಹಣದಿಂದಲೇ ಬಿಟ್ಟಿ ಭಾಗ್ಯ ಕೊಡಲಾಗುತ್ತಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಕೊಸರಾಡುವವರು- ಪರಾವಲಂಬಿಗಳೋ ಅಥವಾ ಸ್ವಾವಲಂಬಿಗಳೋ ಎನ್ನುವುದನ್ನು ಅವರೇ ಅರ್ಥ ಮಾಡಿಕೊಳ್ಳಬೇಕಾಗಿದೆ.

ಇನ್ನು ಸುದ್ದಿ ಮಾಧ್ಯಮಗಳಲ್ಲಿ ಬೊಬ್ಬೆ ಹಾಕುತ್ತಿರುವ ಪತ್ರಕರ್ತರಲ್ಲಿ ಹೆಚ್ಚಿನವರು ಗೋಧಿ ಮೀಡಿಯಾದವರು- ಮಾರಿಕೊಂಡವರು. ಅವರಿಗೆ ಕಾಂಗ್ರೆಸ್ ಅಧಿಕಾರಕ್ಕೇರಿದ್ದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮೋದಿ-ಶಾ ಬಿಟ್ಟರೆ ಬೇರೆಯವರೇ ಇಲ್ಲ ಎಂದುಕೊಂಡಿದ್ದವರು, ಮತದಾರರು ಕೊಟ್ಟ ಹೊಡೆತಕ್ಕೆ ತತ್ತರಿಸಿಹೋಗಿದ್ದಾರೆ. ಅಸಹನೆ, ಹೊಟ್ಟೆಕಿಚ್ಚನ್ನು ಬಡವರ ಗ್ಯಾರಂಟಿಗಳನ್ನು ಲೇವಡಿ ಮಾಡುವ ಮೂಲಕ ಶಮನಗೊಳಿಸಿಕೊಳ್ಳುತ್ತಿದ್ದಾರೆ. ಬಿಜೆಪಿಗರ ಬಾಯಿಯಿಂದ- ಗೇಲಿ, ವ್ಯಂಗ್ಯ, ಧಮ್ಕಿಗಳನ್ನು ಹೊರಹಾಕಿಸಿ ವಿಕೃತ ನಗೆ ನಗುತ್ತಿದ್ದಾರೆ. ಮನುಷ್ಯತ್ವವನ್ನು ಮರೆತು ಮೆರೆಯುತ್ತಿದ್ದಾರೆ.

ಇದೇ ಪತ್ರಕರ್ತರು ಬಿಜೆಪಿ ಅಧಿಕಾರದಲ್ಲಿದ್ದಾಗ, ಹೇಗಿದ್ದರು, ಏನು ಮಾಡಿದರು ಎಂಬುದನ್ನು ಹಾಗೂ ಸುರಕ್ಷಿತ ವಲಯದಲ್ಲಿರುವ ಶ್ರೀಮಂತರ ಸೊಕ್ಕನ್ನು ಕೂತು ಯೋಚಿಸಿ ಮದ್ದರೆಯಬೇಕಾದ ಅನಿವಾರ್ಯತೆ ಈಗ ಕಾಂಗ್ರೆಸ್ ಎದುರಿಗಿದೆ. ಮೈ ಮರೆತರೆ, ಮತ್ತೆ ಮೋದಿ ಭಜನೆ ಶುರುವಾಗಲಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X