ಈ ದಿನ ಸಂಪಾದಕೀಯ | ದಿನಕ್ಕೆ 14 ಗಂಟೆ ಕೆಲಸ ಅಮಾನವೀಯ ನಡೆ, ಸರ್ಕಾರ ತಿರಸ್ಕರಿಸಲಿ

Date:

Advertisements
ಕರ್ನಾಟಕ ಸರ್ಕಾರ ದಿನಕ್ಕೆ 14 ಗಂಟೆ ಕೆಲಸದ ಅವಧಿ ವಿಸ್ತರಣೆಗೆ ಕಾನೂನು ಒಪ್ಪಿಗೆ ನೀಡುವ ಪ್ರಸ್ತಾವಕ್ಕೆ ಒಪ್ಪಿಲ್ಲ. ಆದರೆ, ಐಟಿ ಕಂಪನಿಗಳ ಜೊತೆಗಿನ ಸಭೆಯ ಸಂದರ್ಭದಲ್ಲಿ, ಅವರ ಒತ್ತಡ ಮತ್ತು ಬೆದರಿಕೆಗೆ ಸರ್ಕಾರ ಸಮ್ಮತಿಸಬಹುದೇ ಎಂಬ ಅನುಮಾನ ಉದ್ಯೋಗಿಗಳ ವಲಯದಲ್ಲಿದೆ. ಆ ಅನುಮಾನವನ್ನು ಹುಸಿಗೊಳಿಸಿ ಸರ್ಕಾರ ಕಾರ್ಮಿಕರ ಪರವಾಗಿರಬೇಕು.

ರಾಜ್ಯ ಸರ್ಕಾರ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ಎನ್ನುತ್ತಿದ್ದಂತೆ ಎದ್ದು ನಿಂತ ಐಟಿ ವಲಯದ ದಿಗ್ಗಜರು, ಪ್ರತಿಭೆ-ಕೌಶಲಗಳೆಂಬ ಅಸ್ತ್ರ ಬಳಸಿ ಬಾಯಿ ಮುಚ್ಚಿಸಲು ನೋಡಿದರು. ಅಷ್ಟೇ ಅಲ್ಲ, ವಲಸೆ ಹೋಗುವುದಾಗಿ ಬೆದರಿಕೆಯನ್ನೂ ಒಡ್ಡಿದರು. ನೆಲ, ಜಲ, ವಿದ್ಯುತ್‌, ಸಾರಿಗೆ, ತೆರಿಗೆ ವಿನಾಯಿತಿಗಳಂತಹ ಸೌಲಭ್ಯಗಳನ್ನು ಪಡೆದ ಖಾಸಗಿ ವಲಯದವರ ವರ್ತನೆ ಕೊಂಚ ಅತಿ ಎನಿಸಿದರೂ, ರಾಜ್ಯ ಸರ್ಕಾರ ಸಹನೆಯಿಂದಲೇ ಪರಿಶೀಲಿಸಲಾಗುವುದು ಎಂದು ಹೇಳಿತು.

ಈಗ ಅದೇ ಖಾಸಗಿ ವಲಯದ ಐಟಿ ದಿಗ್ಗಜರು ಕೆಲಸಗಾರರ ಕೆಲಸದ ಅವಧಿಯನ್ನು 10 ಗಂಟೆಗಳಿಂದ 14 ಗಂಟೆಗಳವರೆಗೆ ಹೆಚ್ಚಿಸಲು, ಸಂಬಂಧಿತ ಕಾಯ್ದೆಗಳಿಗೆ ತಿದ್ದುಪಡಿ ತರಲು ಸರ್ಕಾರದ ಮುಂದೆ ಪ್ರಸ್ತಾಪ ಇಟ್ಟಿದ್ದಾರೆ. ಕೆಲವರು ಇದನ್ನು ಸರ್ಕಾರ ಕಾರ್ಮಿಕರ ವಿರುದ್ಧವಾಗಿದೆ ಎಂದು ಬಿಂಬಿಸಲೂ ಮುಂದಾಗಿದ್ದಾರೆ.
ಅಸಲಿಗೆ, 14 ಗಂಟೆಗಳ ಕೆಲಸ ಪ್ರಸ್ತಾಪಿಸಿದ್ದು ಸರ್ಕಾರವಲ್ಲ, ಕಾರ್ಮಿಕ ಇಲಾಖೆಯೂ ಅಲ್ಲ. ಚೀನಾದಂತಹ ದೇಶಗಳೊಂದಿಗೆ ಸ್ಪರ್ಧಿಸಲು ದೇಶದ ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ʼಉನ್ನತ ಸಲಹೆʼ ನೀಡಿದ್ದು ಕನ್ನಡಿಗ ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿಯವರು. ನಾರಾಯಣಮೂರ್ತಿ ಸಲಹೆ ನೀಡಿದ ನಂತರ ಕರ್ನಾಟಕ ಐಟಿ ಉದ್ಯಮದ ದಿಗ್ಗಜರು ಬೇಡಿಕೆಯ ರೂಪದಲ್ಲಿ ಪ್ರಸ್ತಾಪವನ್ನು ಸರ್ಕಾರದ ಮುಂದಿಟ್ಟಿದ್ದಾರೆ.

ರಾಜ್ಯ ಸರ್ಕಾರ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ಆ ಮೂಲಕ ಐಟಿ-ಬಿಟಿ ಕ್ಷೇತ್ರದ ಉದ್ಯೋಗಿಗಳ ಕೆಲಸದ ಅವಧಿ ದಿನಕ್ಕೆ 12 ತಾಸಿಗೂ ಹೆಚ್ಚಿಗೆ ವಿಸ್ತರಿಸುವ ಉದ್ಯಮದ ಪ್ರಸ್ತಾಪ ಕುರಿತು ಚರ್ಚಿಸಲು ಕಾರ್ಮಿಕ ಸಚಿವ ಸಂತೋಷ್ ಲಾಡ್ ಸಭೆ ಕರೆದಿದ್ದಾರೆ. ಪ್ರಸ್ತಾಪಿತ ತಿದ್ದುಪಡಿಯಂತೆ ಐಟಿ, ಬಿಪಿಒ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ದಿನಕ್ಕೆ 12 ತಾಸಿಗೂ ಹೆಚ್ಚು ಅವಧಿ ಕೆಲಸ ಮಾಡಬೇಕಾಗುತ್ತದೆ‌. ಸತತ ಮೂರು ತಿಂಗಳಲ್ಲಿ 125 ತಾಸು ಮೀರದಂತೆ ಕೆಲಸ ಮಾಡುವ ತಿದ್ದುಪಡಿ ಇದಾಗಿದೆ.

Advertisements

ಈ ಬೆಳವಣಿಗೆಯನ್ನು ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ನೌಕರರ ಸಂಘ (ಕೆಐಟಿಯು) ತೀವ್ರವಾಗಿ ವಿರೋಧಿಸಿದೆ. ಪ್ರಸ್ತಾವನೆಯು ಗುಲಾಮಗಿರಿ ಸಂಸ್ಕೃತಿಯನ್ನು ಉತ್ತೇಜಿಸುತ್ತದೆ ಮತ್ತು ಈಗಾಗಲೇ ಒತ್ತಡದಲ್ಲಿರುವ ಐಟಿ ಉದ್ಯೋಗಿಗಳಲ್ಲಿ ಇನ್ನಷ್ಟು ಒತ್ತಡ ಉಂಟುಮಾಡುತ್ತದೆ ಎಂದು ಹೇಳಿದೆ. ಅಕಸ್ಮಾತ್‌ ಕಾರ್ಯಗತಗೊಳಿಸಿದರೆ, ಈಗ ಇರುವ ಮೂರು ಶಿಫ್ಟ್‌ ವ್ಯವಸ್ಥೆ ಬದಲಿಗೆ ಎರಡು ಶಿಫ್ಟ್‌ ವ್ಯವಸ್ಥೆ ಪರಿಚಯಿಸಲು ಕಾರಣವಾಗುತ್ತದೆ. ಆಗ ಒಂದು ಶಿಫ್ಟ್‌ನಷ್ಟು ಕೆಲಸಗಾರರು ಉದ್ಯೋಗ ಕಳೆದುಕೊಳ್ಳುವ ದುಸ್ಥಿತಿ ಎದುರಾಗುತ್ತದೆ. ಇದು ಸದ್ಯ ದೇಶದ ದಳ್ಳುರಿಯಾಗಿರುವ ನಿರುದ್ಯೋಗ ಸಮಸ್ಯೆಗೆ ತುಪ್ಪ ಸುರಿಯುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನು ಓದಿದ್ದೀರಾ: ಈ ದಿನ ಸಂಪಾದಕೀಯ | ನಿಜಕ್ಕೂ ಮೋದಿಯವರು ಕುರ್ಚಿ ಉಳಿಸಿಕೊಳ್ಳಲು ಮಂಡಿಸಿದ ಬಜೆಟ್ ಇದು 

ಇದರ ಜೊತೆಗೆ ಕೇವಲ 24 ಗಂಟೆಗಳಿರುವ ದಿನದಲ್ಲಿ, ನೌಕರರು 14 ಗಂಟೆಗಳ ಕಾಲ ಕೆಲಸ ಮಾಡಿದರೆ, ನಿದ್ರೆ, ವಿಶ್ರಾಂತಿ, ವ್ಯಾಯಾಮಕ್ಕೆ ಸಮಯ ಕೊಡದಂತಾಗಿ ಉದ್ಯೋಗಿಗಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಕುಟುಂಬ ಮತ್ತು ಕೆಲಸದ ನಡುವೆ ಸಮಯ ಹೊಂದಾಣಿಕೆ ಅಸಾಧ್ಯವಾಗಿ ಕೌಟುಂಬಿಕ ಕಲಹಗಳು, ವಿಚ್ಛೇದನಗಳು ಹೆಚ್ಚಾಗಬಹುದು ಎಂದು ಮನಃಶಾಸ್ತ್ರಜ್ಞರು ಅಭಿಪ್ರಾಯಪಡುತ್ತಿದ್ದಾರೆ. ಕೆಸಿಸಿಐ ವರದಿಯ ಪ್ರಕಾರ ಐಟಿ ವಲಯದ ಶೇ. 45ರಷ್ಟು ಉದ್ಯೋಗಿಗಳು ಒತ್ತಡದಂಥ ಮಾನಸಿಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಶೇ.55ರಷ್ಟು ಮಂದಿ ದೈಹಿಕ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಈಗೇನಾದರೂ ಕಾಯ್ದೆಗೆ ತಿದ್ದುಪಡಿ ತಂದರೆ ಉದ್ಯೋಗಿಗಳು ಮತ್ತಷ್ಟು ಆಘಾತ ಅನುಭವಿಸಬೇಕಾಗುತ್ತದೆ ಎಂದು ಕೆಐಟಿಯು ಹೇಳಿದೆ.

14 ಗಂಟೆಗಳ ಹೊಸ ಪ್ರಸ್ತಾವಕ್ಕೆ ನ್ಯಾಷನಲ್ ಅಸೋಸಿಯೇಷನ್ ಫಾರ್ ಸಾಫ್ಟ್‌ವೇರ್ ಆ್ಯಂಡ್ ಸರ್ವಿಸಸ್ ಕಂಪೆನೀಸ್ (ನಾಸ್ಕಾಂ) ಕೂಡ ವಿರೋಧ ವ್ಯಕ್ತಪಡಿಸಿದೆ. ʼನಾವು ದಿನಕ್ಕೆ 14 ಗಂಟೆಗಳ ಅಥವಾ ವಾರಕ್ಕೆ 70 ಗಂಟೆಗಳ ಕೆಲಸದ ಅವಧಿ ಕೇಳಿಯೇ ಇಲ್ಲ. ಕರ್ನಾಟಕದ ಹೊಸ ಪ್ರಸ್ತಾವದ ವಿವರ ನಾವು ನೋಡಿಲ್ಲ. ನಾವು ವಾರಕ್ಕೆ 48 ಗಂಟೆಗಳ ದುಡಿಮೆಯ ನೀತಿಯನ್ನೇ ಸಂಪೂರ್ಣವಾಗಿ ಬೆಂಬಲಿಸುತ್ತೇವೆʼ ಎಂದು ನಾಸ್ಕಾಂನ ಉಪಾಧ್ಯಕ್ಷ ಆಶಿಶ್ ಅಗರ್ವಾಲ್ ಹೇಳಿದ್ದಾರೆ. ಜೊತೆಗೆ ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ (ILO) ಕೂಡ, ಕೆಲಸದ ಸಮಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳಿರಬೇಕು ಎಂದು ಒತ್ತಿಹೇಳಿದೆ. ಇಂತಹ ಸಂದರ್ಭದಲ್ಲಿ, ಐಟಿ ದಿಗ್ಗಜರ 14 ಗಂಟೆಗಳ ಕೆಲಸವನ್ನು ಕಡ್ಡಾಯಗೊಳಿಸುವ ನಡೆ ಅಮಾನವೀಯವಲ್ಲದೆ, ಬೇರೇನೂ ಅಲ್ಲ.

ಏನತ್ಮಧ್ಯೆ ಐಟಿ-ಬಿಟಿ ವಲಯದ ನೌಕರರಿಂದ, ಪ್ರಸ್ತಾಪಿತ 14 ಗಂಟೆಗಳ ಕೆಲಸದ ಅವಧಿಯನ್ನು ಕೈಬಿಡುವಂತೆ ಇ-ಮೇಲ್‌ ಅಭಿಯಾನ ಶುರುವಾಗಿದೆ. ದಿನಕ್ಕೆ ಸಾವಿರಾರು ಮೇಲ್‌ಗಳು ಕಾರ್ಮಿಕ ಇಲಾಖೆಗೆ, ಸಚಿವರಿಗೆ ರವಾನೆಯಾಗುತ್ತಿವೆ.

ಸದ್ಯದ ಮಾಹಿತಿ ಪ್ರಕಾರ, ಕರ್ನಾಟಕ ಸರಕಾರ 14 ಗಂಟೆ ಕೆಲಸದ ಅವಧಿ ವಿಸ್ತರಣೆಗೆ ಕಾನೂನು ಒಪ್ಪಿಗೆ ನೀಡುವ ಪ್ರಸ್ತಾವಕ್ಕೆ ಒಪ್ಪಿಲ್ಲ. ಆದರೆ ಐಟಿ ಕಂಪನಿಗಳ ಜೊತೆಗಿನ ಸಭೆಯ ಸಂದರ್ಭದಲ್ಲಿ, ಅವರ ಒತ್ತಡ ಮತ್ತು ಬೆದರಿಕೆಗೆ ಸರಕಾರ ಸಮ್ಮತಿಸಬಹುದೇ ಎಂಬ ಅನುಮಾನ ಉದ್ಯೋಗಿಗಳ ವಲಯದಲ್ಲಿದೆ.

ಆ ಅನುಮಾನವನ್ನು ಹುಸಿಗೊಳಿಸಿ ಸರ್ಕಾರ ಕಾರ್ಮಿಕರ ಪರವಾಗಿರಬೇಕು. ಐಟಿ ವಲಯದ ಈ ಪ್ರಸ್ತಾವವನ್ನು ಬದಿಗೆ ಸರಿಸುವ ದಿಟ್ಟತನವನ್ನು ಪ್ರದರ್ಶಿಸಬೇಕು. ಉದ್ಯೋಗಿಗಳ ಕ್ಷೇಮ ತನ್ನ ಹೊಣೆಗಾರಿಕೆ ಎಂದು ಭಾವಿಸಿ ಮಾನವೀಯತೆ ಮೆರೆಯಬೇಕು. ಅದಕ್ಕಿಂತಲೂ ಮುಖ್ಯವಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದಕ್ಕೆ ಒಪ್ಪದೆ, ಕಾರ್ಮಿಕರ ಪರ ನಿಲುವು ತಾಳಿ, ಅವರ ಸಮಾಜವಾದಿ ಸಿದ್ಧಾಂತ ಗೇಲಿಗೊಳಗಾಗದಂತೆ ನೋಡಿಕೊಳ್ಳಬೇಕು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X