ತುಮಕೂರು ನಗರದಲ್ಲಿ ಎಲ್ಲೆಂದರಲ್ಲಿರುವ ತೆರೆದ ಮೋರಿ ಹಾಗೂ ಚರಂಡಿಗಳು ಸೊಳ್ಳೆ ಉತ್ಪತ್ತಿ ತಾಣಗಳಾಗಿ ಮಾರ್ಪಾಡಾಗಿದ್ದು, ವಸತಿ ಪ್ರದೇಶಗಳ ಜನರಿಗೆ ಡೆಂಘೀ ಆತಂಕವನ್ನು ತಂದೊಡ್ಡಿದೆ.
ಜಿಲ್ಲೆಯಲ್ಲಿ ಈವರೆಗೆ 375 ಡೆಂಘೀ ಪ್ರಕರಣಗಳು ವರದಿಯಾಗಿದ್ದು, ತುಮಕೂರು ನಗರದಲ್ಲೇ ಅತಿ ಹೆಚ್ಚು ಡೆಂಘೀ ಪ್ರಕರಣಗಳು ಕಂಡು ಬಂದಿವೆ. ಇತ್ತೀಚೆಗೆ ನಗರದಲ್ಲಿ ಡೆಂಘೀಗೆ 19 ವರ್ಷದ ಯುವತಿ ಮೃತಪಟ್ಟಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ.
ಡೆಂಘೀ ರೋಗ ನಿಯಂತ್ರಣಕ್ಕೆ ಜಿಲ್ಲಾಡಳಿತ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಆದರೆ, ಯೋಜನೆ ರಹಿತ ನಗರ ನಿರ್ಮಾಣ ಹಾಗೂ ನೈರ್ಮಲ್ಯ ರಹಿತ ಹಳ್ಳಿಗಳಿಂದ ಸೋಂಕು ಹರಡುವ ಭೀತಿ ಹೆಚ್ಚಿಸಿದೆ.
ತುಮಕೂರು ನಗರದ ಎಸ್.ಎಸ್ ಪುರಂ, ಶಾಂತಿ ನಗರ, ಅಶೋಕ ನಗರದಲ್ಲಿರುವ ಮೋರಿಗಳು, ಕೆಇಬಿ ಛತ್ರ ಹಾಗೂ ಭದ್ರಮ್ಮ ವೃತ್ತದ ಅಕ್ಕಪಕ್ಕದಲ್ಲಿರುವ ಬೃಹತ್ ಚರಂಡಿಗಳು, ದಾನಾಃ ಪ್ಯಾಲೆಸ್ ಸಂಪರ್ಕಿಸುವ ಮೆಳೆಕೋಟೆ ರಸ್ತೆಯ ಮಗ್ಗುಲಿನ ಚರಂಡಿಗಳು ಹಾಗೂ ಕೋಡಿ ಬಸವೇಶ್ವರ ದೇವಸ್ಥಾನದ ಎದುರು ಹಾದು ಹೋಗುವ ಮೋರಿ, ಸಿಟಿ ಬಾರ್ಡರ್‌ನಲ್ಲಿರುವ ಹೆಗ್ಗೆರೆ ರಸ್ತೆಯ ಮೋರಿ, ಹಳೇ ಸ್ಲಂ ಸ್ಥಳ, ಆದರ್ಶ ನಗರ, ವಿನಾಯಕ ನಗರದಲ್ಲಿರುವ ಪೆಂಡಾಲ್ ಗಣಪತಿ ದೇವಸ್ಥಾನದ ಪಕ್ಕದಲ್ಲೇ ಇರುವ ಡ್ರೈನೇಜ್ ಹೀಗೆ ನಗರದ ಅನೇಕ ಕಡೆಗಳಲ್ಲಿ ತೆರೆದ ಚರಂಡಿಗಳು ಸೊಳ್ಳೆಗಳ ಉತ್ಪತ್ತಿಗಳ ತಾಣವಾಗಿ ಬಿಟ್ಟಿದೆ.
ದೋಬಿಘಾಟ್ ಬಳಿಯಲ್ಲಿ ಎರಡ್ಮೂರು ಮೋರಿಗಳು ತೆರೆದ ಸ್ಥಿತಿಯಲ್ಲಿದ್ದು, ನಿತ್ಯ ದುರ್ವಾಸನೆ ಬೀರುತ್ತವೆ. ಸಮೀಪದಲ್ಲೇ ಇರುವ ನಿವಾಸಿಗಳು ತಮ್ಮ ಮನೆಗಳಲ್ಲಿ ಉಸಿರುಗಟ್ಟುವ ವಾತಾವರಣದಲ್ಲೇ ಬದುಕುತ್ತಿದ್ದಾರೆ. ಮಳೆ ಬಂದರೆ ಸಾಕು ದುರ್ನಾತ ಹೆಚ್ಚಾಗುತ್ತಿದ್ದು, ಬಾಗಿಲು, ಕಿಟಕಿಗಳನ್ನು ಹಾಕಿಕೊಂಡರೂ ವಾಸನೆ ನಿಲ್ಲುವುದಿಲ್ಲ. ಈ ದುರ್ಗಂಧದಲ್ಲೇ ಊಟೋಪಚಾರ ಮಾಡಬೇಕು ಎಂದು ಇಲ್ಲಿನ ನಿವಾಸಿಯೊಬ್ಬರು ಬೇಸರ ತೋಡಿಕೊಂಡರು.
ಇನ್ನೊಂದೆಡೆ, ಸಣ್ಣ ವ್ಯಾಪಾರ, ವಹಿವಾಟು ಸ್ಥಳಗಳಲ್ಲಿ ಚರಂಡಿಗಳಿಂದ ಉತ್ಪತ್ತಿಯಾಗುತ್ತಿರುವ ಸೊಳ್ಳೆಗಳಿಗೆ ಜನರು ಬಲಿಯಾಗುತ್ತಿರುವುದನ್ನು ಅಲ್ಲೆಗಳೆಯಲಾಗದು.
ಇವರನ್ನೂ ಪರಿಗಣಿಸಿ
ಇನ್ನೂ ಹಳೇ ಶಾಂತಿ ನಗರ ಹಾಗೂ ಆದರ್ಶನಗರ, ಸಾಯಿಬಾಬ ಟೆಂಪಲ್, ಗೂಡ್ಸ್ ಶೆಡ್ ಕಾಲೋನಿಗಳಲ್ಲಿ ಮೂಗಿಡಲೂ ಸಾಧ್ಯವಿಲ್ಲದಂತಹ ಸ್ಥಿತಿ ಇದೆ. ಇಲ್ಲಿನ ಜನ ಅದೇ ವಾತಾವರಣದಲ್ಲೇ ಬದುಕುತ್ತಿದ್ದಾರೆ. ಸ್ವಚ್ಛಗೊಳ್ಳದ ಚರಂಡಿಗಳೇ ಈ ಭಾಗದ ಅವಲಕ್ಷಣ. ಬಡವರು, ಸಣ್ಣ ವ್ಯಾಪಾರಿಗಳು ಮತ್ತು ಅಲ್ಪಸಂಖ್ಯಾತರು ಇರುವ ಈ ಭಾಗವನ್ನು ಮಹಾನಗರ ಪಾಲಿಕೆ ಗಣನೆಗೆ ತೆಗೆದುಕೊಳ್ಳಬೇಕು.
ಹೆಲ್ತ್ ಎಮರ್ಜೆನ್ಸಿಗೂ ಮುನ್ನ ಎಚ್ಚರ
ಆರೋಗ್ಯ ತುರ್ತು ಘೋಷಿಸುವ ಸಮಯ ಸನಿಹಕ್ಕೆ ಬರುವ ಮೊದಲೇ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆಯು ಜಾಗೃತಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇದು ನಗರದ ವಿವಿಧ ವಾರ್ಡ್‌ಗಳಿಗೆ ತಲುಪುವಂತೆ ನೋಡಿಕೊಳ್ಳಬೇಕು. ತೆರೆದ ಚರಂಡಿಗಳಿಗೆ ಬ್ಲೀಚಿಂಗ್ ಪೌಡರ್ ಹಾಗೂ ಸೊಳ್ಳೆಗಳ ಉತ್ಪತ್ತಿ ತಾಣಗಳಲ್ಲಿ ಧೂಮೀಕರಣ ಕಾರ್ಯ ಪರಿಣಾಮಕಾರಿಯಾಗಿ ಆಗಬೇಕಿದೆ ಎಂಬುದು ನಗರ ನಿವಾಸಿಗಳ ಆಗ್ರಹ.
ಅವೈಜ್ಞಾನಿಕ ಚರಂಡಿಗಳಿಂದ ಪ್ರಯಾಣಿಕರಿಗೂ ವಾಹನ ಸವಾರರಿಗೂ, ಸ್ಥಳೀಯ ನಿವಾಸಿಗಳಿಗೂ ಆರೋಗ್ಯ ಸಮಸ್ಯೆ ಕಾಡುತ್ತದೆ. ಜಿಲ್ಲೆಯಲ್ಲಿ ಅನೈರ್ಮಲ್ಯತೆಗೆ ಹೆಚ್ಚಿನ ಕೊಡುಗೆ ಎಂದರೆ ಈ ನೈರ್ಮಲ್ಯವಿಲ್ಲದ ಚರಂಡಿಗಳು. ಜಿಲ್ಲಾಡಳಿತ ಸಮಗ್ರ ಯೋಜನೆಯೊಂದನ್ನು ರೂಪಿಸಬೇಕಿದೆ.
ಮುಖ್ಯವಾಗಿ ನಗರದಲ್ಲಿ ಎಲ್ಲೆಂದರಲ್ಲಿ ಕಸ ಬೀಳುತ್ತಿರುವುದರಿಂದ ಚರಂಡಿಯಲ್ಲಿ ಕಸ ಕಟ್ಟಿಕೊಂಡು ನೀರು ನಿಲ್ಲುತ್ತಿದೆ. ಸೊಳ್ಳೆಗಳು ನಿಂತ ನೀರಿನಲ್ಲಿ ಮೊಟ್ಟೆ ಇಟ್ಟು, ಸಂತಾನೋತ್ಪತ್ತಿ ಹೆಚ್ಚಿಸಿಕೊಳ್ಳುತ್ತಿವೆ. ಇದನ್ನು ತಡೆಗಟ್ಟಲು ಕಸ ನಿರ್ವಹಣೆ ಸರಿಯಾದ ರೀತಿಯಲ್ಲಿ ಆಗಬೇಕು, ಜನರಲ್ಲಿ ಪರಿಣಾಮಕಾರಿ ಜಾಗೃತಿಗೆ ಕ್ರಮ ವಹಿಸಬೇಕು. ಚರಂಡಿಯಲ್ಲಿ ಹಾಗೂ ಜಲ ಮೂಲಗಳಲ್ಲಿ ಕಸ ಸುರಿಯುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇದನ್ನು ಜಿಲ್ಲೆಯಾದ್ಯಂತ ಅನ್ವಯವಾಗುವಂತೆ ಜಾರಿಗೆ ತರಬೇಕಿದೆ.
ಮುಖ್ಯವಾಗಿ ಎಲ್ಲೆಲ್ಲಿ ಈ ರೀತಿಯ ತೆರೆದ ಮೋರಿಗಳಿವೆ ಎಂಬುದನ್ನು ಸರ್ವೆ ಮೂಲಕ ಪತ್ತೆ ಹಚ್ಚಬೇಕು. ಇದರೊಂದಿಗೆ ವಾರ್ಡ್‌ಗಳಲ್ಲಿರುವ ಸಣ್ಣ ಚರಂಡಿಗಳನ್ನೂ ಈ ಕಾರ್ಯ ಯೋಜನೆಯಲ್ಲಿ ಸೇರಿಸಿಕೊಳ್ಳಬೇಕು. ಇಂತಹ ಶಾಶ್ವತ ಯೋಜನೆಗಳನ್ನು ಜಾರಿ ಮಾಡಿದರೆ ಮುಂದಿನ ದಿನಗಳಲ್ಲಿ ಉಲ್ಬಣಗೊಳ್ಳುವ ವಿವಿಧ ರೀತಿಯ ಸೋಂಕುಗಳಿಗೆ ತಡೆ ಬಿದ್ದಂತಾಗುತ್ತದೆ. ನಗರವೂ ಸ್ವಚ್ಛತೆಯಿಂದ ಕೂಡಿರುತ್ತದೆ, ಅಲ್ಲದೆ ಜನರ ಆರೋಗ್ಯವೂ ಸುಧಾರಿಸುತ್ತದೆ.
ತುಮಕೂರು ಜಿಲ್ಲೆಯಲ್ಲಿ ದಕ್ಷ ಹಾಗೂ ಜನಪರ ಕಾರ್ಯಗಳನ್ನು ಮಾಡುವ ಅಧಿಕಾರಿಗಳಲ್ಲಿ ಒಬ್ಬರಾದ ಮಹಾನಗರ ಪಾಲಿಕೆ ಆಯುಕ್ತರಾದ ಬಿ.ವಿ.ಅಶ್ವಿಜ ಅವರು ತಮ್ಮೆಲ್ಲಾ ಜವಾಬ್ದಾರಿಗಳ ನಡುವೆ ನಗರದ ಇಂತಹ ಜ್ವಲಂತ ಸಮಸ್ಯೆಗಳಿಗೆ ಇತಿಶ್ರೀ ಹಾಡಲು ಪಣ ತೊಡಬೇಕಿದೆ. ತೆರೆದ ಚರಂಡಿಗಳ ಕುರಿತಾಗಿ ನೂತನ ಯೋಜನೆಯೊಂದನ್ನು ರೂಪಿಸಲು ಕ್ರಮ ಕೈಗೊಂಡರೆ ತುಮಕೂರು ನಗರದ ಜನ ಸದಾ ಅವರನ್ನು ಸ್ಮರಿಸುತ್ತಾರೆ. ಇದು ಮುಂದಿನ ಪೀಳಿಗೆಯ ಉತ್ತಮ ಆರೋಗ್ಯದ ಭವಿಷ್ಯಕ್ಕೂ ಕಾರಣವಾಗಲಿದೆ.
“ರಾಜಕಾಲುವೆಗಳಲ್ಲಿ ಹರಿಯುತ್ತಿರುವ ನೀರು ಮುಂದೆ ಸಾಗದೆ ದುರ್ನಾತ ಬೀರುತ್ತಿರುತ್ತದೆ. ಸೊಳ್ಳೆಗಳ ಕಾಟವೂ ವಿಪರೀತವಾಗಿದೆ. ಇದರಿಂದ ಓದಲೂ ತೊಂದರೆಯಾಗುತ್ತಿದೆ. ಮೋರಿ ಹಾದು ಹೋಗಿರುವ ದೋಬಿಘಾಟಿನ ಜನರು ಇದರ ನಡುವೆಯೇ ವಿಧಿಯಿಲ್ಲದೆ ಬದುಕುವಂತಾಗಿದೆ. ಸರ್ಕಾರಗಳ ಸ್ವಚ್ಛತಾ ಹಾಗೂ ಡೆಂಘೀ ನಿಯಂತ್ರಣ ಕಾರ್ಯಕ್ರಮಗಳು ಹೆಸರಿಗಷ್ಟೇ ಸೀಮಿತವಾಗಿರದೆ ಕಾರ್ಯ ರೂಪಕ್ಕೆ ಬರಲಿ” ಎಂದು ದೋಬಿಘಟ್ ನಿವಾಸಿ ಹಾಗೂ ತುಮಕೂರು ವಿವಿ ಸಂಶೋಧನಾ ವಿದ್ಯಾರ್ಥಿ ನವೀನ್ ಒತ್ತಾಯಿಸಿದ್ದಾರೆ.
ಈ ಸಮಸ್ಯೆ ಕುರಿತು ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾದ ಬಿ.ವಿ.ಅಶ್ವಿಜ ಅವರನ್ನು ಈ ದಿನ.ಕಾಮ್ ಪೋನ್ ಕರೆ ಮೂಲಕ ಸಂಪರ್ಕಸಿದಾಗ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ.
Am from tumkur. Tumkur university bus stop. Badhramma choultry bus stop. Outer ring road shimoga bypass near kunigal bus stop hathra wash room maadi smart city ala dirty city idhu