2004ರಲ್ಲಿ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ‘ಇಂಡಿಯಾ ಶೈನಿಂಗ್’ ಎಂದರು. ಅದೇ ಸಮಯದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ, ‘ಕರ್ನಾಟಕ ಕಂಗೊಳಿಸುತ್ತಿದೆ’ ಎಂದರು. ಅಷ್ಟೇ ಅಲ್ಲ, ಬೆಂಗಳೂರನ್ನು ‘ಸಿಂಗಪೂರ್’ ಮಾಡುತ್ತೇವೆ ಎಂದರು. ಅವೆಲ್ಲವೂ ಬರಿ ಬೊಗಳೆ, ಘೋಷಣೆ ಎನ್ನುವುದು ಜನರಿಗೆ ಅರ್ಥವಾಗಲು ಹೆಚ್ಚಿನ ಸಮಯವೇನು ಬೇಕಾಗಲಿಲ್ಲ. ಈಗ ಈ ಬ್ರ್ಯಾಂಡ್ ಬೆಂಗಳೂರು ಕೂಗು ಕೇಳಿಬರುತ್ತಿದೆ. ಕಾಲವೇ ಉತ್ತರಿಸಲಿದೆ…
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 2024-25ರ ಸಾಲಿಗೆ ರೂ. 12,369 ಕೋಟಿ ಗಾತ್ರದ ಆಯವ್ಯಯ ಮಂಡಿಸಿದೆ. ನಗರವಾಸಿಗಳ ಮೇಲೆ ಯಾವುದೇ ಹೊಸ ತೆರಿಗೆ ಭಾರವನ್ನು ಹೊರಿಸದೆ, ಹತ್ತು ಹಲವು ಅಭಿವೃದ್ಧಿ ಕಾರ್ಯಗಳತ್ತ ಗಮನ ಹರಿಸಿದೆ. ಅದರಲ್ಲೂ ‘ಬ್ರ್ಯಾಂಡ್ ಬೆಂಗಳೂರು’ಗೆ 1500 ಕೋಟಿ ನೀಡುವ ಮೂಲಕ ಹೆಚ್ಚಿನ ಆದ್ಯತೆ ನೀಡಿದೆ.
‘ಬ್ರ್ಯಾಂಡ್ ಬೆಂಗಳೂರು’ಗೆ ಅಗತ್ಯವಾದ ಸಂಚಾರ ದಟ್ಟಣೆ ನಿವಾರಣೆಗಾಗಿ ಸುರಂಗ ಮಾರ್ಗ, ಡಬಲ್ ಡೆಕ್ಕರ್ ರಸ್ತೆ, ಅಂಡರ್ ಗ್ರೌಂಡ್ ಪಾರ್ಕಿಂಗ್, ವೈಟ್ ಟಾಪಿಂಗ್, ಫ್ಲೈ ಓವರ್, ರಸ್ತೆ ಅಗಲೀಕರಣಕ್ಕೆ ಒತ್ತು ನೀಡಲಾಗಿದೆ. ಜೊತೆಗೆ ನಗರದ ನಾಗರಿಕರಿಗೆ ಪರಿಸರ ಸ್ನೇಹಿ ನಡಿಗೆ ಪಥ, ಡೇ ಕೇರ್ ಸೆಂಟರ್, ಶಾಲಾ ತೋಟ, ಆರೋಗ್ಯ ಸಾರಥಿ, ಪಾಲಿಕೆ ಮಕ್ಕಳಿಗೆ ಆರೋಗ್ಯ ವಿಮೆ, ವಲಯಕ್ಕೊಂದು ವೃದ್ಧಾಶ್ರಮ, ಮಂಗಳಮುಖಿಯರಿಗೆ ರಾತ್ರಿ ತಂಗುದಾಣ, ಬೀದಿ ಬದಿ ವ್ಯಾಪಾರಿಗಳಿಗೆ ಇ-ವೆಂಡಿಂಗ್ ರಿಕ್ಷಾಗಳ ಸೌಲಭ್ಯಗಳನ್ನು ಒದಗಿಸಲು ಮುಂದಾಗಿದೆ. ಮುಖ್ಯವಾಗಿ, 16 ಸಾವಿರ ಪೌರ ಕಾರ್ಮಿಕರ ನೇರ ನೇಮಕಾತಿಯ ಬಗ್ಗೆ ಮಾತನಾಡಿದೆ.
ಬೆಂಗಳೂರು ಅಭಿವೃದ್ಧಿ ಸಚಿವರಾಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಬ್ರ್ಯಾಂಡ್ ಬೆಂಗಳೂರು ಯೋಜನೆಯನ್ನು ಅನುಷ್ಠಾನಕ್ಕೆ ತರುವ ಆತ್ಮವಿಶ್ವಾಸದ ಮಾತುಗಳನ್ನು ಆಡಿದ್ದಾರೆ. ಅವರ ಉತ್ಸಾಹ, ವೇಗ ಮತ್ತು ಧೈರ್ಯ ಬಲ್ಲವರು, ಬೆಂಗಳೂರು ಮತ್ತೊಂದು ಮಟ್ಟಕ್ಕೆ ಹೋಗಬಹುದೆಂದು ಭಾವಿಸಿದ್ದಾರೆ.
ಆದರೆ, ನಗರ ಯೋಜನಾ ತಜ್ಞರು, ಅಪಾರ ಹಣ ಬೇಡುವ ಸುರಂಗ ರಸ್ತೆ ನಿರ್ಮಾಣ, ಸ್ಕೈಡೆಕ್ ಯೋಜನೆಗಳು ನಿಜಕ್ಕೂ ಬಿಳಿಯಾನೆಗಳು, ಅವಶ್ಯಕತೆ ಇಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದಾಯ ಸಂಗ್ರಹ ಪುಸ್ತಕದಲ್ಲಿ ಮಾತ್ರ ಎಂದು ಮಾಜಿ ಮೇಯರ್, ಸ್ವಾನುಭವದ ಸತ್ಯ ನುಡಿದಿದ್ದಾರೆ. ಹೆಚ್ಚುತ್ತಿರುವ ಮಾಲಿನ್ಯ ತಡೆಗೆ ಪರಿಸರ ಸಂರಕ್ಷಣೆಗೆ ಸ್ಪಷ್ಟ ಯೋಜನೆಗಳಿಲ್ಲ ಎಂದು ಆರ್ಥಿಕ ತಜ್ಞರು ದೂರಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮುಂಬರುವ ಲೋಕಸಭಾ ಚುನಾವಣೆ ಮೊದಲ ಆದ್ಯತೆಯಾಗಿದ್ದು, ಅದಕ್ಕೆ ಬೇಕಾದ ಬಜೆಟ್ ರೂಪಿಸಲಾಗಿದೆ ಎಂದು ಹೆಚ್ಚಿನವರ ಆಕ್ಷೇಪವಾಗಿದೆ.
ಮೋದಿಯವರಿಗೆ ಮೂರನೇ ಲೋಕಸಭಾ ಚುನಾವಣೆ ಮುಖ್ಯವಾಗಿರುವಂತೆ, ರಾಜ್ಯ ಸರ್ಕಾರಕ್ಕೂ ಮೊದಲ ಆದ್ಯತೆಯಾಗಿರಬಹುದು. ಆದರೆ, ಸೆಪ್ಟೆಂಬರ್ 10, 2020 ರಿಂದ ಇಲ್ಲಿಯವರೆಗೆ, ಸುಮಾರು ಮೂರೂವರೆ ವರ್ಷಗಳ ಕಾಲ ಬಿಬಿಎಂಪಿ ಜನಪ್ರತಿನಿಧಿಗಳಿಲ್ಲದೆ ನಡೆದದ್ದು ಸರಿಯೇ ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳಬೇಕಾಗುತ್ತದೆ.
ಬಿಬಿಎಂಪಿಗೆ ಚುನಾವಣೆ ನಡೆಸದಿರುವುದು, ಚುನಾಯಿತ ಪ್ರತಿನಿಧಿಗಳಿಲ್ಲದೆ ಅಧಿಕಾರಿಗಳೇ ಎಲ್ಲವನ್ನು ನಿಭಾಯಿಸುವುದು, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಪಕ್ಷಗಳು ವಾರ್ಡ್ ವಿಂಗಡಣೆ ಮತ್ತು ವಿಸ್ತರಣೆಯಲ್ಲಿ ಕಾನೂನಾತ್ಮಕ ಗೊಂದಲಗಳ ನೆಪಗಳನ್ನು ಮುಂದಿಟ್ಟು ಚುನಾವಣೆಯನ್ನು ಮುಂದೂಡುವುದು ಪ್ರಜಾಪ್ರಭುತ್ವಕ್ಕೆ ಶೋಭೆ ತರುವುದಿಲ್ಲ.
ಚುನಾಯಿತ ಜನಪ್ರತಿನಿಧಿಗಳಿದ್ದರೆ ಪ್ರತಿಯೊಂದು ವಾರ್ಡಿನ ಕುಂದುಕೊರತೆಗಳ ಬಗ್ಗೆ ಕನಿಷ್ಠಪಕ್ಷ ಜನರೊಂದಿಗೆ ಜಗಳವಾದರೂ ನಡೆಯುತ್ತಿತ್ತು. ಆದರೆ ಈಗ ಅಧಿಕಾರಿಗಳ ದರ್ಬಾರಿನಲ್ಲಿ, ಸಚಿವ ಡಿ.ಕೆ. ಶಿವಕುಮಾರ್ ಮೇಲುಸ್ತುವಾರಿಯಲ್ಲಿ ಏನಾಗುತ್ತಿದೆ ಎಂಬುದೇ ಯಾರಿಗೂ ತಿಳಿಯುತ್ತಿಲ್ಲ.
ಕಳೆದ ವರ್ಷ ಕೂಡ ಹೀಗೆಯೇ ಬಜೆಟ್ ಮಂಡನೆಯಾಗಿ, ಕೋಟ್ಯಂತರ ರೂಪಾಯಿ ನೀರಿನಂತೆ ಹರಿದರೂ, ರಸ್ತೆಯ ಗುಂಡಿಗಳನ್ನು ಮುಚ್ಚಲಾಗಲಿಲ್ಲ. ಒಂದೇ ಒಂದು ಮಳೆಗೆ ನಗರ ತೇಲುವುದನ್ನು ತಡೆಯಲಾಗಲಿಲ್ಲ. ಬಿಬಿಎಂಪಿಯ ಕೆಟ್ಟ ಆಡಳಿತಕ್ಕೆ ಬೇಸತ್ತ ಹೈಕೋರ್ಟ್ ಛೀಮಾರಿ ಹಾಕುವುದನ್ನೂ ನಿಲ್ಲಿಸಲಿಲ್ಲ.
ಬೆಂಗಳೂರು ಎಂಬ ನಗರ ಪ್ರತಿದಿನ ಬೆಳೆಯುತ್ತಿದೆ. ತನ್ನ ಒಡಲಿಗೆ ಜನರನ್ನು, ಬಿಲ್ಡಿಂಗ್‌ಗಳನ್ನು, ಸಾಫ್ಟ್‌ವೇರ್ ಕಂಪನಿಗಳನ್ನು, ಉದ್ದಿಮೆಗಳನ್ನು, ವಾಹನಗಳನ್ನು, ತ್ಯಾಜ್ಯವನ್ನು, ಧೂಳನ್ನು, ಹೊಗೆಯನ್ನು ತುಂಬಿಕೊಳ್ಳುತ್ತ ಬಿರುಸಿನಿಂದ ಬೆಳೆಯುತ್ತಿದೆ. ಅದು ಬೆಳೆಯುತ್ತಿರುವ ವೇಗ ಗಮನಿಸಿದರೆ, ಬಿರಿದು ಉರಿದು ಹೋಗುವ ಕಾಲ ದೂರವಿಲ್ಲ ಎನಿಸುತ್ತಿದೆ.
ಒಂದು ಕಾಲದ ಬೆಂಗಳೂರಿನಲ್ಲಿ ಒಂದು ಸಾವಿರ ಕೆರೆಗಳಿದ್ದವು, ಈಗ ಇನ್ನೂರಕ್ಕಿಳಿದಿದೆ. ಕೆರೆಯ ಜಾಗವೆಲ್ಲ ಅಕ್ರಮ ಒತ್ತುವರಿದಾರರ ವಶವಾಗಿದೆ. ಇರುವ ಕೆರೆಗಳು ಬತ್ತಿಹೋಗಿ ಅಂತರ್ಜಲ ಕುಸಿತ ಕಂಡಿದೆ, ಕುಡಿಯುವ ನೀರಿಗೆ ಸಂಚಕಾರ ತಂದಿದೆ. ಬೇಗ ಬಂದ ಬೇಸಿಗೆಯಿಂದ, ಟ್ಯಾಂಕರ್ ನೀರು ಮಾರಾಟ ಮಾಫಿಯಾ ರೂಪ ಪಡೆದಿದೆ. ಸಂಚಾರ ದಟ್ಟಣೆಗೆ ಪರಿಹಾರ ಸಾಧ್ಯವೇ ಇಲ್ಲ ಎನ್ನುವಂತಹ ಸನ್ನಿವೇಶ ಸೃಷ್ಟಿಯಾಗಿದೆ.
ಸುರಕ್ಷಿತ ಮತ್ತು ಉತ್ತಮ ಹವಾಮಾನದ ದೃಷ್ಟಿಯಿಂದ ಬೆಂಗಳೂರು ನಗರ ಹೊರಗಿನವರಿಗೆ ಸ್ವರ್ಗದಂತೆ ಕಾಣುತ್ತಿದೆ. ವಲಸೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಶ್ರೀಮಂತರಿಗೆ ಸ್ವರ್ಗವಾದರೆ, ಬಡವರಿಗೆ ನರಕವಾಗುತ್ತಿದೆ. ಬಡ, ಮಧ್ಯಮವರ್ಗದ ಸಣ್ಣ ಪುಟ್ಟ ಸಮಸ್ಯೆಯನ್ನೂ ಬೆಟ್ಟವಾಗಿಸುವ ಬಿಬಿಎಂಪಿಯ ಅಧಿಕಾರಿ-ನೌಕರವರ್ಗ; ಶ್ರೀಮಂತರ ಒತ್ತುವರಿ, ತೆರಿಗೆ, ಕಾನೂನು ಉಲ್ಲಂಘನೆಯನ್ನು ಕೇಳುತ್ತಿಲ್ಲವೆಂಬ ಆರೋಪವೂ ಇದೆ. ಬಿಬಿಎಂಪಿಯನ್ನು ಭ್ರಷ್ಟಮುಕ್ತ ಮಾಡಿ, ಜನಸ್ನೇಹಿಯನ್ನಾಗಿಸುವುದು ಸರ್ಕಾರಕ್ಕೆ ಸವಾಲಿನ ಸಂಗತಿಯಾಗಿದೆ.
2004ರಲ್ಲಿ ದೇಶದ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ‘ಇಂಡಿಯಾ ಶೈನಿಂಗ್’ ಎಂದರು. ಅದೇ ಸಮಯದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ, ‘ಕರ್ನಾಟಕ ಕಂಗೊಳಿಸುತ್ತಿದೆ’ ಎಂದರು. ಅಷ್ಟೇ ಅಲ್ಲ, ಬೆಂಗಳೂರನ್ನು ‘ಸಿಂಗಪೂರ್’ ಮಾಡುತ್ತೇವೆ ಎಂದರು. ಅವೆಲ್ಲವೂ ಬರಿ ಬೊಗಳೆ, ಘೋಷಣೆ ಎನ್ನುವುದು ಜನರಿಗೆ ಅರ್ಥವಾಗಲು ಹೆಚ್ಚಿನ ಸಮಯವೇನು ಬೇಕಾಗಲಿಲ್ಲ.
ಈಗ ಈ ‘ಬ್ರ್ಯಾಂಡ್ ಬೆಂಗಳೂರು’ ಕೂಗು ಕೇಳಿಬರುತ್ತಿದೆ. ಇದು ಕಿವಿಗೆ ಭಿನ್ನವಾಗಿ ಕೇಳಿಸುತ್ತದೆ. ಪ್ರದರ್ಶನ-ಪ್ರತಿಷ್ಠೆಯ ದೃಷ್ಟಿಯಿಂದ ಹೇಳಿಕೊಳ್ಳುವುದಕ್ಕೆ ಚೆನ್ನಾಗಿದೆ. ಅನುಷ್ಠಾನ ಎಂದಾಕ್ಷಣ- ರಾಕೇಶ್ ಸಿಂಗ್, ತುಷಾರ್ ಗಿರಿನಾಥ್ ಮತ್ತು ಡಿ.ಕೆ. ಶಿವಕುಮಾರ್ ಚಿತ್ರಗಳು ಕಣ್ಮುಂದೆ ನಿಲ್ಲುತ್ತವೆ. ಈ ವ್ಯಕ್ತಿಗಳು ನಗರದ ಸಂಪನ್ಮೂಲವನ್ನು ಸಂರಕ್ಷಿಸುವ, ಮಾನವೀಯ ಮೌಲ್ಯವನ್ನು ವೃದ್ಧಿಸುವ, ಆಡಳಿತ ದಕ್ಷತೆಯನ್ನು ಹೆಚ್ಚಿಸುವ, ಶ್ರೀಮಂತರಿಗಷ್ಟೇ ಅಲ್ಲ, ಬಡವರಿಗೂ ಬದುಕಲು ಯೋಗ್ಯವಾದ ನಗರವನ್ನಾಗಿ ರೂಪಿಸುವ ಕಳಕಳಿ-ಕಾಳಜಿ-ಪ್ರೀತಿ ಹೊಂದಿದ್ದಾರೆಯೇ ಎಂಬ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ.
