ಮಳೆ ಅವಾಂತರ ಸೃಷ್ಟಿಸುತ್ತಿದ್ದಂತೆ ಅಧಿಕಾರಿಗಳು ಮತ್ತು ಬೆಂಗಳೂರು ನಗರ ಅಭಿವೃದ್ಧಿ ಸಚಿವರು ಆತುರದಿಂದ ಸಿಟಿ ರೌಂಡ್ಸ್ಗೆ ಇಳಿಯುತ್ತಾರೆ. ಮತ್ತದೇ ತುರ್ತು ಕಾಮಗಾರಿಗಳ ಆಶ್ವಾಸನೆಗಳು, ಪರಿಹಾರದ ಘೋಷಣೆಗಳು, ಜನರ ಮುಂದೆ ಅಧಿಕಾರಿಗಳಿಗೆ ತರಾಟೆ- ಎಲ್ಲವೂ ಕ್ಯಾಮರಾಗಳ ಮುಂದೆ. ಆ ನಂತರ ಎಲ್ಲವೂ ಯಥಾರೀತಿ...
ಮುಂಜಾನೆ ಮೂರು ಗಂಟೆಯಲ್ಲಿ ಸುರಿದ ದಾಖಲೆ ಮಳೆಗೆ ಬೆಂಗಳೂರು ನಗರ ಅಕ್ಷರಶಃ ತೇಲುತ್ತಿತ್ತು. ರಸ್ತೆಗಳು ನದಿಗಳಂತೆ ತುಂಬಿ ಹರಿಯುತ್ತಿದ್ದವು. ಅಂತಹ ನದಿಗಳಲ್ಲೂ ಹಾದಿ ಹುಡುಕಿ ಬಸ್, ಆಟೋ, ಕ್ಯಾಬ್ ಮತ್ತು ದ್ವಿಚಕ್ರ ವಾಹನ ಚಾಲಕರು, ಎದುರಾದ ಸವಾಲಿಗೇ ಸಡ್ಡು ಹೊಡೆದಿದ್ದರು. ಹೊಟ್ಟೆಪಾಡಿನ ಹೋರಾಟವನ್ನು ತೆರೆದಿಟ್ಟಿದ್ದರು.
ಅಂತಹ ಸಂದರ್ಭದಲ್ಲಿ ಶ್ರೀಧರ್ ಸ್ವಾಮಿನಾಥನ್ ಎಂಬ ವ್ಯಕ್ತಿ ಎಲೆಕ್ಟ್ರಾನಿಕ್ ಸಿಟಿಯಿಂದ ಸಿಲ್ಕ್ ಬೋರ್ಡಿಗೆ ಬರಲು ಬೆಳಗಿನ ಜಾವ ಐದು ಗಂಟೆಗೆ ಸಿಟಿ ಬಸ್ ಹತ್ತಿದ್ದರು. ಹತ್ತು ಕಿಲೋಮೀಟರ್ಗಳ ಆ ಪ್ರಯಾಣ ಹೆಚ್ಚೆಂದರೆ ಹದಿನೈದು ನಿಮಿಷಗಳದ್ದು. ಆದರೆ ತೆಗೆದುಕೊಂಡದ್ದು ಬರೋಬ್ಬರಿ ಮೂರು ಗಂಟೆ. ಮಕ್ಕಳು, ಮಹಿಳೆಯರು, ವಯಸ್ಸಾದವರು, ಆರೋಗ್ಯ ಸರಿ ಇಲ್ಲದವರು ಆ ಬಸ್ನಲ್ಲಿ ಪ್ರಯಾಣಿಸಿದ್ದರೆ- ಅನುಭವಿಸಿದವರಿಗೇ ಗೊತ್ತು ಆ ಕಷ್ಟ.
ಇಂತಹ ಬೆಂಗಳೂರನ್ನು ಪ್ರತಿನಿಧಿಸುವ ಹಲವು ಚಿತ್ರಗಳನ್ನು ಸಂಚಾರ ಪೊಲೀಸರು ‘ಎಕ್ಸ್’ ಖಾತೆಯಲ್ಲಿ ಹರಿಬಿಟ್ಟಿದ್ದರು. ಮಳೆಯಿಂದಾಗಿ ಯಾವ ರಸ್ತೆ ಏನಾಗಿದೆ, ಎಲ್ಲೆಲ್ಲಿ ಸಂಚಾರ ವ್ಯವಸ್ಥೆಗೆ ತೊಂದರೆಯಾಗಿದೆ, ಪರ್ಯಾಯ ಮಾರ್ಗಗಳೇನು ಎಂಬುದನ್ನು ಸೂಚಿಸಲು ಮಳೆ ಅನಾಹುತದ ಚಿತ್ರಗಳು ಮತ್ತು ವಿಡಿಯೋಗಳನ್ನು ಹಂಚಿಕೊಂಡಿದ್ದರು. ಆ ಚಿತ್ರಗಳು ಮತ್ತು ವಿಡಿಯೋಗಳು ಬೆಂಗಳೂರಿನ ಭಯಾನಕತೆಯನ್ನು ಬಿಡಿಸಿಟ್ಟಿದ್ದವು.
ಇತ್ತೀಚಿನ ದಿನಗಳಲ್ಲಿ ಮಳೆ ಎನ್ನುವುದು ನಗರವಾಸಿಗಳ ಪಾಲಿಗೆ ಸಂಭ್ರಮವಾಗಿ ಉಳಿದಿಲ್ಲ. ಸಂಭ್ರಮವಾಗಿರುವುದು, ಅಧಿಕಾರಿಗಳಿಗೆ ಮತ್ತು ಅಧಿಕಾರಸ್ಥ ರಾಜಕಾರಣಿಗಳಿಗೆ ಮಾತ್ರ. ಮಳೆ, ಸಂಚಾರ ಅಸ್ತವ್ಯಸ್ತ, ವಾಹನ ಸವಾರರ ಪರದಾಟವಾಗುತ್ತಿದ್ದಂತೆ ಕೂಗುಮಾರಿಗಳಂತಹ ದೃಶ್ಯ ಮಾಧ್ಯಮಗಳು ಎದ್ದು ನಿಲ್ಲುತ್ತವೆ. ನಗರದ ಭಯಾನಕತೆಯನ್ನು ಬಿಡಿಸಿಡುತ್ತವೆ. ಜನ ಆಕ್ರೋಶಗೊಂಡು, ಅಧಿಕಾರಿಗಳನ್ನು ಮತ್ತು ಆಳುವ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವುದನ್ನು ಬಿತ್ತರಿಸುತ್ತವೆ.
ಅದರ ಪರಿಣಾಮವೆಂಬಂತೆ, ಬಿಬಿಎಂಪಿಯ ಅಧಿಕಾರಿಗಳು ಮತ್ತು ಬೆಂಗಳೂರು ನಗರ ಅಭಿವೃದ್ಧಿ ಸಚಿವರು ಆತುರದಿಂದ ಸಿಟಿ ರೌಂಡ್ಸ್ಗೆ ಇಳಿಯುತ್ತಾರೆ. ಮತ್ತದೇ ತುರ್ತು ಕಾಮಗಾರಿಗಳ ಆಶ್ವಾಸನೆಗಳು, ಪರಿಹಾರದ ಘೋಷಣೆಗಳು, ಜನರ ಮುಂದೆ ಅಧಿಕಾರಿಗಳಿಗೆ ತರಾಟೆ- ಎಲ್ಲವೂ ಕ್ಯಾಮರಾಗಳ ಮುಂದೆ. ಸಚಿವರ ಜನಪರ ಕಾಳಜಿ ಸುದ್ದಿಯಾಗುತ್ತದೆ. ತುರ್ತು ಕಾಮಗಾರಿಗಳ ನೆಪದಲ್ಲಿ ನೂರಾರು ಕೋಟಿ ರೂಪಾಯಿ ಬಿಡುಗಡೆಯಾಗುತ್ತದೆ. ಆದರೆ ಬೆಂಗಳೂರು ನಗರದ ಸಿಟಿ ಮಾರ್ಕೆಟ್ಟು, ಚಿಕ್ಕಪೇಟೆ ಗಲ್ಲಿ, ಆನಂದರಾವ್ ಸರ್ಕಲ್ಲಿನ ಅಂಡರ್ ಪಾಸ್, ಅಪಾರ್ಟಮೆಂಟುಗಳಿಗೆ ನೀರು, ರಾಜಕಾಲುವೆಗಳ ಒತ್ತುವರಿ, ಕೆರೆಗಳ ಕಣ್ಮರೆ- ಎಲ್ಲವೂ ಯಥಾರೀತಿ.
ಹದಿನೈದು ವರ್ಷಗಳ ಹಿಂದೆ ಸರಾಗವಾಗಿ ಚರಂಡಿ ಸೇರುತ್ತಿದ್ದ, ಆ ಮೂಲಕ ಕೆರೆ ಸರಪಳಿಗಳ ಭಾಗವಾಗುತ್ತಿದ್ದ ಮಳೆನೀರಿಗೆ ಈಗ ರಸ್ತೆಯೇ ದೊಡ್ಡ ಚರಂಡಿ. ಏಕೆಂದರೆ ನಗರದ ಬಹುಪಾಲು ರಸ್ತೆಗಳು ಅಭಿವೃದ್ಧಿಯ ನೆಪದಲ್ಲಿ ವೈಟ್ ಟ್ಯಾಪಿಂಗ್ ಕಾಣುತ್ತಿವೆ. ಬಹುತೇಕ ರಸ್ತೆಗಳ ಪಕ್ಕದಲ್ಲಿಯೇ ಇದ್ದ ಮಳೆಗಾಲುವೆಯಂಥ ಚರಂಡಿಗಳನ್ನು ಕಾಂಕ್ರೀಟ್ ಸ್ಲ್ಯಾಬ್ ಹಾಕಿ ಮುಚ್ಚಲಾಗಿದೆ. ಹೀಗಾಗಿ ಪ್ರಮುಖ ರಸ್ತೆಗಳಷ್ಟೇ ಅಲ್ಲ, ಮನೆ ಮುಂದಿನ ಒಳರಸ್ತೆಗಳಲ್ಲಿಯೂ ನೀರು ಚರಂಡಿ ಸೇರದೆ ಬೀದಿಯಲ್ಲಿಯೇ ನಿಲ್ಲುತ್ತದೆ. ಹೆಚ್ಚಾದಾಗ ಮನೆಯೊಳಕ್ಕೆ ಹರಿದು ವಸ್ತುಗಳನ್ನು ತೇಲಾಡಿಸುತ್ತದೆ. ಹಾಗೆಯೇ ಬಡವರು, ಮಧ್ಯಮವರ್ಗದವರು, ಕೊಳೆಗೇರಿ ನಿವಾಸಿಗಳ ಬದುಕನ್ನು ಕೂಡ. ಮಳೆ ಬಂತು ಎಂದಾಕ್ಷಣ ಈ ಜನ ಜೀವವನ್ನು ಕೈಯಲ್ಲಿಡಿದು ಬದುಕುವಂತಾಗಿದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ವಿಚಾರಣಾ ನ್ಯಾಯಾಲಯಗಳ ನಿರ್ಲಕ್ಷ್ಯವನ್ನು ಬಯಲುಗೊಳಿಸಿದ ಸಿಸೋಡಿಯಾ ಪ್ರಕರಣ
ಬೆಂಗಳೂರು ನಗರ ಅಭಿವೃದ್ಧಿ ಖಾತೆ ಸಚಿವ ಡಿ.ಕೆ. ಶಿವಕುಮಾರ್, ದೂರದೃಷ್ಟಿಯುಳ್ಳ ವ್ಯಕ್ತಿ ಎಂದು ಅವರ ಹೇಳಿಕೆಗಳು ಹೇಳುತ್ತವೆ. ಅದಕ್ಕೆ ಪೂರಕವಾಗಿ ಅವರು ಬೆಂಗಳೂರಿಗೆ ಸ್ಕೈ-ಡೆಕ್ನ ಅಗತ್ಯದ ಬಗ್ಗೆ ಮಾತನಾಡುತ್ತಾರೆ. ಎರಡನೇ ವಿಮಾನ ನಿಲ್ದಾಣದ ಕುರಿತು ತಲೆ ಕೆಡಿಸಿಕೊಳ್ಳುತ್ತಾರೆ. ಸಿಲಿಕಾನ್ ಸಿಟಿಯನ್ನು ವಿಶ್ವಮಟ್ಟಕ್ಕೆ ಏರಿಸಿ ಬ್ರ್ಯಾಂಡ್ ಬೆಂಗಳೂರು ಮಾಡ್ತೀವಿ ಎನ್ನುತ್ತಾರೆ.
ಬ್ರ್ಯಾಂಡ್ ಬೆಂಗಳೂರು – ವೈಬ್ರಾಂಟ್ ಬೆಂಗಳೂರು ಯೋಜನೆಯಡಿ ಸ್ಕೈ-ಡೆಕ್ ನಿರ್ಮಾಣ ಮಾಡಲು ಬಿಬಿಎಂಪಿ ಬಜೆಟ್ನಲ್ಲಿ 350 ಕೋಟಿ ರೂಪಾಯಿಗಳನ್ನು ಘೋಷಿಸಲಾಗಿದೆ. ಬರೋಬ್ಬರಿ 250 ಮೀಟರ್ ಎತ್ತರದ ಸ್ಕೈ-ಡೆಕ್ ನಿರ್ಮಾಣಕ್ಕೆ ನಿರ್ಧರಿಸಲಾಗಿದ್ದು, ಸೂಕ್ತ ಜಾಗ ಹುಡುಕಲಾಗುತ್ತಿದೆ. ಬೆಂಗಳೂರಿನಲ್ಲಿ ಆಕರ್ಷಕ ಪ್ರವಾಸಿ ತಾಣ ನಿರ್ಮಾಣಕ್ಕೆ, ಪ್ರವಾಸಿಗರ ವಿಹಂಗಮ ನೋಟಕ್ಕೆ ಸ್ಕೈ-ಡೆಕ್ ಯೋಜನೆ ಎಂದು ಹೇಳಲಾಗುತ್ತಿದೆ.
ಆದರೆ, ಮೂಲಭೂತ ಸಮಸ್ಯೆಗಳಾದ ರಸ್ತೆಗಳು, ಕುಡಿಯುವ ನೀರು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಬಿಬಿಎಂಪಿ ಶಾಲೆಗಳ ಬಗ್ಗೆ, ಬಡವರು ಕೂಡ ಬದುಕಬಹುದಾದ ನಗರದ ಬಗ್ಗೆ ಗಮನವೇ ಇಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಅಧಿಕಾರಿಗಳು, ಜನರ ಜೇಬು ಬಿಟ್ಟು ಬೇರೆ ನೋಡುತ್ತಿಲ್ಲ. ಬಿಬಿಎಂಪಿ, ಬಿಡಬ್ಲ್ಯುಎಸ್ಎಸ್ಬಿ, ಬಿಡಿಎ ಸೇರಿದಂತೆ ನಗರ ಯೋಜನೆಗೆ ಸಂಬಂಧಿಸಿದ ಸಂಸ್ಥೆಗಳು, ಇಲಾಖೆಗಳ ನಡುವೆ ಸಮನ್ವಯತೆಯೇ ಇಲ್ಲ.
ಮಳೆ ಎನ್ನುವುದು ನಗರವಾಸಿಗಳಿಗೆ ಒಂದು ಸಮಸ್ಯೆಯಾಗಿಸುವಲ್ಲಿ ಅಭಿವೃದ್ಧಿ ಮತ್ತು ಭ್ರಷ್ಟಾಚಾರದ ಪಾತ್ರವಿದೆ. ಜೊತೆಗೆ ಜನರ ಅಸೀಮ ನಿರ್ಲಕ್ಷ್ಯವೂ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಆಳುವ ಸರ್ಕಾರದ ವಿರುದ್ಧ ಜನ ಬೀದಿಗಿಳಿದು ಪ್ರಶ್ನಿಸುವ, ಪ್ರತಿಭಟಿಸುವ ಕೆಚ್ಚನ್ನೇ ಕಳೆದುಕೊಂಡಿದ್ದಾರೆ. ಅದಕ್ಕೆ ಅವರ ಹೊಟ್ಟೆಪಾಡು ಕಾರಣವಿರಬಹುದು. ಜನರ ಈ ಅಸಹಾಯಕತೆ ಮತ್ತು ಎಲ್ಲದಕ್ಕೂ ಹೊಂದಿಕೊಳ್ಳುವ ಗುಣ ಅಧಿಕಾರಿಗಳು ಮತ್ತು ಅಧಿಕಾರಸ್ಥ ರಾಜಕಾರಣಿಗಳಿಗೆ ಅನುಕೂಲಕರ ಸನ್ನಿವೇಶವನ್ನು ಸೃಷ್ಟಿಸುತ್ತಿದೆ. ನಗರ ಬದುಕು ನರಕವಾಗುತ್ತಿದೆ.
