ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಕೊಚ್ಚಿಹೋದ ಘಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರತಿಕ್ರಿಯಿಸಿ, ಜಲಾಶಯಗಳ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಜಲಾಶಯಗಳ ಸಮರ್ಪಕ ನಿರ್ವಹಣೆಗೆ ಕೇಂದ್ರ ಸಮಿತಿ ನೀಡಿದ ಸಲಹೆಗಳನ್ನು ರಾಜ್ಯ ಸರ್ಕಾರ ಧಿಕ್ಕರಿಸಿದೆ” ಎಂದು ಆರೋಪಿಸಿದ್ದಾರೆ.
“ಬೇಸಿಗೆಯಲ್ಲಿ ಜಲಾಶಯ ಖಾಲಿ ಇತ್ತು. ಆಗ ನಿರ್ವಹಣೆ ಕಾರ್ಯ ಕೈಗೊಳ್ಳಬೇಕಿತ್ತು. ಆದರೆ, ರಾಜ್ಯ ಸರ್ಕಾರ ಉದಾಸೀನ ತೋರಿದೆ. ಸರ್ಕಾರ ಮತ್ತು ನಿರ್ವಹಣೆ ಹೊಣೆ ಹೊತ್ತವರ ತೀವ್ರ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದೆ” ಎಂದು ದೂರಿದರು.
“ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಜಲಾಶಯಗಳ ನಿರ್ವಹಣೆಗೆ ಪ್ರತಿ ವರ್ಷ 10,000 ಕೋಟಿ ವೆಚ್ಚ ಮಾಡುವುದಾಗಿ ಹೇಳಿದ್ದರು. ಆದರೆ, ಪ್ರತಿ ವರ್ಷವಲ್ಲ ಆಡಳಿತದ 5 ವರ್ಷವೂ ಹತ್ತು ಸಾವಿರ ಕೋಟಿ ಖರ್ಚು ಮಾಡಲಿಲ್ಲ. ಈಗ ರಾಜ್ಯ ಸರ್ಕಾರದ ಬಳಿ ರಸ್ತೆ ರಿಪೇರಿಗೂ ಹಣವಿಲ್ಲ. ಇನ್ನು ಸಮಾನಾಂತರ ಜಲಾಶಯ ಹೇಗೆ ನಿರ್ಮಾಣ ಮಾಡುತ್ತಾರೆ” ಎಂದು ಪ್ರಶ್ನಿಸಿದರು.