ಈ ದಿನ ಸಂಪಾದಕೀಯ | ಶೂದ್ರ ಸ್ವಾಮಿ ಕೇಸರಿ ಸ್ವಾಮಿಯಾಗುವುದು ತಪ್ಪೇ?

Date:

Advertisements
ಕೇಸರಿ ಶಾಲು ಧರಿಸುವುದು ತಪ್ಪಲ್ಲ. ರಾಜಕಾರಣದಲ್ಲಿ ಅಧಿಕಾರಕ್ಕಾಗಿ ಅವಕಾಶವಾದಿಯಾಗುವುದೂ ಅಪರಾಧವಲ್ಲ. ಆದರೆ ಶೂದ್ರಸ್ವಾಮಿ ಸಂಘಿಗಳ ಕರಸೇವಕನಾಗುವುದು, ಸಕ್ಕರೆ ನಾಡಿನಲ್ಲಿ ಕಹಿ ಬಿತ್ತಲು ಕೇಸರಿಸ್ವಾಮಿಯಾಗುವುದು, ಸೌಹಾರ್ದ ಸಹಬಾಳ್ವೆಗೆ ಬೆಂಕಿ ಹಾಕುವುದು, ನಾಡಿನ ಅಸ್ಮಿತೆಯನ್ನು ಅಡ ಇಡುವುದು, ಆ ಮೂಲಕ ಬಿಜೆಪಿ ಬೆಳೆಯಲು ಅನುಕೂಲ ಮಾಡಿಕೊಡುವುದು- ಅಪರಾಧವಲ್ಲ, ಮಹಾಪರಾಧ.

‘ನಾನು ಕೇಸರಿ ಶಾಲು ಧರಿಸುವುದು ಮಹಾನ್‌ ಅಪರಾಧವೇ, ಕೇಸರಿ ಬಣ್ಣ ಕುರಿತು ಅಸಹನೆ, ಸಂಕುಚಿತ ಭಾವನೆ ಏಕೆ?’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ಕಾಂಗ್ರೆಸ್ಸಿಗರನ್ನು ಪ್ರಶ್ನಿಸಿದ್ದಾರೆ.

ಕುಮಾರಸ್ವಾಮಿಯವರು ಕೇಳಿರುವುದರಲ್ಲಿ ತಪ್ಪಿಲ್ಲ. ಅಷ್ಟಕ್ಕೂ ಅವರು ಯಾವ ಶಾಲು ಧರಿಸಬೇಕು, ಯಾರ ಜೊತೆ ನಿಲ್ಲಬೇಕು, ಏನು ಮಾಡಬೇಕು ಎಂದು ಹೇಳುವುದಕ್ಕೆ ಇವರು ಯಾರು? ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದಾರೆ. ಅಂದಮೇಲೆ ಬಿಜೆಪಿಯ ಹೋರಾಟಗಳಲ್ಲಿ ಜೆಡಿಎಸ್ ಕೈಜೋಡಿಸುತ್ತಾರೆ. ಅವರು ಅವಕಾಶ ಕಲ್ಪಿಸಿಕೊಡುತ್ತಾರೆ, ಇವರು ಅನುಕೂಲ ಪಡೆಯತ್ತಾರೆ. ಮಂಡ್ಯದಲ್ಲಾಗಿದ್ದೂ ಅದೇ ಅಲ್ಲವೇ?

ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ಹಾರಿಸುವ ಕುರಿತು ವಿವಾದವುಂಟಾಗಿತ್ತು. ಜಿಲ್ಲಾಡಳಿತ ರಾಷ್ಟ್ರಧ್ವಜಕ್ಕೆ ಅನುಮತಿ ನೀಡಿದರೆ, ಆರೆಸ್ಸೆಸ್‌ ಹಿನ್ನೆಲೆಯ ಟ್ರಸ್ಟ್‌ ನವರು ಭಗವಾಧ್ವಜ ಹಾರಿಸಲು ಮುಂದಾಗಿದ್ದರು. ಬಿಜೆಪಿಗೆ ಬೇಕಾಗಿದ್ದು ಇದೇ ಅಲ್ಲವೇ? ನೆಲೆಯೇ ಇಲ್ಲದ ಮಂಡ್ಯದ ಮಣ್ಣಿನಲ್ಲಿ ಕೋಮುವಿಷ ಬೀಜ ಬಿತ್ತಲು, ಬೇರೂರಲು ಇಷ್ಟು ಸಾಕಲ್ಲವೇ? ಹನುಮ ಮತ್ತು ಕೇಸರಿ ಧ್ವಜ ಬಿಜೆಪಿಯ ಆಸ್ತಿಯಲ್ಲವೇ? ಅದು ಮುಗ್ಧ ಜನರ ಭಾವನಾತ್ಮಕತೆಯನ್ನು ಕೆರಳಿಸುವ ಸರಕಲ್ಲವೇ?

Advertisements

ಆ ತಕ್ಷಣವೇ ಬಿಜೆಪಿ ಮಂಡ್ಯದಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿತು. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಜೆಡಿಎಸ್‌ ನಾಯಕ ಕುಮಾರಸ್ವಾಮಿಯವರು ಮಂಡ್ಯದ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಅವರಿಗಾಗಿಯೇ ಕಾದಿದ್ದ ಬಿಜೆಪಿಗರು, ಕುಮಾರಸ್ವಾಮಿಯವರು ಕಂಡ ತಕ್ಷಣ ಕೊರಳಿಗೆ ಕೇಸರಿ ಶಾಲು ಸುತ್ತಿದರು. ಕೈಗೆ ಮೈಕ್‌ ಕೊಟ್ಟರು. ಹಿಂದು ಮುಂದು ಯೋಚಿಸದ ಶೂದ್ರಸ್ವಾಮಿ, ಆಡಳಿತಾರೂಢ ಕಾಂಗ್ರೆಸ್ಸನ್ನು ಹಣಿಯುವ ಭರಾಟೆಯಲ್ಲಿ ಭಾವಣಿಕೆಯಲ್ಲಿದ್ದ ಜನರ ಎದೆಗೆ ಬೆಂಕಿ ಇಟ್ಟರು. ಧರ್ಮ ದ್ವೇಷದ ಮಾತುಗಳನ್ನಾಡಿದರು. ಅವರ ಕೇಸರಿ ಕುಮ್ಮಕ್ಕಿಗೆ ಕೆರಳಿದ ಜನ ಕಲ್ಲು ತೂರಾಟ ನಡೆಸಿದರು. ಪರಿಸ್ಥಿತಿಯನ್ನು ತಹಬಂದಿಗೆ ತರಲು ಪೊಲೀಸರು ಲಾಠಿಚಾರ್ಜ್‌ ಮಾಡಿದರು.

ಈಗ ಪ್ರತಿಭಟನೆಯಲ್ಲಿ ಪಾಲ್ಗೊಂಡ ಒಂದಷ್ಟು ಅಮಾಯಕರ ಮೇಲೆ ಕೇಸುಗಳು ದಾಖಲಾಗಿವೆ. ಸಕ್ಕರೆ ನಾಡು ಈಗ ಕಹಿಯ ಬೀಡಾಗಿದೆ. ಬೆಂಕಿ ಕಾರುತ್ತಿದೆ, ಕುದಿಯುತ್ತಿದೆ, ಪ್ರಕ್ಷುಬ್ಧಗೊಂಡಿದೆ.

2023ರ ವಿಧಾನಸಭಾ ಚುನಾವಣೆಗೂ ಮುಂಚೆ ಸಂಘಪರಿವಾರ ಮತ್ತು ಬಿಜೆಪಿ ಇಂಥದ್ದೇ ಕುತಂತ್ರವನ್ನು ಮಂಡ್ಯ ಜಿಲ್ಲೆಯಲ್ಲಿ ಜಾರಿಗೆ ತಂದಿತ್ತು. ಅವರ ಟಾರ್ಗೆಟ್ ಟಿಪ್ಪು ಆಗಿತ್ತು. ಟಿಪ್ಪುವನ್ನು ಕೊಂದವರು ಮಂಡ್ಯದ ಒಕ್ಕಲಿಗ ವೀರರು ಎಂದು ಉರಿಗೌಡ-ನಂಜೇಗೌಡ ಎಂಬ ಕಾಲ್ಪನಿಕ ಪಾತ್ರಗಳನ್ನು ಸೃಷ್ಟಿಸಲಾಗಿತ್ತು. ದೊಡ್ಡ ಮಟ್ಟದಲ್ಲಿ ಸೋಷಿಯಲ್ ಮೀಡಿಯಾ ಮೂಲಕ ಜನರ ತಲೆಯಲ್ಲಿ ತುಂಬಿತ್ತು. ಹಿಂದೂ-ಮುಸ್ಲಿಂ ಕೋಮು ವಿಷ ಬೀಜ ಬಿತ್ತಿ, ಬೆಳೆ ತೆಗೆಯಲು ಹವಣಿಸಿತ್ತು.

ಆಗ ಇದೇ ಕುಮಾರಸ್ವಾಮಿಯವರು, ಮುಖ್ಯಮಂತ್ರಿಯಾಗಿದ್ದ ಬೊಮ್ಮಾಯಿಯವರಿಗೆ ಮಣ್ಣಿನ ಮಕ್ಕಳ ಭಾಷೆ ಬಳಸಿ, ತರಾಟೆಗೆ ತೆಗೆದುಕೊಂಡಿದ್ದರು. ಸಂಘಿಗಳ ಷಡ್ಯಂತ್ರವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು, ಮಂಡ್ಯದ ಮುಗ್ಧ ಮತದಾರರು ಬಿಜೆಪಿಯ ಮಂಕುಬೂದಿಗೆ ಮರಳಾಗಬಾರದೆಂದು ಎಚ್ಚರಿಸಿದ್ದರು.

ಈಗ ಅದೇ ಕುಮಾರಸ್ವಾಮಿಯವರು ಕೊರಳಿಗೆ ಕೇಸರಿ ಶಾಲು ಸುತ್ತಿಕೊಂಡು ಸಂಘಿಗಳ ಸೇವೆಗೆ ನಿಂತಿದ್ದಾರೆ. ಅವರು ಹೇಳಿದಂತೆ ಕೇಳುತ್ತಿದ್ದಾರೆ.

ಬಿಜೆಪಿಗೆ ಬೇಕಾಗಿದ್ದು ಇದೇ. ಬಿಜೆಪಿಗೆ ಈ ಕ್ಷಣದ ಫಸಲು ಪಡೆಯುವುದು ಮುಖ್ಯ ಅಲ್ಲವೇ ಅಲ್ಲ. ಮುಂದಿನ ದಿನಗಳಲ್ಲಿ ಮಂಡ್ಯ ಕರಾವಳಿಯಂತಾಗಬೇಕು, ತಮ್ಮ ಕೈವಶವಾಗಬೇಕು. ಆ ಮೂಲಕ ಮಂಡ್ಯದ ಶೂದ್ರರು ಸಂಘ ಪರಿವಾರದ ಕಾಲಾಳುಗಳಾಗಬೇಕು. ಗುಲಾಮರಾಗಬೇಕು. ಅದಕ್ಕಾಗಿ ಸಂಘಿಗಳು ಶೂದ್ರರ ಸಹಬಾಳ್ವೆ, ಸೌಹಾರ್ದತೆಯನ್ನು ಕೆಡಿಸಲು ಶೂದ್ರರನ್ನೇ ಎತ್ತಿ ಕಟ್ಟಿದ್ದಾರೆ. ಕೆರಗೋಡಿನಲ್ಲಿ ಕಿಡಿ ಹತ್ತಿಸಲು ಕುಮಾರಸ್ವಾಮಿ ಮತ್ತು ಸಿಟಿ ರವಿಯವರನ್ನೇ ಮುಂದೇ ಮಾಡಿದ್ದಾರೆ.

ಉದ್ದಕ್ಕೂ ಅವಕಾಶವಾದಿ ರಾಜಕಾರಣವನ್ನೇ ಉಂಡುಟ್ಟ ಕುಮಾರಸ್ವಾಮಿಯವರಿಗೆ, ಈ ಕ್ಷಣಕ್ಕೆ ಮಂಡ್ಯ ಗೆಲ್ಲುವುದು ಮುಖ್ಯವಾಗಿರಬಹುದು. ಅದಕ್ಕೆ ಬಿಜೆಪಿಯ ಹಣ ಮತ್ತು ಅಧಿಕಾರದ ಬೆಂಬಲ ಬೇಕಾಗಿರಬಹುದು. ಮಂಡ್ಯಕ್ಕೆ ಬೆಂಕಿ ಹಚ್ಚಿ ಲೋಕಸಭಾ ಚುನಾವಣೆಯಲ್ಲಿ ಅವರು ಗೆಲ್ಲಲೂಬಹುದು. ಆದರೆ, ಅದು ಕಾಲಾನಂತರ ಸಂಘಪರಿವಾರ ಮತ್ತು ಬಿಜೆಪಿಯ ತೆಕ್ಕೆಗೆ ಸರಿಯುತ್ತದೆ. ಮಣ್ಣಿನ ಮಕ್ಕಳಿಗೆ ಅವರದೇ ಮಣ್ಣಿನಲ್ಲಿ ನೆಲೆ ಇಲ್ಲದಂತಾಗುತ್ತದೆ.

ಇದು ಕುಮಾರಸ್ವಾಮಿಯವರಿಗೆ ಅರ್ಥವಾಗಬೇಕಾದರೆ, ಪಕ್ಕದ ಮಹಾರಾಷ್ಟ್ರದ ಠಾಕ್ರೆ ಕುಟುಂಬವನ್ನು ಹಾಗೂ ಶಿವಸೇನೆಯ ಇಂದಿನ ಸ್ಥಿತಿಯನ್ನು ಅವಲೋಕಿಸಬೇಕು. ದೂರದ ಉತ್ತರ ಪ್ರದೇಶದ ಮಾಯಾವತಿಯವರನ್ನು ಮತ್ತವರ ಬಿಎಸ್‌ಪಿಯ ಚಿಂತಾಜನಕ ಸ್ಥಿತಿಯನ್ನು ಧ್ಯಾನಿಸಬೇಕು. ಬಿಜೆಪಿ ಎಲ್ಲೆಲ್ಲಿ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆಯೋ, ಅಲ್ಲೆಲ್ಲ ಆ ರಾಜ್ಯಗಳ ಪ್ರಾದೇಶಿಕ ಅಸ್ಮಿತೆಯನ್ನು ಅಳಿಸಿಹಾಕಿದೆ.

ಸುಮಾರು ಅರವತ್ತು ವರ್ಷಗಳ ಕಾಲ ರಾಜ್ಯದ ಬಹುಸಂಖ್ಯಾತ ಶ್ರಮಿಕ ಸಮುದಾಯದ ಪ್ರತಿನಿಧಿಯಾಗಿ ಅಧಿಕಾರ ರಾಜಕಾರಣದಲ್ಲಿ ಮಿಂದೆದ್ದ ದೇವೇಗೌಡರು, ರೈತರ ಹಸಿರು ಟವಲ್ ಅನ್ನು ಹೆಮ್ಮೆಯಿಂದ ಹೆಗಲ ಮೇಲಿರಿಸಿಕೊಂಡಿದ್ದರು. ಚರಿತ್ರೆಯ ಪುಟಗಳಲ್ಲಿ ಮಣ್ಣಿನ ಮಗನಾಗಿ ದಾಖಲಾಗಿದ್ದರು. ಆದರೆ ಮಕ್ಕಳು ಮತ್ತು ಮೊಮ್ಮಕ್ಕಳ ಕಾಲಕ್ಕೆ ಹೆಗಲ ಮೇಲಿನ ಹಸಿರು ಟವಲ್‌ ಜಾರಿ, ಕೊರಳನ್ನು ಕೇಸರಿ ಸುತ್ತಿಕೊಂಡಿದೆ. ದೇವೇಗೌಡರ ಕುಟುಂಬವನ್ನು ಕಾಲದಿಂದಲೂ ಹಸಿರು ಶಾಲಿನಲ್ಲಿಯೇ ಕಂಡ ಕೆಲ ಕಾಂಗ್ರೆಸ್ ಸೆಕ್ಯುಲರ್ ಸ್ನೇಹಿತರು, ‘ಕೇಸರಿ, ನಿಮಗೆ ಹೊಂದುವುದಿಲ್ಲ’ ಎಂದು ಪ್ರೀತಿಯಿಂದಲೇ ಪ್ರತಿರೋಧದ ಮಾತುಗಳನ್ನಾಡುತ್ತಿದ್ದಾರೆ. ಆದರೆ ಕುಮಾರಸ್ವಾಮಿಯವರು ‘ಕೇಸರಿ ಶಾಲು ಧರಿಸುವುದು ಅಪರಾಧವೇ?’ ಎನ್ನುತ್ತಿದ್ದಾರೆ.

ಕೇಸರಿ ಶಾಲು ಧರಿಸುವುದು ತಪ್ಪಲ್ಲ. ರಾಜಕಾರಣದಲ್ಲಿ ಅಧಿಕಾರಕ್ಕಾಗಿ ಅವಕಾಶವಾದಿಯಾಗುವುದೂ ಅಪರಾಧವಲ್ಲ. ಆದರೆ ಶೂದ್ರಸ್ವಾಮಿ ಸಂಘಿಗಳ ಕರಸೇವಕನಾಗುವುದು, ಸಕ್ಕರೆ ನಾಡಿನಲ್ಲಿ ಕಹಿ ಬಿತ್ತಲು ಕೇಸರಿಸ್ವಾಮಿಯಾಗುವುದು, ಸೌಹಾರ್ದ ಸಹಬಾಳ್ವೆಗೆ ಬೆಂಕಿ ಹಾಕುವುದು, ನಾಡಿನ ಅಸ್ಮಿತೆಯನ್ನು ಅಡ ಇಡುವುದು, ಆ ಮೂಲಕ ಬಿಜೆಪಿ ಬೆಳೆಯಲು ಅನುಕೂಲ ಮಾಡಿಕೊಡುವುದು- ಅಪರಾಧವಲ್ಲ, ಮಹಾಪರಾಧ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X