ಈ ದಿನ ಸಂಪಾದಕೀಯ | ಬಿಜೆಪಿಯ ಬಾಂಡ್ ಬಹಿರಂಗಗೊಳಿಸಲು ಎಸ್‌ಬಿಐ ಏಕೆ ಹಿಂಜರಿಯುತ್ತಿದೆ?

Date:

Advertisements
ಸರ್ವೋಚ್ಚ ನ್ಯಾಯಾಲಯದ ಆದೇಶ ಪಾಲಿಸದ ಬ್ಯಾಂಕ್, ಮಾರ್ಚ್ 4ರಂದು ಸುಪ್ರೀಂ ಕೋರ್ಟ್ ಕದ ತಟ್ಟಿ, ಜೂನ್ 30ರ ತನಕ ಸಮಯಾವಕಾಶ ವಿಸ್ತರಿಸಬೇಕೆಂದು ಕೋರಿದೆ. ಅದರ ನಡುವೆಯೇ ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ದಾಖಲೆಗಳನ್ನು ತನ್ನ ವೆಬ್‌ಸೈಟ್‌ನಿಂದ ತೆಗೆದುಹಾಕಿದೆ. ಬ್ಯಾಂಕ್‌ನ ಈ ನಡೆ, ಹಲವು ಅನುಮಾನಗಳಿಗೆ ಕಾರಣವಾಗಿದೆ.

ಫೆ. 15ರಂದು ಚುನಾವಣಾ ಬಾಂಡ್ ಯೋಜನೆಯನ್ನು ಅಸಂವಿಧಾನಿಕ ಎಂದು ಘೋಷಿಸಿದ ಸುಪ್ರೀಂ ಕೋರ್ಟ್, ಅದನ್ನು ರದ್ದುಗೊಳಿಸಿತು. ಅಲ್ಲದೆ, ಎಪ್ರಿಲ್ 12, 2019ರಿಂದ ಫೆಬ್ರವರಿ 15, 2024ರ ನಡುವೆ ಮಾರಾಟ ಮಾಡಲಾದ ಬಾಂಡ್‌ಗಳ ಮೂಲಕ ದೇಣಿಗೆ ಪಡೆದ ರಾಜಕೀಯ ಪಕ್ಷಗಳ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಸ್ಟೇಟ್ ಬ್ಯಾಂಕ್‌ ಆಫ್ ಇಂಡಿಯಾಗೆ ಸೂಚಿಸಿತು.

ಸ್ಟೇಟ್ ಬ್ಯಾಂಕ್‌ ಆಫ್ ಇಂಡಿಯಾ ಇಲ್ಲಿಯವರೆಗೆ 22,217 ಬಾಂಡ್‌ಗಳನ್ನು ಮಾರಾಟ ಮಾಡಿ, 16,518 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಎಂಬ ಮಾಹಿತಿಯನ್ನು ಕೇಂದ್ರ ಹಣಕಾಸು ರಾಜ್ಯಸಚಿವರೇ ಲೋಕಸಭೆಯ ಮುಂದಿಟ್ಟಿದ್ದಾರೆ. ಈಗ ದೇಶದ ಸರ್ವೋಚ್ಚ ನ್ಯಾಯಾಲಯ, ಯಾರ್‍ಯಾರು ಯಾವ್ಯಾವ ರಾಜಕೀಯ ಪಕ್ಷಗಳಿಗೆ ಎಷ್ಟೆಷ್ಟು ಹಣ ಕೊಟ್ಟಿದ್ದಾರೆ ಎಂಬ ಮಾಹಿತಿ ಕೇಳಿದರೆ; ಅದನ್ನು ಚುನಾವಣಾ ಆಯೋಗ ದೇಶದ ಜನತೆಯ ಮುಂದಿಡಲಿದೆ ಎಂದರೆ; ಮಾಹಿತಿ ನೀಡಲು ಬ್ಯಾಂಕ್ ಹಿಂಜರಿಯುತ್ತಿದೆ.

ಸರ್ವೋಚ್ಚ ನ್ಯಾಯಾಲಯದ ಆದೇಶ ಪಾಲಿಸದ ಬ್ಯಾಂಕ್, ಮಾರ್ಚ್ 4ರಂದು ಸುಪ್ರೀಂ ಕೋರ್ಟ್ ಕದ ತಟ್ಟಿ, ಜೂನ್ 30ರ ತನಕ ಸಮಯಾವಕಾಶ ವಿಸ್ತರಿಸಬೇಕೆಂದು ಕೋರಿದೆ. ಅದರ ನಡುವೆಯೇ ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸ್ಟೇಟ್‌ ಬ್ಯಾಂಕ್‌ ತನ್ನ ವೆಬ್‌ಸೈಟ್‌ನಿಂದ ತೆಗೆದುಹಾಕಿದೆ. ಆಪರೇಟಿಂಗ್‌ ಗೈಡ್‌ಲೈನ್ಸ್‌ ಫಾರ್‌ ಡೋನರ್ಸ್‌ ಹಾಗೂ ಫ್ರೀಕ್ವೆಂಟ್ಲಿ ಆಸ್ಕ್ಡ್‌ ಕ್ವೆಶ್ಚನ್ಸ್‌ʼಗೆ ಸಂಬಂಧಿಸಿದ ವೆಬ್‌ಪುಟಗಳನ್ನೇ ಇಲ್ಲದಂತೆ ಮಾಡಿದೆ.

Advertisements

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಸಾರ್ವಜನಿಕ ವಲಯದ ಬ್ಯಾಂಕ್. ಬ್ಯಾಂಕಿಂಗ್ ವಲಯದಲ್ಲಿ ಮುಂಚೂಣಿಯಲ್ಲಿರುವ; ಪಾರದರ್ಶಕತೆ ಮತ್ತು ನಂಬಿಕೆಗೆ ಹೆಸರಾದ ಬಹು ದೊಡ್ಡ ಬ್ಯಾಂಕ್. ಪ್ರಜಾಪ್ರಭುತ್ವದ ಆಶಯಗಳನ್ನು ಸಾಕಾರಗೊಳಿಸಿದ ಬ್ಯಾಂಕ್. ಇಂತಹ ನಂಬಿಕಾರ್ಹ ಬ್ಯಾಂಕ್‌ನ ಇತ್ತೀಚಿನ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಾರ್ವಜನಿಕ ವಲಯದ ಪ್ರಶ್ನೆಗಳಿಗೆ, ಟೀಕೆಗಳಿಗೆ, ಮೀಮ್ಸ್‌ಗಳಿಗೆ ಗುರಿಯಾಗಿದೆ.

ಬ್ಯಾಂಕ್‌ನ ನಡೆಯನ್ನು ಅನುಮಾನಿಸುತ್ತಿರುವ ಹೊತ್ತಿನಲ್ಲಿಯೇ ನಿವೃತ್ತ ಹಣಕಾಸು ಕಾರ್ಯದರ್ಶಿ ಸುಭಾಷ್ ಚಂದ್ರ ಗಾರ್ಗ್, ‘ಇದು ಡಿಜಿಟಲ್ ಯುಗ, ಕೇವಲ ಒಂದೇ ಒಂದು ಬಟನ್ ಕ್ಲಿಕ್ ಮಾಡಿದರೆ, ಮಾಹಿತಿ ನಿಮ್ಮ ಕಣ್ಣಮುಂದಿರುತ್ತದೆ. ಈ ಮಾಹಿತಿ ಸದಾ ಸಿದ್ಧವಾಗಿದ್ದು, ಯಾವಾಗ ಬೇಕಾದರೂ ಸಿಗುವಂತಿರುತ್ತದೆ. ಕೇಳಿದವರಿಗೆ ಕೊಡಲು ಹೆಚ್ಚಿಗೆ ಎಂದರೆ ಒಂದು ದಿನ ಸಾಕು’ ಎಂದಿರುವುದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹಿಂಜರಿಕೆಯ ಹಿಂದಿನ ಸತ್ಯವನ್ನು ಬಯಲುಗೊಳಿಸುತ್ತಿದೆ.

ಮತ್ತೊಂದು ಮಹತ್ವದ ಸಂಗತಿ, ಬ್ಯಾಂಕ್ ಕೇಳಿರುವ ಸಮಯಾವಕಾಶ ಗಮನಿಸಿದರೆ, ಜೂನ್ 30ಕ್ಕೆ ದೇಶದಲ್ಲಿ ಲೋಕಸಭಾ ಚುನಾವಣೆ ಮುಗಿದು, ಕೇಂದ್ರದಲ್ಲಿ ಹೊಸ ಸರ್ಕಾರ ರಚನೆಯಾಗಿರುತ್ತದೆ. ಅಂದಮೇಲೆ, ಬ್ಯಾಂಕ್ ಕೇಳಿರುವ ‘ಸಮಯಾವಕಾಶ’ ಯಾವ ರಾಜಕೀಯ ಪಕ್ಷದ ಅನುಕೂಲಕ್ಕಾಗಿ ಎಂಬ ಪ್ರಶ್ನೆಯನ್ನೂ ಎತ್ತುತ್ತದೆ.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಸಾರ್ವಜನಿಕ ವಲಯದ ಸ್ವತಂತ್ರ ಸಂಸ್ಥೆಯಾಗಿದ್ದರೂ, ಹಲವಾರು ಸಂದರ್ಭಗಳಲ್ಲಿ ಸರ್ಕಾರದ ಭಾಗವಾಗಿ ಕಾರ್ಯನಿರ್ವಹಿಸಿದೆ. 2018 ರಲ್ಲಿ, ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಬಾಂಡ್‌ಗಳ ಡೇಟಾವನ್ನು ಹಂಚಿಕೊಳ್ಳಲು ಹಣಕಾಸು ಸಚಿವಾಲಯದಿಂದ ಅದು ಅನುಮತಿಯನ್ನು ಪಡೆದುಕೊಂಡಿರುವ ಮಾಹಿತಿ ಇಡೀ ದೇಶಕ್ಕೇ ಗೊತ್ತಿದೆ. ಅಷ್ಟೇ ಏಕೆ, ಫೆ. 15ರ ಸುಪ್ರೀಂ ಕೋರ್ಟ್ ಆದೇಶದ ನಂತರ, ಎಸ್‌ಬಿಐ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ.

ಇಲ್ಲಿಯವರೆಗೆ ಬಿಜೆಪಿ ಮತ್ತು ಪ್ರಧಾನಿ ಮೋದಿಯವರು, ತಮ್ಮ ಅನುಕೂಲಕ್ಕೆ ತಕ್ಕಂತೆ ಸರ್ಕಾರಿ ಏಜೆನ್ಸಿಗಳಾದ ಐಟಿ, ಇಡಿ, ಸಿಬಿಐ, ಚುನಾವಣಾ ಆಯೋಗವನ್ನು ಬಳಸಿಕೊಂಡು, ಅವುಗಳ ಘನತೆ-ಗೌರವಗಳಿಗೆ ಕುಂದುಂಟು ಮಾಡಿದ್ದರು. ಈಗ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರತಿ ನಡೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅದು ಆಳುವ ಸರ್ಕಾರದ ಅಡಿಯಾಳಾಗಿ ಕಾರ್ಯನಿರ್ವಹಿಸುತ್ತಿರುವುದು ಹಾಗೂ ಬೃಹತ್ ಬಾಂಡ್ ಹಗರಣದಲ್ಲಿ ಬಿಜೆಪಿಗೆ ಕೋಟಿಗಟ್ಟಲೆ ಹಣ ಕೊಟ್ಟವರ ಪಟ್ಟಿ ಬಿಡುಗಡೆ ಮಾಡದಿರುವುದು ಎದ್ದುಕಾಣುತ್ತಿದೆ. ತನ್ನ ಸುದೀರ್ಘ ಕಾಲದ ಸೇವೆಯಿಂದ ದೇಶದ ಜನತೆಯ ವಿಶ್ವಾಸ ಗಳಿಸಿದ್ದ ಬ್ಯಾಂಕ್, ಈಗ ಮೋದಿಯ ಮೋಡಿಗೋ, ಒತ್ತಡಕ್ಕೋ ಒಳಗಾಗಿರುವುದು ದುರದೃಷ್ಟಕರ.

ಚೌಕಿದಾರ್ ಎಂದು ಹೇಳುತ್ತಲೇ ಅಧಿಕಾರಕ್ಕೇರಿದ ಮೋದಿಯವರ ಮೂಗಿನಡಿ ನಡೆದ ವಂಚನೆಯೊಂದು ಬಯಲಾಗಿರುವ ಸಂದರ್ಭದಲ್ಲಿಯೇ, ಪ್ರಜಾಪ್ರಭುತ್ವದ ಮೇಲಿನ ದಾಳಿಯ ಮುಂದುವರಿದ ಭಾಗವಾಗಿ ಬ್ಯಾಂಕ್ ಕೂಡ, ಅವರ ಸ್ವಾರ್ಥ ರಾಜಕಾರಣಕ್ಕೆ ಬಲಿಯಾಗುತ್ತಿದೆ.

ಖಾಸಗಿ ಕಂಪನಿಗಳ ಮೇಲೆ ಐಟಿ, ಇಡಿ, ಸಿಬಿಐ ದಾಳಿ ನಡೆಸಿ ಚುನಾವಣಾ ಬಾಂಡ್‌ಗಳ ಮೂಲಕ 6,500 ಕೋಟಿ ರೂಪಾಯಿಗಳನ್ನು ಅನೈತಿಕ ಮಾರ್ಗದಿಂದ ಸಂಗ್ರಹಿಸಿರುವ ಭಾರತೀಯ ಜನತಾ ಪಕ್ಷ, ಈಗ ಕಾರ್ಪೊರೇಟ್ ಕಪ್ಪು ಹಣವನ್ನು ಬಾಂಡ್ ಮೂಲಕ ಬಿಳಿ ಮಾಡಿದೆ; ಭ್ರಷ್ಟಾಚಾರವನ್ನು ಸಾಂಸ್ಥೀಕರಿಸಿದೆ. ಹತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರ ಮಾಡಿರುವ ಸಾಲ, ದುರಾಡಳಿತ, ನಿರುದ್ಯೋಗ, ಹಣದುಬ್ಬರದ ಬಗ್ಗೆ ಜನ ಪ್ರಶ್ನಿಸಿದರೆ, ಜೈ ಶ್ರೀರಾಮ್ ಎನ್ನುತ್ತಿದೆ. ಈಗಲೂ ಜನ ಎಚ್ಚೆತ್ತುಕೊಳ್ಳದಿದ್ದರೆ, ದೇಶ ಸರ್ವಾಧಿಕಾರಿಯ ಕೈಗೆ ಸಿಕ್ಕು ಸರ್ವನಾಶವಾಗಲಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X