ಬೆಂಗಳೂರಿನ ವೈಟ್‌ಫೀಲ್ಡ್ ಬಳಿಯ ಕುಂದಲಹಳ್ಳಿರುವ ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಂಕಿತನ ಪತ್ತೆಗಾಗಿ ಎನ್‌ಐಎ ಅಧಿಕಾರಿಗಳು ಇದೀಗ ನಾಲ್ಕು ಫೋಟೋ ಬಿಡುಗಡೆ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಎನ್‌ಐಎ, ”ರಾಮೇಶ್ವರಂ ಕೆಫೆ ಸ್ಪೋಟಕ್ಕೆ ಸಂಬಂಧಿಸಿದಂತೆ, ಶಂಕಿತನನ್ನು ಗುರುತಿಸಲು ನಾಗರಿಕರು ಸಹಕರಿಸಬೇಕು” ಎಂದು ಎನ್‌ಐಎ ಕೋರಿದೆ.
”ಶಂಕಿತನನ್ನು ಕಂಡವರು 080-29510900, 8904241100 ಗೆ ಕರೆ ಮಾಡಿ ಅಥವಾ ಯಾವುದೇ ಮಾಹಿತಿಯೊಂದಿಗೆ [email protected] ಗೆ ಇಮೇಲ್ ಮಾಡಿ. ಮಾಹಿತಿ ನೀಡಿದವರ ಗುರುತನ್ನು ಗೌಪ್ಯವಾಗಿ ಇಡಲಾಗುತ್ತದೆ” ಎಂದು ಹೇಳಿದೆ.
ಈಗಾಗಲೇ ಆರೋಪಿಯ ಸುಳಿವು ಕೊಟ್ಟವರಿಗೆ ₹10 ಲಕ್ಷ ಬಹುಮಾನ ನೀಡುವುದಾಗಿ ಎನ್‍ಐಎ ಘೋಷಿಸಿತ್ತು. ಇದೀಗ, ಆರೋಪಿ ಓಡಾಡಿರುವ ಸ್ಥಳದಲ್ಲಿ ಸಿಕ್ಕಂತಹ ಕೆಲವು ಫೋಟೋ ಬಿಡುಗಡೆ ಮಾಡಿದೆ.
ಸಮುದ್ರ ಮಾರ್ಗದ ಮೂಲಕ ಪರಾರಿಯಾಗುವ ಸಾಧ್ಯತೆ
ಇನ್ನು ರಾಮೇಶ್ವರಂ ಕೆಫೆ ಬ್ಲಾಸ್ಟ್‌ಗೆ ಸಂಬಂಧಿಸಿದಂತೆ ಶಂಕಿತರು ಸಮುದ್ರ ಮಾರ್ಗದ ಮೂಲಕ ಪರಾರಿಯಾಗುವ ಸಾಧ್ಯತೆ ಇದ್ದು, ಈ ಹಿನ್ನೆಲೆ, ಮಂಗಳೂರು ಕರಾವಳಿ ಕಾವಲು ಪಡೆಗಳಲ್ಲಿ ತಪಾಸಣೆ ನಡೆಸಲು ಪೊಲೀಸರಿಗೆ ಎನ್‌ಐಎ ಸೂಚನೆ ನೀಡಿದೆ.
ಎನ್‌ಐಎ ಸೂಚನೆಯಂತೆ ಇದೀಗ, ಪೊಲೀಸರು ಬಂದರಿನಲ್ಲಿರುವ ಬೋಟ್‌ಗಳನ್ನು ತಪಾಸಣೆ ಮಾಡುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ | ಬಾಂಬರ್ ಓಡಾಟದ ಮತ್ತೆರಡು ವಿಡಿಯೋ ಬಿಡುಗಡೆ ಮಾಡಿದ ಎನ್‌ಐಎ
ಎರಡು ವಿಡಿಯೋ ಬಿಡುಗಡೆ
ಕಳೆದ ದಿನ ಶಂಕಿತ ಆರೋಪಿ ಬಿಎಂಟಿಸಿ ಬಸ್ ಹಾಗೂ ಬಳ್ಳಾರಿ ಬಸ್ ನಿಲ್ದಾಣದಲ್ಲಿ ಓಡಾಟ ನಡೆಸಿರುವ ವಿಡಿಯೊವನ್ನು ಎನ್‌ಐಎ ಬಿಡುಗಡೆ ಮಾಡಿತ್ತು.
ಬಿಎಂಟಿಇ ಬಸ್‌ನಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿ ಆಧಾರದಲ್ಲಿ ಆರೋಪಿಯ ವಿಡಿಯೋ ಬಿಡುಗಡೆ ಮಾಡಲಾಗಿದೆ. ಕ್ಯಾಪ್, ಮಾಸ್ಕ್ ಹಾಗೂ ಕನ್ನಡಕ ಧರಿಸಿರುವ ಆರೋಪಿಯು ಬಸ್‌ನಲ್ಲಿ ಕುಳಿತು ಪ್ರಯಾಣಿಸುತ್ತಿರುವ ದೃಶ್ಯ ಸೆರೆಯಾಗಿದೆ.
NIA seeks citizen cooperation in identifying the suspect linked to the #RameswaramCafeBlastCase. 📞 Call 08029510900, 8904241100 or email to [email protected] with any information. Your identity will remain confidential. #BengaluruCafeBlast pic.twitter.com/ISTXBZrwDK
— NIA India (@NIA_India) March 9, 2024
ಇನ್ನೊಂದು ವಿಡಿಯೋದಲ್ಲಿ ಶಂಕಿತ ತುಮಕೂರು ಮೂಲಕ ಬಳ್ಳಾರಿಗೆ ತೆರಳಿರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಅಲ್ಲಿಂದ ಬೀದರ್ನತ್ತ ಹೊರಟಿರುವುದಾಗಿ ಮಾಹಿತಿ ದೊರೆತಿತ್ತು. ಅದರಂತೆ, ಇದೀಗ ಬಾಂಬರ್ ಬಳ್ಳಾರಿ ಬಸ್ ನಿಲ್ದಾಣದಲ್ಲಿ ಓಡಾಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.



