ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯ ಆಗಿಲ್ಲವೆಂದು ಕೇಂದ್ರ ಹಣಕಾಸು ಸಚಿವೆ ಹಾರಿಕೆಯ ಉತ್ತರ ನೀಡುವುದನ್ನು ಬಿಡಬೇಕು. ದಾಖಲೆ ದಸ್ತಾವೇಜುಗಳ ಪುರಾವೆಗಳನ್ನಿಟ್ಟು ಮಾತಾಡಬೇಕು ಎಂದು ಮುಖ್ಯಮಂತ್ರಿ ಸವಾಲು ಎಸೆದಿದ್ದಾರೆ. ಸಚಿವ ಕೃಷ್ಣಬೈರೇಗೌಡರು ಕೇಂದ್ರ ಸಚಿವೆಯನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ. ಈ ಸವಾಲನ್ನು ಅವರು ಒಪ್ಪಿಕೊಳ್ಳಬೇಕು.
ಕೇಂದ್ರ ಮತ್ತು ರಾಜ್ಯಗಳ ಸಂಬಂಧ ಹಿಂದೆಂದೂ ಈ ಪರಿ ಬಿಗಡಾಯಿಸಿರಲಿಲ್ಲ. ಭಾರತ ಒಕ್ಕೂಟವನ್ನು ಕಳವಳಕ್ಕೆ ದೂಡಿರುವ ಈ ದುಸ್ಥಿತಿಯ ಹೊಣೆಯನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವೇ ಸಾರಾಸಗಟಾಗಿ ಹೊರಬೇಕು. ವಿಶೇಷವಾಗಿ ಬಿಜೆಪಿಗೆ ಜನಾದೇಶ ದೊರೆಯದಿರುವ ರಾಜ್ಯ ಸರ್ಕಾರಗಳನ್ನು ಅನ್ಯಾಯಗಳಿಗೆ ಗುರಿ ಮಾಡಲಾಗುತ್ತಿದೆ. ಈ ತಾರತಮ್ಯವನ್ನು ತೀವ್ರವಾಗಿ ಪ್ರತಿಭಟಿಸುವವರಿಗೆ ದೇಶದ್ರೋಹಿಯ ಹಣೆಪಟ್ಟಿ ಹಚ್ಚಲಾಗುತ್ತಿದೆ.
ಗಣರಾಜ್ಯ ಒಕ್ಕೂಟ ತತ್ವಗಳನ್ನು ನಾಶಪಡಿಸಲಾಗುತ್ತಿದೆ. ತೀರ್ಮಾನಗಳನ್ನು ತೆಗೆದುಕೊಳ್ಳುವ ಮತ್ತು ತೆರಿಗೆ ಸಂಗ್ರಹಿಸಿ ಅದನ್ನು ವಿನಿಯೋಗಿಸುವ ರಾಜ್ಯ ಸರ್ಕಾರಗಳ ಹಕ್ಕುಗಳನ್ನು ತುಳಿಯಲಾಗುತ್ತಿದೆ. ಬಿಜೆಪಿಯನ್ನು ವಿಧಾನಸಭೆಗೆ ಆರಿಸದೆ ಇರುವ ರಾಜ್ಯಗಳನ್ನು ವಿಶೇಷ ಅನ್ಯಾಯಕ್ಕೆ ಗುರಿಪಡಿಸಲಾಗುತ್ತಿದೆ.
ಕರ್ನಾಟಕಕ್ಕೆ ತೆರಿಗೆ ಆದಾಯ ಹಂಚಿಕೆಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಲು 6000 ಕೋಟಿ ರುಪಾಯಿಗಳ ವಿಶೇಷ ಪರಿಹಾರ ನೀಡಬೇಕೆಂದು ಕೇಂದ್ರದ 15ನೆಯ ಹಣಕಾಸು ಆಯೋಗ ಶಿಫಾರಸಿಗೆ ಮೋದಿ ಸರ್ಕಾರ ಕಿವುಡಾಗಿದೆ. ಬಿಡುಗಡೆ ಮಾಡುವಂತೆ ದನಿಯೇರಿಸಿ ಕೇಳಿದರೆ ಐದು ಗ್ಯಾರಂಟಿ ಯೋಜನೆಗಳಿಗೆ ರಾಜ್ಯ ಸರ್ಕಾರ ತಾನೇ ಹಣ ಹೊಂದಿಸಿಕೊಳ್ಳಬೇಕು ಎಂಬುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯಿಸಿದ್ದಾರೆ. ಇದೊಂದು ಅರ್ಥವೇ ಇಲ್ಲದ ಅಸಂಬದ್ಧ ಅಪಲಾಪ.
ಗ್ಯಾರಂಟಿ ಯೋಜನೆಗಳಿಗೆ ಬಜೆಟ್ಟಿನಲ್ಲಿಯೇ ಹಣಕಾಸು ಹಂಚಿಕೆ ಮಾಡಿರುವುದಾಗಿಯೂ, ರಾಜ್ಯಕ್ಕೆ ನ್ಯಾಯವಾಗಿ ಸಲ್ಲಬೇಕಿರುವ ಪರಿಹಾರವನ್ನು ತಾವು ಕೇಳುತ್ತಿರುವುದಾಗಿಯೂ, ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಕ ಸಮಜಾಯಿಷಿ ನೀಡಿದ್ದಾರೆ. ನಮ್ಮ ತೆರಿಗೆ ಪಾಲು ನಮ್ಮ ಹಕ್ಕು, ಕನ್ನಡಿಗರು ತಮ್ಮ ಪಾಲು ಕೇಳುತ್ತಿದ್ದಾರೆಯೇ ವಿನಾ ಭಿಕ್ಷೆ ಬೇಡುತ್ತಿಲ್ಲ ಎಂದು ಝಾಡಿಸಿದ್ದಾರೆ.
ಪ್ರತಿವರ್ಷ ಕನ್ನಡಿಗರ ಬೆವರ ಗಳಿಕೆಯ 4.30 ಲಕ್ಷ ಕೋಟಿ ರುಪಾಯಿಯಷ್ಟು ತೆರಿಗೆಯನ್ನು ಕೇಂದ್ರ ಸರ್ಕಾರ ಕರ್ನಾಟಕದಿಂದ ಸಂಗ್ರಹಿಸುತ್ತಿದೆ. ಈ ಪೈಕಿ ನಮಗೆ ವಾಪಸು ಕೊಟ್ಟಿರುವುದು ಕೇವಲ 50,257 ಕೋಟಿ ರುಪಾಯಿ. ನಾವು ನೂರು ರುಪಾಯಿ ತೆರಿಗೆಯನ್ನು ಕೇಂದ್ರಕ್ಕೆ ಪಾವತಿ ಮಾಡಿದರೆ, ಕೇಂದ್ರ ಸರ್ಕಾರ ನಮಗೆ ವಾಪಸು ನೀಡುವುದು 12ರಿಂದ 13 ರೂಪಾಯಿ ಮಾತ್ರ. ಜಿ.ಎಸ್.ಟಿ., ವಿಶೇಷ ಅನುದಾನ, ಗೃಹನಿರ್ಮಾಣ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ, ಅನ್ನಭಾಗ್ಯದ ಅಕ್ಕಿಯಲ್ಲಿ ಸಾಲು ಸಾಲು ಅನ್ಯಾಯ ನಡೆದಿದೆ. ಈ ಅನ್ಯಾಯದ ವಿರುದ್ಧ ದನಿ ಎತ್ತಬೇಕೆಂದು ಮುಖ್ಯಮಂತ್ರಿಯವರು ಪ್ರತಿಯೊಬ್ಬ ಕನ್ನಡಿಗನಿಗೆ ಕರೆ ನೀಡಿದ್ದಾರೆ.
ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯ ಆಗಿಲ್ಲವೆಂದು ಕೇಂದ್ರ ಹಣಕಾಸು ಸಚಿವೆ ಹಾರಿಕೆಯ ಉತ್ತರ ನೀಡುವುದನ್ನು ಬಿಡಬೇಕು. ದಾಖಲೆ ದಸ್ತಾವೇಜುಗಳ ಪುರಾವೆಗಳನ್ನಿಟ್ಟು ಮಾತಾಡಬೇಕು ಎಂದು ಮುಖ್ಯಮಂತ್ರಿ ಸವಾಲು ಎಸೆದಿದ್ದಾರೆ. ಅವರ ಸಹೋದ್ಯೋಗಿ ಕಂದಾಯ ಸಚಿವ ಕೃಷ್ಣಬೈರೇಗೌಡರು ಕೇಂದ್ರ ಸಚಿವೆಯನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ. ಕೇಂದ್ರದ ಹಣಕಾಸು ಸಚಿವರು ಕೃಷ್ಣಬೈರೇಗೌಡರ ಸವಾಲನ್ನು ಒಪ್ಪಿಕೊಳ್ಳಬೇಕು.
ಮುಖ್ಯಮಂತ್ರಿಯವರ ಆರೋಪಗಳು ಆಧಾರರಹಿತವೇನೂ ಅಲ್ಲ. ಕೇಂದ್ರ ಸರ್ಕಾರವು ರಾಜ್ಯಗಳಿಗೆ ಆರ್ಥಿಕ ಸಂಪನ್ಮೂಲ ಹಂಚಿಕೆಯಲ್ಲಿ ಭೇದ ಭಾವ ತೋರುತ್ತಿದೆ. ಕೆಲವು ರಾಜ್ಯಗಳು ಕೇಂದ್ರಕ್ಕೆ ಸಲ್ಲಿಸುವ ಒಂದು ರೂಪಾಯಿಯ ಆದಾಯದಲ್ಲಿ 23 ಪೈಸೆಗಳನ್ನು ಅವುಗಳಿಗೆ ವಾಪಸು ಕೊಡಲಾಗುತ್ತಿದೆ. ಕೆಲವು ರಾಜ್ಯಗಳಿಗೆ ಒಂದು ರೂಪಾಯಿಗೆ ಒಂದು ರೂಪಾಯಿ ಅಥವಾ ಎರಡು ರೂಪಾಯಿಯನ್ನು ಕೊಡಲಾಗುತ್ತಿದೆ. ಈ ತಾರತಮ್ಯ ಕುರಿತು ಮೊದಲೇ ಎಚ್ಚರಿಕೆ ನೀಡುವ ಘೋಷಣೆಯೇ ಡಬಲ್ ಎಂಜಿನ್ ಸರ್ಕಾರ. ಕೇಂದ್ರ ಮತ್ತು ರಾಜ್ಯಗಳೆರಡರಲ್ಲೂ ಬಿಜೆಪಿಯನ್ನು ಆರಿಸದೆ ಹೋದರೆ ಶಿಕ್ಷೆ ಕಾದಿದೆ ಎಂಬ ಸಂದೇಶ ಡಬಲ್ ಎಂಜಿನ್ ಸರ್ಕಾರದ ಘೋಷಣೆಯಲ್ಲಿ ಅಡಗಿದೆ.
ಹಣಕಾಸು ಆಯೋಗವು ರಾಜ್ಯಗಳಿಗೆ ಹಂಚಿಕೆ ಮಾಡುವ ಹಣಕಾಸು ಸಂಪನ್ಮೂಲಗಳನ್ನು ಕಡಿತ ಮಾಡಬೇಕೆಂದು ಖುದ್ದು. ಪ್ರಧಾನಮಂತ್ರಿಯವರೇ ಬಯಸಿದ್ದರಂತೆ. ನೀತಿ ಆಯೋಗದ ಮಾಜಿ ಮುಖ್ಯಸ್ಥರೊಬ್ಬರು ಇತ್ತೀಚೆಗೆ ಈ ಸಂಗತಿಯನ್ನು ಸಂದರ್ಶನವೊಂದರಲ್ಲಿ ಹೊರ ಹಾಕಿದ್ದಾರೆ. ಕೇಂದ್ರ ರಾಜ್ಯಗಳ ಸಂಬಂಧ ಮೋದಿಯವರ ರಾಜ್ಯಭಾರದಲ್ಲಿ ಹೊಸ ಪಾತಾಳಕ್ಕೆ ಕುಸಿಯತೊಡಗಿದೆ. ಬಿಜೆಪಿಯೇತರ ರಾಜ್ಯ ಸರ್ಕಾರಗಳು ಕೇಂದ್ರದ ದಮನ ಮತ್ತು ತಾರತಮ್ಯ ನೀತಿಯ ವಿರುದ್ಧ ಸುಪ್ರೀಮ್ ಕೋರ್ಟಿನ ಕದ ಬಡಿದಿವೆ. ಕಾಯಿದೆಬದ್ಧವಾಗಿ ನೀಡಬೇಕಿರುವ ಬರಗಾಲ ಪರಿಹಾರ ನೆರವನ್ನು ಕರ್ನಾಟಕಕ್ಕೆ ನಿರಾಕರಿಸಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ಸುಪ್ರೀಮ್ ಕೋರ್ಟಿನಲ್ಲಿ ಇತ್ತೀಚೆಗೆ ರಿಟ್ ಅರ್ಜಿ ಸಲ್ಲಿಸಿತು.
ತಮಿಳುನಾಡು, ಕೇರಳ, ತೆಲಂಗಾಣ, ಪಶ್ಚಿಮ ಬಂಗಾಳ ಹೀಗೆ ಹಲವು ರಾಜ್ಯಗಳು ಸುಪ್ರೀಮ್ ಕೋರ್ಟಿನ ಮೆಟ್ಟಿಲೇರಿವೆ. ರಾಜ್ಯಪಾಲರು ಪಕ್ಷ ರಾಜಕಾರಣದಲ್ಲಿ ತೊಡಗಿದ್ದಾರೆಂದು ಆರೋಪಿಸಿವೆ. ಸಂವಿಧಾನದ ಅಡಿಪಾಯವನ್ನೇ ಅಲುಗಿಸುವ ಕೃತ್ಯಗಳಲ್ಲಿ ರಾಜ್ಯಪಾಲರು ತೊಡಗಿದ್ದಾರೆಂಬ ಆರೋಪ ಕಳೆದ ಏಳೆಂಟು ವರ್ಷಗಳಲ್ಲಿ ಅತ್ಯಧಿಕವಾಗಿ ಕೇಳಿಬರುತ್ತಿದೆ. ಪ್ರತಿಪಕ್ಷಗಳ ಸರ್ಕಾರಗಳಿಗೆ ಅಡ್ಡಿ ಆತಂಕಗಳನ್ನು ಒಡ್ಡುವುದು ಕೇಂದ್ರ ಬಿಜೆಪಿ ಸರ್ಕಾರ ನೇಮಕ ಮಾಡಿದ ರಾಜ್ಯಪಾಲರ ನೇರ ಕಾರ್ಯಸೂಚಿಯೇ ಆಗಿಬಿಟ್ಟಿದೆ. ರಾಜ್ಯಪಾಲರು ರಾಜ್ಯ ಸರ್ಕಾರಗಳ ತಲೆಯ ಮೇಲೆ ಕುಳಿತುಕೊಂಡು ಕಾರುಬಾರು ನಡೆಸುವ ‘ಸೂಪರ್ ಸರ್ಕಾರ’ಗಳೇನೂ ಅಲ್ಲ. ಅವರು ರಾಜ್ಯಗಳಲ್ಲಿ ರಾಷ್ಟ್ರಪತಿಯವರ ಪ್ರತಿನಿಧಿಗಳೇ ವಿನಾ ಕೇಂದ್ರ ಸರ್ಕಾರದ ರಾಜಕೀಯ ಏಜೆಂಟರಲ್ಲ.
‘ವಾಸ್ತವತೆಯನ್ನು ತಿರುಚಿ ಹೊಸ ಭ್ರಮೆಗಳನ್ನು ಸೃಷ್ಟಿಸಲಾಗುತ್ತಿದೆ. ಗಣರಾಜ್ಯ ಒಕ್ಕೂಟದ ತತ್ವಗಳನ್ನು ಗಾಳಿಗೆ ತೂರಲಾಗಿದೆ’ ಎಂದು ಹೆಸರಾಂತ ರಾಜಕೀಯ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್ ಹೇಳಿದ್ದಾರೆ.
‘The Crooked Timber of New India’ ಪರಕಾಲ ಅವರ ಇತ್ತೀಚಿನ ಮಹತ್ವದ ಕೃತಿ. ಭಾರತ ಗಣರಾಜ್ಯ ತೀವ್ರ ಸಂಕಟಕ್ಕೆ ಸಿಲುಕಿದೆ. ಈ ಸಂದರ್ಭದಲ್ಲಿ ಮೌನ ವಹಿಸುವುದು ಸರಿಯಾದ ಆಯ್ಕೆಯಲ್ಲ ಎಂಬುದು ಈ ಕೃತಿಯ ಸಂದೇಶ. ಈಗ ನಡೆಯುತ್ತಿರುವ ಈ ವಿದ್ಯಮಾನ ಮುಂದಿನ ಐದು-ಹತ್ತು ವರ್ಷಗಳ ತನಕ ಮುಂದುವರೆದರೆ ಗಣರಾಜ್ಯ ಒಕ್ಕೂಟ ವ್ಯವಸ್ಥೆಯು ಇನ್ನಷ್ಟು ಒತ್ತಡ ಎದುರಿಸಲಿದೆ. ಪರಿಸ್ಥಿತಿ ಗಂಭೀರವಾಗಲಿದೆ ಎಂಬುದಾಗಿ ಅವರು ನೀಡಿರುವ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ.
ಕೇಂದ್ರ ಮತ್ತು ರಾಜ್ಯಗಳ ಅಧಿಕಾರಗಳನ್ನು ಸಂವಿಧಾನ ಸ್ಪಷ್ಟವಾಗಿ ವಿಂಗಡಿಸಿಕೊಟ್ಟಿದೆ. ಕೇಂದ್ರದ ಅಧಿಕಾರಗಳು, ರಾಜ್ಯ ಸರ್ಕಾರಗಳ ಅಧಿಕಾರಗಳು ಹಾಗೂ ಕೇಂದ್ರ-ರಾಜ್ಯದ ಉಭಯ ಪಟ್ಟಿಯಲ್ಲಿನ ಅಧಿಕಾರಗಳು ಸಂವಿಧಾನದಲ್ಲಿ ನಮೂದಾಗಿವೆ. ಹೀಗಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರರ ಅಧಿಕಾರ ವ್ಯಾಪ್ತಿಯನ್ನು ಅತಿಕ್ರಮಿಸುವಂತಿಲ್ಲ. ಕೇಂದ್ರ ಸರ್ಕಾರವು ಸಂಸತ್ತಿನ ಮೂಲಕ ರಾಜ್ಯಗಳ ಅಧಿಕಾರ ವ್ಯಾಪ್ತಿಯನ್ನು ಮತ್ತು ರಾಜ್ಯ ಸರ್ಕಾರಗಳು ವಿಧಾನಮಂಡಲಗಳ ಮೂಲಕ ಕೇಂದ್ರದ ಅಧಿಕಾರ ವ್ಯಾಪ್ತಿಯನ್ನು ಒತ್ತುವರಿ ಮಾಡಲು ಸಂವಿಧಾನದಲ್ಲಿ ಅವಕಾಶ ಇಲ್ಲ. ಈ ಪರಸ್ಪರರ ಅಧಿಕಾರವ್ಯಾಪ್ತಿಯನ್ನು ಗೌರವಿಸಿ ನಡೆದುಕೊಳ್ಳಬೇಕು. ಹಾಗೆ ಗೌರವಿಸದೆ ಹೋದರೆ ಮೋದಿಯವರು ಬರಿದೇ ಭಾಷಣದಲ್ಲಿ ಹೇಳುತ್ತ ಬಂದಿರುವ ಸಹಕಾರಿ ಒಕ್ಕೂಟ ವ್ಯವಸ್ಥೆ ಕೇವಲ ಬಾಯಿಮಾತಿನ ಬೊಗಳೆಯಾಗಿ ಉಳಿಯುತ್ತದೆ.
ಸಹಕಾರಿ ಒಕ್ಕೂಟ ವ್ಯವಸ್ಥೆಯ ನುಡಿಯನ್ನು ಮೋದಿ ಸರ್ಕಾರ ಅಕ್ಷರಗಳಲ್ಲಿ ಇಟ್ಟಿದೆಯೇ ವಿನಾ ಆಶಯಗಳ ವಾಸ್ತವದಲ್ಲಿ ನಡೆಸಿಲ್ಲ. ಮೋದಿ ಸರ್ಕಾರವು ಹಲವು ಸಂಸತ್ ಅಧಿವೇಶನಗಳಲ್ಲಿ ಮಂಡಿಸಿ ಅಂಗೀಕರಿಸಿರುವ ಮಸೂದೆಗಳೇ ಈ ಮಾತಿಗೆ ಜೀವಂತ ಉದಾಹರಣೆ. ಲೋಕಸಭೆಯು ಜನಪ್ರತಿನಿಧಿ ಸದನವಾದರೆ, ರಾಜ್ಯಸಭೆಯು ರಾಜ್ಯಗಳ ಪರಿಷತ್ತು. ರಾಜ್ಯಸಭೆ ಮೂಲಭೂತವಾಗಿ ರಾಜ್ಯಗಳ ಹಿತವನ್ನು ಎತ್ತಿಹಿಡಿದು ಕಾಯುವ ಸದನ. ರಾಜ್ಯಸಭೆಯಲ್ಲಿ ಮೋದಿ ಸರ್ಕಾರಕ್ಕೆ ಬಹುಮತ ಇಲ್ಲ. ಬಹುಮತ ಇಲ್ಲದೆ ಹೋದರೆ ಮಸೂದೆಗಳು ಅಂಗೀಕಾರ ಆಗುವುದಿಲ್ಲ, ಉಭಯ ಸದನಗಳು ಅಂಗೀಕರಿಸಿ ರಾಷ್ಟ್ರಪತಿಯವರ ಅಂಕಿತ ಬೀಳುವ ತನಕ ಮಸೂದೆಗಳು ಕಾಯಿದೆಗಳಾಗುವುದಿಲ್ಲ ಎಂಬುದು ಸರಳ ಸತ್ಯ. ಮಸೂದೆಗಳಿಗೆ ಸದನದ ಬಹುಮತದ ಅಂಗೀಕಾರ ದೊರಕಿಸಲು ಸರ್ಕಾರ ಅಡ್ಡದಾರಿಗಳನ್ನು ಹಿಡಿದದ್ದು ಬೆಳಕಿನಷ್ಟೇ ನಿಚ್ಚಳ. ರಾಜ್ಯ ಸರ್ಕಾರಗಳ ಅಧಿಕಾರವ್ಯಾಪ್ತಿಯ ಮೇಲೆ ಅತಿಕ್ರಮಣ ಮಾಡಿರುವುದೂ ಹೌದು.
ಉದಾಹರಣೆಗೆ ಜಲಸಂಪನ್ಮೂಲ ರಾಜ್ಯಗಳ ಅಧಿಕಾರವ್ಯಾಪ್ತಿಯ ವಿಷಯ. ಅಣೆಕಟ್ಟೆಗಳ ಸುರಕ್ಷತೆ ಮಸೂದೆಯ ಪ್ರಕಾರ ರಾಜ್ಯಗಳ ಎಲ್ಲ ಅಣೆಕಟ್ಟೆಗಳ ಸಂಪೂರ್ಣ ನಿಯಂತ್ರಣವನ್ನು ತನ್ನ ಕೈಗೆ ತೆಗೆದುಕೊಂಡಿದೆ. ರಾಜ್ಯ ಸರ್ಕಾರಗಳ ಸಾರ್ವಭೌಮತೆ ಮತ್ತು ಅಧಿಕಾರಗಳನ್ನು ನಿರ್ಲಕ್ಷಿಸಿರುವ ಕುರಿತು ಪ್ರತಿಪಕ್ಷಗಳು ಎತ್ತಿರುವ ಆತಂಕ ಆಕ್ಷೇಪಗಳನ್ನು ಕೇಂದ್ರ ಸರ್ಕಾರ ಲೆಕ್ಕಕ್ಕೇ ತೆಗೆದುಕೊಳ್ಳಲಿಲ್ಲ. ಹತ್ತು ಮೀಟರುಗಳಿಗಿಂತ ಎತ್ತರವಿರುವ ಎಲ್ಲ ಅಣೆಕಟ್ಟೆಗಳ ಕಣ್ಗಾವಲು, ಪರಿವೀಕ್ಷಣೆ, ಚಾಲನೆ, ನಿರ್ವಹಣೆ ಸಾರಾಸಗಟಾಗಿ ಕೇಂದ್ರ ಸರ್ಕಾರದ ಹಕ್ಕಾಗಿ ಹೋಗಿದೆ. ಎಲ್ಲ ಅಣೆಕಟ್ಟೆಗಳನ್ನು ರಾಜ್ಯ ಸರ್ಕಾರಗಳು ತಮ್ಮ ಹಣದಲ್ಲಿ, ತಮ್ಮ ನೆಲದಲ್ಲಿ ಕಟ್ಟಿರುವಂತಹವು. ಅಣೆಕಟ್ಟೆಗಳ ಸುರಕ್ಷತೆಗೆ ಕೇಂದ್ರ ಸರ್ಕಾರ ಚಿಕ್ಕಾಸನ್ನು ನೀಡುವ ಪ್ರಸ್ತಾಪವೂ ಮಸೂದೆಯಲ್ಲಿ ಇಲ್ಲ. ಅದರ ಅರ್ಥ ಹಣ ರಾಜ್ಯಗಳದು, ಅಧಿಕಾರ ಕೇಂದ್ರದ್ದು. ಇಂತಹ ಹತ್ತಾರು ಅತಿರೇಕಗಳ ದೊಡ್ಡ ಪಟ್ಟಿಯನ್ನೇ ಮಾಡಬಹುದು.
ಭಾರತವು ಹತ್ತಾರು ರಾಜ್ಯಗಳ ಒಕ್ಕೂಟ ಗಣತಂತ್ರ. ಸಹಕಾರಿ ಒಕ್ಕೂಟವೇ ಅದರ ಮಂತ್ರ. ಸಂವಿಧಾನವೇ ಈ ಅಂಶವನ್ನು ಸಾರಿ ಹೇಳಿದೆ. ಕೇಂದ್ರ ಮತ್ತು ರಾಜ್ಯಗಳ ನಡುವೆ ಅತ್ಯಂತ ನಿಕಟ ಸಹಕಾರವೇ ಈ ತತ್ವದ ಆಶಯ. ಅಧಿಕಾರದ ಅಮಲಿನಲ್ಲಿ ಮುಳುಗಿರುವ ಮೋದಿ ಸರ್ಕಾರ ಈ ಆಶಯಕ್ಕೆ ಕಣ್ಣು ತೆರೆಯಬೇಕು. ನಿರಂತರ ಜಾಗೃತಿಯೇ ಜನತಂತ್ರಕ್ಕೆ ನಾವು ತೆರುವ ಬೆಲೆ ಎಂಬ ಮಾತನ್ನು ದೇಶದ ಮತದಾರರು ಮನನ ಮಾಡಿಕೊಳ್ಳಬೇಕು. ಕವಿದಿರುವ ಮಾಯಾವಿ ಬೂದಿಯನ್ನು ಕೊಡವಿಕೊಂಡು ಮೇಲೇಳಬೇಕು.
