ಕರ್ನಾಟಕದ ಮಹಿಳೆಯರು ಇಂದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿದ್ದರೆ, ಮುಂದಿನ ದಶಕದಲ್ಲಿ ಅವರು ರಾಜ್ಯದ ಆರ್ಥಿಕತೆ, ಜ್ಞಾನ ವ್ಯವಸ್ಥೆ ಮತ್ತು ಸಾರ್ವಜನಿಕ ನೀತಿ ರೂಪಿಸುವಿಕೆಯ ಸಕ್ರಿಯ ನಿರ್ಮಾಪಕರಾಗಬೇಕು. ಮಹಿಳೆಯರಿಗೆ ನೆರವು ನೀಡುವ ರಾಜ್ಯದಿಂದ, ಮಹಿಳೆಯರೊಂದಿಗೆ ಅಭಿವೃದ್ಧಿಯನ್ನು ನಿರ್ಮಿಸುವ ರಾಜ್ಯದತ್ತ ಕರ್ನಾಟಕ ಸಾಗಬೇಕಿದೆ. ಇದೇ UN Women ಸೂಚಿಸುವ ದಾರಿದ್ರ್ಯ ನಿವಾರಣೆಯ ನಿಜವಾದ ಪರಿವರ್ತನಾ ದಾರಿ.
ಹಿಂದಿನ ದಶಕಗಳಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ನಡೆಯುತ್ತಿದ್ದ ಬಹುತೇಕ ಚರ್ಚೆಗಳು, ವಿಚಾರಗಳು, ಪಾಲಿಸಿಗಳು ಹೆಚ್ಚಾಗಿ ಮಹಿಳಾ ಸಬಲೀಕರಣಕ್ಕಾಗಿ ಕಲ್ಯಾಣ ಯೋಜನೆಗಳು, ಮೀಸಲಾತಿಗಳು ಮತ್ತು ಸಾಮಾಜಿಕ ನ್ಯಾಯದ ಸುತ್ತ ನಡೆಯುತ್ತಿದ್ದವು. ಅದರಲ್ಲೂ ಹೆಚ್ಚಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಈ ನಿಟ್ಟಿನಲ್ಲಿಯೇ ಮಹಿಳಾ ಕಲ್ಯಾಣಕ್ಕೆ ಸಂಬಂಧಿಸಿದ ನೀತಿಗಳು ರೂಪುಗೊಳ್ಳುತ್ತಿದ್ದವು. ಆದರೆ, ಇತ್ತೀಚೆಗೆ ಪ್ರಕಟವಾದ ವಿಶ್ವಸಂಸ್ಥೆಯ ಮಹಿಳಾ ಘಟಕದ (UN Women) ವರದಿಗಳು ಮಹಿಳೆಯರನ್ನು ದಾರಿದ್ರ್ಯದಿಂದ ಹೊರತರುವ ಪರಿಣಾಮಕಾರಿ ನೀತಿಗಳ ಕುರಿತು ಒಂದು ಮಹತ್ವದ ಹಾಗೂ ಬಹು ತಾತ್ವಿಕ ಚೌಕಟ್ಟನ್ನು ಮುಂದಿಟ್ಟಿವೆ. ಈ ಚೌಕಟ್ಟು ಸರಳವಾದರೂ ಆಳವಾದದ್ದು: ಮಹಿಳಾ ಅಭಿವೃದ್ಧಿಯನ್ನು ಕೇವಲ “ಸಹಾಯ”, “ನೆರವು ” ಅಥವಾ “ಸಬ್ಸಿಡಿ” ನೀಡುವುದರ ಮೂಲಕ ಸಂಪೂರ್ಣವಾಗಿ ಸಾಧಿಸಲಾಗುವುದಿಲ್ಲ, ಬದಲಿಗೆ ಒಂದು ಪರಿಪೂರ್ಣ, ವ್ಯವಸ್ಥಿತ ಪಾಲಿಸಿ ಈ ನಿಟ್ಟಿನಲ್ಲಿ ಅಗತ್ಯ ಎನ್ನುವುದು. ಇದಕ್ಕೊಂದು ಚೌಕಟ್ಟನ್ನು ಕೂಡ ಈ ವರದಿ ಮುಂದಿಡುತ್ತಿದೆ. ಈ ಚೌಕಟ್ಟನ್ನು ನಾವು ಮೂರು ಹಂತಗಳ ಮತ್ತು ಮೂರು ಆಯಾಮಗಳ ಮೂಲಕ ವ್ಯಾಖ್ಯಾನಿಸಬಹುದು: ಅದೆಂದರೆ, Protection (ಸಂರಕ್ಷಣೆ), Prevention (ತಡೆಗಟ್ಟುವಿಕೆ) ಮತ್ತು Promotion (ಅಭಿವೃದ್ಧಿ).
ಯಾವುದೇ ಸರ್ಕಾರ ಮಹಿಳೆಯರ ಸಂಪೂರ್ಣ ಅಭಿವೃದ್ಧಿಗಾಗಿ ಈ ಮೂರು ಹಂತಗಳಲ್ಲಿ ಕಾರ್ಯನಿರ್ವಹಿಸಬೇಕು ಎಂದು ಅವು ಹೇಳುತ್ತವೆ. ಮೊದಲನೆಯದು ‘ಸಂರಕ್ಷಣೆ’. ಅಂದರೆ ಮಹಿಳೆಯರು ಮತ್ತು ಅವರನ್ನು ಅವಲಂಬಿತ ಕುಟುಂಬಗಳು ಮತ್ತೊಮ್ಮೆ ದಾರಿದ್ರ್ಯದ ಆಳಕ್ಕೆ ಜಾರಿಹೋಗದಂತೆ ರಕ್ಷಿಸುವ ಸಾಮಾಜಿಕ ಭದ್ರತಾ ವ್ಯವಸ್ಥೆಗಳು. ಎರಡನೆಯದು ‘ತಡೆಗಟ್ಟುವಿಕೆ’. ಅರ್ಥಾತ್ – ದಾರಿದ್ರ್ಯ ಮತ್ತು ಅಸಮಾನತೆಯನ್ನು ಮೂಲದಿಂದಲೇ ತಡೆಯುವ – ಶಿಕ್ಷಣ, ಆರೋಗ್ಯ ಮತ್ತು ಸುರಕ್ಷತಾ ವ್ಯವಸ್ಥೆಗಳು. ಮೂರನೆಯದು ‘ಅಭಿವೃದ್ಧಿ’. ಮಹಿಳೆಯರಿಗೆ ಉತ್ತಮ ಉದ್ಯೋಗ, ಕೌಶಲ್ಯ, ಆಸ್ತಿ, ನಾಯಕತ್ವ ಮತ್ತು ಆರ್ಥಿಕ ಅವಕಾಶಗಳನ್ನು ಸೃಷ್ಟಿಸಬಲ್ಲ, ನೀಡಬಲ್ಲ, ಅದಕ್ಕೆ ಪೂರಕವಾದ ನೀತಿಗಳು. ವಿಶ್ವದ ಅನೇಕ ದೇಶಗಳ (ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದಿದ) ಅನುಭವವನ್ನು ಆಧರಿಸಿ UN Women ನೀಡುವ ಒಂದು ಸ್ಪಷ್ಟ ಸಂದೇಶವೆಂದರೆ: ಮಹಿಳಾ ಸಮೂಹದ ಅಭಿವೃದ್ಧಿ ಇಂತಹ ನೆರವು ನೀಡುವಿಕೆಯಿಂದ ಆರಂಭವಾಗಬಹುದು, ಆದರೆ ನಿಜವಾದ ಸಮಾನತೆ ಸಾಧ್ಯವಾಗಬೇಕಾದರೆ ನೆರವಿನ ಜೊತೆ ಜೊತೆಗೆ, ಅವರ ಉನ್ನತಿಗೆ ಪೂರಕವಾದ ಅವಕಾಶಗಳನ್ನು ಕೂಡ ಸೃಷ್ಟಿಸಲೇ ಬೇಕು.
ಈ ಜಾಗತಿಕ ಚೌಕಟ್ಟಿನ ಬೆಳಕಿನಲ್ಲಿ, ಕಳೆದ ಮೂರು ವರ್ಷಗಳಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದ ಗೃಹಲಕ್ಷ್ಮಿ, ಶಕ್ತಿ ಮತ್ತು ಅನ್ನಭಾಗ್ಯ ಯೋಜನೆಗಳನ್ನು ಪರಿಶೀಲಿಸಿದಾಗ, ಕಂಡು ಬರುವ ವಿಷಯವೆಂದರೆ – ಈ ಎಲ್ಲ ಯೋಜನೆಗಳು -ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ತಕ್ಷಣದ ಆರ್ಥಿಕ ಭದ್ರತೆಯನ್ನು ಒದಗಿಸಿವೆ. ವಿಶೇಷವಾಗಿ ಬೆಲೆ ಏರಿಕೆ, ಉದ್ಯೋಗದ ಅನಿಶ್ಚಿತತೆ ಮತ್ತು ಕೋವಿಡ್ ನಂತರದ ಆರ್ಥಿಕ ಒತ್ತಡಗಳ ನಡುವೆ ಈ ಯೋಜನೆಗಳು ಮಹಿಳೆಯರ ಬದುಕಿಗೆ ಒಂದು “ಸುರಕ್ಷತಾ ಜಾಲ”ವಾಗಿ ಕೆಲಸ ಮಾಡಿವೆ. ಅನೇಕ ಗ್ರಾಮೀಣ ಕುಟುಂಬಗಳಲ್ಲಿ ತಿಂಗಳ ಕೊನೆಯಲ್ಲಿ ಆಹಾರ ಭದ್ರತೆ ಖಚಿತವಾಗಿದೆ; ಮಹಿಳೆಯರ ಕೈಗೆ ನೇರವಾಗಿ ಹಣ ತಲುಪಿರುವುದರಿಂದ ಮತ್ತು ಸಾರ್ವಜನಿಕ ಸಾರಿಗೆಯ ಮೂಲಕ ಅವರ ಚಲನವಲನವನ್ನು ಹೆಚ್ಚಿಸಿದ್ದರಿಂದಾಗಿ, ಅವರ ಮನೆಯೊಳಗಿನ ನಿರ್ಧಾರಶಕ್ತಿ ಸ್ವಲ್ಪವಾದರೂ ಹೆಚ್ಚಾಗಿದೆ. ಇದು ನಿಸ್ಸಂದೇಹವಾಗಿ ‘Protection’ ಹಂತದ ಯಶಸ್ಸು. ಈ ಎಲ್ಲ ಸ್ಕೀಮುಗಳು, ರಾಜ್ಯದ ‘ಸಂರಕ್ಷಣೆ (Protection)’ ಹಂತದ ಬಲವರ್ಧನೆಯಾಗಿ ಕಾಣುತ್ತವೆ. ಆದರೆ UN Women ಚೌಕಟ್ಟು ಸ್ಪಷ್ಟವಾಗಿ ಹೇಳುವಂತೆ, ಸಂರಕ್ಷಣೆ (Protection) ಮಾತ್ರವೇ ಮಹಿಳಾ ಸಶಕ್ತೀಕರಣದ ಅಥವಾ ಮಹಿಳಾ ಅಭಿವೃದ್ಧಿಯ ಅಂತಿಮ ಹಂತವಲ್ಲ; ಅದು ಕೇವಲ ಆರಂಭ ಮಾತ್ರವೆನ್ನಬಹುದು. ಇಂತಹ ಒಂದು ವ್ಯವಸ್ಥೆಯನ್ನು ಆರಂಭಿಸಿ ಅದನ್ನು ವ್ಯವಸ್ಥಿತವಾಗಿ ಜಾರಿಗೊಳಿಸಿ ಮಹಿಳಾ ಸಂರಕ್ಷಣೆಗೆ ನಾಂದಿ ಹಾಡಿದ ಸರಕಾರದ ನೀತಿ ನಿಜಕ್ಕೂ ಶ್ಲಾಘನೀಯ.

ಈ ಹಿನ್ನೆಲೆಯಲ್ಲಿಯೇ, ಇತ್ತೀಚೆಗೆ, ಕರ್ನಾಟಕ ಸರ್ಕಾರದ ಮೂರು ವರ್ಷದ ಸಾಧನೆಯ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯರವರ ಹೇಳಿಕೆ ಹಾಗೂ ಅದರಲ್ಲಿ ಮತ್ತೊಮ್ಮೆ ಸ್ಪಷ್ಟಪಡಿಸಿದ ಅವರ ನೀತಿ ದೃಷ್ಟಿಕೋನವೂ ಮಹತ್ವದ್ದು. ಮುಖ್ಯಮಂತ್ರಿ ಸಿದ್ಧರಾಮಯ್ಯರವರ ಹೇಳಿಕೆಯ ಪ್ರಕಾರ: “ಮೂರು ವರ್ಷಗಳ ಅವಧಿಯಲ್ಲಿ ಪ್ರಗತಿಪರ ಸುಧಾರಣೆಗಳ ಮೂಲಕ ಸಾಮಾಜಿಕ ನ್ಯಾಯವನ್ನು ಬಲಪಡಿಸುವುದು, ಸಮಾನ ಅವಕಾಶಗಳನ್ನು ವಿಸ್ತರಿಸುವುದು ಹಾಗೂ ವೈಯಕ್ತಿಕ ಹಕ್ಕುಗಳ ರಕ್ಷಣೆಯನ್ನು ಖಚಿತಪಡಿಸುವುದು ನಮ್ಮ ಸರ್ಕಾರದ ಪ್ರಮುಖ ಸಾಧನೆಯಾಗಿದೆ. ಆಂತರಿಕ ಮೀಸಲಾತಿ ಜಾರಿಗೆ ತರುವುದರಿಂದ ಹಿಡಿದು, ಅಸುರಕ್ಷಿತ ಮತ್ತು ಹಿಂದುಳಿದ ಸಮುದಾಯಗಳಿಗೆ ವಸತಿ ಶಿಕ್ಷಣದ ಅವಕಾಶಗಳನ್ನು ವಿಸ್ತರಿಸುವ ತನಕ, ಹಾಗೂ ಗೌರವ ಹತ್ಯೆಗಳಿಗೆ ವಿರುದ್ಧ ಕಾನೂನು ರೂಪಿಸುವ ತನಕ ಕರ್ನಾಟಕವು ಸಂವಿಧಾನಾತ್ಮಕ ಮೌಲ್ಯಗಳನ್ನು ಕರುಣೆ ಮತ್ತು ಹೊಣೆಗಾರಿಕೆಯಿಂದ ಮುಂದಕ್ಕೆ ಕೊಂಡೊಯ್ಯುತ್ತಿದೆ. ಪ್ರತಿಯೊಬ್ಬ ನಾಗರಿಕರ ಗೌರವ, ಒಳಗೊಳ್ಳುವಿಕೆ ಮತ್ತು ನ್ಯಾಯವನ್ನು ಕೇಂದ್ರವಾಗಿಟ್ಟುಕೊಂಡ ಸರ್ಕಾರ ಇದು.”
ಈ ಹೇಳಿಕೆಯನ್ನು ಕೂಲಂಕಷವಾಗಿ ಪರಿಶೀಲಿಸಿದರೆ – ಕರ್ನಾಟಕ ಸರ್ಕಾರದ ದೃಷ್ಠಿಯಲ್ಲಿ ಸಾಮಾಜಿಕ ನ್ಯಾಯವನ್ನು (social justice) ಕೇವಲ ಕಲ್ಯಾಣಕ್ಕೆ (social welfare) ಮಾತ್ರ ಸೀಮಿತವಾಗಿಸಿಲ್ಲ. ಬದಲಾಗಿ ಇದು ಸಂವಿಧಾನಾತ್ಮಕ ಮೌಲ್ಯಗಳನ್ನು ಸಮಾಜದಲ್ಲಿ ಅನುಷ್ಠಾನ ಗೊಳಿಸುವ ಆಶಯವನ್ನು ಸೂಚಿಸುತ್ತದೆ. UN Women ಚೌಕಟ್ಟಿನ ‘Prevention (ತಡೆಗಟ್ಟುವಿಕೆ)’ ಹಂತಕ್ಕೆ ಮತ್ತು ಆಯಾಮಕ್ಕೆ ಇದು ನೇರವಾಗಿ ಸಂಬಂಧಿಸಿದೆ ಎಂದು ಹೇಳಬಹುದು. ಏಕೆಂದರೆ ಸಾಮಾಜಿಕ ನ್ಯಾಯವನ್ನು ಬಲಪಡಿಸುವುದು, ಶೈಕ್ಷಣಿಕ ಹರಿವನ್ನು ವಿಸ್ತರಿಸುವುದು ಮತ್ತು ಅಂಚಿನಲ್ಲಿರುವ ಮತ್ತು ದುರ್ಬಲ ಸಮುದಾಯಗಳನ್ನು ರಕ್ಷಿಸುವುದು – ಇವೆಲ್ಲವೂ ಅಸಮಾನತೆ ಸ್ವತಃ ಪುನರುತ್ಪಾದಿಸುವುದನ್ನು ತಡೆಯುವ ಗುರಿಯನ್ನು ಹೊಂದಿರುವ ರಚನಾತ್ಮಕ ನೀತಿ ಹಸ್ತಕ್ಷೇಪಗಳಾಗಿವೆ (constructive intervention).
ಆದರೆ ಈ ಚೌಕಟ್ಟುಗಳನ್ನು ನಾವು ಒಟ್ಟಿಗೆ ಪರಿಶೀಲಿಸಿದಾಗ, ನಾವು ಮುಂದೆ ನಡೆಯಬೇಕಾದ ದಾರಿ ನಾವು ನಡೆದು ಬಂದ ದಾರಿಗಿಂತ ದೂರವಿದೆ ಎನ್ನುವುದು ಖಾತ್ರಿಯಾಗುತ್ತದೆ. ಕರ್ನಾಟಕವು ಮಹಿಳೆಯರ ರಕ್ಷಣೆ ಮತ್ತು ತಡೆಗಟ್ಟುವಿಕೆ ಹಂತಗಳಲ್ಲಿ ರಾಷ್ಟ್ರ ಹಾಗೂ ಅಂತರ್ ರಾಷ್ಟ್ರೀಯ ಮಟ್ಟದಲ್ಲೂ ಕೂಡ ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದರೂ, Promotion (ಅಭಿವೃದ್ಧಿ ) ಹಂತದಲ್ಲಿ ನಾವು ನಮ್ಮ ಸಮಾಜ, ಮತ್ತು ನಮ್ಮ ರಾಜ್ಯ ಪ್ರಮುಖ ಸವಾಲುಗಳನ್ನು ಎದುರಿಸುತ್ತಿದೆ. Promotion (ಅಭಿವೃದ್ಧಿ ) ಕೇವಲ ಜೀವಗಳನ್ನು ಉಳಿಸುವುದು ಅಥವಾ ಸುಧಾರಿಸುವುದರ ಬಗ್ಗೆ ಮಾತ್ರ ಅಲ್ಲ. ಇಂದು ನಮಗೆ ಒಂದು ಸಮೂಹದ ಜೀವನವನ್ನು ಪರಿವರ್ತಿಸುವ ನಿಟ್ಟಿನಲ್ಲಿ ಪಾಲಿಸಿ ಬೇಕಾಗಿದೆ. ಆದರಿಂದ, ಇಂದು ಸರ್ಕಾರ ಸಂರಕ್ಷಣೆ, ತಡೆಗಟ್ಟುವಿಕೆಯಾ ಜೊತೆ ಜೊತೆಗೆ – ಹೆಣ್ಣುಮಕ್ಕಳಿಗೆ ಮತ್ತು ಮಹಿಳೆಯರಿಗೆ ಉತ್ತಮ ಉದ್ಯೋಗಗಳು, ಉದ್ಯಮಶೀಲತೆ, ಆಸ್ತಿ ಹಕ್ಕುಗಳು, ಡಿಜಿಟಲ್ ಹಣಕಾಸು ಪ್ರವೇಶ ಮತ್ತು ನಾಯಕತ್ವದ ಅವಕಾಶಗಳನ್ನು ಸೃಷ್ಟಿಸುವ ಬಗ್ಗೆ, ಇದರಿಂದಾಗಿ ಅವರ ಕಲ್ಯಾಣ ಮತ್ತು ಸಬಲೀಕರಣಕ್ಕಾಗಿ ಸಮಗ್ರ ಮತ್ತು ಅಂತರ್ಗತ ವಾತಾವರಣವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಪಾಲಿಸಿ ಮಾಡುವತ್ತ ದೃಷ್ಟಿ ಹರಿಸಬೇಕಾಗಿದೆ. ಇಂತಹ ಪಾಲಿಸಿ, ಇಂದು ಇರುವ Gen Z (ಜೆನ್ ಜಿ ) ಮತ್ತು ಮುಂಬರುವ ಜನಾಂಗಕ್ಕೂ ಅತೀ ಅವಶ್ಯ. ಇದಕ್ಕಾಗಿ ನಮ್ಮ ಸರ್ಕಾರ ಈ ನಿಟ್ಟಿನಲ್ಲಿ ಅತೀ ಶೀಘ್ರವಾಗಿ ಕಾರ್ಯ ನಿರ್ವಹಿಸಬೇಕಾಗಿದೆ.
ಜಗತ್ತಿನ ವಿವಿಧ ಅಭಿವೃದ್ಧಿಶೀಲ ರಾಷ್ಟ್ರಗಳು, ಈ ನಿಟ್ಟಿನಲ್ಲಿ ಅನುಸರಿಸಿರುವ ಕೆಲವು ಪ್ರಮುಖ ನೀತಿ ಮಾದರಿಗಳನ್ನು ಗಮನಿಸುವುದು ಉಪಯುಕ್ತ. ಬ್ರೆಜಿಲ್ನ Bolsa Família ಕಾರ್ಯಕ್ರಮ ಮತ್ತು ಮೆಕ್ಸಿಕೊದ conditional cash transfer ಮಾದರಿಗಳು ಮಹಿಳಾ ಸಬಲೀಕರಣದ ವಿಷಯದಲ್ಲಿ ಮಹತ್ವದ ಫಲಿತಾಂಶಗಳನ್ನು ನೀಡಿವೆ. ಈ ಯೋಜನೆಗಳು ಬಾಲಕಿಯರ ಶಾಲಾ ಹಾಜರಾತಿಯನ್ನು ಹೆಚ್ಚಿಸಿದವು ಮತ್ತು ಮಹಿಳೆಯರ ಕುಟುಂಬದೊಳಗಿನ ನಿರ್ಧಾರಶಕ್ತಿಯನ್ನು ಕ್ರಮೇಣ ಬಲಪಡಿಸಿದವು. ಈ ಎರಡೂ ಸ್ಕೀಮುಗಳಲ್ಲಿ ಇದ್ದ ವಿಶೇಷತೆ ಎಂದರೆ, ಕ್ರಮೇಣವಾಗಿ ಹಣ ವರ್ಗಾವಣೆಯ ಜೊತೆ ಜೊತೆಗೆ ಮಾನವ ಸಂಪನ್ಮೂಲ ಅಭಿವೃದ್ದಿಯ ಕೆಲವು ಆಯಾಮಗಳನ್ನು (ಕಟ್ಟುನಿಟ್ಟಾದ, ಕಡ್ಡಾಯ ಶಿಕ್ಷಣ ಮತ್ತು ಆರೋಗ್ಯ ಷರತ್ತುಗಳ ಪೂರೈಸುವಿಕೆ) ಕೂಡ ಇದರ ಜೊತೆ ಸಮನ್ವಯಗೊಳಿಸಲಾಯಿತು. ನಗದು ವರ್ಗಾವಣೆಗಳು ಸ್ವತಃ ಶಕ್ತಿಶಾಲಿ ಸಾಧನಗಳಾಗಿದ್ದರೂ, ಕ್ರಮೇಣವಾಗಿ ಅವು ಮಾನವ ಸಂಪನ್ಮೂಲ ಅಭಿವೃದ್ಧಿಯೊಂದಿಗೆ ಸಮನ್ವಯಗೊಂಡಾಗ ಮಾತ್ರ ದೀರ್ಘಕಾಲೀನ ಸಾಮಾಜಿಕ ಪರಿವರ್ತನೆ ಸಾಧ್ಯವಾಗುತ್ತದೆ.
ಈ ಜಾಗತಿಕ ಪಾಠಗಳು ಕರ್ನಾಟಕದ ಸಂದರ್ಭದಲ್ಲಿಯೂ ನೇರವಾಗಿ ಅನ್ವಯವಾಗುತ್ತವೆ. ರಾಜ್ಯದ ಗ್ಯಾರಂಟಿ ಯೋಜನೆಗಳು ಮಹಿಳೆಯರಿಗೆ ತಕ್ಷಣದ ಆರ್ಥಿಕ ಭದ್ರತೆಯನ್ನು ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಆದರೆ ಈ ಭದ್ರತೆ ಉದ್ಯೋಗಾವಕಾಶ, ಕೌಶಲ್ಯಾಭಿವೃದ್ಧಿ ಮತ್ತು ಆರ್ಥಿಕ ಸ್ವಾತಂತ್ರ್ಯಕ್ಕೆ ಎಷ್ಟು ಮಟ್ಟಿಗೆ ಪರಿವರ್ತನೆಯಾಗುತ್ತಿದೆ ಎಂಬುದು ಇನ್ನೂ ತೆರೆದ ಪ್ರಶ್ನೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸ್ವಸಹಾಯ ಸಂಘಗಳ ಮೂಲಕ ಸಾಲ ಲಭ್ಯವಿದ್ದರೂ, ಮಾರುಕಟ್ಟೆ ಪ್ರವೇಶ, ತಂತ್ರಜ್ಞಾನ ಬಳಕೆ, ಸಂವಹನ ಕೌಶಲ್ಯ, ಮತ್ತು ಉತ್ಪಾದನಾ ಮೂಲಸೌಕರ್ಯ ಇನ್ನೂ ಸೀಮಿತವಾಗಿವೆ. ಅದೇ ವೇಳೆ ನಗರ ಪ್ರದೇಶಗಳಲ್ಲಿ ಮಹಿಳೆಯರಿಗೆ ಶಿಕ್ಷಣ ಮತ್ತು ಉದ್ಯೋಗ ಅವಕಾಶಗಳು ಹೆಚ್ಚಾಗಿದ್ದರೂ, ಮಹಿಳೆಯರ ಮೇಲಿನ ದೌರ್ಜನ್ಯ, ನಾಯಕತ್ವದ ಸ್ಥಾನಗಳು ಮತ್ತು ವೇತನ ಸಮಾನತೆಯ ವಿಚಾರದಲ್ಲಿ ಅಸಮಾನತೆ ಮುಂದುವರಿದಿದೆ.

ಹಾಗೆಯೇ, ಕರ್ನಾಟಕದಲ್ಲಿ ಮಹಿಳಾ ಸಬಲೀಕರಣದ ಪ್ರಶ್ನೆಯನ್ನು ಕೇವಲ ಲಿಂಗಾಧಾರಿತ ಪ್ರಶ್ನೆಯಾಗಿಸಿದರೆ ಅದು ಸಮಸ್ಯೆಯನ್ನು ಸೀಮಿತಗೊಳಿಸುತ್ತದೆ. ಈ ವಿಷಯ ಬಂದಾಗ – ಪ್ರಾದೇಶಿಕ, ಜಾತಿವಾರು, ವರ್ಗವಾರು ಅಸಮಾನತೆಯ ಆಯಾಮವನ್ನು ಕೂಡ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಬೆಂಗಳೂರು, ಮೈಸೂರು ಮತ್ತು ಮಂಗಳೂರು ನಗರಗಳಲ್ಲಿ ಮಹಿಳೆಯರು ಜಾಗತಿಕ ಆರ್ಥಿಕತೆಯ ಭಾಗವಾಗುತ್ತಿರುವಾಗ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ ಮತ್ತು ಚಾಮರಾಜನಗರದಂತಹ ಜಿಲ್ಲೆಗಳಲ್ಲಿ ಅನೇಕ ಮಹಿಳೆಯರು ಇನ್ನೂ ಮೂಲಭೂತ ಶಿಕ್ಷಣ, ಆರೋಗ್ಯ ಸೇವೆ ಮತ್ತು ಸ್ಥಿರ ಉದ್ಯೋಗದ ಅವಕಾಶಗಳಿಗಾಗಿ ಹೋರಾಡುತ್ತಿದ್ದಾರೆ. ಹೀಗಾಗಿ ನಗರ/ಮುಂದುವರಿದ ವರ್ಗದ ಮಹಿಳೆ/ಹೆಣ್ಣುಮಕ್ಕಳ ಮಹಿಳೆಯರ ಸವಾಲು “glass ceiling” ಆಗಿದ್ದರೆ, ಗ್ರಾಮೀಣ/ಹಿಂದುಳಿದ ವರ್ಗಗಳ ಹೆಣ್ಣು ಮಕ್ಕಳ/ಮಹಿಳೆಯ ಸವಾಲು “basic opportunity gap” ಆಗಿರುವುದೂ ಕೂಡ ಸತ್ಯ ಸಂಗತಿ.
UN Women ಚೌಕಟ್ಟಿನ ಮತ್ತೊಂದು ಅತ್ಯಂತ ಪ್ರಮುಖ ಆಯಾಮ : ‘care economy’. ಮಹಿಳೆಯರು ನಿರ್ವಹಿಸುವ unpaid (ವೇತನ ರಹಿತ) care ವರ್ಕ್, ಅದು ಮನೆಯ ಕೆಲಸ, ಮಕ್ಕಳ ಸಾಕಣೆ, ಮನೆಯ ಹಿರಿಯರ ಆರೈಕೆ, ಇವು ಆರ್ಥಿಕ ಲೆಕ್ಕಾಚಾರಗಳಲ್ಲಿ ಬಹುತೇಕ ಕಾಣಿಸಿಕೊಳ್ಳುವುದಿಲ್ಲವಾದರೂ, ರಾಷ್ಟ್ರದ ಉತ್ಪಾದಕತೆಯ ಅಡಿಪಾಯವಾಗಿವೆ. ಕರ್ನಾಟಕದಲ್ಲಿಯೂ ಮಹಿಳೆಯ ಸಮಯದ ದೊಡ್ಡ ಭಾಗ ಈ ವೇತನ ರಹಿತ ಕೆಲಸಗಳಿಗೆ ಮೀಸಲಾಗಿರುವುದರಿಂದ, ಅವರ ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಜೀವನದಲ್ಲಿ ಭಾಗವಹಿಸುವಿಕೆ ಸೀಮಿತವಾಗುtತ್ತಿದೆ. ಈ ಅಸಮತೋಲನವನ್ನು ಸರಿಪಡಿಸಲು ಅಂಗನವಾಡಿ ವ್ಯವಸ್ಥೆಯ ಬಲವರ್ಧನೆ, ಮಕ್ಕಳ ಆರೈಕೆ ಕೇಂದ್ರಗಳ ವಿಸ್ತರಣೆ, ವೃದ್ಧರ ಆರೈಕೆ ಸೇವೆಗಳು ಮತ್ತು ಸಮುದಾಯ ಆಧಾರಿತ care infrastructure ಒದಗಿಸುವ ನಿಟ್ಟಿನಲ್ಲಿಯೂ ಸರ್ಕಾರ ಗಮನಹರಿಸಬೇಕಾಗಿದೆ. ಇಲ್ಲವಾದಲ್ಲಿ ಮಹಿಳೆಯರು ಉದ್ಯೋಗ ವಲಯದಿಂದ ನಿರ್ಗಮಿಸುವುದನ್ನು ತಡೆಯಲು ಸಾಧ್ಯವಿಲ್ಲ.
ಶಿಕ್ಷಣ ಕ್ಷೇತ್ರವನ್ನು ನೋಡಿದಾಗಲೂ ಕರ್ನಾಟಕ ಒಂದು ಪರಿವರ್ತನಾ ಹಂತದಲ್ಲಿದೆ ಎಂದು ಕಾಣುತ್ತದೆ. ಮೊದಲ ತಲೆಮಾರಿನ ನೀತಿ ಹೋರಾಟ ಹೆಣ್ಣುಮಕ್ಕಳನ್ನು ಶಾಲೆಗೆ ಸೇರಿಸುವುದಾಗಿತ್ತು, ಅದು ಬಹುಮಟ್ಟಿಗೆ ಯಶಸ್ವಿಯಾಗಿದೆ. ಆದರೆ ಈಗ ಎರಡನೇ ಹಂತದ ಸವಾಲು ಆರಂಭವಾಗಿದೆ. ಅವರನ್ನು ಉನ್ನತ ಶಿಕ್ಷಣ, ಸಂಶೋಧನೆ, STEM ಕ್ಷೇತ್ರಗಳು ಮತ್ತು ನಾಯಕತ್ವ ಸ್ಥಾನಗಳಿಗೆ ತಲುಪಿಸುವುದು. ಈ ಹಂತದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವಿನ ಅಂತರ ಇನ್ನಷ್ಟು ಸ್ಪಷ್ಟವಾಗಿ ಕಾಣಿಸುತ್ತದೆ ಮತ್ತು ಈ ದಿಸೆಯಲ್ಲಿಯೂ ಊದಾ ಹೊಸ ರೀತಿಯ ನೀತಿ ಹಸ್ತಕ್ಷೇಪಗಳ ಅಗತ್ಯವಿದೆ.
ಇದೇ ವೇಳೆ ಜಗತ್ತಿನಾದ್ಯಂತ ಹವಾಮಾನ ಬದಲಾವಣೆ ಮತ್ತು AI (ಕೃತಕ ಬುದ್ದಿಮತ್ತೆ) ಮಹಿಳಾ ದಾರಿದ್ರ್ಯವನ್ನು ಹೆಚ್ಚಿಸುವ ಮೌನವಾದ ಆದರೆ ಗಂಭೀರ ಅಂಶವಾಗಿ ಹೊರಹೊಮ್ಮುತ್ತಿದೆ. ಅಂಕಿ ಅಂಶಗಳು ಹೇಳುವ ಪ್ರಕಾರ, ಇವೆರಡರಿಂದಲೂ ಮೊದಲು ಪೆಟ್ಟು ಬೀಳುವುದು ಮಹಿಳೆಯರಿಗೆ. ಉತ್ತರ ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ನೀರಿನ ಕೊರತೆ, ಕೃಷಿ ಆದಾಯ ಕುಸಿತ ಮತ್ತು ವಲಸೆ ಸಮಸ್ಯೆಗಳು ಕುಟುಂಬದ ಆರ್ಥಿಕ ಸ್ಥಿತಿಗೆ ನೇರ ಪರಿಣಾಮ ಬೀರುತ್ತವೆ. ಇದರ ಭಾರ ಬಹುಪಾಲು ಮಹಿಳೆಯರ ಮೇಲೇ ಬೀಳುತ್ತದೆ. ಅವರು ಹೆಚ್ಚುವರಿ ಗೃಹಕಾರ್ಯ, ನೀರಿನ ಸಂಗ್ರಹಣೆ ಮತ್ತು ಕುಟುಂಬ ನಿರ್ವಹಣೆಯ ಜವಾಬ್ದಾರಿಗಳನ್ನು ಹೊರಬೇಕಾದಂತಹ ಪರಿಸ್ಥಿತಿಯನ್ನು ಹಲವು ದೇಶಗಳಲ್ಲೂ ಕಾಣುತ್ತಿದ್ದೇವೆ. ಇದರಿಂದ ಅವರ ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳು ಇನ್ನಷ್ಟು ಸೀಮಿತವಾಗುತ್ತಿವೆ. ಹೀಗಾಗಿ ಹವಾಮಾನ ಬದಲಾವಣೆ ಕೇವಲ ಪರಿಸರ ಸಮಸ್ಯೆಯಾಗಿಲ್ಲ, ಅದು ಮಹಿಳಾ ನ್ಯಾಯದ ಸಮಸ್ಯೆಯಾಗಿಯೂ ತೋರುತ್ತಿದೆ. AI ಅನುಷ್ಠಾನದಿಂದಲೂ ಹೆಚ್ಚಿನ ಕಡೆ ಕೆಲಸ ಕಳೆದುಕೊಳ್ಳುವವರು ಮಹಿಳೆಯರೇ ಆಗಿದ್ದಾರೆ.
ಈ ಎಲ್ಲ ಆಯಾಮಗಳನ್ನು ಒಟ್ಟುಗೂಡಿಸಿದಾಗ ಕರ್ನಾಟಕದ ಮಹಿಳಾ ಅಭಿವೃದ್ಧಿಯ ಮುಂದಿನ ದಿಕ್ಕಿನ ಬಗ್ಗೆ ರಾಜ್ಯ ಸರ್ಕಾರ, ಹಾಗೆಯೇ ನೀತಿ ರೂಪಕರು ಬಹಳ ಆಲೋಚನಾಶೀಲವಾದ, futuristic ಪಾಲಿಸಿಗಳನ್ನು ಸಮರ್ಪಕವಾಗಿ ಪರಿಶೀಲಿಸಿ ಅನುಷ್ಠಾನ ಗೊಳಿಸುವತ್ತ ಹೆಜ್ಜೆ ಇಡಬೇಕು. ಗ್ಯಾರಂಟಿಗಳ ಮೂಲಕ ಸಾಮಾಜಿಕ ಭದ್ರತೆ (Protection); ಶಿಕ್ಷಣ, ಆರೋಗ್ಯ ಮತ್ತು ಸುರಕ್ಷತೆ ಮೂಲಕ ದಾರಿದ್ರ್ಯ ತಡೆ (Prevention); ಉದ್ಯೋಗ, ಉದ್ಯಮಶೀಲತೆ ಮತ್ತು ಆಸ್ತಿ ಹಕ್ಕುಗಳ ಮೂಲಕ ಆರ್ಥಿಕ ಸಬಲೀಕರಣ (Promotion); ಮತ್ತು ಆರ್ಥಿಕ ಸಮಾನತೆ, ನಾಯಕತ್ವ, ರಾಜಕೀಯ ಪ್ರತಿನಿಧಿತ್ವ ಮತ್ತು ನೀತಿ ರೂಪಿಸುವಿಕೆಯಲ್ಲಿ ಮಹಿಳೆಯರ ಸಮಾನ ಪಾಲ್ಗೊಳ್ಳುವಿಕೆ- ಹೀಗೆ ನಾಲ್ಕೂ ಆಯಾಮಗಳ ಬಗ್ಗೆ ಗಮನವಿಟ್ಟು ನೀತಿಯನ್ನು ರೂಪಿಸುವತ್ತ ಸಾಗುವುದು ಇಂದಿನ ಹಾಗೂ ಮುಂದಿನ ತಲೆಮಾರಿನ ಅಗತ್ಯತೆ.
ಅಂತಿಮವಾಗಿ, ಕರ್ನಾಟಕದ ಮಹಿಳೆಯರು ಇಂದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿದ್ದರೆ, ಮುಂದಿನ ದಶಕದಲ್ಲಿ ಅವರು ರಾಜ್ಯದ ಆರ್ಥಿಕತೆ, ಜ್ಞಾನ ವ್ಯವಸ್ಥೆ ಮತ್ತು ಸಾರ್ವಜನಿಕ ನೀತಿ ರೂಪಿಸುವಿಕೆಯ ಸಕ್ರಿಯ ನಿರ್ಮಾಪಕರಾಗಬೇಕು. ಮಹಿಳೆಯರಿಗೆ ನೆರವು ನೀಡುವ ರಾಜ್ಯದಿಂದ, ಮಹಿಳೆಯರೊಂದಿಗೆ ಅಭಿವೃದ್ಧಿಯನ್ನು ನಿರ್ಮಿಸುವ ರಾಜ್ಯದತ್ತ ಕರ್ನಾಟಕ ಸಾಗಬೇಕಿದೆ. ಇದೇ UN Women ಸೂಚಿಸುವ ದಾರಿದ್ರ್ಯ ನಿವಾರಣೆಯ ನಿಜವಾದ ಪರಿವರ್ತನಾ ದಾರಿ.

ಸುಚಿತ್ರಾ ಎಸ್ ಎ
ಮೂಲತಃ ಉಡುಪಿಯವರು. ಸ್ವಲ್ಪ ಕಾಲ ಕರ್ನಾಟಕ ಹೈಕೋರ್ಟಿನಲ್ಲಿ ವಕೀಲಿ ವೃತ್ತಿ ಮಾಡಿದ್ದಾರೆ. ಸದ್ಯ ಜರ್ಮನಿಯ ಮ್ಯೂನಿಚ್ ಟೆಕ್ನಿಕಲ್ ಯುನಿವರ್ಸಿಟಿಯಲ್ಲಿ ಪಿಎಚ್ಡಿ ಮಾಡುತ್ತಿದ್ದಾರೆ.




