‘ಹಿಂದೂ ಮಹಿಳೆಯ ಉನ್ನತಿ ಮತ್ತು ಅವನತಿ’: ಅದಕ್ಕೆ ಯಾರು ಕಾರಣ?’

Date:

ಕೃತಿ: The rise and fall of Hindu women: Who was Responsible for it? (ಹಿಂದೂ ಮಹಿಳೆಯ ಉನ್ನತಿ ಮತ್ತು ಪತನ- ಅದಕ್ಕೆ ಯಾರು ಕಾರಣ?)
ಮೊದಲ ಪ್ರಕಟಣೆ-
1950, The Maha Bodhi
ಮಹಾರಾಷ್ಟ್ರ ಸರ್ಕಾರದ ಪ್ರಕಟಣೆ-
ಅಕ್ಟೋಬರ್ 4, 2003
ಇಂಗ್ಲಿಷ್ ಸಂಪುಟ-
17 (ಭಾಗ 2)
ಕನ್ನಡ ಸಂಪುಟ-
22
Samyak Prakashan Edition- 2016


ಜನವರಿ 21, 1950ರ ‘ಈವ್ಸ್ ವೀಕ್ಲಿ’ಯಲ್ಲಿ ಪ್ರಕಟವಾದ ಲೇಖನವೊಂದರಲ್ಲಿ “ಮಹಿಳೆಯರ ಅವನತಿಗೆ ಪುರುಷನೇ ಆಗಿದ್ದ ಬುದ್ಧ ಅಥವಾ ಬೌದ್ಧ ಧರ್ಮವೇ ಕಾರಣ” ಎಂಬ ಅಪವಾದವನ್ನು ಮಾಡಲಾಗಿತ್ತು. ಇಂತಹ ಅಪವಾದಗಳಿಗೆ ಸಾಕ್ಷ್ಯಾಧಾರಗಳ ಮೂಲಕ ಬಾಬಾಸಾಹೇಬರು ಉತ್ತರಿಸಿದ ಸುದೀರ್ಘ ಬರೆಹವೇ- ‘ಹಿಂದೂ ಮಹಿಳೆಯರ ಉನ್ನತಿ ಮತ್ತು ಅವನತಿ: ಯಾರು ಕಾರಣ?’. ಬುದ್ಧನ ಮೇಲೆ ಅಪವಾದ ಹೊರಿಸಲು ನೀಡಲಾಗುತ್ತಿರುವ ಸಾಕ್ಷ್ಯಗಳು ಬುದ್ಧನ ನಿಧನದ ನಂತರ ಸುಮಾರು 400 ವರ್ಷಗಳ ಬಳಿಕ ಸೇರಿಸಲ್ಪಟ್ಟಿವೆ ಮತ್ತು ಅವುಗಳು ಬುದ್ಧನ ಮೇಲಿನ ಅಸೂಯೆ, ದ್ವೇಷದಿಂದ ರೂಪುಗೊಂಡ, ಅನವಶ್ಯಕ ‘ಪರಿಷ್ಕರಣೆ’ಗಳ ಪರಿಣಾಮ ಎಂದು ಪ್ರತಿಪಾದಿಸುತ್ತಾರೆ. ಹೆಣ್ಣುಮಕ್ಕಳ ಜನನವನ್ನು ಸಂಕಟಕರ ವಿದ್ಯಮಾನವೆಂದು ಕಾಣುತ್ತಿದ್ದ ಪುರುಷಾಧಿಪತ್ಯದ ಸಮಾಜದಲ್ಲಿ, ಬುದ್ಧನು ಮಹಿಳೆಯರ ವ್ಯಕ್ತಿತ್ವವನ್ನೂ, ಧರ್ಮ, ಸಮಾಜ ಮತ್ತು ರಾಜಕೀಯದಲ್ಲಿ ಅವರ ಮಹತ್ತರ ಪಾತ್ರವನ್ನೂ ಪ್ರೋತ್ಸಾಹಿಸಿದ್ದನು, ಮಹಿಳೆಯರಿಗೂ ಪುರುಷರಂತೆ ಜ್ಞಾನಾರ್ಜನೆಯ ಹಕ್ಕನ್ನು ನೀಡಿದ್ದನು ಎಂದು ವಿವರಿಸುತ್ತಾರೆ. ಆದರೆ ಮನುವಿನ ಕಾಲದಲ್ಲಿ ಎಲ್ಲವೂ ಬದಲಾಯಿತು. ಬುದ್ಧನ ಕಾಲದಲ್ಲಿ ಮಹಿಳೆಯರಿಗಿದ್ದ ಸ್ವಾತಂತ್ರ‍್ಯವನ್ನು ಮನು ನಾಶಮಾಡಿದನು. ಮಹಿಳೆಯರು ಪುರುಷರ ಸಮಾನರು ಎಂಬ ಬೌದ್ಧ ಧರ್ಮದ ತತ್ವವನ್ನು ನಿರಾಕರಿಸಿ, ಅವರು ಅಜ್ಞಾನಿಗಳು, ದಾಸಿಯರು ಎಂಬ ತತ್ವವನ್ನು ನೆಲೆಗೊಳಿಸಿದ ಅಪಕೀರ್ತಿ ಮನುವಿಗೆ ಸಲ್ಲಬೇಕು ಎನ್ನುವ ಅಂಬೇಡ್ಕರ್, ಹಿಂದೂ ಮಹಿಳೆಯರ ಅವನತಿಗೆ ಕಾರಣವಾದ ಮನುವಾದವನ್ನು ಬಟಾಬಯಲು ಮಾಡುತ್ತಾರೆ.

- Advertisement -

‘ಹಿಂದೂ ಮಹಿಳೆಯ ಉನ್ನತಿ ಮತ್ತು ಪತನ: ಅದಕ್ಕೆ ಯಾರು ಕಾರಣ?” (The rise and fall of Hindu women: Who was Responsible for it?) ಎಂಬ ಬರಹವು 1950ರಲ್ಲಿ ಕೋಲ್ಕತ್ತಾದ ‘ಮಹಾಬೋಧಿ’ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. ಈ ಕೃತಿ ಅಂಬೇಡ್ಕರ್ ಅವರ “ಬರಹಗಳು ಮತ್ತು ಭಾಷಣಗಳು” ಎಂಬ ಹದಿನೇಳನೇ ಸಂಪುಟದ ಎರಡನೇ ಭಾಗದಲ್ಲಿ ಲಭ್ಯವಿದೆ. ಇದರ ಮೊದಲ ಆವೃತ್ತಿಯನ್ನು ಮಹಾರಾಷ್ಟ್ರ ಸರ್ಕಾರದ ಶಿಕ್ಷಣ ಇಲಾಖೆಯಿಂದ 2003ರ ಅಕ್ಟೋಬರ್ 4ರಂದು ಪ್ರಕಟಿಸಲಾಯಿತು. ಈ ಪ್ರಬಂಧವು ಹಿಂದೂ ಸಮಾಜದಲ್ಲಿ ಮಹಿಳೆಯರ ಸ್ಥಿತಿಗತಿ, ಅವರ ಹೀನಾಯ ಸ್ಥಿತಿಗೆ ಕಾರಣರಾದ ಮೂಲಗಳು ಹಾಗೂ ಇದರಿಂದ ಹೊರಬರುವ ಮಾರ್ಗಗಳನ್ನು ಶೋಧಿಸುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

“ಒಂದು ಸಮಾಜದ ಪ್ರಗತಿಯನ್ನು ಆ ಸಮಾಜದಲ್ಲಿನ ಮಹಿಳೆಯರು ಸಾಧಿಸಿರುವ ಮುನ್ನಡೆಯ ಮಟ್ಟದಿಂದ ಅಳೆಯಬಹುದು” ಎಂದು ಸ್ಪಷ್ಟವಾಗಿ ತಿಳಿದಿದ್ದ ಅಂಬೇಡ್ಕರ್ ಅವರು, ಮಹಿಳೆಯರ ಸ್ವಾತಂತ್ರ್ಯ ಹರಣದ ಚರಿತ್ರೆಯನ್ನು ಗಾಢವಾಗಿ ಅಧ್ಯಯನ ಮಾಡಿದ್ದರು ಎಂಬುದಕ್ಕೆ ಈ ಪುಟ್ಟ ಕೃತಿಯು ಸಾಕ್ಷಿಯಾಗಿ ನಿಂತಿದೆ. ಸಾಮಾನ್ಯವಾಗಿ, ನಾವು ಡಾ. ಬಿ. ಆರ್. ಅಂಬೇಡ್ಕರ್ ಅವರನ್ನು ದಲಿತ ಸಮುದಾಯ ಮತ್ತು ಇತರ ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಹೋರಾಡಿದ ಮಹಾನಾಯಕ ಮತ್ತು ಭಾರತೀಯ ಸಂವಿಧಾನದ ಶಿಲ್ಪಿಯಾಗಿ ಮಾತ್ರ ನೆನಪಿಸಿಕೊಳ್ಳುತ್ತೇವೆ. ಆದರೆ ಅಂಬೇಡ್ಕರ್ ಅವರ ಹೋರಾಟವು ಕೇವಲ ನಿರ್ದಿಷ್ಟ ಸಮುದಾಯವೊಂದಕ್ಕಾಗಿ ಮಾತ್ರವಲ್ಲ, ಇಡೀ ಮಾನವ ಕುಲದ ಹಿತಕ್ಕಾಗಿ ನಡೆದ ಹೋರಾಟವಾಗಿತ್ತು. ಅವರು ಕೇವಲ ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಧಾರ್ಮಿಕ ನ್ಯಾಯಕ್ಕಾಗಿ ಹೋರಾಡಿದ ಸಮಾನತಾವಾದಿಯಷ್ಟೇ ಅಲ್ಲ, ಮಹಿಳಾ ಹಕ್ಕುಗಳ ಮತ್ತು ಸ್ವಾತಂತ್ರ‍್ಯದ ಅಸೀಮ ಪ್ರತಿಪಾದಕರೂ ಹೌದು.

r and fall
‘ಹಿಂದೂ ಮಹಿಳೆಯ ಉನ್ನತಿ ಮತ್ತು ಅವನತಿ’ ಕೃತಿ

ಮಹಿಳೆಯರ ಹಕ್ಕುಗಳ ಪರವಾಗಿ ಕಾನೂನಾತ್ಮಕವಾಗಿ ಅಂಬೇಡ್ಕರ್ ಅವರು ತಳೆದ ದೃಢನಿಶ್ಚಯವು ಅವರ ಬರಹಗಳು ಮತ್ತು ಭಾಷಣಗಳ ಮೂಲಕ ಸ್ಪಷ್ಟವಾಗಿ ವ್ಯಕ್ತವಾಗಿದೆ. ಈ ದೃಷ್ಟಿಕೋನದಲ್ಲಿ, ಅಂಬೇಡ್ಕರ್ ಅವರ ಚಿಂತನೆಗಳನ್ನು ಆಳವಾಗಿ ಅರ್ಥೈಸುವುದು ಅತ್ಯಗತ್ಯ. ಅವರ ನೇತೃತ್ವದಲ್ಲಿ ರೂಪುಗೊಂಡ ಹಿಂದೂ ಸಂಹಿತೆ ಮಸೂದೆ, ಭಾರತದಲ್ಲಿ ಮಹಿಳೆಯರನ್ನು ಸಮಾನ ನಾಗರಿಕರೆಂದು ಪರಿಗಣಿಸಿ, ಅವರಿಗೆ ವಿವಾಹ ಹಾಗೂ ಆಸ್ತಿ ಹಕ್ಕುಗಳಲ್ಲಿ ಸಮಾನತೆ ನೀಡುವ ಮಹತ್ವದ ಹೆಜ್ಜೆಯನ್ನು ಇಟ್ಟಿತು. ಮಹಿಳೆಯರ ಮೇಲೆ ಕಟ್ಟುಪಾಡುಗಳನ್ನು ವಿಧಿಸಿದ ಸಾಮಾಜಿಕ ವ್ಯವಸ್ಥೆಯ ಕುರಿತು ಆಳವಾಗಿ ಅಧ್ಯಯನ ಮಾಡಿದ್ದರಿಂದ ಸಮಕಾಲೀನ ಸಂಪ್ರದಾಯವಾದಿ ದೃಷ್ಟಿಕೋನಗಳಿಗೂ ತೀಕ್ಷ್ಣ ಪ್ರತಿಕ್ರಿಯೆಗಳನ್ನು ಅಂಬೇಡ್ಕರ್ ನೀಡಿದ್ದರು. ಅಂತಹ ಪ್ರಮುಖ ವಾಗ್ವಾದದ ತುಣುಕಾಗಿ ‘ಹಿಂದೂ ಮಹಿಳೆಯ ಉನ್ನತಿ ಮತ್ತು ಅವನತಿ’ ಬರೆಹವನ್ನು ನೋಡಬಹುದು.

ಇದನ್ನೂ ಓದಿರಿ: ವರ್ತಮಾನದ ಬಿಕ್ಕಟ್ಟಿಗೆ ‘ಕ್ರಾಂತಿ ಮತ್ತು ಪ್ರತಿಕ್ರಾಂತಿ’ಯ ಮದ್ದು

ಕೃತಿಯ ಹಿನ್ನೆಲೆ: ಮಾರ್ಚ್ 1950ರಲ್ಲಿ ಮಹಾಬೋಧಿ ಜರ್ನಲ್‌ನಲ್ಲಿ ಲಾಮಾ ಗೋವಿಂದ ಅವರ “ಹಿಂದೂ ಧರ್ಮ ಮತ್ತು ಬೌದ್ಧಧರ್ಮದಲ್ಲಿ ಮಹಿಳೆಯರ ಸ್ಥಾನಮಾನ” ಎಂಬ ಲೇಖನ ಪ್ರಕಟವಾಗಿತ್ತು. ಇದು ಜನವರಿ 21, 1950ರ `ಈವ್ಸ್ ವೀಕ್ಲಿ’ಯಲ್ಲಿ ಪ್ರಕಟವಾದ ಮತ್ತೊಂದು ಲೇಖನಕ್ಕೆ ಪ್ರತಿಕ್ರಿಯೆ ಆಗಿತ್ತು. ಆ ಲೇಖನದಲ್ಲಿ, ಭಾರತದಲ್ಲಿ ಮಹಿಳೆಯರ ಅವನತಿಗೆ “ಪುರುಷನೇ ಆಗಿದ್ದ ಬುದ್ಧ ಅಥವಾ ಬೌದ್ಧ ಧರ್ಮವೇ ಕಾರಣ” ಎಂಬ ಆರೋಪ ಮಾಡಲಾಗಿತ್ತು. ಲಾಮಾ ಗೋವಿಂದ ಇದನ್ನು ತಳ್ಳಿಹಾಕಿ ಸ್ಪಷ್ಟನೆ ನೀಡಿದ್ದರು. ಡಾ. ಅಂಬೇಡ್ಕರ್ ಅವರು ತಮ್ಮ ಲೇಖನವನ್ನು ಲಾಮಾ ಗೋವಿಂದ ಅವರ ಉಲ್ಲೇಖದೊಂದಿಗೆ ಪ್ರಾರಂಭಿಸಿ, ಮಹಿಳೆಯರ ಪತನಕ್ಕೆ ಬುದ್ಧನನ್ನು ದೂಷಿಸುವವರ ವಿರುದ್ಧ ತೀಕ್ಷ್ಣವಾದ ಪ್ರತಿಕ್ರಿಯೆ ನೀಡುತ್ತಾರೆ. ಇತಿಹಾಸದ ಸತ್ಯವನ್ನು ತೆರೆದಿಡುತ್ತಾರೆ.

ಭಾರತದಲ್ಲಿ ಮಹಿಳೆಯರ ಹೀನಾಯ ಸ್ಥಿತಿಗೆ ನಿಜವಾದ ಕಾರಣ ಯಾರು?

ಅಂಬೇಡ್ಕರ್ ಎತ್ತಿರುವ ಮಹತ್ತರವಾದ ಪ್ರಶ್ನೆಗಳು: 1. ಭಾರತದಲ್ಲಿ ಮಹಿಳೆಯರು ಒಂದು ಕಾಲದಲ್ಲಿ ಎಲ್ಲ ಧಾರ್ಮಿಕ, ತಾತ್ವಿಕ, ಸಾಮಾಜಿಕ ಹಕ್ಕುಗಳನ್ನು ಹೊಂದಿದ್ದರು. ಆದರೆ ಅವರು ಈ ಹಕ್ಕುಗಳನ್ನು ಕಾಲಕ್ರಮೇಣ ಹೇಗೆ ಕಳೆದುಕೊಂಡರು? 2. ಗಾರ್ಗಿ, ಅಪಲ, ಲೋಪಮುದ್ರೆಯಂತಹ ಮಹಾಪಂಡಿತ ಮಹಿಳೆಯರ ಯುಗದಿಂದ ಪುರುಷಾಧಿಪತ್ಯದಿಂದ ಬದಿಗೆ ಒತ್ತಲ್ಪಟ್ಟು ಅಂಧಕಾರದ ಯುಗಕ್ಕೆ ಹೇಗೆ ಪತನವಾಯಿತು? 3. ಮಹಿಳೆಯರು ಶಿಕ್ಷಣ, ಸ್ವಾತಂತ್ರ‍್ಯ ಮತ್ತು ಗೌರವದ ಹಕ್ಕನ್ನು ಕಳೆದುಕೊಂಡು ಪುರುಷನ ಗುಲಾಮರಾಗಿ ಬದುಕಲು ಪ್ರಚೋದಿಸಿದ ಶಕ್ತಿಗಳು ಯಾರು?- ಇವೆಲ್ಲಕ್ಕೂ ಅಂಬೇಡ್ಕರ್ ಪುರಾವೆಗಳ ಜೊತೆಗೆ ಅತ್ಯಂತ ತಾಳ್ಮೆಯ ತುಲನಾತ್ಮಕ ವಿಶ್ಲೇಷಣೆ ನೀಡುತ್ತಾರೆ.

ಅಂಬೇಡ್ಕರ್ ಅವರ ಪ್ರಬಂಧದ ಪ್ರಭಾವ

ಈ ಕೃತಿಯು ಹಿಂದೂ ಸಮಾಜದ ಸ್ತ್ರೀಯರ ಪತನದ ಕಥೆಯಷ್ಟೇ ಅಲ್ಲ, ಅವರ ಪುನರುತ್ಥಾನದ ಘೋಷಣೆಯೂ ಹೌದು. ಅಂಬೇಡ್ಕರ್ ಅವರು ಪ್ರಖರ ಸತ್ಯಗಳನ್ನು ಬಹಿರಂಗಪಡಿಸುತ್ತಾರೆ. ಈ ಲೇಖನ ಅಂಬೇಡ್ಕರ್ ಅವರ ನ್ಯಾಯ, ಸಮಾನತೆ, ಮತ್ತು ಮಾನವ ಹಕ್ಕುಗಳ ತತ್ವದ ಪ್ರಬಲ ಪ್ರತಿಬಿಂಬವಾಗಿದೆ.

ಬಾಬಾ ಸಾಹೇಬರ ಈ ಮಹತ್ವದ ಕೃತಿಯು ಮೂರು ಭಾಗಗಳಲ್ಲಿ ವಿಂಗಡಿಸಲ್ಪಟ್ಟಿದೆ. ಇದರಲ್ಲಿ ಅವರು ಬುದ್ಧನ ವಿರುದ್ಧ ಹೊರಿಸಲಾದ ಆಕ್ಷೇಪಣೆಗಳನ್ನೂ, ಅವನ ಮೇಲೆ ಹೊರಸೂಸಿದ ತಪ್ಪು ಆರೋಪಗಳನ್ನೂ ಕಟುವಾಗಿ ಖಂಡಿಸುತ್ತಾರೆ. ಕೇವಲ ಪ್ರತಿರೋಧವಷ್ಟೇ ಅಲ್ಲ, ಬುದ್ಧನ ಸತ್ಯಸ್ವರೂಪವನ್ನು ಕೂಡ ಆಳವಾಗಿ ಅನಾವರಣಗೊಳಿಸುತ್ತಾರೆ. ಬುದ್ಧ ನಿಜವಾದ ಅರ್ಥದಲ್ಲಿ ಮಹಿಳಾ ಸಮಾನತೆಯ ಧ್ವಜಧಾರಿ, ಅವರ ಮುಕ್ತಿಗಾಗಿ ಅಚಲ ಸಂಕಲ್ಪದಿಂದ ಹೋರಾಟ ಮಾಡಿದ ಮಹಾನ್ ಸಮಾಜ ಸುಧಾರಕ. ಬುದ್ಧನ ಸಿದ್ಧಾಂತ, ಆತನ ನಡವಳಿಕೆ, ಜೀವನ ಶೈಲಿ, ಆಚಾರ-ವ್ಯವಹಾರ-ಈ ಎಲ್ಲವೂ ಮಹಿಳೆಯನ್ನು ಮಾನವೀಯ ಗೌರವದ ಶಿಖರಕ್ಕೆ ಏರಿಸಬೇಕೆಂದು ಆಶಿಸಿದವು. ಬುದ್ಧನ ದೃಷ್ಟಿಕೋನದಲ್ಲಿ ಮಹಿಳೆ ಒಂದು ಅನಗತ್ಯ ಅಸ್ತಿತ್ವವಲ್ಲ, ಬದಲಾಗಿ ಸಮಾಜದ ಪರಿಪೂರ್ಣತೆಯನ್ನು ನಿರ್ಧರಿಸುವ ಅವಿಭಾಜ್ಯ ಶಕ್ತಿಯೆಂದೇ ಪರಿಗಣಿತಳಾಗಿದ್ದಳು.

ಬುದ್ಧನಿಗೆ ಮಹಿಳಾ ಸ್ವಾತಂತ್ರ‍್ಯದ ಕನಸು ಇತ್ತು, ಮಹಿಳೆಯೂ ಸನ್ಯಾಸವನ್ನು ಸ್ವೀಕರಿಸಬಹುದೆಂಬ ಸಮಾನತೆಯ ಹಾದಿಯನ್ನು ಆತ ತೆರೆದಿದ್ದ. ಆತನ ಧರ್ಮ ಮಹಿಳೆಯನ್ನು ಪಾತಾಳಕ್ಕಿಳಿಸುವುದಕ್ಕಲ್ಲ, ಬದಲಾಗಿ ಸಮಾನತೆಯಿಂದ ನಡೆಸಿಕೊಳ್ಳುವ ಉದ್ದೇಶ ಹೊಂದಿತ್ತು ಎಂದು ಪ್ರತಿಪಾದಿಸುತ್ತದೆ.

Ambedkar with Bhudda
ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಬುದ್ಧ

ಬುದ್ಧನ ಮೇಲಿನ ಅಪವಾದಗಳ ಬಗ್ಗೆ ಬಾಬಾಸಾಹೇಬರ ಗಂಭೀರ ವಿಶ್ಲೇಷಣೆ: ಬುದ್ಧನ ಮೇಲೆ ಆರೋಪ ಹೊರಿಸಲು ಅಸ್ತಿತ್ವದಲ್ಲಿದ್ದ ಎರಡು ಪ್ರಮುಖ ಕಾರಣಗಳನ್ನು ಡಾ. ಬಾಬಾಸಾಹೇಬ ಅಂಬೇಡ್ಕರ್ ತಮ್ಮ ಬರಹದಲ್ಲಿ ತೀಕ್ಷ್ಣ ಪರೀಕ್ಷೆಗೆ ಒಡ್ಡುತ್ತಾರೆ. ಅವರು ತಾತ್ವಿಕ ಆಧಾರಗಳ ಮೂಲಕ ಮತ್ತು ಪುರಾವೆಗಳ ನೆರವಿನಿಂದ ಬುದ್ಧನ ಮಹಿಳಾಪರ ನಿಲುವುಗಳನ್ನು ಮತ್ತಷ್ಟು ಉಜ್ವಲವಾಗಿ ಮಂಡಿಸುತ್ತಾರೆ.

ಮಹಾಪರಿನಿಬ್ಬಾಣ ಸೂತ್ರದ ವಿವಾದ

ಬಾಬಾಸಾಹೇಬರ ಪ್ರಕಾರ `ಈವ್ಸ್ ವೀಕ್ಲಿ’ ಪ್ರಬಂಧವು ಬುದ್ಧ ತತ್ವವನ್ನು ತಪ್ಪಾಗಿ ವ್ಯಾಖ್ಯಾನಿಸಿತ್ತು. ಬುದ್ಧನ ಶಿಷ್ಯ ಆನಂದರು, ಮಹಿಳೆಯರ ಬಗ್ಗೆ ಕೇಳಿದ ಪ್ರಶ್ನೆಗೆ ಬುದ್ಧ ನೀಡಿದ ಉತ್ತರವನ್ನು “ಬುದ್ಧನು ಮಹಿಳೆಯರನ್ನು ತಿರಸ್ಕಾರ ಮನೋಭಾವನೆಯಿಂದ ನೋಡಬೇಕೆಂದು ಹೇಳಿರುವನೆಂದು” ಅರ್ಥೈಸಲಾಗಿತ್ತು, ಮಹಾಪರಿನಿಬ್ಬಾಣ ಸೂತ್ರದ ಐದನೇ ಅಧ್ಯಾಯವನ್ನು ಬಳಸಿಕೊಂಡು ಬುದ್ಧನ ಮೇಲೆ ಅಪವಾದ ಮಾಡಲಾಗಿತ್ತು. ಈ ಸೂತ್ರದ ಪ್ರಕಾರ, “ಮಹಿಳೆಯರ ಜೊತೆ ಹೇಗೆ ವರ್ತಿಸಬೇಕು” ಎಂದು ಆನಂದರು ಕೇಳಿದಾಗ – ಬುದ್ಧನು “ಮಹಿಳೆಯರ ಬಗ್ಗೆ ನಿರ್ಲಕ್ಷ್ಯ ಮನೋಭಾವವನ್ನು ಹೊಂದಬೇಕು” ಎಂದು ಉತ್ತರಿಸಿದ ಎಂದು ಹೇಳಲಾಗಿದೆ. ಆದರೆ ಈ ಸೂತ್ರ ಬುದ್ಧನ ಮರಣದ ಸುಮಾರು 400 ವರ್ಷಗಳ ಬಳಿಕ ಬರೆಯಲಾದ್ದರಿಂದ, ಇದು ವಾಸ್ತವ ಹೌದೋ ಅಲ್ಲವೋ ಗಂಭೀರ ಪ್ರಶ್ನೆ ಎದ್ದಿತ್ತು.

ಇದನ್ನೂ ಓದಿರಿ: ‘ಹಿಂದೂಧರ್ಮದ ಒಗಟುಗಳು’: ಉತ್ತರ ಸಿಗದ ಪ್ರಶ್ನೆಗಳ ಬೆನ್ನೇರಿ

ಬಾಬಾಸಾಹೇಬರು ಇದರ ಆಳವಿಶ್ಲೇಷಣೆಗೆ ಇಳಿದು, ಕೆಲವು ಮೂಲಭೂತ ಪ್ರಶ್ನೆಗಳನ್ನು ಎತ್ತುತ್ತಾರೆ: 1. ಆನಂದ ತಾವು ಅಷ್ಟು ಹತ್ತಿರವಿದ್ದ ಬುದ್ಧನಿಗೆ ಮಹಿಳೆಯರ ಕುರಿತು ಇಂತಹ ಪ್ರಶ್ನೆಯನ್ನು ಕೇಳಬಹುದಾ? 2. ಆನಂದರ ಇತರ ನಡವಳಿಕೆಗಳನ್ನು ಗಮನಿಸಿದರೆ, ಅವರು ಮಹಿಳೆಯರ ಕುರಿತು ಇಂತಹ ಸಂದೇಹವನ್ನು ಇಟ್ಟುಕೊಳ್ಳುವುದು ಹೇಗೆ ತಾನೇ ಸಾಧ್ಯ? 3. ಬುದ್ಧ, ಮಹಿಳೆಯರನ್ನು ಸದಾ ಗೌರವದಿಂದ ನೋಡುತ್ತಿದ್ದವನು. ಹಾಗಿರುವಾಗ, ಅವರ ಬಗ್ಗೆ ನಿರ್ಲಕ್ಷ್ಯ ಭಾವನೆ ಹೊಂದಬೇಕು ಎಂಬ ಮಾತನ್ನು ಹೇಳಬಹುದೇ?

ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ಬಾಬಾಸಾಹೇಬರು ಪುರಾವೆಗಳತ್ತ ಹೊರಳುತ್ತಾರೆ. ಇತಿಹಾಸದಲ್ಲಿ ಕಂಡುಬರುವ ಆನಂದರ ನಡೆ-ನುಡಿಗಳು ಮತ್ತು ಮಹಿಳೆಯರ ಬೌದ್ಧ ಸಂಘ ಪ್ರವೇಶಕ್ಕೆ ಅವರು ನೀಡಿದ ನೆರವನ್ನು ಗಮನಿಸಿದಾಗ, ಈ ಸಂಭಾಷಣೆ ಎಡವಟ್ಟಾಗಿರಬಹುದು ಎಂಬುದಾಗಿ ತಿಳಿಯಬರುತ್ತದೆ. ಆನಂದರು ಸ್ವತಃ ಭಿಕ್ಷು ಸಂಘಕ್ಕೆ ಮಹಿಳೆಯರ ಪ್ರವೇಶಕ್ಕಾಗಿ ಪ್ರಮುಖವಾಗಿ ಹೋರಾಡಿದ ವ್ಯಕ್ತಿ. ಹೀಗಿರುವಾಗ, ಬುದ್ಧನ ಮಾತುಗಳು ಅವರ ಕಾರ್ಯವೈಖರಿಗೆ ವ್ಯತಿರಿಕ್ತ ಎನಿಸುವುದಿಲ್ಲವೇ? ಬುದ್ಧನ ಜೀವನದಲ್ಲಿ ಮಹಿಳೆಯರ ಮಹತ್ತರ ಪಾತ್ರವನ್ನು ಗಮನಿಸಿದರೆ, ಈ ಸೂತ್ರದಲ್ಲಿ ಉಲ್ಲೇಖಿಸಲಾದ ವಾಕ್ಯಗಳು ನಿಜವಾಗಿಯೂ ಬುದ್ಧನ ಮಾತುಗಳೇ ಅಥವಾ ಆನಂತರ ಸೇರಿಸಲಾದ `ಪರಿಷ್ಕರಣೆ’ಗಳೇ ಎಂಬ ಗಂಭೀರ ಪ್ರಶ್ನೆ ಏಳುತ್ತದೆ.

ಭಿಕ್ಷುನಿ ಸಂಘದ ಸ್ಥಾಪನೆಯ ವಿವಾದ

ಬುದ್ಧನ ವಿರುದ್ಧದ ಎರಡನೆಯ ಆಕ್ಷೇಪಣೆ-ಭಿಕ್ಷುನಿ ಸಂಘವು ಭಿಕ್ಷು ಸಂಘಕ್ಕೆ ಅಧೀನವಾಗಿ ಇರಬೇಕೆಂದು ನಿರ್ಧರಿಸಲಾಗಿತ್ತು. ಆದುದರಿಂದ ಬುದ್ಧನಿಗೆ ಮಹಿಳೆಯರ ಮೇಲೆ ಸಮಾನತೆಯ ಭಾವನೆ ಇರಲಿಲ್ಲ ಎನ್ನುವುದು. ಬಾಬಾಸಾಹೇಬರು ಬುದ್ಧನ ಈ ನಿರ್ಧಾರವನ್ನು ಒಂದು ಪೂರ್ವಗ್ರಹಪೂರ್ಣ ಗಂಡುಮೇಲಾಧಿಕಾರ ತತ್ವದ ಪರಿಣಾಮವಲ್ಲ, ಬದಲಾಗಿ ಆಗಿನ ಸಾಮಾಜಿಕ ಸ್ಥಿತಿಗೆ ಹೊಂದಿಕೊಳ್ಳುವಂತಹ ನಿರ್ಧಾರ ಎಂದು ವಿವರಿಸುತ್ತಾರೆ. ಬುದ್ಧನು ಯಾವುದೇ ಸಂದರ್ಭದಲ್ಲೂ ಮಹಿಳೆಯರನ್ನು ಪುರುಷರಿಗಿಂತ ಕಡಿಮೆಯಾಗಿ ಪರಿಗಣಿಸಿದ್ದಿಲ್ಲ. ಆದರೆ ಅವರ ಸುರಕ್ಷತೆ ಮತ್ತು ಸಮುದಾಯದ ಸುಸ್ಥಿರತೆಗಾಗಿ, ಭಿಕ್ಷು ಸಂಘಕ್ಕೆ ಅನುಗುಣವಾಗಿ ಅನಿವಾರ್ಯವಾಗಿ ತೆಗೆದುಕೊಳ್ಳಬೇಕಾದ ನಿರ್ಧಾರ ಆಗಿತ್ತು ಎಂದು ವಿವರಿಸುತ್ತಾರೆ. ಬೌದ್ಧ ಪರಂಪರೆಯಲ್ಲಿ ಭಿಕ್ಷುನಿ ಸಂಘದ ಸ್ಥಾಪನೆಯು ನಿಸ್ಸಂದೇಹವಾಗಿ ಕ್ರಾಂತಿಕಾರಿಯೇ. ಬುದ್ಧನ ವಿರುದ್ಧ ಆಕ್ಷೇಪಣೆ ಮಾಡುವವರು, “ಭಿಕ್ಷುನಿ ಸಂಘ ಭಿಕ್ಷು ಸಂಘದ ಅಧೀನದಲ್ಲಿತ್ತು” ಎಂಬುದನ್ನು ಚರ್ಚಿಸುತ್ತಾರೆ. ಆದರೆ ಬಾಬಾಸಾಹೇಬರು ಈ ಆಕ್ಷೇಪಣೆಯನ್ನು ಪರಾಮರ್ಶಿಸಿ, ಆ ಶತಮಾನದಲ್ಲಿ ಮಹಿಳೆಯರಿಗೆ ಸನ್ಯಾಸ ಸ್ವೀಕಾರವೇ ಒಂದು ಅಪೂರ್ವ ಕ್ರಾಂತಿ ಎನ್ನುತ್ತಾರೆ. ಬ್ರಾಹ್ಮಣ್ಯದ ವೈದಿಕ ಸಿದ್ಧಾಂತದಲ್ಲಿ ಮಹಿಳೆಯರಿಗೆ ಜ್ಞಾನ, ವಿದ್ಯಾಭ್ಯಾಸ, ತಪಸ್ಸು, ಮತ್ತು ಸನ್ಯಾಸ ಸ್ವೀಕಾರಕ್ಕೆ ಅವಕಾಶವಿರಲಿಲ್ಲ. ಪುರುಷನ ಆಜ್ಞಾಧೀನಳಾಗಿಯೇ ಇರಬೇಕೆಂಬ ಕಟ್ಟಳೆಯನ್ನು ಸ್ತ್ರೀಯ ಮೇಲೆ ಸಮಾಜ ವಿಧಿಸಿತ್ತು. ಸಮಾಜದ ದೃಷ್ಟಿಯಲ್ಲಿ, ಬುದ್ಧನು ಮಹಿಳೆಯರಿಗೆ ಪರಿವ್ರಾಜ್ಯ (ಸನ್ಯಾಸ) ಸ್ವೀಕರಿಸಲು ಅವಕಾಶ ನೀಡಿದ್ದು ಆ ಕಾಲದ ಅತ್ಯಂತ ಕ್ರಾಂತಿಕಾರಿ ಹೆಜ್ಜೆಯಾಗಿದೆ.

Bhudda and womes
ಬೌದ್ಧಧರ್ಮ ಮತ್ತು ಮಹಿಳೆಯರು (ಸಾಂದರ್ಭಿಕ ಚಿತ್ರ)

ಬುದ್ಧನು ಸ್ತ್ರೀ ಹಾಗೂ ಪುರುಷನ ನಡುವಿನ ಸಮಾನತೆಯನ್ನು ಕೇವಲ ಬೋಧನೆಗಳಲ್ಲಿ ಮಾತ್ರವಲ್ಲ, ತನ್ನ ಧರ್ಮದ ಪ್ರತಿಯೊಂದು ಶಾಖೆಯಲ್ಲಿಯೂ ಜಾರಿ ಮಾಡಿದ ಮಹಾನ್ ಪರಿವರ್ತಕ. ಮಹಿಳೆಯರ ಅಸ್ತಿತ್ವವನ್ನು ವಿರೋಧಿಸದೆ, ಅವಳನ್ನು ಕೀಳಾಗಿ ನೋಡದೆ, ಆಕೆಯ ಸ್ವಾತಂತ್ರ‍್ಯ ಮತ್ತು ಧಾರ್ಮಿಕ ಹಕ್ಕನ್ನು ಪ್ರತಿಪಾದಿಸಿದ.

ಬುದ್ಧನು ಮಹಿಳೆಯರನ್ನು ನಿರ್ಲಕ್ಷಿಸಬೇಕು ಎಂಬ ತತ್ವದ ಪ್ರತಿಪಾದಕನೇ?

ಬುದ್ಧನ ತತ್ವ ಮತ್ತು ಜೀವನವನ್ನು ಗಮನಿಸಿದರೆ, ಅವನ ಆದರ್ಶಗಳು ಮಹಿಳೆಯರ ವಿರೋಧಿಯಾಗಿರಲಾರವು. ಆಮ್ರಪಾಲಿ ಮತ್ತು ವಿಶಾಖಳಂತಹ ಶ್ರೇಷ್ಠ ಮಹಿಳೆಯರು ಬುದ್ಧನ ಬಳಿ ಬಂದು ಉಪದೇಶ ಪಡೆಯುತ್ತಿದ್ದರೆಂದೂ, ಅವರು ಭಿಕ್ಷುಗಳಿಗೆ ಭಿಕ್ಷೆ ನೀಡುತ್ತಿದ್ದರೆಂದೂ ಪೀಟಕ ಸಾಹಿತ್ಯದಲ್ಲಿ ಪೂರಕ ಸಾಕ್ಷ್ಯಗಳಿವೆ. ವೈಶಾಲಿಯ ವೇಶ್ಯೆ ಆಮ್ರಪಾಲಿಯ ಊಟದ ಆಹ್ವಾನವನ್ನು ಸ್ವೀಕರಿಸುವ ಮೂಲಕ ಬುದ್ಧನು ಸಮಾಜದ ಎಲ್ಲ ವರ್ಗಗಳ ಮಹಿಳೆಯರಿಗೂ ಗೌರವ ಸಲ್ಲಿಸುತ್ತಿದ್ದನು ಎಂದು ಸ್ಪಷ್ಟವಾಗುವುದು. ಈ ನಿದರ್ಶನಗಳನ್ನು ನೋಡಿದಾಗ ಬುದ್ಧನು ಮಹಿಳೆಯರನ್ನು ನಿರ್ಲಕ್ಷಿಸಬೇಕೆಂದು ಪ್ರತಿಪಾದಿಸಿದನೆಂದು ನಂಬಲು ಅಸಾಧ್ಯ. ಬುದ್ಧ ಬ್ರಹ್ಮಚರ್ಯಕ್ಕೆ ವಿಶೇಷ ಪ್ರಾಮುಖ್ಯತೆ ನೀಡಿದ್ದನು. ಆದರೆ ಅದನ್ನು ಮಹಿಳೆಯರ ವಿರೋಧವಾಗಿ ಬಳಸಿದ ದಾಖಲೆಗಳಿಲ್ಲ. “ಮಹಿಳೆಯರೊಂದಿಗೆ ಅನಗತ್ಯ ಸಂಪರ್ಕವನ್ನು ಬಿಡಿ” ಎಂಬುದು ಬುದ್ಧನ ಸಲಹೆಯಾಗಿತ್ತು. ಆದರೆ, “ಮಹಿಳೆಯರನ್ನು ಅಪಮಾನಿಸಿ, ಅವರನ್ನು ಕೀಳುದೃಷ್ಟಿಯಿಂದ ನೋಡು” ಎನ್ನುವುದಲ್ಲ ಎಂದು ಬಾಬಾಸಾಹೇಬರು ವಾದಿಸುತ್ತಾರೆ.

ಸತ್ಯದ ಬೆಳಕು

ಬುದ್ಧನ ಮೇಲೆ ಹೊರಿಸಲಾದ ಅಪವಾದಗಳು ಆತನ ಮೇಲಿನ ಅಸೂಯೆ ಹಾಗೂ ಬೌದ್ಧ ಧರ್ಮದ ಮೇಲಿನ ದ್ವೇಷದಿಂದ ರೂಪುಗೊಂಡ, ಅನವಶ್ಯಕ ‘ಪರಿಷ್ಕರಣೆ’ಗಳ ಪರಿಣಾಮವೆನ್ನುತ್ತಾರೆ ಬಾಬಾಸಾಹೇಬರು. ಬಾಬಾಸಾಹೇಬರು ತಮ್ಮ ಆಳ ಚಿಂತನೆ, ಇತಿಹಾಸ ಮತ್ತು ಪುರಾವೆಗಳ ಬೆಳಕಿನಲ್ಲಿ ಬುದ್ಧನನ್ನು ಈ ಹುಸಿ ಆರೋಪಗಳಿಂದ ಮುಕ್ತಗೊಳಿಸುತ್ತಾರೆ. ಬೌದ್ಧ ತತ್ವಶಾಸ್ತ್ರವನ್ನು ಪರಿಗಣಿಸಿದರೆ, ಬುದ್ಧನು ಮಹಿಳೆಯನ್ನು ಕೀಳಾಗಿ ನೋಡಲು ಸಾಧ್ಯವೇ ಇಲ್ಲ. ಬದಲಿಗೆ, ಆತ ಮಹಿಳೆಯರ ಸಮಾನತೆಗಾಗಿ ಹೋರಾಡಿದ ಪ್ರಥಮ ಮಹಾನ್ ಸುಧಾರಕ ಎಂಬ ತಿರುಳನ್ನು ಬಾಬಾಸಾಹೇಬರು ತಮ್ಮ ಕೃತಿಯಲ್ಲಿ ನಿಚ್ಚಳವಾಗಿ ತೋರುತ್ತಾರೆ. ಬುದ್ಧನ ಮಹಿಳಾ ಚಿಂತನೆ, ಸಾಂಪ್ರದಾಯಿಕ ಭಾರತೀಯ ದೃಷ್ಟಿಕೋನಕ್ಕೆ ಸಂಪೂರ್ಣ ವಿರುದ್ಧವಾಗಿತ್ತು. ಮಹಿಳೆಯರು ಪುರುಷರಿಗಿಂತ ಕೀಳು, ಅವರ ಜನ್ಮವೇ ದೌರ್ಭಾಗ್ಯಕರ ಎಂಬ ಸಂಪ್ರದಾಯವಾದಿ ಭಾವನೆಗಳ ವಿರುದ್ಧ ತೀಕ್ಷ್ಣ ಬದಲಾವಣೆಗಳನ್ನು ತಂದ ಮಹಾನುಭಾವ ಬುದ್ಧ.

ಮಹಿಳೆಯರ ಬಗ್ಗೆ ಬುದ್ಧನ ಕ್ರಾಂತಿಕಾರಿ ನಿಲುವು

ಒಮ್ಮೆ ಶ್ರಾವಸ್ತಿಯಲ್ಲಿ ರಾಜ ಪ್ರಸೇನಜಿತ್ ಬುದ್ಧನನ್ನು ಭೇಟಿಯಲ್ಲಿದ್ದಾಗ, ರಾಜಮನೆತನದ ದೂತನು ಬಂದು, “ರಾಣಿ ಮಲ್ಲಿಕಾ ಹೆಣ್ಣುಮಗುವಿಗೆ ಜನ್ಮನೀಡಿದ್ದಾಳೆ” ಎಂದು ವರದಿ ನೀಡಿದನು. ಈ ಸುದ್ದಿಯನ್ನು ಕೇಳಿ ರಾಜನು ನಿರಾಶನಾದನು. ರಾಜನ ಮುಖದಲ್ಲಿ ಮೂಡಿದ ಭಾವವನ್ನು ಗಮನಿಸಿದ ಬುದ್ಧನು, “ಹೆಣ್ಣು ಮಗುವೂ ಪುರುಷ ಸಂತತಿಯಂತೆ ಅಥವಾ ಅದಕ್ಕಿಂತ ಶ್ರೇಷ್ಠಳಾಗಬಹುದು. ಅವಳು ವಿವೇಕವಂತಳಾಗಿ, ಸದ್ಗುಣಶೀಲಳಾಗಿ ಬೆಳೆಯಬಹುದು. ಅವಳು ಭವಿಷ್ಯದಲ್ಲಿ ಮಹಾ ಕಾರ್ಯಗಳನ್ನು ಮಾಡಬಹುದು; ಪರಾಕ್ರಮಶಾಲಿ ಅರಸಿ ಎನಿಸಬಹುದು” ಎಂದು ಧೈರ್ಯ ನೀಡಿದನು. ಇದು ಭಾರತೀಯ ಸಾಂಪ್ರದಾಯಿಕ ಮನೋಭಾವಕ್ಕೆ ವಿರುದ್ಧವಾದ ಹೇಳಿಕೆಯಷ್ಟೇ ಅಲ್ಲ, ಮಹಿಳೆಯರ ಸಾಮರ್ಥ್ಯವನ್ನು ಶತಶತಮಾನಗಳ ಹಿಂದೆಯೇ ಪುರಸ್ಕರಿಸಿದ ಪರಿವರ್ತನಾಶೀಲ ನಿಲುವು. ಹೆಣ್ಣುಮಗು ಜನಿಸಿದರೆ ವಿಪತ್ತು ಎಂದು ಪರಿಗಣಿಸುತ್ತಿದ್ದ ಕಾಲಘಟ್ಟದಲ್ಲಿ, ಬುದ್ಧನು ಮಹಿಳೆಯರ ಸಾಮರ್ಥ್ಯವನ್ನು ಎತ್ತಿಹಿಡಿದಿದ್ದ ಎಂಬುದನ್ನು ಈ ಮಾತುಗಳು ನಿರ್ವಿವಾದವಾಗಿ ಸಾರುತ್ತವೆ. “ಮಹಿಳೆ ಸರ್ವೋಚ್ಚ ಮೌಲ್ಯ ಹೊಂದಿದ್ದಾಳೆ, ಜಗತ್ತಿಗೆ ಬೋಧಿಸತ್ವರಿಗೆ, ಮಹಾ ರಾಜರುಗಳಿಗೆ ಜನ್ಮ ನೀಡುವ ಶಕ್ತಿ ಅವಳಲ್ಲಿಯೇ ಇದೆ” ಎಂದು ಮತ್ತೊಂದು ಸಂದರ್ಭದಲ್ಲಿ ಬುದ್ಧನು ಘೋಷಿಸಿದ್ದಾನೆ.

image 179
ಆಮ್ರಪಾಲಿ ಮತ್ತು ಬುದ್ಧ (ಸಾಂದರ್ಭಿಕ ಚಿತ್ರ)

ಮಹಿಳೆಯರ ಶಕ್ತಿಯನ್ನು, ಅವರು ವಹಿಸುವ ಮಹತ್ತರ ಪಾತ್ರವನ್ನು ಹಾಗೂ ಅವರು ಸಮಾನತೆಯ ಹಕ್ಕುದಾರರೆಂಬ ಸತ್ಯವನ್ನು ಇಂತಹ ಮಾತುಗಳು ಪ್ರತಿಪಾದಿಸುತ್ತವೆ. ಹೆಣ್ಣುಮಕ್ಕಳ ಜನನವನ್ನು ಸಂಕಟಕರ ವಿದ್ಯಮಾನವೆಂದು ಕಾಣುತ್ತಿದ್ದ ಪುರುಷಾಧಿಪತ್ಯದ ಸಮಾಜದಲ್ಲಿ, ಬುದ್ಧನು ಮಹಿಳೆಯರ ವ್ಯಕ್ತಿತ್ವವನ್ನೂ, ಅವರ ಧರ್ಮ, ಸಮಾಜ ಮತ್ತು ರಾಜಕೀಯದಲ್ಲಿ ಅವರ ಮಹತ್ತರ ಪಾತ್ರವನ್ನೂ ಪ್ರೋತ್ಸಾಹಿಸಿದ್ದನು. ಬುದ್ಧನ ಈ ಉದಾತ್ತ ನಿಲುವನ್ನು ಅರ್ಥೈಸಿಕೊಳ್ಳದವರು, ಆತನ ಹೆಸರನ್ನು ದುರುಪಯೋಗ ಮಾಡಿಕೊಂಡು ಆತ ಮಹಿಳಾ ವಿರೋಧಿ ಎಂದು ದೋಷಾರೋಪಣೆ ಮಾಡುತ್ತಾರೆ. ಬುದ್ಧನ ವಾಸ್ತವ ವ್ಯಕ್ತಿತ್ವವನ್ನು ಅರಿಯದೆ ಮೂಢರಂತೆ ಮಾತಾಡುತ್ತಾರೆ ಎಂಬುದು ಬಾಬಾಸಾಹೇಬರ ದೃಢ ನಿಲುವು. ಬುದ್ಧನು ಮಹಿಳೆಯರ ಸಮಾನತೆ ಹಾದಿಯ ಪ್ರಥಮ ದೀಪಸ್ತಂಭ ಎಂದು ಪ್ರತಿಪಾದಿಸುತ್ತಾರೆ.

ಹಾಗಾದರೆ ಹಿಂದೂ ಮಹಿಳೆಯರ ಅವನತಿಗೆ ನಿಜಕ್ಕೂ ಕಾರಣರಾದವರು ಯಾರು?

ವೈದಿಕ ಪರಂಪರೆಯಲ್ಲಿ ಸನ್ಯಾಸ ಜೀವನಕ್ಕೆ ಮುಕ್ತ ಅವಕಾಶವಿರಲಿಲ್ಲ; ಇದಕ್ಕೆ ಕಠಿಣ ವಿರೋಧವಿತ್ತು. ಶತಮಾನಗಳ ಕಾಲ ಬ್ರಾಹ್ಮಣ್ಯವು ಹಲವಾರು ವಿಧಿನಿಷೇಧಗಳನ್ನು ಹೇರಿ, ಕೆಲವರಿಗೆ ಮಾತ್ರ ಸನ್ಯಾಸತ್ವದ ಅವಕಾಶ ಕಲ್ಪಿಸಿತು. ಅವುಗಳಲ್ಲಿ ಮುಖ್ಯವಾದ ನಿಷೇಧ-ಮಹಿಳೆಯರು ಮತ್ತು ಶೂದ್ರರು ಸನ್ಯಾಸಕ್ಕೆ ಅರ್ಹರಲ್ಲ ಎಂಬ ಪರಿಣಾಮವಾಗಿ ಮಹಿಳೆಯರು ಹಾಗೂ ಶೂದ್ರರು ಜ್ಞಾನವನ್ನು ಪಡೆಯುವ ಹಕ್ಕಿನಿಂದ ಸಂಪೂರ್ಣ ವಂಚಿತರಾಗಿದ್ದರು.

ಇದನ್ನೂ ಓದಿರಿ: ‘ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗಾಗಿ ಮಾಡಿರುವುದೇನು?’

ಬುದ್ಧನು ಇಂತಹ ವೈದಿಕ ಕ್ರೌರ್ಯವನ್ನು ನಾಶಗೊಳಿಸಿದ್ದನು. ಮಹಿಳೆಯರಿಗೂ ಪುರುಷರಂತೆ ಜ್ಞಾನಾರ್ಜನೆಯ ಹಕ್ಕನ್ನು ನೀಡಿದ್ದನು. ಮಾನವ ತನ್ನ ಉನ್ನತಿಯನ್ನು ತಾನೇ ನಿರ್ಧರಿಸಬೇಕು ಎಂದು ಬುದ್ಧ ಪ್ರತಿಪಾದಿಸಿದನು. ‘ಇದು ಭಾರತದಲ್ಲಿ ನಡೆದ ಮೊತ್ತ ಮೊದಲ ಮಹಿಳಾ ಕ್ರಾಂತಿ ಮತ್ತು ಆಕೆಯ ನಿಜವಾದ ವಿಮೋಚನೆ’ ಅನ್ನುತ್ತಾರೆ ಅಂಬೇಡ್ಕರ್.

ಮನುಸ್ಮೃತಿಯಲ್ಲಿ ಮಹಿಳೆಯರ ಜ್ಞಾನದ ಹಕ್ಕಿನ ನಿರಾಕರಣೆ

ಮನು ಬಂದಿದ್ದು ಬುದ್ಧನ ಕಾಲಾನಂತರ. ಹಾಗಾದರೆ ಬುದ್ಧನ ಕಾಲದಲ್ಲಿ ಮಹಿಳೆಗೆ ಇದ್ದ ಸ್ವಾತಂತ್ರ‍್ಯ ಮತ್ತು ಹಕ್ಕುಗಳು ನಶಿಸಲು ಕಾರಣವೇನು? ಬುದ್ಧನ ಬಳಿಕ ಬಂದ ಮನು, ಬೌದ್ಧ ಧರ್ಮದ ಸಮಾನತಾವಾದಿ ದೃಷ್ಟಿಕೋನವನ್ನು ಸಂಪೂರ್ಣವಾಗಿ ತಿರಸ್ಕರಿಸಿ, ಮಹಿಳೆಯರನ್ನು ಶೋಷಿಸುವ ಸಾಮಾಜಿಕ ಕಟ್ಟಳೆಗಳನ್ನು ಸ್ಥಾಪಿಸಿದವನು. ಅವನು ಮನುಸ್ಮೃತಿಯಲ್ಲಿ ಸ್ಪಷ್ಟವಾಗಿ ಹೇಳುವಂತೆ-ಮಹಿಳೆಯರಿಗೆ ವೇದ ಅಧ್ಯಯನ ಮಾಡುವ ಹಕ್ಕಿಲ್ಲ. ಮಹಿಳೆಯರಿಗೆ ವೇದ ಮಂತ್ರಗಳನ್ನು ಉಚ್ಚರಿಸುವ ಅವಕಾಶವಿರಲಿಲ್ಲ. ಅವರ ಶವ ಸಂಸ್ಕಾರಗಳನ್ನೂ ವೇದ ಮಂತ್ರಗಳಿಲ್ಲದೆ ನಡೆಸಲಾಗುತ್ತಿತ್ತು. ಈ ಕಾರಣದಿಂದ ಹಿಂದೂ ಧರ್ಮದಲ್ಲಿ ಮಹಿಳೆಯರು ಧಾರ್ಮಿಕ ಜ್ಞಾನವಿಲ್ಲದವರಾಗಿದ್ದರೆ, ಅದಕ್ಕೆ ಬ್ರಾಹ್ಮಣ್ಯವೇ ಮುಖ್ಯ ಕಾರಣ ಎಂಬುದು ಬಾಬಾಸಾಹೇಬರ ನಿಚ್ಚಳ ಪ್ರತಿಪಾದನೆ.

ಅಂಬೇಡ್ಕರ್ ಅಭಿಪ್ರಾಯದಲ್ಲಿ, ಮನುಸ್ಮೃತಿಯು ಭಾರತದ ಮಹಿಳೆಯರಿಗೆ ಬಗೆದ ಬಹುದೊಡ್ಡ ಅವಹೇಳನ ಮತ್ತು ಆಘಾತದ ಮೂಲ. ಮನು ಮಹಿಳೆಯರಿಂದ ಜ್ಞಾನಾರ್ಜನೆಯ ಹಕ್ಕನ್ನು ಕಸಿದುಕೊಂಡ. ಜ್ಞಾನಾರ್ಜನೆ ಎಂಬುದು ಪ್ರತಿಯೊಬ್ಬ ಮಾನವನ ಮೂಲಭೂತ ಹಕ್ಕು. ಆದರೆ ಮಹಿಳೆಯರಿಗೆ ಅದನ್ನು ನಿರಾಕರಿಸಿ, ಅವರು ಅಜ್ಞಾನಿಗಳು, ಬುದ್ಧಿಶಕ್ತಿ ಇಲ್ಲದವರು ಎಂದು ಘೋಷಿಸಲಾಗಿತ್ತು. ನಂತರ, ಆಕೆಗೆ ಆಧ್ಯಾತ್ಮಿಕ ಸಾಮರ್ಥ್ಯವಿಲ್ಲ ಎಂಬ ಕಾರಣ ಹೇಳಿ, ಸನ್ಯಾಸ ಜೀವನಕ್ಕೆ ಅವಕಾಶ ನಿರಾಕರಿಸಲಾಯಿತು. ಇದು ಮಹಿಳೆಯರ ವಿರುದ್ಧ ಬೇರೂರಿಸಿದ ಕ್ರೌರ್ಯವಲ್ಲದೆ ಮತ್ತೇನು ಎಂದು ಪ್ರಶ್ನಿಸುತ್ತಾರೆ.

image 180
ಮನುಸ್ಮೃತಿ

ಬಾಬಾಸಾಹೇಬರು ಹೇಳುವಂತೆ, ಪ್ರಾಚೀನ ಕಾಲದ ಅಥರ್ವ ವೇದ ಯುಗದಲ್ಲಿ ಮಹಿಳೆಯರು ಉಪನಯನದ ಹಕ್ಕು ಹೊಂದಿದ್ದರು. ಪಾಣಿನಿ ಮತ್ತು ಪತಂಜಲಿ ಅವರ ಗ್ರಂಥಗಳಲ್ಲಿ ಮಹಿಳೆಯರ ಶಿಕ್ಷಣದ ಉಲ್ಲೇಖಗಳಿವೆ. ಅವರು ಗುರುಕುಲಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು, ಮೀಮಾಂಸ ಪರಿಣಿತರಾಗಿದ್ದರು, ಮಹಿಳೆಯರು ಶಿಕ್ಷಕಿಯರಾಗಿ ವಿದ್ಯಾರ್ಥಿನಿಯರಿಗೆ ವೇದಗಳನ್ನು ಬೋಧಿಸುತ್ತಿದ್ದರೆಂದು ಪತಂಜಲಿಯ ಮಹಾಭಾಷ್ಯ ತಿಳಿಸುತ್ತದೆ. ಧರ್ಮ-ತತ್ವಶಾಸ್ತ್ರ -ಅಧ್ಯಾತ್ಮ ಕುರಿತ ಸಾರ್ವಜನಿಕ ಸಂವಾದಗಳಲ್ಲಿ ಮಹಿಳೆಯರು ಪಾಲ್ಗೊಳ್ಳುತ್ತಿದ್ದರು. ಜನಕ ಮತ್ತು ಸುಲಭಾ, ಯಾಜ್ಞವಲ್ಕ್ಯ ಮತ್ತು ಗಾರ್ಗಿ, ಯಾಜ್ಞವಲ್ಕ್ಯ ಮತ್ತು ಮೈತ್ರೇಯಿ ಹಾಗೂ ಶಂಕರಾಚಾರ್ಯ ಮತ್ತು ವಿದ್ಯಾಧರಿಯ ನಡುವೆ ನಡೆದ ಸಾರ್ವಜನಿಕ ವಾದಗಳು- ತರ್ಕಗಳು, ಮಹಿಳೆಯು ಶಿಕ್ಷಣದ ಶಿಖರವನ್ನು ಏರಿದ್ದ ಕುರಿತ ಪುರಾವೆಗಳು. ಆದರೆ ಈ ಪ್ರಾಚೀನ ಪ್ರಗತಿಯನ್ನು ಮನು ಧ್ವಂಸಮಾಡಿದ್ದನು.

ಮನುಸ್ಮೃತಿಯ ಕಠೋರ ನಿಯಮಗಳು ಮತ್ತು ಮಹಿಳೆಯರ ಅವನತಿ

ಹಿಂದೂ ಸಮಾಜದಲ್ಲಿ ಮಹಿಳೆಯರು ಶಿಕ್ಷಣ ಪಡೆಯಕೂಡದು, ಧರ್ಮ ಶಾಸ್ತ್ರ ಗಳನ್ನು ಕಲಿಯಬಾರದು, ತತ್ವಶಾಸ್ತ್ರ ಚರ್ಚೆಗಳಲ್ಲಿ ಪಾಲ್ಗೊಳ್ಳಬಾರದು- ಇವೆಲ್ಲವೂ ಮನುಸ್ಮೃತಿ ವಿಧಿಸಿ ಬೇರೂರಿಸಿದ ನಿಯಮಗಳು. ಮನು ಮಹಿಳೆಯನ್ನು ಈ ಕೆಳಗಿನ ರೀತಿಯಲ್ಲಿ ವ್ಯಾಖ್ಯಾನಿಸಿದ್ದನು:

“ಮಹಿಳೆಯರು ಮೂರ್ಖ ಪುರುಷರನ್ನಷ್ಟೇ ಅಲ್ಲ, ಜ್ಞಾನಿಯನ್ನು ಕೂಡ ದಿಕ್ಕು ತಪ್ಪಿಸುತ್ತಾರೆ ಮತ್ತು ಕಾಮಕ್ರೋಧದ ಗುಲಾಮರನ್ನಾಗಿಸುತ್ತಾರೆ.”

“ತಾಯಿಯೊಂದಿಗೆ, ಸೋದರಿಯೊಂದಿಗೆ ಅಥವಾ ಮಗಳೊಂದಿಗೆ ಏಕಾಂತದಲ್ಲಿರಕೂಡದು. ಕಾಮವಾಸನೆಗಳು ಪ್ರಬಲವಾಗಿದ್ದು, ಅವುಗಳನ್ನು ಜಯಿಸುವುದು ಜ್ಞಾನಿಗೆ ಕೂಡ ಸುಲಭವಲ್ಲ. ಮಹಿಳೆಯು ತಂತಾನೇ ಸಂಪೂರ್ಣ ವ್ಯಕ್ತಿಯಲ್ಲ ಸ್ತ್ರೀಯರಿಗೆ ಪುರುಷನು ಸುಂದರನಾಗಿರಬೇಕೆಂದೇನೂ ಇಲ್ಲ, ಯಾವ ವಯಸ್ಸಿನವನಾದರೂ ಪರವಾಗಿಲ್ಲ, ಅವನು ಪುರುಷನಾಗಿದ್ದರೆ ಸಾಕು ಒಪ್ಪಿಸಿಕೊಂಡು ಬಿಡುತ್ತಾರೆ. ಎಷ್ಟೇ ಎಚ್ಚರಿಕೆಯಿಂದ ಕಾವಲು ಕಾದರೂ ಅವರು ತಮ್ಮ ಗಂಡಂದಿರಿಗೆ ನಿಷ್ಠರಾಗಿರುವುದಿಲ್ಲ, ಅತ್ಯಂತ ಶ್ರಮಪಟ್ಟು ಅವರನ್ನು ಕಾವಲು ಕಾಯಬೇಕಾಗುತ್ತದೆ, ಸೃಷ್ಟಿಕರ್ತನು ಅಂತಹ ಗುಣಗಳನ್ನು ಅವರಲ್ಲಿ ತುಂಬಿರುತ್ತಾನೆ. ಅವರು ಅಶುದ್ಧ ಬಯಕೆಗಳು, ಕ್ರೋಧ, ಅಪ್ರಾಮಾಣಿಕತೆ, ದುರ್ಗುಣಗಳನ್ನು ಹೊಂದಿದವರಾಗಿರುತ್ತಾರೆ.”

“ಅವಳು ಸದಾ ಸರ್ವದಾ ಪುರುಷನ ಅಂಕೆಯಲ್ಲಿರಬೇಕು, ವಿಶೇಷವಾಗಿ ದುಷ್ಟ ಇರಾದೆ ಹೊಂದಿರುತ್ತಾಳೆ, ಎರಡೂ ಮನೆಗಳಿಗೆ ದುಃಖ ಉಂಟು ಮಾಡುತ್ತಾಳೆ.”

“ಅವಳಿಗೆ ವಿವಾಹವಿಚ್ಛೇದನ ಮಾಡುವ ಹಕ್ಕಿಲ್ಲ.”

“ಗಂಡ ದುರಾಚಾರಿಯಾಗಿದ್ದರೂ ಹೇಡಿಯಾಗಿದ್ದರೂ ಅವನನ್ನು ದೇವರಂತೆ ಪೂಜಿಸಬೇಕು. ಗಂಡನು ಹೆಂಡತಿಯನ್ನು ತ್ಯಜಿಸಬಹುದು, ಮಾರಾಟ ಮಾಡಬಹುದು. ಆದರೆ ಪತ್ನಿಗೆ ಯಾವುದೇ ಬಗೆಯ ಸ್ವಾತಂತ್ರ‍್ಯವನ್ನು ಮನು ನೀಡುವುದಿಲ್ಲ. ಬೌದ್ಧ ಕಾಲದಲ್ಲಿ ಸ್ತ್ರೀಗೆ ನೀಡಲಾಗಿದ್ದ ಸ್ವಾತಂತ್ರ‍್ಯವನ್ನು ಕಿತ್ತು ಹಾಕುವುದೇ ಅವನ ಉದ್ದೇಶವಾಗಿತ್ತು.

ಇಂತಹ ನಿಯಮಗಳು ಮಹಿಳೆಯರನ್ನು ದಾಸ್ಯ ಸ್ಥಿತಿಗೆ ತಳ್ಳಿದವು. ಅವರಿಗೆ ಸ್ವಾತಂತ್ರ‍್ಯ, ಶಿಕ್ಷಣ, ಆಧ್ಯಾತ್ಮಿಕ ಬೆಳವಣಿಗೆ-ಯಾವುದಕ್ಕೂ ಅವಕಾಶವಿರಲಿಲ್ಲ. ಮನು ಮಹಿಳೆಯನ್ನು ಆಸ್ತಿಯಂತೆ ಪರಿಗಣಿಸಿದ್ದನು. ಮಹಿಳೆಯರು ಸಂಪಾದಿಸಿದ ಸಂಪತ್ತು ಗಂಡನಿಗೆ ಸೇರಬೇಕು ಎಂದು ವಿಧಿಸಿದ್ದನು. ಇದನ್ನು ಅಂಬೇಡ್ಕರ್ “ಮಹಿಳೆಯ ಸಂಪೂರ್ಣ ದಮನ” ಎಂದು ವರ್ಣಿಸುತ್ತಾರೆ.\

ಇದನ್ನೂ ಓದಿರಿ: ‘ಭಾರತದಲ್ಲಿ ಜಾತಿಗಳು’: ಅವುಗಳ ಉತ್ಪತ್ತಿ, ವಿಕಾಸ ಹೇಗಾಯಿತು?

ಬುದ್ಧನ ಕಾಲದಲ್ಲಿ ಮಹಿಳೆಯರಿಗಿದ್ದ ಸ್ವಾತಂತ್ರ‍್ಯವನ್ನು ಮನು ನಾಶಮಾಡಿದನು. ಬುದ್ಧನ ಕಾಲದಲ್ಲಿ ಮಹಿಳೆಯರು ಧಾರ್ಮಿಕ ಶಿಕ್ಷಣ ಪಡೆದು ಭಿಕ್ಕುಣಿಯಾಗುವುದು ಸಾಧ್ಯವಿತ್ತು. ಆದರೆ ಮನುವಿನ ಪರಂಪರೆಯು ಆ ಅವಕಾಶವನ್ನು ಕಿತ್ತುಕೊಂಡಿತು. ಮಹಿಳೆಯರು ಪುರುಷರ ಸಮಾನರು ಎಂಬ ಬೌದ್ಧ ಧರ್ಮದ ತತ್ವವನ್ನು ನಿರಾಕರಿಸಿ, ಅವರು ಅಜ್ಞಾನಿಗಳು, ದಾಸಿಯರು ಎಂಬ ತತ್ವವನ್ನು ನೆಲೆಗೊಳಿಸಿದ ಅಪಕೀರ್ತಿ ಮನುವಿಗೆ ಸಲ್ಲಬೇಕು. ಇದರಿಂದ ಮಹಿಳೆಯರ ಸ್ಥಿತಿಗತಿಗಳು ಶತಮಾನಗಳಷ್ಟು ಕೆಳಕ್ಕೆ ಕುಸಿದವು. ಪ್ರಾಚೀನ ಕಾಲದಲ್ಲಿ ಮಹಿಳೆಗೆ ದಕ್ಕುತ್ತಿದ್ದ ವಿದ್ಯಾಭ್ಯಾಸ ಮನುವಿನ ಕಾಲದಲ್ಲಿ ಮತ್ತು ತದ ನಂತರ 1947ರ ತನಕ ಮಾಯವಾಯಿತು.

image 181
ಮಹಿಳಾ ವಿರೋಧಿ ಮನುಸ್ಮೃತಿಯನ್ನು 1927ರ ಡಿಸೆಂಬರ್ 25ರಂದು ಬಾಬಾಸಾಹೇಬರು ಸಾರ್ವಜನಿಕವಾಗಿ ಸುಟ್ಟು ಪ್ರತಿಭಟಿಸಿದ್ದರು. (ಎಐ ಸೃಷ್ಟಿತ ಚಿತ್ರ)

ಮನುಸ್ಮೃತಿ ಮತ್ತು ಮಹಿಳೆಯರ ಅವನತಿ

ಮನುಧರ್ಮಶಾಸ್ತ್ರದಲ್ಲಿ ಮಹಿಳೆಯರ ಕುರಿತು ಹೊಸತಾದ ಅಥವಾ ಆಶ್ಚರ್ಯಕರ ವಿಷಯವಿರಲಿಲ್ಲ. ಇದು ಭಾರತದಲ್ಲಿ ಬ್ರಾಹ್ಮಣ ಧರ್ಮ ಹುಟ್ಟಿದಾಗಲೇ ಮಹಿಳೆಯರ ಮೇಲಿನ ಹಿಂದೂ ಧಾರ್ಮಿಕ ದೃಷ್ಟಿಕೋನವಾಗಿ ಅಸ್ತಿತ್ವದಲ್ಲಿತ್ತು ಎಂಬ ಅನಿಸಿಕೆ ಬಾಬಾಸಾಹೇಬರದ್ದು. ಮನುವಿಗಿಂತ ಮುಂಚೆಯೇ ಈ ನಿಲುವುಗಳು “ಸಾಮಾಜಿಕ ಸಿದ್ಧಾಂತ” ಆಗಿ ನೆಲೆಸಿದ್ದವು. ಆದರೆ, ಮನುವಿನ ಅತ್ಯಂತ ಮಹತ್ವದ ಹಾಗೂ ಅಪಾಯಕಾರಿ ಕೃತ್ಯವೆಂದರೆ, ಈ ಹಿಂದಿನ ಸಾಮಾಜಿಕ ಸಿದ್ಧಾಂತಕ್ಕೆ ಅಧಿಕೃತ ಕಾಯಿದೆ ಕಾನೂನಿನ ರೂಪ ನೀಡಿದ್ದು, ಪ್ರಭುತ್ವವು ಅವುಗಳನ್ನು ಜಾರಿಗೊಳಿಸುವಂತೆ ವಿಧಿಸಿದ್ದು.

ಮನುಸ್ಮೃತಿಯ ರಚನೆಯ ಹಿನ್ನೆಲೆ

ಬೌದ್ಧ ಧರ್ಮದ ಉನ್ನತಿಯಿಂದ ಬ್ರಾಹ್ಮಣ್ಯ ಪೌರಾಣಿಕ ಧರ್ಮದ ಅಡಿಪಾಯವೇ ಅಸ್ಥಿರಗೊಳ್ಳುವ ಸ್ಥಿತಿಯಲ್ಲಿತ್ತು. ಶೂದ್ರರು ಮತ್ತು ಮಹಿಳೆಯರು ವೈದಿಕ ಸಮಾಜದ ಪ್ರಮುಖ ವಿಭಾಗಗಳಾಗಿದ್ದು, ಬೌದ್ಧ ಧರ್ಮದತ್ತ ಆಕರ್ಷಿತರಾಗುತ್ತಿದ್ದರು. ಬೌದ್ಧ ಧರ್ಮವು ಎಲ್ಲ ವರ್ಗದವರಿಗೆ, ಲಿಂಗಭೇದವಿಲ್ಲದೆ, ಜ್ಞಾನಸ್ವಾತಂತ್ರ‍್ಯ ನೀಡಿದ ಪರಿಣಾಮ, ಅನೇಕ ಮಹಿಳೆಯರು ಬ್ರಾಹ್ಮಣ್ಯ ಧಾರ್ಮಿಕ ವ್ಯವಸ್ಥೆಯಿಂದ ಹೊರಬಂದು ಬೌದ್ಧ ಧರ್ಮವನ್ನು ಸ್ವೀಕರಿಸುತ್ತಿದ್ದರು. ಈ ಬೆಳವಣಿಗೆಯು ಪುರುಷಪ್ರಧಾನ ಬ್ರಾಹ್ಮಣ್ಯ ಸಮಾಜಕ್ಕೆ ಒಪ್ಪಿತವಿರಲಿಲ್ಲ. ಇದರಿಂದಲೇ, ಮನುವು ಮಹಿಳೆಯರ ಮೇಲೆ ನಿರ್ಬಂಧ ಹೇರಲು ಯೋಜನೆ ರೂಪಿಸಿದನು. ಮಹಿಳೆಯರನ್ನು ಬೌದ್ಧ ಧರ್ಮದಿಂದ ದೂರವಿಡಲು ಮನುಸ್ಮೃತಿಯಲ್ಲಿ ಅವರ ಮೇಲೆ ಅತಿ ಕಠಿಣ ನಿಯಮಗಳನ್ನು ಹೇರಿದ್ದನು.

ಮನು – ಬೌದ್ಧ ಧರ್ಮದ ದೊಡ್ಡ ವಿರೋಧಿ

ಬೌದ್ಧ ಧರ್ಮದಲ್ಲಿ ಮಹಿಳೆಯರಿಗೆ ಸನ್ಯಾಸ ಸ್ವೀಕಾರದ ಅವಕಾಶ ಲಭಿಸಿದ ಬಳಿಕ, ಬಹುಸಂಖ್ಯೆಯ ಮಹಿಳೆಯರು ಬ್ರಾಹ್ಮಣ್ಯ ಧಾರ್ಮಿಕ ಪದ್ಧತಿಯಿಂದ ದೂರ ಸರಿಯಲಾರಂಭಿಸಿದರು. ಇದನ್ನು ತಡೆಯಲು, ಮನು ಹೊಸ ಕಾನೂನುಗಳನ್ನು ರೂಪಿಸಿದನು. ಈ ನಿಟ್ಟಿನಲ್ಲಿ, ಯಾವುದೇ ಬೌದ್ಧ ಸನ್ಯಾಸಿನಿ ಅಥವಾ ಬೌದ್ಧ ಧರ್ಮವನ್ನು ಅನುಸರಿಸಿದ ಮಹಿಳೆಗೆ ಅಂತ್ಯಕ್ರಿಯಾ ವಿಧಿಗಳನ್ನು ನೆರವೇರಿಸಬಾರದು ಎಂಬ ಕಟ್ಟಳೆ ವಿಧಿಸಲಾಯಿತು. ಇದು ಸರಳ ಧಾರ್ಮಿಕ ನಿಯಮವಲ್ಲ; ಬೌದ್ಧ ಧರ್ಮದ ಮೇಲೆ ಪ್ರಬಲ ಪ್ರಹಾರ ನಡೆಸಲು ರೂಪಿಸಿದ ರಾಜಕೀಯ ತಂತ್ರ. ಬ್ರಾಹ್ಮಣ್ಯ ಪರಂಪರೆಯನ್ನು ರಕ್ಷಿಸಲು, ಮಹಿಳೆಯರಿಗೆ ಜ್ಞಾನ, ಸ್ವಾತಂತ್ರ‍್ಯ ಮತ್ತು ಧಾರ್ಮಿಕ ಹಕ್ಕುಗಳನ್ನು ನಿರ್ಬಂಧಿಸುವ ಮೂಲಕ, ಅವರ ಸ್ಥಿತಿಯನ್ನು ಅತ್ಯಂತ ಕೀಳುಮಟ್ಟಕ್ಕೆ ತಳ್ಳಲಾಯಿತು ಎಂದು ಬಾಬಾಸಾಹೇಬರು ಹೇಳಿದ್ದಾರೆ.

hindu women
ಮಹಿಳಾ ವಿಮೋಚಕ ‘ಬುದ್ಧ’

ಬಾಬಾಸಾಹೇಬರ ಅಭಿಪ್ರಾಯದ ಪ್ರಕಾರ, ಭಾರತದಲ್ಲಿ ಮಹಿಳೆಯರ ಅವನತಿಯ ಸಂಪೂರ್ಣ ಜವಾಬ್ದಾರಿಯನ್ನು ಮನುವಿನ ಮೇಲೆಯೇ ಹೊರಿಸಬೇಕು, ಬುದ್ಧನ ಮೇಲೆ ಅಲ್ಲ. ಬುದ್ಧನ ಧರ್ಮಶಾಸ್ತ್ರವು ಮಹಿಳೆಯನ್ನು ಪುರುಷನ ಸಮಾನ ಸ್ಥಿತಿಗೆ ಏರಿಸುವ ಪ್ರಯತ್ನ ಮಾಡಿತು. ಆದರೆ, ಮನುವಿನ ಮನುಸ್ಮೃತಿ ಮಹಿಳೆಯರನ್ನು ಪುನಃ ದಾಸ್ಯ ಸ್ಥಿತಿಗೆ ತಳ್ಳಲು ಪ್ರಯತ್ನಿಸಿದ ಗಾಢ ರಾಜಕೀಯ, ಧಾರ್ಮಿಕ ಶಕ್ತಿಯ ಘಟಕ. ಬುದ್ಧನ ಸಮಯದಲ್ಲಿ ಮಹಿಳೆಯರಿಗೆ ಜ್ಞಾನಾರ್ಜನೆಯ ಮತ್ತು ಆತ್ಮಸಾಕ್ಷಾತ್ಕಾರದ ಸಮಾನ ಹಕ್ಕುಗಳು ಲಭ್ಯವಾಗಿದ್ದವು. ಆದರೆ, ಬೌದ್ಧ ಧರ್ಮದ ವಿರುದ್ಧ ಪ್ರತೀಕಾರವಾಗಿ, ಮನು ಮಹಿಳೆಯರ ಮೇಲೆ ಅನೇಕ ಗಾಢ ಅಸಮಾನ ನಿಯಮಗಳನ್ನು ಹೇರಿದನು.

ನಿಜವಾದ ಕ್ರಾಂತಿ: ಬುದ್ಧನ ಸಂದೇಶ

ಬುದ್ಧನು ತನ್ನ ತತ್ವಶಾಸ್ತ್ರದಲ್ಲಿ ಪುರುಷ-ಮಹಿಳೆ ಭೇದವನ್ನು ತೊಡೆದುಹಾಕಿದನು. ಅವರು ಜ್ಞಾನ ಪಡೆಯಲು ಸಮಾನ ಹಕ್ಕನ್ನು ನೀಡಿದನು. ಈ ಬೆಳವಣಿಗೆಗೆ ಅಂಬೇಡ್ಕರ್ ಬಹು ದೊಡ್ಡ ಪ್ರಾಮುಖ್ಯತೆ ನೀಡುತ್ತಾರೆ. ಹಿಂದೂ ಧರ್ಮ ಮಹಿಳೆಯ ಮೇಲೆಸಗಿದ ಶೋಷಣೆಯ ವಿರುದ್ಧ ಉಗ್ರ ಹೋರಾಟವಾಗಿತ್ತು ಬೌದ್ಧ ಧರ್ಮ ಅನ್ನುತ್ತಾರೆ ಬಾಬಾಸಾಹೇಬ್.

ಭಾರತದ ಮಹಿಳೆಯರ ಶೋಷಣೆಗೆ ಒಬ್ಬನೇ ವ್ಯಕ್ತಿ ಕಾರಣ ಎಂದು ಬಾಬಾಸಾಹೇಬ್ ಬಹು ಸ್ಪಷ್ಟವಾಗಿ ಹೇಳುತ್ತಾರೆ-ಅದುವೇ ಮನು. ಮನುವಿನ ನಿಯಮಗಳು ಮಹಿಳೆಯರನ್ನು ಶತಮಾನಗಳ ಕಾಲ ಶೋಷಿಸಿದವು. ಮಹಿಳೆಯರು ಬೌದ್ಧ ಧರ್ಮದ ಅಂಗಳದಲ್ಲಿ ನಿಜವಾದ ವಿಮೋಚನೆಯನ್ನು ಕಂಡರು. ಮನುಸ್ಮೃತಿ, ಮನು ಸಂಸ್ಕೃತಿ, ಬ್ರಾಹ್ಮಣ್ಯದ ಜಾಡು ನಾಶವಾದಾಗ ಮಾತ್ರ ಮಹಿಳೆಯರು ನಿಜವಾದ ಸ್ವಾತಂತ್ರ‍್ಯವನ್ನು ಮತ್ತೆ ಪಡೆದುಕೊಳ್ಳಬಹುದು ಎಂಬುದು ಬಾಬಾಸಾಹೇಬರ ಸಂದೇಶ.

ಈ ಕೃತಿಯ ವಿಶ್ಲೇಷಣೆಯಿಂದ ಸ್ಪಷ್ಟವಾಗುವ ಅಂಶ ಏನೆಂದರೆ-ಒಂದೊಮ್ಮೆ ಉನ್ನತ ಸ್ಥಾನಮಾನ ಹೊಂದಿದ್ದ ಭಾರತೀಯ ಮಹಿಳೆ, ಮಗದೊಮ್ಮೆ ಗುಲಾಮಗಿರಿಗೆ ಕುಸಿಯಲು ಕಾರಣ ಮನುವಿನ ಧರ್ಮಶಾಸ್ತ್ರ ಮತ್ತು ಅದರ ಆಧಾರಿತ ಬ್ರಾಹ್ಮಣ್ಯದ ನಿಯಮಗಳು. ಬ್ರಾಹ್ಮಣ್ಯ ಆಧಾರಿತ ಧರ್ಮದ ಶಕ್ತಿಯನ್ನು ಬಲಪಡಿಸಲು, ಬೌದ್ಧ ಧರ್ಮದ ಬೆಳವಣಿಗೆಗೆ ತಡೆಯೊಡ್ಡಲು ಮತ್ತು ಮಹಿಳೆಯನ್ನು ಸದಾಕಾಲ ಪುರುಷ ಅಧಿಪತ್ಯದಲ್ಲಿ ಇಡಲು, ಮನು ಮತ್ತು ಅವನ ಅನುಯಾಯಿಗಳು ಪ್ರಬಲವಾಗಿ ಶ್ರಮಿಸಿದರು. ಈ ನಿಟ್ಟಿನಲ್ಲಿ, ಮಹಿಳೆಯ ಜ್ಞಾನ, ಸ್ವಾತಂತ್ರ‍್ಯ, ಆತ್ಮಸಾಕ್ಷಾತ್ಕಾರ ಮತ್ತು ಸನ್ಯಾಸದ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು.

ಇದನ್ನೂ ಓದಿರಿ: ಬಾಬಾಸಾಹೇಬರ ಕಣ್ಣಲ್ಲಿ ಭಗವದ್ಗೀತೆ; ಸತ್ಯ ಮರೆಯಲಾದೀತೆ?

ಈ ಕೃತಿಯ ಮೂಲಕ ಭಾರತ ದೇಶದ ಭೂತಕಾಲ, ವರ್ತಮಾನ ಮತ್ತು ಭವಿಷ್ಯವನ್ನು ಒಗ್ಗೂಡಿಸಿ, ಹಿಂದೂ ಧರ್ಮ, ಮನುಸ್ಮೃತಿ, ವೈದಿಕ ಪರಂಪರೆ, ಬ್ರಾಹ್ಮಣ್ಯ, ಬೌದ್ಧ ಧರ್ಮ ಮತ್ತು ಬುದ್ಧರ ತತ್ವಗಳನ್ನು ವಿಶ್ಲೇಷಿಸಿ, ಮಹಿಳೆಯ ಸ್ಥಾನಮಾನವನ್ನು ಎರಡೂ ಕಾಲಘಟ್ಟಗಳಲ್ಲಿ ಅಧ್ಯಯನ ಮಾಡಿ, ಹಿಂದೂ ಧರ್ಮದಲ್ಲಿ ಮಹಿಳೆಯ ಅವನತಿಗೆ ಮೂಲ ಕಾರಣ ಮನುಸ್ಮೃತಿ ಎಂದು ಡಾ. ಅಂಬೇಡ್ಕರ್ ಸ್ಪಷ್ಟವಾಗಿ ತಿಳಿಸುತ್ತಾರೆ. ಅವರ ಈ ವಿಮರ್ಶೆಯು ಕೇವಲ ಐತಿಹಾಸಿಕ ಪರಿಶೀಲನೆಯಷ್ಟೇ ಅಲ್ಲ, ಇದು ಒಂದು ಕ್ರಾಂತಿಕಾರಿ ತತ್ವಶ್ರದ್ಧೆಯಾಗಿ, ಸಮಾಜದ ನವೋದ್ಧಾರದ ದಾರಿಯನ್ನು ಉದ್ಧರಿಸುವ, ಒತ್ತಿಹೇಳುವ ಘೋಷಣೆಯಾಗಿದೆ.

ಧರ್ಮದ ಹೆಸರಿನಲ್ಲಿ ಶೋಷಣೆ – ಇಂದಿಗೂ ಮುಂದುವರಿದ ಆಟ

ಇದು ಕೇವಲ ಭೂತಕಾಲದ ಘಟನೆ ಮಾತ್ರವಲ್ಲ. ಇಂದಿಗೂ ಧರ್ಮದ ಹೆಸರಿನಲ್ಲಿ ಮಹಿಳೆಯರ ಮೇಲೆ ನಿರಂತರವಾಗಿ ಶೋಷಣೆ ನಡೆಯುತ್ತಿದೆ. ಉದಾಹರಣೆಗೆ, “ಲವ್ ಜಿಹಾದ್” ಎಂಬ ಹುಸಿ ಭೀತಿಯ ಸುಳ್ಳು ಹಣೆಪಟ್ಟಿಯ ಮೂಲಕ ತಮ್ಮ ಸಂಗಾತಿಯನ್ನು ಆಯ್ಕೆ ಮಾಡಲಾಗದ ಸ್ಥಿತಿಗೆ, ಮಹಿಳೆಯರನ್ನು ತಳ್ಳುತ್ತಿದ್ದಾರೆ. ಆಧುನಿಕ ಪಿತೃತ್ವದ ವ್ಯವಸ್ಥೆ, ಧಾರ್ಮಿಕ ಸಂಕೋಲೆಗಳ ಹೆಸರಿನಲ್ಲಿ, ಮಹಿಳೆಯನ್ನು ಪುರುಷ ಪ್ರಧಾನ ಸಂಸ್ಕೃತಿಯ ಅಡಿಯಾಳಾಗಿ ಉಳಿಸಬೇಕು ಎಂಬ ದುರಾಕಾಂಕ್ಷೆಯಿಂದ ಕಾರ್ಯನಿರ್ವಹಿಸುತ್ತಿದೆ. ಇದು ಕೇವಲ ಮನುವಿನ, ಬ್ರಾಹ್ಮಣ್ಯ, ವೈದಿಕ ಶೋಷಣೆಗೆ ಮಾತ್ರ ಸೀಮಿತವಲ್ಲ, ಎಲ್ಲ ಪುರುಷ ಪ್ರಧಾನ ಸಮಾಜಗಳ ಸ್ವಭಾವ ಇದೇ ಆಗಿದೆ. ಮಹಿಳೆಯನ್ನು ಸಮಾನತೆಯಿಂದ ತೊಡೆದುಹಾಕಿ, ಪುರುಷಾಧಿಪತ್ಯವನ್ನು ಶಾಶ್ವತಗೊಳಿಸಲು ಈ ವ್ಯವಸ್ಥೆಗಳು ರೂಪುಗೊಂಡಿವೆ. ಬಾಬಾಸಾಹೇಬ್ ಅಂಬೇಡ್ಕರ್ ತಮ್ಮ ಬರಹದಲ್ಲಿ ಬೌದ್ಧ ಧರ್ಮ, ಬುದ್ಧನ ತತ್ವ, ಮನುಸ್ಮೃತಿಯ ಶೋಷಣಾ ನಿಯಮಗಳು ಹಾಗೂ ಮಹಿಳೆಯರ ಶ್ರೇಯೋಭಿವೃದ್ಧಿ ಕುರಿತು ಕೂಲಂಕಷವಾಗಿ ವಿಶ್ಲೇಷಿಸುತ್ತಾರೆ. ಮನುವಿನ ಕುತಂತ್ರವನ್ನು ಮುಚ್ಚುಮರೆಯಿಲ್ಲದೆ ಬಯಲಿಗೆಳೆಯುತ್ತಾರೆ. ಬ್ರಾಹ್ಮಣ್ಯ ಧರ್ಮದ ಆಂತರಿಕ ಶೋಷಣಾ ರಹಸ್ಯವನ್ನು ಬಯಲು ಮಾಡುತ್ತಾರೆ.

ಮಹಿಳೆಯ ಜಾಗೃತಿಯ ಅಗತ್ಯ

ಆದ್ದರಿಂದ, “ಧರ್ಮ, ಸಂಸ್ಕೃತಿ, ಪದ್ಧತಿ, ಶಿಷ್ಟಾಚಾರ” ಎಂಬ ಸುಳ್ಳು ಮುಸುಕು ಹಾಕಿ ಮಹಿಳೆಯ ಶೋಷಣೆ ಮುಂದುವರಿಸುವ ಈ ದುಷ್ಟ ಆಟವನ್ನು ಶೀಘ್ರ ಅರಿತುಕೊಳ್ಳಬೇಕು. ಇದನ್ನು ಅರಿಯುವ ಹೊತ್ತಿಗೆ, ಧರ್ಮದ ಹೆಸರಿನಲ್ಲಿ ಪುರುಷಾಧಿಪತ್ಯವನ್ನು ಮುಂದುವರಿಸುವವರ ರಾಜಕೀಯ ಶಕ್ತಿಯೇ ಕುಸಿಯುತ್ತದೆ. ಮಹಿಳೆಯ ಸ್ವಾತಂತ್ರ‍್ಯ, ಆಕೆಯ ತೀರ್ಮಾನಶಕ್ತಿಗೆ ಮತ್ತು ಬೌದ್ಧಿಕ ಮುಕ್ತಿಗೆ ಗಂಡುಗಲ್ಲು ಹಾಕುವ ಧಾರ್ಮಿಕ ನೀತಿಗಳಿಂದ ಮುಕ್ತವಾಗುವುದು ಅವಶ್ಯಕ. ಇದು ಕೇವಲ ಮಹಿಳೆಯರ ಉದ್ಧಾರವಲ್ಲ, ಒಂದು ಸಮಾಜ ಮತ್ತು ರಾಷ್ಟ್ರದ ಉದ್ಧಾರಕ್ಕೂ ಅತೀ ಅವಶ್ಯ. ಇದುವೇ ಬಾಬಾಸಾಹೇಬರ ಆಶಯ ಕೂಡ.

WhatsApp Image 2025 11 17 at 5.26.24 PM
ಸುಚಿತ್ರಾ ಎಸ್‌ ಎ
+ posts

ಮೂಲತಃ ಉಡುಪಿಯವರು. ಸ್ವಲ್ಪ ಕಾಲ ಕರ್ನಾಟಕ ಹೈಕೋರ್ಟಿನಲ್ಲಿ ವಕೀಲಿ ವೃತ್ತಿ ಮಾಡಿದ್ದಾರೆ. ಸದ್ಯ ಜರ್ಮನಿಯ ಮ್ಯೂನಿಚ್ ಟೆಕ್ನಿಕಲ್ ಯುನಿವರ್ಸಿಟಿಯಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಸುಚಿತ್ರಾ ಎಸ್‌ ಎ
ಸುಚಿತ್ರಾ ಎಸ್‌ ಎ
ಮೂಲತಃ ಉಡುಪಿಯವರು. ಸ್ವಲ್ಪ ಕಾಲ ಕರ್ನಾಟಕ ಹೈಕೋರ್ಟಿನಲ್ಲಿ ವಕೀಲಿ ವೃತ್ತಿ ಮಾಡಿದ್ದಾರೆ. ಸದ್ಯ ಜರ್ಮನಿಯ ಮ್ಯೂನಿಚ್ ಟೆಕ್ನಿಕಲ್ ಯುನಿವರ್ಸಿಟಿಯಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಟವಾಡೆಯಾಗದ ಭಾಷಣ ‘ಅನಾಇಲೇಷನ್ ಆಫ್ ಕಾಸ್ಟ್’

ಕೃತಿ: ANNIHILATION OF CASTE (ಜಾತಿ ನಿರ್ಮೂಲನೆ)ಮೊದಲ ಪ್ರಕಟಣೆ: 1936 (ಬಾಬಾಸಾಹೇಬ್...

‘ಅನಾಇಲೇಷನ್ ಆಫ್ ಕ್ಯಾಸ್ಟ್’- ಜಾತಿ ಮೂಲಗಳ ಶೋಧಿಸುತ್ತಾ…

ಕೃತಿ: Annihilation of Caste (ಜಾತಿ ನಿರ್ಮೂಲನೆ)ಮೊದಲ ಪ್ರಕಟಣೆ: 1936 (ಬಾಬಾಸಾಹೇಬ್...