ಸಿದ್ದರಾಮಯ್ಯನವರಿಗೆ ಜಾರಕಿಹೊಳಿ ಫ್ಯಾಮಿಲಿ ಮೇಲೆ ಅತೀವ ಪ್ರೀತಿ. ಈ ಕುಟುಂಬದ ಯಾವುದೇ ವ್ಯಕ್ತಿ ಬೇರೊಂದು ಪಕ್ಷದಲ್ಲಿ ಗುರುತಿಸಿಕೊಂಡರೂ ಸಿದ್ದರಾಮಯ್ಯನವರ ಮೇಲೆ ದಾಳಿ ಮಾಡಿದ್ದು ಎಂದಿಗೂ ಕಾಣುವುದಿಲ್ಲ
ಸಿದ್ದರಾಮಯ್ಯನವರು ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಯುವ ಸುದ್ದಿ ಹೊರಬಿದ್ದ ಬೆನ್ನಲ್ಲೇ, ಅವರ ನಿರ್ಗಮನಕ್ಕೆ ಸತೀಶ್ ಜಾರಕಿಹೊಳಿ ಕಾರಣವೆಂಬ ಕಥನವನ್ನು ತೇಲಿಬಿಡಲಾಯಿತು. ಸಾಮಾಜಿಕ ಮಾಧ್ಯಮಗಳಲ್ಲಿ ಹರಡಲಾದ ನರೇಟಿವ್ (ನಿರೂಪಣೆ)ಗಳಲ್ಲಿ, “ಸಿದ್ದರಾಮಯ್ಯನವರ ವಿರುದ್ಧ ಸತೀಶ್ ಜಾರಕಿಹೊಳಿಯವರು 37 ಶಾಸಕರ ಸಹಿ ಸಂಗ್ರಹ ಮಾಡಿ, ಅದನ್ನು ಹೈಕಮಾಂಡ್‌ಗೆ ಕಳುಹಿಸಿದ್ದರು. ಇದುವೇ ಅಧಿಕಾರ ಕಳೆದುಕೊಳ್ಳಲು ಕಾರಣ” ಎಂಬುದು ಗಮನ ಸೆಳೆಯಿತು. ಕುರುಬ ಸಮುದಾಯದ ಹಿನ್ನೆಲೆಯ ಫೇಸ್‌ಬುಕ್ ಖಾತೆದಾರರು ಈ ನಕಲಿ ಸುದ್ದಿಯ ಸುತ್ತ ಗಿರಕಿ ಹೊಡೆಯುವುದಕ್ಕೂ ಆರಂಭಿಸಿದರು. “ಸತೀಶ್ ಜಾರಕಿಹೊಳಿ ಜೊತೆಗೆ ಜಮೀರ್ ಅಹಮ್ಮದ್ ಖಾನ್ ಕೂಡ ಸೇರಿಕೊಂಡಿದ್ದಾರೆ” ಎಂಬ ಮತ್ತೊಂದು ನಿರೂಪಣೆ ಹಬ್ಬಿತು. ಕಾಂಗ್ರೆಸ್‌ನ ಆಳ-ಅಗಲ ಬಲ್ಲವರು ಈ ನರೇಟಿವ್‌ಗಳನ್ನು ನೋಡಿ ಆತಂಕ ಮತ್ತು ಸೋಜಿಗ ಪಡಬೇಕಾಯಿತು.
ಸಿದ್ದರಾಮಯ್ಯನವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಸಂದರ್ಭದಲ್ಲಿ ದೊಡ್ಡ ಮಟ್ಟದಲ್ಲಿ ಒಂದು ನಾಯಕರ ದಂಡೇ ಕಾಂಗ್ರೆಸ್‌ಗೆ ಬಂದಿತು. ಅಂಥವರಲ್ಲಿ ಸತೀಶ್ ಜಾರಕಿಹೊಳಿಯವರೂ ಒಬ್ಬರು. ಅಂದಿನಿಂದ ಇಂದಿನವರೆಗೂ ಸಿದ್ದರಾಮಯ್ಯ ಮತ್ತು ಜಾರಕಿಹೊಳಿಯವರ ನಡುವೆ ಆಗಾಗ್ಗೆ ಸಣ್ಣಪುಟ್ಟ ಏರಿಳಿತಗಳಾಗಿರಬಹುದೇ ಹೊರತು, ಒಬ್ಬರನ್ನೊಬ್ಬರು ರಾಜಕೀಯವಾಗಿ ತುಳಿಯುವ ದುಷ್ಟ ಕೆಲಸಕ್ಕೆ ಎಂದಿಗೂ ಕೈ ಹಾಕಿಲ್ಲ.
ಸಿದ್ದರಾಮಯ್ಯನವರಿಗೆ ಜಾರಕಿಹೊಳಿ ಫ್ಯಾಮಿಲಿ ಮೇಲೆ ಅತೀವ ಪ್ರೀತಿ. ಈ ಕುಟುಂಬದ ಯಾವುದೇ ವ್ಯಕ್ತಿ ಬೇರೊಂದು ಪಕ್ಷದಲ್ಲಿ ಗುರುತಿಸಿಕೊಂಡರೂ ಸಿದ್ದರಾಮಯ್ಯನವರ ಮೇಲೆ ದಾಳಿ ಮಾಡಿದ್ದು ಎಂದಿಗೂ ಕಾಣುವುದಿಲ್ಲ. ಸತೀಶ್ ಅವರಂತೂ ಮುಂಬೈ ಕರ್ನಾಟಕ ಭಾಗದ ಯಾವುದೇ ಚುನಾವಣೆ ನಡೆದಾಗಲೂ ಸಿದ್ದರಾಮಯ್ಯನವರ ನಾಯಕತ್ವಕ್ಕೆ ಬೆಂಬಲವಾಗಿ ನಿಂತು ಕೆಲಸ ಮಾಡಿದ್ದಾರೆ.
ಇತ್ತೀಚೆಗೆ ಯತೀಂದ್ರ ಸಿದ್ದರಾಮಯ್ಯನವರು ಸಭೆಯೊಂದರಲ್ಲಿ ಮಾತನಾಡುತ್ತಾ, “ಮುಂದಿನ ದಿನಗಳಲ್ಲಿ ಸತೀಶ್ ಜಾರಕಿಹೊಳಿಯವರು ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ, ದಲಿತ) ಸಮುದಾಯಗಳನ್ನು ಮುಂದೆ ತೆಗೆದುಕೊಂಡು ಹೋಗಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹೀಗಿರುವಾಗ ಜಾರಕಿಹೊಳಿಯವರು ಸಿದ್ದರಾಮಯ್ಯನವರ ವಿರುದ್ಧ ಸಹಿಸಂಗ್ರಹ ಮಾಡಿದ್ದಾರೆಂಬ ಕಥನ ಹುಟ್ಟಿದ್ದಾದರೂ ಹೇಗೆ? ಯಾವುದು ಈ ಸುದ್ದಿಗಳ ಮೂಲ?
“ಕಾಂಗ್ರೆಸ್‌ನ ಬಲವೇ ಅಹಿಂದ ಮತದಾರರು. ಆ ಕೋಟೆಯನ್ನು ಭೇದಿಸುವುದೇ ಸಂಘಪರಿವಾರದ ಮುಖ್ಯ ಗುರಿ” ಎನ್ನುತ್ತಾರೆ ಹಿರಿಯ ಪತ್ರಕರ್ತ ಹಾಗೂ ಸಿದ್ದರಾಮಯ್ಯನವರ ಮೊದಲ ಅವಧಿಯಲ್ಲಿ ಮಾಧ್ಯಮ ಸಲಹೆಗಾರರಾಗಿದ್ದ ದಿನೇಶ್ ಅಮೀನ್ ಮಟ್ಟು.
‘ವಾರ್ತಾಭಾರತಿ’ ಯೂಟ್ಯೂಬ್ ಚಾನೆಲ್‌ನಲ್ಲಿ ವಿಸ್ತೃತವಾಗಿ ಮಾತನಾಡಿರುವ ಮಟ್ಟು ಅವರು, ಕಾಂಗ್ರೆಸ್ ಪಕ್ಷ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆಯನ್ನು ವಿವರಿಸಿದ್ದಾರೆ.
“ಅಹಿಂದದಲ್ಲಿ ಇರುವುದು ಮೂರು ಘಟಕ (ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ). ಇತ್ತೀಚಿನ ದಿನಗಳಲ್ಲಿ ದಲಿತ ಎನ್ನುವ ಬದಲಾಗಿ ಎಡ, ಬಲ, ಕೊಲಂಬೋ ಎನ್ನುತ್ತಿದ್ದಾರೆ. ಒಳಮೀಸಲಾತಿ ವಿಚಾರ ಮುಂದಿಟ್ಟುಕೊಂಡು ಎಡಗೈ ಮತ್ತು ಬಲಗೈ ನಡುವೆ ಒಬ್ಬರನ್ನೊಬ್ಬರು ಬೈಯುವ ಮಟ್ಟಿಗಿನ ವೈಷಮ್ಯ ಕಂಡುಬಂದಿದ್ದು ಆತಂಕಕಾರಿ. ಎರಡು ವರ್ಷಗಳ ಹಿಂದೆ ಈ ವಾತಾವರಣ ಇರಲಿಲ್ಲ. ಇಂತಹ ವೈಷಮ್ಯ ಬರುವುದರ ಹಿಂದೆ ಆರ್ಎಸ್ಎಸ್ನವರ ಮಧ್ಯಪ್ರವೇಶ ಕಾಣಿಸುತ್ತದೆ. ಈ ಹಿಂದೆ ಎರಡು ಸಮುದಾಯಗಳ ನಡುವೆ ಭಿನ್ನಾಭಿಪ್ರಾಯಗಳಿದ್ದರೂ 2023ರಲ್ಲಿ ಸಮನ್ವಯ ಸಾಧಿಸಲಾಯಿತು. ಹೀಗಾಗಿಯೇ ಎಡ ಸಮುದಾಯದ ಮತಗಳು ಕಾಂಗ್ರೆಸ್ಗೆ ಬಂದವು. ಆದರೆ ಜಸ್ಟಿಸ್ ನಾಗಮೋಹನ ದಾಸ್ ಆಯೋಗದ ವರದಿ ಬಳಿಕ ವೈಯಕ್ತಿಕ ಮಟ್ಟದಲ್ಲಿ ನಿಂದಿಸುವ ಬೆಳವಣಿಗೆಯೂ ಆಯಿತು. ಅಹಿಂದದ ಒಂದು ಕಾಂಪೊನೆಂಟ್ (ಘಟಕ) ಛಿದ್ರವಾಯಿತು. ಎರಡನೇ ಘಟಕವಾದ ಮುಸ್ಲಿಮರ ವಿಚಾರ ನೋಡಿ. ದಾವಣಗೆರೆ ಚುನಾವಣೆ ಬಳಿಕ ಮುಸ್ಲಿಮರ ನಾಯಕತ್ವದಲ್ಲಿ ಬಿರುಕು ಬಂದಿತು. ಜಮೀರ್ ಅವರ ಆಡಿಯೊ ಬಿಡುಗಡೆ ಮಾಡುವ ಮಟ್ಟಕ್ಕೆ ಈ ಬಿರುಕು ಹೋಗಿದೆ. ಜಮೀರ್ ಅವರ ಕೆಲಸದ ರೀತಿಯ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ ಸಾಮಾನ್ಯ ಮುಸ್ಲಿಮರು ಒಪ್ಪಿಕೊಳ್ಳುವ ಲೀಡರ್ ಜಮೀರ್ ಎಂಬುದು ನಿಜ. ಆದರೆ ಜಮೀರ್ ವಿರುದ್ಧ ಉಳಿದವರನ್ನು ಎತ್ತಿಕಟ್ಟುವ ಪ್ರಯತ್ನ ನಡೆದಿದೆ. ಒಟ್ಟಾರೆ ಮೈನಾರಿಟಿ ಘಟಕ ಕೂಡ ಒಡೆದು ಹೋಗಿದೆ. ಉಳಿದದ್ದು ಒಬಿಸಿಗಳು. ಸಿದ್ದರಾಮಯ್ಯನವರ ಸಕ್ರಿಯವಾದ ರಾಜಕಾರಣ ಮುಗಿಯುತ್ತಾ ಬಂದಿದೆ. ಶೇ.8ರಷ್ಟಿರುವ ಕುರುಬರು, ಎರಡೂವರೆ ಪರ್ಸೆಂಟ್ ಇರುವ ಈಡಿಗರು ಒಬಿಸಿ ಘಟಕದಲ್ಲಿದ್ದಾರೆ. ಒಬಿಸಿಗಳಿಗೆ ಲೀಡರ್ ಆಗಿರುವ ಸಿದ್ದರಾಮಯ್ಯನವರ ನಿರ್ಗಮನದ ಬಳಿಕ ಒಬಿಸಿಗಳನ್ನು ಒಡೆದು ಹಾಕಬಹುದು ಎಂದು ಇವರಿಗೆ (ಆರ್ಎಸ್ಎಸ್ನರಿಗೆ) ಗೊತ್ತಾಗಿದೆ. ಸಿದ್ದರಾಮಯ್ಯನವರ ನಂತರ ಅಹಿಂದದ ಲೀಡರ್ ಯಾರೆಂದು ಪ್ರಶ್ನೆ ಬಂದಾಗ ಜಾರಕಿಹೊಳಿಯವರ ಹೆಸರು ಬಂದಿತು. ಇದೇ ಸಂದರ್ಭದಲ್ಲಿ ಜಾರಕಿಹೊಳೆಯವರಿಗೆ ಮಸಿಬಳಿಯುವ ಕೆಲಸ ನಡೆಯುತ್ತಿದೆ. ಇವೆಲ್ಲವೂ ಬಿಡಿಬಿಡಿಯಾಗಿ ನಡೆಯುತ್ತಿರುವ ಘಟನೆಗಳೆಂದು ಅನಿಸುವುದಿಲ್ಲ. ಇವುಗಳ ಹಿಂದೆ ದೊಡ್ಡ ಮಟ್ಟದ ಪಿತೂರಿ ಇದೆ. ಅಹಿಂದ ಸಮುದಾಯಗಳನ್ನು ಒಡೆಯುವ ಪಿತೂರಿಗಳ ಹಿಂದೆ ಬಿಜೆಪಿ, ಜೆಡಿಎಸ್ ಮತ್ತು ಮುಖ್ಯವಾಗಿ ಆರ್ಎಸ್ಎಸ್ ಕೆಲಸ ಮಾಡುತ್ತಿವೆ” ಎಂದು ಎಚ್ಚರಿಸುತ್ತಾರೆ ಮಟ್ಟು.
ಈ ಲೇಖನ ಓದಿದ್ದೀರಾ?: ರಾಷ್ಟ್ರೀಯ ಬಿಕ್ಕಟ್ಟುಗಳಲ್ಲಿ ಮೋದಿ ‘ನಿಗೂಢ ಮೌನ’; ಮರ್ಮವೇನು?
ಸಾಮಾಜಿಕ ನ್ಯಾಯಕ್ಕೆ ಅಗತ್ಯವಾಗಿ ಆಗಬೇಕಿದ್ದ ಒಳಮೀಸಲಾತಿ ವಿಚಾರವನ್ನು ಸಮುದಾಯಗಳ ನಡುವಿನ ವೈಷಮ್ಯವಾಗಿ ತಿರುಗಿಸಲು ಆರ್ಎಸ್ಎಸ್ ಹೇಗೆ ತಂತ್ರಗಾರಿಕೆ ಮಾಡಿತು ಎಂಬುದನ್ನು ‘ಈದಿನ’ದ ಜೊತೆ ಮಾತನಾಡಿದ ದಲಿತ ಸಂಘರ್ಷ ಸಮಿತಿ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ವಿವರಿಸಿದ್ದಾರೆ.
“ಎಡ ಮತ್ತು ಬಲ ಸಮುದಾಯಗಳೆರಡರಲ್ಲೂ ಆರ್ಎಸ್ಎಸ್ ಗುಂಪುಗಳನ್ನು ಸಕ್ರಿಯವಾಗಿವೆ. ಹೊಲೆಯರಿಗೆ ಭಾರೀ ಅನ್ಯಾಯವಾಗುತ್ತಿದೆ ಎಂದು ಬಲಗೈ ಭಾಗದ ಆರ್ಎಸ್ಎಸ್ ತಂಡದಿಂದ ದೊಡ್ಡ ಮಟ್ಟದಲ್ಲಿ ಹಬ್ಬಿಸಲಾಯಿತು. ರಾಜಕೀಯ ಅಕಾಂಕ್ಷಿಗಳಾಗಿದ್ದವರು ಸಮುದಾಯವನ್ನು ದಿಕ್ಕುತಪ್ಪಿಸುವಂತೆ ಅಂಕಿ-ಅಂಶಗಳನ್ನು ಹಂಚಿಕೆ ಮಾಡಿದರು. ಎಡಗೈ ಭಾಗದ ಆರ್ಎಸ್ಎಸ್ ಮೂಲಕ ಬಲಗೈ ನಾಯಕರ ಮೇಲೆ ತೀವ್ರ ವಾಗ್ದಾಳಿ ನಡೆಸಲಾಯಿತು. ಬಲಗೈನವರ ವಿರುದ್ಧ ಒಳಮೀಸಲಾತಿ ಹೋರಾಟಗಾರರು ದಾಳಿ ನಡೆಸುತ್ತಿದ್ದಾರೆಂದು ಬಿಂಬಿಸಲಾಯಿತು. ಇತ್ತ ಬಲಗೈ ಸಮುದಾಯದ ಜ್ಞಾನಪ್ರಕಾಶ ಸ್ವಾಮೀಜಿಯವರ ಮೇಲೂ ಟೀಕೆಗಳನ್ನು ಹರಿಸಲಾಯಿತು. ಸ್ವಜಾತಿಯ ಪರ ಸ್ವಾಮೀಜಿ ನಿಲ್ಲಲೇಬೇಕಾದ ಒತ್ತಡ ಸೃಷ್ಟಿಯಾಯಿತು. ಯಾವುದೋ ಒಂದು ಸಂದರ್ಭದಲ್ಲಿ ಸ್ವಾಮೀಜಿಯವರು ಆವೇಶದಲ್ಲಿ ಮಾತನಾಡುತ್ತಾ, ‘ಒಳಮೀಸಲಾತಿ ಬೀಸಾಕು, ಬಾಬಾಸಾಹೇಬರ ಮೀಸಲಾತಿ ಸಾಕು’ ಎಂದುಬಿಟ್ಟರು. ಇದ್ಯಾಕೆ ಹೀಗೆ ಮಾತನಾಡಿದ್ದೀರಿ ಎಂದು ಅವರನ್ನು ವೈಯಕ್ತಿಕವಾಗಿ ಪ್ರಶ್ನಿಸಿದ್ದೆ. ‘ಬೇಕಂತ ಹೀಗೆ ಮಾತನಾಡಿಲ್ಲ, ಆ ಸಂದರ್ಭದಲ್ಲಿ ಮಾತಿನ ಭರದಲ್ಲಿ ಈ ಹೇಳಿಕೆ ನೀಡಿಬಿಟ್ಟಿರುವೆ ಅಷ್ಟೇ’ ಅನ್ನೋದು ಸ್ವಾಮೀಜಿಯವರ ಪ್ರತಿಕ್ರಿಯೆಯಾಗಿತ್ತು. ವಾಸ್ತವದಲ್ಲಿ ಎರಡು ಸಮುದಾಯದೊಳಗೆ ಯಾವುದೇ ವೈಷಮ್ಯವಿಲ್ಲ. ಇಲ್ಲದ ದ್ವೇಷನ್ನು ಹುಟ್ಟುಹಾಕುವುದಕ್ಕಾಗಿ ಆರ್ಎಸ್ಎಸ್ ಮುಖಂಡನೊಬ್ಬ ಆಮಿಷ ಒಡ್ಡುತ್ತಿದ್ದಾನೆಂಬುದು ಸಮುದಾಯಗಳಿಗೆ ಅರಿವಾಗುತ್ತಿದೆ. ತಾವು ಅತಿರೇಕಕ್ಕೆ ಹೋಗಿದ್ದೇವೆಂದು ಎರಡು ಸಮುದಾಯಕ್ಕೂ ನಿಧಾನಕ್ಕೆ ಅರ್ಥವಾಗುತ್ತಿದೆ. ಮುಂದಿನ ದಿನಗಳಲ್ಲಿ ಎಡ- ಬಲ ಐಕ್ಯತಾ ಸಮಾವೇಶವನ್ನು ನಡೆಸಲಿದ್ದೇವೆ” ಎನ್ನುತ್ತಾರೆ ಹೆಣ್ಣೂರು ಶ್ರೀನಿವಾಸ್.
ಅಲ್ಪಸಂಖ್ಯಾತರ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವೇ ತಪ್ಪು ಹೆಜ್ಜೆ ಇಟ್ಟಿರುವುದು ಕಾಣುತ್ತದೆ. ಕಾಂಗ್ರೆಸ್ ಪಕ್ಷದೊಳಗೆ ನಡೆಯುತ್ತಿರುವ ಮುಸ್ಲಿಂ ನಾಯಕತ್ವದ ಕಿತ್ತಾಟ ಮತ್ತು ಸಮುದಾಯಕ್ಕೆ ನೀಡಬೇಕಾದ ಪ್ರಾತಿನಿಧ್ಯದಲ್ಲಿ ಕಾಂಗ್ರೆಸ್ ತೋರುತ್ತಿರುವ ನಿರ್ಲಕ್ಷ್ಯದಿಂದಾಗಿಯೂ ಮುಸ್ಲಿಮರ ಮತಗಳು ಛಿದ್ರವಾಗುವ ಸಾಧ್ಯತೆ ಕಾಣುತ್ತಿದೆ. ಮಾಸ್ ಲೀಡರ್ ಸಿದ್ದರಾಮಯ್ಯನವರ ನಿರ್ಗಮನದ ಈ ಸನ್ನಿವೇಶದಲ್ಲಿ ಅಹಿಂದ ಮತಗಳನ್ನು ಒಡೆಯುವ ಸಂಘಪರಿವಾರದ ಕಾರ್ಯಾಚರಣೆ ಮತ್ತಷ್ಟು ಬಿರುಸಾಗಬಹುದು ಎಂದು ರಾಜಕೀಯ ವಿಶ್ಲೇಷಕರು ಎಚ್ಚರಿಸುತ್ತಿದ್ದಾರೆ. ಕಾಂಗ್ರೆಸ್ ತಂತ್ರಗಾರಿಕೆ ಏನು ಎಂಬುದಕ್ಕೆ ಸ್ಪಷ್ಟ ಉತ್ತರಗಳು ಸಿಕ್ಕದಾಗಿವೆ.




