ನಿರಂತರವಾಗಿ ಏರಿಕೆಯಾಗುತ್ತಿರುವ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ (ಎಲ್‌ಪಿಜಿ) ಹಾಗೂ ದಿನಬಳಕೆ ವಸ್ತುಗಳ ಬೆಲೆಗಳನ್ನು ಕೇಂದ್ರ ಸರ್ಕಾರ ತಕ್ಷಣ ಹಿಂಪಡೆದು ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಪ್ರಜಾಪ್ರಭುತ್ವ ಸಂರಕ್ಷಣಾ ಸಮಿತಿ ಒತ್ತಾಯಿಸಿದೆ.
ಈ ಕುರಿತು ಸಮಿತಿಯ ಪ್ರಮುಖರು ರಾಷ್ಟ್ರಪತಿಗಳ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಸೋಮವಾರ ಭಾಲ್ಕಿ ತಾಲೂಕು ಆಡಳಿತಕ್ಕೆ ಸಲ್ಲಿಸಿದರು
ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಗಗನ ಫುಲೆ ಮಾತನಾಡಿ, “ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯಿಂದ ಬಡವರು, ರೈತರು, ಕಾರ್ಮಿಕರು, ನೌಕರರು ಹಾಗೂ ಮಧ್ಯಮ ವರ್ಗದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಂಚ ರಾಜ್ಯಗಳ ಚುನಾವಣೆ ಸಂದರ್ಭದಲ್ಲಿ ಜನರಿಗೆ ವಿವಿಧ ಭರವಸೆಗಳನ್ನು ನೀಡಿ, ಚುನಾವಣೆ ಮುಗಿದ ತಕ್ಷಣ ಬೆಲೆ ಏರಿಕೆ ಮಾಡುವ ಕೇಂದ್ರ ಸರ್ಕಾರದ ನೀತಿ ಖಂಡನೀಯ. ಬೆಲೆ ಏರಿಕೆಯಿಂದ ಜನರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆಯಾಗಿ ಹಾಹಾಕಾರ ಸೃಷ್ಟಿಯಾಗಿದೆ” ಎಂದು ಆರೋಪಿಸಿದರು.
:ದೇಶದ ಒಟ್ಟು ಸರಕು ಸಾಗಣೆಯಲ್ಲಿ ರಸ್ತೆ ಸಾರಿಗೆಯ ಪಾಲು ಸುಮಾರು ಶೇ.71 ರಷ್ಟಿದ್ದು, ಇಂಧನ ಬೆಲೆ ಹೆಚ್ಚಳದಿಂದ ಬಸ್ ಪ್ರಯಾಣ ದರ, ಲಾರಿ ಸಾರಿಗೆ ವೆಚ್ಚ, ಶಾಲಾ ವಾಹನಗಳ ಶುಲ್ಕ ಹಾಗೂ ಇತರೆ ಸಾರಿಗೆ ಸೇವೆಗಳ ದರಗಳು ಗಣನೀಯವಾಗಿ ಏರಿಕೆಯಾಗಿವೆ. ಇದರ ನೇರ ಹೊರೆ ಸಾಮಾನ್ಯ ಜನರ ಮೇಲಿದೆ. ಪ್ರಸ್ತುತ ಮುಂಗಾರು ಹಂಗಾಮು ಆರಂಭವಾಗಿರುವ ಸಂದರ್ಭದಲ್ಲಿ ರೈತರು ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ಇಂಧನ, ರಸಗೊಬ್ಬರ ಹಾಗೂ ಇತರೆ ಕೃಷಿ ಪರಿಕರಗಳ ಬೆಲೆ ಏರಿಕೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಕೃಷಿ ಉತ್ಪಾದನಾ ವೆಚ್ಚ ಹೆಚ್ಚುತ್ತಿರುವ ಕಾರಣ ರೈತರ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದೆ. ಪೆಟ್ರೋಲ್, ಅಡುಗೆ ಗ್ಯಾಸ್‌ಗಾಗಿ ಜನರು ದಿನವಿಡೀ ಸಾಲುಗಟ್ಟಿ ನಿಲ್ಲಬೇಕಾದ ದುಸ್ಥಿತಿ ಬಂದೊದಗಿದೆ” ಎಂದು ದೂರಿದರು.
ಇದನ್ನೂ ಓದಿ : ಬೀದರ್ | ಕನೇರಿ ಸ್ವಾಮಿ ಬಸವಕಲ್ಯಾಣ ಪ್ರವೇಶಿಸಕೂಡದು: ಬಸವಪರ ಸಂಘಟನೆಗಳ ನಿರ್ಣಯ
ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆಲೆ ಏರಿಕೆಯಿಂದ ದುಡಿಯುವ ವರ್ಗ, ರೈತರು, ಕಾರ್ಮಿಕರು, ಸಣ್ಣ ವ್ಯಾಪಾರಿಗಳು ಹಾಗೂ ಮಧ್ಯಮ ವರ್ಗದ ಜನರ ಜೀವನ ಸಂಕಷ್ಟಕ್ಕೆ ಸಿಲುಕಿದ್ದು, ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಕೇಂದ್ರ ಸರ್ಕಾರಕ್ಕೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಬೆಲೆ ಏರಿಕೆಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಪ್ರಜಾಪ್ರಭುತ್ವ ಸಂರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಲ್ಲಪ್ಪ ಮರೂರ, ಅಂಬೇಡ್ಕರ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಲೋಕೇಶ ಕಾಂಬಳೆ ಸೇರಿದಂತೆ ಪ್ರಮುಖರಾದ ರಾಜೇಂದ್ರ ಕರವಂದೆ, ಶ್ರೀಮಂತ ಭೋಸ್ಲೆ, ಜೈವರ್ಧನ್, ಶ್ರೀನಿವಾಸ್ ಮತ್ತಿತರರಿದ್ದರು.





