ಪಶುಸಂಗೋಪನೆ ಸಾಲ ವಿತರಣೆಯಲ್ಲಿ ಎದುರಾಗಿರುವ ತಾಂತ್ರಿಕ ಗೊಂದಲ ಹಾಗೂ ವಿಳಂಬ ನೀತಿಯನ್ನು ಖಂಡಿಸಿ, ಮುಂದಿನ 15 ದಿನಗಳೊಳಗೆ ರೈತರ ಖಾತೆಗಳಿಗೆ ಸಾಲ ಜಮಾ ಮಾಡುವಂತೆ ಒತ್ತಾಯಿಸಿ ರೈತ ಮುಖಂಡ ಮುತ್ತಪ್ಪ ಕೋಮಾರ ನೇತೃತ್ವದಲ್ಲಿ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ಬಿಡಿಸಿಸಿ ಬ್ಯಾಂಕ್ ಶಾಖೆಯ ಎದುರು ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಯಿತು.
29 ಷರತ್ತುಗಳ ನೆಪವೊಡ್ಡಿ ಸಾಲ ವಿತರಣೆಗೆ ತಡೆ ಆರೋಪ
ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಮುತ್ತಪ್ಪ ಕೋಮಾರ, “ಈ ಶಾಖೆಯ ವ್ಯಾಪ್ತಿಗೆ ಒಳಪಡುವ ಕುಳಲಿ, ಮಾಲಾಪುರ, ಮುಗಳಖೋಡ, ಶಿರೋಳ (1 ಮತ್ತು 2), ಸೊರಂಗಾವ ಸೇರಿದಂತೆ ಒಟ್ಟು ಆರು ಗ್ರಾಮಗಳ ಪಿಕೆಪಿಎಸ್‌ಗಳಲ್ಲಿ ಸುಮಾರು 6,500ಕ್ಕೂ ಅಧಿಕ ಖಾತೆದಾರರಿಗೆ ಪಶುಸಂಗೋಪನೆ ಸಾಲ ವಿತರಣೆಯಲ್ಲಿ ತೀವ್ರ ತೊಂದರೆಯಾಗುತ್ತಿದೆ. ಸ್ಥಳೀಯ ಸೊಸೈಟಿ ಕಾರ್ಯದರ್ಶಿ ಹಾಗೂ ಆಡಳಿತ ಮಂಡಳಿ ಸಂಪೂರ್ಣ ಸಹಕಾರ ನೀಡುತ್ತಿದ್ದರೂ, ಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿಯ ಮಾರ್ಗಸೂಚಿಗಳು ಮತ್ತು ಮೇಲ್ವಿಚಾರಕರ ಹಂತದಲ್ಲಿ ಬ್ಯಾಂಕ್ ಸೆಟ್, ಎನ್‌ಡಿಸಿ ಹಾಗೂ ಜಾನುವಾರುಗಳ ಫೋಟೋ ಸಲ್ಲಿಕೆ ಸೇರಿದಂತೆ 29 ಷರತ್ತುಗಳನ್ನು ಹಾಕಿ ಅನಗತ್ಯ ಗೊಂದಲ ಸೃಷ್ಟಿಸಿ ಸಾಲ ವಿತರಣೆಯನ್ನು ತಡೆಯಲಾಗುತ್ತಿದೆ” ಎಂದು ಆರೋಪಿಸಿದರು.
ಪ್ರಧಾನ ಕಚೇರಿ ಮುತ್ತಿಗೆಯ ಎಚ್ಚರಿಕೆ
ಪ್ರತಿಭಟನೆಯ ವೇಳೆ ಬಾಗಲಕೋಟೆಯಲ್ಲಿರುವ ಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಒತ್ತಡ ಹೇರಲಾಯಿತು. “ಮುಂದಿನ 15 ದಿನಗಳ ಒಳಗಾಗಿ ಎಲ್ಲ ಆರು ಸೊಸೈಟಿಗಳ ವ್ಯಾಪ್ತಿಯ ರೈತರ ಖಾತೆಗಳಿಗೆ ಪಶುಸಂಗೋಪನೆ ಸಾಲವನ್ನು ಮಂಜೂರು ಮಾಡಿ ಜಮಾ ಮಾಡುವುದಾಗಿ ಬ್ಯಾಂಕ್ ಪ್ರಧಾನ ಕಚೇರಿಯಿಂದ ಆಶ್ವಾಸನೆ ದೊರೆತಿದೆ. ಒಂದು ವೇಳೆ ನಿಗದಿತ ಅವಧಿಯಲ್ಲಿ ಸಾಲ ವಿತರಿಸದೆ ವಿಳಂಬ ನೀತಿ ಮುಂದುವರಿಸಿದರೆ, ಕರ್ನಾಟಕ ರಾಜ್ಯ ರೈತ ಸಂಘಟನೆಯ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ರೈತರು ಒಗ್ಗೂಡಿ ಬಾಗಲಕೋಟೆಯ ಡಿಸಿಸಿ ಕೇಂದ್ರ ಬ್ಯಾಂಕ್ ಪ್ರಧಾನ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಹೋರಾಟ ನಡೆಸಲಾಗುವುದು” ಎಂದು ಕೋಮಾರ ಸ್ಪಷ್ಟ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಈರಪ್ಪ ಹಂಚಿನಾಳ, ರುದ್ರಪ್ಪ ಅಡವಿ ಸೇರಿದಂತೆ ಹಲವು ರೈತರು ಉಪಸ್ಥಿತರಿದ್ದರು.
ಕಾರ್ಯಭಾರದ ನಡುವೆಯೂ ಶೀಘ್ರ ವಿಲೇವಾರಿ ಭರವಸೆ
ಇದೇ ವೇಳೆ ಸಾಲ ಮಂಜೂರಾತಿ ವಿಳಂಬದ ಬಗ್ಗೆ ಅಳಲು ತೋಡಿಕೊಂಡ ರೈತರಿಗೆ ಸ್ಪಂದಿಸಿದ ಬಿಡಿಸಿಸಿ ಬ್ಯಾಂಕ್‌ನ ಕ್ಷೇತ್ರ ಸಹಾಯಕಿ ಸವಿತಾ ಚನ್ನಾಳ ಅವರು ಶೀಘ್ರವೇ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
“ನನ್ನ ವ್ಯಾಪ್ತಿಗೆ ಆರು ಪಿಕೆಪಿಎಸ್‌ಗಳು ಒಳಪಡುತ್ತಿದ್ದು, ಎಂ.ಟಿ. ಸಾಲ, ಹೈನುಗಾರಿಕೆ ಬಿಲ್‌ಗಳು ಮತ್ತು ಹೆಚ್ಚುವರಿ ಸಾಲ ಸೇರಿದಂತೆ 20ರಿಂದ 25 ಕೋಟಿ ರೂ. ಮೌಲ್ಯದ, ಸುಮಾರು 6,500ಕ್ಕೂ ಹೆಚ್ಚು ರೈತರ ದಾಖಲೆಗಳ ನಿರ್ವಹಣೆಯ ಜವಾಬ್ದಾರಿ ನನ್ನ ಮೇಲಿದೆ. ತೀವ್ರ ಕಾರ್ಯಭಾರದಿಂದ ಕಡತ ವಿಲೇವಾರಿಯಲ್ಲಿ ಕೊಂಚ ವಿಳಂಬವಾಗಿದೆ. ನಾನೂ ರೈತ ಕುಟುಂಬದಿಂದಲೇ ಬಂದವಳಾಗಿದ್ದು, ಅನ್ನದಾತರ ಕಷ್ಟಗಳ ಅರಿವು ನನಗಿದೆ. ರಜಾ ದಿನಗಳನ್ನೂ ಲೆಕ್ಕಿಸದೆ ಹೆಚ್ಚುವರಿ ಅವಧಿ ಕೆಲಸ ಮಾಡಿ, ಬಾಕಿ ಇರುವ ಎಲ್ಲಾ ಕಡತಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಿಕೊಡುತ್ತೇನೆ” ಎಂದು ಅವರು ರೈತರಿಗೆ ವಿಶ್ವಾಸ ವ್ಯಕ್ತಪಡಿಸಿದರು.



