ಓಮನ್ ಕರಾವಳಿಯ ಶಿನಾಸ್ (Shinas) ಬಂದರು ವ್ಯಾಪ್ತಿಯಲ್ಲಿ 12 ಮಂದಿ ಭಾರತೀಯ ಸಿಬ್ಬಂದಿಯನ್ನು ಒಳಗೊಂಡಿದ್ದ ಟೋಗೊ-ಧ್ವಜದ ರಾಸಾಯನಿಕ ಸಾಗಣೆ ಹಡಗಿನ ಮೇಲೆ ಇರಾನ್ ಕರಾವಳಿ ಕಾವಲು ಪಡೆ ದಾಳಿ ನಡೆಸಿದೆ ಎಂದು ಕೇಂದ್ರ ಬಂದರು, ಹಡಗು ಮತ್ತು ಜಲಸಾರಿಗೆ ಸಚಿವಾಲಯ ಇಂದು ತಿಳಿಸಿದೆ. ಈ ಘಟನೆಯಲ್ಲಿ ಎಲ್ಲಾ ಭಾರತೀಯ ಸಿಬ್ಬಂದಿ ಸಂಪೂರ್ಣ ಸುರಕ್ಷಿತವಾಗಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಏಪ್ರಿಲ್ 25ರಂದು ಈ ಘಟನೆ ನಡೆದಿದ್ದು, ದಾಳಿಗೊಳಗಾದ ಹಡಗನ್ನು ‘ಎಂಟಿ ಸಿರೋನ್’ (MT Siron) ಎಂದು ಗುರುತಿಸಲಾಗಿದೆ. ಇತರ ವಾಣಿಜ್ಯ ಹಡಗುಗಳ ಜೊತೆಗೆ ಸಾಗುತ್ತಿದ್ದ ಈ ಹಡಗನ್ನು ಇರಾನ್ ಕರಾವಳಿ ಕಾವಲು ಪಡೆ ಅಡ್ಡಗಟ್ಟಿ, ಎಚ್ಚರಿಕೆಯ ಗುಂಡುಗಳನ್ನು ಹಾರಿಸಿದೆ. ಇದರಿಂದ ಸಿಬ್ಬಂದಿಯಲ್ಲಿ ಆತಂಕ ಮನೆಮಾಡಿತ್ತಾದರೂ, ಹಡಗಿಗೆ ಯಾವುದೇ ಹಾನಿಯಾಗಿಲ್ಲ ಮತ್ತು ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಕ್ಯಾಂಪಸ್ ರಾಜಕೀಯಕ್ಕೆ ಶಿಸ್ತಿನ ಕಡಿವಾಣ: ಲಿಂಗ್ಡೋ ಸಮಿತಿ ವರದಿಯ ಆಶಯ ಮತ್ತು ವಾಸ್ತವ
ಪಶ್ಚಿಮ ಏಷ್ಯಾದ ಇತ್ತೀಚಿನ ಬೆಳವಣಿಗೆಗಳ ಕುರಿತು ನಡೆದ ಅಂತರ್ ಸಚಿವಾಲಯದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಂದರು, ಹಡಗು ಮತ್ತು ಜಲಸಾರಿಗೆ ಸಚಿವಾಲಯದ ನಿರ್ದೇಶಕ ಮನ್‌ದೀಪ್ ಸಿಂಗ್ ರಾಂಧವಾ “ಏಪ್ರಿಲ್ 25ರಂದು ಓಮನ್‌ನ ಶಿನಾಸ್ ಬಂದರಿನ ಹೊರವಲಯದಲ್ಲಿ ಈ ಘಟನೆ ವರದಿಯಾಗಿದೆ. ಟೋಗೊ-ಧ್ವಜದ ಹಡಗಿನಲ್ಲಿದ್ದ ಎಲ್ಲಾ 12 ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ” ಎಂದು ಖಚಿತಪಡಿಸಿದ್ದಾರೆ.
ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ಹಾಗೂ ಕೊಲ್ಲಿ ಪ್ರದೇಶದ ಉದ್ವಿಗ್ನತೆಯ ನಡುವೆ ನಡೆದಿರುವ ಈ ಘಟನೆಯ ಕುರಿತು ಭಾರತ ಸರ್ಕಾರ ತೀವ್ರ ನಿಗಾ ವಹಿಸಿದೆ. ಪ್ರಸ್ತುತ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದ್ದು, ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತೀಯ ರಾಯಭಾರ ಕಚೇರಿಗಳು ಮತ್ತು ಕಡಲ ಪಾಲುದಾರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಸಚಿವಾಲಯ ತಿಳಿಸಿದೆ. ಕಡಲ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿರುವ ನಾವಿಕರು ಮತ್ತು ಹಡಗು ಕಾರ್ಯಾಚರಣೆಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಭರವಸೆ ನೀಡಲಾಗಿದೆ.





