ಉನ್ನತ ಶಿಕ್ಷಣ ಪಡೆದ ಜವಾಬ್ದಾರಿಯುತ ಕುಟುಂಬವೊಂದರಲ್ಲಿ ಸೊಸೆಯ ಮೇಲೆಯೇ ನಡೆದಿರುವ ಅತಿ ಭೀಕರ ಕೌಟುಂಬಿಕ ದೌರ್ಜನ್ಯದ ಪ್ರಕರಣವೊಂದು ಉತ್ತರಾಖಂಡದ ಡೆಹ್ರಾಡೂನ್‌ನ ಸೆಲಾಕುಯಿ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. 32 ವರ್ಷದ ವಿವಾಹಿತ ಮಹಿಳೆಯೊಬ್ಬರನ್ನು ಆಕೆಯ ಅತ್ತೆ-ಮಾವ ಮತ್ತು ಪತಿ ಸೇರಿ ಬರೋಬ್ಬರಿ 10 ತಿಂಗಳುಗಳ ಕಾಲ ಶೌಚಾಲಯದಲ್ಲಿ ಕೂಡಿಟ್ಟು, ಆಕೆಯ ಖಾಸಗಿ ಅಂಗಗಳ ಮೇಲೆ ಬಾಟಲಿ ಮತ್ತು ಪೈಪ್‌ಗಳಿಂದ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ.
ದೆಹಲಿಯ ಕೇಂದ್ರೀಯ ವಿದ್ಯಾಲಯದಲ್ಲಿ (KV) ಶಿಕ್ಷಕರಾಗಿರುವ ವ್ಯಕ್ತಿಯೊಂದಿಗೆ 2024 ರಲ್ಲಿ ಈ ಸಂತ್ರಸ್ತ ಮಹಿಳೆಯ ವಿವಾಹವಾಗಿತ್ತು. ಭಾರತೀಯ ಸೇನೆಯಲ್ಲಿ 33 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಹವಾಲ್ದಾರ್ (ಮಹಿಳೆಯ ತಂದೆ), ಕಳೆದ ಮೇ 26 ರಂದು ಮಗಳನ್ನು ಗಂಡನ ಮನೆಯಿಂದ ರಕ್ಷಿಸಿ, ಸೋಮವಾರ ಸಂಜೆ ಪೊಲೀಸರಿಗೆ ದೂರು ನೀಡಿದ ನಂತರ ಈ ಅಮಾನುಷ ಕೃತ್ಯ ಬೆಳಕಿಗೆ ಬಂದಿದೆ.
ಬಲಿಪಶು ಮಹಿಳೆಯ ತಂದೆ ಮಾತನಾಡಿ, “ಮದುವೆಯಾದ ಆರಂಭದಲ್ಲಿ ಕುಟುಂಬದ ಪರಿಸ್ಥಿತಿ ಚೆನ್ನಾಗಿಯೇ ಇತ್ತು. ಆದರೆ, ಕಳೆದ ವರ್ಷದ ಫೆಬ್ರವರಿಯಲ್ಲಿ ನನ್ನ ಮಗಳು ಗಂಡು-ಹೆಣ್ಣು ಅವಳಿ ಮಕ್ಕಳಿಗೆ ಜನ್ಮ ನೀಡಿದ ನಂತರ ಅತ್ತೆಯ ಕಿರುಕುಳ ಮಿತಿಮೀರಿತು. ಹೆರಿಗೆಯ ನಂತರ ಮಗಳನ್ನು ತನ್ನ ಮನೆಗೆ ಕರೆದುಕೊಂಡು ಹೋದ ಅತ್ತೆ-ಮಾವ, ತಾಯಿಯಿಂದ ಆ ಹಸುಗೂಸುಗಳನ್ನೂ ಬೇರ್ಪಡಿಸಿದರು. ಕನಿಷ್ಠ ಮಕ್ಕಳಿಗೆ ಎದೆಹಾಲು ಉಣಿಸುವುದಕ್ಕೂ ಬಿಡಲಿಲ್ಲ” ಎಂದು ಕಣ್ಣೀಟ್ಟಿದ್ದಾಗಿ TOI ವರದಿ ಮಾಡಿದೆ.
2025ರ ಜುಲೈನಿಂದ 2026ರ ಮೇ ವರೆಗೆ ಆ ಮಹಿಳೆಯನ್ನು ಒಂದು ಕೋಣೆಯಲ್ಲಿ ಮತ್ತು ಹಲವುಬಾರಿ ಶೌಚಾಲಯದಲ್ಲಿ ಕೂಡಿಡಲಾಗಿತ್ತು. ಈ ಇಡೀ ಅವಧಿಯಲ್ಲಿ ಆಕೆಗೆ ಕೇವಲ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಉಪ್ಪು ಸೇರಿದಂತೆ ಬರೆ ಅನ್ನವನ್ನು ಮಾತ್ರ ತಿನ್ನಲು ನೀಡಲಾಗುತ್ತಿತ್ತು. ಚಳಿಗಾಲದಲ್ಲೂ ಹೊರಗಡೆ ಕಟ್ಟಿಗೆ ಒಲೆಯಲ್ಲಿ ಆಕೆಯೇ ಅಡುಗೆ ಮಾಡುವಂತೆ ಒತ್ತಾಯಿಸಲಾಗುತ್ತಿತ್ತು ಎಂದು ಆಕೆ ತಾಯಿ ಹೇಳಿದ್ದಾರೆ.
“ನಾವು ಫೋನ್ ಮಾಡಿದಾಗಲೆಲ್ಲಾ ಮಗಳು ಮಲಗಿದ್ದಾಳೆ ಅಥವಾ ಸ್ನಾನ ಮಾಡುತ್ತಿದ್ದಾಳೆ ಎಂದು ಸುಳ್ಳು ಹೇಳುತ್ತಿದ್ದರು. ಅನುಮಾನ ಬಂದು ಮೇ 26 ರಂದು ಗ್ರಾಮದ ಮುಖ್ಯಸ್ಥರೊಂದಿಗೆ ನಾವು ಅಲ್ಲಿಗೆ ಹೋದಾಗ ಮಗಳ ಸ್ಥಿತಿ ನೋಡಿ ನಮ್ಮ ಹೃದಯವೇ ಒಡೆದುಹೋಯಿತು. ಆಕೆಯನ್ನು ಪೈಪ್ ಮತ್ತು ಕೋಲುಗಳಿಂದ ಮೃಗಗಳಿಗಿಂತ ಹೀನಾಯವಾಗಿ ಹೊಡೆದಿದ್ದರು. ಅತ್ತೆಯಂತೂ ಮಗಳ ಖಾಸಗಿ ಅಂಗಗಳ ಮೇಲೆ ಬಾಟಲಿಯಿಂದ ಹಲ್ಲೆ ಮಾಡಿದ್ದಾಳೆ. ತಲೆಗೂದಲನ್ನು ಹಿಡಿದು ಎಳೆದಿದ್ದರಿಂದ ಹಲವು ಕಡೆ ತಲೆಯಲ್ಲಿ ಕೂದಲೇ ಇರಲಿಲ್ಲ” ಎಂದು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ದೆಹಲಿಯಿಂದ ಮನೆಗೆ ಬಂದಾಗಲೆಲ್ಲಾ ಪತಿಯೂ ತಂದೆ-ತಾಯಿಯ ಜೊತೆ ಸೇರಿ ಪತ್ನಿಯ ಮೇಲೆ ಹಲ್ಲೆ ಮಾಡುತ್ತಿದ್ದ ಎನ್ನಲಾಗಿದೆ. ಅಲ್ಲದೆ, ಹಲ್ಲೆ ನಡೆಸುವಾಗ ಮಹಿಳೆಯ ಆಕ್ಷೇಪಾರ್ಹ ಫೋಟೋಗಳನ್ನು ತೆಗೆದುಕೊಂಡಿರುವುದಾಗಿ ಮಾವ ಬೆದರಿಕೆ ಹಾಕಿದ್ದಾಗಿ ಪೋಷಕರು ಆರೋಪಿಸಿದ್ದಾರೆ. ಸದ್ಯ ತಾಯಿಯ ಬಳಿ ಬರಲಾಗದಂತೆ ಅವಳಿ ಮಕ್ಕಳನ್ನು ಅತ್ತೆ-ಮಾವ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ: ʼನಾವೆಲ್ಲಾ ಕುರಿಗಳಂತೆ ಸಾಯುತ್ತೇವೆʼ: ಕಾಂಗೋ ನಿರಾಶ್ರಿತರ ಶಿಬಿರಕ್ಕೆ ವಕ್ಕರಿಸಿದ ಎಬೋಲಾ ಗಂಡಾಂತರ
ಮಹಿಳೆಯ ಪೋಷಕರ ದೂರಿನ ಮೇರೆಗೆ ಸೆಲಾಕುಯಿ ಪೊಲೀಸರು ಪತಿ, ಅತ್ತೆ ಮತ್ತು ಮಾವನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ FIR ದಾಖಲಿಸಿದ್ದಾರೆ.
ಪೊಲೀಸ್ ಅಧಿಕಾರಿ ಅನುಜ್ ಕುಮಾರ್ ಮಾತನಾಡಿ, “ಪ್ರಾಥಮಿಕ ತನಿಖೆಯಲ್ಲಿ ಮಹಿಳೆಯ ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿವೆ. ಸದ್ಯ ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದು, ವರದಿ ಬಂದ ನಂತರ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ. ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ.





