ಪ್ರೀಮಿಯಂ ಲೇಖನ | ಬಿಟ್‌ಕಾಯಿನ್ ಹಗರಣ; ಬಿಜೆಪಿ ಸರ್ಕಾರದ ‘ಪಾಪದ ಕೂಸಿ’ನಲ್ಲಿ ಕಾಂಗ್ರೆಸ್ಸಿಗರೂ ಪಾಲುದಾರರೇ?

Date:

ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ಬಹುಕೋಟಿ ‘ಬಿಟ್‌ಕಾಯಿನ್ ಹಗರಣ’ ಕೇವಲ ಒಂದು ಆರ್ಥಿಕ ಅಪರಾಧವಾಗಿ ಉಳಿದಿಲ್ಲ; ಅದೊಂದು ರಾಜಕೀಯ ಚದುರಂಗದಾಟದ ಕರಾಳ ಅಸ್ತ್ರವಾಗಿದೆ. ಅಧಿಕಾರದಲ್ಲಿದ್ದಾಗ ತನಿಖೆ ಮುಚ್ಚಿಹಾಕುವುದು, ವಿಪಕ್ಷದಲ್ಲಿದ್ದಾಗ ಬೊಬ್ಬೆ ಹೊಡೆಯುವುದು ನಮ್ಮ ರಾಜಕೀಯ ವ್ಯವಸ್ಥೆಯ ಅಣಕ.

- Advertisement -

ರಾಜ್ಯದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿಗಳ ಕನ್ನಹಾಕಿದ, ಅಂದಿನ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಜನ್ಮತಾಳಿದ ಕುಖ್ಯಾತ ‘ಬಿಟ್‌ಕಾಯಿನ್‌ ಹಗರಣ’ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಈ ಬೃಹತ್ ಡಿಜಿಟಲ್ ಕೊಳ್ಳೆಯ ಮೂಲ ಬೇರುಗಳು, ಸಾಕ್ಷ್ಯನಾಶ ಮತ್ತು ಸಂಪೂರ್ಣ ಹೊಣೆಗಾರಿಕೆ ಹಿಂದಿನ ಬಿಜೆಪಿ ಸರ್ಕಾರದತ್ತಲೇ ಬೊಟ್ಟು ಮಾಡುತ್ತಿವೆ. ಹಗರಣದ ಸೃಷ್ಟಿಕರ್ತರೇ ಬಿಜೆಪಿ ನಾಯಕರು ಎಂಬುದು ಮೇಲ್ನೋಟಕ್ಕೆ ನಿಚ್ಚಳವಾಗಿದ್ದರೂ, ಇತ್ತೀಚಿಗೆ ಕಾಂಗ್ರೆಸ್ ಶಾಸಕ ಎನ್‌ ಎ ಹ್ಯಾರಿಸ್ ಅವರ ಪುತ್ರರಾದ ಮೊಹಮ್ಮದ್ ನಲಪಾಡ್ ನಿವಾಸದ ಮೇಲೆ ಇ.ಡಿ ದಾಳಿಗಳು ಹೊಸದೊಂದು ಅನುಮಾನ ಹುಟ್ಟುಹಾಕಿವೆ. ಬಿಜೆಪಿಯ ಭ್ರಷ್ಟಾಚಾರದಲ್ಲಿ, ಅಂದು ವಿಪಕ್ಷದಲ್ಲಿದ್ದ ಕಾಂಗ್ರೆಸ್ ನಾಯಕರು ತೆರೆಮರೆಯ ಪಾಲುದಾರರಾಗಿದ್ದರೇ ಎಂಬ ಗಂಭೀರ ಪ್ರಶ್ನೆ ಇದೀಗ ಎದುರಾಗಿದೆ.  

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೆ ಕಾರಣವೇನು? ಈ ಕಾಣೆಯಾದ ಮತದಾರರೆಲ್ಲ ಯಾರು? ಅವರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದು ಹೇಗೆ?...

ಬಿಟ್‌ಕಾಯಿನ್ ಎಂದರೇನು?

ಬಿಟ್‌ಕಾಯಿನ್ ಎಂಬುದು ಯಾವುದೇ ದೇಶದ ಸರ್ಕಾರ ಅಥವಾ ಕೇಂದ್ರೀಯ ಬ್ಯಾಂಕ್‌ಗಳ ನಿಯಂತ್ರಣವಿಲ್ಲದ, ಕೇವಲ ಅಂತರ್ಜಾಲದಲ್ಲಿ ಮಾತ್ರವೇ ಚಲಾವಣೆಯಲ್ಲಿರುವ ‘ಕ್ರಿಪ್ಟೋಕರೆನ್ಸಿ’. ಬ್ಲ್ಯಾಕ್‌ಚೈನ್‌ ತಂತ್ರಜ್ಞಾನದ (ಎಲ್ಲರೂ ನೋಡಬಹುದಾದ, ಯಾರೂ ಒಬ್ಬರೂ ಬದಲಾಯಿಸಲು ಸಾಧ್ಯವಿಲ್ಲದ ಸುರಕ್ಷಿತ ಡಿಜಿಟಲ್‌ ಖಾತೆ) ಮೂಲಕ ನಡೆಯುವ ಈ ವಹಿವಾಟು ಅತ್ಯಂತ ಗುಪ್ತವಾಗಿರುತ್ತದೆ. ಯಾರು, ಯಾರಿಗೆ, ಎಲ್ಲಿಂದ ಹಣ ರವಾನಿಸಿದರು ಎಂಬುದನ್ನು ಪತ್ತೆಹಚ್ಚುವುದು ಅಸಾಧ್ಯ. ಇದೇ ಕಾರಣಕ್ಕಾಗಿ ಭ್ರಷ್ಟ ರಾಜಕಾರಣಿಗಳು ತಮ್ಮ ಅಕ್ರಮ ಸಂಪತ್ತನ್ನು ವಿದೇಶದಲ್ಲಿ ಗುಪ್ತವಾಗಿ ಹೂಡಿಕೆ ಮಾಡಲು ಈ ಡಿಜಿಟಲ್ ಮಾರ್ಗವನ್ನು ಬಳಸಿಕೊಳ್ಳುತ್ತಾರೆ.

Bitcoin 1

ಈ ಬೃಹತ್ ಕಳ್ಳಾಟದ ಮೊದಲ ಸುಳಿವು ಸಿಕ್ಕಿದ್ದು 2019ರ ಜುಲೈನಲ್ಲಿ ರಾಜ್ಯ ಸರ್ಕಾರದ ಇ-ಪ್ರೊಕ್ಯೂರ್‌ಮೆಂಟ್ (ಇ-ಸಂಗ್ರಹಣೆ) ಪೋರ್ಟಲ್‌ ಹ್ಯಾಕ್‌ ಆದಾಗ. ಆರ್ಥಿಕ ಸಲಹೆಗಾರ್ತಿ ಎಸ್‌ ಕೆ ಶೈಲಜಾ ಎಂಬುವವರು ಇಎಂಡಿ ಮರುಪಾವತಿಯನ್ನು ಪರಿಶೀಲಿಸುವಾಗ 7.37 ಕೋಟಿ ರೂ.ಗಳ ಅನಧಿಕೃತ ವರ್ಗಾವಣೆ ಪತ್ತೆಯಾಗಿತ್ತು. ಈ ಬಗ್ಗೆ ಸಿಐಡಿಗೆ ದೂರು ನೀಡಲಾಗಿತ್ತು. ತನಿಖೆ ಮುಂದುವರಿದಾಗ, ಉತ್ತರ ಪ್ರದೇಶದ ಖಾತೆಗೆ 1.05 ಕೋಟಿ ರೂ. ಸೇರಿದಂತೆ, ಬರೋಬ್ಬರಿ 11.55 ಕೋಟಿ ರೂ.ಗಳನ್ನು ಕರ್ನಾಟಕ ಸರ್ಕಾರದ ಖಾತೆಯಿಂದ ಅಕ್ರಮವಾಗಿ ವರ್ಗಾಯಿಸಿ ಲೂಟಿ ಮಾಡಿರುವ ಆಘಾತಕಾರಿ ಸತ್ಯ ಬಯಲಾಗಿತ್ತು.

ಸರ್ಕಾರಿ ಜಾಲತಾಣವನ್ನೇ ಹ್ಯಾಕ್ ಮಾಡಿದ ಆ ‘ಅಗೋಚರ ಕಳ್ಳ’ ಯಾರು ಎಂಬುದು ನಿಗೂಢವಾಗಿಯೇ ಇತ್ತು. ಆದರೆ 2020ರ ನವೆಂಬರ್‌ನಲ್ಲಿ ಡ್ರಗ್ಸ್‌ ಪ್ರಕರಣವೊಂದರಲ್ಲಿ ಸಿಸಿಬಿ ಪೊಲೀಸರ ಬಲೆಗೆ ಬಿದ್ದಾಗಲೇ ಅಸಲಿ ಕಥೆ ಹೊರಬಂದಿದ್ದು. ಡಾರ್ಕ್‌ನೆಟ್ ಮೂಲಕ ಬಿಟ್‌ಕಾಯಿನ್‌ ಬಳಸಿ ಡ್ರಗ್ಸ್‌ ತರಿಸಿಕೊಂಡು ಹೈ-ಪ್ರೊಫೈಲ್ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿದಾಗ, 25 ವರ್ಷದ ಯುವ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ‘ಶ್ರೀಕಿ’ ಸಿಕ್ಕಿಬಿದ್ದಿದ್ದ. ಈತನ ವಿಚಾರಣೆ ನಡೆಸಿದಾಗಲೇ 2019ರ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಹ್ಯಾಕ್ ಮಾಡಿದ್ದರ ಹಿಂದಿನ ರೂವಾರಿ ಈತನೇ ಎಂಬುದು ಸಾಬೀತಾಯಿತು. ಇಲ್ಲಿಂದಲೇ ಬಿಜೆಪಿ ಸರ್ಕಾರದ ಪಾಲಿಗೆ ನುಂಗಲಾರದ ಬಿಸಿತುಪ್ಪವಾಗಿ ಈ ಹಗರಣ ಬದಲಾಯಿತು.

ಯಾರು ಈ ಶ್ರೀಕೃಷ್ಣ ಅಲಿಯಾಸ್ ‘ಶ್ರೀಕಿ’

ಈತ ಕೇವಲ ಡ್ರಗ್ ಪೆಡ್ಲರ್ ಮಾತ್ರವಲ್ಲ, ರ್ಯಾನ್ಸಮ್‌ವೇರ್ ದಾಳಿ, ಬಿಟ್‌ಕಾಯಿನ್ ಎಕ್ಸ್‌ಚೇಂಜ್‌ಗಳ ಹ್ಯಾಕಿಂಗ್, ಅಕ್ರಮ ಹಣ ವರ್ಗಾವಣೆ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದ ಸೈಬರ್‌ ಅಪರಾಧಗಳಲ್ಲಿ ಪಳಗಿದ್ದ ಕತರ್ನಾಕ್‌ ಹ್ಯಾಕರ್. 2015ರಲ್ಲೇ ಬ್ಯಾಂಕ್‌ ಖಾತೆ ಹ್ಯಾಕಿಂಗ್‌ ಪ್ರಕರಣದಲ್ಲಿ ಮೊದಲ ಬಾರಿಗೆ ಈತ ಪೊಲೀಸರ ಅತಿಥಿಯಾಗಿದ್ದ. ಆದರೆ, ಆತನಿಗೆ ಅತಿ ವೇಗವಾಗಿ ಜಾಮೀನು ಸಿಕ್ಕಿದ್ದಲ್ಲದೆ, ಆತನ ಚಟುವಟಿಕೆಗಳ ಮೇಲೆ ಪೊಲೀಸರ ನಿಗಾ ಇಡದ ಕಾರಣ ಆತ ಮತ್ತಷ್ಟು ನಿರಾತಂಕವಾಗಿ ದೊಡ್ಡ ಮಟ್ಟದ ಅಪರಾಧಿಗಳನ್ನು ಎಸಗಲು ಕಾರಣವಾಯಿತು.

hacker sriki
ಹ್ಯಾಕರ್‌ ಶ್ರೀಕಿ

ಈತನ ಹಿನ್ನೆಲೆ ಕೆದಕಿದಾಗ, 2018ರ ಫೆಬ್ರವರಿಯಲ್ಲಿ ಶಾಂತಿನಗರದ ಕಾಂಗ್ರೆಸ್ ಶಾಸಕ ಎನ್‌ ಎ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಶಾಮೀಲಾಗಿದ್ದ ಪಬ್‌ ಗಲಾಟೆ ಪ್ರಕರಣದಲ್ಲೂ ಈತನ ಹೆಸರು ತಳುಕುಹಾಕಿಕೊಂಡಿತ್ತು. ನಲಪಾಡ್ ಸಹಚರನಾಗಿದ್ದ ಶ್ರೀಕಿಯ ಮೇಲೆ ಕೊಲೆ ಯತ್ನದ ಆರೋಪವಿತ್ತು. ಆದರೆ ಮೊಬೈಲ್‌ ಫೋನ್ ಬಳಸದ ಈತ, ನಿರೀಕ್ಷಣಾ ಈತ, ನಿರೀಕ್ಷಣಾ ಜಾಮೀನು ಸಿಗುವವರೆಗೂ ಪೊಲೀಸರ ಕಣ್ಣಿಗೆ ಮಣ್ಣೆರಚಿ ತಲೆಮರೆಸಿಕೊಂಡಿದ್ದ.

ಶ್ರೀಕಿಯ ವ್ಯಕ್ತಿತ್ವವೇ ಅತ್ಯಂತ ವಿಚಿತ್ರ ಮತ್ತು ಅಪಾಯಕಾರಿ. ಆತ ತನ್ನ ಕುಟುಂಬದಿಂದ ಸಂಪೂರ್ಣ ದೂರವಿದ್ದು, ಕೇವಲ ಹಣ ಮಾಡುವುದು ಮತ್ತು ಡ್ರಗ್ಸ್ ಸೇವಿಸುವುದರಲ್ಲೇ ಮಗ್ನನಾಗಿದ್ದ. ಯಾವುದೇ ಆಪ್ತ ಸಂಬಂಧಗಳಿಲ್ಲದ ಈತನ ಸೈಬರ್ ಪರಿಣತಿಯನ್ನು ಪ್ರಭಾವಿ ರಾಜಕಾರಣಿಗಳು ಮತ್ತು ಕುಳಗಳು ತಮ್ಮ ಅಕ್ರಮಗಳಿಗಾಗಿ ಬಾಡಿಗೆಗೆ ಬಳಸಿಕೊಳ್ಳುತ್ತಿದ್ದರು. ಆದರೆ, ಆ ಪ್ರಭಾವಿಗಳಿಗೆ ದುರದೃಷ್ಟವಶಾತ್, ಶ್ರೀಕಿ ತಾನು ಯಾರ ಜೊತೆ ವ್ಯವಹಾರ ಮಾಡಿದ್ದೇನೆ ಎಂಬುದರ ಪ್ರತಿಯೊಂದು ಡಿಜಿಟಲ್ ಹೆಜ್ಜೆಗುರುತುಗಳನ್ನು ಅತ್ಯಂತ ಸೂಕ್ಷ್ಮವಾಗಿ ಕಾಯ್ದಿಟ್ಟುಕೊಂಡಿದ್ದ. “ಒಂದು ವೇಳೆ ಆತ ಸಿಕ್ಕಿಬಿದ್ದರೆ, ತನ್ನ ಜೊತೆ ಎಲ್ಲರನ್ನು ಜೈಲಿಗೆ ಎಳೆಯುತ್ತಾನೆ” ಎಂಬ ಭೀತಿ ಪ್ರಭಾವಿಗಳ ನಿದ್ದೆಗೆಡಿಸಿತ್ತು.  

ಈ ಬಹುಕೋಟಿ ಹಗರಣಕ್ಕೆ 2021ರ ಮಾರ್ಚ್‌ನಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಎಂಟ್ರಿ ಕೊಟ್ಟಿತು. ಆಗಸ್ಟ್‌ನಲ್ಲಿ ಪತ್ರಿಕಾ ಪ್ರಕಟಣೆ ನೀಡಿದ ಇ.ಡಿ, ಸರ್ಕಾರಿ ಖಾತೆಯಿಂದ ಲೂಟಿಯಾಗಿದ್ದ ಹಣದಲ್ಲಿ 1.44 ಕೋಟಿ ರೂ.ಗಳನ್ನು 14 ಬ್ಯಾಂಕ್ ಖಾತೆಗಳಿಂದ ಜಪ್ತಿ ಮಾಡಿದ್ದಾಗಿ ತಿಳಿಸಿತು. ಮಹಾರಾಷ್ಟ್ರದ ನಾಗ್ಪುರದ ಉದಯ್ ಗ್ರಾಮ ವಿಕಾಸ್ ಸಂಸ್ಥೆ ಮತ್ತು  ಉತ್ತರ ಪ್ರದೇಶದ ನಿಮ್ಮಿ ಎಂಟರ್‌ಪ್ರೈಸಸ್ ಖಾತೆಗಳಿಗೆ ಅಕ್ರಮವಾಗಿ ಹಣ ವರ್ಗಾವಣೆಯಾಗಿದ್ದನ್ನು ಪತ್ತೆಹಚ್ಚಿತು. ಇದೇ ವೇಳೆ, ವಿಚಾರಣೆ ವೇಳೆ ಶ್ರೀಕಿಯಿಂದ 9 ಕೋಟಿ ರೂ. ಮೌಲ್ಯದ 31 ಬಿಟ್‌ಕಾಯಿನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದ ಸಿಸಿಬಿ ಪೊಲೀಸರು, ನಂತರ ಆ ಹೇಳಿಕೆಯನ್ನೇ ಹಿಂಪಡೆದು ಇಡೀ ತನಿಖೆಯ ವಿಶ್ವಾಸಾರ್ಹತೆಯನ್ನೇ ಮಣ್ಣುಪಾಲು ಮಾಡಿದ್ದರು.

ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ 2020ರಲ್ಲಿ ಶ್ರೀಕಿಗೆ ಸಿಂಗಾಪುರದ ಬಿಟ್‌ಕಾಯಿನ್ ರೆಪೊಸಿಟರಿ ಸಂಪರ್ಕಿಸಲು ಅವಕಾಶ ನೀಡಲಾಗಿತ್ತು ಎಂಬ ಗಂಭೀರ ಆರೋಪಗಳು ಬಿಜೆಪಿ ಸರ್ಕಾರದ ಆಡಳಿತ ಯಂತ್ರದ ಮೇಲಿದ್ದ ಅನುಮಾನವನ್ನು ಮತ್ತಷ್ಟು ಬಲಪಡಿಸಿದವು. ಇದೇ ವಿಚಾರವಾಗಿ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ನಾಯಕರು, “ಸುಮಾರು 10,000 ಕೋಟಿ ರೂ.ಗಳ ಬಿಟ್‌ಕಾಯಿನ್ ವಹಿವಾಟು ನಡೆದಿದೆ. ಪ್ರಧಾನಿ ಕಾರ್ಯಾಲಯವೂ ವರದಿ ಕೇಳಿದೆ” ಎಂದು ನೇರ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಅಂದಿನ ಸಿಎಂ ಬೊಮ್ಮಾಯಿ, ತಾವು ಡ್ರಗ್ಸ್ ವಿರುದ್ಧ ಸಾರಿದ ಸಮರವನ್ನು ಸಹಿಸದೆ ಈ ಆಧಾರರಹಿತ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಸಮರ್ಥಿಸಿಕೊಂಡಿದ್ದರು.

ಇದನ್ನು ಓದಿದ್ದೀರಾ? ಉದ್ಯೋಗದ ಹಕ್ಕು ಕಸಿದುಕೊಳ್ಳದಿರಿ; ಬೈಕ್ ಟ್ಯಾಕ್ಸಿ ಚಾಲಕರಿಗೆ ಬೇಕಿದೆ ಸರ್ಕಾರದ ಆಸರೆ

ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಬಿಟ್‌ಕಾಯಿನ್‌ಗಳು ಬಿಜೆಪಿ ಸರ್ಕಾರದ ಮೂಗಿನ ನೇರಕ್ಕೇ ನಿಗೂಢವಾಗಿ ಕಣ್ಮರೆಯಾಗಿದ್ದವು. ಪ್ರಭಾವಿಗಳನ್ನು ರಕ್ಷಿಸುವ ಉದ್ದೇಶದಿಂದ ಪೊಲೀಸ್ ಅಧಿಕಾರಿಗಳೇ ಡಿಜಿಟಲ್ ಸಾಕ್ಷ್ಯಗಳನ್ನು ನಾಶಪಡಿಸಿದರು, ಹ್ಯಾಕರ್ ಬಳಸಿದ್ದ ಲ್ಯಾಪ್‌ಟಾಪ್‌ಗಳನ್ನು ಉದ್ದೇಶಪೂರ್ವಕವಾಗಿ ಬದಲಾಯಿಸಲಾಯಿತು ಎಂಬ ಆರೋಪಗಳಿವೆ. ಈ ಎಲ್ಲಾ ಬೆಳವಣಿಗೆಗಳು, ತಂತ್ರಜ್ಞಾನವನ್ನು ಬಳಸಿಕೊಂಡು ಮಾಡಿದ ಈ ಬೃಹತ್ ಲೂಟಿಗೆ ಮೂಲ ಕಾರಣ ಮತ್ತು ಹೊಣೆಗಾರರು ಬಿಜೆಪಿ ನಾಯಕರು ಮತ್ತು ಅವರ ಆಡಳಿತಾವಧಿಯ ವೈಫಲ್ಯಗಳೇ ಎಂಬುದನ್ನು ಸ್ಪಷ್ಟಪಡಿಸುತ್ತವೆ.

ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ಬಳಿಕ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಬಿಜೆಪಿ ನಾಯಕರ ಈ ಕರಾಳ ಹಗರಣವನ್ನು ಬಯಲಿಗೆಳೆಯಲು ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಿತು. ಆದರೆ, ಬಿಜೆಪಿ ಅವಧಿಯಲ್ಲಿ ವ್ಯವಸ್ಥಿತವಾಗಿ ನಡೆದಿದ್ದ ಸಾಕ್ಷ್ಯನಾಶದಿಂದಾಗಿ, ಕಳೆದ ಎರಡು ವರ್ಷಗಳ ಕಾರ್ಯಾಚರಣೆಯ ಹೊರತಾಗಿಯೂ ಎಸ್ಐಟಿಯು ಕೇವಲ 9.19 mBTC (ಅಂದಾಜು 64 ಲಕ್ಷ ರೂ.) ವಶಪಡಿಸಿಕೊಳ್ಳಲಷ್ಟೇ ಶಕ್ತವಾಯಿತು. ಮೂಲ ಡಿಜಿಟಲ್ ಸಾಕ್ಷ್ಯಾಧಾರಗಳನ್ನೇ ನಾಶಪಡಿಸಿರುವುದರಿಂದ, ಇಂದು ತನಿಖಾ ಸಂಸ್ಥೆಗಳಿಗೆ ನಿಖರವಾದ ಸಾಕ್ಷ್ಯಗಳನ್ನು ಕಲೆಹಾಕುವುದು ಅತ್ಯಂತ ದೊಡ್ಡ ಸವಾಲಾಗಿದೆ.

ನಲಪಾಡ್
ಮೊಹಮ್ಮದ್‌ ನಲಪಾಡ್‌

ಆದರೆ, ಈ ಹಗರಣ ಸಂಪೂರ್ಣವಾಗಿ ಬಿಜೆಪಿ ಸೃಷ್ಟಿಸಿದ ಪಾಪದ ಕೂಸಾಗಿದ್ದರೂ, ಇತ್ತೀಚಿನ ಬೆಳವಣಿಗೆಗಳು ಪ್ರಕರಣಕ್ಕೆ ಹೊಸ ತಿರುವು ನೀಡಿವೆ. ಅಂದು ಬಿಜೆಪಿಯ ಭ್ರಷ್ಟಾಚಾರದ ವಿರುದ್ಧ ಗುಡುಗಿದ್ದ ಕಾಂಗ್ರೆಸ್ ನಾಯಕರೂ ಕೂಡ ಒಳಗೊಳಗೆ ಇದೇ ಹಗರಣದ ಲಾಭ ಪಡೆದಿದ್ದರೇ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಪುಷ್ಟಿ ನೀಡುವಂತೆ ಶಾಂತಿನಗರದ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಮತ್ತು ಅವರ ಪುತ್ರ ಮೊಹಮ್ಮದ್ ನಲಪಾಡ್ (2018ರ ಪ್ರಕರಣದಲ್ಲಿ ಶ್ರೀಕಿಯೊಡನೆ ಸಂಪರ್ಕ ಹೊಂದಿದ್ದ ಕಾರಣ) ಅವರ ನಿವಾಸಗಳ ಮೇಲೆ ಇ.ಡಿ ದಿಢೀರ್ ದಾಳಿ ನಡೆಸಿದೆ. ದಾಳಿಯ ನಂತರ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಎಸ್‌ಐಟಿ ತನಿಖೆಯ ಮಧ್ಯಂತರ ವರದಿ ನೀಡುವುದಾಗಿ ಕೂಡ ತಿಳಿಸಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ಬಹುಕೋಟಿ ‘ಬಿಟ್‌ಕಾಯಿನ್ ಹಗರಣ’ ಕೇವಲ ಒಂದು ಆರ್ಥಿಕ ಅಪರಾಧವಾಗಿ ಉಳಿದಿಲ್ಲ; ಅದೊಂದು ರಾಜಕೀಯ ಚದುರಂಗದಾಟದ ಕರಾಳ ಅಸ್ತ್ರವಾಗಿದೆ. ಅಧಿಕಾರದಲ್ಲಿದ್ದಾಗ ತನಿಖೆ ಮುಚ್ಚಿಹಾಕುವುದು, ವಿಪಕ್ಷದಲ್ಲಿದ್ದಾಗ ಬೊಬ್ಬೆ ಹೊಡೆಯುವುದು ನಮ್ಮ ರಾಜಕೀಯ ವ್ಯವಸ್ಥೆಯ ಅಣಕ. ಕೇವಲ 25 ವರ್ಷದ ಯುವ ಹ್ಯಾಕರ್‌ನ ಸುತ್ತ ಗಿರಕಿ ಹೊಡೆಯುತ್ತಿರುವ ಈ ಸಾವಿರಾರು ಕೋಟಿ ರೂಪಾಯಿಗಳ ಡಿಜಿಟಲ್ ಕೊಳ್ಳೆಯಲ್ಲಿ ಅಂದು ಬಿಜೆಪಿಯ ಉನ್ನತ ನಾಯಕರು ಶಾಮೀಲಾಗಿದ್ದರೆ, ಇಂದು ಅದೇ ಭ್ರಷ್ಟಾಚಾರದ ಉರುಳು ಕಾಂಗ್ರೆಸ್ ನಾಯಕರ ಕೊರಳಿಗೆ ಸುತ್ತಿಕೊಳ್ಳುತ್ತಿದೆ.ಈ ಬೆಳವಣಿಗೆಗಳನ್ನು ಗಮನಿಸಿದರೆ ಬಿಟ್‌ಕಾಯಿನ್ ಹಗರಣದಲ್ಲಿ ಎಲ್ಲ ಪಕ್ಷಗಳು ಪಾಲುದಾರರು ಎಂಬ ಸಂಶಯ ಮೂಡುವುದಂತೂ ನಿಜ.

blank profile picture 973460 640
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ನಕಲಿ ವೈದ್ಯರಿಗೆ ಔಷಧ ಪೂರೈಕೆ : 7 ಮೆಡಿಕಲ್‌ಗಳ ಪರವಾನಗಿ ಅಮಾನತು

ನಕಲಿ ವೈದ್ಯರಿಗೆ ಔಷಧಗಳನ್ನು ಸರಬರಾಜು ಮಾಡಿದ ಆರೋಪದ ಹಿನ್ನೆಲೆ ಜಿಲ್ಲೆಯ ಏಳು...

ʼತ್ರಿವರ್ಣ ಧ್ವಜ ಹಾರಿಸಲು ಅನುಮತಿ ಬೇಕಿಲ್ಲʼ; ಪೊಲೀಸ್ ನೋಟಿಸ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ನೇಹಾ ಬೋರಾ

ರಾಷ್ಟ್ರಧ್ವಜ ಹಾರಿಸಲು ಯಾರ ಅನುಮತಿಯೂ ಅಗತ್ಯವಿಲ್ಲ ಎಂದು ವಾದಿಸಿರುವ ಎಐಎಸ್‌ಎ (AISA)...

ಬೀದರ್‌ | ಕನಿಷ್ಠ ವೇತನ ಪಾವತಿಗೆ ಅರಣ್ಯ ಇಲಾಖೆ ದಿನಗೂಲಿ ನೌಕರರ ಮನವಿ

ಔರಾದ ತಾಲ್ಲೂಕಿನ ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೀಕ್ಷಕರು ಹಾಗೂ ದಿನಗೂಲಿ...

ಬೀದರ್‌ | ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಿಸೋಣ : ಡಿಸಿ ಶಿಲ್ಪಾ ಶರ್ಮಾ

ಬೀದರ್ ಜಿಲ್ಲೆಯಲ್ಲಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ಆಕರ್ಷಕವಾಗಿ...