ಜಾತಿ ಆಧಾರಿತ ಸಮೀಕ್ಷಾ ವರದಿಗೆ ವಿರೋಧ ಯಾಕೆ?

Date:

Advertisements
ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ತನ್ನ ಸಮೀಕ್ಶಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿಲ್ಲ. ಅದನ್ನು ಸಾರ್ವಜನಿಕ ಚರ್ಚೆಗೆ ತೆರೆದಿಟ್ಟಿಲ್ಲ. ವರದಿಯ ಮಾಹಿತಿಗಳು, ಅಂಕಿಸಂಖ್ಯೆಗಳು ಆಯೋಗಕ್ಕೆ ಬಿಟ್ಟರೆ ಉಳಿದವರಿಗೆ ತಿಳಿದಿಲ್ಲ. ಹೀಗಿದ್ದರೂ ವರದಿ ಸ್ವೀಕಾರಕ್ಕೆ ವಿರೋಧ ಯಾಕೆ? ಎಂಬ ಪ್ರಶ್ನೆ ಹುಟ್ಟುತ್ತದೆ. ಮೇಲೆ ಹೇಳಿದಂತೆ ಸಮೀಕ್ಶಾ ವರದಿಯ ‘ಸೋರಿಕೆ’ಯಾದ ಕೆಲವು ಅಂಶಗಳು ಬಲಿಶ್ಟ ಸಮುದಾಯಗಳಲ್ಲಿ ನಡುಕ ಹುಟ್ಟಿಸಿದಂತೆ ಕಾಣುತ್ತಿದೆ.

 

ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ನೇತೃತ್ವದಲ್ಲಿ 2013ರಿಂದ 2018ರ ನಡುವೆ ಆಡಳಿತ ನಡೆಸಿದ ಅಂದಿನ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿರುವ ಜನಗಳ ಜಾತಿ ಆಧಾರಿತ ಶೈಕ್ಶಣಿಕ ಆರ್ಥಿಕ ಸಮೀಕ್ಶೆಯನ್ನು ನಡೆಸಿತು. ಅದು ಇಂದು ‘ಜಾತಿ ಗಣತಿ’ ವರದಿ ಎಂದು ಪ್ರಸಿದ್ದವಾಗಿದೆ. ಈ ಸಮೀಕ್ಶೆಯ ಮೂಲಕ ಜನರ ಸಾಮಾಜಿಕ, ಶೈಕ್ಶಣಿಕ, ಆರ್ಥಿಕ ಮತ್ತು ರಾಜಕೀಯ ಸ್ಥಿತಿಗತಿಗಳನ್ನು ಅರಿಯಲು ಅಂದಿನ ಸರ್ಕಾರ ಯತ್ನಿಸಿತ್ತು. ಈ ಸಮೀಕ್ಶೆಗೆ ಸರ್ಕಾರ 162 ಕೋಟಿಗಳಶ್ಟು ಹಣವನ್ನು ವ್ಯಯ ಮಾಡಿರುವುದು ವರದಿಯಾಗಿದೆ. ಆದರೆ ಅಂದಿನ ಸರ್ಕಾರದ ಅವಧಿ ಮುಗಿವ ಹೊತ್ತಿಗೆ ಸಮೀಕ್ಶಾ ವರದಿಯನ್ನು ಆಯೋಗ ಸರ್ಕಾರಕ್ಕೆ ಸಲ್ಲಿಸಿರಲಿಲ್ಲ ಇಲ್ಲವೇ ಅಂದಿನ ಸರ್ಕಾರ ಅದನ್ನು ಸ್ವೀಕರಿಸಿರಲಿಲ್ಲ. ನಂತರ 2018ರಲ್ಲಿ ಕಾಂಗ್ರೆಸ್ ಸರ್ಕಾರವು ಚುನಾವಣೆಯಲ್ಲಿ ಸೋತು ತನ್ನ ಅಧಿಕಾರವನ್ನು ಕಳೆದುಕೊಂಡಿತು. ಆ ನಂತರ ಕಾಂಗ್ರೆಸ್ ಮತ್ತು ಜನತಾ ದಳ ಪಕ್ಶಗಳ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂತು. ಸಮ್ಮಿಶ್ರ ಸರ್ಕಾರ ಬಿದ್ದು ಹೋಗಿ ಬಿಜೆಪಿ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿಯಿತು. ಸಮ್ಮಿಶ್ರ ಸರ್ಕಾರ ಮತ್ತು ಬಿಜೆಪಿ ಸರ್ಕಾರದ ಅವಧಿಯಲ್ಲಿ ‘ಜಾತಿಗಣತಿ’ ಇಲ್ಲವೇ ‘ಸಾಮಾಜಿಕ ಶೈಕ್ಶಣಿಕ ವರದಿ’ಯನ್ನು ಸ್ವೀಕರಿಸಲು ಮುಂದಾಗಲಿಲ್ಲ. ಆದರೆ ಈ ನಡುವೆ ವರದಿಯ ಕೆಲವು ಮುಖ್ಯಾಂಶಗಳು ‘ಸೋರಿಕೆ’ಯಾಗಿ ಅವು ಮಾಧ್ಯಮಗಳಲ್ಲಿ ಹರಿದಾಡಿ ದೊಡ್ಡ ಸಂಚಲನವನ್ನೇ ಮೂಡಿಸಿತ್ತು. ಅದೇ ಸೋರಿಕೆಯ ಸಂಗತಿಗಳು ಇಂದಿಗೂ ಚರ್ಚೆಯಲ್ಲಿವೆ. ಆ ಸೋರಿಕೆಯ ಅಂಶಗಳೇ ಸದ್ಯ ಬಲಿಶ್ಟ ಜಾತಿಗಳನ್ನು ಆತಂಕಕ್ಕೆ ದೂಡಿರುವುದು ನಿಚ್ಚಳವಾಗಿ ಕಾಣಿಸುತ್ತಿದೆ.

ಈಗ ಮತ್ತೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಹಿಂದಿನ ಸರ್ಕಾರದಲ್ಲಿ ಮುಖ್ಯಮುಂತ್ರಿಗಳಾಗಿ ಜಾತಿಗಳ ಸಮೀಕ್ಶೆಗೆ ಆದೇಶಿಸಿದ್ದ ಸಿದ್ದರಾಮಯ್ಯನವರೇ ಈಗಲೂ ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸುತ್ತಿದ್ದಾರೆ. ಹಾಗಾಗಿ ತಾವೇ ಆದೇಶಿಸಿ ನಡೆಸಿದ್ದ ಸಮೀಕ್ಶಾ ವರದಿಯನ್ನು ಸ್ವೀಕರಿಸಲು ಸಿದ್ದವಿರುವುದಾಗಿ ಹೇಳಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಅವರು ಮಾಧ್ಯಮಗಳ ಮೂಲಕ ಕೇವಲ ಭರವಸೆ ನೀಡುವ ಬದಲಿಗೆ, ತಮ್ಮ ಈಗಿನ ಆಡಳಿತದ ಅವಧಿಯಲ್ಲಾದರೂ ಆ ವರದಿಯನ್ನು ಸ್ವೀಕರಿಸಬೇಕು. ವಿಧಾನ ಸಭೆಯ ಅಧಿವೇಶನದಲ್ಲಿ ಮಂಡಿಸಬೇಕು. ಅದನ್ನು ರಾಜ್ಯದ ಜನತೆಯ ಮುಂದಿಡಬೇಕು. ಅಂತಹ ದಿಟ್ಟ ನಡೆಯನ್ನು ಅವರು ಇಂದು ನಡೆಯಲೇಬೇಕಿದೆ. ಅದಿಲ್ಲದೇ ಹೋದರೆ ಅವರೂ ತಮ್ಮ ರಾಜಕೀಯ ಲೆಕ್ಕಾಚಾರಕ್ಕೆ ಮಣಿದು ಬಲಿಶ್ಟ ಜಾತಿಗಳೆದರು ಮಂಡಿಯೂರಿದಂತಾಗುತ್ತದೆ. ಯಾಕೆಂದರೆ ಈ ವರದಿಯನ್ನು ಸ್ವೀಕರಿಸುವ ಪ್ರಯತ್ನಕ್ಕೆ ರಾಜ್ಯದ ಬಲಿಶ್ಟ ಸಮುದಾಯಗಳಾದ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳು ಸಂಘಟಿತವಾಗಿ ವಿರೋಧ ವ್ಯಕ್ತಪಡಿಸುತ್ತಿವೆ. ವರದಿ ಸ್ವೀಕರಿಸದಂತೆ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರುತ್ತಿವೆ. ವರದಿಯನ್ನು ಒಪ್ಪಿದರೆ ತೀವ್ರ ಹೋರಾಟ ನಡೆಸುವುದಾಗಿಯೂ ಎಚ್ಚರಿಸಿವೆ. ಆಡಳಿತ ಪಕ್ಶದಲ್ಲಿ ಮಂತ್ರಿಗಳಾಗಿರುವವರು ಮತ್ತು ವಿರೋಧ ಪಕ್ಶದ ನಾಯಕರಾದವರು ಕೂಡಿ ವರದಿ ಸ್ವೀಕರಿಸದಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಹಾಗಾಗಿ ಈಗಿನ ಸರ್ಕಾರ ವರದಿಯನ್ನು ಸ್ವೀಕರಿಸುತ್ತದೆಯೋ? ಇಲ್ಲವೇ ಬಲಿಶ್ಟ ಜಾತಿಗಳ ಒತ್ತಡಕ್ಕೆ ಮಣಿಯುತ್ತದೆಯೋ? ಎಂಬುದು ಕುತೂಹಲ ಹುಟ್ಟಿಸಿದೆ.

ಕಾಂತರಾಜ
ನಿವೃತ್ತ ನ್ಯಾಯಮೂರ್ತಿ ಕಾಂತರಾಜ

ಇದಲ್ಲದೆ ಅಧಿಕಾರದಲ್ಲಿದ್ದಾಗ ಸಾರ್ವಜನಿಕ ಹಣವನ್ನು ಬಳಸಿ ತಾವೇ ವಿಶೇಶ ಮುತುವರ್ಜಿ ವಹಿಸಿ ನಡೆಸಿದ ಸಮೀಕ್ಶೆಯನ್ನು ಒಪ್ಪಿಕೊಳ್ಳುವುದಿಲ್ಲವೆಂದರೆ ತಮ್ಮ ಉದ್ದೇಶಗಳ ಬಗೆಗೆ ತಮಗೇ ವಿಶ್ವಾಸವಿಲ್ಲವೆಂಬ ಕೆಟ್ಟ ಸಂದೇಶ ಜನರಿಗೆ ತಲುಪುತ್ತದೆ. ಹಾಗಾಗಿ ಈಗಿನ ಮುಖ್ಯಮಂತ್ರಿ ಯಾವುದೇ ಒತ್ತಡಗಳಿಗೆ ಮಣಿಯದೆ ವರದಿಯನ್ನು ಸ್ವೀಕರಿಸಲೇಬೇಕಿದೆ. ಅದು ಅವರ ಆದ್ಯ ಕರ್ತವ್ಯ. ಅಲ್ಲದೆ ಈ ನಡುವೆ ಹಿಂದುಳಿದ ವರ್ಗಗಳ ಆಯೋಗದ ಹಾಲಿ ಅಧ್ಯಕ್ಶರ ಅವಧಿ ಇದೇ ತಿಂಗಳ 26ಕ್ಕೆ ಮುಗಿಯುವುದರಿಂದ ಅವರು ಜಾತಿ ಗಣತಿ ಇಲ್ಲವೇ ಸಮೀಕ್ಶಾ ವರದಿಯನ್ನು ಸರ್ಕಾರಕ್ಕೆ ಒಪ್ಪಿಸಿ ನಿರ್ಗಮಿಸುತ್ತಾರೋ ಇಲ್ಲವೇ ಅದನ್ನು ಮೂಲೆಗೆ ತಳ್ಳಿ ನಿರ್ಗಮಿಸುತ್ತಾರೋ? ಎಂಬುದನ್ನು ಕಾದು ನೋಡಬೇಕಿದೆ. ಹಾಲಿ ಅಧ್ಯಕ್ಶರ ಅಧಿಕಾರಾವಧಿಯನ್ನು ವಿಸ್ತರಿಸಿ ವರದಿ ಸಲ್ಲಿಸಲು ಅವಕಾಶ ಮಾಡಿಕೊಡುವುದಾಗಿ ಸರ್ಕಾರ ಹೇಳಿರುವುದು ಮಾಧÀ್ಯಮಗಳಲ್ಲಿ ವರದಿಯಾಗಿದೆ. ಅಂದರೆ ಸರ್ಕಾರಕ್ಕೆ ವರದಿ ಸ್ವೀಕರಿಸುವ ಉದ್ದೇಶವಿರುವ ಇಂಗಿತ ಇಲ್ಲಿ ವ್ಯಕ್ತವಾಗುತ್ತದೆ.

Advertisements

ಸದ್ಯದ ಇಲ್ಲಿನ ಪ್ರಶ್ನೆಯೆಂದರೆ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳು ಜಾತಿ ಗಣತಿ ವರದಿಯನ್ನು ಸ್ವೀಕರಿಸುವ ಸರ್ಕಾರದ ಪ್ರಯತ್ನಕ್ಕೆ ಯಾಕೆ ವಿರೋಧ ವ್ಯಕ್ತಪಡಿಸುತ್ತಿವೆ? ಈ ವಿರೋಧ ನ್ಯಾಯೋಚಿತವೇ? ಎಂಬ ಪ್ರಶ್ನೆಗಳು ಇಲ್ಲಿ ಮುಖ್ಯ. ಮೊದಲಿಗೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಸಮೀಕ್ಶಾ ವರದಿಯನ್ನು ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸರ್ಕಾರಕ್ಕೆ ಸಲ್ಲಿಸಿಲ್ಲ. ಅದನ್ನು ಸಾರ್ವಜನಿಕ ಚರ್ಚೆಗೆ ತೆರೆದಿಟ್ಟಿಲ್ಲ. ವರದಿಯ ಮಾಹಿತಿಗಳು, ಅಂಕಿಸಂಖ್ಯೆಗಳು ಆಯೋಗಕ್ಕೆ ಬಿಟ್ಟರೆ ಉಳಿದವರಿಗೆ ತಿಳಿದಿಲ್ಲ. ಹೀಗಿದ್ದರೂ ವರದಿ ಸ್ವೀಕಾರಕ್ಕೆ ವಿರೋಧ ಯಾಕೆ? ಎಂಬ ಪ್ರಶ್ನೆ ಹುಟ್ಟುತ್ತದೆ. ಮೇಲೆ ಹೇಳಿದಂತೆ ಸಮೀಕ್ಶಾ ವರದಿಯ ‘ಸೋರಿಕೆ’ಯಾದ ಕೆಲವು ಅಂಶಗಳು ಬಲಿಶ್ಟ ಸಮುದಾಯಗಳಲ್ಲಿ ನಡುಕ ಹುಟ್ಟಿಸಿದಂತೆ ಕಾಣುತ್ತಿದೆ.

‘ಸೋರಿಕೆ’ಯಾದ ಅಂಶಗಳ ಪ್ರಕಾರ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಪರಿಶಿಶ್ಟ ಜಾತಿಗಳ ಪ್ರಮಾಣ ಶೇ 19.5%, ಪರಿಶಿಶ್ಟ ಪಂಗಡ ಶೇ7%. ಮುಸ್ಲೀಮರು ಶೇ 16%, ಲಿಂಗಾಯತರು ಶೇ. 14%, ಒಕ್ಕಲಿಗರು ಶೇ 11%, ಕುರುಬರು ಶೇ 7%, ಇತರೆ ಅತಿ ಹಿಂದುಳಿದ ವರ್ಗಗಳು ಶೇ. 20% ಮತ್ತು ಉಳಿದದ್ದು ಇತರೆ ಮೇಲ್ಜಾತಿಗಳು ಇರಬಹುದೆಂದು ಹೇಳಲಾಗುತ್ತಿದೆ. ಈ ಅಂಶಗಳನ್ನು ಅನೇಕ ಪತ್ರಿಕೆಗಳು ವರದಿ ಮಾಡಿವೆ. ಈ ಅಂಶಗಳು 2018ರ ಆರಂಭದಲ್ಲಿಯೇ ಹೊರಬಿದ್ದ ಸಂಗತಿಗಳು. ಈ ಅಂಶಗಳನ್ನು ಯಾರು ಸೋರಿಕೆ ಮಾಡಿದರೋ? ಇಲ್ಲವೇ ಸರ್ಕಾರದ ಒಳಗಿನವರೇ ಉದ್ದೇಶಪೂರ್ವಕವಾಗಿ ಸೋರುವಂತೆ ನೋಡಿಕೊಂಡರೋ ತಿಳಿದಿಲ್ಲ. ಅಂತೂ ಹೊರಬಿದ್ದ ಈ ಅಂಕಿಸಂಖ್ಯೆಗಳು ಕಳೆದ ಐದು ವರ್ಶಗಳಿಂದಲೂ ಚರ್ಚೆಯಲ್ಲಿವೆ. ಇವು ನಿಜವೇ ಆಗಿದ್ದರೆ ಜಾತಿ ಸಮೀಕ್ಶಾ ವರದಿಯು ರಾಜ್ಯದ ರಾಜಕೀಯ ಚಿತ್ರಣವನ್ನೇ ಬದಲಿಸಲಿದೆ. ಇದುವರೆಗೂ ತಮ್ಮ ಸಮುದಾಯಗಳೇ ದೊಡ್ಡ ಸಮುದಾಯಗಳೆಂದು ಭಾವಿಸಿ ರಾಜ್ಯ ರಾಜಕಾರಣದಲ್ಲಿ ಸಿಂಹಪಾಲು ಅನುಭವಿಸಿರುವ ಸಮುದಾಯಗಳು ತಮ್ಮ ಪಾಲನ್ನು ಉಳಿದವರಿಗೆ ಬಿಟ್ಟುಕೊಡಲೇ ಬೇಕಾದ ಅನಿವಾರ್ಯತೆ ಸೃಶ್ಟಿಯಾಗುತ್ತದೆ. ಹಾಗಾಗಿ ಇದುವರೆಗೂ ಗಾಳಿಯಲ್ಲಿ ತೇಲುತ್ತಿದ್ದ ಅಂಕಿಅಂಶಗಳು ವರದಿ ಸ್ವೀಕಾರದ ನಂತರ ಅಧಿಕೃತವಾಗಿ ಸರ್ಕಾರಕ್ಕೆ ದೊರೆಯಲಿವೆ. ಅವು ನಾಳೆ ಜನರಿಗೂ ತಲುಪಲೇಬೇಕು. ಈ ಮಾಹಿತಿಗಳನ್ನು ತಿಳಿಯುವುದು ಜನರ ಹಕ್ಕು. ಹಾಗೆ ತಲುಪಿ ಒಂದು ವೇಳೆ ಗಾಳಿಸುದ್ದಿಗಳೇ ನಿಜದ ಸಂಗತಿಗಳಾದರೆ ತಮ್ಮ ಪ್ರಾಬಲ್ಯಕ್ಕೆ ಪೆಟ್ಟು ಬೀಳಬಹುದು ಎಂಬ ಆತಂಕದಿಂದ ವಿರೋಧ ವ್ಯಕ್ತಪಡಿಸುತ್ತಿವೆ.

ಒಂದು ವೇಳೆ ಈಗ ಸಿದ್ದವಾಗಿರುವ ವರದಿ ಅಂಗೀಕೃತವಾಗಿ ಅದರಲ್ಲಿನ ಅಂಕಿಅಂಶಗಳು ನಿಜವಾದರೆ ದೊಡ್ಡ ಪ್ರಮಾಣದಲ್ಲಿರುವ ದಲಿತ ಮತ್ತು ಮುಸ್ಲಿಮ್ ಸಮುದಾಯಗಳು ತಮ್ಮ ಹಕ್ಕನ್ನು ಇನ್ನಶ್ಟು ಗಟ್ಟಿಯಾಗಿ ಮಂಡಿಸಲಿವೆ. ಮುಖ್ಯಮಂತ್ರಿ ಹುದ್ದೆಗೆ ಸದಾ ಹಕ್ಕು ಮಂಡಿಸುವ ಬಲಿಶ್ಟ ಜಾತಿಗಳು ಮುಂದಿನ ದಿನಗಳಲ್ಲಿ ತಮ್ಮ ಅವಕಾಶಗಳನ್ನು ಉಳಿದವರಿಗೂ ಬಿಟ್ಟುಕೊಡಬೇಕಾಗುತ್ತದೆ. ಅಲ್ಲದೆ ಹಿಂದುಳಿದ ವರ್ಗಗಳಲ್ಲಿಯೇ ಅತಿ ಹಿಂದುಳಿದ ವರ್ಗಗಳು ತಮ್ಮ ದನಿಯನ್ನು ಮತ್ತಶ್ಟು ಜೋರಾಗಿ ಎತ್ತಬಹುದು. ಇದು ಬಲಿಶ್ಟರ ಪಟ್ಟಭದ್ರತೆಗೆ ಕಾಯಂ ಅಡ್ಡಿಯಾಗಲಿದೆ. ಅವರ ‘ಬಲಿಶ್ಟತನ’ ಪ್ರಶ್ನೆಗೆ ಒಳಪಡಲಿದೆ. ‘ಸಿಂಹಪಾಲು’ ಅಧಿಕಾರ ಕೈತಪ್ಪಲಿದೆ. ಇಲ್ಲಿಯವರೆಗೂ ಸಾಧಿಸಿಕೊಂಡು ಬಂದಿರುವ ರಾಜಕೀಯ ಯಜಮಾನಿಕೆಯನ್ನು ಬಿಟ್ಟುಕೊಡಬೇಕಾಗುತ್ತದೆ. ಸಂಖ್ಯೆಯಲ್ಲಿ ದೊಡ್ಡದಾಗಿರುವ ಸಮುದಾಯಗಳು ಸದಾ ಗುಟುರು ಹಾಕುವುದನ್ನು ಸಾಮಾಜಿಕವಾಗಿ ಬಲಿತವರು ಸಹನೆಯಿಂದ ಕೇಳಿಸಿಕೊಳ್ಳಬೇಕಾಗುತ್ತದೆ. ಇದನ್ನು ಒಪ್ಪಿಕೊಳ್ಳುವುದು ಸಹಿಸಿಕೊಳ್ಳುವುದು ಕಶ್ಟ. ಇದಕ್ಕೆ ಸಿದ್ದವಿಲ್ಲದ ಜಾತಿಗಳು ಜಾತಿ ಗಣತಿಯ ವರದಿಯಲ್ಲಿ ದೋಶಗಳಿವೆ ಎಂದು ಕಲ್ಪಿಸಿಕೊಂಡು ವರದಿ ಸರ್ಕಾರಕ್ಕೆ ಸಲ್ಲಿಕೆಯಾಗುವ ಮೊದಲೇ ವಿರೋಧಿಸುತ್ತಿವೆ. ಅಂದರೆ ಬಲಿಶ್ಟರಿಗೆ ಇದುವರೆಗೂ ಸುಭದ್ರ ನೆಲೆಯಾಗಿದ್ದ ಆಯಕಟ್ಟಿನ ಅಧಿಕಾರ ಕೇಂದ್ರಗಳು ಇನ್ನು ಮುಂದೆ ಅಶ್ಟು ಸುಲಭವಾಗಿ ಅವರ ಕೈವಶವಾಗಲಾರವು. ಹಾಗಾಗಿ ಇದುವರೆಗೂ ಹೆಚ್ಚಿನ ಅಧಿಕಾರದ ರುಚಿ ಸವಿದಿರುವ ಸಮುದಾಯಗಳು ವಿರೋಧ ವ್ಯಕ್ತ ಮಾಡುತ್ತಿರುವುದು ಸಹಜವಾಗಿಯೇ ಇದೆ.

05 1420454358 05 1420446982 castecensus2 1

ಅಲ್ಲದೆ ಈ ವರದಿ ಸ್ವೀಕಾರಕ್ಕೆ ವಿರೋಧ ತೋರುತ್ತಿರುವ ಸಮುದಾಯಗಳ ಸಮರ್ಥನೆಯಲ್ಲಿ ಮಹತ್ವದ ಅಂಶಗಳು ಎದ್ದು ಕಾಣುತ್ತಿಲ್ಲ. ಮನೆ ಮನೆಗೆ ಭೇಟಿ ನೀಡಿ ಸರಿಯಾಗಿ ಮಾಹಿತಿ ಸಂಗ್ರಹಿಸಿಲ್ಲ ಮತ್ತು ಇದು ದಶಕದ ಹಿಂದೆ ನಡೆಸಿದ ಸಮೀಕ್ಶೆ. ಹಾಗಾಗಿ ಮಾಹಿತಿಗಳು ಅಪೂರ್ಣವೆಂದು ಹೇಳಲಾಗುತ್ತಿದೆ. ಹಾಗೆ ಆಗಿದ್ದರೆ ಅದು ಎಲ್ಲ ಜಾತಿಗಳಿಗೂ ಅನ್ವಯಿಸುತ್ತದೆ. ಎಲ್ಲ ಸಮುದಾಯಗಳ ಮಾಹಿತಿಗಳು ಖಚಿತವಾಗಿಲ್ಲ ಎಂದೇ ನಂಬಬೇಕಾಗುತ್ತದೆ. ಆದರೆ ಎರಡು ಜಾತಿಗಳನ್ನು ಹೊರತುಪಡಿಸಿ ಉಳಿದ ಯಾವ ಜಾವ ಜಾತಿಗಳೂ ಯಾಕೆ ವಿರೋಧ ತೋರಿಸುತ್ತಿಲ್ಲ? ಎಂಬ ಪ್ರಶ್ನೆಯೂ ಹುಟ್ಟುತ್ತದೆ. ಅಲ್ಲದೆ ಜಾತಿಗಣತಿ ವರದಿಯಿಂದ ಜಾತಿ ಸಂಘರ್ಶ ಹೆಚ್ಚುತ್ತದೆ ಎಂದು ಹೇಳಲಾಗುತ್ತಿದೆ. ಇದುವರೆಗೂ ಜಾತಿಗಣತಿ ವರದಿ ಸಿದ್ದವಾಗುವ ಮೊದಲು ರಾಜ್ಯದಲ್ಲಿ ಜಾತಿ ಗಲಭೆಗಳು, ಸಂಘರ್ಶಗಳು ನಡೆದೇ ಇಲ್ಲವೇ? ಎಂಬ ಪ್ರಶ್ನೆ ಹುಟ್ಟುತ್ತದೆ. ಹಾಗಾಗಿ ಈ ಸಮುದಾಯಗಳ ವಿರೋಧದಲ್ಲಿ ಬಲವಾದ ಹುರುಳಿದೆ ಎನ್ನಿಸುತ್ತಿಲ್ಲ. ಆದ್ದರಿಂದ ಮೊದಲು ಆಯೋಗ ಸಿದ್ದಪಡಿಸಿರುವ ವರದಿಯನ್ನು ಸರ್ಕಾರ ಸ್ವೀಕರಿಸಬೇಕು. ಸರ್ಕಾರದ ಆದೇಶಕ್ಕೆ ಅನುಗುಣವಾಗಿ ಮತ್ತು ಕಾನೂನು ಬದ್ಧವಾಗಿಯೇ ನಡೆದಿರುವ ಸಮೀಕ್ಶಾ ವರದಿಯನ್ನು ಒಪ್ಪದೆ ನಿರಾಕರಿಸುವುದು ಕಾನೂನುಬದ್ದ ನಡವಳಿಕೆಯಲ್ಲ.

ವರದಿಯನ್ನು ಸ್ವೀಕರಿಸದೇ ಹೋದರೆ ಸರ್ಕಾರ ತನ್ನ ಕಾನೂನು, ಆದೇಶಗಳನ್ನು ತಾನೇ ಉಲ್ಲಂಘಿಸಿದಂತೆ ಆಗುತ್ತದೆ. ಅದರಲ್ಲಿ ಕಾಂಗ್ರೆಸ್ ಪಕ್ಶ ತಾನೇ ನಡೆಸಿದ ಸಮೀಕ್ಶೆಯನ್ನು ತಾನೇ ಒಪ್ಪದಿದ್ದರೆ ಅದು ಇಡೀ ಸಮಾಜಕ್ಕೆ, ವಿಶೇಶವಾಗಿ ನೊಂದ ಮತ್ತು ವಂಚಿತ ಸಮುದಾಯಗಳಿಗೆ ಕೆಟ್ಟ ಸಂದೇಶವನ್ನು ನೀಡುತ್ತದೆ. ಅಲ್ಲದೆ ದೊಡ್ಡದಾಗಿ ಮಾತನಾಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮಾತೂ ತೋರಿಕೆಯದೆನ್ನಿಸುತ್ತದೆ. ಇಡೀ ದೇಶದಲ್ಲಿಯೇ ಕೆಟ್ಟ ಉದಾಹರಣೆಯಾಗಿ ದಾಖಲಾಗುತ್ತದೆ. ತಾನು ಮಾಡಿರುವ ಬಹಳ ಒಳ್ಳೆಯ ಕೆಲಸದ ಪ್ರಯೋಜನವೊಂದು ರಾಜ್ಯಕ್ಕೆ ದೊರೆಯದಂತಾಗುತ್ತದೆ. ಹಾಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಜಾತಿಗಳ ಸಾಮಾಜಿಕ ಶೈಕ್ಶಣಿಕ ವರದಿಯನ್ನು ಸ್ವೀಕರಿಸಿ ತನ್ನನ್ನು ತಾನು ದೇಶದ ಜನರ ಮುಂದೆ ಪ್ರೂವ್ ಮಾಡಿಕೊಳ್ಳಬೇಕಿದೆ. ಅದಕ್ಕೆ ಅವಕಾಶವೂ ಒದಗಿಬಂದಿದೆ. ಆದರೆ ಅದನ್ನು ಹೇಗೆ ನಿರ್ವಹಿಸುತ್ತದೆ ಎಂಬುದನ್ನು ಇನ್ನಶ್ಟೇ ಕಾದು ನೋಡಬೇಕಿದೆ.

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಕರ್ನಾಟಕ ಕೇವಲ ಎರಡು ಜಾತಿಗಳಿಗೆ ಸೇರಿದ್ದಲ್ಲ. ಪರಿಶಿಶ್ಟ ಜಾತಿಗಳಲ್ಲಿ 101 ಜಾತಿ ಮತ್ತು ಅದರ ನೂರಾರು ಉಪಜಾತಿಗಳಿವೆ. ಪರಿಶಿಶ್ಟ ಪಂಗಡದಲ್ಲಿ 50 ಜಾತಿಗಳು ಮತ್ತು ಉಪಜಾತಿಗಳಿವೆ. ಪ್ರವರ್ಗ 1ರಲ್ಲಿ 95 ಜಾತಿ ಮತ್ತು ಅದರ ನೂರಾರು ಉಪಜಾತಿಗಳಿವೆ. ಪ್ರವರ್ಗ 11(ಎ)ನಲ್ಲಿ 105 ಜಾತಿ ಉಪಜಾತಿಗಳಿವೆ. ಪ್ರವರ್ಗ 2(ಬಿ)ನಲ್ಲಿ ಮುಸಲ್ಮಾನರಲ್ಲಿನ ಹಲವು ಜಾತಿಗಳಿವೆ. ಹಾಗೆಯೇ ಪ್ರವರ್ಗ 3 ರಲ್ಲಿ 40 ಜಾತಿಗಳಿವೆ. ಮತ್ತು 3(ಬಿ) ಒಳಗೆ 19 ಜಾತಿ ಮತ್ತು ಉಪಜಾತಿಗಳಿವೆ. ಎಲ್ಲ ಸೇರಿ ಸುಮಾರು ನಾನ್ನೂರಕ್ಕೂ ಹೆಚ್ಚು ಪ್ರಮುಖ ಜಾತಿಗಳಿವೆ. ಅವುಗಳ ಉಪಜಾತಿಗಳನ್ನು ಸೇರಿಸಿದರೆ ಒಂದೂವರೆ ಸಾವಿರಕ್ಕೂ ಹೆಚ್ಚು ಜಾತಿ-ಉಪಜಾತಿಗಳು ಕರ್ನಾಟಕದಲ್ಲಿವೆ. ಈ ಎಲ್ಲ ಜಾತಿಗಳೂ ಸೇರಿ ಕರ್ನಾಟಕವಾಗಿದೆ. ಈ ಎಲ್ಲ ಜಾತಿ ಸಮುದಾಯಗಳಿಗೆ ಸಾಮಾಜಿಕವಾಗಿ ಮುಂಬರುವ ಆಸೆಗಳಿವೆ. ಅವುಗಳ ಒಳಿತಿಗೆ ಸೂಕ್ತ ಯೋಜನೆಗಳನ್ನು ರೂಪಿಸಲು ಖಚಿತವಾದ ಮಾಹಿತಿಗಳ ಅಗತ್ಯವಿದೆ. ಅಂತಹ ಮಾಹಿತಿಗಳು ಜಾತಿ ಗಣತಿ ಇಲ್ಲವೇ ಸಮೀಕ್ಶಾ ವರದಿಯ ಮೂಲಕ ಸರ್ಕಾರಕ್ಕೆ ದೊರೆಯುತ್ತಿವೆ. ಈ ವರದಿಯ ಮಾಹಿತಿಗಳನ್ನು ಆಧರಿಸಿ ಸರ್ಕಾರಕ್ಕೆ ನೈಜ ಯೋಜನೆಗಳನ್ನು ರೂಪಿಸಲು ಸಾಧ್ಯವಾಗುತ್ತದೆ. ಇಂತಹ ಮಾಹಿತಿಗಳನ್ನು ಸಂಗ್ರಹಿಸಲು ಈ ರಾಜ್ಯಕ್ಕೆ ಕಳೆದ ಒಂದು ಶತಮಾನದಿಂದಲೂ ಸಾಧ್ಯವಾಗಿಲ್ಲ. ಈಗ ಅಂತಹ ಒಂದು ಸಮೀಕ್ಶಾ ವರದಿಯೊಂದು ಸಿಕ್ಕರೆ ಕಳೆದ 75 ವರ್ಶಗಳಲ್ಲಿ ಸ್ವತಂತ್ರ ಭಾರತದ ಆಡಳಿತ ವ್ಯವಸ್ಥೆಯಲ್ಲಿ ನಮ್ಮ ಸಮಾಜದಲ್ಲಿ ಸಾಧ್ಯವಾಗಿರುವ ಬದಲಾವಣೆಗಳೇನು? ಮುಂದೆ ಹಮ್ಮಿಕೊಳ್ಳಬೇಕಾದ ಯೋಜನೆಗಳೇನು? ಎಂಬುದನ್ನು ನಿರ್ಣಯಿಸಲು ಸಾಧ್ಯವಾಗುತ್ತದೆ. ಹಾಗಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಶಾ ವರದಿಗೆ ಚಾರಿತ್ರಿಕವಾಗಿ ಬಹಳ ಮಹತ್ವವಿದೆ.

ಇಂದು ಮಾಹಿತಿ ಒಂದು ದೊಡ್ಡ ಅಸ್ತ್ರವಾಗಿರುವುದರಿಂದ ಹಿಂದುಳಿದ ಜನರಿಗೆ ಅವರ ಸ್ಥಿತಿಗತಿ ಅರ್ಥ ಮಾಡಿಕೊಳ್ಳಲು ಈ ಸಮೀಕ್ಶಾ ವರದಿಯಿಂದ ಸಾಧ್ಯವಾಗುತ್ತದೆ. ಸಮಾಜ ವಿಜ್ಞಾನಿಗಳಿಗೆ ಅಧ್ಯಯನಕ್ಕೆ ನೆರವಾಗುತ್ತದೆ. ಈ ನಾಡಿನ ನೈಜ ರೂಪವನ್ನು ಇಂದಿನ ಮಕ್ಕಳಿಗೆ ತಿಳಿಸಲು ಸಾಧ್ಯವಾಗುತ್ತದೆ. ಅಲ್ಲದೆ ಮಾಹಿತಿಯನ್ನು ಅಸ್ತ್ರವಾಗಿ ಬಳಸಿಕೊಂಡು ನೊಂದ ಜನರು ಸರ್ಕಾರದ ಬಳಿ ತಮ್ಮ ಹಕ್ಕೊತ್ತಾಯಗಳನ್ನು ಮಂಡಿಸಲು ನೆರವಾಗುತ್ತದೆ. ಯಾವುದೇ ಕಾರ್ಯ ಯೋಜನೆಗಳನ್ನು ರೂಪಿಸಲು ಸರ್ಕಾರ ಮತ್ತು ಜನರಿಗೆ ಅಧಿಕೃತ ಹಾಗೂ ಖಚಿತವಾದ ಮಾಹಿತಿಗಳ ಅಗತ್ಯವಿರುತ್ತದೆ. ಕಳೆದ ಒಂದು ಶತಮಾನದಿಂದಲೂ ಈ ದೇಶದಲ್ಲಿ ಜಾತಿಗಣತಿಯೇ ನಡೆಯದ ಕಾರಣ ದಲಿತ, ಹಿಂದುಳಿದ ಮತ್ತು ತಬ್ಬಲಿ ಜಾತಿಗಳ ಬಗೆಗೆ ನಿಖರ ಮಾಹಿತಿಗಳಿಲ್ಲ. ಸರಿಯಾದ ಮಾಹಿತಿಗಳೇ ಇಲ್ಲದ ಕಾರಣ ಹಿಂದುಳಿದ ಮತ್ತು ತಬ್ಬಲಿ ಸಮುದಾಯಗಳ ಏಳ್ಗೆಗೆ ನೈಜ ಯೋಜನೆಗಳನ್ನು ರೂಪಿಸಲು ಸಾಧ್ಯವಾಗಿಲ್ಲ. ಅಲ್ಲದೆ ಇಲ್ಲಿಯವರೆಗೂ ರೂಪಿರುವ ಯೋಜನೆಗಳಲ್ಲಿನ ದೋಶಗಳನ್ನು ಕಂಡುಕೊಂಡು ಅವುಗಳನ್ನು ತಿದ್ದಿಕೊಳ್ಳಲು ಸಾಧ್ಯವಾಗಿಲ್ಲ. ಹಾಗಾಗಿ ಸರ್ಕಾರ ಮತ್ತು ಜನರಿಗೆ ಜಾತಿ ಗಣತಿಯ ವರದಿಯ ಮಾಹಿತಿಗಳ ಅಗತ್ಯವಿದೆ. ಈ ವರದಿಯಿಂದ ಯಾವ ಜಾತಿ ಸಮುದಾಯ ಎಶ್ಟು ಅನುಕೂಲಗಳನ್ನು ಪಡೆದುಕೊಂಡಿದೆ ಮತ್ತು ಯಾವ ಸಮುದಾಯ ಹಿಂದುಳಿದಿದೆ; ಅವರ ಶೈಕ್ಶಣಿಕ, ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳೇನು? ಎಂಬುದನ್ನು ತಿಳಿಯಲು ಸಾಧ್ಯವಾಗುತ್ತದೆ. ವಾಸ್ತವಿಕ ಸಂಗತಿಗಳನ್ನು ತಿಳಿಯುವುದು ಇಂದಿನ ಅತಿ ಜರೂರಿನ ಕೆಲಸವಾಗಿದೆ.

ಅಲ್ಲದೆ ಈ ವರದಿಯ ನೆರವಿನಿಂದ ಸದ್ಯದ ಮೀಸಲಾತಿ ವ್ಯವಸ್ಥೆಯನ್ನು ಮರುಪರಿಶೀಲಿಸಲು ಸಾಧ್ಯವಾಗುತ್ತದೆ. ಜಾತಿ ಮತ್ತು ಪಂಗಡವಾರು ಮೀಸಲಾತಿಯನ್ನು ಹೆಚ್ಚಿಸುವುದು ಮತ್ತು ಮರುಹಂಚಿಕೆ ಮಾಡುವುದಕ್ಕೂ ಈ ವರದಿ ಅಗತ್ಯವಿದೆ. ಅಲ್ಲದೆ ಇಲ್ಲಿಯವರೆಗೂ ಉದ್ಯೋಗ ಮತ್ತು ಶಿಕ್ಶಣ ಕ್ಶೇತ್ರದಲ್ಲಿ ಮೀಸಲಾತಿಯನ್ನು ಜಾರಿಗೆ ತರಲಾಗಿದೆ. ಇತ್ತೀಚೆಗೆ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ಜಾತಿಗಳಿಗೆ ಮೀಸಲಾತಿಯನ್ನು ಜಾರಿಗೆ ತರಲಾಗಿದೆ. ಇವುಗಳ ಹಾಗೆಯೇ ಹಿಂದುಳಿದ ಜಾತಿಗಳಲ್ಲಿಯೇ ಅತಿ ಹಿಂದುಳಿದ ಜಾತಿಗಳಿಗೆ ವಿಧಾನ ಸಭೆ ಮತ್ತು ಲೋಕಸಭೆಯ ಚುನಾವಣೆಗಳಲ್ಲಿಯೂ ಮೀಸಲಾತಿಯನ್ನು ಜಾರಿಗೆ ತರುವ ಅಗತ್ಯವಿದೆ.

vijay
ವೈಎಸ್ ಆರ್ ಕಾಂಗ್ರೆಸ್ ಸಂಸದರಾದ ವಿಜಯ್ ಸಾಯಿ ರೆಡ್ಡಿ

ಈಗಾಗಲೇ ಹಿಂದುಳಿದ ಜಾತಿಗಳಿಗೆ ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆಗಳಲ್ಲಿ ಮೀಸಲಾತಿ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ರಾಜ್ಯಸಭೆಯಲ್ಲಿ ವೈಎಸ್ ಆರ್ ಕಾಂಗ್ರೆಸ್ ಪಕ್ಶದ ಸಂಸದರಾದ ವಿಜಯ್ ಸಾಯಿ ರೆಡ್ಡಿ ಅವರು ಖಾಸಗಿ ಬಿಲ್ ಅನ್ನು 2018ರಲ್ಲಿ ಮಂಡಿಸಿದ್ದಾರೆ. ಅದು ತಿರಸ್ಕೃತವಾಗಿರುವುದು ಬೇರೆಯ ಮಾತು. ಅಂದರೆ ಹಿಂದುಳಿದ ಜಾತಿಗಳಿಗೆ ರಾಜಕೀಯ ಮೀಸಲಾತಿ ಬೇಕೆಂಬ ವಿಶಯ ಚರ್ಚೆಯಲ್ಲಿದೆ. ಇದನ್ನು ಸೂಕ್ತ ರೀತಿಯಲ್ಲಿ ಜಾರಿಗೆ ತರಲು ಮಾಹಿತಿಗಳ ಅಗತ್ಯವಿದೆ. ರಾಜಕೀಯ ಮೀಸಲಾತಿ ಇಲ್ಲದ ಕಾರಣಕ್ಕಾಗಿಯೇ ಹಿಂದುಳಿದ ವರ್ಗಗಳು ಮತ್ತು ಅವುಗಳಲ್ಲಿಯೇ ಅತಿ ಬಲಿಶ್ಟವಾಗಿರುವ ಜಾತಿಗಳು ಅತಿ ಹಿಂದುಳಿದ ವರ್ಗಗಳ ರಾಜಕೀಯ ಪ್ರಾತಿನಿಧ್ಯ ಮತ್ತು ಅವಕಾಶಗಳನ್ನು ಕಸಿದುಕೊಳ್ಳುತ್ತಿವೆ. ಹೀಗೆ ಕಸಿದುಕೊಳ್ಳುತ್ತಿರುವ ಕಾರಣಕ್ಕಾಗಿಯೇ ರಾಜ್ಯದಲ್ಲಿ ಹಿಂದುಳಿದ ವರ್ಗದ ಜಾತಿಗಳಲ್ಲಿ ಕುಂಬಾರ, ಮಡಿವಾಳ. ಆಚಾರಿ, ಗಾಣಿಗ, ದೇವಾಂಗ, ಉಪ್ಪಾರ ಮುಂತಾದ ಜಾತಿಗಳು ರಾಜಕೀಯ ಪ್ರಾತಿನಿಧ್ಯವೇ ಇಲ್ಲದೆ ತಬ್ಬಲಿಗಳಾಗಿವೆ. ದಲಿತರಲ್ಲಿ ಅಲೆಮಾರಿ ಸಮುದಾಯಗಳು ತಬ್ಬಲಿಗಳಾಗಿವೆ. ಆ ಸಮುದಾಯಗಳು ರಾಜಕೀಯವಾಗಿ ಬಲಿಶ್ಟವಾಗಿರುವ ಸಮುದಾಯಗಳ ಸೇವೆ ಮಾಡುತ್ತ ಪರಾವಲಂಬಿಗಳಾಗಿ ನಗಣ್ಯವಾಗಿ ಜೀವಿಸುತ್ತಿವೆ.

ಹಾಗಾಗಿ ಇದುವರೆಗೂ ಶಿಕ್ಶಣ, ಉದ್ಯೋಗ ಮತ್ತು ರಾಜಕೀಯ ಕ್ಶೇತ್ರಗಳಲ್ಲಿ ಅವಕಾಶ ವಂಚಿತವಾಗಿ ಹಿಂದುಳಿದಿರುವ ಜಾತಿಗಳ ಏಳ್ಗೆಗೆ ನೈಜವಾದ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಜಾತಿಗಣತಿ ವರದಿ ನೆರವಾಗಲಿದೆ. ಆದ್ದರಿಂದ ಒಟ್ಟು ಸಮಾಜದ ಏಳ್ಗೆಯನ್ನು ಮತ್ತು ಪ್ರಜಾತಂತ್ರ ವ್ಯವಸ್ಥೆಯ ಮೂಲತತ್ವಗಳನ್ನು ಗಮನದಲ್ಲಿರಿಸಿಕೊಂಡು ವರದಿ ಬಗೆಗೆ ಆಲೋಚಿಸಬೇಕೇ ಹೊರತು ಯಾವುದೋ ಒಂದು ಸಮುದಾಯದ ಸ್ವಾರ್ಥ ಮತ್ತು ರಾಜಕೀಯ ಲೆಕ್ಕಾಚಾರಗಳಿಂದ ಯೋಚನೆ ಮಾಡಬಾರದು. ಅದರಲ್ಲಿಯೂ ಸಾಂವಿಧಾನಿಕ ಹುದ್ದೆಯಲ್ಲಿರುವವರು, ಜನಪ್ರತಿನಿಧಿಗಳು ಒಂದು ಜಾತಿಯ ವಾರಸುದಾರರು ಮತ್ತು ವಕ್ತಾರರುಗಳಾಗಿ ಯೋಚಿಸಬಾರದು. ಅವರಿಗೆ ಒಂದೇ ಜಾತಿಯ ಜನರು ವೋಟನ್ನು ಗುದ್ದಿರುವುದಿಲ್ಲ. ಅವರಿಗೆ ಎಲ್ಲ ಜಾತಿಯ ಧರ್ಮಗಳ ಮತದಾರರು ಮತ ಚಲಾಯಿಸಿರುತ್ತಾರೆ. ಹಾಗಾಗಿ ಜನಪ್ರತಿನಿಧಿಗಳು ವಿಶಾಲವಾಗಿ ಯೋಚಿಸಬೇಕಿದೆ.

ಇದನ್ನೂ ಓದಿ ಜಾತಿ ಗಣತಿಗೆ ವಿರೋಧ; ನಿರ್ದಯಿ ಸಾಮಾಜಿಕ ದ್ರೋಹ

ಇಲ್ಲಿ ಪ್ರಸ್ತಾಪಿಸಬೇಕಾದ ಅಂಶವೆಂದರೆ, ಬಲಿಶ್ಟ ಜಾತಿಗಳು ವಿರೋಧ ತೋರಿದಂತೆ ಉಳಿದ ಹಿಂದುಳಿದ ಮತ್ತು ತಬ್ಬಲಿ ಜಾತಿ ಸಮುದಾಯಗಳು ಒಗ್ಗೂಡಿ ವರದಿ ಸ್ವೀಕರಿಸುವಂತೆ ಮತ್ತು ಅದನ್ನು ಸಾರ್ವಜನಿಕರ ಮುಂದಿಡುವಂತೆ ಒತ್ತಾಯಿಸಿದರೆ ಆಗೇನು ಮಾಡುವುದು? ಅಂದರೆ ವರದಿಯ ಪರ-ವಿರುದ್ಧ ಪರಸ್ಪರ ವಿರೋಧ ವ್ಯಕ್ತಪಡಿಸುವುದು ಸಮಾಜದಲ್ಲಿ ಆಂತರಿಕ ಸಂಘರ್ಶಕ್ಕೆ ಕಾರಣವಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಎಲ್ಲ ಜಾತಿಗಳು ಮುಕ್ತಮನಸ್ಸಿನಿಂದ ಆಲೋಚಿಸಬೇಕು ಮತ್ತು ವಿಶಾಲ ಸಮಾಜದ ಹಿತಚಿಂತನೆಯ ಹಿನ್ನೆಲೆಯಲ್ಲಿ ಪ್ರಸ್ತುತ ಸನ್ನಿವೇಶವನ್ನು ಅರ್ಥಮಾಡಿಕೊಳ್ಳಬೇಕು. ಆಗ ಮಾತ್ರವೇ ಸರ್ಕಾರವೊಂದು ನೈಜವಾಗಿ ಆಡಳಿತ ನಡೆಸಲು ಸಾಧ್ಯವಾಗುವುದು. ಪ್ರಜಾಪ್ರಭುತ್ವ ಉಸಿರಾಡಲು ಸಾಧ್ಯವಾಗುವುದು. ಇದರಿಂದ ಜನಸಾಮಾನ್ಯರಲ್ಲಿ ಸಾಮಾಜಿಕ ನ್ಯಾಯಪ್ರಜ್ಞೆಯ ವಿವೇಕವೊಂದು ಚಿಗುರೊಡೆಯಲು ಅವಕಾಶ ಸೃಶ್ಟಿಯಾಗುತ್ತದೆ.

ಇದೇ ಸಂದರ್ಭದಲ್ಲಿ ಇಡೀ ದೇಶದಲ್ಲಿ ಜಾತಿ ಗಣತಿ ನಡೆಸುವ ಮಾತುಗಳು ಕೇಳಿ ಬರುತ್ತಿವೆ. ಸದ್ಯ ಐದು ರಾಜ್ಯಗಳ ವಿಧಾನ ಸಭೆಯ ಚುನಾವಣೆ ಪ್ರಚಾರ ಕಾರ್ಯಕ್ರಮಗಳಲ್ಲಿ ಜಾತಿ ಗಣತಿ ಸಾಕಶ್ಟು ಸದ್ದು ಮಾಡುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದನ್ನು ನಿರಂತರವಾಗಿ ಮಾತನಾಡುತ್ತ ಈ ವಿಚಾರವನ್ನು ಮುಂಚೂಣಿಗೆ ತಂದಿದ್ದಾರೆ. ಈ ನಡುವೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಜಾತಿ ಗಣತಿ ವರದಿಯನ್ನು ಸ್ವೀಕರಿಸಿ ಅದನ್ನು ಚರ್ಚೆಗಿಟ್ಟು ಇಡೀ ದೇಶದಲ್ಲಿ ಹೊಸ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ನಮ್ಮ ರಾಜ್ಯದಲ್ಲಿಯೂ ನಡೆದಿರುವ ಜಾತಿಗಣತಿ ವರದಿಯನ್ನು ಒಪ್ಪಿಕೊಳ್ಳುವ ಮೂಲಕ ಈ ಚರ್ಚೆಯನ್ನು ಇನ್ನಶ್ಟು ಮುಂದಕ್ಕೆ ಕೊಂಡೊಯ್ಯಲು ಪ್ರಯತ್ನಿಸಬೇಕು. ಆಗ ಮಾತ್ರವೇ ದೇಶದ ಒಟ್ಟಾರೆ ಬದಲಾವಣೆಗೆ, ಪ್ರಜಾಪ್ರಭುತ್ವವನ್ನು ನೈಜವಾಗಿ ಜಾರಿಗೆ ತರಲು ಶಕ್ತಿ ನೀಡುತ್ತದೆ. ಹಾಗಾಗಿ ಇಶ್ಟೊಂದು ಮಹತ್ವವಿರುವ ವರದಿಯನ್ನು ವಿರೋಧಿಸುವುದು ಸರಿಯಾದ ನಡೆ ಎನ್ನಿಸುವುದಿಲ್ಲ.

ಇದನ್ನೂ ಓದಿ ಜಾತಿ ಸಮೀಕ್ಷೆಯ ಪರ-ವಿರೋಧಗಳ ಸುತ್ತಮುತ್ತ…

‘ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ’ ಎಂಬ ಮಾತಿನಂತೆ ಸರ್ಕಾರ ವರ್ತಿಸಬಾರದು. ಸಮಯಕ್ಕೆ ತಕ್ಕ ಹಾಗೆ ಹೇಳಿಕೆಗಳನ್ನು ನೀಡಿ ಜನರನ್ನು ಗೊಂದಲಕ್ಕೀಡು ಮಾಡಬಾರದು. ಈಗಾಗಲೇ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಿ ಹೊಸ ಚರ್ಚೆಯನ್ನು ಹುಟ್ಟಿಹಾಕಿರುವ ಬಿಹಾರ ಸರ್ಕಾರವನ್ನು ನೋಡಿಯಾದರೂ ಕರ್ನಾಟಕ ಸರ್ಕಾರ ಸಾಮಾಜಿಕ ಶೈಕ್ಶಣಿಕ ವರದಿಯನ್ನು ಸ್ವೀಕರಿಸಿ ಅದನ್ನು ಜನತೆಯ ಉದ್ದಾರಕ್ಕೆ ಬೇಕಾದ ಊರುಗೋಲಾಗಿ ಬಳಸಬೇಕಿದೆ. ಅದೇ ಇಂದಿನ ಅಗತ್ಯ ಮತ್ತು ಸರ್ಕಾರದ ಜನಪರ ನಡೆಯಾಗಿದೆ. ಅಂತಹ ಕ್ರಿಯೆ ಜರೂರಾಗಿ ನಡೆಯಲಿ ಎಂಬುದು ಇಲ್ಲಿನ ಹೆಬ್ಬಯಕೆ.

(ಈ ಲೇಖನ ಎಲ್ಲರ ಕನ್ನಡದಲ್ಲಿದೆ)

ಡಾ. ರಂಗನಾಥ ಕಂಟನಕುಂಟೆ
ರಂಗನಾಥ ಕಂಟನಕುಂಟೆ
+ posts

ಲೇಖಕ, ಕನ್ನಡ ಪ್ರಾಧ್ಯಾಪಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ರಂಗನಾಥ ಕಂಟನಕುಂಟೆ
ರಂಗನಾಥ ಕಂಟನಕುಂಟೆ
ಲೇಖಕ, ಕನ್ನಡ ಪ್ರಾಧ್ಯಾಪಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X