ಫ್ಯೂಡಲ್ ಸಮಾಜ, ಗಾದೆಗಳು ಮತ್ತು ನಿಂದನಾತ್ಮಕ ವಾಗ್ದಾಳಿಗಳು: ರಂಗನಾಥ ಕಂಟನಕುಂಟೆ ಬರೆಹ

Date:

ಅನೇಕ ಗಾದೆಗಳನ್ನು ಇಂದು ಬಳಸುವುದು ಅಮಾನವೀಯವಾದ ನಡೆಯಾಗಿರುತ್ತದೆ. ಹಾಗಾಗಿ ಗಾದೆಗಳನ್ನು ಇಂದು ಬೇಕಾಬಿಟ್ಟಿಯಾಗಿ ಬಳಸಬಾರದು. ಅವುಗಳನ್ನು ಬಳಸುವಾಗ ಎಚ್ಚರದಿಂದಿದ್ದು ಅವುಗಳ ಸಾಮಾಜಿಕ ಪರಿಣಾಮಗಳೇನು ಎಂಬುದನ್ನು ಅರಿತೇ ಅವನ್ನು ಬಳಸಬೇಕು. ಹೆಣ್ಣು, ಜಾತಿ, ಆಹಾರ, ಧರ್ಮಗಳು ಮತ್ತು ಕಸುಬುಗಳನ್ನು ಕುರಿತ ಗಾದೆಗಳನ್ನು ಬಳಸುವಾಗಲಂತೂ ಅತ್ಯಂತ ಎಚ್ಚರವಿರಬೇಕು 

‘ನುಡಿ’ ಅಸಮಾನತೆಯ ಸಾಮಾಜಿಕ ಮೌಲ್ಯಗಳನ್ನು ತನ್ನೊಳಗೆ ಹುದುಗಿಸಿಕೊಂಡಿರುವುದು ಈಗಾಗಲೇ ತಿಳಿದಿರುವ ವಿಚಾರ. ನುಡಿ ರಚನೆಯ ಭಾಗವಾಗಿರುವ ಗಾದೆಗಳು ಅಸಮಾನತೆಯ ಸಾಮಾಜಿಕ ವಿನ್ಯಾಸದ ಅತ್ಯಂತ ಪ್ರಮುಖ ರಚನೆಗಳಾಗಿವೆ. ಜಾತಿ, ವರ್ಗ, ವರ್ಣ, ಕಸುಬು, ಆಹಾರ, ಧರ್ಮ ಮತ್ತು ಲಿಂಗತಾರತಮ್ಯದ ಎಲ್ಲ ನೆಲೆಗಳನ್ನು ಗಾದೆಗಳು ತಮ್ಮ ಹೊಟ್ಟೆಯಲ್ಲಿ ಕಾಪಿಟ್ಟುಕೊಂಡಿವೆ. ಅಂದರೆ ಅಸಮಾನತೆಯ ಬೇರುಗಳು ಗಾದೆಗಳಲ್ಲಿ ಗಟ್ಟಿಯಾಗಿ ಊರಿವೆ. ಗಾದೆಗಳು ನುಡಿಯಲ್ಲಿ ಅತ್ಯಂತ ಗಟ್ಟಿಯಾದ ಕಾವ್ಯಾತ್ಮಕ ರಚನೆಗಳಾಗಿವೆ. ಬಹಳ ಸಾಂದ್ರವಾಗಿ ವಿಚಾರಗಳನ್ನು ದಾಟಿಸುತ್ತವೆ. ‘ಹತ್ತು ಕಟ್ಟುವ ಕಡೆ ಒಂದು ಮುತ್ತು ಕಟ್ಟು’ ಎಂಬಂತೆ ಬಹಳ ಅಚ್ಚುಕಟ್ಟಾದ ನುಡಿ ರಚನೆಗಳಾಗಿವೆ. ಗಾದೆಗಳಲ್ಲಿ ನುಡಿಯನ್ನು ಬಹಳ ಬಿಗಿಯಾಗಿ ಬಳಸಲಾಗಿರುತ್ತದೆ. ಕಿರಿದರಲ್ಲಿ ಹಿರಿದರ್ಥವನ್ನು ಹೇಳುವ ಉಮೇದು ಇರುತ್ತದೆ. ಅವು ಅನುಭವ ಕೇಂದ್ರಿತವಾಗಿರುತ್ತವೆ. ಆದರೆ ಅವುಗಳ ಆಶಯ ಮಾತ್ರ ಫ್ಯೂಡಲ್ ಸಮಾಜದ ಅಸಮಾನತೆಯ ಮೌಲ್ಯಗಳು ಮತ್ತು ಆಶಯಗಳ ಅಭಿವ್ಯಕ್ತಿಯಾಗಿವೆ. ಹಾಗಾಗಿ ಜನಪದ ಅನುಭವಜನ್ಯ ನುಡಿಗಳಾದ ಗಾದೆಗಳು ಇಲ್ಲಿ ಪ್ರಶ್ನಾರ್ಹವಾಗಿವೆ.

ಹಾಗಾಗಿ ‘ಜನಪದ ಸಾಹಿತ್ಯವೆಲ್ಲ ಜನಪರ ಸಾಹಿತ್ಯವೆಂಬ ತೆಳುಗ್ರಹಿಕೆಯಿಂದ ಗಾದೆಗಳನ್ನು ಪ್ರಶ್ನಾತೀತವಾಗಿ ಒಪ್ಪಬಾರದು. ಅವುಗಳನ್ನು ಅಸಮಾನತೆಯ ಸಮಾಜದ ರಚನೆಯ ಮೌಲ್ಯಗಳ ಚೌಕಟ್ಟಿನಲ್ಲಿಯೇ ಅರ್ಥಮಾಡಿಕೊಳ್ಳಬೇಕು. ಜಾತಿರೋಗಗ್ರಸ್ತ ಸಮಾಜದಲ್ಲಿ ತಮಗಿಂತ ಕೆಳಗಿರುವ ಜಾತಿಗಳ ಮೇಲೆ ಅಧಿಪತ್ಯ ಸ್ಥಾಪಿಸಿ ಅಪಮಾನಿಸುವುದನ್ನು ಎಂದಿನಿಂದಲೂ ಮಾಡಿಕೊಂಡೇ ಬರಲಾಗುತ್ತಿದೆ. ಅದಕ್ಕೆ ನುಡಿ ರಚನೆಗಳಾದ ಬೈಗುಳಗಳು ಮತ್ತು ಗಾದೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತದೆ. ಇದನ್ನು ಗಮನಿಸಿದರೆ ಅಸಮಾನತೆಯ ಸಂಬಂಧಗಳನ್ನು ಸಂವಹನಿಸುವ, ನಿರೂಪಿಸುವ ಶಕ್ತಿಶಾಲಿ ವಾಹಕಗಳಾಗಿ ಗಾದೆಗಳು ಕೆಲಸ ಮಾಡುತ್ತಿರುತ್ತವೆ. ನೂರು ವಾಕ್ಯಗಳಲ್ಲಿ ವಿವರಿಸಬಹುದಾದುದನ್ನು ಎರಡೇ ವಾಕ್ಯಗಳಲ್ಲಿ ಸಂವಹನಿಸುವ ಶಕ್ತಿ ಗಾದೆಗಳಿಗೆ ಇದೆ. ಮೇಲೆ ಹೇಳಿದಂತೆ ಕಾವ್ಯಾತ್ಮಕ ಮತ್ತು ಟೆಲಿಗ್ರಾಫಿಕ್ ಮಾದರಿಯ ನುಡಿರಚನೆಗಳಾದ ಗಾದೆಗಳು ಯಾವುದೇ ಭಾಶೆಯಲ್ಲಿ ಪರಿಣಾಮಕಾರಿಯಾಗಿರುತ್ತವೆ. ಇಂತಹ ಪರಿಣಾಮಕಾರಿಯಾದ ಗಾದೆಗಳ ರಚನೆಯ ಹಿಂದಿನ ಮನಸ್ಥಿತಿ ಮಾತ್ರ ನಮ್ಮ ಸಮಾಜದ ಫ್ಯೂಡಲ್ ಮನೋಭಾವದ ರೋಗ್ರಗ್ರಸ್ತ ಸಾಮಾಜಿಕ ಮೌಲ್ಯಗಳೇ ಆಗಿರುವುದು ದುರಂತ. ಶ್ರೇಣೀಕೃತ ಸಮಾಜದ ಎಲ್ಲ ಅಸಮಾನತೆಯ ಸಾಮಾಜಿಕ ನಡಾವಳಿಗಳನ್ನು ಬಹಳ ನಿರ್ಭಿಡೆಯಿಂದ ವ್ಯಕ್ತಪಡಿಸಿರುವ ಪ್ರಕಾರಗಳಾಗಿ ಗಾದೆಗಳು ರಚನೆಗೊಂಡಿವೆ.

ಹಾಗಾಗಿ ಗಾದೆಗಳ ಮೂಲಕ ಜನಪದರು ತಮ್ಮ ‘ಅನುಭವ ಮತ್ತು ಲೋಕದೃಶ್ಟಿ’ಗಳಿಂದ ವೈವಿಧ್ಯಮಯವಾದ ವಿಚಾರಗಳನ್ನು ಸಂವಹನಗೊಳಿಸಲು ಪ್ರಯತ್ನಿಸಿದ್ದರೂ ಅವುಗಳಲ್ಲಿ ಹೆಚ್ಚಿನ ಗಾದೆಗಳು ಜಾತಿ, ವರ್ಣ, ವರ್ಗ, ಧರ್ಮ, ಆಹಾರ ಕಸುಬುಗಳನ್ನು ಅವಹೇಳನ ಮಾಡಲು ಬಳಸಿಕೊಂಡಿರುವುದು ಎದ್ದು ಕಾಣಿಸುತ್ತದೆ. ಇವುಗಳಲ್ಲಿ ಪ್ರಧಾನವಾಗಿ ಜಾತಿ, ಲಿಂಗತ್ವ, ಕಸುಬು ಮತ್ತು ಆಹಾರಗಳು ಅತ್ಯಂತ ಹೆಚ್ಚು ದಾಳಿಗೆ ಒಳಗಾಗಿವೆ. ಆದ್ದರಿಂದ ಗಾದೆಗಳಲ್ಲಿ ಇಂತಹ ದಾಳಿಗಳ ಕ್ರೌರ್ಯದ ಹಿಂಸೆಯಲ್ಲಿ ಚೆಲ್ಲಿದ ನೆತ್ತರಿನ ಕಮಟು ವಾಸನೆಯಿರುತ್ತದೆ. ಮತ್ತೊಬ್ಬರನ್ನು ಹಿಯ್ಯಾಳಿಸುವ ಆಶಯವಿರುವ ಗಾದೆಗಳು ಹೇರಳವಾಗಿವೆ. ಸದ್ಯ ಲಭ್ಯವಿರುವ ಗಾದೆಗಳನ್ನು ಕೇಳುತ್ತ ಓದುತ್ತ ಅವುಗಳನ್ನು ಸೂಕ್ಶ್ಮವಾಗಿ ಗಮನಿಸಿದರೆ ಇದು ನಿಚ್ಚಳವಾಗಿ ನಮ್ಮ ಗಮನಕ್ಕೆ ಬರುತ್ತದೆ. ಇದಕ್ಕೆ ಅಸಂಖ್ಯ ಎತ್ತುಗೆಗಳನ್ನು ನೀಡಬಹುದು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕಿಟ್ಟೆಲ್ ಕೋಶದಲ್ಲಿ (ಸಂ: ರಾಗೌ, ಡಿವಿಕೆ ಮೂರ್ತಿ ಪ್ರಕಾಶನ, ಮೈಸೂರು, 1998) ನಮೂದಾಗಿರುವ ಗಾದೆಗಳನ್ನು ಆಧರಿಸಿ ಇದನ್ನು ವಿವರಿಸಿಕೊಳ್ಳಲು ಇಲ್ಲಿ ಪ್ರಯತ್ನಿಸಲಾಗಿದೆ.
ಮಾದಿಗ ಬೂದಿ ಬಡಕೊಂಡು
ಮಾಧವನೆಂದರೆ ಓದಾಳಿಯಾದಾನೇ?

ಮಾದಿಗನ ಮನೆಯಲ್ಲಿ ಪರಮಾನ್ನವಾದರೆ
ಹಾದೀಲಿ ಹೋಗೋರಿಗೇನು?

ಮಾದಿಗನ ಹೊಲಸು ಸಲ್ಲ
ನಾದಿಗನ ಗಾಯ ಸಲ್ಲ
ಈ ಮೇಲಿನ ಗಾದೆಗಳನ್ನು ಗಮನಿಸಿದರೆ ಜಾತಿ ಶ್ರೇಶ್ಟತೆಯ ವ್ಯಸನದಲ್ಲಿ ನರಳುವವರು ತಮಗಿಂತ ‘ಕೆಳಗೆ’ ಎಂದು ಭಾವಿಸಿರುವ ಸಮುದಾಯಗಳ ಬಗೆಗೆ ಹೊಂದಿರುವ ಧೋರಣೆ ಮತ್ತು ಮನಸ್ಥಿತಿ ಎಂತಹದು? ಎಂಬುದರ ದರ್ಶನವಾಗುತ್ತದೆ. ಇಲ್ಲಿ ಮಾದಿಗ ಮತ್ತು ನಾದಿಗ(ಕ್ಶೌರಿಕ) ಎರಡೂ ಸಮುದಾಯಗಳ ಬಗೆಗೆ ಇರುವ ಪೂರ್ವಗ್ರಹಪೀಡಿತ ಮನೋರೋಗದ ಅರಿವಾಗುತ್ತದೆ. ಮಾದಿಗರಾದವರು ಭಕ್ತಿಗೆ, ವಿದ್ಯೆಗೆ ಹೊರತಾದವರು; ಮತ್ತು ಅವರ ಮನೆಯ ಆಹಾರವೂ ಸ್ವೀಕಾರಾರ್ಹವಲ್ಲ ಎಂಬ ಅರ್ಥ ಇಲ್ಲಿ ಧ್ವನಿತವಾಗುತ್ತದೆ. ಇದು ಅಸ್ಪೃಶ್ಯತೆಯನ್ನು ಆಚರಿಸುವ ಬಗೆಯ ಸೂಚಕವೂ ಆಗಿದೆ. ಮತ್ತು ಮಾದಿಗ ಸಮುದಾಯದ ಜನರಿಗೆ ‘ಭಕ್ತಿ ಹಾಗೂ ವಿದ್ಯೆ’ಗೆ ನಿಶೇಧ ಹೇರುವ ಧೋರಣೆ ಇರುವುದು ನಿಚ್ಚಳವಾಗಿ ಕಾಣಿಸುತ್ತದೆ. ಅಲ್ಲದೆ ‘ಮಾದಿಗರು ವಿದ್ಯೆಗೆ ಲಾಯಕ್ಕಲ್ಲದ ಜನ’ ಎಂಬ ಧ್ವನಿಯಿದೆ. ಅಂದರೆ ಮಾದಿಗ ಸಮುದಾಯವನ್ನು ಸಾಮಾಜಿಕವಾಗಿ ಹೊರಗಿಡುವ ಉದ್ದೇಶ ಜಾತಿರೋಗದ ಮನಸ್ಸುಗಳಲ್ಲಿ ಹುದುಗಿರುವುದು ಅರಿವಿಗೆ ಬರುತ್ತದೆ. ಇಂತಹ ಮಾತುಗಳಿಂದ ದಲಿತ ಸಮುದಾಯವನ್ನು ನಿರಂತರವಾಗಿ ಅಪಮಾನಿಸುತ್ತ ಅವರನ್ನು ಮುಖ್ಯವಾಹಿನಿಯಿಂದ ಹೊರಗಿಡುತ್ತಲೇ ಬರಲಾಗಿದೆ. ಸದ್ಯ ಇಂತಹ ನಿಶೇಧದ ಆಟಗಳಿಗೆ ಪೆಟ್ಟು ಬಿದ್ದಿರುವುದರಿಂದ ಮೇಲ್ಜಾತಿಗಳು ಅಸಹನೆಯ ಕುಲುಮೆಯಲ್ಲಿ ಬೇಯುತ್ತಿವೆ.

ಇದಕ್ಕೆ ಎತ್ತುಗೆಯಾಗಿ ಇನ್ನಶ್ಟು ಗಾದೆಗಳನ್ನು ಇಲ್ಲಿ ನೀಡಬಹುದು. “ಹೊಲೆಯನ ಚಿನ್ನಕ್ಕೆ ತರಡೇ ಒರೆಗಲ್ಲು”, “ಹೊಲೆಯನ ಪಾಯಸ ಹಾರುವನಿಗೆ ಯಾಕೆ?”, “ಹೊಲೆಯನ ಇಶ್ಟ ಉಪ್ಪಿನಕಾಯಿಗೆ ಕೇಡು” ಎಂಬ ಈ ಗಾದೆಗಳು ಹೊಲೆಯ ಸಮುದಾಯದ ಬಗ್ಗೆ ಮೇಲ್ಜಾತಿಗಳಿಗೆ ಇರುವ ಸೊಕ್ಕಿನ ಭಾವ ಎಂತಹದೆಂಬುದು ಅರ್ಥವಾಗುತ್ತದೆ. ಅಲ್ಲದೆ ಆರ್ಥಿಕವಾಗಿ ದುರ್ಬಲವಾಗಿಸುವ ಸಮುದಾಯವನ್ನು ಅದೆಶ್ಟು ಹೀನವಾಗಿ ಅಪಮಾನಿಸಲಾಗುತ್ತಿದೆ ಎಂದೂ ತಿಳಿಯುತ್ತದೆ. ಇದನ್ನು ನಮ್ಮ ಸಾಮಾಜಿಕ ಸಾಂಸ್ಕೃತಿಕ ಸಂದರ್ಭದಲ್ಲಿಟ್ಟು ನೋಡಿದರೆ ಇವುಗಳ ಹಿಂದಿರುವ ಜಾತಿಗರ್ವ ಮತ್ತು ದ್ವೇಶದ ಮನೋಭಾವ ಸ್ಪಶ್ಟವಾಗುತ್ತದೆ. ಹೊಲೆಯ ಮತ್ತು ಮಾದಿಗ ಸಮುದಾಯಗಳಂತೆ ಅತ್ಯಂತ ತೀವ್ರ ವಾಗ್ದಾಳಿಗಳಿಗೆ ತುತ್ತಾಗಿರುವುದೆಂದರೆ ಮಹಿಳೆಯರು. ಅದಕ್ಕೆ ಈ ಕೆಳಗಿನ ಗಾದೆಗಳೇ ಎತ್ತುಗೆಗಳು.

ಹಗಲೆಲ್ಲಾ ಹಾದರ ಮಾಡಿ
ಇರುಳು ಗಂಡನ ತಲೆ ಹೇನು ಕುಕ್ಕಿದಳಂತೆ

ಹಾಗೇ ಕುಣಿಯುವ ಬಡ್ಡಿ
ಹರೆಯಕ್ಕೆ ಬಂದರೆ ಬಿಟ್ಟಾಳೆ?

ಹೆಣ್ಣು ಸೊಕ್ಕಿದರೆ ಮನೆಯಲ್ಲಿ ನಿಲ್ಲದು
ಎತ್ತು ಸೊಕ್ಕಿದರೆ ಹಟ್ಟಿಯಲ್ಲಿ ನಿಲ್ಲದು?

ಈ ಗಾದೆಗಳು ಹೆಣ್ಣಿಗೆ ನೈತಿಕತೆ ಮತ್ತು ಪಾತಿವ್ರತ್ಯದ ಪೋಶಾಕು ತೊಡಿಸಿ ಅದನ್ನು ಮೀರುವವರ ಮೇಲೆ ಇಂತಹ ವಾಗ್ದಾಳಿಗಳನ್ನು ನಡೆಸಲಾಗುತ್ತದೆ. ಆ ಮೂಲಕ ಮಹಿಳೆಯನ್ನು ನಿಯಂತ್ರಿಸುವ ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತದೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಇಂತಹ ಗಾದೆಗಳನ್ನು ಪುರುಶರು ರಚಿಸಿದ್ದಾರೆ ಎಂದಲ್ಲ. ಮಹಿಳೆಯರೇ ಇಂತಹ ಗಾದೆಗಳನ್ನು ಕಟ್ಟಿದ್ದಾರೆ ಮತ್ತು ಅವುಗಳನ್ನು ಬಳಸುವುದು ಇದೆ. ಅಂದರೆ ಇಂತಹ ಗಾದೆಗಳನ್ನು ಹೆಂಗಸರು ಇಲ್ಲವೇ ಗಂಡಸರು ಯಾರೇ ಸೃಶ್ಟಿಸಿದ್ದರೂ ಅವುಗಳ ಹಿಂದಿರುವ ಮನಸ್ಥಿತಿ(ಲೋಕದೃಶ್ಟಿ) ಮಾತ್ರ ಪುರುಶ ಪ್ರಧಾನ ಸಮಾಜದ ಮೌಲ್ಯಗಳ ನಿಲುಗನ್ನಡಿಗೆ ತಕ್ಕಹಾಗೆ ಇದೆ. ಮಹಿಳೆಯರ ಬಗೆಗೆ ಪೂರ್ವಗ್ರಹಪೀಡಿತವಾದ ಮನಸ್ಸು ಇಂತಹ ಗಾದೆಗಳನ್ನು ಹುಟ್ಟಿಸುವಲ್ಲಿ ಪ್ರಧಾನ ಪಾತ್ರವಹಿಸುತ್ತಿದೆ. ಇಂತಹ ಗಾದೆಗಳು ಬಳಕೆಯಾಗುವುದೇ ಮಹಿಳೆಯರನ್ನು ಹಣಿಯಲು ಎಂಬುದು ಮುಖ್ಯವಿಚಾರ.

ಇದನ್ನು ಓದಿ ಈ ದಿನ ಸಂಪಾದಕೀಯ | ಆಪರೇಷನ್‌ ಹಸ್ತದ ಚರ್ಚೆ: ನಿರ್ಲಜ್ಜ ರಾಜಕೀಯ ನಡೆಗಳು

ಇಲ್ಲಿ ಇನ್ನೊಂದು ವಿಚಾರವನ್ನು ಗಮನಿಸಬೇಕಿದೆ. ಅದೇನೆಂದರೆ ಮೇಲ್ಜಾತಿಗಳು ಯಾವಾಗಲೂ ಕೆಳಜಾತಿಗಳನ್ನು ಮಾತ್ರ ನಿಂದಿಸುತ್ತವೆ ಎಂದೇನಿಲ್ಲ. ಕೆಳಜಾತಿಗಳು ಮೇಲ್ಜಾತಿಗಳ ಮೇಲೆ ವಾಗ್ದಾಳಿ ನಡೆಸುವುದೂ ಇದೆ. ಅದಕ್ಕೆ ಸಾಕಶ್ಟು ಎತ್ತುಗೆಗಳು ಗಾದೆಗಳಲ್ಲಿ ದೊರೆಯುತ್ತವೆ.
ಹಸಿದ ಹಾರವನನ್ನು ತೊಡಗಬಾರದು
ಉಂಡ ತುರುಕನನ್ನು ತೊಡಗಬಾರದು

ಹಾರುವನಿಂದ ಊರು ಹಾಳು
ಏಡಿಯಿಂದ ಕೆರೆ ಹಾಳು

ಬಟ್ಟನಿಗೆ ಮಾನ ಕಡಿಮೆಯಾದರೂ
ಹೊಟ್ಟೆ ದೊಡ್ಡದು

ಬಟ್ಟ ಕೆಟ್ಟ ಕೂಳ ತಿಂದು
ನಿಟ್ಟುಸಿರು ಬಿಟ್ಟ
ಈ ಗಾದೆಗಳು ಸಮಾಜದ ವರ್ತನೆ ಏಕಮುಖವಾಗಿಲ್ಲದೆ ಬಹುಮುಖ ಹೊಂದಿರುವುದನ್ನು ಸೂಚಿಸುತ್ತದೆ. ಮೇಲ್ತುದಿಯಿಂದ ಮಾತ್ರವಲ್ಲದೆ ಕೆಳತುದಿಯಿಂದ ಮೇಲ್ಮುಖವಾಗಿ ದಾಳಿ ನಡೆಸಿರುವ ಉದಾಹರಣೆಗಳೂ ಇವೆ. ಅಂದರೆ ಎಲ್ಲ ಜಾತಿ ಸಮುದಾಯಗಳು ತಮ್ಮ ನೆರೆಹೊರೆಯಲ್ಲಿ ಜೀವಿಸುವ ಪರಸ್ಪರರ ಜಾತಿಸೂಚಕಗಳನ್ನು ಆಧರಿಸಿ ನಿಂದಿಸುವುದು ಟೀಕಿಸುವುದು ದಾಳಿ ಮಾಡುವುದು ನಡೆದಿದೆ.

ಹಾಗಾಗಿ ಎಲ್ಲ ಜಾತಿಗಳು ತಮ್ಮ ನೆರೆಹೊರೆಯಲ್ಲಿದ್ದ ಇತರೆ ಜಾತಿಗಳನ್ನು ಅವುಗಳ ಜಾತಿ ಆಧರಿಸಿ ವಿಡಂಬಿಸಿವೆ. ಗೇಲಿ ಮಾಡಿವೆ. ಯಾಕೆಂದರೆ ನಮ್ಮ ಸಮಾಜ ಜಾತಿಯನ್ನು ಒಂದು ಸಾಂಸ್ಕೃತಿಕ ಅಸ್ಮಿತೆಯಾಗಿ, ಲೋಕದೃಶ್ಟಿಯಾಗಿ ಪರಿಗಣಿಸಿ ಅದನ್ನು ಆಚರಿಸುತ್ತ ಬರುತ್ತಿದೆ. ಇಂತಹ ಲೋಕದೃಶ್ಟಿಯ ಪರಿಣಾಮವಾಗಿ ಸಹಮಾನವರನ್ನು ಜಾತಿಕಣ್ಣುಗಳಿಂದ ಗ್ರಹಿಸುವುದು ಸಹಜವಿವೇಕವಾಗಿಬಿಟ್ಟಿದೆ. ಅದನ್ನು ತಾತ್ವೀಕರಿಸಿರುವ ಗಾದೆಗಳು ಇವೆ. ಎತ್ತುಗೆಗೆ, “ಕುಲಕ್ಕೆ ತಕ್ಕ ಬುದ್ಧಿ ಆಹಾರಕ್ಕೆ ತಕ್ಕ ಲದ್ದಿ”, “ಕುಲವನ್ನು ನಾಲಿಗೆ ಹೇಳುವುದು”, “ಕುಲಪ್ರಮಾಣ ನಾಲಿಗೆ; ಜಲಪ್ರಮಾಣ ತಾವರೆ” ಎಂಬ ಮಾತುಗಳಲ್ಲಿ ಈ ಲೋಕದೃಶ್ಟಿಯಿದೆ. ಇಲ್ಲಿ ಕುಲಕ್ಕೂ(ಜಾತಿ) ಬುದ್ಧಿಗೂ ಮತ್ತು ನುಡಿಗೂ ಸಂಬಂಧ ಕಲ್ಪಿಸಿ ಮೇಲ್ಜಾತಿಗಳಿಗೆ ಬುದ್ಧಿ ಶ್ರೇಶ್ಟವಾಗಿದ್ದು ಕೆಳಜಾತಿಗಳಿಗೆ ಬುದ್ಧಿ ನಿಕೃಶ್ಟವಾಗಿರುತ್ತದೆ; ಹಾಗೆಯೇ ಕೆಳಜಾತಿಗಳ ನುಡಿಯೂ ಕೀಳಾಗಿರುತ್ತದೆ ಎಂಬ ಧೋರಣೆ ಇರುವುದು ಸ್ಪಶ್ಟವಾಗುತ್ತದೆ. ಹಾಗಾಗಿ ಇಲ್ಲಿ ಅದು ಕೆಲವರಿಗೆ ಶ್ರೇಶ್ಟತೆಯ ಸ್ಥಾನವನ್ನು ಇನ್ನು ಕೆಲವರಿಗೆ ಅಧೀನ ಸ್ಥಾನವನ್ನೂ ನೀಡಿದೆ. ಇಂತಹ ಶ್ರೇಶ್ಟ ಮತ್ತು ಅಧೀನತೆಗಳ ನೆಲೆಗಳಲ್ಲಿದ್ದೇ ಎಲ್ಲ ಜಾತಿಗಳು ಪರಸ್ಪರರನ್ನು ಟೀಕಿಸುವ ವಿಡಂಬಿಸುವ ಕೆಲಸ ಮಾಡಿವೆ. “ಕುಲಗೇಡಿಯ ಕೂಡೆ ಸರಸವೇ” ಎಂಬ ಮಾತಿನಲ್ಲಿ ಇದು ಇನ್ನಶ್ಟು ನಿಚ್ಚಳವಾಗಿ ಕಾಣಿಸುತ್ತದೆ. ಆದ್ದರಿಂದ ಕೆಳಜಾತಿಗಳೂ ತಮಗಿಂತ ಮೇಲಿರುವ ಜಾತಿಗಳನ್ನು ಎದುರುಗೊಳ್ಳುವ ಜಾತಿ ಸೂಚಕದ ಮೂಲಕವೇ ಎದುರುಗೊಳ್ಳುತ್ತವೆ. ಹಾಗಾಗಿ ಗಾದೆಗಳನ್ನು ಏಕಮುಖವಾಗಿ ಪರಿಗಣಿಸದೆ ಅವುಗಳನ್ನು ನಮ್ಮ ಸಾಮಾಜಿಕ ವ್ಯವಸ್ಥೆಯ ಉತ್ಪನ್ನಗಳಾಗಿ ನೋಡಬೇಕಾಗುತ್ತದೆ. ಜಾತಿ ಸಮಾಜದ ಅನುಭವ, ಮನಸ್ಸು ಮತ್ತು ಲೋಕದೃಶ್ಟಿಗಳು ವಿಕಾಸಗೊಂಡಿರುವ ಕ್ರಮದಲ್ಲಿಯೇ ಈ ಸಮಸ್ಯೆಯಿದೆ. ಆದಕಾರಣ ಇದೊಂದು ಸಂಕೀರ್ಣ ವ್ಯವಸ್ಥೆಯಾಗಿದ್ದು ಇಲ್ಲಿ ತಳಸ್ತರದಲ್ಲಿರುವ ಸಮುದಾಯಗಳ ಸ್ಥಿತಿ ಮಾತ್ರ ಅತ್ಯಂತ ದಾರುಣವಾಗಿರುತ್ತದೆ. ಯಾಕೆಂದರೆ ಅಂತಿಮವಾಗಿ ಸಮುದಾಯಗಳ ಸ್ಥಾನಮಾನ ನಿರ್ಣಯಗೊಳ್ಳುವುದು ಜಾತಿಯ ಆಧಾರದ ಮೂಲಕವೇ ಆಗಿರುವುದರಿಂದ ತಳಸಮುದಾಯಗಳು ಮೇಲ್ಜಾತಿಗಳ ದಬ್ಬಾಳಿಕೆಗಳಿಂದ ನಲುಗುಬೇಕಾಗುತ್ತದೆ.

ಇದನ್ನು ಓದಿರಾಯಚೂರು | ಧ್ವಜಾರೋಹಣದಲ್ಲಿ ಅಂಬೇಡ್ಕರ್‌ ಭಾವಚಿತ್ರ ಇಡದೆ ಅವಮಾನ; ವಿಷಾಧಿಸಿದ ಪೌರಾಯುಕ್ತ

ನಮ್ಮ ದೇಶದ ಶ್ರೇಣೀಕೃತ ಸಮಾಜದಲ್ಲಿನ ಇತರೆ ಜಡಸಂಸ್ಥೆಗಳಂತೆ ಗಾದೆಗಳು ಕೂಡ ಸಾಂಸ್ಥಿಕ ರೂಪ ಧರಿಸಿವೆ. ಅವು ಜಡತ್ವವನ್ನು ಹೊಂದಿವೆ. ಗಾದೆಗಳು ಜಾತಿ ಮತ್ತು ಲಿಂಗತ್ವವನ್ನು ವೈರುಧ್ಯದ ಮತ್ತು ಶತ್ರುತ್ವದ ನೆಲೆಯಲ್ಲಿ ನೋಡುವುದೇ ಹೆಚ್ಚು. ಬಲಿಶ್ಟ ಜಾತಿಗಳು ತಮಗಿಂತ ಕೆಳಗಿರುವ ಜಾತಿಗಳನ್ನು ನಿಕೃಶ್ಟಗೊಳಿಸಿ ನೋಡುವುದು ನಿಚ್ಚಳವಾಗಿ ಕಾಣಿಸುತ್ತದೆ. ಹಾಗೆಯೇ ಪಿತೃಪ್ರಧಾನ ಸಮಾಜದಲ್ಲಿ ಹೆಣ್ಣನ್ನು ಗಂಡಿಗೆ ಅಧೀನಗೊಳಿಸಿ ಆಕೆಯ ವ್ಯಕ್ತಿತ್ವವನ್ನು ನಾಶಗೊಳಿಸಿ ಅಪಮಾನಿಸುವುದೇ ಇಲ್ಲಿನ ಆಶಯವಾಗಿರುತ್ತದೆ. ಹೆಣ್ಣಿಗೆ ಪಿತೃಪ್ರಧಾನ ಸಮಾಜದ ನೈತಿಕ ಮೌಲ್ಯಗಳನ್ನು ಆರೋಪಿಸಿ ಅದನ್ನು ಮೀರುವ ಎಲ್ಲ ಹೆಣ್ಣುಗಳನ್ನು ನಿಕೃಶ್ಟವಾಗಿ ಕಾಣುವ ಬಗೆ ನಮ್ಮ ಸಮಾಜದಲ್ಲಿದೆ. ಹೀಗೆ ಕಂಡಿರುವುದಕ್ಕೆ ಅನೇಕ ಗಾದೆಗಳನ್ನು ಎತ್ತುಗೆಯಾಗಿ ನೀಡಬಹುದು. ಗಾದೆಗಳ ಜೊತೆಗೆ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುವ ಇತರೆ ನುಡಿ ರಚನೆಗಳೆಂದರೆ ಬೈಗುಳಗಳು. ಬೈಗುಳಗಳ ಮುಖ್ಯ ಉದ್ದೇಶವೇ ನಿಂದನೆ. ತಮ್ಮ ಎದುರಾಳಿಗಳ ಮೇಲೆ ವಾಗ್ದಾಳಿ ನಡೆಸುವ ಮೂಲಕ ಅವರನ್ನು ಮಾನಸಿಕವಾಗಿ ಕುಗ್ಗಿಸಲು ಯತ್ನಿಸಲಾಗುತ್ತದೆ. ಅದಕ್ಕೆ ಅತ್ಯಂತ ಪರಿಣಾಮಕಾರಿಯಾಗಿ ತಮ್ಮ ಉದ್ದೇಶ ಈಡೇರಿಸಿಕೊಳ್ಳಲು ನಿಂದನಾತ್ಮಕ ನುಡಿಯನ್ನು ಬಳಸಲಾಗುತ್ತದೆ.

ಆದರೆ ಇಂದು ಕಾಲ ಬದಲಾಗಿದೆ. ಅಸ್ಪೃಶ್ಯತೆಯನ್ನು ಕಾನೂನಾತ್ಮಕವಾಗಿ ನಿಶೇಧಿಸಲಾಗಿದೆ. ಹೆಣ್ಣನ್ನು ಸಬಲೀಕರಣಗೊಳಿಸಲು ಅನೇಕ ಕಾನೂನುಗಳು ಜಾರಿಗೆ ಬಂದಿವೆ. ಆಕೆಯ ರಕ್ಶಣೆಗೆ ಕಾಯ್ದೆಗಳು ರಚನೆಯಾಗಿವೆ. ಸಂವಿಧಾನದ ಬೆಳಕಿನ ಹಾದಿಯಲ್ಲಿ ನಡೆಯಲಾಗುತ್ತಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಂಗೋಪಿಸುವ ಕಾಲ ಇದಾಗಿದೆ. ಫ್ಯೂಡಲ್ ಸಮಾಜದ ಮೌಲ್ಯಗಳು ಮರೆಗೆ ಸರಿಯುತ್ತಿದ್ದು ಪ್ರಜಾಪ್ರಭುತ್ವದ ಮೌಲ್ಯಗಳು ಚಿಗುರೊಡೆದಿವೆ. ಹೊಸ ಮನುಶ್ಯರ ಸಮಾಜದ ಕನಸು ಮೂಡಿವೆ. ಹೊಸಕಾಲದ ಕಡೆಗೆ ಹೆಜ್ಜೆ ಹಾಕುವ ಮಾತುಗಳು ಎಲ್ಲಡೆ ಕೇಳಿ ಬರುತ್ತಿವೆ. ಇಂತಹ ಹೊತ್ತಿನಲ್ಲಿ ಹೊಸಕಾಲಕ್ಕೆ, ಹೊಸ ಸಮಾಜಕ್ಕೇ, ಹೊಸದೇ ಭಾಶೆಯನ್ನು ಕಟ್ಟಿಕೊಳ್ಳುವ ಅಗತ್ಯವಿದೆ. ಇದಕ್ಕೆ ಹೊಸ ಲೋಕದೃಶ್ಟಿಯನ್ನು ನುಡಿಯನ್ನು ಕಟ್ಟಿಕೊಳ್ಳಬೇಕಿದೆ. ಫ್ಯೂಡಲ್ ಸಮಾಜದ ರಚನೆಗಳಾದ ಗಾದೆಗಳಲ್ಲಿ ಬಹುತೇಕವು ಔಟ್‍ ಡೇಟೆಡ್ ಆಗಿ ಎಕ್ಸ್‌ಪೈರ್ ಆಗಿವೆ. ಅವು ಅರ್ಥ ಕಳೆದುಕೊಂಡಿವೆ. ಅನೇಕ ಗಾದೆಗಳನ್ನು ಇಂದು ಬಳಸುವುದು ಅಮಾನವೀಯವಾದ ನಡೆಯಾಗಿರುತ್ತದೆ. ಹಾಗಾಗಿ ಗಾದೆಗಳನ್ನು ಇಂದು ಬೇಕಾಬಿಟ್ಟಿಯಾಗಿ ಬಳಸಬಾರದು. ಅವುಗಳನ್ನು ಬಳಸುವಾಗ ಎಚ್ಚರದಿಂದಿದ್ದು ಅವುಗಳ ಸಾಮಾಜಿಕ ಪರಿಣಾಮಗಳೇನು ಎಂಬುದನ್ನು ಅರಿತೇ ಅವನ್ನು ಬಳಸಬೇಕು. ಹೆಣ್ಣು, ಜಾತಿ, ಆಹಾರ, ಧರ್ಮಗಳು ಮತ್ತು ಕಸುಬುಗಳನ್ನು ಕುರಿತ ಗಾದೆಗಳನ್ನು ಬಳಸುವಾಗಲಂತೂ ಅತ್ಯಂತ ಎಚ್ಚರವಿರಬೇಕು. ಜವಾಬ್ದಾರಿ ಇರಬೇಕು. ಯಾವುದೇ ಬಗೆಯ ನಿಂದನಾತ್ಮಕವಾದ, ಮತ್ತೊಬ್ಬರನ್ನು ಅಪಮಾನಿಸುವ ಗಾದೆಗಳನ್ನು ಬಳಸಬಾರದು.

(ಈ ಬರಹ ಎಲ್ಲರ ಕನ್ನಡದಲ್ಲಿದೆ)

ರಂಗನಾಥ ಕಂಟನಕುಂಟೆ
+ posts

ಲೇಖಕ, ಕನ್ನಡ ಪ್ರಾಧ್ಯಾಪಕ

ಪೋಸ್ಟ್ ಹಂಚಿಕೊಳ್ಳಿ:

ರಂಗನಾಥ ಕಂಟನಕುಂಟೆ
ರಂಗನಾಥ ಕಂಟನಕುಂಟೆ
ಲೇಖಕ, ಕನ್ನಡ ಪ್ರಾಧ್ಯಾಪಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊಸಕಾಲದ ವಿಕೃತಿ | ಹೆಣ್ಣನ್ನು ಅವಮಾನಿಸುವ ವೇದಿಕೆಯಾಗುತ್ತಿದೆಯೇ ಸಾಮಾಜಿಕ ಜಾಲತಾಣ?

ಇತ್ತೀಚಿನ ದಿನಗಳಲ್ಲಿ ಬಹುತೇಕರು ಸಾಮಾಜಿಕ ಜಾಲತಾಣಕ್ಕೆ ಒಗ್ಗಿ ಹೋಗಿದ್ದಾರೆ. ಏನೇ ವೈಯಕ್ತಿಕ...

ರೈತ ಮತ್ತು ನೀರು: ಸಮತೋಲನ ಹೇಗೆ?

ಡಾ. ಬಿ.ಆರ್. ಅಂಬೇಡ್ಕರ್ ಅವರು ನದಿ ನೀರು ರೈಲ್ವೆಯಂತೆ ರಾಷ್ಟ್ರೀಕರಣಗೊಳ್ಳಬೇಕು ಎಂದು...

ಅವಲೋಕನ | ‘ಹಿಂದು ರಾಷ್ಟ್ರದೆಡೆಗೆ ಹಿಂಸೆಯ ಹೆಜ್ಜೆಗಳು’; ದೇಶದ ಆರ್ಥಿಕತೆಯ ನಿಜ ದರ್ಶನ ಮಾಡಿಸುವ ಕೃತಿ

ಇತ್ತೀಚೆಗೆ ಬಿಡುಗಡೆಯಾದ ಗ್ರಾಮೀಣಾಭಿವೃದ್ಧಿ ತಜ್ಞೆ ಲತಾಮಾಲ ಅವರ ‘ಹಿಂದು ರಾಷ್ಟ್ರದೆಡೆಗೆ ಹಿಂಸೆಯ...

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದ ಹೈದರಾಬಾದ್ ಮೆಟ್ರೋ ನಷ್ಟದಲ್ಲಿದೆ ಎಂಬ ಎಲ್&ಟಿ ವಾದ ನಿಜವೇ?

ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ 2017ರಲ್ಲಿ ಆರಂಭವಾದ ಮೆಟ್ರೋ ಸೇವೆ ಪ್ರಸ್ತುತ ದೇಶದ...