- ಹೆಲಿಪ್ಯಾಡ್‌ನಲ್ಲೇ ಬಿ ಫಾರಂ ವಿತರಣೆ ಮಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ
- ಮೈಸೂರಿನ ಚಾಮರಾಜ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಘೋಷಣೆ ಮಾಡಿದ ಎಚ್‌ಡಿಕೆ
ಕರುನಾಡ ರಾಜಕೀಯ ಅಖಾಡದಲ್ಲಿ ಚುನಾವಣಾ ಕಾವು ಏರತೊಡಗಿದೆ, ನಾಮಪತ್ರಸಲ್ಲಿಕೆಗೆ ಕಡೆಯ ದಿನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷಗಳೊಳಗೆ ಅಭ್ಯರ್ಥಿಗಳ ಬಿ ಫಾರಂ ಪಡೆಯುವ ಪ್ರಕ್ರಿಯೆಯೂ ಬಿರುಸಾಗುತ್ತಿದೆ.
ಮತ್ತೊಂದು ಕಡೆ ಪಕ್ಷಾಂತರ ಪರ್ವವೂ ಜೋರಾಗಿರುವ ಹಿನ್ನೆಲೆಯಲ್ಲಿ ತಮಗೆ ಅನುಕೂವಾಗುವ ಅಭ್ಯರ್ಥಿಗಳ ಆಯ್ಕೆಗೂ ಪಕ್ಷದ ಮುಖಂಡರು ಒಲವು ತೋರುತ್ತಿದ್ದಾರೆ.
ಇಂತಹದ್ದೊಂದು ಸನ್ನಿವೇಶ ಆಧಾರಿತ ರಾಜಕಾರಣಕ್ಕೆ ಜೆಡಿಎಸ್ ಸಾಕ್ಷಿಯಾಗಿದೆ. ಮೈಸೂರಿನ ಚಾಮರಾಜ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಘೋಷಣೆ ಮಾಡಿದ ಎಚ್ ಡಿ ಕುಮಾರಸ್ವಾಮಿ, ತಮ್ಮ ಅಭ್ಯರ್ಥಿಗೆ ಎಚ್ ಡಿ ಕೋಟೆಯ ಹೆಲಿಪ್ಯಾಡ್‌ನಲ್ಲಿಯೇ ಉಮೇದುವಾರಿಕೆ ಪತ್ರ ನೀಡಿದ್ದಾರೆ.
ಹೀಗೆ ತುರ್ತು ಉಮೇದುವಾರಿಕೆ ಪತ್ರ ಪಡೆದುಕೊಂಡವರು ಮಾಜಿ ಶಾಸಕ ಕೆಂಪೇಗೌಡ ಪುತ್ರ ಎಚ್.ಕೆ ರಮೇಶ್. ಸ್ಥಳೀಯ ವಲಯದಲ್ಲಿ ಪೆಟ್ರೋಲ್ ಬಂಕ್ ರವಿ ಎಂದೇ ಗುರುತಿಸಿಕೊಂಡಿದ್ದ ರಮೇಶ್, ಜೆಡಿಎಸ್ ಹುರಿಯಾಳಾಗಿ ಚಾಮರಾಜ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಈ ಸುದ್ದಿ ಓದಿದ್ದೀರಾ? : ಕಟ್ಟಿ ಬೆಳೆಸಿದ ಪಕ್ಷಕ್ಕೆ ರಾಜೀನಾಮೆ ನೀಡಲು ನೋವಾಗುತ್ತಿದೆ ;…
ಪಕ್ಷದ ಅಭ್ಯರ್ಥಿ ರವಿ ಅವರು ಜೆಡಿಎಸ್ ಹಿರಿಯ ನಾಯಕ ಜಿ.ಟಿ ದೇವೇಗೌಡ ಜೊತೆ ಎಚ್.ಡಿ ಕೋಟೆಯಲ್ಲಿದ್ದ ಜೆಡಿಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದರು. ಈ ವೇಳೆ ಹೆಲಿಪ್ಯಾಡ್ ಬಳಿ ಎಚ್.ಡಿ ಕುಮಾರಸ್ವಾಮಿಯವರನ್ನು ರವಿ ಭೇಟಿಯಾದರು. ಅಲ್ಲಿಯೇ ರವಿ ಅವರನ್ನು ಚಾಮರಾಜ ಕ್ಷೇತ್ರ ಅಭ್ಯರ್ಥಿ ಎಂದು ಘೋಷಣೆ ಮಾಡಿದ ಕುಮಾರಸ್ವಾಮಿ, ತಾತ್ಕಾಲಿಕ ಉಮೇದುವಾರಿಕೆ ಪತ್ರ ನೀಡಿ ಕಳುಹಿಸಿದರು.