ನಗರದಲ್ಲಿ ಎಐಡಿಎಸ್ಓ ಹಾಗೂ ಎಐಡಿವೈಓ ಸಂಘಟನೆಗಳ ವತಿಯಿಂದ ಕ್ರಾಂತಿಕಾರಿ ಭಗತ್ ಸಿಂಗ್ ರ 116ನೇ ಜನ್ಮ ದಿನ ಕಾರ್ಯಕ್ರಮವನ್ನು ಸಂಘಟಿಸಲಾಗಿತ್ತು. ಅಂಬೇಡ್ಕರ್ ಉದ್ಯಾನವನದಲ್ಲಿ ಸೇರಿದ್ದ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಕ್ರಾಂತಿಕಾರಿಗೆ ತಮ್ಮ ಗೌರವ ನಮನಗಳನ್ನು ಸಲ್ಲಿಸಿ, ಅವರ ಕನಸಿನ ಭಾರತಕಟ್ಟುವ ಸಂಕಲ್ಪ ಮಾಡಿದರು.
ಎಐಡಿಎಸ್ಓ ಜಿಲ್ಲಾ ಸಂಚಾಲಕ ಮಹಾಂತೇಶ ಬಿಳೂರ್ ಭಗತ್ ಸಿಂಗರ ಜೀವನ ಮತ್ತು ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಸೆಪ್ಟೆಂಬರ್ 28 , 1907ರಂದು ಪಂಜಾಬಿ ಭಂಗಾ ಎಂಬಲ್ಲಿ ಅವರು ಜನಿಸಿದರು. ಅವರ ತಂದೆ, ಚಿಕ್ಕಪ್ಪ ಸೇರಿದಂತೆ ಇಡೀ ಕುಟುಂಬವು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿತ್ತು. ಭಗತ್ ಸಿಂಗ್ ರಿಗೆ ಸ್ಪೂರ್ತಿಯಾದ ಕರ್ತಾರ್ ಸಿಂಗ್ ಸರಾಬಾ ಸೇರಿದಂತೆ, ಅಂದಿನ ನಾಯಕ ವಿಚಾರಗಳಿಂದ ಪ್ರಭಾವಿತರಾಗಿದ್ದರು. ಅಂತಹ ವಾತಾವರಣದಲ್ಲಿ ಬೆಳೆದ ಅವರಲ್ಲಿ ಬಾಲ್ಯದಿಂದ ದೇಶದ ಸ್ವಾತಂತ್ರ್ಯ ಚಳುವಳಿಯ ಬಗ್ಗೆ ಒಲವು ಬೆಳೆದಿತ್ತು.
ಜಲಿಯನ್ ವಾಲಾಭಾಗ ನರಮೇಧದಿಂದ ಬಾಲಕ ಭಗತ್ ತೀವ್ರ ಆಘಾತಕ್ಕೊಳಗಾಗಿದ್ದರು. ತಮ್ಮ 13ನೇ ವಯಸ್ಸಿನಲ್ಲೇ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದರು. ಹೋರಾಟವನ್ನು ಹಿಂಪಡೆದ ಗಾಂಧೀಜಿಯವರ ವಿಚಾರದಿಂದ ಬೇಸರಗೊಂಡರು.
ಹೊಸ ವಿಚಾರದ ಹುಡುಕಾಟದಲ್ಲಿ ಎಚ್ಆರ್ಎ ಎಂಬ ಕ್ರಾಂತಿಕಾರಿ ಸಂಘಟನೆ ಸೇರಿದರು. ಹಿಂಸೆಯಿಂದಲೇ ಸ್ಥಾಪನೆಗೊಂಡಿರುವ ಬ್ರಿಟಿಷ್ ಸಾಮ್ರಾಜ್ಯವನ್ನು ತೊಲಗಿಸಲು, ಗಾಂಧೀಜಿಯವರ ಅಹಿಂಸಾ ಮಾರ್ಗವು ಅಸಮರ್ಥ ಮತ್ತು ಅವೈಜ್ಞಾನಿಕವಾಗಿದೆ. ಹೀಗಾಗಿ, ಸ್ವಾತಂತ್ರ್ಯ ಸಾಧನೆಯಲ್ಲಿ ಹಿಂಸೆಯು ಅನಿವಾರ್ಯ ಎಂದು ಅವರು ನಂಬಿಕೊಂಡಿದ್ದರು. ಕೇವಲ ಬ್ರಿಟಿಷರನ್ನು ದೇಶದಿಂದ ಓಡಿಸುವುದಷ್ಟೇ ಸ್ವಾತಂತ್ರ್ಯದ ಉದ್ದೇಶವಲ್ಲ. ಬದಲಿಗೆ, ರೈತ ಕಾರ್ಮಿಕರನ್ನು ಸಂಘಟಿಸಿ ರಾಜಿರಹಿತ ಸಂಘರ್ಷದ ಮೂಲಕ ಕ್ರಾಂತಿಯನ್ನು ನೆರವೇರಿಸಬೇಕು. ದೇಶದ ಸಂಪತ್ತಿನ ಮೇಲೆ ದುಡಿಯುವ ಜನರ ಅಧಿಪತ್ಯವನ್ನು ಸ್ಥಾಪಿಸಬೇಕು. ಈ ಪ್ರಕ್ರಿಯೆಯಲ್ಲಿ ಅಡ್ಡಿಯಾಗಿರುವ ಜಾತಿ-ಧರ್ಮಗಳನ್ನು ಹೋರಾಟದಲ್ಲಿ ಬೆರೆಸದೆ ಸಮಾನತೆಯ ಭಾವದೊಂದಿಗೆ ಹೋರಾಟವನ್ನು ಬಲಪಡಿಸಬೇಕು ಎಂಬುದು ಅವರ ವಿಚಾರವಾಗಿತ್ತು.
ಪ್ರತಿದಿನ ಸಾವಿರಾರು ಮಕ್ಕಳು ಹಸಿವೆಯಿಂದ ಸತ್ತರೆ, 20 ನಿಮಿಷಕ್ಕೊಬ್ಬ ರೈತನ ಆತ್ಮಹತ್ಯೆ, ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ, ಮುಂತಾದವುಗಳು ಜನರ ಬದುಕನ್ನು ನರಕ ಸದೃಶವಾಗಿಸಿವೆ. ಇಂತಹ ಪರಿಸ್ಥಿತಿಯಲ್ಲಿ ಭಗತ್ ಸಿಂಗರಿಗೆ ವಿದ್ಯಾರ್ಥಿಗಳು ಕೊಡುವ ನಿಜವಾದ ಗೌರವವೆಂದರೆ, ಇಂದಿನ ಪರಿಸ್ಥಿತಿಯ ವಿರುದ್ಧ ಬಲಿಷ್ಠ ಹೋರಾಟಗಳನ್ನು ಕಟ್ಟಿ ಭಗತ್ ಸಿಂಗ್ ಕನಸು ಕಂಡಂತ ಸಮಾಜವಾದವನ್ನು ಸ್ಥಾಪಿಸುವುದು. ಮಾನವನಿಂದ ಮಾನವನ ಶೋಷಣೆಯನ್ನು ಕೊನೆಗಾಣಿಸಿ, ಎಲ್ಲ ಮನುಷ್ಯರು ಸಮಾನರಾಗಿ ತಲೆಯೆತ್ತಿ ಘನತೆಯೊಂದಿಗೆ ಜೀವಿಸುವ ಸಮಾಜವಾದಿ ಭಾರತವನ್ನು ಕಟ್ಟುವ ಜವಾಬ್ದಾರಿ ಇಂದಿನ ವಿದ್ಯಾರ್ಥಿಗಳ ಮೇಲಿದೆ ಎಂದು ಹೇಳಿದರು.
ಎಐಡಿವೈಓನ ಜಿಲ್ಲಾ ಸಂಚಾಲಕರಾದ ರಾಜು ಗಾಣಗಿ, ಜಿಲ್ಲಾ ಸಂಘಟಕಿಯಾದ ಮೇಘಾ ಗುಳ್ಳನ್ನವರ್ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕರ್ತರಾದ ಎಲ್ಲುಕಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕರ್ತರಾದ ಅಕ್ಷತಾ ತಳವಾರ, ಯಶವಂತ್ ಭಜಂತ್ರಿ, ಸುಮಿತ್ರಾ ಸೇರಿದಂತೆ ವಿವಿಧ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.