ಎಲೆಕ್ಷನ್ ಅಖಾಡದಲ್ಲಿ ದಾಖಲಾದ ಎರಡು ಹೆಲಿಕಾಪ್ಟರ್ ದುರಂತದ ಘಟನೆಗಳು ವಿಲಾಸಿ ಪ್ರಚಾರದ ಹಿಂದಿನ ಆತಂಕವನ್ನು ಹೊರ ಹಾಕಿದ್ದರ ಜೊತೆಗೆ ಹಿಂದಿನ ಕರಾಳ ಅಧ್ಯಾಯವೊಂದರ ಪುಟ ತೆರೆದು ನೋಡುವಂತೆ ಮಾಡಿವೆ.
ರಾಜ್ಯ ರಾಜಕೀಯದ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಪ್ರತಿ ಕ್ಷೇತ್ರದ ಪ್ರಚಾರ ಕಣದಲ್ಲೂ ವಾಕ್ಸಮರದ ಕಾವು ಮುಗಿಲು ಮುಟ್ಟಿದೆ. ಬಸ್ಸು, ಕಾರುಗಳು ಓಡಾಡದ ಊರಿನಲ್ಲೂ ಹೆಲಿಕಾಪ್ಟರ್ ಸದ್ದು ಆರ್ಭಟಿಸುತ್ತಿದೆ. ಎಂದೂ ಕಾಣದ ಪ್ರಸಿದ್ದರು ಪುಟ್ಟ ಪಟ್ಟಣಗಳನ್ನು ಎಡತಾಕಿ ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.
ಹೀಗೆ ಗಿಜಿಗುಡುತ್ತಿರುವ ಚುನಾವಣಾ ಪ್ರಚಾರದ ಅಂಕಣದೊಳಗೆ ಸಿನೆಮಾ ನಟರೂ ಮತಭಿಕ್ಷೆಗೆ ಬಂದು ಜನರತ್ತ ಕೈ ಬೀಸುವ ಮೂಲಕ ವಾತಾವರಣವನ್ನು ಇನ್ನಷ್ಟು ರಂಗೇರುವಂತೆ ಮಾಡುತ್ತಿದ್ದಾರೆ.
ಹೀಗಿರುವ ಎಲೆಕ್ಷನ್ ಅಖಾಡಲ್ಲಿ ಮೇ 2ರಂದು ದಾಖಲಾದ ಎರಡು ಘಟನೆಗಳು ವಿಲಾಸಿ ಪ್ರಚಾರದ ಹಿಂದಿನ ಆತಂಕವನ್ನು ಹೊರ ಹಾಕಿದ್ದರ ಜೊತೆಗೆ ಹಿಂದಿನ ಕರಾಳ ಅಧ್ಯಾಯವೊಂದರ ಪುಟ ತೆರೆದು ನೋಡುವಂತೆ ಮಾಡಿವೆ.
ಘಟನೆ 1
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಂಗಳವಾರ ಚುನಾವಣಾ ಪ್ರಚಾರದ ಸಂಬಂಧ ಮುಳಬಾಗಿಲಿಗೆ ಹೆಲಿಕಾಪ್ಟರ್‌ನಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ಖಾಸಗಿ ಮಾಧ್ಯಮವೊಂದಕ್ಕೆ ಅವರು ಸಂದರ್ಶನ ನೀಡುತ್ತಿದ್ದರು.
ಹೀಗೆ ಹೊಸಕೋಟೆ ಸಮೀಪದಲ್ಲಿ ಹಾರುತ್ತಿದ್ದ ಹೆಲಿಕಾಪ್ಟರ್‌ಗೆ ಏಕಾಏಕಿ ಹದ್ದೊಂದು ಬಂದು ಬಡಿದ ಪರಿಣಾಮ ಅದರ ಗಾಜು ಪುಡಿಯಾಗಿತ್ತು. ಕೆಲ ಕಾಲ ಅಲ್ಲಿ ಆತಂಕದ ವಾತಾವರಣ ನಿರ್ಮಾಣ ಆಗಿತ್ತು.
ಧೈರ್ಯಶಾಲಿ ಪೈಲಟ್ ಹೆಲಿಕಾಪ್ಟರ್ ಅನ್ನು ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ತಂದು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದ. ಈ ಘಟನೆ ದಾಖಲಾದ ಸಂದರ್ಭದಲ್ಲಿ ಒಳಗಿದ್ದ ಡಿಕೆಶಿ ಹಾಗೂ ಪತ್ರಕರ್ತನ ಮುಖಭಾವ ನೋಡಿದವರಿಗೆ ಮುಂದಿನ ಆತಂಕಕಾರಿ ಸನ್ನಿವೇಶದ ಪೂರ್ಣ ಚಿತ್ರ ದಾಖಲಾಗಿತ್ತು.
ಘಟನೆ 2
ರಾಯಚೂರಿನಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರ ಕಾರ್ಯಕ್ರಮವಿತ್ತು. ಇಲ್ಲಿಗೆ ಮೋದಿ ಹೆಲಿಕಾಪ್ಟರ್ ಮೂಲಕವೇ ಆಗಮಿಸಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು. ಸಂಜೆ ಅವರು ಕಲಬುರ್ಗಿಗೆ ತೆರಳಿ ಅಲ್ಲೂ ಚುನಾವಣಾ ಪ್ರಚಾರ ಕಾರ್ಯ ನಡೆಸಬೇಕಿತ್ತು.
ಆದರೆ ಮೋದಿಯವರ ಕಲಬುರ್ಗಿ ಕಾರ್ಯಕ್ರಮ ಕೆಲ ಕಾಲ ತಡವಾಗಿ ಆರಂಭವಾಗುವಂತಾಯ್ತು. ಇದಕ್ಕೆ ಕಾರಣವಾಗಿದ್ದು, ಕೆಸರು ಗದ್ದೆಯಲ್ಲಿ ಹೂತು ಹೋದ ಹೆಲಿಕಾಪ್ಟರ್.
ಮೋದಿ ಕಾರ್ಯಕ್ರಮದ ಸಲುವಾಗಿ ಸಿಂಧನೂರಿನ ಹೊಸಳ್ಳಿ ಕ್ಯಾಂಪ್‌ನ ಭತ್ತದ ಗದ್ದೆಯಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗಿತ್ತು. ನರೇಂದ್ರ ಮೋದಿ ಬೆಂಗಾವಲು ಹೆಲಿಕಾಪ್ಟರ್ ಇಲ್ಲಿ ಲ್ಯಾಂಡ್ ಆಗಿತ್ತು. ದುರಂತದ ವಿಚಾರ ಏನಂದ್ರೆ, ಹೀಗೆ ಕೆಳಗಿಳಿದ ಹೆಲಿಕಾಪ್ಟರ್ ಅಲ್ಲೇ ಹೂತು ಮೇಲೇಳಲು ಒದ್ದಾಡುತ್ತಿತ್ತು.
ತಾತ್ಕಾಲಿಕ ಲ್ಯಾಂಡಿಂಗ್ ಸಲುವಾಗಿ ಮಾಡಿದ್ದ ಈ ಹೆಲಿಪ್ಯಾಡ್‌ನ ನೆಲದ ಕೆಳ ಪ್ರದೇಶ ಇನ್ನೂ ಹಸಿಯಾಗಿದ್ದ ಕಾರಣಕ್ಕೆ ಹೆಚ್ಚಿನ ಭಾರದ ಹೆಲಿಕಾಪ್ಟರ್ ನೆಲದೊಳಗೆ ಕುಸಿದು ಕೂತಿತ್ತು. ಬಳಿಕ ಸ್ಥಳೀಯರು ಹಾಗೂ ಪಿಎಂ ಭದ್ರತಾ ಸಿಬ್ಬಂದಿ ಹರಸಾಹಸ ಮಾಡಿ ಅದನ್ನಲ್ಲಿಂದ ಮೇಲೆತ್ತಿ ಪುನಃ ಹಾರಾಟ ಮಾಡುವಂತೆ ಮಾಡಿಕೊಂಡರು.ಅಷ್ಟರಲ್ಲಾಗಲೇ ಪ್ರಧಾನಿಗಳು ಬೇರೊಂದು ಹೆಲಿಕಾಪ್ಟರ್ ಮೂಲಕ ಕಾರ್ಯಕ್ರಮ ಜಾಗಕ್ಕೆ ತಲುಪಿದರು.
ಇವು ಇಂದು ದಾಖಲಾದ ರಾಜಕಾರಣಿಗಳ ಹೆಲಿಕಾಪ್ಟರ್ ಹಾರಾಟದ ಪುಟ್ಟ ವಿಘ್ನಗಳು. ಉಳಿದಂತೆ ಪ್ರಿಯಾಂಕಾ ಗಾಂಧಿ ಮಂಡ್ಯ ಕಾರ್ಯಕ್ರಮಕ್ಕೆ ಚಾಪರ್ ಹಾರಾಟದ ತೊಂದರೆಯಿಂದ ತಡವಾಗಿ ಬಂದಿದ್ದಾಗಿ ಹೇಳಿಕೊಂಡರು. ಇದಕ್ಕೂ ಮುನ್ನ ಮೇ 1ರಂದು ಪ್ರಧಾನಿ ಮಾಧ್ಯಮ ತಂಡದವರೂ ಹೆಲಿಕಾಪ್ಟರ್ ಹಾರಾಟ ಸಮಸ್ಯೆಯಿಂದ ಕಾರ್ಯಕ್ರಮವೊಂದನ್ನು ತಪ್ಪಿಸಿಕೊಂಡಿದ್ದರು.
ಹಿಂದೆಯೂ ನಡೆದಿದ್ದವು ಅನಾಹುತಗಳು
ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಯಡಿಯೂರಪ್ಪ ಹಾಗೂ ಹಾಲಿ ಸಿಎಂ ಬೊಮ್ಮಾಯಿಯವರೂ ಹೆಲಿಕಾಪ್ಟರ್ ಅನಾಹುತಗಳಿಂದ ಪಾರಾಗಿ ಬಂದಿದ್ದರು. ಹಿಂದೊಮ್ಮೆ ಸಿದ್ದರಾಮಯ್ಯ ಪ್ರಚಾರಕ್ಕೆ ತೆರಳಿದ್ದ ಹೆಲಿಕಾಪ್ಟರ್ ಮೇಲೆ ಹಾರಿ ದೂಳಿನ ಕಾರಣದಿಂದ ಕೆಲ ಕ್ಷಣದಲ್ಲೇ ಲ್ಯಾಂಡ್ ಆಗಿ ಆತಂಕ ಹುಟ್ಟಿಸಿ ಮರು ಹಾರಾಟ ನಡೆಸಿತ್ತು.
ಯಡಿಯೂರಪ್ಪ ಪ್ರಯಾಣದ ಹೆಲಿಕಾಪ್ಟರ್‌ಗೆ ಲ್ಯಾಂಡಿಂಗ್ ವೇಳೆ ಹಾರಿ ಬಂದ ಪ್ಲಾಸ್ಟಿಕ್ ಚೀಲಗಳು ಆತಂಕ ತಂದು ಅಲ್ಲಿದ್ದವರಿಗೆ ಕೆಲಕಾಲ ಜೀವ ಭಯ ತಂದೊಡ್ಡಿದ್ದದ್ದೂ ಸುದ್ದಿಯಾಗಿತ್ತು. ಹಾಗೆಯೇ ಹಾಲಿ ಸಿಎಂ ಬೊಮ್ಮಾಯಿ ಹೆಲಿಕಾಪ್ಟರ್‌ನಲ್ಲಿ ಕೆಲ ಕ್ಷಣ ಕಾಣಿಸಿಕೊಂಡ ಬೆಂಕಿ ಕೂಡ ಅಪಾಯದ ಮುನ್ಸೂಚನೆ ನೀಡಿ ಮರೆಯಾಗಿತ್ತು.
ಇವೆಲ್ಲವನ್ನೂ ಇಲ್ಲಿ ನೆನಪಿಸಲು ಕಾರಣವಾಗಿದ್ದು ಈ ಹಿಂದೆ ನಡೆದಿದ್ದ ಇಂತಹದ್ದೇ ಚುನಾವಣಾ ಪ್ರಚಾರದ ವಿಚಾರದಲ್ಲಿ ನಡೆದಿದ್ದ ಹೆಲಿಕಾಪ್ಟರ್ ದುರಂತ.
ನಟ ಸೌಂದರ್ಯರನ್ನು ಬಲಿ ಪಡೆದಿದ್ದ ದುರಂತ
ಕಳೆದ ತಿಂಗಳ 14ನೇ ತಾರೀಖಿಗೆ ಸರಿಯಾಗಿ 19 ವರ್ಷಗಳ ಹಿಂದೆ ಹೆಲಿಕಾಪ್ಟರ್ ದುರಂತವೊಂದು ದಾಖಲಾಗಿ ಕರುನಾಡು ರಾಜಕೀಯ ಹಾಗೂ ಚಿತ್ರರಂಗದ ಪಾಲಿಗೆ ಕರಾಳ ದಿನವಾಗಿ ಮಾರ್ಪಾಟಾಗಿತ್ತು.
ಕನ್ನಡ ಚಿತ್ರರಂಗದಲ್ಲಿ ಆ ಕಾಲಕ್ಕೆ ಹೆಸರಾಗಿದ್ದ ನಟಿ ಸೌಂದರ್ಯ ತಮ್ಮ ನಟನೆಯಿಂದಲೇ ಜನಮನ ಸೂರೆಗೊಂಡು ಸೂಪರ್ ಸ್ಟಾರ್ ನಾಯಕಿ ಎನಿಸಿಕೊಂಡಿದ್ದರು.
2004ರ ವೇಳೆಗೆ ಸಿನೆಮಾ ರಂಗದ ಉತ್ತುಂಗದಲ್ಲಿದ್ದ ಅವರು ಬಿಜೆಪಿ ಸೇರ್ಪಡೆಯಾಗಿ ರಾಜಕೀಯ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು.
2004ರ ಏಪ್ರಿಲ್ 14ರಂದು ಅಂದಿನ ಆವಿಭಜಿತ ಆಂಧ್ರ ಪ್ರದೇಶದಲ್ಲಿ ಚುನಾವಣೆ ನಡೆಯುತ್ತಿತ್ತು. ಅಂದು ನಟಿ ಸೌಂದರ್ಯ, ಕರೀಂ ನಗರದಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ತೆರಳಲು ಅಣಿಯಾಗುತ್ತಿದ್ದರು. ತನ್ನ ಅಣ್ಣ ಅಮರನಾಥ್ ಹಾಗೂ ಸ್ನೇಹಿತ ರಮೇಶ್ ಜೊತೆ ಚುನಾವಣಾ ಪ್ರಚಾರಕ್ಕೆ ಹೊರಟಿದ್ದರು.
ಇವರನ್ನು ಹೊತ್ತು ಜಕ್ಕೂರು ವಿಮಾನ ನಿಲ್ದಾಣದಿಂದ ಮೇಲೆ ಹಾರಿದ್ದ ಹೆಲಿಕಾಪ್ಟರ್ ಅದಾದ ಕೆಲವೇ ಕ್ಷಣದಲ್ಲಿ ಜಿಕೆವಿಕೆ ಆವರಣದಲ್ಲಿ ನೆಲಕ್ಕೆ ಬಿದ್ದು ಸ್ಫೋಟಗೊಂಡಿತು. ಪರಿಣಾಮ ಅದರೊಳಗಿದ್ದ ಸೌಂದರ್ಯ ಸೇರಿದಂತೆ ನಾಲ್ವರು ಸಜೀವ ದಹನಗೊಂಡಿದ್ದರು.
ಅಂದಿನ ಹೆಲಿಕಾಪ್ಟರ್ ದುರಂತಕ್ಕೆ ಅದರ ಇಂಜಿನ್ ವೈಫಲ್ಯ ಕಾರಣವಾಗಿತ್ತು ಎನ್ನುವುದು ಆನಂತರದ ತನಿಖೆ ಬಳಿಕ ತಿಳಿದು ಬಂದಿತ್ತು. ಹೀಗೆ ಚುನಾವಣಾ ಪ್ರಚಾರಕ್ಕೆ ಹೊರಟಿದ್ದ ಸೌಂದರ್ಯ ಇತಿಹಾಸ ಪುಟ ಸೇರಿಕೊಂಡಿದ್ದರು.
ಈ ಸುದ್ದಿ ಓದಿದ್ದೀರಾ? : ಜಸ್ಟ್ ಮಿಸ್: ಡಿಕೆ ಶಿವಕುಮಾರ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ಗೆ ಬಡಿದ ರಣಹದ್ದು
ಕೊನೆ ಮಾತು
ರಾಜಕಾರಣ, ಚುನಾವಣೆ ಪ್ರಚಾರ ಎಲ್ಲವೂ ಕಾಲಘಟ್ಟದ ಪ್ರಕ್ರಿಯೆಗಳು. ಇವುಗಳ ನಿರ್ವಹಣೆ ವೇಳೆ ಕ್ಷಣಕಾಲವೂ ಮೈಮರೆಯಬಾರದೆನ್ನುವುದಕ್ಕೆ ಈ ಘಟನೆಗಳೇ ಎಚ್ಚರಿಕೆಯ ಗಂಟೆ.
ಸದಾ ಜಾಗರೂಕರಾಗಿ ಸುರಕ್ಷತಾ ಮಾನದಂಡಗಳನ್ನು ಅನುಸರಿಸಿಕೊಂಡೇ ಹಾರಾಟ ನಡೆಸುವುದ ಸೂಕ್ತ ಎನ್ನುವುದು ಹೆಲಿಕಾಪ್ಟರ್ ಹಾರಾಟದ ಅನುಭವ ಹೊಂದಿರುವವರ ಮಾತು. ಗಮ್ಯ ತಲುಪುವ ಆತುರದಲ್ಲಿ ನಡೆಸುವ ಎಚ್ಚರರಹಿತ ಹಾರಾಟಗಳು ಭಾರೀ ದಂಡ ತೆರುವ ಸನ್ನಿವೇಶಗಳನ್ನು ಸೃಷ್ಟಿಸುವುದರಲ್ಲಿ ಅನುಮಾನವಿಲ್ಲ.