ಚುನಾವಣೆ ವಿಶೇಷ | ವಿ ಸೋಮಣ್ಣ, ಬಿಜೆಪಿ ಮತ್ತು ಬ್ಲ್ಯಾಕ್ ಮೇಲ್ ರಾಜಕಾರಣ

Date:

ಸೋಮಣ್ಣ ಬಿಜೆಪಿ ಬಿಡುವುದಿಲ್ಲ. ಬಿಜೆಪಿ ಬಿಟ್ಟರೆ ಭಾರೀ ನಷ್ಟವಾಗುವುದು ಸೋಮಣ್ಣರಿಗೆ ಹೊರತು ಪಕ್ಷಕ್ಕಲ್ಲ. ಉಳಿಸಿಕೊಳ್ಳಲಿ, ಪುತ್ರನಿಗೂ ಟಿಕೆಟ್ ಕೊಡಲಿ ಎನ್ನುವುದಕ್ಕೆ ಹಾಕುತ್ತಿರುವ ವೇಷ, ಆಡುತ್ತಿರುವ ಆಟ. ಇದು ಸಾಮಾನ್ಯ ಮತದಾರನಿಗೆ ತಿಳಿಯುತ್ತದೆ, ದೇಶವನ್ನೇ ಬಿಕರಿಗಿಟ್ಟಿರುವ ಬಿಜೆಪಿಗೆ ಅರ್ಥವಾಗುವುದಿಲ್ಲವೇ?

ವಸತಿ ಸಚಿವ ವಿ ಸೋಮಣ್ಣನವರನ್ನು `ಜನತಾ ಬಜಾರ್ ಸೋಮಣ್ಣ’ ಅಥವಾ `ವಿಜಯನಗರದ ಸೋಮಣ್ಣ’ ಎಂದು ಕರೆಯುವ, ಗುರುತಿಸುವ ಪರಿಪಾಠವುಂಟು. ಅದಕ್ಕೆ ತಕ್ಕಂತೆ ಸೋಮಣ್ಣ ಕೂಡ ಕ್ಷೇತ್ರದ ಜನರನ್ನು ಹೆಸರಿಡಿದು ಕರೆಯುವ, ಅವರ ಕಷ್ಟಗಳಿಗೆ ಕಿವಿಯಾಗುವ ಜನಾನುರಾಗಿ. ಆ ಕಾರಣಕ್ಕೋ ಏನೋ ಸೋಮಣ್ಣ ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ಗೆಲ್ಲುವ ಛಾತಿವುಳ್ಳವರು. ಜೊತೆಗೆ ನಾಲ್ಕು ಕಾರ್ಪೊರೇಟರ್ ಗಳನ್ನು ಗೆಲ್ಲಿಸಿಕೊಳ್ಳುವಷ್ಟು ಪ್ರಭಾವ ಹೊಂದಿರುವವರು. ಹಾಗೆಯೇ ಯಾವ ಮಠದ ಸ್ವಾಮೀಜಿಯನ್ನಾದರೂ ಸರಿ, ಅಧಿಕಾರ-ಸಹಕಾರದಿಂದ ಓಲೈಸಿ ಒಲಿಸಿಕೊಳ್ಳುವವರು. ಇದೆಲ್ಲಕ್ಕಿಂತ ಹೆಚ್ಚಾಗಿ ರಾಜಕೀಯ ಸಂದಿಗ್ಧ ಸಂದರ್ಭಗಳನ್ನು ಸುಲಭವಾಗಿ ಸಂಭಾಳಿಸುವವರು.

ಈ ಕಾರಣದಿಂದಾಗಿಯೇ ಜನತಾದಳ, ಕಾಂಗ್ರೆಸ್ ಮತ್ತು ಬಿಜೆಪಿ- ಮೂರೂ ಪಕ್ಷಗಳ ಆಡಳಿತದಲ್ಲಿ ಸೋಮಣ್ಣ ಮಂತ್ರಿಯಾಗಿದ್ದಾರೆ. ದೇವೇಗೌಡ, ಎಸ್.ಎಂ ಕೃಷ್ಣ ಮತ್ತು ಯಡಿಯೂರಪ್ಪ- ಮೂವರಿಗೂ ತೀರಾ ಆಪ್ತರಾಗಿ ದಣಿವರಿಯದೆ ದುಡಿದಿದ್ದಾರೆ. ದುಡಿದು `ದೊಡ್ಡವರು’ ಎನಿಸಿಕೊಂಡಿದ್ದಾರೆ. ಐದು ಬಾರಿ ಶಾಸಕರಾಗಿ, ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಅಪಾರ ರಾಜಕೀಯ ಅನುಭವವನ್ನು, ರಾಜಕಾರಣದ ಒಳಸುಳಿಗಳನ್ನು ಅರಿತು ಅರಗಿಸಿಕೊಂಡಿದ್ದಾರೆ.

1983ರಲ್ಲಿ ಜನತಾ ಬಜಾರ್ ನ ಸಾಮಾನ್ಯ ನೌಕರನಾಗಿದ್ದ ಸೋಮಣ್ಣ, ರಾಜಕಾರಣಕ್ಕೆ ಧುಮುಕಿ ಹಂತಹಂತವಾಗಿ ಬೆಳೆದು ಈಗ ಹಿರಿಯ ರಾಜಕಾರಣಿಯಾಗಿದ್ದಾರೆ. 1983ರಲ್ಲಿ ಮಹಾನಗರಪಾಲಿಕೆ ಸದಸ್ಯರಾಗಿ ಆಯ್ಕೆಯಾದ ಸೋಮಣ್ಣ, ಜನರ ಕಷ್ಟಕ್ಕೆ ಸ್ಪಂದಿಸುವ ಜನಾನುರಾಗಿ ಜನಪ್ರತಿನಿಧಿ ಎನಿಸಿಕೊಂಡವರು. ಆ ಗುರಾಣಿಯನ್ನು ಮುಂದಿಟ್ಟುಕೊಂಡೇ 1994ರಲ್ಲಿ ಮೊದಲ ಬಾರಿಗೆ ಬಿನ್ನಿಪೇಟೆ ಶಾಸಕರಾಗಿ ಆಯ್ಕೆಯಾದರು. ಮುಖ್ಯಮಂತ್ರಿ ದೇವೇಗೌಡರಿಗೆ ಆಪ್ತರಾದರು. ಬೆಂಗಳೂರು ನಗರವನ್ನು ಹಿಡಿತದಲ್ಲಿಟ್ಟುಕೊಂಡು, ಗೌಡರ ನೀಲಿಗಣ್ಣಿನ ಹುಡುಗನಾದರು. ಗೌಡರು ಕರ್ನಾಟಕ ಬಿಟ್ಟು ದೆಹಲಿಯತ್ತ ನಡೆದಾಗ, ಜೆ.ಎಚ್ ಪಟೇಲರಿಗೂ ಬೇಕಾದವರಾಗಿ ಬಂದೀಖಾನೆ ಸಚಿವರಾದರು. 1999ರಲ್ಲಿ ಜನತಾದಳ ತೊರೆದು ಸ್ವತಂತ್ರ ಅಭ್ಯರ್ಥಿಯಾಗಿ ಮತ್ತೆ ಗೆದ್ದು ಶಾಸಕರಾದರು. 2004 ರಲ್ಲಿ ಕಾಂಗ್ರೆಸ್ ಸೇರಿ ಅಲ್ಲೂ ಜಯ ದಾಖಲಿಸಿದರು. 2008ರಲ್ಲಿ ಕ್ಷೇತ್ರ ವಿಂಗಡಣೆಯಾದಾಗಲೂ, ಗೋವಿಂದರಾಜನಗರ ಕ್ಷೇತ್ರದಿಂದ ಆಯ್ಕೆಯಾಗಿ ಮತ್ತೆ ಶಾಸಕರಾದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆದರೆ, ಬಿಜೆಪಿ ಅಧಿಕಾರಕ್ಕೆ ಬಂದಾಗ, ಲಿಂಗಾಯತ ಕೋಮಿನ ಯಡಿಯೂರಪ್ಪನವರು ಮುಖ್ಯಮಂತ್ರಿಯಾದಾಗ, ಸೋಮಣ್ಣ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದರು. ಬೆಂಗಳೂರು ನಗರವನ್ನು ಆಳುವ, ಅನುಭವಿಸುವ, ಅಧಿಕಾರದ ಮರೆಯಲ್ಲಿ ನಡೆಯುವ ರಿಯಲ್ ಎಸ್ಟೇಟ್ ಎಂಬ ಭಾರೀ ವಹಿವಾಟಿನ ಮೇಲೆ ಕಣ್ಣಿಟ್ಟ ಸೋಮಣ್ಣ, ಆ ಕಾರಣಕ್ಕಾಗಿಯೇ ಯಡಿಯೂರಪ್ಪನವರಿಗೆ ಆಪ್ತರಾದರು. ಆ ಮೂಲಕ ಯಡಿಯೂರಪ್ಪನವರಿಗೆ ಅಡಿಗಡಿಗೂ ಅಡ್ಡಿಪಡಿಸುತ್ತಿದ್ದ ಅನಂತಕುಮಾರ್ ಮತ್ತು ಅಶೋಕ್ ರನ್ನು ದೂರವಿಡಲು, ಯಡಿಯೂರಪ್ಪನವರು ತಮ್ಮದೇ ಕೋಮಿನ ಸೋಮಣ್ಣನವರನ್ನು ಬಿಜೆಪಿಗೆ ಬರಮಾಡಿಕೊಂಡರು. ಸಹಜವಾಗಿಯೇ ಅನಂತಕುಮಾರ್ ಮತ್ತು ಆರ್ ಅಶೋಕ್ ಪ್ರಬಲ ವಿರೋಧ ಒಡ್ಡಿದರು. ಇವರ ವಿರೋಧದ ನಡುವೆಯೂ ಲಿಂಗಾಯತ ಎಂಬ ಕಾರಣಕ್ಕಾಗಿಯೇ ಸೋಮಣ್ಣನವರನ್ನು ಪಕ್ಷಕ್ಕೆ ಸೇರಿಸಿಕೊಂಡ ಯಡಿಯೂರಪ್ಪನವರು, ಅವರನ್ನು ಮರುಚುನಾವಣೆಗೊಡ್ಡಿದರು. ಆದರೆ ಬೆಂಗಳೂರನ್ನು ಅನಧಿಕೃತವಾಗಿ ಆಳುತ್ತಿದ್ದ ಅನಂತ್-ಅಶೋಕ್ ಒಂದಾಗಿ ಸೋಮಣ್ಣರನ್ನು ಸೋಲಿಸಿದರು. ಸೋತರೂ ಬಿಡದ ಯಡಿಯೂರಪ್ಪನವರು, ತಮ್ಮ ಪಕ್ಷದವರನ್ನೇ ಎದುರು ಹಾಕಿಕೊಂಡು ಸೋಮಣ್ಣನವರನ್ನು ಎಂಎಲ್ಸಿ ಮಾಡಿದರು.

ಆನಂತರ ಮಂತ್ರಿ ಮಾಡುವಾಗ ರಾಜ್ಯಪಾಲರು ಸಾಂವಿಧಾನಿಕ ಬಿಕ್ಕಟ್ಟನ್ನು ಮುಂದೆ ಮಾಡಿ ಮಂತ್ರಿಯಾಗದಂತೆ ತಡೆದರು. ಇಷ್ಟೆಲ್ಲ ವಿರೋಧಗಳ ನಡುವೆಯೂ ಯಡಿಯೂರಪ್ಪನವರು 2010ರಲ್ಲಿ ಸೋಮಣ್ಣನವರಿಗೆ ವಸತಿ ಖಾತೆ ನೀಡಿ ಮಂತ್ರಿ ಮಾಡಿದರು. ಅಷ್ಟೇ ಅಲ್ಲ, ತಮ್ಮ ಆಪ್ತ ಬಳಗದಲ್ಲೊಬ್ಬರಂತೆ ನೋಡಿಕೊಂಡಿದ್ದರು. ಸೋಮಣ್ಣ ಕೂಡ ಯಡಿಯೂರಪ್ಪನವರೇ ನನ್ನ ನಿಜನಾಯಕ ಎಂಬಂತೆ ನಿಷ್ಠೆ ಮೆರೆದರು. ಆದರೆ ಕಾಲ ಬದಲಾದಂತೆ, ಯಡಿಯೂರಪ್ಪ ಬಿಜೆಪಿ ಬಿಟ್ಟು ಕೆಜೆಪಿ ಕಟ್ಟುತ್ತಿದ್ದಂತೆ ಸೋಮಣ್ಣ ಕೂಡ ಬದಲಾಗಿ ಯಡಿಯೂರಪ್ಪನವರನ್ನು ಬಿಟ್ಟು ಬಿಜೆಪಿಯಲ್ಲಿಯೇ ಉಳಿದರು.

ನಿಷ್ಠೆ ಬದಲಿಸಿದ್ದಕ್ಕಾಗಿ ಯಡಿಯೂರಪ್ಪನವರ ಉಗ್ರ ಸಿಟ್ಟಿಗೆ ಗುರಿಯಾದರು. ಆದರೆ ಬಿಜೆಪಿಯಲ್ಲಿ ಉಳಿದು ಅನಂತ್-ಅಶೋಕ್ ರೊಂದಿಗೆ ಹೊಂದಾಣಿಕೆ ಮಾಡಿಕೊಂಡರು. ಆ ಮೂಲಕ ಹಳೆಯ ಗೆಳೆಯರಾದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದವರ ಕೆಂಗಣ್ಣಿಗೂ ಗುರಿಯಾದರು. ಸೋಮಣ್ಣನವರ ಅದೃಷ್ಟವೋ ಏನೋ, ಯಡಿಯೂರಪ್ಪನವರು ಮತ್ತೆ ಬಿಜೆಪಿಗೆ ಬಂದರು. ಅನಂತಕುಮಾರ್ ತೀರಿಹೋದರು. ಸೋಮಣ್ಣನವರು ಮತ್ತೆ ಯಡಿಯೂರಪ್ಪನವರ ಆಪ್ತ ಬಳಗದಲ್ಲಿ ಒಬ್ಬರಾದರು.

2018ರಲ್ಲಿ ಬಿಜೆಪಿ ಅತಿಹೆಚ್ಚಿನ ಸ್ಥಾನ ಗಳಿಸಿದಾಗ, 2019ರಲ್ಲಿ ಯಡಿಯೂರಪ್ಪನವರ ಮುಖ್ಯಮಂತ್ರಿಯಾದಾಗ, ಸೋಮಣ್ಣ ಮತ್ತೆ ವಸತಿ ಸಚಿವರಾದರು. ಆದರೆ ಸೋಮಣ್ಣನವರನ್ನು ಅನುಮಾನದಿಂದಲೇ ನೋಡುತ್ತಿದ್ದ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಷ್ಟು ದಿನವೂ, ಅವರಿಂದ ಅಂತರ ಕಾಯ್ದುಕೊಂಡರು. ಆದರೂ ಸೋಮಣ್ಣ, `ಸಿಎಂ ನಮ್ಮ ನಾಯಕರು’ ಎನ್ನುವುದನ್ನು ಹೋದಲ್ಲಿ ಬಂದಲ್ಲಿ ಆಡತೊಡಗಿದರು. ಯಡಿಯೂರಪ್ಪನವರು ಸಿಎಂ ಕುರ್ಚಿಯಿಂದ ಕೆಳಗಿಳಿದಾಗ, ಸಿಹಿ ಹಂಚಿ ಸಂಭ್ರಮಿಸಿದ ಬಿಜೆಪಿಗರಲ್ಲಿ ಸೋಮಣ್ಣ ಕೂಡ ಒಬ್ಬರು.

ಅದೇ ಸೋಮಣ್ಣ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದಾಗ, `ನಮ್ಮವರು, ದಳದಲ್ಲಿ ಒಟ್ಟಿಗೆ ಇದ್ದವರು, ನನಗಿಂತ ವಯಸ್ಸಿನಲ್ಲಿ ಕಿರಿಯರು, ಮ್ಯಾನೇಜ್ ಮಾಡಬಹುದು’ ಎಂದುಕೊಂಡರು. ಅಷ್ಟೇ ಅಲ್ಲ, ಬಿಜೆಪಿಯ ಸೀನಿಯರ್ ಅಶೋಕ್ ರನ್ನು ಅರುಗಿಸಿ, ಬೆಂಗಳೂರು ನಗರ ಉಸ್ತುವಾರಿ ಸಚಿವರಾಗಲು ಹವಣಿಸಿದರು. ಆದರೆ ಸೋಮಣ್ಣನವರು ಅಂದುಕೊಂಡಂತೆ ಏನೂ ಆಗಲಿಲ್ಲ. ಬದಲಾದ ಸನ್ನಿವೇಶದಲ್ಲಿ, ಬಿಜೆಪಿಗಿಂತ ಆರೆಸೆಸ್ ಮುನ್ನಲೆಗೆ ಬಂತ್ತು. ಕೇಶವಕೃಪದ ಹಿಡಿತ ಹೆಚ್ಚಾಯಿತು. ಬೊಮ್ಮಾಯಿ ಬೊಂಬೆಯಂತಾದರು. ಜೊತೆಗೆ ಬೆಂಗಳೂರು ನಗರದ ಉಸ್ತುವಾರಿ ವಿಚಾರದಲ್ಲಿ ಸಚಿವ ಅಶೋಕ್ ಮತ್ತು ಅಶ್ವತ್ಥನಾರಾಯಣರನ್ನು ಮಣಿಸುವುದು ಸೋಮಣ್ಣರಿಗೆ ಸಮಸ್ಯೆ ತಂದೊಡ್ಡಿತು. ನಾಯಕರ ನಡುವಿನ ವೈಮನಸ್ಯ ಹೆಚ್ಚಾಯಿತು. ಪಕ್ಷ ತೊರೆಯುವ ವಿಚಾರವೂ ತಲೆಯಲ್ಲಿ ತೇಲಿಹೋಯಿತು. ಇದು ಅಸಲಿ ಬಿಜೆಪಿಗರಿಗೆ ಮತ್ತಷ್ಟು ಸಿಟ್ಟು ತರಿಸಿತು. ಬಿಜೆಪಿ ಹೈಕಮಾಂಡಿಗೆ ದೂರು ಹೋಯಿತು.

ಇದೆಲ್ಲದರ ಒಟ್ಟು ಮೊತ್ತವೇ, ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಕಾರ್ಯಕ್ರಮದಲ್ಲಿ ಉಸ್ತುವಾರಿ ಮಂತ್ರಿ ಸೋಮಣ್ಣರೇ ಇಲ್ಲದಂತಾಗಿದ್ದು; ತಮ್ಮದೇ ಕ್ಷೇತ್ರದಲ್ಲಿ ನಡೆದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯಲ್ಲಿ ಸಚಿವ ಅಶೋಕ್ ಅರ್ಧಕ್ಕೇ ಇಳಿದು ಹೋಗುವಂತಾಗಿದ್ದು; ಮಂಡ್ಯಕ್ಕೆ ಬರುತ್ತಿರುವ ಮೋದಿ ಕಾರ್ಯಕ್ರಮಕ್ಕೂ ಸೋಮಣ್ಣಗೆ ಆಹ್ವಾನವಿಲ್ಲವಾಗಿದ್ದು; ಪಕ್ಷದ ಆಂತರಿಕ ಸಭೆಗಳಿಗೆ ಸಚಿವ ಸೋಮಣ್ಣನವರನ್ನು ಕರೆಯದೆ, ನಿರ್ಲಕ್ಷ್ಯ ವಹಿಸಿದ್ದು. ಕೊನೆಗೆ ಆಗುತ್ತಿರುವ ಅವಮಾನದಿಂದ ಅರುಗಾಗಲು, `ನನ್ನ ಮನಸ್ಸು ಮತ್ತು ಆರೋಗ್ಯ ಸರಿ ಇಲ್ಲ, ಆ ಕಾರಣದಿಂದ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಾಗುತ್ತಿಲ್ಲ’ ಎಂದು ಸಬೂಬು ಹೇಳುವಂತಾಗಿದ್ದು.

ಏತನ್ಮಧ್ಯೆ, ಮಂಗಳವಾರ ನಡೆದ ಕನಕಪುರದ ರಾಯಸಂದ್ರ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಸೋಮಣ್ಣ ಭಾಗಿಯಾಗಿ, ಡಿಕೆ ಸಹೋದರರನ್ನು ಬಾಯ್ತುಂಬ ಹಾಡಿ ಹೊಗಳಿದ್ದೂ ಆಯಿತು. ಇದಕ್ಕೆ ಮತ್ತೆ ಸೋಮಣ್ಣ, `ನಾನು ಕಾಂಗ್ರೆಸ್ ಸೇರುತ್ತೇನೆ ಎನ್ನುವುದು ಮಾಧ್ಯಮಗಳ ಸೃಷ್ಟಿ. ಸದ್ಯ ಯಾವುದೇ ತೀರ್ಮಾನಕ್ಕೆ ಬಂದಿಲ್ಲ’ ಎಂದು ಬೇಕೆಂತಲೇ ಮಾಧ್ಯಮಗಳಿಗೆ ಹೇಳಿಕೆ ಕೊಡುವ ಸಂದರ್ಭವನ್ನು ತಾವೇ ಸೃಷ್ಟಿಮಾಡಿಕೊಂಡರು. ಯಾರಿಗೆ ಸಂದೇಶ ರವಾನಿಸಬೇಕೋ, ಮಾಧ್ಯಮಗಳ ಮೂಲಕ ಅವರಿಗೆ ರವಾನಿಸಿದರು.

ಸೋಲರಿಯದ ಸರದಾರ, ಟ್ರಬಲ್ ಶೂಟರ್, ದೇವೇಗೌಡರ ನೀಲಿಗಣ್ಣಿನ ಹುಡುಗ, ಚುನಾವಣಾ ಚತುರ ಎಂದೆಲ್ಲ ಬಿರುದು ಪಡೆದಿರುವ ಸೋಮಣ್ಣರಿಗೆ ಈಗ 72ರ ಹರೆಯ. ಎಲ್ಲ ಪಕ್ಷಗಳನ್ನು ನುಗ್ಗಿ ಹೊರಬಂದಿರುವ, ರಾಜಕೀಯ ಒಳಸುಳಿಗಳನ್ನು ಅರೆದು ಕುಡಿದಿರುವ, ಎಲ್ಲರನ್ನು ಸುಲಭವಾಗಿ ಸಂಭಾಳಿಸುವ ಸೋಮಣ್ಣ ಈಗ ಸಂದಿಗ್ಧಕ್ಕೆ ಒಳಗಾಗಿದ್ದಾರೆ. ವಯಸ್ಸಿನ ಕಾರಣಕ್ಕೆ ಬಿಜೆಪಿಯಲ್ಲಿ ಟಿಕೆಟ್ ನಿರಾಕರಿಸಬಹುದು ಎಂಬ ವದಂತಿಯೂ ಇದೆ. ಜೊತೆಗೆ ಬಿಜೆಪಿಯೊಳಗಿನ ವಿರೋಧಿಗಳ ಕೈ ಕೂಡ ಮೇಲಾಗುತ್ತಿದೆ. ಹಾಗೆಯೇ ಗೆದ್ದು ಬಂದಿರುವ ಗೋವಿಂದರಾಜನಗರ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ್ದರೂ, ಅವೆಲ್ಲ ಕಮಿಷನ್ ಗಾಗಿ ಎನ್ನುವುದು ಮತದಾರರ ಮಾತಾಗಿದೆ.

ಹಾಗಾಗಿ ಸೋಮಣ್ಣ ಈಗ ಮತ್ತೆ ಕಾಂಗ್ರೆಸ್ ನತ್ತ ನೋಡುತ್ತಿದ್ದಾರೆ. ಅದಕ್ಕೆ ಪೂರಕವಾಗಿ, ತಾವು ಹುಟ್ಟಿ ಬೆಳೆದ ಕನಕಪುರ ತಾಲೂಕಿನ ಹಾಲನಾಥ ಗ್ರಾಮವನ್ನು ನೆನಪು ಮಾಡಿಕೊಂಡಿದ್ದಾರೆ. ಆ ನೆಪದಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕಾಂಗ್ರೆಸ್ ನಾಯಕರಾದ ಡಿಕೆ ಸಹೋದರರೊಂದಿಗೆ ಒಂದು ಸುತ್ತಿನ ಮಾತುಕತೆ ಆಡಿದ್ದಾರೆ. ಮಗ ಡಾ.ಅರುಣ್ ಸೋಮಣ್ಣರನ್ನು ರಾಮನಗರದಿಂದ ಕಣಕ್ಕಿಳಿಸುವ ಇರಾದೆ, ಈ ಭೇಟಿಯ ಹಿಂದಿದೆ ಎನ್ನುವ ಸುದ್ದಿ ಹಬ್ಬಿದೆ.

ಹಾಗೆಯೇ ಕಾಂಗ್ರೆಸ್ ನಾಯಕರೊಂದಿಗೆ ಗುರುತಿಸಿಕೊಳ್ಳುತ್ತಿರುವುದು ಮತ್ತು ಹೊಗಳುತ್ತಿರುವುದರ ಹಿಂದೆ ಸೋಮಣ್ಣನವರ ಬ್ಲ್ಯಾಕ್ ಮೇಲ್ ತಂತ್ರವೂ ಅಡಗಿದೆ ಎನ್ನಲಾಗುತ್ತಿದೆ. ತಮ್ಮ ಮಗ ಡಾ.ಅರುಣ್ ಸೋಮಣ್ಣರಿಗೆ ಗೋವಿಂದರಾಜನಗರ ಮತ್ತು ತಮಗೆ ಚಾಮರಾಜನಗರದ ಟಿಕೆಟ್ ಕೊಟ್ಟರೆ, ಬಿಜೆಪಿಯಲ್ಲಿಯೇ ಉಳಿಯುತ್ತೇನೆ, ಇಲ್ಲವಾದರೆ ಕಾಂಗ್ರೆಸ್ ನತ್ತ ಹೋಗುತ್ತೇನೆ ಎನ್ನುವ ಬೇಡಿಕೆಯನ್ನು ವರಿಷ್ಠರ ಮುಂದಿಟ್ಟಿದ್ದಾರೆ ಎನ್ನುತ್ತಿದೆ ಅವರ ಆಪ್ತವಲಯ.

ಇದನ್ನು ಓದಿದ್ದೀರಾ? ಚುನಾವಣೆ ವಿಶೇಷ | ಬಸವನಗುಡಿ ಬ್ರಾಹ್ಮಣರ ಕ್ಷೇತ್ರವೇ?

ಈಗ, ದೇಶಭಕ್ತರ ಪಕ್ಷವಾದ ಬಿಜೆಪಿಯೊಳಗೆ ನಡೆಯುತ್ತಿರುವ ಶಾಸಕರು ಮತ್ತು ಸಚಿವರ ಗುಳೆ ಪ್ರಕರಣ, ಬ್ಲ್ಯಾಕ್ ಮೇಲ್, ಭ್ರಷ್ಟಾಚಾರ- ಅಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವ ಸಂದೇಶವನ್ನು ಸಾರುತ್ತಿದೆ. ಸೋಮಣ್ಣರನ್ನು ಸಂತೈಸಲು ಈಗ ಯಡಿಯೂರಪ್ಪ ಮತ್ತು ಬಿ.ಎಲ್ ಸಂತೋಷ್ ಕಣಕ್ಕಿಳಿದಿದ್ದಾರೆ. ನಿಮಗಾಗಿರುವ ಅವಮಾನವನ್ನು ಸರಿಪಡಿಸಲಾಗುವುದೆಂದು ಭರವಸೆ ನೀಡಿದ್ದಾರೆ. ಪಕ್ಷ ತೊರೆಯುವ ನಿರ್ಧಾರವನ್ನು ಕೈಬಿಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಏಕಕಾಲದಲ್ಲಿ ಬಿಜೆಪಿ-ಕಾಂಗ್ರೆಸ್ ನೊಂದಿಗೆ ಬ್ಲಾಕ್ ಮೇಲ್ ಗಿಳಿದಿರುವ ಸೋಮಣ್ಣನವರ 40 ವರ್ಷಗಳ ಸುದೀರ್ಘ ರಾಜಕಾರಣವನ್ನು ಬಲ್ಲವರು, `ಸೋಮಣ್ಣ, ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ. ಪಕ್ಷ ತೊರೆಯುವುದು ಅವರಿಗೂ ಇಷ್ಟವಿಲ್ಲ. ಆದರೆ ಸುಮ್ಮನಿರುವಂತೆಯೂ ಇಲ್ಲ. ಏಕೆಂದರೆ, ಬೆಂಗಳೂರು ಸುತ್ತಮುತ್ತಲಿನ ಭೂಮಿಗೆ ಭಾರೀ ಬೆಲೆ ಇದೆ ಎಂಬುದು ಸೋಮಣ್ಣರಿಗೆ ಗೊತ್ತು. ಪಕ್ಷಾತೀತವಾಗಿ ಲೆಕ್ಕವಿಡಲಾಗದಷ್ಟು ವ್ಯವಹಾರಗಳಲ್ಲಿ ಭಾಗಿಯಾಗಿರುವುದನ್ನು ಎಲ್ಲರೂ ಬಲ್ಲರು. ಬಿಜೆಪಿ ಬಿಟ್ಟರೆ ಭಾರೀ ನಷ್ಟವಾಗುವುದು ಸೋಮಣ್ಣರಿಗೆ ಹೊರತು ಪಕ್ಷಕ್ಕಲ್ಲ. ಉಳಿಸಿಕೊಳ್ಳಲಿ, ಟಿಕೆಟ್ ಕೊಡಲಿ ಎನ್ನುವುದಕ್ಕೆ ಹಾಕುತ್ತಿರುವ ವೇಷ, ಆಡುತ್ತಿರುವ ಆಟ. ಇದು ನಮ್ಮಂತಹ ಸಾಮಾನ್ಯ ಮತದಾರರಿಗೇ ತಿಳಿಯುತ್ತದೆ, ಇನ್ನು ದೇಶವನ್ನೇ ಬಿಕರಿಗಿಟ್ಟಿರುವ ಬಿಜೆಪಿಗೆ ಅರ್ಥವಾಗುವುದಿಲ್ಲವೇ’ ಎನ್ನುವ ಮಾತುಗಳು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದುದ್ದಕ್ಕೂ ಕೇಳಿಬರುತ್ತಿವೆ.

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಾಮಪತ್ರ ತಿರಸ್ಕೃತಗೊಂಡ ಸೂರತ್ ಅಭ್ಯರ್ಥಿ ನೀಲೇಶ್ ಕಾಂಗ್ರೆಸ್‌ನಿಂದ ಅಮಾನತು

ಸೂರತ್ ಅಭ್ಯರ್ಥಿ ನೀಲೇಶ್ ಕುಂಭಾನಿ ಅವರ ನಾಮಪತ್ರ ತಿರಸ್ಕೃತಗೊಂಡು ಬಿಜೆಪಿಯ ಮುಖೇಶ್...

ಲೋಕಸಭೆ ಹಣಾಹಣಿ -2024 | 5 ಗಂಟೆ ವೇಳೆಗೆ ರಾಜ್ಯದಲ್ಲಿ ಶೇ.63.90 ಮತದಾನ

ಕರ್ನಾಟಕದಲ್ಲಿ 14 ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನ ಪ್ರಕ್ರಿಯೆಯಲ್ಲಿ...

ಬೆಲೆಯೇರಿಕೆ, ನಿರುದ್ಯೋಗ, ರೈತರ ಬಗ್ಗೆ ಪ್ರಧಾನಿ ಮೋದಿ ತುಟಿಯೇ ಬಿಚ್ಚಲ್ಲ: ಸಿದ್ದರಾಮಯ್ಯ ವಾಗ್ದಾಳಿ

ಬೆಲೆಯೇರಿಕೆ, ನಿರುದ್ಯೋಗ, ರೈತರ ಸಂಸ್ಥೆಗಳ ಬಗ್ಗೆ ಪ್ರಧಾನಿಗಳು ಚರ್ಚೆಯೇ ಮಾಡುವುದಿಲ್ಲ. ಕೇವಲ...

ಬೀದರ್‌ | ಪತ್ನಿ ಕೊಲೆಗೈದ ಆರೋಪಿ ಪತಿಗೆ ಜೀವಾವಧಿ ಶಿಕ್ಷೆ

ಹೆಂಡತಿಗೆ ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನಲೆ ಆಕೆಯ ಪತಿಗೆ ಬೀದರ...