ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ಗಂಟೆಗಳು ಬಾಕಿ ಇವೆ. ಮೇ 10ರಂದು ಮತದಾನ ನಡೆಯಲಿದೆ. ಈ ನಡುವೆ, ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ತೆರೆಮರೆಯಲ್ಲಿ ಕೊನೆಯ ಪ್ರಯತ್ನ ಮಾಡುತ್ತಿದ್ದಾರೆ. ಹಲವೆಡೆ ಹಣ ಹಂಚುವಾಗ ಪಕ್ಷಗಳ ಕಾರ್ಯಕರ್ತರು ಸಿಕ್ಕಿಬಿದ್ದಿರುವ ವರದಿಗಳಾಗಿವೆ. ಅಂತೆಯೇ, ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ದೂರು ನೀಡಲು ಚುನಾವಣಾ ಆಯೋಗ ತೆರೆದಿರುವ ಸಿವಿಜಿಲ್ (cVIGIL) ಆ್ಯಪ್‌ನಲ್ಲಿ ಈವರೆಗೆ 6,711 ದೂರು ದಾಖಲಾಗಿವೆ ಎಂದು ತಿಳಿದುಬಂದಿದೆ.
ಚುನಾವಣಾ ದೂರುಗಳಿಗೆ ಸಂಬಂಧಿಸಿದಂತೆ ಆಯೋಗವು ಪ್ರಕರಣೆ ಹೊರಡಿಸಿದೆ. “ಆ್ಯಪ್ ಮೂಲಕ ಬಂದಿರುವ 6,711 ದೂರುಗಳಲ್ಲಿ ಹೆಚ್ಚಿನ ದೂರುಗಳು ಅನುಮತಿಯಿಲ್ಲದೆ ಬ್ಯಾನರ್ ಹಾಕಿರುವುದಕ್ಕೆ ಸಂಬಂಧಿಸಿವೆ. ಉಳಿದಂತೆ, ಮತದಾರರಿಗೆ ಆಮಿಷವೊಡ್ಡಲು ಹಣ, ಉಡುಗೊರೆ, ಮದ್ಯ ಹಿಂಚಿಕೆಗೆ ಸಂಬಂಧಿಸಿದ ದೂರುಗಳು ದಾಖಲಾಗಿವೆ. ಆ ಪೈಕಿ, 1,348 ಪ್ರಕರಣಗಳಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ” ಎಂದು ಹೇಳಿದೆ.
ಬೆಂಗಳೂರಿನಲ್ಲಿ ಹೆಚ್ಚು ದೂರುಗಳು ದಾಖಲಾಗಿದ್ದು, ಕಳೆದ ಒಂದು ವಾರದಲ್ಲಿ 1,771 ದೂರುಗಳು ದಾಖಲಾಗಿವೆ. ಇವುಗಳ ಪೈಕಿ ಮೇ 9ರಂದು ಒಂದೇ ದಿನ 690 ದೂರುಗಳು ದಾಖಲಾಗಿವೆ.