ಈ ಬಾರಿಯ ಚುನಾವಣಾ ಕಣದಲ್ಲಿರುವ ನೂರಾರು ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ಗಳಲ್ಲೇ ಈ ಕುರಿತ ವಿವರಗಳಿವೆ.
ಕರ್ನಾಟಕ ರಾಜ್ಯ ಚುನಾವಣಾ ಕಣ ದಿನೇ ದಿನೆ ರಂಗೇರುತ್ತಿದೆ, ಅಭ್ಯರ್ಥಿಗಳ ಪ್ರಚಾರ ಬಿರುಸು ಪಡೆದುಕೊಳ್ಳುತ್ತಿದೆ. ಅಖಾಡದಲ್ಲಿ ಬೈಗುಳಗಳ ಅಬ್ಬರ, ಚಾಟಿಯೇಟುಗಳ ಜೋರು ಸ್ವರ ಕೇಳಿಬರುತ್ತಿದೆ. ಇದರ ನಡುವೆಯೇ ಜನರು ಬೆಚ್ಚಿಬೀಳುವಂಥ ಮಾಹಿತಿಯನ್ನು ಈದಿನ.ಕಾಮ್ ಜನರೆದುರು ಇಡುತ್ತಿದೆ. ಈ ಬಾರಿಯ ಚುನಾವಣಾ ಕಣದಲ್ಲಿರುವ ನೂರಾರು ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಅಭ್ಯರ್ಥಿಗಳ ಅಫಿಡವಿಟ್‌ಗಳಲ್ಲೇ ಈ ಕುರಿತ ವಿವರಗಳಿವೆ.
ಕಾಂಗ್ರೆಸ್‌ನ 119 ಮಂದಿ ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ, ಗಂಭೀರವಾದ ಕ್ರಿಮಿನಲ್ ಪ್ರಕರಣ, ವಂಚನೆ ಮತ್ತಿತರ ಪ್ರಕರಣಗಳಿವೆ. ಎರಡನೇ ಸ್ಥಾನದಲ್ಲಿ ಬಿಜೆಪಿ ಇದ್ದು, ಆ ಪಕ್ಷದ 94 ಮಂದಿಯ ವಿರುದ್ಧ ಕ್ರಿಮಿನಲ್ ಮತ್ತಿತರ ಪ್ರಕರಣಗಳಿವೆ. ಇನ್ನು ಜೆಡಿಎಸ್‌ನ 70 ಮಂದಿ ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
ಕ್ರಿಮಿನಲ್ ಕೇಸುಗಳಿರುವ ಅಭ್ಯರ್ಥಿಗಳ ವಿವರ
ಕಾಂಗ್ರೆಸ್ ಪಕ್ಷದಲ್ಲಿ ಅತಿ ಹೆಚ್ಚು ಪ್ರಕರಣಗಳಿರುವ ಅಭ್ಯರ್ಥಿಗಳು
ಕಾಂಗ್ರೆಸ್‌ನ ಸಿದ್ಧರಾಮಯ್ಯ, ಡಿ ಕೆ ಶಿವಕುಮಾರ್, ಎಂ ಬಿ ಪಾಟೀಲ್, ಪ್ರಿಯಾಂಕ್ ಖರ್ಗೆಯವರಂಥ ಮುಖಂಡರಿಂದ ಹಿಡಿದು ಯುವ ನಾಯಕರವರೆಗೆ ಅನೇಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಬಳ್ಳಾರಿಯ ಬಿ ನಾಗೇಂದ್ರ ವಿರುದ್ಧ ನಾಲ್ಕು ಸಿಬಿಐ, 13 ಲೋಕಾಯುಕ್ತ, ಒಂದು ಸಿಐಡಿ ಪ್ರಕರಣಗಳು ಸೇರಿದಂತೆ ಒಟ್ಟು 40 ಪ್ರಕರಣಗಳಿವೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ 19 ಪ್ರಕರಣಗಳಿವೆ; ಅದರಲ್ಲಿ ಸಿಬಿಐ, ಇಡಿ, ಲೋಕಾಯುಕ್ತ ಸೇರಿದಂತೆ ನಾಲ್ಕು ಪ್ರಕರಣಗಳು ಗಂಭೀರ ಸ್ವರೂಪದ್ದಾಗಿವೆ. ಶಿಡ್ಲಘಟ್ಟದ ಬಿ ವಿ ರಾಜೀವ್ ಗೌಡ ಅವರ ವಿರುದ್ಧ 11 ಪ್ರಕರಣಗಳು ದಾಖಲಾಗಿವೆ. ವಿಶೇಷ ಅಂದರೆ, ಕ್ರಿನಿಮಲ್ ಪ್ರಕಣಗಳಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಕಾಂಗ್ರೆಸ್ ಮುಂದಿದೆ. ಅದಕ್ಕೆ ಇರುವ ಹಲವು ಕಾರಣಗಳಲ್ಲಿ ಮೇಕೆದಾಟು ಪಾದಯಾತ್ರೆಯೂ ಒಂದಾಗಿದೆ. ಮೇಕೆದಾಟು ಪಾದಯಾತ್ರೆ ವೇಳೆ ಬಿಜೆಪಿ ಸರ್ಕಾರ ಕಾಂಗ್ರೆಸ್‌ನ 39 ಮುಖಂಡರ ವಿರುದ್ಧ ಕರ್ನಾಟಕ ಸಾಂಕ್ರಾಮಿಕ ರೋಗ ಕಾಯ್ದೆ ಅಡಿ ಪ್ರಕರಣಗಳನ್ನು ದಾಖಲಿಸಿತ್ತು. ಈ ಪಟ್ಟಿಯಲ್ಲಿರುವ ಕಾಂಗ್ರೆಸ್‌ನ 18 ಮಂದಿ ವಿರುದ್ಧ ಮೇಕೆದಾಟು ಪಾದಯಾತ್ರೆ ಪ್ರಕರಣ ಹೊರತುಪಡಿಸಿ ಇತರೆ ಯಾವ ಪ್ರಕರಣವೂ ಇಲ್ಲ.
ಬಿಜೆಪಿಯಲ್ಲಿ ಅತಿ ಹೆಚ್ಚು ಪ್ರಕರಣಗಳಿರುವ ಅಭ್ಯರ್ಥಿಗಳು
ಇನ್ನು ಕ್ರಿಮಿನಲ್ ಆಪಾದಿತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಬಿಜೆಪಿ ವಿಚಾರಕ್ಕೆ ಬಂದರೆ, ಚಿತ್ತಾಪುರದ ಮಣಿಕಂಠ ರಾಥೋಡ್ ವಿರುದ್ಧ ಬರೋಬ್ಬರಿ 40 ಕ್ರಿಮಿನಲ್ ಪ್ರಕರಣಗಳಿವೆ. ಅವುಗಳಲ್ಲಿ ಅನ್ನಭಾಗ್ಯ ಅಕ್ಕಿ ಕಳ್ಳಸಾಗಾಣಿಕೆಗೆ ಸಂಬಂಧಿಸಿದ 24 ಪ್ರಕರಣಗಳು, ದ್ವೇಷ ಭಾಷಣದಂಥ ಪ್ರಕರಣ ಸೇರಿವೆ. ಚನ್ನಪಟ್ಟಣದ ಸಿ ಪಿ ಯೋಗೇಶ್ವರ್ ವಿರುದ್ಧ ಜನರಿಗೆ ವಂಚಿಸಿದ ಪ್ರಕರಣ ಸೇರಿದಂತೆ 10 ಪ್ರಕರಣಗಳಿವೆ. ರಾಜರಾಜೇಶ್ವರಿನಗರದ ಮುನಿರತ್ನ ವಿರುದ್ಧ ಎಂಟು ಪ್ರಕರಣಗಳಿದ್ದು, ಅವುಗಳಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ, ದ್ವೇಷ ಭಾಷಣ, ಭ್ರಷ್ಟಾಚಾರ ಪ್ರಕರಣಗಳು ಸೇರಿವೆ.
ಕಂಪ್ಲಿಯ ಟಿ ಎಚ್ ಸುರೇಶ್ ಬಾಬು ವಿರುದ್ಧ ಬಿಹಾರದಲ್ಲಿ ವ್ಯಕ್ತಿಯೊಬ್ಬರನ್ನು ಜೀವ ಬೆದರಿಕೆ ಒಡ್ಡಿ ಸುಲಿಗೆಗೆ ಯತ್ನಿಸಿದ ಪ್ರಕರಣ ಸೇರಿದಂತೆ ಒಟ್ಟು 6 ಪ್ರಕರಣಗಳು ದಾಖಲಾಗಿವೆ. ಬಳ್ಳಾರಿ ನಗರದ ಜಿ ಸೋಮಶೇಖರ ರೆಡ್ಡಿ ವಿರುದ್ಧ ಅಕ್ರಮ ಗಣಿಗಾರಿಕೆ, ಭ್ರಷ್ಟಾಚಾರ, ದ್ವೇಷ ಭಾಷಣದ ಪ್ರಕರಣಗಳು ದಾಖಲಾಗಿವೆ. ಐಎಂಎ ಪ್ರಕರಣದ ಆರೋಪಿ, ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಆಗಿದ್ದ ಎಲ್ ಸಿ ನಾಗರಾಜು ಅವರು ಸದ್ಯ ಮಧುಗಿರಿಯಿಂದ ಬಿಜೆಪಿ ಅಭ್ಯರ್ಥಿಯಾಗಿದ್ದು, ಅವರ ವಿರುದ್ಧ ಒಟ್ಟು 5 ಕ್ರಿಮಿನಲ್ ಪ್ರಕರಣಗಳಿವೆ. ಹೆಬ್ಬಾಳದ ಜಗದೀಶ್ ಕಟ್ಟಾ ವಿರುದ್ಧ ಕೊಲೆ ಯತ್ನ ಸೇರಿದಂತೆ ಇ.ಡಿ., ಲೋಕಾಯುಕ್ತ ಪ್ರಕರಣಗಳಿವೆ.
ಜೆಡಿಎಸ್‌ನಲ್ಲಿ ಅತಿ ಹೆಚ್ಚು ಪ್ರಕರಣಗಳಿರುವ ಅಭ್ಯರ್ಥಿಗಳು
ಜೆಡಿಎಸ್‌ನಲ್ಲಿ ಅತಿ ಹೆಚ್ಚು ಪ್ರಕರಣಗಳಿರುವ ಅಭ್ಯರ್ಥಿ ಕಡೂರಿನ ವೈಎಸ್‌ವಿ ದತ್ತ. ವಿಶೇಷ ಎಂದರೆ, ಅವರ ವಿರುದ್ಧ 41 ಪ್ರಕರಣಗಳಿದ್ದು, ಎಲ್ಲವೂ ಚೆಕ್ ಬೌನ್ಸ್ ಪ್ರಕರಣಗಳಾಗಿವೆ. ಇನ್ನು ದೊಡ್ಡಬಳ್ಳಾಪುರದ ಮುನೇಗೌಡ ವಿರುದ್ಧ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣವೂ ಸೇರಿದಂತೆ 8 ಪ್ರಕರಣಗಳಿವೆ. ದೇವದುರ್ಗದ ಕರೆಮ್ಮ ವಿರುದ್ಧ ಏಳು ಪ್ರಕರಣಗಳಿದ್ದು, ಎಲ್ಲವೂ ಅಕ್ರಮ ಕೂಟಕ್ಕೆ ಸಂಬಂಧಿಸಿವೆ.
ಬಳ್ಳಾರಿ ನಗರದ ಅನಿಲ್ ಲಾಡ್ ವಿರುದ್ಧ ಅಕ್ರಮ ಗಣಿಗಾರಿಕೆ ಕುರಿತ ಸಿಬಿಐ ಪ್ರಕರಣ ಸೇರಿದಂತೆ, ಲೋಕಾಯುಕ್ತ ಪ್ರಕರಣಗಳಿವೆ. ಇನ್ನು ಚಿಕ್ಕಪೇಟೆಯ ಇಮ್ರಾನ್ ಪಾಶಾ ವಿರುದ್ಧ ಕೊಲೆ ಪ್ರಕರಣ, ದೊಂಬಿ ಪ್ರಕರಣಗಳು ದಾಖಲಾಗಿವೆ.