- ನಿಜಲಿಂಗಪ್ಪ, ದೇವರಾಜ ಅರಸುಗಿಂತ ಸಿದ್ದರಾಮಯ್ಯ ದೊಡ್ಡವರಲ್ಲ
- ಪ್ರಚಾರಕ್ಕೆ ಹೋದಾಗ ರಸ್ತೆಗೆ ಅಡ್ಡಲಾಗಿ ನೊಗ ಇಡುತ್ತಾರೆಂದು ಬೇಸರ
ವರುಣ ಕ್ಷೇತ್ರದಲ್ಲಿ ಒಂದು ದಿನ ಅಲ್ಲ, ಪ್ರತಿದಿನವೂ ಪ್ರಚಾರಕ್ಕೆ ಅಡ್ಡಿಪಡಿಸ್ತಿದ್ದಾರೆ. ಅವರು ಹತಾಶರಾಗಿರುವಂತೆ ಕಾಣುತ್ತಾರೆ. ರಾಜ್ಯದ ಮಾಜಿ ಮುಖ್ಯಮಂತ್ರಿಗೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ಸಹಿಸಿಕೊಂಡಿದ್ದೇನೆ. ಅರ್ಥ ಮಾಡಿಕೊಂಡಿಲ್ಲ ಎಂದರೆ ಹೇಗೆ ಎಂದು ಸಿದ್ದರಾಮಯ್ಯ ವಿರುದ್ಧ ಸಚಿವ ವಿ ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರದ ಉಗನೇಯ್ಯನಹುಂಡಿಯಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ವೇಳೆ ವರುಣ ಕ್ಷೇತ್ರದಲ್ಲಿ ಪ್ರಚಾರಕ್ಕೆ ಅಡ್ಡಿಯಾಗುತ್ತಿರುವ ಬಗ್ಗೆ ಸುದ್ದಿಗಾರರಿಗೆ ಸೋಮಣ್ಣ ಮಾತನಾಡಿದರು. “ಸಿದ್ದರಾಮಯ್ಯ ಮತ್ತೆ ಯಾಕೆ ಈ ರೀತಿ ಮಾಡಿ ಚಿಕ್ಕವರಾಗ್ತಿದ್ದಾರೆ ಗೊತ್ತಿಲ್ಲ. ನಾವೇನೂ ಕಾಲು ಕೆರೆದುಕೊಂಡು ಹೋಗಿರಲಿಲ್ಲ” ಎಂದು ಹೇಳಿದರು.
“ಪ್ರತಾಪ್ ಸಿಂಹ ಜವಾಬ್ದಾರಿಯುತ ಲೋಕಸಭಾ ಸದಸ್ಯ. ಆತ ನನಗೆ ಸಹೋದರ ಸಮಾನ, ಪಕ್ಷದ ಭವಿಷ್ಯದ ನಾಯಕ. ವಾಸ್ತವಾಂಶ ಇರುವುದನ್ನು ಮಾತನಾಡುತ್ತಾರೆ. ನಿಮ್ಮವರೇ ಜಗಳ ಮಾಡಿಸ್ತಿರೋದು. ಅವರು ಬಿಟ್ಟರೆ ಬೇರೆ ಯಾರೂ ಇಲ್ಲ. ನ್ಯಾಯಸಮ್ಮತ ಚುನಾವಣೆ ನಡೆಯಲಿ, ಮೇ 10ರಂದು ತೀರ್ಮಾನವಾಗಲಿ” ಎಂದು ಸಂಸದ ಪ್ರತಾಪ್ ಸಿಂಹ ಅವರಿಂದಲೇ ಗಲಾಟೆ ಆಗುತ್ತಿದೆ ಎಂಬ ಸಿದ್ದರಾಮಯ್ಯರ ಆರೋಪಕ್ಕೆ ತಿರುಗೇಟು ನೀಡಿದರು.
“ಸಿದ್ದರಾಮಯ್ಯ ಒಂದು ಬಾರಿ ವರುಣ ಕ್ಷೇತ್ರದಲ್ಲಿ ಓಡಾಡಲಿ. ಅದೆಷ್ಟು ಚೆನ್ನಾಗಿರುವ ರಸ್ತೆಗಳಿವೆ ನೋಡಲಿ. ಯಾವ ರೀತಿ ಅವ್ಯವಸ್ಥೆಯಿದೆ ನೋಡಲಿ. ಯಾವ ರೀತಿ ಜನರು ಒದ್ದಾಡ್ತಿದ್ದಾರೆ ಎಂದು ನೋಡಲಿ. ನಾನು ಒಬ್ಬನೇ ಅವರ ಜೊತೆಗೆ ಬರ್ತೀನಿ ಹೋಗೋಣ. ಸಿದ್ದರಾಮಯ್ಯ ಕರೆದರೆ ಹೋಗಲೂ ಸಿದ್ದ, ಹೋಗಿ ಸುತ್ತಾಡೋಣ. ಅವರು ಮಾಡಿರುವ ಕೆಲಸ ಅವರಿಗೆ ತೃಪ್ತಿ ತಂದಿದೆ ಅನಿಸಿದರೆ ಅವರಿಗೆ ನಮಸ್ಕಾರ ಮಾಡುತ್ತೇನೆ” ಎಂದರು.
ಈ ಸುದ್ದಿ ಓದಿದ್ದೀರಾ? ದೇವನಹಳ್ಳಿ ರೈತ ಹೋರಾಟ | ಬಿಜೆಪಿಗೆ ಮತ ನೀಡದಿರಲು 13 ಗ್ರಾಮಗಳ ನಿರ್ಧಾರ
“ನಿಜಲಿಂಗಪ್ಪ, ದೇವರಾಜ ಅರಸುಗಿಂತ ಸಿದ್ದರಾಮಯ್ಯ ದೊಡ್ಡವರಲ್ಲ. ಜನರು ತೀರ್ಮಾನ ಮಾಡುತ್ತಾರೆ. ಹಿಂದೆ ನೀವೂ (ಸಿದ್ದರಾಮಯ್ಯ) ಸೋತಾಗ ಮಂತ್ರಿಯಾಗಿದ್ರಷ್ಟೇ. ಇವತ್ತು ಮಾಜಿ ಸಿಎಂ, ವಿರೋಧ ಪಕ್ಷದ ನಾಯಕರಾಗಿ ನಿಂತಿದ್ದೀರಾ. ಸಿದ್ದರಾಮಯ್ಯ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದು ಬಿಟ್ಟು, ವಾಸ್ತಾವಾಂಶಕ್ಕೆ ಗಮನ ಕೊಟ್ಟರೆ ಒಳ್ಳೆಯದು” ಎಂದು ಹೇಳಿದರು.
“ನಾವು ಪ್ರಚಾರಕ್ಕೆ ಹೋದರೆ ಒಂದು ವರ್ಗದ ಜನ ರಸ್ತೆಗೆ ಅಡ್ಡಲಾಗಿ ನೊಗ ಇಟ್ಟು, ಆಚೆಗೆ ಹೋಗಬಾರದು ಎನ್ನುತ್ತಾರೆ. ನೀವೇ ಗೆಲ್ಲುವುದಾದರೆ ಇದೆಲ್ಲಾ ನಿಮಗೆ ಯಾಕೆ ಬೇಕು? ಪೊಲೀಸರಿಗೆ ಹಿಡಿದುಕೊಟ್ಟರೂ ಅವರನ್ನು ಬಿಟ್ಟು ಕಳುಹಿಸುತ್ತಾರೆ. ಚುನಾವಣಾ ಪ್ರಚಾರಕ್ಕೆ ಅಡ್ಡಿಪಡಿಸುವವರ ವಿರುದ್ಧ 326ರ ಅಡಿ ಪ್ರಕರಣ ದಾಖಲಿಸಬೇಕು” ಎಂದು ಆಗ್ರಹಿಸಿದರು.
“ನನ್ನ ವಿರುದ್ಧ ಏನಾದರೂ ಪಿತೂರಿ ಮಾಡಲಿ ಭಗವಂತ, ಚಾಮುಂಡಿ ತಾಯಿ ಇದ್ದಾರೆ. ಅಲ್ಲದೇ ಕ್ಷೇತ್ರದ ಜನರಿದ್ದಾರೆ. ನನ್ನ ಸೇವೆ ಬೇಕು ಎಂದರೆ ಕ್ಷೇತ್ರದ ಜನರು ಸಹಾಯ ಮಾಡುತ್ತಾರೆ. ಮಾಡದೇ ಇದ್ದರೆ ನನಗೇನೂ ಬೇಸರವಿಲ್ಲ” ಎಂದು ಹೇಳಿದರು.