ದೇವನಹಳ್ಳಿ ರೈತ ಹೋರಾಟ | ಬಿಜೆಪಿಗೆ ಮತ ನೀಡದಿರಲು 13 ಗ್ರಾಮಗಳ ನಿರ್ಧಾರ

Date:

  • ಶೇ.62ರಷ್ಟು ರೈತರು ಭೂಮಿ ನೀಡಲು ಸಿದ್ಧರಿದ್ದಾರೆ ಎಂದ ಬಿಜೆಪಿ ಅಭ್ಯರ್ಥಿ
  • ತಮ್ಮ ಹೇಳಿಕೆ ಸಾಕ್ಷಿ ಸಮೇತ ಸಾಬೀತು ಮಾಡಲು ಬಿಜೆಪಿ ಅಭ್ಯರ್ಥಿಗೆ ರೈತರ ಸವಾಲು

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ)ಯು ಕೈಗಾರಿಕಾ ಅಭಿವೃದ್ದಿ ಪ್ರದೇಶಕ್ಕಾಗಿ ರೈತರ ಫಲವತ್ತಾದ ಕೃಷಿ ಭೂಮಿ ಕಿತ್ತುಕೊಳ್ಳಲು ಹೊಟಿರುವುದನ್ನು ವಿರೋಧಿಸಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ 391 ದಿನಗಳನ್ನು ಪೂರೈಸಿದೆ. ತಮ್ಮ ಹೋರಾಟಕ್ಕೆ ಸ್ಪಂದಿಸದ ಬಿಜೆಪಿಗೆ ಈ ಬಾರಿಯ ಚುನಾವಣೆಯಲ್ಲಿ ಮತ ನೀಡದಿರಲು ರೈತರು ನಿರ್ಧರಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ 13 ಗ್ರಾಮಗಳ ರೈತರು ಕೆಐಎಡಿಬಿ ವಿರುದ್ಧ ಚನ್ನರಾಯಪಟ್ಟಣ ನಾಡಕಚೇರಿ ಎದುರು ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೂ, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ರೈತರ ಬೇಡಿಕೆಗಳ ಬಗ್ಗೆ ಗಮನ ಹರಿಸುತ್ತಲೇ ಇಲ್ಲ. ಹಾಗಾಗಿ ಈ ಬಾರಿ ಚುನಾವಣೆಯಲ್ಲಿ ತಮ್ಮ ಬೇಡಿಕೆಗಳಿಗೆ ಪೂರಕವಾಗಿ ಸ್ಪಂದಿಸುವ ಅಭ್ಯರ್ಥಿಗೆ ಮತ ನೀಡಲು ಮತ್ತು ಬಿಜೆಪಿ ಅಭ್ಯರ್ಥಿಗೆ ಮತ ನೀಡದಿರಲು ಸಾಮಾಜಿಕ ಜಾಲತಾಣ ಹಾಗೂ ಹಲವು ಮಾದರಿಯಲ್ಲಿ ಪ್ರಚಾರ ಆರಂಭಿಸಿದ್ದಾರೆ.

13 ಗ್ರಾಮಗಳಲ್ಲಿ 8,000 ಮತದಾರರು

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ನಿರಂತವಾಗಿ ಹೋರಾಟ ನಡೆಸುತ್ತಿರುವ 13 ಹಳ್ಳಿಗಳ ರೈತರು ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಯಾವ ನಿಲುವನ್ನು ಹೋಂದಿದ್ದಾರೆ ಎಂಬುದರ ಕುರಿತು ರೈತ ಮುಖಂಡ ಚಿಮಾಚನಹಳ್ಳಿ ರಮೇಶ್‌ ಅವರು ಈದಿನ.ಕಾಮ್‌ಗೆ ವಿವರಿಸಿದ್ದಾರೆ.

“ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ರೈತರ ಬೇಡಿಕೆಗಳ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ಬಿಜೆಪಿ ಅಭ್ಯರ್ಥಿಗೆ ಮತ ನೀಡಬಾರದು ಎಂದು ನೇರವಾಗಿ ಎಲ್ಲ ಕಡೆ ಪ್ರಚಾರ ಮಾಡುತ್ತಿದ್ದೇವೆ. ಈ 13 ಗ್ರಾಮಗಳಲ್ಲಿ ಅಂದಾಜು 8,000 ಮಂದಿ ಮತದಾರರಿದ್ದಾರೆ. ಅಷ್ಟು ಮಾತ್ರವಲ್ಲ ರೈತರ ಹೋರಾಟವನ್ನು ಇಡೀ ತಾಲೂಕಿನ ಜನ ನೋಡುತ್ತಿದ್ದಾರೆ. ಇದು ಚುನಾವಣೆ ಮೇಲೂ ಪರಿಣಾಮ ಬೀರಲಿದೆ” ಎಂದು ರಮೇಶ್‌ ಹೇಳಿದರು.

“ಜೆಡಿಎಸ್‌ ಹಾಲಿ ಶಾಸಕ ಮತ್ತು ಅಭ್ಯರ್ಥಿ ನಿಸರ್ಗ ನಾರಾಯಣಸ್ವಾಮಿ ಪ್ರತಿಭಟನಾ ಸ್ಥಳಕ್ಕೆ ಬಂದು ನಾವು ಯಾವುದೇ ಸಂದರ್ಭದಲ್ಲೂ ನಿಮ್ಮ ಜೊತೆಗೆ ಇರುತ್ತೇವೆ ಎಂದು ರೈತರ ಜೊತೆಗೆ ಮಾತನಾಡಿ ಹೋಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್‌ ಮುನಿಯಪ್ಪ ಕೂಡ ಬಂದು ಏನಾಗಿದೆ ಎಂದು ಕೂಲಂಕಷವಾಗಿ ತಿಳಿದುಕೊಂಡು ನಂತರ ಮಾತನಾಡುವುದಾಗಿ ಹೇಳಿದ್ದಾರೆ” ಎಂದರು.

ದೇವನಹಳ್ಳಿ
ಪ್ರತಿಭಟನಾ ಸ್ಥಳಕ್ಕೆ ಭೇಟಿನೀಡಿದ ಕಾಂಗ್ರೆಸ್‌ ಅಭ್ಯರ್ಥಿ ಕೆ ಎಚ್‌ ಮುನಿಯಪ್ಪ

ಬಿಜೆಪಿ ಅಭ್ಯರ್ಥಿಯ ಗೊಂದಲದ ಹೇಳಿಕೆ

“ಬಿಜೆಪಿ ಅಭ್ಯರ್ಥಿ ಪಿಳ್ಳ ಮುನಿಶಾಮಪ್ಪ ಸ್ಥಳಕ್ಕೆ ಬಂದ ವೇಳೆ ‘ಒಂದು ವರ್ಷದಿಂದ ನಾವು ಇಲ್ಲೇ ಧರಣಿ ಕುಳಿತಿದ್ದೇವೆ. ಆದರೂ ನಿಮ್ಮ ಬಿಜೆಪಿ ಸರ್ಕಾರ ಏನು ಮಾಡಲಿಲ್ಲ. ನೀವು ಯಾಕೆ ಈಗ ಮತ ಕೇಳಲು ಬಂದಿದ್ದೀರಾ?’ ಎಂದು ಪ್ರಶ್ನೆ ಮಾಡಿದಾಗ, ‘ಹೋರಾಟನಿರತ ಗ್ರಾಮಗಳ ಶೇ.62ರಷ್ಟು ರೈತರು ಕೈಗಾರಿಕಾ ಅಭಿವೃದ್ಧಿ ಪ್ರದೇಶಕ್ಕೆ ಭೂಮಿ ಕೊಡುವುದಾಗಿ ಬರೆದು ಕೊಟ್ಟಿದ್ದಾರೆ. ಹಾಗಾಗಿ ನಾವು ಏನು ಮಾಡಲು ಆಗುವುದಿಲ್ಲ. ಅಲ್ಲದೆ, ನಾನೇನು ಶಾಸಕ ಅಲ್ಲ’ವೆಂದು ಹೇಳಿಕೆ ನೀಡಿದ್ದಾರೆ” ಎಂದು ವಿವರಿಸಿದರು.

“ಬಿಜೆಪಿ ಅಭ್ಯರ್ಥಿ ಪಿಳ್ಳ ಮುನಿಶಾಮಪ್ಪ ಒಂದು ಕಡೆ ಶೇ.62 ರಷ್ಟು ರೈತರು ಭೂಮಿ ಕೊಡಲು ಒಪ್ಪಿದ್ದಾರೆ ಎಂದು ಹೇಳುತ್ತಾರೆ. ಮತ್ತೊಂದು ಕಡೆ ನಾನು ಶಾಸಕನಾಗಿದ್ದರೆ ಸಮಸ್ಯೆ ಬಗೆಹರಿಸುತ್ತಿದ್ದೆ ಎಂದು ಹೇಳುವ ಮೂಲಕ ಈಗಿರುವ ಜೆಡಿಎಸ್‌ ಶಾಸಕರ ಮೇಲೆ ಹೊಣೆ ಹೊರಿಸಲು ಹೊರಟಿದ್ದಾರೆ” ಎಂದು ಆರೋಪಿಸಿದರು.

“ಶೇ.62ರಷ್ಟು ರೈತರು ಭೂಮಿ ನೀಡಲು ಮುಂದಾಗಿದ್ದಾರೆ ಎಂಬುದನ್ನು ಬಿಜೆಪಿ ಅಭ್ಯರ್ಥಿ ಸಾಕ್ಷಿ ಸಮೇತ ಸಾಬೀತು ಮಾಡಬೇಕು. ಒಂದು ವೇಳೆ ಅವರು ಹೇಳುವುದು ನಿಜವಾದರೆ ನಾವು ಸರ್ಕಾರದ ಕ್ಷಮೆ ಕೇಳಿ ಧರಣಿಯನ್ನು ಹಿಂಪಡೆಯುತ್ತೇವೆ. ಇಲ್ಲದಿದ್ದರೆ ನಾವು ಅದೇ ಶೇ. 62ರಷ್ಟು ರೈತರು ಭೂಮಿ ನೀಡಲು ತಯಾರಿಲ್ಲ ಎಂಬುದನ್ನು ಈ ಕ್ಷಣವೇ ದಾಖಲೆ ಸಮೇತ ಸಾಬೀತು ಮಾಡುತ್ತೇವೆ. ನೀವು ಮುಖ್ಯಮಂತ್ರಿ ಅವರಿಂದ ರೈತರ ಕ್ಷಮೆ ಕೇಳಿಸಬೇಕು” ಎಂದು ರಮೇಶ್ ಸವಾಲು ಹಾಕಿದರು. ಈ ಬಗ್ಗೆ, ಶನಿವಾರ ರೈತ ಮುಖಂಡರು ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ತಿಳಿಸಿದರು.

ದೇವನಹಳ್ಳಿ
ಪ್ರತಿಭಟನಾ ನಿತರ ರೈತರನ್ನು ಜೆಡಿಎಸ್‌ ಶಾಸಕ ನಿಸರ್ಗ ನಾರಾಯಣಸ್ವಾಮಿ ಭೇಟಿ ನೀಡಿ ಚರ್ಚಿಸಿದರು

ದೇವನಹಳ್ಳಿ ರೈತ ಹೋರಾಟದ ಹಿನ್ನೋಟ

ಕೆಐಎಡಿಬಿ 2018-19ರಲ್ಲಿ ಹರಳೂರು ಕೈಗಾರಿಕಾ ಅಭಿವೃದ್ದಿ ಪ್ರದೇಶಕ್ಕಾಗಿ ಮೊದಲ ಹಂತದಲ್ಲಿ 1,300 ಎಕರೆ ಜಮೀನು ಸ್ವಾಧೀನ ಪಡಿಸಿಕೊಂಡಿತ್ತು. ಅಷ್ಟು ಜಮೀನು ಸಾಕಾಗುವುದಿಲ್ಲವೆಂದು ಮತ್ತೆ ಎರಡನೇ ಹಂತದಲ್ಲಿ 1,777 ಎಕರೆ ಜಮೀನು ವಶಪಡಿಸಿಕೊಳ್ಳಲು ಮುಂದಾಗಿದೆ.

ಬದುಕಿಗೆ ಆಧಾರವಾಗಿರುವ ಫಲವತ್ತಾದ ಕೃಷಿ ಭೂಮಿಯನ್ನು ಕಳೆದುಕೊಳ್ಳಲು ಒಪ್ಪದ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ರೈತರು 391 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.

2022ರ ಜನವರಿ 28ರಂದು ಚನ್ನರಾಯಪಟ್ಟಣ ಹೋಬಳಿ ನಾಡ ಕಚೇರಿ ಎದುರು ಸಾಂಕೇತಿಕವಾಗಿ ಒಂದು ದಿನ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಕೆಐಎಡಿಬಿ ರೈತರಿಗೆ ನೀಡಿದ್ದ ನೋಟಿಸ್‌ಗಳನ್ನು ಸಾರ್ವಜನಿಕವಾಗಿ ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಬಳಿಕ 2022ರ ಏಪ್ರಿಲ್ 4ರಿಂದ ಧರಣಿ ಆರಂಭಿಸಲಾಗಿದ್ದು, ಇಂದಿದೆ 391 ದಿನಗಳನ್ನು ಪೂರೈಸಿದೆ.

ಈ ಸುದ್ದಿ ಓದಿದ್ದೀರಾ? ಬೀದರ್ | ಬಿಜೆಪಿ ಗೆದ್ದರೆ ನಮಗೆ ಉಳಿಗಾಲವಿಲ್ಲ; ಬಂಡೆಪ್ಪ ಖಾಶೆಂಪುರ್ ಮತಯಾಚನೆ

ದೇವನಹಳ್ಳಿ ರೈತರು ಕಳೆದುಕೊಂಡ ಭೂಮಿ ಎಷ್ಟು?

ದೇವನಹಳ್ಳಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ 1999-2000ರಲ್ಲಿ ಅಂದಾಜು 4,030 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಬಾವಾಪುರ, ಅರಿಶಿನಗುಂಟೆ ಹಾಗೂ ಗಂಗೋಪನಹಳ್ಳಿ ಎಂಬ ಮೂರು ಹಳ್ಳಿಗಳ ಜನರನ್ನು ಸಂಪೂರ್ಣವಾಗಿ ಸ್ಥಳಾಂತರ ಮಾಡಲಾಗಿತ್ತು. 200ಕ್ಕೂ ಹೆಚ್ಚು ಕುಟಂಬಗಳಿಗೆ ಸೂಲಿಬೆಲೆ ಪಕ್ಕದ ಬಾಲೆಪುರ ಎಂಬಲ್ಲಿ ನಿವೇಶನ ನೀಡಲಾಗಿತ್ತು. ಅವರು ಕಳೆದುಕೊಂಡ ಜಮೀನಿಗೆ ಸೂಕ್ತ ದಾಖಲೆ ಇದ್ದವರಿಗೆ ಮಾತ್ರ ಸರ್ಕಾರ ಪ್ರತಿ ಎಕರೆಗೆ 5 ಲಕ್ಷ ರೂ. ಪರಿಹಾರ ನೀಡಿತ್ತು. ಅವರಿಗೆ ಉದ್ಯೋಗ ನೀಡುವ ಭರವಸೆ ನೀಡಿತ್ತು. ಆದರೆ 2008ರಲ್ಲಿ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿದಾಗ ಅವರಿಗೆ ಯಾವುದೇ ಉದ್ಯೋಗ ನೀಡಲಿಲ್ಲ.

ಏರೋಸ್ಪೇಸ್ ಎಸ್‌ಇಜೆಡ್‌ಗಾಗಿ 2014-15 ರಲ್ಲಿ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ 900 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಬಳಿಕ ಆ ಜಮೀನನ್ನು ಹಲವು ಕೈಗಾರಿಕೆಗಳಿಗೆ ವಿತರಿಸಲಾಯಿತು. ಆದರೂ ಇದುವರೆಗೂ ಯಾವುದೇ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ.

2018-19 ರಲ್ಲಿ ಹರಳೂರು ಕೈಗಾರಿಕಾ ಅಭಿವೃದ್ದಿ ಪ್ರದೇಶಕ್ಕಾಗಿ ಮೊದಲ ಹಂತದಲ್ಲಿ 1,300 ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಎರಡನೇ ಹಂತದಲ್ಲಿ 1,777 ಎಕರೆ ಜಮೀನು ವಶಪಡಿಸಿಕೊಳ್ಳಲು ಕೆಐಡಿಬಿ ಮುಂದಾಗಿರುವುದು ಆ ಭಾಗದ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಚನ್ನರಾಯಪಟ್ಟಣದಲ್ಲಿ ರೈತರು ‘ನಮಗೆ ಹಣ ಬೇಡ ಭೂಮಿಯೇ ಬೇಕು’ ಎಂದು ಪಟ್ಟು ಹಿಡಿದಿದ್ದಾರೆ. ಬದುಕಿಗೆ ಆಸರೆಯಾಗಿರುವ ಭೂಮಿ ಕೈಬಿಟ್ಟು ಹೋಗುವ ಆತಂಕದಲ್ಲಿರುವ ರೈತರು ಗಟ್ಟಿ ಧ್ವನಿಯಲ್ಲಿ ಆಗ್ರಹಿಸುತ್ತಿದ್ದಾರೆ. ಹೋರಾಟವನ್ನು ದುರ್ಬಲಗೊಳಿಸಲು ಪೊಲೀಸರ ಮೂಲಕ ಲಾಠಿ ಪ್ರಹಾರ ಮಾಡಲಾಗಿದೆ. 70ಕ್ಕೂ ಹೆಚ್ಚು ಮಂದಿ ರೈತರ ವಿರುದ್ಧ ಕ್ರಿಮಿನಲ್‌ ಕೇಸು ದಾಖಲಿಸಲಾಗಿದೆ. ಆದರೂ ಪಟ್ಟುಬಿಡದೆ ತುಂಡು ಭೂಮಿ ಉಳಿಸಿಕೊಳ್ಳಲು ಹೋರಾಟ ಇನ್ನೂ ಮುಂದುವರಿದಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ; ಮತದಾನ ಮಾಡಲು ಬಂದ ವೈದ್ಯನಿಂದ ಜೀವ ರಕ್ಷಣೆ

ಬೆಂಗಳೂರಿನ ಜೆ ಪಿ ನಗರದಲ್ಲಿರುವ ಜಂಬೂ ಸವಾರಿ ದಿನ್ನೆ ಮತಗಟ್ಟೆಯಲ್ಲಿ ಮತದಾನ...

ಚಿತ್ರದುರ್ಗ | ಲೋಕಸಭಾ ಚುನಾವಣೆ; ಕರ್ತವ್ಯದಲ್ಲಿದ್ದ ಮಹಿಳಾ ಸಿಬ್ಬಂದಿ ಸಾವು

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿ ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಮಹಿಳಾ...

ಶಿವಮೊಗ್ಗ | ಬಂಗಾರಪ್ಪನವರು ನಮ್ಮ ಮನೆಯ ನಂದಾದೀಪ; ತಿಮ್ಲಾಪುರದ ಮಹಿಳೆಯರು ಸಂತಸ

"ಬಂಗಾರಪ್ಪನವರು ನಮ್ಮ ಮನೆಯ ನಂದಾದೀಪ" ಯಾವ ಸರ್ಕಾರ ಏನೇ ಮಾಡಿದರೂ 32...

ಕೋಲಾರ | ಮೂಲಭೂತ ಸೌಕರ್ಯ ಕೊರತೆ : ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು

ದೇಶದಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದ್ದರೇ, ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ...