ವಿಜಯಪುರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಕೊನೆ ಕ್ಷಣದಲ್ಲಿ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರೆ. ಈ ಬೆಳವಣಿಗೆಯಿಂದ ಕ್ಷೇತ್ರದಲ್ಲಿ ರಾಜಕೀಯ ಲೆಕ್ಕಾಚಾರ ಅದಲು ಬದಲಾಗುವ ಸಾಧ್ಯತೆ ಇದೆ. ಬಿಜೆಪಿ ಮತ್ತು ಕಾಂಗ್ರೆಸ್ ವೋಟಿಂಗ್ ಲೆಕ್ಕಾಚಾರ ಏರುಪೇರಾಗಲಿದ್ದು, ಯಾರಿಗೆ ಲಾಭವಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ರಾಜ್ಯ ವಿಧಾನಸಭೆ ಚುನಾವಣೆಯ ಮತದಾನಕ್ಕೆ 9 ದಿನ ಬಾಕಿಯಿದ್ದು, ಈ ನಡುವೆ ವಿಜಯಪುರದಲ್ಲಿ ಕ್ಷೇತ್ರದ ರಾಜಕೀಯ ಲೆಕ್ಕಾಚಾರ ಬದಲಾಯಿಸುವಂತಹ ಕ್ಷಿಪ್ರ ರಾಜಕೀಯ ಬೆಳವಣಿಗೆಯೊಂದು ನಡೆದಿದೆ. ಹೀಗಾಗಿ, ಯತ್ನಾಳ್ ರಾಜಕೀಯ ಬದುಕಿನ ಮೇಲೆ ಪ್ರಶ್ನಾರ್ಥಕ ಚಿಹ್ನೆ ಬಿದ್ದಿದೆ.
ಜೆಡಿಎಸ್ ಅಭ್ಯರ್ಥಿ ಬಂದೇನವಾಜ್ ಮಹಾಬರಿ ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿ ತಿಳಿಸಿ, ಕಾಂಗ್ರೆಸ್‌ಗೆ ತಮ್ಮ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ.
“ವಿಜಯಪುರ ನಗರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಸಂಘಟನೆ ಇಲ್ಲ, ಕಾರ್ಯಕರ್ತರ ಪಡೆಯೂ ಇಲ್ಲ. ಎರಡು ದಿನ ಪ್ರಚಾರ ನಡೆಸಿದಾಗ ನನಗೆ ಉತ್ತಮ ಪ್ರತಿಕ್ರಿಯೆ ಸಿಗಲಿಲ್ಲ. ಹೀಗಾಗಿ ಚುನಾವಣೆ ಕಣದಿಂದ ಹಿಂದೆ ಸರಿಯುತ್ತಿದ್ದೇನೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಅಬ್ದುಲ್ ಹಮೀದ್ ಮುಶ್ರೀಫ್ಗೆ ನನ್ನ ಬೆಂಬಲ ಇರಲಿದೆ. ಅವರ ಪರವಾಗಿ ನಾನು ಪ್ರಚಾರ ಮಾಡುವೆ” ಎಂದು ಭಾನುವಾರ ಮಾಧ್ಯಮಗಳ ಮುಂದೆ ಬಂದೇನವಾಜ್ ಮಹಾಬರಿ ಸ್ಪಷ್ಟಪಡಿಸಿದ್ದಾರೆ.
ಜೆಡಿಎಸ್ ಅಭ್ಯರ್ಥಿಯ ಈ ನಡೆಯಿಂದ ವಿಜಯಪುರ ಕ್ಷೇತ್ರದ ರಾಜಕೀಯ ಲೆಕ್ಕಾಚಾರ ಅದಲು ಬದಲಾಗುವ ಸಾಧ್ಯತೆ ಇದೆ. ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ್ ಅವರ ವೋಟಿಂಗ್ ಲೆಕ್ಕಾಚಾರ ತಲೆಕೆಳಗಾಗಲಿದೆ ಎನ್ನುವ ಮಾತುಗಳು ಒಂದೆಡೆ ಕೇಳಿ ಬಂದರೆ, ಈ ಬೆಳವಣಿಗೆಯಿಂದ ಯತ್ನಾಳ್‌ಗೆ ಮತ್ತಷ್ಟು ಬಲ ತರಲಿದೆ ಎಂಬ ಮಾತುಗಳು ಕೂಡ ಕೇಳಿಬಂದಿವೆ.
ಪ್ರತಿ ಚುನಾವಣೆಯಲ್ಲೂ ಧರ್ಮಾಧಾರಿತ ರಾಜಕಾರಣದ ಅಖಾಡವಾಗುವ ವಿಜಯಪುರದಲ್ಲಿ ಜೆಡಿಎಸ್ ಅಭ್ಯರ್ಥಿ ನಡೆಯಿಂದಾಗಿ ಧರ್ಮ ರಾಜಕಾರಣ ಮತ್ತಷ್ಟು ಹೊಳಪು ಪಡೆದುಕೊಂಡಿದೆ. ಭಾನುವಾರ ಇಡೀ ದಿನ ಬಿಜೆಪಿಯಲ್ಲಿ ಸರಣಿ ಸಭೆಗಳು ನಡೆದಿದ್ದು, ಹಿಂದುತ್ವದ ಫೈರ್‌ಬ್ರ್ಯಾಂಡ್ ಖ್ಯಾತಿಯ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ಮುಸ್ಲಿಂ ಸಮುದಾಯ ಒಗ್ಗಟ್ಟಾಗುತ್ತಿದೆ ಎನ್ನುವ ವಿಚಾರ ಮುನ್ನೆಲೆಗೆ ಬಂದಿದೆ.
ನಿನ್ನೆವರೆಗೂ ಯತ್ನಾಳ್ ವಿರುದ್ಧ ಅಸಮಾಧಾನತರಾಗಿದ್ದ ಗಾಣಿಗ ಮತ್ತು ಬಲಿಜಗ ಲಿಂಗಾಯತ ಸಮುದಾಯವು ಮುಸ್ಲಿಂ ಸಮುದಾಯದ ಒಗ್ಗಟ್ಟಿನ ನಡೆ ಕಂಡು ತಾವೂ ಕೂಡ ಒಗ್ಗಟ್ಟಾಗಿ ಯತ್ನಾಳ್ ಅವರನ್ನು ಬೆಂಬಲಿಸುವುದು ಸೂಕ್ತ ಎನ್ನುವ ವಿಚಾರಕ್ಕೆ ಬಂದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸೋಮವಾರ ವಿಜಯಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್ ಪರ ಕಾಂಗ್ರೆಸ್‌ನ ಸ್ಟಾರ್ ಕಾಂಪೇನರ್ ಸ್ಥಾನ ಪಡೆದ ಲಿಂಗಾಯತ ನಾಯಕ ಜಗದೀಶ್ ಶೆಟ್ಟರ್ ಪ್ರಚಾರಕ್ಕೆ ಬರಲಿದ್ದಾರೆ ಎನ್ನಲಾಗಿತ್ತು. ಆದರೆ, ವಿಜಯಪುರದ ಬಲಿಜಿಗ ಲಿಂಗಾಯತ ಸಮುದಾಯ ಜಗದೀಶ್ ಶೆಟ್ಟರ್ ಅವರನ್ನು ಪ್ರಚಾರಕ್ಕೆ ಬರಬೇಡಿ ಎಂದು ಕೇಳಿಕೊಂಡಿದ್ದರಿಂದ ಇಂದಿನ ಶೆಟ್ಟರ್ ಅವರ ಪ್ರಚಾರ ಸಭೆ ರದ್ದಾಗಿದೆ.
“ಇದು ಕೇವಲ ವಿಜಯಪುರದ ವಿಷಯ. ಇಲ್ಲಿ ಯಾವಾಗಲೂ ಹಿಂದೂ-ಮುಸ್ಲಿಂ ವಿಚಾರವಾಗಿಯೇ ಚುನಾವಣೆ ನಡೆಯುತ್ತದೆ. ನಿಮ್ಮ ಕ್ಷೇತ್ರದಲ್ಲಿ ನಾವು ನಿಮಗೆ ಬೆಂಬಲಿಸುತ್ತೇವೆ. ನೀವು ಇಲ್ಲಿ ಪ್ರಚಾರ ಮಾಡಿ ಹೋದ್ರೆ ಮುಂದೆ ಅನುಭವಿಸವವರು ನಾವು. ಹೀಗಾಗಿ ಯಾವುದೇ ಕಾರಣಕ್ಕೂ ವಿಜಯಪುರ ಪ್ರಚಾರಕ್ಕೆ ಬರಬೇಡಿ” ಎಂದು ಲಿಂಗಾಯತ ಸಮುದಾಯದ ಮುಖಂಡರು ಜಗದೀಶ್ ಶೆಟ್ಟರ್ ಅವರಿಗೆ ಕೋರಿಕೊಂಡಿದ್ದಾರೆ ಎನ್ನಲಾಗಿದೆ.
ಹಾಗೆಯೇ ಗಾಣಿಗ ಲಿಂಗಾಯತ ನಾಯಕ ಲಕ್ಷ್ಮಣ ಸವದಿಗೂ ಕೂಡ ವಿಜಯಪುರ ಪ್ರಚಾರಕ್ಕೆ ಬರದಂತೆ ಗಾಣಿಗ ಸಮುದಾಯ ತಡೆ ನೀಡಿದೆ. ಹೀಗಾಗಿ ಲಕ್ಷ್ಮಣ ಸವದಿ ಕೂಡ ವಿಜಯಪುರ ರಾಜಕಾರಣಲ್ಲಿ ಇನ್ನೂ ಭಾಗಿಯಾಗಿಲ್ಲ.
ಈ ಸುದ್ದಿ ಓದಿದ್ದೀರಾ? ಈದಿನ.ಕಾಮ್ ಸಮೀಕ್ಷೆ-8: ಕಾಂಗ್ರೆಸ್‌ಗೆ ಸಿಗಲಿದೆ ಸ್ಪಷ್ಟ ಬಹುಮತ; 132-140 ಸೀಟುಗಳ ನಿರೀಕ್ಷೆ
ಕಾಂಗ್ರೆಸ್‌ಗೆ ವರವಾಗುತ್ತಾ ಬಂದೇನವಾಜ್ ನಡೆ?
ವಿಜಯಪುರ ನಗರ ಮುಸ್ಲಿಂ ಬಾಹುಳ್ಯದ ಕ್ಷೇತ್ರವಾಗಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್‌ನಿಂದ ಮುಸ್ಲಿಂ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಹೀಗಾಗಿ ಅಧಿಕವಾಗಿರುವ ಮುಸ್ಲಿಂ ಮತಗಳು ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ವಿಭಜನೆಯಾಗಲಿದ್ದು, ತಮ್ಮ ಗೆಲುವಿಗೆ ಸಹಕಾರಿಯಾಗಲಿದೆ ಎನ್ನುವ ವಿಶ್ವಾಸದಲ್ಲಿ ಯತ್ನಾಳ್ ಇದ್ದರು. ಈಗ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಒಂದಾಗಿರುವುದರಿಂದ ಸಹಜವಾಗಿ ಮತಗಳು ಹಂಚಿಕೆಯಾಗದೇ ಕಾಂಗ್ರೆಸ್ ಅಭ್ಯರ್ಥಿಗೆ ಲಾಭವಾಗಲಿದೆ ಎನ್ನುವ ಮಾತುಗಳು ಇದೇ ಸಮಯದಲ್ಲಿ ಕೇಳಿಬರುತ್ತಿವೆ.
ಮುಸ್ಲಿಂ ಮತಗಳೊಂದಿಗೆ ಎಸ್‌ಸಿ, ಎಸ್‌ಟಿ ಸೇರಿದಂತೆ ಇತರೆ ಸಮುದಾಯಗಳ ಅಲ್ಪ-ಸ್ವಲ್ಪ ಮತಗಳನ್ನು ಕಾಂಗ್ರೆಸ್ ಅಭ್ಯರ್ಥಿ ತೆಗೆದುಕೊಂಡರೂ ಯತ್ನಾಳ್‌ಗೆ ಗೆಲುವು ಕಷ್ಟವಾಗಲಿದೆ ಎಂಬುದು ಕಾಂಗ್ರೆಸ್ ವಲಯದಲ್ಲಿರುವ ಲೆಕ್ಕಾಚಾರ.
ವಿಜಯಪುರ ನಗರ ಕ್ಷೇತ್ರದಲ್ಲಿ ಇತ್ತೀಚಿನ ಮಾಹಿತಿಯಂತೆ 2,62,645 ಮತದಾರರು ಇದ್ದು, ಮುಸ್ಲಿಮರು 67 ಸಾವಿರ, ಲಿಂಗಾಯಿತರು 53 ಸಾವಿರ, ಎಸ್‌ಸಿ ಎಸ್‌ಟಿ ಸಮುದಾಯದ 37 ಸಾವಿರ, ಗಾಣಿಗರು 20 ಸಾವಿರ, ಬ್ರಾಹ್ಮಣರು 15 ಸಾವಿರ ಮತದಾರರಿದ್ದಾರೆ.
ಅಲ್ಪ ಮತಗಳ ಅಂತರದಲ್ಲಿ ಗೆದ್ದಿದ್ದ ಯತ್ನಾಳ್
2013ರಲ್ಲಿ ಕಾಂಗ್ರೆಸ್‌ನ ಮಕ್ಬುಲ್ ಎಸ್ ಭಗವಾನ್ 48,615 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರೆ, ಬಸನಗೌಡ ಪಾಟೀಲ್ ಯತ್ನಾಳ್ ಜೆಡಿಎಸ್‌ನಿಂದ ಸ್ಪರ್ಧಿಸಿ 39,235 ಮತ ಪಡೆದು ಸೋಲು ಅನುಭವಿಸಿದ್ದರು. ಬಿಜೆಪಿಯಿಂದ ಅಪ್ಪು ಪಟ್ಟಣಶೆಟ್ಟಿ ಅವರು 26,235 ಮತ ಪಡೆದು ತೀವ್ರ ಫೈಟ್ ನೀಡಿದ್ದರು.
ಬಳಿಕ 2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಸನಗೌಡ ಪಾಟೀಲ್ ಯತ್ನಾಳ್ 76,308 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನ ಅಬ್ದುಲ್ ಹಮೀದ್ ಮುಶ್ರೀಫ್ 69,895 ಮತ ಪಡೆಯುವುದರೊಂದಿಗೆ ಸೋಲು ಅನುಭವಿಸಿದ್ದರು. ಯತ್ನಾಳ್ ಕೇವಲ 6413 ಮತಗಳ ಅಂತರದಲ್ಲಿ ಮಾತ್ರ ಗೆಲುವು ಸಾಧಿಸಿದ್ದರು. ಇದೀಗ ಜೆಡಿಎಸ್ ಸಹ ಕಾಂಗ್ರೆಸ್ ಜೊತೆ ಕೈಜೋಡಿಸಿದ್ದು, ರಾಜಕೀಯ ಮತ್ತಷ್ಟು ರಂಗೇರಿದೆ.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.