- ಮೂರು ತಲೆಮಾರುಗಳ ಇತಿಹಾಸ ಹೊಂದಿರುವ ಮೈಲಾರಿ ಹೋಟೆಲ್
- ಸಾಂಪ್ರದಾಯಿಕ ರುಚಿಗೆ ಹೆಸರಾಗಿರುವ ಮೈಸೂರಿನ ದೋಸೆ ಹೋಟೆಲ್
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸದಲ್ಲಿರುವ ಕಾಂಗ್ರೆಸ್ ಸ್ಟಾರ್ ಪ್ರಚಾರಕಿ, ಪ್ರಿಯಾಂಕಾಗಾಂಧಿ ತಮ್ಮ ಅಣ್ಣ ರಾಹುಲ್ ಗಾಂಧಿ ಸರಳತೆ ಮೆರೆದು ಸುದ್ದಿಯಾದರು.
ಮೈಸೂರಿನ ಪ್ರಸಿದ್ದ ವಿನಾಯಕ ಮೈಲಾರಿ ಹೋಟೆಲ್ಗೆ ತೆರಳಿದ ಪ್ರಿಯಾಂಕಾ ಅಲ್ಲಿ ಜನಮನ್ನಣೆಯ ಮಸಾಲೆ ದೋಸೆ ಸವಿದರು.
ದೋಸೆ ರುಚಿ ನೋಡುವ ಮೊದಲು ಹೋಟೆಲ್ ಅಡುಗೆ ಕೋಣೆ ಹೊಕ್ಕ ಇಂದಿರಮ್ಮನ ಮೊಮ್ಮಗಳು ಅಲ್ಲಿ ದೋಸೆ ಕೈ ಹಿಡಿದು ಕಾದ ಹೆಂಚಿನ ಮೇಲೆ ಹಿಟ್ಟು ಸುರಿದು ತಾವೇ ದೋಸೆ ಮಾಡಿದರು.
ಜೊತೆ ತಮ್ಮ ಕೈರುಚಿಯ ದೋಸೆಯನ್ನು ಜೊತೆಯಲ್ಲಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಮಹಿಳಾ ಯುವ ಮುಖಂಡೆ ಐಶ್ವರ್ಯ ಮಂಚನಹಳ್ಳಿಯವರಿಗೂ ಹಂಚಿದರು.
ಪ್ರಿಯಾಂಕಾ ಗಾಂಧಿಯವರ ಈ ನಡೆ ಹೋಟೆಲ್ ನವರನ್ನೂ ಒಳಗೊಂಡಂತೆ ಎಲ್ಲರ ಮನಸೂರೆಗೊಂಡಿತು. ಅವರ ಸರಳತೆಯನ್ನು ಜನ ಕೊಂಡಾಡಿದರು. ತಿಂಡಿ ವೇಳೆ ತಮಗೆ ಜೊತೆಯಾದ ಕೆಲ ಮಕ್ಕಳೊಂದಿಗೂ ಪ್ರಿಯಾಂಕ ಕೆಲಕಾಲ ಸಮಯ ಕಳೆದರು.
ಹೊರಡುವ ಮುನ್ನ ಹೋಟೆಲ್ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ ಅವರು, ನಾನಿಲ್ಲಿ ದೋಸೆ ಜೊತೆಗೆ ಇಡ್ಲಿಯನ್ನೂ ಸವಿದಿದ್ದೇನೆ. ಎಲ್ಲವೂ ತುಂಬಾ ರುಚಿಕರವಾಗಿತ್ತು.
ಇದನ್ನು ಮನೆಯಲ್ಲಿ ಹೇಗೆ ಮಾಡಬೇಕು ಎಂಬುದನ್ನು ತಿಳಿದುಕೊಂಡಿದ್ದೇನೆ. ಊರಿಗೆ ಹೋದ ಮೇಲೆ ನಾನು ಇದನ್ನು ಟ್ರೈ ಮಾಡುತ್ತೇನೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ?: ರೌಡಿಶೀಟರ್ ಮಣಿಕಂಠ ಪರ ಮೋದಿ ಪ್ರಚಾರ; ಮೋದಿ-ಅಮಿತ್ ಶಾಗೆ ಹಳೆ ಗುಜರಾತ್ ನೆನಪಾಗಿರಬೇಕು ಎಂದ ಜೆಡಿಎಸ್
ಈ ಹಿಂದೆ ರಾಜ್ಯದಲ್ಲಿ ನಡೆದ ಜನಾಶೀರ್ವಾದ ಯಾತ್ರೆ ಹಾಗೂ ಇತ್ತೀಚೆಗೆ ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಕೂಡ ಇದೇ ರೀತಿ ಸರಳತೆ ಮೆರೆದಿದ್ದರು.
ರಸ್ತೆ ಬದಿಯ ಗೂಡಂಗಡಿಗಳಲ್ಲಿ ಬಜ್ಜಿ ಚಹಾ ಸೇವನೆ, ಹೊಲಕ್ಕೆ ತೆರಳಿ ಕಬ್ಬು, ಸೌತೇಕಾಯಿ ಕಿತ್ತು ತರುವ, ಜನಸಾಮಾನ್ಯರೊಂದಿಗೆ ಬೆರೆತು ತೋರಿಸಿದ್ದರು.
ಮೈಲಾರಿ ದೋಸೆ :
80 ವರ್ಷ ಹಳೆಯದಾದ ವಿನಾಯಕ ಮೈಲಾರಿ ದೋಸೆ ಹೋಟೆಲ್ ಮೈಸೂರಿನಲ್ಲಿದೆ. ಸಾಂಪ್ರದಾಯಿಕ ಸೌದೇ ಒಲೆ ದೋಸೆಗಳಿಗೆ ಇದು ಇಂದಿಗೂ ಹೆಸರುವಾಸಿ. ವಿದೇಶಗಳಲ್ಲೂ ಇದರ ಸ್ವಾದ ಪಸರಿಸಿರುವುದು ಇಲ್ಲಿನ ಶುಚಿ ರುಚಿಗೆ ಸಿಕ್ಕ ಮನ್ನಣೆ.