- ಪ್ರಧಾನಿ, ಗೃಹಸಚಿವರು ಎಷ್ಟೇ ಪ್ರಚಾರ ಮಾಡಲಿ, ಇದು ರಾಜ್ಯ ಚುನಾವಣೆ
- ಮೇ 10ರಂದು ಹಸ್ತಕ್ಕೆ ಮತ ಹಾಕಿದರೆ ರಾಜ್ಯಕ್ಕೆ ಹಿತ ಎಂದ ಜೈರಾಮ್ ರಮೇಶ್
ಪ್ರಧಾನಿಗಳು, ಗೃಹಸಚಿವರು ಎಷ್ಟಾದರೂ ಚುನಾವಣೆ ಮಾಡಲಿ. ಇದು ಕೇಂದ್ರ ಚುನಾವಣೆಯಲ್ಲ, ರಾಜ್ಯ ಚುನಾವಣೆ. ಈ ರಾಜ್ಯದಲ್ಲಿ ಜನ 40% ಕಮಿಷನ್ ಸರ್ಕಾರದಿಂದ ಮುಕ್ತಿಪಡೆಯಲು ತೀರ್ಮಾನಿಸಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಬಿಜೆಪಿಯರ ರೋಡ್ ಶೋ, ಸಮಾವೇಶ, ಚುನಾವಣಾ ಆಯೋಗಕ್ಕೆ ದೂರು ಎಲ್ಲ ನೋಡಿದರೆ ಅವರು ವಿಷಯಗಳ ಕೊರತೆ ಎದುರಿಸುತ್ತಿದ್ದಾರೆ” ಎಂದರು.
“ಮೇ 10ರಂದು ಹಸ್ತಕ್ಕೆ ಮತ ಹಾಕಿದರೆ ರಾಜ್ಯಕ್ಕೆ ಹಿತ. ಇದೇ ನಮ್ಮ ಪ್ರಚಾರ ಘೋಷವಾಕ್ಯ. ಇದು ಅತ್ಯಂತ ಮಹತ್ವಪೂರ್ಣ ಚುನಾವಣೆ. ಈ ರಾಜ್ಯದ ನಂತರ ಆರು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಈ ಚುನಾವಣೆಯಿಂದ ನಮ್ಮ ಸಂಘಟನೆಗೆ ಹೆಚ್ಚಿನ ಶಕ್ತಿ ಆತ್ಮವಿಶ್ವಾಸ ಸಿಗಲಿದೆ. 2024ರ ಬಗ್ಗೆ ನಾವು ವಿಚಾರ ಮಾಡುತ್ತಿಲ್ಲ. ನಮ್ಮ ಗಮನ ರಾಜ್ಯಗಳ ಚುನಾವಣೆ ಮೇಲಿದೆ” ಎಂದರು.
“ಈ ಚುನಾವಣೆ ಸಿಂಗಲ್ ಇಂಜಿನ್ ಚುನಾವಣೆಯೇ ಹೊರತು, ಡಬಲ್ ಇಂಜಿನ್ ಚುನಾವಣೆ ಅಲ್ಲ. ಯಾವ ಪಕ್ಷ ಅಧಿಕಾರಕ್ಕೆ ಬಂದು ಯಾರು ಮುಖ್ಯಮಂತ್ರಿ ಆಗಿ ಆಡಳಿತ ನಡೆಸಲಿದ್ದಾರೆ ಎಂಬುದು ಈ ಚುನಾವಣೆಯ ವಿಚಾರ. ಪ್ರಧಾನಮಂತ್ರಿ, ಗೃಹ ಸಚಿವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಮಾತೆತ್ತಿದರೆ ಡಬಲ್ ಇಂಜಿನ್ ಸರ್ಕಾರ ಎಂದು ಮಾತನಾಡುತ್ತಿದ್ದಾರೆ” ಎಂದು ಹರಿಹಾಯ್ದರು.
ಈ ಸುದ್ದಿ ಓದಿದ್ದೀರಾ? ಈದಿನ.ಕಾಮ್ ಸಮೀಕ್ಷೆ-8: ಕಾಂಗ್ರೆಸ್ಗೆ ಸಿಗಲಿದೆ ಸ್ಪಷ್ಟ ಬಹುಮತ; 132-140 ಸೀಟುಗಳ ನಿರೀಕ್ಷೆ
“ದೆಹಲಿ ಮೇಲೆ ಬೆಂಗಳೂರು ಅವಲಂಬಿತವಾಗಿಲ್ಲ. ಪ್ರಧಾನಮಂತ್ರಿಗಳು 40% ಕಮಿಷನ್ ಬಗ್ಗೆ ಯಾವುದೇ ಮಾತನಾಡುತ್ತಿಲ್ಲ. ಹೀಗಾಗಿ ಅವರು ಡಬಲ್ ಇಂಜಿನ್ ಎಂದು ಮಾತನಾಡುತ್ತಿದ್ದಾರೆ. ನಿಜವಾದ ಡಬಲ್ ಇಂಜಿನ್ ಎಂದರೆ ಒಂದು ಇಂಜಿನ್ ಆರ್ಥಿಕ ವಿಕಾಸಕ್ಕೆ ಇರಬೇಕು. ರೈತರು, ಮಹಿಳೆಯರು, ಯುವಕರಿಗೆ ನೆರವಾಗಬೇಕು. ಆಗ ನಿಜವಾದ ಡಬಲ್ ಇಂಜಿನ್ ಸರ್ಕಾರವಾಗಲಿದೆ. ಇದನ್ನು 80 ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಬೇರೆ ಬೇರೆ ರಾಜ್ಯಗಳ ನೀಡುತ್ತಾ ಬಂದಿದೆ” ಎಂದು ಹೇಳಿದರು.
“ನಮ್ಮ ಚುನಾವಣೆ ವ್ಯವಸ್ಥೆಯಲ್ಲಿ ಪಕ್ಷ ಹಾಗೂ ಪಕ್ಷದ ಪ್ರಣಾಳಿಕೆ, ಕಾರ್ಯಕ್ರಮಕ್ಕೆ ಮತ ಹಾಕುತ್ತೇವೆ. ಹೀಗಾಗಿ ನಮಗೆ ಹೆಚ್ಚಿನ ವಿಶ್ವಾಸವಿದೆ. ಈ ಬಾರಿ ಮಲೆನಾಡು, ಕಲ್ಯಾಣ, ಕಿತ್ತೂರು ಕರ್ನಾಟಕ, ಕರಾವಳಿಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸವಿದೆ. ಬೇರೆ ಜಿಲ್ಲೆಗಳಲ್ಲಿ ಬೇರೆ ಪಕ್ಷಗಳಿಂದ ನಾಯಕರು ಕಾಂಗ್ರೆಸ್ ಸೇರುತ್ತಿದ್ದಾರೆ. ಹೀಗಾಗಿ ನಮ್ಮ ಭಾವನೆ ಸಕಾರಾತ್ಮಕವಾಗಿದೆ” ಎಂದರು.