- 184 ಮಹಿಳೆಯರಿಗೆ ಈ ಬಾರಿಯ ವಿಧಾನಸಭಾ ಚುನಾವಣಾ ಟಿಕೆಟ್
- ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಅತಿಹೆಚ್ಚು ಮಹಿಳಾ ಸ್ಪರ್ಧಿಗಳು
ಪ್ರತಿ ಚುನಾವಣೆ ಬಂದಾಗಲೂ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡುವ ವಿಚಾರವಾಗಿನ ಧ್ವನಿ ಬಲಪಡೆದುಕೊಳ್ಳುತ್ತದೆ. ಬಳಿಕ ಚುನಾವಣೆ ಕಾವು ಕಡಿಮೆಯಾದಂತೆ ಅದರ ಸದ್ದೂ ಕೇಳದಂತಾಗುತ್ತದೆ.
ಹೀಗೆ ಹತ್ತಾರು ಚುನಾವಣೆಗಳಲ್ಲಿ ಅಸ್ತಿತ್ವದ ಹಾವು ಏಣಿ ಆಟ ಆಡಿರುವ ಮಹಿಳಾ ರಾಜಕಾರಣಿಗಳು ಈ ಬಾರಿ ಚುನಾವಣೆಯಲ್ಲಿ ಗಮನಾರ್ಹ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ.
ಒಟ್ಟಾರೆ ರಾಜ್ಯಾದ್ಯಂತ ಎರಡು ರಾಷ್ಟ್ರೀಯ ಪಕ್ಷಗಳ ಸದಸ್ಯರನ್ನೂ ಒಳಗೊಂಡಂತೆ ಇತರೆ ಪಕ್ಷಗಳು ಹಾಗೂ ಪಕ್ಷೇತರರಾಗಿ 184 ಮಹಿಳಾ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಅದೃಷ್ಟ ಪರೀಕ್ಷೆಗೆ ಅಣಿಯಾಗಿದ್ದಾರೆ.
ಮಹಿಳಾ ಹಣಾಹಣಿಯ ವಿಚಾರದಲ್ಲೊಂದು ಗಮನಾರ್ಹ ಸಂಗತಿ ದಾಖಲಾಗಿದೆ. ಮಹಿಳಾ ಮೀಸಲು ಕ್ಷೇತ್ರಗಳಿಲ್ಲದಿದ್ದರೂ, ಮೀಸಲಾತಿ ಪಡೆದಷ್ಟೇ ಗತ್ತಿನಿಂದ ಮಹಿಳೆಯರು ಸ್ಪರ್ಧಾಕಣಕ್ಕಿಳಿದಿರುವುದು ಮೊದಲ ವಿಚಾರವಾದರೆ, ಪ್ರಬಲ ನಾಯಕಿರೆಂದು ಗುರುತಿಸಿಕೊಂಡು ಪುರುಷ ಅಭ್ಯರ್ಥಿಗಳಿಗೆ ಸ್ಪರ್ಧೆ ಒಡ್ಡಲು ನಿಂತಿರುವ ಮಹಿಳಾ ಉಮೇದುವಾರರಿಗೆ ಈಗ ಪ್ರತಿಸ್ಪರ್ಧಿಗಳಾಗಿರುವವರೂ ಅದೇ ಮಹಿಳಾಮಣಿಗಳೆನ್ನುವುದು ಮತ್ತೊಂದು ವಿಚಾರ.
ಹೌದು.. ಇಂತಹದ್ದೊಂದು ಲೆಕ್ಕಾಚಾರ ನಮ್ಮ ಮುಂದೆ ಈಗ ದಾಖಲಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿಯ ಪ್ರಮುಖ ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಪಕ್ಷೇತರ ಮಹಿಳೆಯರೇ ಇವರಿಗೆ ಸವಾಲು ಹಾಕಿದ್ದಾರೆ.
ರಾಜರಾಜೇಶ್ವರಿನಗರದಿಂದ ಕಾಂಗ್ರೆಸ್ ಅಭ್ಯರ್ಥಿ ಎಚ್ ಕುಸುಮಾ ಸ್ಪರ್ಧಿಸಿದ್ದರೆ ಅಲ್ಲಿ ಅವರಿಗೆ 6 ಮಂದಿ ಪಕ್ಷೇತರ ಮಹಿಳೆಯರು ಸ್ಪರ್ಧೆ ಒಡ್ಡಿದ್ದಾರೆ. ಜಯನಗರದಿಂದ ಕಾಂಗ್ರೆಸ್‌ನ ಸೌಮ್ಯ ರೆಡ್ಡಿ ಸ್ಪರ್ಧಿಸುವ ಕಣದಲ್ಲೂ 6 ಪಕ್ಷೇತರ ಮಹಿಳೆಯರು ಕಣದಲ್ಲಿದ್ದಾರೆ.
ಹಾಗೆಯೇ ಸಚಿವೆ ಶಶಿಕಲಾ ಜೊಲ್ಲೆ ಸ್ಪರ್ಧಿಸಿರುವ ನಿಪ್ಪಾಣಿ ಕ್ಷೇತ್ರದಲ್ಲಿ 6 ಮಂದಿ ಪಕ್ಷೇತರ ಮಹಿಳಾ ಉಮೇದುವಾರರಿದ್ದಾರೆ. ಕಾಂಗ್ರೆಸ್‌ನ ರೂಪಕಲಾ ಶಶಿಧರ ಹಾಗೂ ಬಿಜೆಪಿಯ ಅಶ್ವಿನಿ ಸಂಪಂಗಿ ಸ್ಪರ್ಧಿಸಿರುವ ಕೆಜಿಎಫ್ ಕ್ಷೇತ್ರದಲ್ಲೂ 6 ಮಂದಿ ಮಹಿಳೆಯರು ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ.
ಇನ್ನು ಕಾಂಗ್ರೆಸ್ ಲಕ್ಷ್ಮೀ ಹೆಬ್ಟಾಳ್ಕರ್ ಅವರು ಸ್ಪರ್ಧಿಸಿರುವ ಬೆಳಗಾವಿ ಗ್ರಾಮಾಂತರ ಕ್ಷೇತ್ರದಲ್ಲೂ ಅವರಿಗೆ ನಾಲ್ವರು ಪಕ್ಷೇತರ ಮಹಿಳಾ ಅಭ್ಯರ್ಥಿಗಳು ಪ್ರತಿಸ್ಪರ್ಧಿಗಳಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ?:ಚುನಾವಣೆ 2023 | ನಾಮಪತ್ರ ಹಿಂಪಡೆಯದಂತೆ ಕೃಷ್ಣೇಗೌಡ ಬೆಂಬಲಿಗರ…
ಹೆಚ್ಚು ಮಹಿಳಾ ಅಭ್ಯರ್ಥಿಗಳನ್ನು ಹೊಂದಿರುವ ಕ್ಷೇತ್ರಗಳಿವು.
ರಾಜಾರಾಜೇಶ್ವರಿನಗರ- 6, ಜಯನಗರ- 6, ಕೆಜಿಎಫ್- 6, ನಿಪ್ಪಾಣಿ- 5, ಹರಪನಹಳ್ಳಿ- 5, ಮಾಲೂರು- 5,
ಚಿಕ್ಕಪೇಟೆ- 5, ಬೆಳಗಾವಿ ಗ್ರಾಮಾಂತರ- 4, ಬಸವನಬಾಗೇವಾಡಿ- 4, ನಾಗಠಾಣ- 4, ಗಾಂಧಿನಗರ- 4, ಮಹಾಲಕ್ಷ್ಮೀ ಲೇಔಟ್- 4, ಹೆಬ್ಬಾಳ- 4, ವರುಣಾ- 4.
ಉಳಿದಂತೆ ರಾಜ್ಯದಲ್ಲಿ ಒಟ್ಟಾರೆ ಅತಿ ಹೆಚ್ಚು ಪಕ್ಷೇತರ ಅಭ್ಯರ್ಥಿಗಳು ಹೊಸಕೋಟೆಯಲ್ಲಿದ್ದರೆ(15), ಅತ್ಯಧಿಕ ಅಭ್ಯರ್ಥಿಗಳನ್ನು ಒಳಗೊಂಡ ಕ್ಷೇತ್ರವೆಂಬ ಹೆಗ್ಗಳಿಕೆ ಬಳ್ಳಾರಿ(24) ಪಾಲಾಗಿದೆ.
ಹಾಗೆಯೇ ಅತಿ ಕಡಿಮೆ ಅಭ್ಯರ್ಥಿಗಳನ್ನು ಯಮಕನಮರಡಿ ಕ್ಷೇತ್ರ ಸೇರಿ ಏಳು ಕ್ಷೇತ್ರಗಳು (ದೇವದುರ್ಗ, ತೀರ್ಥಹಳ್ಳಿ, ಕುಂದಾಪುರ, ಕಾಪು, ಮಂಗಳೂರು, ಬಂಟ್ವಾಳ) ಹೊಂದಿದ್ದು ಇಲ್ಲಿ ತಲಾ 5 ಉಮೇದುವಾರರು ಕಣದಲ್ಲಿದ್ದಾರೆ.