ಕರ್ನಾಟಕ ವಿಧಾನಸಭಾ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಸೋಮವಾರ (ಏ.24) ಕಡೆಯ ದಿನ. ರಾಜ್ಯಾದ್ಯಂತ ಹಲವು ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂಪಡೆದುಕೊಂಡಿದ್ದಾರೆ. ಈ ನಡುವೆ, ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಕಾಂಗ್ರೆಸ್ ವಿರುದ್ಧ ಬಂಡೆದ್ದಿರುವ ಪಕ್ಷೇತರ ಅಭ್ಯರ್ಥಿ ಎಂ.ಟಿ ಕೃಷ್ಣೇಗೌಡ ನಾಮಪತ್ರವನ್ನು ಹಿಂಪಡೆಯದಂತೆ ಒತ್ತಾಯಿಸಿ ಅವರ ಬೆಂಬಲಿಗರು ಮೆರವಣಿಗೆ ನಡೆಸಿದ್ದಾರೆ.
ಕಾಂಗ್ರೆಸ್‌ನಲ್ಲಿ ತೊಡಗಿಸಿಕೊಂಡಿದ್ದ ಮತ್ತು ಕ್ಷೇತ್ರದಲ್ಲಿ ಪಕ್ಷ ಕಟ್ಟಲು ದುಡಿದಿದ್ದ ಕೃಷ್ಣೇಗೌಡ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಕೈ ನಾಯಕರು ಅವರಿಗೆ ಟಿಕೆಟ್ ನೀಡದ ಹಿನ್ನೆಲೆ, ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು.
ಕಾಂಗ್ರೆಸ್ ವಿರುದ್ಧ ಬಂಡೆದ್ದು ನಾಮಪತ್ರ ಸಲ್ಲಿಸಿದ್ದವರನ್ನು ಕೆಕೆಪಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮನವೊಲಿಸಲು ಪ್ರಯತ್ನಿಸಿದ್ದರು. ಹಲವು ಬಂಡಾಯಗಾರರು ತಮ್ಮ ನಾಮಪತ್ರ ವಾಪಸ್ ಪಡೆಯುತ್ತಾರೆಂದು ಹೇಳಿದ್ದರು. ಈ ನಡುವೆ, ಅರಕಲಗೂಡಿನಲ್ಲಿ ಕೃಷ್ಣೇಗೌಡ ತಮ್ಮ ನಾಮಪತ್ರವನ್ನು ಹಿಂಪಡೆಯಬಾರದೆಂದು ಅವರು ಬೆಂಬಲಿಗರು ರ್‍ಯಾಲಿ ನಡೆಸಿದ್ದಾರೆ. ತಮ್ಮನ್ನು ಬೆಂಬಲಿಸುವಂತೆ ಕೃಷ್ಣೇಗೌಡ ಕೂಡ ತಮ್ಮ ಮನವಿ ಮಾಡಿದ್ದಾರೆ.
ಈ ವರದಿ ಓದಿದ್ದೀರಾ?: ಚುನಾವಣೆ 2023 | ಈದಿನ.ಕಾಮ್ ಸಮೀಕ್ಷೆ-3: ಭ್ರಷ್ಟಾಚಾರ, ಅಸಮರ್ಥತೆಯೇ ತಿರಸ್ಕಾರಕ್ಕೆ ಪ್ರಧಾನ ಕಾರಣ
ನಗರದಲ್ಲಿ ಮೆರವಣಿಗೆ ನಡೆಸಿದ ಬೆಂಬಲಿಗರು, “ನಿಮ್ಮೊಂದಿಗೆ ನಾವಿದ್ದೇವೆ. ನಿಮ್ಮನ್ನೇ ಗೆಲ್ಲಿಸುತ್ತೇವೆ, ನಾಮಪತ್ರ ಹಿಂಪಡೆಯಬೇಡಿ” ಎಂದು ಒತ್ತಾಯಿಸಿದ್ದಾರೆ. ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಕೃಷ್ಣೇಗೌಡ, “ತಾಲೂಕಿನಲ್ಲಿ ಕಾಂಗ್ರೆಸ್ ಬಲಗೊಳಿಸಲು ಸಾಕಷ್ಟು ಶ್ರಮಿಸಿದ್ದೇನೆ. ಆದರೂ, ಪಕ್ಷ ನನಗೆ ಅನ್ಯಾಯ ಮಾಡಿದೆ. ಟಿಕೆಟ್ ನೀಡುವುದಾಗಿ ಹೇಳಿದ್ದ ಕೆಪಿಸಿಸಿ ಅಧ್ಯಕ್ಷರು ತಮ್ಮ ಮಾತು ಉಳಿಸಿಕೊಳ್ಳಲಿಲ್ಲ. ಅವರು ನನ್ನ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದಾರೆ. ನನ್ನ ಕ್ಷೇತ್ರದ ಮತದಾರರೇ ನನಗೆ ಹೈಕಮಾಂಡ್. ನೀವೇ ನನ್ನನ್ನು ಗೆಲ್ಲಿಸಬೇಕು” ಎಂದು ಮನವಿ ಮಾಡಿದ್ದಾರೆ.
“ತಾಲೂಕಿನಲ್ಲಿ ಕಾಂಗ್ರೆಸ್ ನೆಲ ಕಚ್ಚಿತ್ತು. ಪಕ್ಷವನ್ನು ನನ್ನ ಸೋದರ ಕೃಷ್ಣೇಗೌಡ ತಳಮಟ್ಟದಿಂದ ಮತ್ತೆ ಕಟ್ಟಿ, ಬೆಳೆಸಿದರು. ಆದರೆ, ಕಾಂಗ್ರೆಸ್ ನಾಯಕರು ಅವರಿಗೆ ವಂಚಿಸಿದ್ದಾರೆ” ಎಂದು ಕೃಷ್ಣೇಗೌಡರ ಸಹೋದರ, ನಿವೃತ್ತ ಐಎಎಸ್ ಅಧಿಕಾರಿ ರಾಮೇಗೌಡ ಕಿಡಿಕಾರಿದ್ದಾರೆ.